ಪುನರ್ಜನ್ಮ
ಪುನರ್ಜನ್ಮ


"ಅಮ್ಮ.. ಹಬ್ಬ ಬಂತು, ಒಬ್ಬಟ್ಟು ಹೇಗೂ ಮಾಡ್ತೀಯಾ.. ಅದ್ನ ಇವತ್ತೇ ಮಾಡು, ಯಾಕೋ ತಿನ್ನಬೇಕು ಅಂತ ತುಂಬಾ ಆಸೆ ಆಗ್ತಾ ಇದೆ."
"ಅಲ್ವೆ ಮಗಳೇ, ಇನ್ನೆರಡು ದಿನ ಬಿಟ್ರೆ ಮಾಡ್ತೀನಲ್ಲ ಅವತ್ತು ತಿನ್ನು ಇವತ್ ಅದನ್ನ ಮಾಡ್ತಾ ಕೂತ್ಕೊಂಡ್ರೆ ಮನೆ ಕ್ಲೀನ್ ಮಾಡೋಕಾಗಲ್ಲ.."
"ಅಮ್ಮ ಪ್ಲೀಸ್ ಅಮ್ಮ ನನಗೋಸ್ಕರ ಅಲ್ಲ ಹೊಟ್ಟೆ ಒಳಗೆ ಇರೋ ಮಗು ನೀನ್ ಮಾಡೋ ಒಬ್ಬಟ್ಟನ್ನ ತಿನ್ನಬೇಕು ಅಂತ ಆಸೆಪಡುತ್ತಿದೆ."
"ಹಹಹ ಈ ಮಾತಿಗೆ ಏನು ಕಮ್ಮಿ ಇಲ್ಲ ಬಸ್ರಿ ಬೈಕೆ.. ಇಲ್ಲ ಅಂತ ಹೇಳಕ್ಕಾಗಲ್ಲ..ಸ್ವಲ್ಪ ಹೊತ್ತು ಮಲ್ಕೋ ಒಬ್ಬಟ್ಟು ತಯಾರಾದ ಮೇಲೆ ಕರಿತೀನಿ.."
"ಥ್ಯಾಂಕ್ಯೂ ಅಮ್ಮ ಲವ್ ಯು" ಎನ್ನುತ್ತಾ ಸಿಂಧು ಪುಸ್ತಕ ಹಿಡಿದು ರೂಮ್ ಕಡೆ ನಡೆದಳು..
ಮಗಳನ್ನು ನೋಡಿ ಹೆಮ್ಮೆಯಿಂದ ನಗುತ್ತಾ ತಾಯಿ ರಾಧಾ ದೇವಿ ತಮ್ಮ ಹಳೆಯ ದಿನಗಳನ್ನು ನೆನೆದು ಭಾವುಕರಾದರು.. ಕಳೆದುಕೊಂಡ ತನ್ನ ಕಂದನನ್ನು ನೆನೆದು ಕಂಬನಿ ಮಿಡಿದರು. ಅಸಲಿಗೆ ಸಿಂಧು ಅವರು ಹೆತ್ತ ಮಗಳಲ್ಲ.. ಆಸ್ಪತ್ರೆಯಲ್ಲಿ ಡೆಲಿವರಿಯಾದಾಗ ತೂಕ ನೋಡಲೆಂದು ಮಲಗಿಸಿದ್ದ ಮಗುವನ್ನು ಕರೆದುಕೊಂಡು ಹೋಗಿ ದುಡ್ಡಿನ ಆಸೆಗಾಗಿ ನರ್ಸ್ ಒಬ್ಬಳು ಮಾರಿ ಪರಾರಿಯಾಗಿದ್ದಾಳೆ ಎಂದು ರಾಧಾದೇವಿ ಹಾಗೂ ವಸಂತ್ ದಂಪತಿಗಳಿಗೆ ತಿಳಿದಾಗ ನಿಂತ ನೆಲ ಕುಸಿದ ಅನುಭವವಾಗಿತ್ತು..
