ಫಾರಿನ್ ಸೊಸೆ
ಫಾರಿನ್ ಸೊಸೆ
ಸಾಗರ್ ಇಂಜಿನಿಯರಿಂಗ್ ನಂತರ ಉನ್ನತ ವಿದ್ಯಾಭ್ಯಾಸಕ್ಕೆಂದು ಪರದೇಶಕ್ಕೆ ತೆರಳಿದವನು ಅಲ್ಲಿಯೇ ಮಾಸ್ಟರ್ಸ್ ಮುಗಿಸಿ, ಒಳ್ಳೆಯ ಕೆಲಸ ಹಿಡಿದನು. ಪ್ರಸಿದ್ಧ ಗೂಗಲ್ ಕಂಪನಿಯಲ್ಲಿ ಮುಖ್ಯ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಲು ಶುರು ಮಾಡಿ, ಇಂದಿಗೆ ಹತ್ತು ವರ್ಷಗಳೇ ಕಳೆದಿವೆ. ಅಲ್ಲಿಯೇ ಕೆಲಸ ಮಾಡುತ್ತಿದ್ದ ಲೀಸಾ ಎಂಬ ಕೆಂಪಗಿನ ಚೆಲುವೆಗೆ ಮಾರುಹೋಗಿ, ಸಾಗರ್ ತನ್ನ ಶಿಸ್ತಿನ ಅಪ್ಪ ಪ್ರೀತಿಯ ಅಮ್ಮ ಸಾರಿ ಸಾರಿ ಹೇಳಿ ಕಳುಹಿಸಿದ್ದ ಮಾತುಗಳನ್ನು ತೂರಿ ಹಾಕಿ ಕೆಂಪು ಚೆಲುವೆಗೆ ಉಂಗುರ ತೊಡಿಸಿಯೇಬಿಟ್ಟನು..!!
ಸದ್ಯಕ್ಕೆ ಮದುವೆಯಾಗಿ ಏಳು ವರ್ಷದ ಮಗನೊಂದಿಗೆ ಪರದೇಶದಲ್ಲಿಯೇ ವಾಸಿಸುತ್ತಿದ್ದಾನೆ. ಪುಟ್ಟ ಮಗ ಸಂಚಿತ್ ಸಾಮ್ಯುಯಲ್ ಬಹಳ ಚೂಟಿ ಮತ್ತು ತುಂಟ. ಅಲ್ಲಿಯೇ ಒಂದು ಪ್ರಸಿದ್ಧ ಶಾಲೆಯಲ್ಲಿ ಓದುತ್ತಿದ್ದಾನೆ. ಅಪ್ಪ ಅಮ್ಮನ ಮುದ್ದಿನ ಮಗ. ಹೈಬ್ರಿಡ್ ತಳಿ ಬೇರೆ..!! ಹಾಗಾಗಿ ಬುದ್ದಿವಂತಿಕೆಯು ಜಾಸ್ತಿಯೇ.
ಎಷ್ಟಾದರೂ ಅಪ್ಪ ಭಾರತ, ಅಮ್ಮ ಅಮೆರಿಕಾದವರಲ್ಲವೇ..? ಹಾಗಾಗಿ ಎರಡು ದೇಶಗಳ ಗುಣಗಳು, ವಿಶೇಷತೆಗಳನ್ನು ಮೈಗೂಡಿಸಿಕೊಂಡಿಯೇ ಹುಟ್ಟಿದ್ದಾನೆ..!! ಪುಟ್ಟ ಸಂಚಿತ್ ನ ಅರಳುಗಣ್ಣುಗಳು, ಮುದ್ದಾದ ಗುಂಡು ಮುಖ, ಹಾಲು ಬಣ್ಣದ ತ್ವಚೆ ಮತ್ತು ತುಸುವೇ ಕೆಂಚು ಕೆಂಚಾಗಿರುವ ಕೂದಲುಗಳನ್ನು ನೋಡುವುದೇ ಚೆಂದ..!! ಇಬ್ಬರ ಗುಣಗಳನ್ನು ಹೊಂದಿದ ಸಂಚಿತ್, ನೋಡಲು ಸಹ ಸ್ವಲ್ಪ ಅಪ್ಪನಂತೆ, ಸ್ವಲ್ಪ ಅಮ್ಮನಂತೆ ಇದ್ದಾನೆ.
ಓದು ಮತ್ತು ಆಟ ಎರಡರಲ್ಲೂ ಮುಂಚೂಣಿಯಲ್ಲಿರುವ ಸಂಚಿತ್ ಅಪ್ಪ ಅಮ್ಮನ ಮುದ್ದಿನ ಮಗ. ಚೆಸ್ ಆಟ ಅಂದರೆ ಬಹಳ ಅಚ್ಚುಮೆಚ್ಚು..!! ಜೊತೆಗೆ ಪ್ರತಿ ಪದದ ಸ್ಪೆಲ್ಲಿಂಗ್ ಹೇಳುವುದು ಎಂದರೆ ಏನೋ ಸಡಗರ..!! ಆದಷ್ಟು ಎಲ್ಲದರ ಸ್ಪೆಲಿಂಗ್ ಹೇಳಲು ಪ್ರಯತ್ನಿಸುತ್ತಾನೆ.
