ಬದುಕು ಮೂರಾಬಟ್ಟೆಯಾಯಿತು...
ಬದುಕು ಮೂರಾಬಟ್ಟೆಯಾಯಿತು...
ವೀರಸ್ವಾಮಿಯವರ ಕುಟುಂಬ ಊರಿಗೆ ದೊಡ್ಡ ಹೆಸರು ಮಾಡಿದೆ. ಹೇಳಿ ಕೇಳಿ ಊರಿನ ಹಿರಿಯರು ಅವರು. ನ್ಯಾಯ ಪಂಚಾಯಿತಿ ಮಾಡುವ ಸಾಲಿನಲ್ಲೂ ವೀರಸ್ವಾಮಿಗಳು ಇದ್ದೇ ಇರುತ್ತಾರೆ. ಎಲ್ಲರಿಗೂ ವೀರಣ್ಣ ಎಂದೇ ಚಿರಪರಿಚಿತರು. ಅವರ ಕುಟುಂಬವೇ ದೊಡ್ಡದು. ಹನ್ನೆರಡು ಜನರ ಅವಿಭಕ್ತ ಕುಟುಂಬವದು. ದಿನ ಬೆಳಗಾದರೆ ಎಲ್ಲರೂ ಮೈಮುರಿದು ಕೆಲಸ ಮಾಡುವವರೇ. ಮನೆಯಲ್ಲಿರುವ ವೀರಣ್ಣರ ಪತ್ನಿ ಶಾರದಾ ಮತ್ತು ಮೂವರು ಸೊಸೆಯಂದಿರು, ಎಲ್ಲಾ ಮನೆಗೆಲಸಗಳನ್ನು ಹಂಚಿಕೊಂಡು ಮಾಡಿದರೆ, ವೀರಣ್ಣ ಮತ್ತು ಅವರ ಮೂವರು ಗಂಡು ಮಕ್ಕಳು, ಎಕರೆಗಟ್ಟಲೆ ಹರಿಡಿರುವ ತೆಂಗು, ಮಾವು, ಸೀಬೆ, ಅಡಿಕೆ ತೋಟಗಳಲ್ಲಿ ದಿನವಿಡೀ ಕೆಲಸವನ್ನು ಆಳುಕಾಳುಗಳೊಂದಿಗೆ ಮಾಡುತ್ತಲೇ ಇರುತ್ತಾರೆ. ಸೂರ್ಯ ಉದಯಿಸುವ ಮುನ್ನವೇ ನಿತ್ಯ ಇವರ ಮನೆಯಲ್ಲಿ ಪಾತ್ರೆಗಳ ಸದ್ದು ಕೇಳುತ್ತಿರುತ್ತವೆ. ಹೊತ್ತು ಮುಳುಗಿದರೂ ಇವರ ಮನೆಯ ಸದ್ದು ಮಾತ್ರ ಅಡಗುವುದಿಲ್ಲ. ಅಂತಹ ಶ್ರಮ ಜೀವಿಗಳ ಮನೆ ಇವರದು! "ಕಾಯಕವೇ ಕೈಲಾಸ" ಎಂದು ನಂಬಿ ಕೆಲಸಗಳನ್ನು ಚಾಚೂ ತಪ್ಪದೇ ಮಾಡುತ್ತಿರುವುದರಿಂದ, ಇವರ ಮನೆಯ ಬೊಕ್ಕಸ ದಿನದಿಂದ ದಿನಕ್ಕೆ ಏರುತ್ತಲೇ ಇದೆ!