ಮಗುವನ್ನು ಕಳೆದುಕೊಂಡು ನೋವಿನಲ್ಲಿಯೇ ದಿನಗಳನ್ನು ಕಳೆದರು. ವರ್ಷಗಳು ಉರುಳಿದರೂ ದಂಪತಿಗಳಿಗೆ ಮಕ್ಕಳಾಗಲಿಲ್ಲ.ಇನ್ನೂ ಕಾಯುವುದರಲ್ಲಿ ಅರ್ಥವಿಲ್ಲವೆಂದೆನಿಸಿ ಅನಾಥಾಶ್ರಮದಿಂದ ಚಿಕ್ಕ ಮಗು ಒಂದನ್ನು ದತ್ತು ಪಡೆದು ತಮ್ಮ ಪ್ರೀತಿಯನ್ನು ಧಾರೆ ಎರೆದು ಬೆಳೆಸಲಾರಂಬಿಸಿದರು.. ಮಗುವಿಗೆ ಸಿಂಧು ಎಂದು ನಾಮಕರಣ ಮಾಡಿದರು.. ಅಕ್ಕ ಪಕ್ಕದವರು ಆಡಿಕೊಳ್ಳಬಾರದೆಂದು ಯಾರು ಗೊತ್ತಿಲ್ಲದ ಊರಿಗೆ ತೆರಳಿ ಹೊಸ ಜೀವನವನ್ನು ಆರಂಭಿಸಿದರು.. ಸಿಂಧುವಿನ ಜನ್ಮ ರಹಸ್ಯ ಆಕೆಗೆ ಹೇಳಲೆ ಇಲ್ಲ.. ತಾವು ಕಳೆದುಕೊಂಡ ಮಗುವನ್ನು ಹುಡುಕುವ ಪ್ರಯತ್ನವನ್ನು ಸಹ ಕೈಬಿಟ್ಟಿದ್ದರು. ಸಿಂಧೂವಿನಲ್ಲಿಯೇ ತಾವು ಕಳೆದುಕೊಂಡ ಮಗುವನ್ನು ಕಾಣುತ್ತಿದ್ದರು..
ಒಳ್ಳೆಯ ವಿದ್ಯಾಭ್ಯಾಸವನ್ನು ನೀಡಿ ಆಚಾರ ವಿಚಾರ ಸಂಸ್ಕಾರಗಳನ್ನು ಕಲಿಸುತ್ತಾ ಉತ್ತಮ ರೀತಿಯಲ್ಲಿ ಮಗಳನ್ನು ಬೆಳೆಸಿ ಒಂದೊಳ್ಳೆಯ ಕುಟುಂಬಕ್ಕೆ ಧಾರೆಯೆರೆದರು. ಸಿಂಧುವಿನ ನಗುಮುಖ ಅವರ ಎಲ್ಲಾ ನೋವುಗಳಿಗೆ ಔಷಧಿಯಾಗಿತ್ತು.. ಸಿಂಧುವಿಗೂ ಅಪ್ಪ ಅಮ್ಮ ಎಂದರೆ ಜೀವ.. ಅವಳ ಬಯಕೆಯಂತೆ ಅವಳ ಗಂಡನ ಮನೆಯವರು ಅವಳನ್ನು ಚೊಚ್ಚಲ ಹೆರಿಗೆಗೆ ತಾಯಿಯ ಮನೆಗೆ ಕಳಿಸಿದ್ದರು..
ಹಿಂದಿನದೆಲ್ಲವನ್ನು ನೆನೆಯುತ್ತಾ ಹೋಳಿಗೆಯನ್ನು ತಯಾರಿಸಿ ರಾಧಾದೇವಿ ಮಗಳನ್ನು ಕೂಗಿದರು..
"ಸಿಂಧು ಹೋಳಿಗೆ ತಿನ್ನು ಬಾರೆ"
ಅಮ್ಮನ ಹೋಳಿಗೆಗಾಗಿ ಕಾಯುತ್ತಿದ್ದವಳು ಜಿಂಕೆಯಂತೆ ನೆಗದು ಬರಲು ಹೊರಟವಳಿಗೆ ಹೊಟ್ಟೆಯಲ್ಲಿರುವ ಕೂಸು ನೆನಪಾಯಿತು.. ತನ್ನ ಹೊಟ್ಟೆಯ ಮೇಲೆ ಪ್ರೀತಿಯಿಂದ ಕೈ ಬೆರಳನ್ನು ಆಡಿಸುತ್ತಾ ಮೆಲ್ಲಗೆ ನಡೆದು ಅಡಿಗೆ ಮನೆಯ ಕುರ್ಚಿಯ ಮೇಲೆ ಕುಳಿತು ಅಮ್ಮ ಮಾಡಿದ ಒಬ್ಬಟ್ಟನ್ನು ಸೇವಿಸಿ ಸಂತೃಪ್ತಿಯಿಂದ ಮಲಗಲು ತೆರಳಿದಳು..