ಹಾಗಾಗಿಯೇ ಸಾಗರನಿಗೆ ತನ್ನ ಮಗನನ್ನು ಮುಂದೊಂದು ದಿನ "ಸ್ಪೆಲ್ಲಿಂಗ್ ಬಿ" ಸ್ಪರ್ಧೆಯಲ್ಲಿ ಭಾಗವಹಿಸಲು ಹೇಳಿ ವಿಜೇತನಾಗಿಸಬೇಕೆಂಬ ಆಸೆ..!! ಸಾಮಾನ್ಯವಾಗಿ ಇಂತಹ ಸ್ಪರ್ಧೆಗಳಲ್ಲಿ ಗೆಲ್ಲುವುದು ಸಹ "ಅನಿವಾಸಿ ಭಾರತೀಯರೇ" ಆದ್ದರಿಂದ ತನ್ನ ಮಗನೂ ಗೆಲ್ಲಬೇಕೆಂಬ ಮಹಾದಾಸೆ ಸಾಗರನಿಗೆ ಚಿಗುರಿದೆ..!!
ಇತ್ತೀಚಿಗೇಕೋ ಸಾಗರನಿಗೆ ಭಾರತದಲ್ಲಿರುವ ತನ್ನ ಊರಾದ ಮೈಸೂರಿಗೆ ತೆರಳಿ, ಸ್ವಲ್ಪ ದಿನಗಳು ಇದ್ದು ವಾಪಸ್ಸು ಮರಳಬೇಕೆಂಬ ಆಸೆ ಉತ್ಕಟವಾಗಿಬಿಟ್ಟಿದೆ. ಇವನ ಕೆಲಸದ ಜಂಜಾಟದ ನಡುವೆ ಮಾಡುವುದೇ ವಾರಕ್ಕೆ ಒಂದೆರಡು ವಿಡಿಯೋ ಫೋನ್ ಕರೆಗಳು..!! ಹೋದ ವಾರ ಬೇರೆ ಅವನ ತಾಯಿ ತನಗೇಕೋ ಇತ್ತೀಚಿಗೆ ತುಂಬಾ ಕಾಲು ನೋವು ಎಂದು ಬಳಲುತ್ತಾ ಹೇಳಿದರು. ಹಾಗಾಗಿ ಅಮ್ಮನನ್ನು ನೋಡಿ ಒಳ್ಳೆಯ ಡಾಕ್ಟರ್ ಹತ್ತಿರವೂ ತೋರಿಸಬಹುದೆಂಬ ಯೋಚನೆಯು ಅವನಿಗೆ ಮೂಡಿದೆ.
ಸಾಗರನು ಹೆಂಡತಿಯ ಹತ್ತಿರ ಹೋಗಿ ಇರುವ ವಿಷಯ ತಿಳಿಸಿ, "ಪ್ಲೀಸ್ ಲೀಸಾ. ನೀನೂ ಸಹ ನಮ್ಮ ಊರನ್ನು ನೋಡಿರುವುದು ಒಂದೇ ಬಾರಿ. ಅಮ್ಮನಿಗೇಕೋ ಹುಷಾರು ಇಲ್ಲವಂತೆ. ಕಾಲು ನೋವು ಎಂದರು. ಆದ್ದರಿಂದ ಒಂದು ತಿಂಗಳ ಮಟ್ಟಿಗೆ ಭಾರತಕ್ಕೆ ನಾವು ಮೂವರು ಈ ಸಲ ಹೋಗೋಣ. ಹೇಗೂ ಮಗನಿಗೆ ರಜೆ ಶುರುವಾಗುತ್ತೆ. ಎಲ್ಲಿಯಾದರೂ ಕರೆದುಕೊಂಡು ಹೋಗುವ ಪ್ಲಾನ್ ಮಾಡ್ತಾ ಇದ್ದೆವು ಅಲ್ಲವಾ, ಈ ಸಲ ನಮ್ಮ ಊರಿಗೆ ಹೋಗೋಣ ಬಾ..!!" ಎಂದು ಕರೆದನು.
ಮೊದಮೊದಲು ತನಗೆ ಆಗುವುದಿಲ್ಲ ಎಂದು ಕಾರಣಗಳನ್ನು ಹೇಳಿದ ಲೀಸಾ, ಕೊನೆಗೂ ಒಪ್ಪಿದಳು. ಮನದೊಳಗೆಯೇ "ಒಂದು ತಿಂಗಳ ಕಾಲ ಹೇಗಪ್ಪಾ ಇವರ ಮನೆಯಲ್ಲಿ ಇರುವುದು..?!" ಎಂದು ಪ್ರಶ್ನಿಸಿಕೊಂಡಳು.
ತುಂಬಾ ಹಿಂದೆ ನಾಲ್ಕೈದು ದಿನದ ಮಟ್ಟಿಗೆ ಮೈಸೂರಿಗೆ ಹೋಗಿದ್ದರಿಂದ ಅವಳಿಗೆ ಅಷ್ಟಾಗಿ ಆ ಊರಿನ ಬಗ್ಗೆ ಗೊತ್ತಿರಲಿಲ್ಲ. ಆದ್ದರಿಂದ ಈ ಸಲವಾದರೂ ಎಲ್ಲವನ್ನೂ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ ಎಂದು ಸಮಾಧಾನಗೊಂಡಳು.