ವೀರಣ್ಣರು ಕೊಡುಗೈ ದಾನಿಗಳು ಕೂಡ ಹೌದು. ಮನೆಗೆ ಯಾರೇ ಕಷ್ಟವೆಂದು ಬಂದರೂ, ಇಲ್ಲವೆಂದು ಬರಿ ಕೈಯಲ್ಲಿ ಕಳಿಸುವುದಿಲ್ಲ. ಅತಿಥಿಗಳು ಬಂದ ಹೊತ್ತಿಗೆ ತಕ್ಕಂತೆ ತಿಂಡಿ ಊಟಗಳನ್ನು ಮಾಡಿಸಿ, ಸಹಾಯಕ್ಕೆ ಬಂದವರಿಗೆ ಬೇಕಾದಷ್ಟು ಹಣವನ್ನು ಕೊಟ್ಟಿಯೇ ಕಳುಹಿಸುತ್ತಾರೆ ವೀರಣ್ಣರು. ಈ ಬಗ್ಗೆ ಹೆಂಡತಿ ಶಾರದಾಗೆ ಒಂಚೂರು ಅಸಮಾಧಾನ ಇದ್ದೇ ಇದೆ. "ಬಂದವರಿಗೆಲ್ಲ ಈ ರೀತಿ ಏನೂ ವಿಚಾರಿಸದೇ ಕೇಳಿದಷ್ಟು ಕೊಟ್ಟು ಕಳುಹಿಸಿದರೆ, ಅದೆಷ್ಟು ಸರಿ? ದುಡ್ಡಿದೆ, ಸುಮ್ಮನೆ ಸುಳ್ಳು ಹೇಳಿ ತೆಗೆದುಕೊಂಡು ಹೋಗೋಣ ಎಂದು ಬಂದರೆ ಅಂಥವರಿಗೆ ಕಡಿವಾಣ ಬೇಡವೇ? ಸುಮ್ಮನೆ ಹೀಗೆ ಹಣವನ್ನು ಬಂದವರಿಗೆಲ್ಲ ಕೊಡುತ್ತಿದ್ದರೆ ಮೋಸಗಾರರು ಹುಟ್ಟಿಕೊಳ್ಳುತ್ತಾರೆ ಅಷ್ಟೇ!" ಎಂದು ವೀರಣ್ಣರಿಗೆ ಹೇಳಿದರೂ ಏನೂ ಪ್ರಯೋಜನವಾಗಿಲ್ಲ.
"ಕಷ್ಟ ಕಾಲದಲ್ಲಿ ನಮ್ಮನ್ನು ನೆನಸಿ ಬಂದಿದ್ದಾರೆ. ಆ ಸಮಯದಲ್ಲಿ ಕಾರಣವೇನು, ಸತ್ಯವೇನು? ಎಂದು ಪ್ರಶ್ನಿಸುತ್ತಾ ಕೂರುವುದು ಸರಿಯಲ್ಲ. ಬೇಡಿ ಬಂದವರಿಗೆ ಇಲ್ಲವೆಂದು ಹೇಳಬಾರದು. ದೇವರು ನಮಗೆ ಕೊಟ್ಟಾಗ ನಾವು ಅವರಿಗೆ ಕೊಟ್ಟರೆ ಏನು ತಪ್ಪು?" ಎಂದು ಸಮಾಜಾಯಿಷಿ ನೀಡುತ್ತಾರೆ ವೀರಣ್ಣ. ಇದರ ಮಧ್ಯೆ ಕಿರಿಯ ಮಗ ಬೆಂಗಳೂರಿನಲ್ಲಿ ವ್ಯವಹಾರ ಮಾಡುತ್ತೇನೆಂದು ವೀರಣ್ಣನಿಂದ ಇಪ್ಪತ್ತು ಲಕ್ಷ ಸಾಲ ಪಡೆದು ಬಸ್ಸು ಹತ್ತಿದ. ಎಷ್ಟೇ ಬೇಡವೆಂದರೂ ಮಾತು ಕೇಳದೆ, ತನ್ನ ಹೆಂಡತಿ ಮಗು ಇಲ್ಲೇ ಇರಲಿ. ತಾನು ಅಲ್ಲಿಗೆ ಹೋಗಿ ಒಂದಷ್ಟು ಕಾಲ ಸ್ನೇಹಿತರೊಂದಿಗೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತೇನೆ. ನಂತರ ಇವರನ್ನು ಅಲ್ಲಿಗೆ ಕರೆಸಿಕೊಳ್ಳುತ್ತೇನೆ ಎಂದು ಹೊರಟೇಬಿಟ್ಟ!
