ನಿನ್ನಿಂದಲೇ.....!!
ನಿನ್ನಿಂದಲೇ.....!!
ಅಲ್ಲಾ ಕಣೇ ನೀನು ಈ ಸಲಾನೂ ಹೆಣ್ಣು ಮಗುವನ್ನೇ ಹಡೆದೆ ಅಲ್ವಾ?, ಎಲ್ಲಾ ನನ್ ಕರ್ಮ, ನಿನ್ನ ಕಟ್ಟಿಕೊಂಡೆ ನೋಡು ಇದೆಲ್ಲಾ ಅನುಭವಿಸಬೇಕಾದ್ದೇ ಎಂದು ಶಂಕರ್ ತನ್ನ ಪತ್ನಿ ಪಾರ್ವತಿಗೆ ದರಿದ್ರದವಳು ಅದು, ಇದು ಎಂದು ಬಾಯಿಗೆ ಬಂದಂತೆ ಬೈಯ್ದ.
ಶಂಕರ್ ಯಾವಾಗಲೂ ಹೀಗೆಯೇ ಮೊಸರಿನಲ್ಲಿಯೂ ಕಲ್ಲು ಹುಡುಕುವ ಮನುಜರಂತೆ ಪಾರ್ವತಿಯು ಅದೆಷ್ಟೇ ಅಚ್ಚುಕಟ್ಟಾಗಿ ತನ್ನ ಕರ್ತವ್ಯಗಳನ್ನು ನಿರ್ವಹಿಸಿಕೊಂಡು ಹೋದರೂ ಏನಾದರೊಂದು ತಪ್ಪು ಕಂಡು ಹಿಡಿದು, ಆಕೆಯನ್ನು ಹಿಗ್ಗಾಮುಗ್ಗ ಬೈದು, ಆಕೆಯ ಮನ ನೋಯಿಸುತ್ತಿದ್ದ! ಮೊದ ಮೊದಲು ಬಹಳ ನೊಂದುಕೊಂಡು ಅಳುತ್ತಿದ್ದ ಪಾರ್ವತಿಗೆ ಕ್ರಮೇಣ ಅವನ ಚುಚ್ಚು ಮಾತುಗಳು ಅಭ್ಯಾಸವಾಗಿ, ಬಂಡೆ ಕಲ್ಲಿನಂತೆ ಗಟ್ಟಿಯಾಗಿತ್ತು ಅವಳ ಮನಸ್ಸು.
ಅಪ್ಪ, ಅಮ್ಮನೇ ನೋಡಿ ಮಾಡಿಸಿದ ಮದುವೆ ಶಂಕರ್ ಹಾಗೂ ಪಾರ್ವತಿಯರದ್ದು. ಮದುವೆಯಾದ ಹೊಸದರಲ್ಲಿ ಚೆನ್ನಾಗಿದ್ದ ದಂಪತಿಗಳು ಪಾರ್ವತಿಗೆ ಮೊದಲನೆಯ ಮಗು ಹೆಣ್ಣಾದೊಡನೆ ಶಂಕರ್ ಗೆ ಪಾರ್ವತಿಯ ಮೇಲೆ ಅಸಮಾಧಾನ ಬೇರೂರಿ, ಆಕೆಗೆ ಬಾಯಿಗೆ ಬಂದಂತೆ ಬೈಯುವುದೇ ರೂಢಿಯಾಗಿತ್ತು!
