ಹುಡುಕಾಟ
ಹುಡುಕಾಟ
ಹುಡುಕಾಟ
ಅಂದು ಸರೋಜಮ್ಮ ತಮ್ಮನ ಮದುವೆಯ ಸಡಗರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರ ಮೂವರು ಮಕ್ಕಳು ಛತ್ರದ ಒಳಗೆ ಮತ್ತು ಹೊರಗಡೆ ತಮ್ಮ ಓರಿಗೆಯವರ ಜೊತೆಯಲ್ಲಿ ಆಟ ಆಡಿಕೊಳ್ಳುತ್ತಿದ್ದರು. ಹತ್ತುವರ್ಷದ ದೊಡ್ಡ ಮಗಳು, ಏಳು ವರ್ಷದ ಅವಳ ತಂಗಿ, ತಮ್ಮ ಮೂರುವರ್ಷದ ತಮ್ಮನನ್ನು ಜೊತೆಯಲ್ಲೇ ಆಡಿಸಿ ಕೊಳ್ಳುತ್ತಿದ್ದರು.
ಮದುವೆಯೆಲ್ಲವೂ ಸಾಂಗವಾಗಿ ಮುಗಿದು , ಎಲ್ಲರೂ ಛತ್ರದಿಂದ ಹೊರಡುವ ಸಮಯ ಬಂದಾಗ, ಸರೋಜಮ್ಮ ಕಡೆಗೂ ತಮ್ಮ ಮಕ್ಕಳ ಕಡೆ ಗಮನ ಕೊಟ್ಟರು. ಅವರು ತಮ್ಮ ಮೂವರು ಮಕ್ಕಳನ್ನೂ ನೋಡುವುದಕ್ಕಾಗಿ ಛತ್ರ ದಲ್ಲಿ ಮಕ್ಕಳಿಗಾಗಿ ಹುಡುಕಾಡತೊಡಗಿದರು. ಆಗ ಅವರ ಕಣ್ಣಿಗೆ ತಮ್ಮ ಇಬ್ಬರು ಹೆಣ್ಣುಮಕ್ಕಳು ಕಂಡಾಗ, ಅವರಿಬ್ಬರ ಹತ್ತಿರ ಹೋಗಿ,
"ಇನ್ನು ನಾವು ಅರ್ಧ ಗಂಟೆಯಲ್ಲಿ ಛತ್ರದಿಂದ ಹೊರಡಬೇಕು, ಒಳಗೆ ಬಂದು ನಿಮ್ಮ ಬಟ್ಟೆ ಬ್ಯಾಗ್ ಗಳನ್ನು ರೆಡಿ ಮಾಡಿಕೊಳ್ಳಿ" ಅಂತ ಕರೆಯುತ್ತಾ ಅವರಿಬ್ಬರ ಕೈಗಳನ್ನು ಹಿಡಿದುಕೊಂಡು ಒಳಕ್ಕೆ ಎಳೆದುಕೊಂಡು ಬಂದರು. ಅಗ ಅವರಿಗೆ ಇದ್ದಕ್ಕಿದ್ದಂತೆ ತಮ್ಮ ಮಗ ಮೂರುವರ್ಷದ ಬಾಬು ವಿನ ಬಗ್ಗೆ ಯೋಚನೆ ಶುರುವಾಗಿ, ತಮ್ಮ ಹೆಣ್ಣುಮಕ್ಕಳ ಕಡೆ ತಿರುಗಿ,