"ನಮ್ಮನ್ನು ಕಾಯುವುದು, ಕಾಪಾಡುವುದು ಈ ಭೂತಾಯಿಯೇ ಕಣೋ. ನಿನಗೇಕೆ ಈ ಪೇಟೆಯ ಹುಚ್ಚು" ಎಂದು ವೀರಣ್ಣ ಎಷ್ಟೇ ಹೇಳಿದರೂ ಕೇಳಲಿಲ್ಲ ಅವರ ಕಿರಿಯ ಮಗ. ಇದರ ಬಗ್ಗೆ ಒಂದಷ್ಟು ದಿನ ಯೋಚಿಸುತ್ತಾ ಬೇಸರಗೊಂಡಿದ್ದರೂ, ಮತ್ತೆ ಮೊದಲಿನಂತಾದರು ವೀರಣ್ಣರು. ದಿನವೂ ಬರುವ ಆಳುಕಾಳುಗಳಿಗೆ ತಿಂಡಿ ಊಟ, ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ನೀಡುವುದು, ಹೀಗೆ ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಸುತ್ತ ಇರುವ ಜನರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ವೀರಣ್ಣರು. ಕಿರಿಯ ಮಗನ ರಿಯಲ್ ಎಸ್ಟೇಟ್ ವ್ಯವಹಾರ ತುಂಬಾ ಚೆನ್ನಾಗಿ ಸಾಗುತ್ತಿತ್ತು. ಎರಡರಷ್ಟು ಲಾಭವನ್ನು ಬೆಂಗಳೂರಿಗೆ ಬಂದ ಎಂಟು ತಿಂಗಳಿಗೇ ಕುದುರಿಸಿದ್ದ ಅವನು. ಹಾಗಾಗಿ ಮತ್ತೆ ತನ್ನ ಅಪ್ಪನ ಹತ್ತಿರ ಇನ್ನೂ ಮೂವತ್ತು ಲಕ್ಷಗಳ ಬೇಡಿಕೆ ಇಟ್ಟಿದ್ದ.
ಗಾಬರಿಯಾದ ವೀರಣ್ಣರು "ಇಲ್ಲ ಮಗ, ಈಗ ಸದ್ಯಕ್ಕೆ ಆಗುವುದಿಲ್ಲ. ನಮಗೆ ಅಂತ ಭೂಮಿಯಿದೆ ನಿಜ. ಆದರೆ ಅದು ಕೈಗೆ ಕಾಸು ಕೊಡು ಎಂದರೆ ದಿಢೀರನೆ ಕೊಡುವುದಿಲ್ಲ. ವರ್ಷಾನುಗಟ್ಟಲೆ ಶ್ರಮವನ್ನು ಬೇಡುತ್ತದೆ ಈ ನಮ್ಮ ಭೂಮಿ ತಾಯಿ! ನೀನು ಹೀಗೆ ಮತ್ತೆ ಮೂವತ್ತು ಲಕ್ಷಕ್ಕೆ ಬೇಡಿಕೆ ಇಟ್ಟರೆ, ನಾನು ಎಲ್ಲಿಂದ ಎಂದು ತರಲಿ, ನೀನೇ ಹೇಳು?" ಎಂದರು. "ಅದೆಲ್ಲ ಗೊತ್ತಿಲ್ಲ ಅಪ್ಪಯ್ಯ. ಇಲ್ಲ ಆಸ್ತಿಯನ್ನು ಭಾಗ ಮಾಡಿ, ನನ್ನ ಪಾಲಿನದು ನನಗೆ ಕೊಟ್ಟುಬಿಡಿ. ಮತ್ತೆ ನಾ ನಿಮ್ಮನ್ನು ಕೇಳುವುದಿಲ್ಲ" ಎಂದು ಪಟ್ಟುಹಿಡಿದ ಕಿರಿಯ ಮಗ.