ಎರಡನೆಯ ಮಗುವೂ ಹೆಣ್ಣು ಎಂದು ಸಿಡಿಮಿಡಿಗೊಂಡು, ಮನೆ ಮನಗಳನ್ನು ಬೆಳಗಿ, ಪರಿಶುದ್ಧ ಪತಿವೃತೆಯಾಗಿರುವ ಪಾರ್ವತಿಗೆ ದರಿದ್ರದವಳು ಎಂದು ಬೈಯುವಷ್ಟು ಸಿಟ್ಟೋ ಅಥವಾ ಹೆಣ್ಣೆಂದರೆ ಅದೇನೋ ತಾತ್ಸಾರ ಮನೋಭಾವವೋ ಅವನನ್ನು ಅತಿಯಾದ ಕೋಪಕ್ಕೆ ತುತ್ತಾಗುವಂತೆ ಮಾಡಿತ್ತು! ಇದರಿಂದ ಪಾರ್ವತಿ ನೊಂದರೂ ಅವಳ ಕಣ್ಣಲ್ಲಿ ಕಣ್ಣೀರ ಹನಿಗಳು ಜಾರಿರಲಿಲ್ಲ ಕಾರಣ ಚುಚ್ಚು ಮಾತುಗಳನ್ನು ಕೇಳಿ ಕೇಳಿ ಆಕೆಯ ಮನ ಕಲ್ಲಿನಂತಾಗಿತ್ತು!
ಏನೇ ಆಗಲಿ ಒಬ್ಬ ವಂಶೋದ್ಧಾರಕ ಬೇಕು ಎಂದು ಶಂಕರ್ ನ ಅಂಬೋಣ. ಅಂತೆಯೇ ಗಂಡು ಮಗು ಬೇಕು ಎಂಬ ಪ್ರಯತ್ನ ಸಫಲವಾಯಿತು!, ಪತಿವೃತೆಯಾದ ಪಾರ್ವತಿಯು ಗಂಡನ ಇಚ್ಛೆಯಂತೆ ಮೂರನೆಯ ಗಂಡು ಮಗುವನ್ನು ಹೆರಿಗೆ ಮಾಡಿ, ಬಾರದ ಲೋಕಕ್ಕೆ ತೆರಳಿದಳು! ಈಗ ಶಂಕರ್ ಗೆ ಮಗ ಹುಟ್ಟಿದ ಎಂದು ಸಂಭ್ರಮ ಪಡಬೇಕೋ ಅಥವಾ ಪತ್ನಿಯನ್ನು ಕಳೆದುಕೊಂಡು ದುಃಖಿಸಬೇಕೋ ಎಂಬ ದ್ವಂದ್ವ ಪರಿಸ್ಥಿತಿ ಎದುರಾಯಿತು!
ಸಣ್ಣ ವಯಸ್ಸಿನಿಂದಲೇ ಅಪಘಾತವೊಂದರಲ್ಲಿ ತಂದೆ, ತಾಯಿಯರನ್ನು ಕಳೆದುಕೊಂಡ ಶಂಕರ್ ಗೆ ಮೂರು ಮಕ್ಕಳ ಹೊಣೆಗಾರಿಕೆಯೂ ಆತನ ಹೆಗಲಿಗೆ ಬಿದ್ದಿತ್ತು. ಎರಡೆರಡು ವರ್ಷ ಅಂತರದಲ್ಲಿ ಬೆಳೆದ ಮಕ್ಕಳಾದ ಕಾರಣ ಸಣ್ಣ ತಮ್ಮಾ ಜನಿಸುವಾಗ ಮೊದಲ ಮಗಳಿಗೆ ಅದಾಗಲೇ ಆರು ವರ್ಷ ವಯಸ್ಸಾಗಿತ್ತು. ಆರು ವರ್ಷ ವಯಸ್ಸಿನ ಬಾಲೆಯ ಬುದ್ಧಿಯು ಪ್ರಬುದ್ಧತೆಯಿಂದ ಕೂಡಿತ್ತು!