"ಅಂದ ಹಾಗೆ ಬಾಬು ಎಲ್ಲಿದ್ದಾನ್ರೆ? ಅವನು ನಿಮ್ಮ ಜೊತೆಯಲ್ಲೇ ಆಟ ಆಡಿಸಿಕೊಳ್ಳಿ ಅಂತ ಹೇಳಿದ್ದೆನಲ್ಲ, ಈಗ ಅವನು ಕಾಣುತ್ತಿಲ್ಲವಲ್ಲ, ಎಲ್ಲಿದ್ದಾನೆ? "
ಕೇಳಿದರು . ಆಗ ಆ ಇಬ್ಬರು ಹೆಣ್ಣುಮಕ್ಕಳೂ,
"ಬಾಬು ಇದುವರೆಗೂ ನಮ್ಮ ಹಿಂದೆ ಮುಂದೆಯೇ ಇದ್ದ, ಈಗ ಅವನು ಮುಂದೆ ಚೇತನ್ ಜೊತೆ ಮರಳಿನಲ್ಲಿ ಆಡುತ್ತಿದ್ದಾನೆ. " ಅಂತ ಒಕ್ಕೊರಲಿನಲ್ಲಿ ಹೇಳಿದಾಗ, ಸರೋಜಮ್ಮ ಮಗನನ್ನು ಹುಡುಕುತ್ತಾ ಹೆಣ್ಣುಮಕ್ಕಳನ್ನು ಎಳೆದುಕೊಂಡು, ಹೊರಗೆ ಬಂದರು. ಮೂರು ವರ್ಷದ ತಮ್ಮ ಮಗ ಬಾಬುವಿಗಾಗಿ ಹುಡುಕಾಡುತ್ತಾ, ಛತ್ರಕ್ಕೆ ಮೂರು ನಾಲ್ಕು ಬಾರಿ ಪ್ರದಕ್ಷಿಣೆ ಹಾಕಿದರು. ಆದರೆ ಅವರ ಕಣ್ಣಿಗೆ ತಮ್ಮ ಮಗು ಕಾಣಿಸದೇ ಹೋದಾಗ, ಅವರಿಗೆ ಗಾಬರಿಯಾಯಿತು. ಅಲ್ಲಿದ್ದವರೆಲ್ಲರನ್ನೂ ವಿಚಾರಿಸಿದರು. ಯಾರಿಗೂ ಬಾಬುವಿನ ಬಗ್ಗೆ ಗೊತ್ತಿಲ್ಲವೆಂಬ ವಿಷಯ ತಿಳಿದಾಗ, ಸರೋಜಮ್ಮನವರಿಗೆ ತುಂಬಾ ಆತಂಕವಾಯಿತು . ಅದೇ ಒತ್ತಡದಲ್ಲಿ ತಮ್ಮ ಹೆಣ್ಣುಮಕ್ಕಳಿಬ್ಬರ ಬೆನ್ನಿಗೂ ಗುದ್ದಿ, ತಮ್ಮ ಕೋಪವನ್ನು ತೀರಿಸಿಕೊಂಡರು. ಕಡೆಗೆ ಅವರ ಕಣ್ಣುಗಳ ತುಂಬಾ ನೀರು ತುಂಬಿಕೊಂಡಿತು. ಅಷ್ಟರಲ್ಲಿ ಹೊರಗಿನಿಂದ ಒಳಗೆ ಬರುತ್ತಿದ್ದ ಅವರ ಪತಿ ನಾರಾಯಣ ಸ್ವಾಮಿಯನ್ನು ನೋಡಿ, ಅವರ ಹತ್ತಿರಕ್ಕೆ ಓಡಿ ಬಂದು, ಬಾಬು ಕಾಣೆಯಾಗಿರುವ ವಿಷಯವನ್ನು ತಿಳಿಸಿ ಗೊಳೊ ಅಂತ ಅಳುವುದಕ್ಕೆ ಶುರು ಮಾಡಿದರು.