ಇವನೇಕೋ ಬಗ
್ಗುವುದಿಲ್ಲ ಎಂದು ಗೊತ್ತಾದಾಗ, "ಇಪ್ಪತ್ತೈದು ಲಕ್ಷ ನಿನ್ನ ಕೈಗೆ ಕೊಡುತ್ತೇನೆ. ಈಗಲೇ ಭೂಮಿ ಮಾರುವುದು, ಪಾಲು ಕೇಳುವುದನ್ನೆಲ್ಲ ಮಾಡಬೇಡ" ಎಂದು ತಿಳಿಹೇಳಿದರು. ಸರಿ ಎಂದು ಒಪ್ಪಿದ ಕಿರಿಯ ಮಗ ಮತ್ತೆ ಬೆಂಗಳೂರಿನ ಹಾದಿ ಹಿಡಿದ. ಇತ್ತ ವೀರಣ್ಣರು ಆಸ್ತಿ ಪಾಲಾಗುವುದು ಬೇಡವೆಂದು ಬಡ್ಡಿಗೆ ಎಂದು ಸಾಲ ಮಾಡಿ ಮಗನಿಗೆ ಕೊಟ್ಟಿದ್ದರು. ಹಳೆಯದು ಇಪ್ಪತ್ತು, ಈಗಿನದು ಇಪ್ಪತ್ತೈದು. ಒಟ್ಟಿಗೆ ನಲವತ್ತೈದು ಲಕ್ಷಗಳಿಗೆ ಪ್ರತಿ ತಿಂಗಳು ಬಡ್ಡಿ ಕಟ್ಟಬೇಕಿತ್ತು. ಈಗಂತೂ ಅವರು ಮುಂಚೆಗಿಂತ ಇನ್ನೂ ಹೆಚ್ಚು ಹೊತ್ತು ತೋಟಗಳಲ್ಲಿ ಕೆಲಸ ಮಾಡುತ್ತಾ ಕಾಲ ಕಳೆಯುತ್ತಿದ್ದರು. ಚಕ್ರ ಬಡ್ಡಿಯ ಸುಳಿಗೆ ಸಿಲುಕದೆ, ಬೇಗ ಸಾಲ ತೀರಿಸಬೇಕೆಂಬುದೇ ಅವರ ಯೋಚನೆಯಾಗಿತ್ತು.
ಇತ್ತ ಕಿರಿಯ ಮಗ ಸ್ನೇಹಿತರೊಂದಿಗೆ ವ್ಯವಹಾರ ಕುದುರಿಸಿದನು. ಜೊತೆಗೆ ಕುಡಿತ, ಧೂಮಪಾನದಂತಹ ಚಟಗಳನ್ನು ಮೈಗಂಟಿಸಿಕೊಂಡನು. ದಿನೇ ದಿನೇ ಕೆಲಸಕ್ಕಿಂತ ಅವನ ದುಶ್ಚಟಗಳ ಸಂಗವೇ ಹೆಚ್ಚಾಗಿತ್ತು. ದುಡ್ಡಿದೆ ಎಂದು ತಿಳಿದ ಸ್ನೇಹಿತರು, ದಿನವೂ ಅವನ ಹತ್ತಿರವೇ ಎಲ್ಲದಕ್ಕೂ ಖರ್ಚು ಮಾಡಿಸುತ್ತಿದ್ದರು. ಸುಖದಲ್ಲೇ ತೇಲಾಡುತ್ತಿದ್ದ ಅವನು ಒಂದು ದಿನ ವಾಸ್ತವ ಸ್ಥಿತಿಗೆ ಹಿಂದಿರುಗಿದಾಗ, ಕಾಲ ಮಿಂಚಿ ಹೋಗಿತ್ತು. ಲಕ್ಷಾನುಗಟ್ಟಲೆ ಸಾಲ ಅವನ ತಲೆಯ ಮೇಲೆ ಏರಿತ್ತು! ಅವನು ಮಾಡುತ್ತಿದ್ದ ವ್ಯವಹಾರ ಅವನನ್ನು ನಡುನೀರಿನಲ್ಲಿ ತಂದು ಮುಳುಗಿಸಿತ್ತು!! ಸಾಲದ ಶೂಲದಲ್ಲಿ ಬಿದ್ದ ಅವನು ಮತ್ತೆ ಎಷ್ಟೇ ಪ್ರಯತ್ನಪಟ್ಟರೂ ಏಳುವುದಕ್ಕೆ ಆಗಲೇ ಇಲ್ಲ. ಇನ್ನು ಊರಿನಲ್ಲಿ ಅಪ್ಪಯ್ಯನಿಗೆ ಹೇಗೆ ಮುಖ ತೋರಿಸುವುದು, ಆಗಿರುವ ಸಾಲವನ್ನು ಹೇಗೆ ತೀರಿಸುವುದು? ಎಂಬ ಚಿಂತೆಯಲ್ಲಿಯೇ ಆತ್ಮಹತ್ಯೆಗೆ ಶರಣಾದ! ಊರಿನಲ್ಲಿ ಇದ್ದ ಹೆಂಡತಿ ಮತ್ತು ಮಗುವನ್ನು ಅನಾಥರನ್ನಾಗಿಸಿ ಕಾಣದ ಲೋಕಕ್ಕೆ ಹೋಗಿಬಿಟ್ಟ!!