ಸಣ್ಣ ವಯಸ್ಸಿನಿಂದಲೇ ಅಮ್ಮನನ್ನು ಕಳೆದುಕೊಂಡ ಇಬ್ಬರು ಹೆಣ್ಣು ಮಕ್ಕಳು ಮನೆ ಕೆಲಸಗಳಲ್ಲಿ ಅಪ್ಪನಿಗೆ ನೆರವಾದರು ಆದರೆ ಅಪ್ಪ ಮಾತ್ರ ಹೆಣ್ಣು ಮಕ್ಕಳಿಗೆ ಕೊಡಬೇಕಾದ ಪ್ರೀತಿ ಕೊಡುತ್ತಿರಲಿಲ್ಲ ಬದಲಾಗಿ ನೀವು ಹೆಣ್ಣು ಮಕ್ಕಳು ಎಂದು ತಾತ್ಸಾರ ಮನೋಭಾವದಿಂದ ಅವರನ್ನು ಮೂದಲಿಸಿ ಅವರ ಮನ ನೋಯಿಸುತ್ತಿದ್ದರು ಹಾಗೂ ಒಬ್ಬನೇ ಒಬ್ಬ ಮಗನನ್ನು ಗಂಡು ಮಗು ಎಂದು ಬಹಳ ಮುದ್ದಿನಿಂದ ಸಾಕಿ, ಬೆಳೆಸಿದ್ದರು! ಮಗ ಏನೇ ಕೇಳಿದರೂ ಅಪ್ಪ ಇಲ್ಲ ಅನ್ನುತ್ತಿರಲಿಲ್ಲ, ಅವನಿಗೆ ಯಾವುದೇ ರೀತಿಯ ಕೊರತೆ ಬಾರದಂತೆ ಮುದ್ದಿನಿಂದ ಬೆಳೆಸಿದ್ದರು ಶಂಕರ್.
ದಿನಗಳೆಯುತ್ತಿದ್ದಂತೆಯೇ ಮಕ್ಕಳೆಲ್ಲಾ ಬೆಳೆದು ದೊಡ್ಡವರಾಗತೊಡಗಿದರು. ಪ್ರಣತಿ ಹಾಗೂ ಪ್ರೀತಿ ಬಾಲ್ಯದಿಂದಲೇ ಮನೆ ಕೆಲಸಗಳನ್ನು ಮಾಡಿಕೊಂಡು, ದೈವ ಭಕ್ತಿಯನ್ನು ಇರಿಸಿಕೊಂಡು, ಉತ್ತಮ ನೀತಿ ಕಥೆಗಳನ್ನು ಓದಿಕೊಂಡು, ಸಂಸ್ಕಾರಯುತ ಹೆಣ್ಣು ಮಕ್ಕಳಾಗಿ ಬೆಳೆದರು. ಮಗ ಪ್ರದೀಪ್ ಗೆ ಮಾತ್ರ ದೈವ ಭಕ್ತಿಯೂ ಇರಲಿಲ್ಲ, ಉತ್ತಮ ಸಂಸ್ಕಾರವೂ ಇರಲಿಲ್ಲ!, ಚಾಲಿ ಪೋಲಿ ಹುಡುಗನಂತೆ ಬೆಳೆಯತೊಡಗಿದನು ಪ್ರದೀಪ್!
ಹೆಣ್ಣು ಎಂದು ತಾತ್ಸಾರ ಮನೋಭಾವದ ಶಂಕರ್ ಪ್ರಣತಿ ಹಾಗೂ ಪ್ರೀತಿಯರನ್ನು ಬಂದ ವರರಿಗೆ ಧಾರೆಯೆರೆದು ಕೊಟ್ಟು ಕೈ ತೊಳೆದಿದ್ದ!, ಇತ್ತ ಪ್ರದೀಪ್ ಉದ್ಯೋಗ ಅರಸಲೆಂದು ಮನೆ ಬಿಟ್ಟು ಪೇಟೆಯ ಕಡೆಗೆ ಹೆಜ್ಜೆ ಹಾಕಿದ. ಪೇಟೆಯಲ್ಲಿ ಸಣ್ಣ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ ಪ್ರದೀಪ್ ಗೆ ಅವನದೇ ಸ್ವಂತ ವ್ಯವಹಾರವೂ ಇತ್ತು. ಸ್ವಲ್ಪ ಸಮಯ ಕಂಪನಿಯ ಕೆಲಸ ಹಾಗೂ ಸ್ವಲ್ಪ ಸಮಯ ಸ್ವಂತ ವ್ಯವಾಹರದ ಕೆಲಸವೆಂದು ತಲ್ಲೀನನಾಗುತ್ತಿದ್ದ ಪ್ರದೀಪ್ ಗೆ ಬೇಗ ದುಡ್ಡು ಮಾಡಬೇಕು ಎಂಬ ವ್ಯಾಮೋಹದಿಂದ ಯಾರೋ ಹೇಳಿದ ಮಾತುಗಳನ್ನು ಕೇಳಿಕೊಂಡು ಅಡ್ಡ ದಾರಿ ಹಿಡಿದು ಬಿಟ್ಟ!