ವಿಷಯ ಅತಿ ಶೀಘ್ರವಾಗಿ ಛತ್ರದಲ್ಲಿದ್ದವರೆಲ್ಲರಿಗೂ ಬಾಬು ಕಾಣೆಯಾಗಿರುವ ವಿಷಯ ಮುಟ್ಟಿತು. ಅಲ್ಲಿದ್ದವರೆಲ್ಲರೂ ಮಗುವಿಗಾಗಿ ಹುಡುಕಾಡಲು ಶುರು ಮಾಡಿದರು. ಕೆಲವರು ಈಗ ತಾನೇ ಈ ಮಗು ಅಲ್ಲೇ ಆಟವಾಡುತ್ತಿದ್ದುದ್ದನ್ನು ನೋಡಿದೆವೆಂದು ಹೇಳಿದಾಗ, ನಾರಾಯಣ ಸ್ವಾಮಿ ಮತ್ತು ಸರೋಜಮ್ಮನವರಿಗೆ ಮಗ ಇಲ್ಲೇ ಎಲ್ಲೋ ಹತ್ತಿರದಲ್ಲಿ ಇದ್ದಾನೆಂಬ ಭರವಸೆ ಮೂಡಿ ಛತ್ರದ ಸುತ್ತೈನ ರಸ್ತೆಗಳಲ್ಲೆಲ್ಲಾ ಅವನಿಗಾಗಿ ಹುಡುಕಾಡಿದರು. ಆದರೆ ಬಾಬು ಅಲ್ಲಿ ಎಲ್ಲೂ ಕಾಣದಿದ್ದಾಗ,
ಇಬ್ಬರ ಆತಂಕವೂ ಹೆಚ್ಚಾಯಿತು. ಇಬ್ಬರೂ ತಮ್ಮ ಇಷ್ಟದೇವತೆಗಳಿಗೆ ಹರಕೆ ಹೊತ್ತರು. ಈ ವೇಳೆಗೆ ಛತ್ರದಲ್ಲಿರುವವರೆಲ್ಲರಿಗೂ ಆತಂಕ ಶುರುವಾಯಿತು. ಆ ಮಗು ಸಿಗುವವರೆಗೂ ತಾವು ಛತ್ರ ಖಾಲಿ ಮಾಡುವುದು ಸಾಧ್ಯವಿಲ್ಲವೆಂದುಕೊಂಡರು.
ಸರೋಜಮ್ಮನ ತಮ್ಮ ಬಾಬು ಕಾಣೆಯಾದ ಬಗ್ಗೆ ಪೋಲಿಸ್ ಕಂಪ್ಲೈಟ್ ಕೊಡುವುದು ಒಳ್ಳೆಯದೆಂದು ಅಕ್ಕ ಮತ್ತು ಭಾವನ ಹತ್ತಿರ
ಹೇಳಿದಾಗ, ಅವರಿಬ್ಬರಿಗೂ ಅದೇ ಸರಿ ಎನಿಸಿತು.
ನಾರಾಯಣ ಸ್ವಾಮಿ ಮತ್ತು ಸರೋಜ ತಮ್ಮ ಇಬ್ಬರು ಹೆಣ್ಣುಮಕ್ಕಳೊಂದಿಗೆ ಹತ್ತಿರದ ಪೋಲಿಸ್ ಸ್ಟೇಷನ್ ಗೆ ಹೊರಟರು.
ಅವರಿಬ್ಬರೂ ಛತ್ರದ ಮುಖ್ಯ ದ್ವಾರ ದಾಟಿ ಪೋಲಿಸ್ ಸ್ಟೇಷನ್ ಕಡೆ ಹೆಜ್ಜೆ ಹಾಕುತ್ತಿದ್ದಾಗ, ಎದುರಿಗೆ ಒಬ್ಬ ವ್ಯಕ್ತಿ ಬಾಬುವನ್ನು ಎತ್ತಿಕೊಂಡು ಬರುವುದನ್ನು ನೋಡಿ, ಹಾಗೇ ನಿಂತರು. ಆ ವ್ಯಕ್ತಿ ಹೆಣ್ಣಿನ ಕಡೆಯವನೆಂದು ಹೇಳಿ, ಬಾಬುವನ್ನು ತಾನು ಛತ್ರದಲ್ಲಿ ನೋಡಿದ್ದರಿಂದ, ಅವನನ್ನು ಗುರುತಿಸಿ, ಕರೆದುಕೊಂಡು ಬಂದುದಾಗಿ ತಿಳಿಸಿದಾಗ, ಸರೋಜಮ್ಮ ಮತ್ತು ನಾರಾಯಣಸ್ವಾಮಿ ಇಬ್ಬರಿಗೂ ಅವನಿಗೆ ಹೇಗೆ ಥ್ಯಾಂಕ್ಸ್ ಹೇಳಬೇಕೆಂದೇ ತಿಳಿಯದೇ,
"ಥ್ಯಾಂಕ್ಸ್ ಕಣಪ್ಪ, ನೀನು ಯಾರು?ನಿನ್ನ ಹೆಸರೇನು? ಎನ್ನುವುದು ನಮಗೂ ಗೊತ್ತಿಲ್ಲವಾದರೂ ಈ ಸಮಯದಲ್ಲಿ ನೀನು ನಮ್ಮ ಪಾಲಿನ ದೇವರೇ ಸರಿ. ನಿನಗೆ ಹೇಗೆ ಧನ್ಯವಾದ ತಿಳಿಸಬೇಕೋ ಗೊತ್ತಿಲ್ಲ, ಕೇವಲ ಥ್ಯಾಂಕ್ಸ್ ಅನ್ನುವುದು ತುಂಬಾ ಚಿಕ್ಕ ಪದವಾಗುತ್ತದೆ. ಆದರು ನಿನ್ನ ಈ ಉಪಕಾರವನ್ನು ನಾವು ನಮ್ಮ ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ. ತುಂಬಾ ಥ್ಯಾಂಕ್ಸ್ ಕಣಪ್ಪ."