ಮಗ ಆತ್ಮಹತ್ಯೆಗೆ ಶರಣಾದ ವಿಷಯವನ್ನು ಕೇಳಿದ ವೀರಣ್ಣ ಕಂಗೆಟ್ಟ. ಇನ್ನೂ ಹೇಗಪ್ಪ ನಮ್ಮ ಜೀವನ? ಏಕೆ ಇಂತಹ ಮೂರ್ಖತನದ ನಿರ್ಧಾರವನ್ನು ಮಾಡಿ ಪೇಟೆಗೆ ಹೋಗಿ ಲಕ್ಷಾಂತರ ರೂಪಾಯಿಯನ್ನು ಕಳೆದ? ಹಣವನ್ನು ಕಳೆದದ್ದು ಮಾತ್ರವಲ್ಲ, ತನ್ನ ಜೀವನವನ್ನು ಕೊನೆಗಾಣಿಸಿಕೊಂಡನಲ್ಲ?! ಎಂದು ಸತ್ತ ಮಗನನ್ನು ನೆನೆದು ಮರುಕಪಟ್ಟ ವೀರಣ್ಣ. "ಪುತ್ರ ಶೋಕಂ ನಿರಂತರಂ" ಎನ್ನುವ ಹಾಗೆ ಬಿಟ್ಟುಹೋದ ತನ್ನ ಕಿರಿಯ ಮಗನನ್ನು ನೆನೆಯುತ್ತಾ, ಮಾನಸಿಕವಾಗಿ ಕುಗ್ಗುತ್ತಾ, ವೀರಣ್ಣ ಸೊರಗಿ ಹೋದ. ಜೊತೆಗೆ ಇವನ ಮನೆಯ ಕಡೆಯೂ ಸಾಲಗಾರರ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಯಿತು. ರಿಯಲ್ ಎಸ್ಟೇಟ್ ನಲ್ಲಿ ಲಾಭಗಳಿಸುತ್ತೇನೆಂದು ಕುಡಿದು ಮಜಾ ಮಾಡುತ್ತಾ ಗೆಳೆಯರೊಂದಿಗೆ ಮಾಡಿದ ಸಾಲಗಾರರ ಕಾಟ, ಜೊತೆಗೆ ಊರಿನಲ್ಲಿ ವೀರಣ್ಣ ಮಗನಿಗಾಗಿ ಮಾಡಿದ ಸಾಲಗಾರರ ಕಾಟ!! ಹೀಗೆ ಎರಡರ ಗುಂಪುಗಳನ್ನು ನಿರ್ವಹಿಸುವುದೇ ಮನೆಯ ಹೆಂಗಸರ ದಿನಚರಿ ಆಗಿಬಿಟ್ಟಿತು.