ಭಾರತ ದೇಶವೆಂದರೆ ಸಂಸ್ಕೃತಿ ಕಲೆಗಳಿಗೆ ಹೆಸರುವಾಸಿ. ಅದರಲ್ಲಿರುವ ಕರ್ನಾಟಕಕ್ಕೆ ತಾನು ಹೋಗುತ್ತಿರುವುದು ಎಂದು ಮತ್ತಷ್ಟು ಮಾಹಿತಿಗಳನ್ನು ಗೂಗಲ್ ಸಹಾಯದಿಂದ ಕಲೆ ಹಾಕಿದಳು. ಇಂಗ್ಲೀಷ್ ಭಾಷೆಯಲ್ಲಿಯೇ ಮಾತನಾಡುತ್ತಿದ್ದ ಲೀಸಾ "ಕರ್ನಾಟಕ" ಎಂಬ ಪದವನ್ನು ಸರಿಯಾಗಿ ಉಚ್ಚರಿಸಲು ಒಂದೆರಡು ದಿನ ತೆಗೆದುಕೊಂಡಳು. ನಂತರ ಸ್ಪಷ್ಟವಾಗಿ ಹೇಳಲು ಕಲಿತುಕೊಂಡಳು. ಸಾಗರನಿಗಂತೂ ತುಂಬಾ ಖುಷಿಯಾಯಿತು. "ಲೀಸಾ, ಕರ್ನಾಟಕ ಎಂಬ ಹೆಸರನ್ನು ನಮ್ಮ ರಾಜ್ಯಕ್ಕೆ ನಾಮಕರಣ ಮಾಡಿ ಐವತ್ತು ವರ್ಷಗಳು ಆಯಿತಂತೆ..!! ಈ ಸುಸಂದರ್ಭದಲ್ಲಿ ನಿನ್ನ ಬಾಯಿಯಿಂದ ನಮ್ಮ ರಾಜ್ಯದ ಹೆಸರನ್ನು ಕೇಳುವುದೇ ಚೆಂದ..!!" ಎಂದು ಹೆಂಡತಿಯನ್ನು ಹೊಗಳಿದನು.
ಕೆಲವೇ ದಿನಗಳಲ್ಲಿ ಸಾಗರಗಳ ಆಚೆಯಲ್ಲಿ ನೆಲೆಯಾಗಿದ್ದ ಸಾಗರ್ ಕುಟುಂಬ ಮೈಸೂರಿಗೆ ಬಂದಿಳಿಯಿತು. ಲೀಸಾಳಂತೂ ಇನ್ನೊಂದು ಲೋಕಕ್ಕೆ ಬಂದೆನೇನೋ ಎನ್ನುವಂತೆ, ಎಲ್ಲವನ್ನು ತನ್ನ ಕೂಲಿಂಗ್ ಗ್ಲಾಸ್ ಒಳಗಿನ ಹಸಿರು ಕಂಗಳಿಂದ ಗಮನಿಸುತ್ತಿದ್ದಳು..!! "ಇದೇಕೆ ನಿಮ್ಮ ಊರಿನ ಹೆಸರು ಮೈಸೂರು..?" ಎಂದು ತನ್ನ ಗಂಡನಿಗೆ ಇಂಗ್ಲೀಷಿನಲ್ಲಿಯೇ ಕೇಳಿದಳು.
ಸಾಗರನು "ಮಹಿಷೂರು ಎಂಬ ಪದ ಹೋಗಿ ಮೈಸೂರು ಆಗಿದೆ. ನಮ್ಮ ಕರ್ನಾಟಕದ ನಾಡದೇವತೆ ಚಾಮುಂಡೇಶ್ವರಿ. ಹಿಂದೆ ಮಹಿಷಾಸುರ ಎಂಬ ದುಷ್ಟ ರಾಕ್ಷಸನಿದ್ದನಂತೆ. ಈ ಚಾಮುಂಡಿ ದೇವಿಯೇ ಅವನನ್ನು ಕೊಂದು, ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯ ಸಾಧಿಸಿದಳಂತೆ..!! ಹಾಗಾಗಿಯೇ ಪ್ರತಿ ವರ್ಷ ಹತ್ತು ದಿನಗಳ ಹಬ್ಬ ಮೈಸೂರು ದಸರಾ ಕೂಡ ನಡೆಯುತ್ತದೆ. ಈ ಸಲ ಹೇಗಿದ್ದರೂ ಒಂದು ತಿಂಗಳು ಇಲ್ಲೇ ಇರುತ್ತೇವಲ್ಲ. ಚಾಮುಂಡಿ ಬೆಟ್ಟಕ್ಕೂ ನಿನ್ನನ್ನು ಕರೆದುಕೊಂಡು ಹೋಗಿ ಚಾಮುಂಡಿ ದೇವಿಯ ದರ್ಶನ ಮಾಡಿಸುತ್ತೇನೆ..!" ಎಂದನು.
ಇವರಿಬ್ಬರೂ ಮಾತನಾಡುತ್ತಿದ್ದರೆ ಮಗ ಸಂಚಿತ್ ತನ್ನದೇ ಲೋಕದಲ್ಲಿ ಮುಳುಗಿದ್ದನು. ಬೇಸರವಾದಾಗ ಮೊಬೈಲ್ನಲ್ಲಿ ಏನಾದರೂ ನೋಡುವುದು. ಇಲ್ಲದಿದ್ದರೆ ತಾನು ಕಾಲಿಟ್ಟಿರುವ ಹೊಸ ಊರಿನ ಜನರನ್ನು ಗಮನಿಸುವುದು..! ಹೀಗೆ ಮಾಡುತ್ತಲೇ ಇದ್ದನು.