ಅದು ಉರಿಬಿಸಿಲಿನ ಮಧ್ಯಾಹ್ನ..ಮಲಗಿದ್ದವಳಿಗೆ ಅಸಾಧ್ಯವಾದ ಹೊಟ್ಟೆ ನೋವು ಕಾಣಿಸಿತು..ಅಮ್ಮ ಅಮ್ಮ ಎಂದು ನರಳಲಾರಂಭಿಸಿದಳು.. ಮಗಳ ಕೂಗನ್ನು ಕೇಳಿ ಆತರುದಿಂದ ಕೋಣೆಗೆ ಹೋಗಿ ನೋಡಿದಾಗ ನೋವಿನಿಂದ ಒದ್ದಾಡುತ್ತಿದ್ದ ಮಗಳನ್ನು ತಡ ಮಾಡದೆ ಆಸ್ಪತ್ರೆಗೆ ಕರೆದೊಯ್ದರು.. ವೈದ್ಯರು ಹೇಳಿದ್ದನ್ನು ಕೇಳಿ ಹೃದಯ ಕಂಪಿಸಿತು.ಊಹಿಸಿರದ ಘಟನೆ ಮಗಳ ಬಾಳಲ್ಲಿಯೂ ನಡೆಯಿತಲ್ಲ ಎಂದು ಗೋಳಾಡಿದರು..
ಸಿಂಧು ನಿಧಾನವಾಗಿ ಕಣ್ಣು ಬಿಟ್ಟು ನೋಡಿದಳು.ಕೈಗೆ ಹಾಕಿದ ಡ್ರಿಪ್ಸ್ ನೋಡುತ್ತಾ ಕಣ್ಣಿನಲ್ಲಿ ಹರಿಯುತ್ತಿದ್ದ ನೀರನ್ನು ಹರಿಯಲು ಬಿಟ್ಟು ತಿರುಗದೆ ನಿಂತು ಫ್ಯಾನ್ ನೋಡುತ್ತಾ ಹೊಟ್ಟೆಯ ಮೇಲೆ ಕೈ ಆಡಿಸಿದಳು.ಮುಂಜಾನೆಯಿಂದ ನೆಡೆದಿದ್ದೆಲ್ಲವನ್ನು ಕಣ್ಣು ಮುಚ್ಚಿ ನೆನೆಯಲು ಪ್ರಾರಂಭಿಸಿದಳು.. ಇನ್ನು ಒಂದು ತಿಂಗಳಷ್ಟೇ ಇರೋದು ಡೆಲಿವರಿಗೆ ಎಲ್ಲಾ ಆರಾಮ್ ಆಗಿ ಆದರೆ ಸಾಕು ಎಂದು ಅಮ್ಮ ಫೋನ್ನಲ್ಲಿ ಮಾತನಾಡುತ್ತಿದ್ದಿದ್ದು ಕೇಳಿಸಿತು..ಒಬ್ಬಟ್ಟು ಮಾಡಿಸಿಕೊಂಡು ತಿಂದು ಮಲಗಿ ಏಳುವಷ್ಟರಲ್ಲಿ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಪ್ರಾರಂಭವಾಯಿತು.ಅಮ್ಮಾ ಎಂದು ಕಿರುಚಿದಳು.ಓಡಿ ಬಂದ ಅಮ್ಮ ತಡ ಮಾಡದೆ ಡಾಕ್ಟರ್ ಬಳಿ ಕರೆ ತಂದರು..ಮಗುವಿನ ಚಲನ ಅದಾಗಲೇ ನಿಂತ್ತಿತ್ತು.ಹೃದಯ ಬಡಿತ ಕೇಳದಾಗಿ
ತ್ತು.ಬೇರೆ ದಾರಿಯಿಲ್ಲದೆ ಆಪರೇಷನ್ ಮಾಡಿ ಸತ್ತ ಮಗುವನ್ನು ಹೊರ ತೆಗೆದರು..ಎಲ್ಲವೂ ಟೀ ವಿ ಯಲ್ಲಿ ಚಲನ ಚಿತ್ರ ಕಂಡಂತೆ ಭಾಸವಾಯಿತು..ಮುಂಜಾನೆ ಹೊಟ್ಟೆ ಮುಟ್ಟಿ ಮಗುವಿನೊಂದಿಗೆ ಮಾತನಾಡಿದವಳು ಹೀಗಾಗುವುದೆಂದು ಊಹಿಸಿರಲಿಲ್ಲ..ಜೋರಾಗಿ ಅಳಲಾರಂಭಿಸಿದಳು..ಕೂಗಾಡಿದಳು.. ಡಾಕ್ಟರ್ ಅವಳ ಉದ್ವೇಗ ಕಡಿಮೆ ಮಾಡಲು ಇಂಜೆಕ್ಷನ್ ಕೊಟ್ಟು ಹೋದರು.. ಮಗುವನ್ನು ನೆನೆದು ಅಳುತ್ತಲೇ ನಿದ್ದೆಯ ಮಂಪರಿಗೆ ಜಾರಿದಳು....