ನಾರಾಯಣಸ್ವಾಮಿಯವರು ಅವನ ಕೈಗಳನ್ನು ತಮ್ಮ ಲೈಯ್ಯೊಳಗಿಟ್ಟುಕೊಳ್ಳುತ್ತಾ, ಕಣ್ಣಿಗೊತ್ತಿಕೊಂಡರೆ, ಸರೋಜಮ್ಮ ಕೈ ಮುಗಿದು ಕಣ್ಣೀರಿಡುತ್ತಲೇ,
"ನೋಡಪ್ಪ, ಇಂದು ನಮ್ಮ ಮಗುವನ್ನು ಕಾಪಾಡಿ, ನಮ್ಮ ಜೀವನವನ್ನೂ ಉಳಿಸಿದೆ. ಈ ಋಣವನ್ನು ನಾವು ಎಂದೆಂದಿಗೂ ತೀರಿಸಲಾರೆವು. ತುಂಬಾ ಥ್ಯಾಂಕ್ಸ್ ಕಣಪ್ಪ, ನೀನು ಚೆನ್ನಾಗಿರಪ್ಪ ."
ಹೇಳಿದರು. ಅವರು ಬಾಬುವನ್ನು ತಮ್ಮ ಕಂಕುಳಲ್ಲಿ ಬಿಗಿಯಾಗಿ ಹಿಡಿದುಕೊಂಡಿದ್ದರು.
ಕಡೆಗೆ ನಾರಾಯಣಸ್ವಾಮಿಯವರು
"ನಮ್ಮ ಮಗು ಎಲ್ಲಿ ಸಿಕ್ಕಿದ? ನಿಮಗೆ ಅವನು ಗೊತ್ತಿತ್ತಾ? "ಎಂದು ಕೇಳಿದಾಗ, ಆ ಯುವಕ,
"ಅಂಕಲ್, ನನಗೆ ಈ ಮಗು ನಿಮ್ಮದು ಅಂತ ಗೊತ್ತಿರಲಿಲ್ಲ, ಆದರೆ ಈ ಮಗುವನ್ನು ನಿನ್ನೆಯಿಂದ ಮದುವೆ ಮನೆಯಲ್ಲಿ ನೋಡಿದ್ದೆ. ಅದೂ ಅಲ್ಲದೇ ಇದು ಛತ್ರದ ಮುಂದೆ ಬೇರೆ ಚಿಕ್ಕ ಹುಡುಗರ ಜೊತೆ ಆಟವಾಡುವುದನ್ನೂ ಗಮನಿಸಿದ್ದೆ.