ಮನೆಗೆ ಕಾಲಿಡುತ್ತಿದ್ದಂತೆಯೇ ಸಾಗರನ ತಂದೆ ತಾಯಿ ಎಲ್ಲರನ್ನೂ ಖುಷಿಯಿಂದ ಬರಮಾಡಿಕೊಂಡರು. ಅನೇಕ ವರ್ಷಗಳ ನಂತರ ಸಾಗರನನ್ನು ನೋಡಿ ಸಂತೋಷಪಟ್ಟರು. ತಮ್ಮ ಫಾರಿನ್ ಸೊಸೆಯನ್ನು ಎರಡನೇ ಬಾರಿಗೆ ನೋಡಿದ ಸಾಗರನ ತಂದೆ ತಾಯಿ, ಅವಳನ್ನೂ ಸ್ವಾಗತಿಸಿದರು.
"ಸಂಚು ಹೇಗಿದ್ದೀಯಪ್ಪ..?" ಎಂದು ಮೊಮ್ಮಗನನ್ನು ಮಾತಾಡಿಸಿದರು. ಉತ್ತರವಾಗಿ ಮೊಮ್ಮಗನು "ಐ ಯಾಮ್ ಸಂಚಿತ್ ಸಾಮ್ಯುಯಲ್, ಗ್ರಾಂಡ್ಮಾ ಅಂಡ್ ಗ್ರಾಂಡ್ಪಾ..!!" ಎಂದನು. ಜಾಸ್ತಿ ಓದದಿದ್ದ ಸಾಗರನ ತಾಯಿ, "ಏನು ನಿನ್ನ ಹೆಸರು ಸಂಚು ಅಲ್ವಾ..? ಇದೇನು ಸಾಮು ಕೇಮು ಅಂತಾನೂ ಹೇಳ್ತಾ ಇದ್ದೀಯಲ್ಲ..! ಅದೇನ್ ಅಂತ ಈ ರೀತಿ ಹೆಸರು ಇಟ್ಟಿದ್ದೀಯ ಸಾಗರ..? ಅರ್ಥ ಗಿರ್ಥ ಏನು ಇಲ್ವಾ..?!" ಎಂದು ಕೇಳಿದರು.
ಇದಕ್ಕೆ ನಗುತ್ತಲೇ ಉತ್ತರಿಸಿದ ಸಾಗರ್, "ಅಮ್ಮ ಅವನ ಪೂರ್ತಿ ಹೆಸರು ಸಂಚಿತ್ ಸಾಮ್ಯುಯಲ್ ಅಂತ. ಸಂಚಿತ್ ಎಂಬ ಹೆಸರನ್ನು ನಾನಿಟ್ಟರೆ, ಸಾಮ್ಯುಯಲ್ ಎಂಬ ಹೆಸರನ್ನು ಲೀಸಾ ಇಟ್ಟಳು. ಈಗ ಎರಡೆರಡು ಹೆಸರು ಇಡುವುದೇ ಟ್ರೆಂಡ್ ಅಮ್ಮ..!" ಎಂದನು.
"ಆಹಾ ಸೊಸೆಗೆ ತಕ್ಕಂತೆ ಇದೆ ಹೆಸರು..! ಅದೇನು ಕಥೆನೋ ಏನೋ.... ಅವಳ ಹೆಸರು ಲೀಸಾನೋ ಪೈಸಾನೋ ಅಂತೆ. ಇನ್ನೂ ಮೊಮ್ಮಗನ ಹೆಸರು ಮುಳ್ಳು ಗಿಳ್ಳು ಅಂತ ಇಟ್ಟಿದ್ದಾಳೆ. ಹಾಂ, ನನಗೇಕೆ ಇದರ ಬಗ್ಗೆ ಸಲ್ಲದ ಚಿಂತೆ..!" ಎಂದು ಮನದೊಳಗೆ ಅಂದುಕೊಳ್ಳುತ್ತಾ ಊಟ ಬಡಿಸಲು ಹೋದರು.
ತನ್ನ ಫಾರಿನ್ ಸೊಸೆ ಇಂತಹ ಮನೆಯ ಊಟಕ್ಕೆ ತಕ್ಷಣವೇ ಒಗ್ಗಲು ಕಷ್ಟಪಡಬಹುದು ಎಂದು ತಿಳಿದಿದ್ದ ಸಾಗರನ ತಂದೆ, ಅವಳಿಗೆ ಬೇಕಾದ ಬ್ರೆಡ್, ಬಟರ್, ಜ್ಯಾಮ್ ತಂದಿಟ್ಟರು. ಸಾಗರ್ ಎಷ್ಟೋ ದಿನಗಳ ನಂತರ ಅಮ್ಮನ ಕೈ ರುಚಿಯ ಮುದ್ದೆ, ತುಪ್ಪ, ಹುರುಳಿಕಾಳು ಬಸ್ಸಾರು ತಿಂದರೆ, ಸೊಸೆ ಬ್ರೆಡ್ ಜ್ಯಾಮ್ ತಿಂದಳು. ಇನ್ನು ಸಂಚಿತ್ ಎರಡರ ರುಚಿಯನ್ನು ತಿಂದು ನೋಡಿ, "ಓ, ದಿಸ್ ರಾಗಿ ಬಾಲ್ ಇಸ್ ವೆರಿ ಡಿಫರೆಂಟ್ ಅಂಡ್ ಟೇಸ್ಟಿ..!!" ಅಂತ ಬರಿಯೇ ಮುದ್ದೆಯನ್ನು ತುಪ್ಪದೊಂದಿಗೆ ತಿನ್ನಲು ಶುರು ಮಾಡಿದನು.