ಇನ್ನೂ ಆಗುವುದೇ ಇಲ್ಲವೆಂದಾಗ, ವೀರಣ್ಣ ಎಕರೆಗಟ್ಟಲೆ ಹರಡಿದ್ದ ಹೊಲಗಳನ್ನು ಮಾರಿಬಿಟ್ಟ. ಬಂದ ಹಣದಿಂದ ಎಲ್ಲಾ ಸಾಲಗಾರರಿಗೂ ಸಾಲವನ್ನು ತೀರಿಸಿ, ನಿಟ್ಟುಸಿರುಬಿಟ್ಟ. ಈಗ ಯಾರೂ ಅವನ ಮನೆಯ ಹತ್ತಿರ ಸಾಲ ವಾಪಸ್ಸು ಕೊಡಿ ಎಂದು ಸುಳಿಯುವುದಿಲ್ಲ. ಹೇಳಬೇಕೆಂದರೆ ಯಾರಿಗೂ ಅವನ ಕುಟುಂಬವೇ ಬೇಕಾಗಿಲ್ಲ! ಅಂದೊಮ್ಮೆ ಊರಿನ ಹಿರಿಯರು, ನ್ಯಾಯ ಪಂಚಾಯಿತಿ ಮಾಡುವವರು ಎಂದು ಎಲ್ಲರಿಂದ ಗೌರವ ಸನ್ಮಾನಗಳನ್ನು ಸ್ವೀಕರಿಸುತ್ತಿದ್ದ ವೀರಣ್ಣ, ಈಗ ಯಾರಿಗೂ ಬೇಡವಾಗಿದ್ದಾನೆ!! ಉಳಿಸಿಕೊಂಡ ಎರಡೆಕರೆ ಜಮೀನಿನಲ್ಲಿ ತಾವೇ ಇಬ್ಬರು ಮಕ್ಕಳೊಂದಿಗೆ ಕೃಷಿ ಕೆಲಸಗಳನ್ನು ಮಾಡುತ್ತಾನೆ. ಇರುವುದೇ ಸ್ವಲ್ಪ ಜಾಗ ಇನ್ನೂ ಆಳುಗಳೇಕೆ? ಅವರು ಬಂದರೂ, ಅವರಿಗೆ ಕೂಲಿ ಕೊಡುವುದಕ್ಕೆ ದುಡ್ಡಾದರೂ ಎಲ್ಲಿದೆ? ಆದ್ದರಿಂದ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಇರುತ್ತಾರೆ.
ಹಣವಿಲ್ಲದವರ ಬಳಿ ಯಾರು ಬರುತ್ತಾರೆ ಹೇಳಿ?! ಪ್ರತಿದಿನವೂ ಸಹಾಯ ಮಾಡಿ ಎಂದು ಬರುತ್ತಿದ್ದ ಊರಿನ ಜನರು ಈಗ ಇವರ ಮನೆಯ ಹತ್ತಿರ ಸುಳಿಯುವುದೇ ಇಲ್ಲ! "ಅಯ್ಯೋ ನೆಟ್ಟಗೆ ಮಗನನ್ನು ಸರಿ ದಾರಿಯಲ್ಲಿ ಬಾಳಿಸಲಿಲ್ಲ ಅವನು. ಅವನ ಮಗನೋ ಪೇಟೆಗೆ ಹೋಗಿ ದುಶ್ಚಟಗಳ ದಾಸನಾಗಿ ಸತ್ತ. ಈ ಮುದುಕ ಇರುವುದನ್ನೆಲ್ಲ ಮಾರಿದ. ಅವನಿಗೇ ಏನೂ ಇಲ್ಲ, ಇನ್ನು ನಮ್ಮಂತವರಿಗೆ ಏನು ಸಹಾಯ ಮಾಡುತ್ತಾನೆ?!" ಎಂದು ಮಾತಾಡಿಕೊಳ್ಳುವ ಊರಿನ ಜನರನ್ನು ನೋಡುತ್ತಾ ಮೂಕ ಪ್ರೇಕ್ಷಕನಂತೆ ಇದ್ದುಬಿಡುತ್ತಾನೆ ವೀರಣ್ಣ.