ನಾನು ನನ್ನ ಮನೆಯಿಂದ ವಾಪಸ್ ಇಲ್ಲಿಗೆ ಬರುತ್ತಿದ್ದಾಗ, ಯಾರೋ ಇಬ್ಬರು ಹೆಂಗಸರು, ಈ ಮಗುವನ್ನು ಎತ್ತಿಕೊಂಡು ಗಾಬರಿ ಗಾಬರಿಯಾಗಿ ಹೋಗುತ್ತಿರುವುದನ್ನು ನ್ಡಿ, ಅವರನ್ನೇ ಹಿಂಬಾಲಿಸಿದೆ, ಆಗ ನನಗೆ ಈ ಮಗು ಮದುವೆ ಮನೆಯಲ್ಲಿದ್ದುದ್ದು ನೆನಪಾಯಿತು. ಆ ಹೆಂಗಸರಿಬ್ಬರೂ ಯಾರಿಗೋ ಫೋನ್ ಮಾಡಿ, ಮಗುವಿನ ಕಿಡ್ನ್ಯಾಪ್ ಮಾಡುವ ಬಗ್ಗೆ ಮಾತನಾಡುತ್ತಿದ್ದುದ್ದನ್ನು ಕೇಳಿಸಿಕೊಂಡ ನಂತರ ಅವರ ಹತ್ತಿರ ಹೋಗಿ ಅವರಿಗೆ ಜೋರು ಮಾಡಿ, ಪೋಲೀಸ್ ಗೆ ಹಿಡಿದುಕೊಡುವುದಾಗಿ ಹೆದರಿಸಿದಾಗ, ಆ ಇಬ್ಬರ್ಯ್ ಹೆಂಗಸರು ಮಗುವನ್ನು ಅಲ್ಲೇ ಬಿಟ್ಟು ಕಾಲು ಕಿತ್ತಾಗ, ನನಗೆ ಅವರಿಬ್ಬರೂ ಮಗುವಿನ ಕಳ್ಳರೆಂಬುದು ಪಕ್ಕಾ ಆಯಿತು. ಕಡೆಗೆ ಈ ಮಗುವನ್ನು ಎತ್ತಿಕೊಂಡು ಛತ್ರಕ್ಕೆ ಬರುತ್ತಿದ್ದೆ, ಆಗ ನೀವು ಎದುರಾಗಿ ಸಿಕ್ಕಿದಿರಿ " ನಡೆದುದೆಲ್ಲವನ್ನೂ ವಿವರಿಸಿದ.
"ಅಬ್ಬ, ಕಡೆಗೂ ಆ ದೇವರೇ ನಿನ್ನನ್ನು ಈ ಮಗುವಿನ ರಕ್ಷಣೆಗಾಗಿ ಕಳುಹಿಸಿರಬೇಕು. ಒಟ್ಟಿನಲ್ಲಿ ನಮ್ಮ ಈ ಕಳೆದುಹೋದ ಮಗು ನಮ್ಮ ಕೈ ಸೇರಿ, ನಮ್ಮ ಹುಡುಕಾಟ ಸುಖಾಂತವಾಯಿತಲ್ಲ, "
ನಾರಾಯಣಸ್ವಾಮಿಯವರು ಭಾವುಕವಾಗಿ ಮಾತನಾಡಿ, ಅವನ ಕೈಗಳನ್ನು ಹಿಡಿದು ಕಣ್ಣಿಗೊತ್ತಿಕೊಂಡರು.
ಆ ವೇಳೆಗೆ ಛತ್ರದ ಒಳಗಿನಿಂದ ಎಲ್ಲರೂ ಹೊರಗೆ ಬಂದಿದ್ದರು. ಅವರೆಲ್ಲರಿಗೂ ಕಳೆದು ಹೋದ ಮಗು ಮತ್ತೆ ಸಿಕ್ಕಿತಲ್ಲಾ ಅಂತ ಅನ್ನಿಸಿ, ಖುಷಿಯಿಂದ ಕುಣಿದಾಡಿದರು. ಸರೋಜಮ್ಮ ಮತ್ತು ನಾರಾಯಣಸ್ವಾಮಿಯವರಿಗೆ ತುಂಬಾ ಸಂತೋಷವಾಗಿ,
"ಒಟ್ಟಿನಲ್ಲಿ ಆ ದೇವರ ದಯೆಯಿಂದ ಕಳೆದು ಹೋದ ನಮ್ಮ ಮಗು ಸಿಕ್ಕಿತಲ್ಲಾ" ಅಂತ ಎಲ್ಲರೊಂದಿಗೂ ಹೇಳಿಕೊಳ್ಳುತ್ತಿದ್ದರು.
ಬಾಬು ಮಾತ್ರ ಅಮ್ಮನ ಕಂಕುಳಲ್ಲಿ ಮುಗ್ಧವಾಗಿ ನಗುತ್ತ, ಬೆಚ್ಚಗೆ ಕುಳಿತಿದ್ದ.
ವಿಜಯಭಾರತೀ ಎ.ಎಸ್.