ಯಾರೂ ಇಲ್ಲದೇ ಬಿಕೋ ಎನ್ನುತ್ತಿತ್ತು ಶಂಕರ್ ನ ಮನೆ!, ಈಗ ಶಂಕರ್ ಗೂ ವಯಸ್ಸಾಯಿತು. ಅದೇನೋ ಮನೆ ಕೆಲಸ ಮಾಡುತ್ತಿರುವಾಗ ಒಂದೇ ಸಮನೆ ಬಿದ್ದು ಬಿಟ್ಟ ಶಂಕರ್! ಸ್ವಲ್ಪ ಸಮಯ ಪ್ರಜ್ಞಾಹೀನ ಸ್ಥಿತಿಗೆ ಹೋಗಿಬಿಟ್ಟಿದ್ದ ಶಂಕರ್. ಬೆಳ ಬೆಳಗ್ಗೆ ಶಂ
ಕರ್ ನ ಮನೆಗೆ ಹಾಲು ಹಾಕಲೆಂದು ಬರುವ ಹುಡುಗನಿಗೆ ಶಂಕರ್ ಪ್ರಜ್ಞೆ ತಪ್ಪಿ ಬಿದ್ದಿರುವುದು ಕಂಡು ಪ್ರದೀಪ್ ಗೆ ಫೋನಾಯಿಸಿದ ಆದರೆ ಪ್ರದೀಪ್ ಕೆಲಸದ ಒತ್ತಡವಿದೆ ಬರಲಾಗದು ಎಂದು ಹೇಳಿ ಕಳಚಿಕೊಂಡಿದ್ದ! ಪ್ರಣತಿ ಹಾಗೂ ಪ್ರೀತಿಗೆ ವಿಷಯ ತಿಳಿಸಿದಾಗ ಅವರು ಬೇಗನೇ ಬಂದು ಅಪ್ಪನನ್ನು ಆಸ್ಪತ್ರೆಗೆ ಕರೆತಂದು, ಸೂಕ್ತ ಚಿಕಿತ್ಸೆ ನೀಡಿದರು. ಅಷ್ಟೇ ಅಲ್ಲದೇ ಅಪ್ಪನಿಗೆ ವಯಸ್ಸಾದ ಕಾರಣ ಶರೀರದಲ್ಲಿ ಹಿಮೋಗ್ಲೋಬಿನ್ ನ ಅಂಶ ಕಡಿಮೆ ಇದೆ ರಕ್ತವನ್ನು ಕೂಡ ಕೊಟ್ಟರು.