ಹೀಗೆಯೇ ದಿನಗಳು ಕಳೆಯಲು, ಲೀಸಾ ಆಗಾಗ ಅಡುಗೆ ಮನೆಗೆ ಬಂದು,
ತನ್ನತ್ತೆ ಭಾರತೀಯ ಶೈಲಿಯ ಅಡುಗೆಯನ್ನು ಮಾಡುವುದನ್ನು ಗಮನಿಸುತ್ತಿದ್ದಳು. ಅಮೇರಿಕಾದಲ್ಲಾದರೆ ಎಲ್ಲವೂ ಅಟೋಮ್ಯಾಟಿಕ್. ಬೆಳಗ್ಗೆ ತಿಂಡಿ ಅಂದರೆ ಬ್ರೆಡ್ ಮೊಟ್ಟೆ, ಹಾಲಿಗೆ ಮಾತ್ರ ಸೀಮಿತ. ಇಲ್ಲಿ ಬೆಳಿಗ್ಗೆಗೆ ಒಂದು ತಿಂಡಿ, ಮಧ್ಯಾಹ್ನಕ್ಕೆ ಊಟ, ರಾತ್ರಿಗೆ ಊಟ ಎಲ್ಲವನ್ನು ದಿನಪೂರ್ತಿ ತಯಾರಿಸುತ್ತಲೇ ಇರುತ್ತಾರೆ.
ಒಂದು ಹೊತ್ತು ಅಡುಗೆ ಎಂದರೆ ಮೂರರಿಂದ ನಾಲ್ಕು ಐಟಂಗಳನ್ನು ಸಾಮಾನ್ಯವಾಗಿ ಮಾಡುತ್ತಾರೆ. ಇವರು ಹೇಗೆ ಟೈಮ್ ಮ್ಯಾನೇಜ್ ಮಾಡುತ್ತಾರೆ..? ಕಿಚನ್ ನಲ್ಲಿಯೇ ಸಮಯ ಕಳೆದುಹೋಗುವುದಿಲ್ಲವೇ...! ಎಂದು ತನ್ನ ದೇಶ ಮತ್ತು ಇಲ್ಲಿಯ ಅಡುಗೆ ವಿಧಾನಗಳನ್ನು ಆಗಾಗ ತುಲನೆ ಮಾಡಿ ಆಶ್ಚರ್ಯಪಡುತ್ತಿದ್ದಳು.
ಅತ್ತೆ ಸೊಸೆ ಪರಸ್ಪರ ಮಾತಾಡಿಕೊಳ್ಳಲು ಭಾಷಾ ತೊಡಕು ತುಂಬಾ ಕಾಡುತ್ತಿತ್ತು. ಕೆಲವೊಮ್ಮೆ ಸಂಚಿತ್ ಇಬ್ಬರ ನಡುವೆ ಸೇತುವೆ ಎಂಬಂತೆ ತನ್ನ ಭಾಷಾ ಜ್ಞಾನದಿಂದ ಸಹಾಯ ಮಾಡುತ್ತಿದ್ದನು. ಹಾಗೆ ನೋಡಿದರೆ ಸಂಚಿತ್ ಗೆ ಸಹ ಕನ್ನಡ ಭಾಷೆ ಹೊಸದೇ..! ಆದರೂ ಅದು ಹೇಗೋ ಬೇಗ ಕಲಿಯಲು ಪ್ರಯತ್ನಿಸುತ್ತಿದ್ದನು.
ಒಂದು ದಿನ ಲೀಸಾ ಅತ್ತೆಯ ಹತ್ತಿರ, "ಆಂಟಿ ವಾಟ್ ಡು ಯು ಮೀನ್ ಬೈ ಬಸ್ಸಾರು..?" ಎಂದು ಕೇಳಿದಳು. ಸಾಗರನಿಗೆ ತುಂಬಾ ಇಷ್ಟವಾದ ಆ ಸಾರಿನ ವಿಶೇಷವೇನೆಂದು ಅವಳಿಗೆ ತಿಳಿಯುವ ಬಯಕೆ ಆಗಿತ್ತು. ಸಾಗರನ ತಾಯಿಗೆ ತನ್ನ ಸೊಸೆಯ ಪ್ರಶ್ನೆಗೆ ಉತ್ತರಿಸಲು ಆಸೆ, ಆದರೆ ಭಾಷಾ ಸಮಸ್ಯೆ..! ಅವಳು ಉತ್ತರಿಸಲು ಕಷ್ಟಪಡುತ್ತಿರುವುದನ್ನು ನೋಡಿದ ಲೀಸಾ, "ಆಂಟಿ ಐ ವಿಲ್ ಗೆಸ್ ದಿ ಆನ್ಸರ್. ಐ ಥಿಂಕ್ ಸಂಥಿಂಗ್ ರಿಲೇಟೆಡ್ ಟು ರೆಡ್ ಬಸ್...?! ಎಂದು ಪ್ರಶ್ನಿಸಿದಳು.
ಅದನ್ನು ಕೇಳುತ್ತಲೇ ಸಾಗರನ ತಾಯಿ "ಅಯ್ಯೋ ಮಹಾತಾಯಿ, ರೋಡಿನಲ್ಲಿ ಓಡಾಡುವ ಕೆಂಪು ಬಸ್ ಬೇರೆ, ಈ ಬಸ್ಸಾರು ಬೇರೆ..!! ಸಾರಿನಲ್ಲಿ ಸೊಪ್ಪು ತರಕಾರಿ ಉಳಿಸಿಕೊಳ್ಳುವುದಿಲ್ಲ, ಬಸಿದು ಪಲ್ಯ ಮಾಡುತ್ತೇವೆ ಅಲ್ವಾ, ಹಾಗಾಗಿ ಬಸ್ಸಾರು ಎನ್ನುತ್ತಾರೆ..!!" ಎಂದು ಅವಳಿಗೆ ಗೊತ್ತಾಗುತ್ತೋ ಇಲ್ಲವೋ ಆದರೂ ಸಹ ಪಟಪಟನೆ ಹೇಳಿ ಮುಗಿಸಿದರು.
ಇದನ್ನು ಲೀಸಾಗೆ ಅರ್ಥೈಸಲು ಸಾಗರನ ತಂದೆ ತನಗೆ ಗೊತ್ತಿದ್ದ ಅಲ್ಪಸ್ವಲ್ಪ ಇಂಗ್ಲೀಷಿನಲ್ಲಿ ವಿವರಿಸಿದರು. ವಿಷಯ ಗೊತ್ತಾಗುತ್ತಿದ್ದಂತೆ ನಗುತ್ತಾ, "ಓ ಸಾರಿ, ನೌ ಐ ಗಾಟ್ ಟು ನೋ..!!! ಎಂದು ಹೇಳಿ ಹೊರ ಹೋದಳು.
ಇದೇ ರೀತಿಯ ಭಾಷೆಗೆ ಸಂಬಂಧಪಟ್ಟ ಚಿಕ್ಕ ಪುಟ್ಟ ಜೋಕುಗಳು ದಿನದಿಂದ ದಿನಕ್ಕೆ ನಡೆಯುತ್ತಲೇ ಇತ್ತು. ನಲ್ಲಿಯಿಂದ ನೀರು ಬಿಡಿ ಅಂದರೆ ಸಂಚಿತ್ ಓಡುತ್ತಿದ್ದವನು ಅಲ್ಲಿಯೇ ನಿಂತು, " ವೈ ಗ್ರಾನಿ, ಯು ಟೋಲ್ಡ್ ಮಿ ಟು ಸ್ಟಾಪ್..?" ಎಂದು ಕೇಳಿದನು. "ಅಯ್ಯೋ ನಿನಗಲ್ಲ, ನಾನು ತಾತನಿಗೆ ಹೇಳಿದ್ದು.... ನಲ್ಲಿ, ನಿಲ್ಲಿ ಎರಡು ಪದಗಳಿಗೆ ಬೇರೆಬೇರೆ ಅರ್ಥವಿದೆ". ಎಂದು ತಿಳಿಸಿದರು.
ಇನ್ನೂ ಹೆಚ್ಚಿಗೆ ತೊಂದರೆ ಕೊಟ್ಟದ್ದು ಅಕ್ಕಿ- ಹಕ್ಕಿಯ ನಡುವೆ ಇರುವ ವ್ಯತ್ಯಾಸ. ಸಾಗರನ ತಂದೆ ತಾಯಿ ನಾಲ್ಕೈದು ಲವ್ ಬರ್ಡ್ಸ್ ಗಳನ್ನು ಸಾಕಿದ್ದರು. ಅವುಗಳನ್ನು ಲೀಸಾ ಮತ್ತು ಸಂಚಿತ್ ಗೆ ತೋರಿಸುತ್ತಾ, "ನೋಡಿ ಇವು ಲವ್ ಬರ್ಡ್ಸ್. ಕನ್ನಡದಲ್ಲಿ ಹಕ್ಕಿಗಳು ಎನ್ನುತ್ತಾರೆ" ಎಂದರು ಸಾಗರನ ತಂದೆ. ತಕ್ಷಣವೇ ಸಂಚಿತ್, "ದೆನ್ ಫಾರ್ ರೈಸ್ ಅಂಡ್ ಬರ್ಡ್, ಡು ವೀ ಕಾಲ್ ವಿತ್ ಸೇಮ್ ವರ್ಡ್..?!" ಎಂದು ಪ್ರಶ್ನಿಸಿದನು.
ಇದಕ್ಕೆ ಉತ್ತರವಾಗಿ ಸಾಗರನ ತಂದೆ, "ಅನ್ನ ಮಾಡುವುದು ಅಕ್ಕಿಯಿಂದ. ಬರ್ಡ್ ಅನ್ನು ಹಕ್ಕಿ ಎನ್ನುತ್ತಾರೆ. ಅ ಮತ್ತು ಹ ಅಕ್ಷರಗಳು ಎರಡು ಬೇರೆ ಬೇರೆ" ಎಂದು ವ್ಯತ್ಯಾಸ ತಿಳಿಸಿದರು. ನಂತರ ಮುಂದುವರಿಸಿ "ಪರವಾಗಿಲ್ಲ ನೀನಾದರೂ ಈಗಿನಿಂದಲೇ ಅಲ್ಪಪ್ರಾಣ ಮತ್ತು ಮಹಾಪ್ರಾಣಗಳ ನಡುವೆ ಇರುವ ವ್ಯತ್ಯಾಸವನ್ನು ತಿಳಿದುಕೋ. ಕೆಲವರು ಇಲ್ಲಿಯೇ ಇದ್ದರೂ ಅಕ್ಕಿಗೆ ಹಕ್ಕಿ ಎಂದು, ಹಕ್ಕಿಗೆ ಅಕ್ಕಿ ಎಂದು ಹೇಳಿ, ಅರ್ಥವನ್ನೇ ಕೆಡಿಸಿಬಿಡುತ್ತಾರೆ..!!" ಎಂದರು.