ಶಂಕರ್ ಗೆ ಈಗ ತನ್ನ ತಪ್ಪಿನ ಅರಿವಾಯಿತೇನೋ ಮಕ್ಕಳಿಬ್ಬರ ಕೈ ಹಿಡಿದುಕೊಂಡು ಬಿಕ್ಕಿ ಬಿಕ್ಕಿ ಅತ್ತ! "ನೀವು ವಯಸ್ಸಿನಲ್ಲಿ ನನ್ನಿಂದ ಅದೆಷ್ಟೋ ಸಣ್ಣವರಾದರೂ ಹೃದಯ ಶ್ರೀಮಂತಿಕೆಯಲ್ಲಿ ನನ್ನಿಂದ ದೊಡ್ಡವರಾದಿರಿ!, ನಾನು ಅದೆಷ್ಟು ನಿಮ್ಮ ಮನ ನೋಯಿಸಿದರೂ ನೀವು ಅದನ್ನೆಲ್ಲಾ ತಲೆಗೆ ಹಚ್ಚಿಕೊಳ್ಳದೆ, ನನ್ನನ್ನು ಕಾಪಾಡಲೆಂದು ಬಂದಿರಿ!, ಅಪ್ಪನಾದ ನಾನು ಮಕ್ಕಳಾದ ನಿಮ್ಮಿಂದ ಪಾಠ ಕಲಿಯಲು ಬಹಳಷ್ಟಿದೆ" ಎಂದು ಅತ್ತರು ಹಾಗೂ ಪ್ರಣತಿ ಹಾಗೂ ಪ್ರೀತಿಯನ್ನು ಬಹಳಷ್ಟು ಪ್ರೀತಿಸತೊಡಗಿದರು.
ಪೇಟೆಯಲ್ಲಿ ವಾಸಿಸುವ ಪ್ರದೀಪ್ ಗೆ ಕೆಟ್ಟ ಸ್ನೇಹಿತರ ಸಂಗವೇ ಇತ್ತು ಅಲ್ಲದೇ ಧೂಮಪಾನ, ಮದ್ಯಪಾನದಂತಹ ಕೆಟ್ಟ ಚಟಗಳೂ ಅಂಟಿಕೊಂಡಿತ್ತು! ಅಡ್ಡ ದಾರಿ ಹಿಡಿದು ಸಂಪಾದನೆ ಮಾಡಿ ಆತ ಬಲು ಬೇಗ ಶ್ರೀಮಂತನಾದ! ಈಗ ಶ್ರೀಮಂತಿಕೆಯ ಮದದಲ್ಲಿ ಆತನಿಗೆ ತನ್ನ ಅಪ್ಪನ, ಊರಿನ ನೆನಪೇ ಇರಲಿಲ್ಲ!, ಒಂದು ಹುಡುಗಿಯನ್ನು ಪ್ರೀತಿ ಮಾಡಿ, ಆಕೆಯ ಜೊತೆಗೆ ಮದುವೆಯಾಗಿ ಪೇಟೆಯಲ್ಲಿಯೇ ದೊಡ್ಡ ಮನೆ ಕಟ್ಟಿಸಿ ಅಲ್ಲಿಯೇ ಬೇರೂರಿದ ಪ್ರದೀಪ್.
ಪ್ರದೀಪ್ ಗೆ ಜೀವನದಲ್ಲಿ ಎಲ್ಲವೂ ಇತ್ತು. ಶ್ರೀಮಂತಿಕೆ, ಆಳು ಕಾಳುಗಳು, ದೊಡ್ಡ ಬಂಗಲೆಯಂತಹ ಮನೆ, ದೊಡ್ಡ ಕಾರ್, ಮನ ಮೆಚ್ಚಿದ ಮನದರಸಿ ಎಲ್ಲವೂ ಇತ್ತು. ನಾಸ್ತಿಕನಾಗಿಯೇ ಜೀವನ ನಡೆಸುತ್ತಿದ್ದ ಪ್ರದೀಪ್ ಹಣದ ಸೊಕ್ಕಿನಿಂದ ನಾನೇ ಎಲ್ಲಾ ಎಂದು ಅಹಂ ನಿಂದ ಮದವೇರಿದ ಆನೆಯಂತೆ ಬಡ ಜನರ ರಕ್ತ ಹೀರುತ್ತಿದ್ದ! ಅನ್ಯಾಯ, ಅನಾಚಾರಗಳನ್ನೆಸಗಿ ಬಡ ಜನರನ್ನು ತುಳಿಯುತ್ತಿದ್ದ!