ಒಂದು ತಿಂಗಳು ಕಳೆಯುತ್ತಾ ಬರಲು ಸಾಗರನು ತನ್ನ ತಾಯಿಗೆ ಒಳ್ಳೆಯ ಡಾಕ್ಟರ್ ಹತ್ತಿರ ತೋರಿಸಿ, ಕಾಲು ನೋವಿಗೆ ಟ್ರೀಟ್ಮೆಂಟ್ ಕೊಡಿಸಿದನು. ಲೀಸಾಳಂತೂ ಮೈಸೂರಿನ ವಾತಾವರಣಕ್ಕೆ ಒಗ್ಗಿ ಹೋಗಿದ್ದಳು..! ತಾನು ನೋಡಿದ ಜಗದ್ವಿಖ್ಯಾತ ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಮೈಸೂರು ಮೃಗಾಲಯ, ಲಲಿತ ಮಹಲ್ ಅರಮನೆ, ಜಗನ್ಮೋಹನ ಅರಮನೆ, ಕೃಷ್ಣರಾಜಸಾಗರ ಅಣೆಕಟ್ಟು, ಹತ್ತಿರದಲ್ಲೇ ಇದ್ದ ಬಂಡೀಪುರ, ಸೋಮನಾಥ ದೇವಾಲಯ, ಊಟಿ ಕೊಡಗು, ಹೀಗೆ ಎಲ್ಲವನ್ನೂ ವೀಕ್ಷಿಸಿ ಅದರ ಬಗ್ಗೆ ಟಿಪ್ಪಣಿಗಳನ್ನು ಬರೆದಿಟ್ಟುಕೊಂಡಳು.
ತಾನು ಬರೆಯುತ್ತಿದ್ದ ಬ್ಲಾಗ್ ಗೆ ಫೋಟೋ ಸಮೇತ ಮೈಸೂರು ಮತ್ತು ಸುತ್ತಮುತ್ತಲ ಪ್ರದೇಶಗಳ ವಿವರಗಳನ್ನು ಹಾಕಿ, ತನ್ನ ದೇಶದವರಿಗೂ ಕರ್ನಾಟಕದ ಬಗೆಗಿನ ಮಾಹಿತಿಗಳನ್ನು ಹಂಚಿಕೊಳ್ಳಬೇಕೆಂದು ಸಾಗರನಲ್ಲಿ ಹೇಳಿದಳು.
ತನ್ನ ಮಗನ ಕುಟುಂಬ ವಾಪಸ್ಸು ಅಮೆರಿಕಕ್ಕೆ ಹೋಗುವ ದಿನಾಂಕ ಹತ್ತಿರವಾಗುತ್ತಿದ್ದಂತೆ, ಸಾಗರನ ತಂದೆ ತಾಯಿಗೆ ಬೇಸರವಾಗಲು ಶುರುವಾಯಿತು. ಹೇಗೋ ಸಮಾಧಾನಿಸಿಕೊಳ್ಳುತ್ತಿದ್ದರು. ಮತ್ತೆ ನಮ್ಮನ್ನು ನೋಡಲು ಯಾವಾಗ ಬರುತ್ತಾರೋ ಏನೋ, ನೆನಪಿಗಾಗಿ ಒಂದೊಳ್ಳೆ ಫೋಟೋವನ್ನು ನಮ್ಮ ಮನೆಯ ತೋಟದ ಮುಂದೆ ತೆಗೆಸಿಕೊಂಡರೆ ಹೇಗೆ ಎಂಬ ಯೋಚನೆ ಸಾಗರನ ತಂದೆಗೆ ಬಂತು.
ಇದಕ್ಕೆ ಖುಷಿಯಿಂದಲೇ ಒಪ್ಪಿದ ಸಾಗರನ ತಾಯಿ, ತನ್ನ ಸೊಸೆಗೆ ಅಪ್ಪಟ ಮೈಸೂರು ರೇಷ್ಮೆ ಸೀರೆ, ಮೈಸೂರು ಮಲ್ಲಿಗೆ ಹೂವನ್ನು ತಂದುಕೊಟ್ಟರು. ಸ್ವತಃ ತಾವೇ ನಿಂತು ತಮ್ಮ ಫಾರಿನ್ ಸೊಸೆಗೆ ಸೀರೆ ಉಡಿಸಿ, ಅಲಂಕಾರ ಮಾಡಿದರು. ಅತ್ತೆ ಉಡಿಸಿದ ಸೀರೆಯಲ್ಲಿ ಲೀಸಾಳಂತೂ ಮದುವಣಗಿತ್ತಿಯಂತೆ ಕಾಣುತ್ತಿದ್ದಳು..!!
ಆ ದಿನ ಫೋಟೋ ತೆಗೆಯಲು ಒಬ್ಬ ಫೋಟೋಗ್ರಾಫರ್ ಅನ್ನು ಸಾಗರನೇ ಕರೆಸಿದನು. ತನ್ನ ಬಿಳಿ ಹೆಂಡ್ತಿ ಕೆಂಪು ಬಣ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿರುವುದನ್ನು ನೋಡಿ ದೃಷ್ಟಿ ತೆಗೆದನು..!! ಸಾಗರನ ತಂದೆ ಸಾಗರನಿಗೆಂದೇ ಪಂಚೆ ಶಲ್ಯವನ್ನು ತಂದಿದ್ದರು. ಸಂಚಿತ್ ನಿಗೆ ಮೈಸೂರು ಪೇಟ ಜುಬ್ಬವನ್ನು ಖರೀದಿಸಿದ್ದರು..!!
ಇವೆಲ್ಲವನ್ನೂ ತೊಟ್ಟುಕೊಂಡ ಸಾಗರನ ಕುಟುಂಬ ಮದುವೆ ಮನೆಯ ಸಂಭ್ರಮದಲ್ಲಿ ತೇಲುತ್ತಿದ್ದಂತೆ ಖುಷಿಪಟ್ಟರು..!! ಚಂದದ ಫೋಟೋಗಳನ್ನು ಕುಟುಂಬ ಸಮೇತ ತೆಗೆಸಿಕೊಂಡು ಸಂಭ್ರಮಪಟ್ಟರು. ಪ್ರಥಮ ಬಾರಿಗೆ ಲೀಸಾ "ಅತ್ತೆ ಮಾವ ನನಗೆ ಆಶೀರ್ವಾದ ಮಾಡಿ..!!" ಎಂದು ಕಾಲುಮುಟ್ಟಿ ಇಬ್ಬರನ್ನು ನಮಸ್ಕರಿಸಿದಳು.
ಅಲ್ಲಿಗೆ ಸಾಗರನ ತಾಯಿ ತನ್ನ ಫಾರಿನ್ ಸೊಸೆಯನ್ನು ಪೂರ್ತಿಯಾಗಿ ಒಪ್ಪಿಬಿಟ್ಟರು..!! ಮಡಿ ಮೈಲಿಗೆ ಎಂದು ಒಳಒಳಗೆ ಅವಳ ಬಗ್ಗೆ ಇಟ್ಟುಕೊಂಡಿದ್ದ ಅಸಮಾಧಾನವೆಲ್ಲ ಅವರಿಗೆ ಆ ದಿನ ಮಾಯವಾಯಿತು..!
ಖುಷಿಯಿಂದಲೇ ಎಲ್ಲರೂ ಹಬ್ಬದ ಊಟವನ್ನು, ಮೈಸೂರು ಪಾಕಿನೊಂದಿಗೆ ಸವಿದರು. "ವಿಚ್ ಪಾರ್ಕ್ ಇಸ್ ದಿಸ್...?" ಎಂದು ಲೀಸಾ ಕೇಳಲು, ಎಲ್ಲರೂ ನಗುತ್ತಾ "ದಿಸ್ ಇಸ್ ಮೈಸೂರ್ ಪಾಕ್..!!"ಎಂದು ಹೇಳುತ್ತಾ ಬಾಯಿಯನ್ನು ಸಿಹಿ ಮಾಡಿಕೊಂಡರು.
"ಇನ್ನಾರು ತಿಂಗಳಿನಲ್ಲಿ ಮತ್ತೆ ಖಂಡಿತ ಮೈಸೂರಿಗೆ ಬರುತ್ತೇವೆ ಅಮ್ಮ. ಲೀಸಾ ಮತ್ತು ಸಂಚಿತ್ ನಿಗೆ ಈ ಊರಿನ ವಾತಾವರಣ ತುಂಬಾ ಇಷ್ಟವಾಗಿಬಿಟ್ಟಿದೆ. ಲೀಸಾಳಂತೂ ನಮ್ಮ ಸಂಸ್ಕೃತಿಗೆ ಮಾರುಹೋಗಿದ್ದಾಳೆ. ಅವಳು ಕರ್ನಾಟಕದಲ್ಲಿ ಇರುವ ಇನ್ನೂ ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ನೋಡಬೇಕಂತೆ. ಅದರ ಬಗ್ಗೆ ಲೇಖನಗಳನ್ನು ಸಿದ್ಧಪಡಿಸಿ ಅವಳ ಬ್ಲಾಗ್ ನಲ್ಲಿ ಹಾಕಿಕೊಂಡು, ಫಾರಿನ್ ನಲ್ಲಿ ಇರುವ ಸ್ನೇಹಿತರಿಗೂ ವಿಷಯ ತಿಳಿಯುವಂತೆ ಮಾಡಬೇಕಂತೆ.
ನೀವಿಬ್ಬರೂ ಹುಷಾರು. ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ತೆಗೆದುಕೊಳ್ಳಿ. ನಾವು ಆಗಾಗ ಕರೆಗಳನ್ನು ಮಾಡುತ್ತಾ ಇರುತ್ತೇವೆ" ಎಂದು ಹೇಳುತ್ತಾ ಮತ್ತೆ ವಿದೇಶಕ್ಕೆ ಸಾಗರನ ಕುಟುಂಬ ಪ್ರಯಾಣ ಬೆಳೆಸಿತು.
ಇತ್ತ ಮೂವರು ಜನರು ಹೊರಟ ನಂತರ, ಸಾಗರನ ತಂದೆ ತಾಯಿಗೆ ಬಹಳ ಬೇಸರವಾದರೂ, ತಮ್ಮ ಬೀರುವಿನ ಮೇಲೆ ಅಂಟಿಸಿದ ಮಗ, ಸೊಸೆ ಮತ್ತು ಮೊಮ್ಮಗನ ಫೋಟೋವನ್ನು ನೋಡುತ್ತಾ, ಮತ್ತೆ ಇನ್ನಾರು ತಿಂಗಳು ಯಾವಾಗ ಬರುತ್ತದೋ ಎಂದು ಕಾಯುತ್ತಾ ಕುಳಿತರು..!!