ಬಡ ಜನರ ಕಣ್ಣೀರಿನ ಶಾಪವೋ ಅಥವಾ ಪ್ರದೀಪ್ ನ ಪಾಪದ ಕೊಡ ತುಂಬಿ ತುಳುಕಿತು ಎಂದು ದೇವರೇ ಆತನಿಗೆ ಕೊಟ್ಟ ಶಿಕ್ಷೆಯೋ ಗೊತ್ತಿಲ್ಲ ಆತ ಕ್ರಮೇಣ ಚರ್ಮದ ಖಾಯಿಲೆಗೆ ತುತ್ತಾದ!, ಆತನಿಗೆ ಅದೆಷ್ಟೇ ಹಣ, ಆಳು, ಕಾಳುಗಳು, ಸ್ನೇಹಿತರು, ಆತ ಮೆಚ್ಚಿದ ಮನದರಸಿ ಇದ್ದರೂ ಕೂಡ ಆತನ ಹತ್ತಿರ ಯಾರೂ ಸುಳಿಯುತ್ತಿರಲಿಲ್ಲ, ಆತನ ದೇಹದಲ್ಲಿರುವ ದೊಡ್ಡ ದೊಡ್ಡ ಗುಳ್ಳೆಗಳನ್ನು ಕಂಡು ಆತನನ್ನು ಯಾರೂ ಮುಟ್ಟುತ್ತಿರಲಿಲ್ಲ!, ಹಣದ ಆಸೆಗಾಗಿ ಪ್ರದೀಪ್ ನನ್ನು ಮದುವೆಯಾದ ಪತ್ನಿ ದೀಪಾ ಕೂಡ ಆತನ ಕೈ ಬಿಟ್ಟಳು! ಅದೆಷ್ಟೇ ಕೋಟಿ ಹಣವಿದ್ದರೂ ಆತನಿಗೆ ಚರ್ಮದ ರೋಗವನ್ನು ಗುಣಪಡಿಸಲು ಆಗಿರಲಿಲ್ಲ!
ಇಂತಹ ಪರಿಸ್ಥಿತಿಯಲ್ಲಿ ಆತನಿಗೆ ನೆನಪಾದ್ದು ತನ್ನ ತಂದೆ ಹಾಗೂ ಅಕ್ಕಂದಿರು!!, ತಕ್ಷಣ ತನ್ನ ಅಪ್ಪನಿಗೆ ಹಾಗೂ ಅಕ್ಕಂದಿರಿಗೆ ಫೋನಾಯಿಸಿ ತನ್ನ ಪರಿಸ್ಥಿತಿಯನ್ನು ವಿವರಿಸಿದ ಪ್ರದೀಪ್. ಅವರು ತಕ್ಷಣ ಪ್ರದೀಪ್ ಇದ್ದ ಕಡೆಗೆ ಧಾವಿಸಿ ಅವನ ಯೋಗ ಕ್ಷೇಮ ವಿಚಾರಿಸಿದಾಗ, ಛೇ ನಾನು ಅಪ್ಪನ ಕಷ್ಟದ ಸಮಯದಲ್ಲಿ ಮನೆಗೆ ಹೋಗಿ ಅಪ್ಪನಿಗೆ ನೆರವಾಗಬೇಕಿತ್ತು ಎಂದು ಪಶ್ಚಾತ್ತಾಪವೂ ಕಾಡಿತ್ತು ಪ್ರದೀಪ್ ಗೆ. ಶಂಕರ್ ಮಗನಿಗೆ ಸುಬ್ರಹ್ಮಣ್ಯ ಸ್ವಾಮಿಯನ್ನು ಅನುದಿನವೂ ಬಿಡದೇ ಭಜಿಸುವಂತೆ ನುಡಿದರು ಏಕೆಂದರೆ ಚರ್ಮ ರೋಗದ ಖಾಯಿಲೆಗಳಿಗೆ ಸುಬ್ರಹ್ಮಣ್ಯ ಸ್ವಾಮಿಯೇ ಅಧಿದೇವತೆ ಎಂದು ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯಕ್ಕೆ ತೆರಳಿ, ಅರ್ಚನೆ, ವಿಶೇಷ ಪೂಜೆಗಳನ್ನು ಮಾಡಿಸುವ ಸಂದರ್ಭದಲ್ಲಿ ಬಲು ಭಾವುಕನಾದ ಪ್ರದೀಪ್ ಗೆ ದೇವರ ಎದುರಿನಲ್ಲಿ ಆತ ಮಾಡಿದ ತಪ್ಪುಗಳೆಲ್ಲಾ ಕಣ್ಣೆದುರು ಬಂದು, " ನಾನು ಮಾಡಿದ ತಪ್ಪಿಗೆ ನೀ ಕೊಟ್ಟ ಶಿಕ್ಷೆ ಸರಿಯಾಗಿಯೇ ಇದೆ ದೇವಾ, ಹಣದ ಮದದಿಂದ ನಾನೇ ಎಲ್ಲಾ ದೇವರೇ ಇಲ್ಲ ಎಂದು ಬಹಳ ಅಹಂಕಾರದಿಂದ ಮೆರೆದಿದ್ದೆ ಆದರೆ ಈಗ ನನಗೆ ಗೊತ್ತಾಗಿದೆ ದೇವಾ ನಾನೆಂದರೆ ಏನೂ ಇಲ್ಲ, ನಿನ್ನಿದಲೇ ಎಲ್ಲಾ ಎಂದು. ಈ ಜನನ, ಮರಣ, ಅವುಗಳ ನಡುವಿನ ಜೀವನ ಎಲ್ಲಾ ನಿನ್ನಿಂದಲೇ, ನೀ ಆಡಿಸಿದಂತೆ ಆಡುವ ಸೂತ್ರಧಾರಿಗಳಷ್ಟೇ ನಾವೆಲ್ಲಾ, ನಾವು ಅಂದುಕೊಂಡಂತೆ ಬದುಕಿಲ್ಲ ಎಲ್ಲಾ ನಿನ್ನ ಲೆಕ್ಕಾಚಾರದಂತೆ ನಮ್ಮ ಈ ಬದುಕು. ಸ್ವಾಮಿಯೇ ನಿನ್ನ ಸನ್ನಿಧಾನಕ್ಕೆ ಬಂದು ಶರಣಾಗಿ ಪ್ರಾರ್ಥಿಸುತಿರುವೆ ಆದಷ್ಟು ಬೇಗ ನನ್ನ ಖಾಯಿಲೆಯನ್ನು ವಾಸಿ ಮಾಡಿ, ಅಪ್ಪ, ಅಕ್ಕಂದಿರೊಂದಿಗೆ ಖುಷಿಯಿಂದ ಬೆರೆಯುವ ಅವಕಾಶ ಮಾಡಿ ಕೊಡು ದೇವಾ" ಎಂದು ನುಡಿದ ಪ್ರದೀಪ್ ನ ಮಾತುಗಳನ್ನು ಕೇಳಿ ಆತನ ಅಪ್ಪ, ಅಕ್ಕಂದಿರಿಗೆ ಬಹಳ ಖುಷಿಯಾಯಿತು ಬಹುಶಃ ದೇವರಿಗೂ ಖುಷಿಯಾಗಿ ಕ್ರಮೇಣ ಪ್ರದೀಪ್ ನ ಚರ್ಮದ ಖಾಯಿಲೆ ವಾಸಿ ಮಾಡಿದನೇನೋ!