"ಅಮ್ಮಾ...! ದ್ವನಿ ಕೇಳಿಸಿತು ಎಲ್ಲಿಯೂ ಕಾಣಲಿಲ್ಲ.ಹುಡುಕಾಡಿದಳು...ಅಮ್ಮಾ ನಾನು ಇಲ್ಲೇ ಇದ್ದೀನಿ ನಿನ್ನ ಕಣ್ಣಿಗೆ ಕಾಣುತ್ತಿಲ್ಲ..ಮಲಗು ಆಯಾಸ ಮಾಡಿಕೊಳ್ಳಬೇಡ..ಅಮ್ಮಾ ನೀನು ನನ್ನನ್ನು ಎಷ್ಟು ಜೋಪಾನ ಮಾಡಿ ನೋಡಿಕೊಂಡಿದ್ದೀಯ..8 ತಿಂಗಳು ಹಗಲು ರಾತ್ರಿ ನನಗಾಗಿ ದಣಿದಿರುವೆ..ಈಗ ನಾನ್ನಿಲ್ಲ ಎಂದು ಕೊರಗುತ್ತಾ ದಣಿಯುತ್ತಿರುವೆ... ಅಮ್ಮ ನಾನ್ನಿಲ್ಲ ಅಂತ ಕೊರಗಬೇಡ..ನೀನು ಅಳುವುದನ್ನು ನನ್ನಿಂದ ನೋಡಲಾಗದು...ನೀನು ನನಗೆ ಕೊಡಬೇಕಾದ ಪ್ರೀತಿಯನ್ನು ನಾನು ಉದರದಲ್ಲಿದ್ದಾಗಲೆ ಅನುಭವಿಸಿದ್ದೇನೆ..ನನಗೂ ನಿನ್ನನ್ನು ಬಿಟ್ಟು ಹೋಗುವ ಇಚ್ಛೆ ಇರಲ್ಲಿಲ್ಲ..ದೇವರು ನನ್ನ ಮುಂದೆ ಮೂರು ಆಯ್ಕೆ ಇಟ್ಟಿದ್ದರು..ಒಂದು ಉದರದಲಿರುವಾಗ ಸಾಯುವುದು ಇನ್ನೊಂದು 18 ವರುಷ ತುಂಬಿದ ಹೊತ್ತಿನಲ್ಲಿ ಸಾಯುವುದು ಮತ್ತೊಂದು ತಂದೆ ತಾಯಿಯ ಪ್ರೀತಿ ಕಾಣದೆ ಬದುಕುವುದು...ಪ್ರೀತಿ ಕಾಣದೆ ಬದುಕುವುದಕ್ಕಿಂತ ಸಾಯುವುದು ಒಳಿತು ಅನಿಸಿತು..18ವರುಷ ಇದ್ದು ನಂತರ ಸತ್ತರೆ ನಿನ್ನ ನೋವು ಇನ್ನೂ ಜಾಸ್ತಿಯಾಗಬಹುದು ಎನಿಸಿತು..ಹಾಗಾಗಿ ಉಳಿದಿದ್ದು 8 ತಿಂಗಳು ಪ್ರೀತಿ ಅನುಭವಿಸಿ ಸಾಯುವುದು.ಹೋದ ಜನ್ಮದ ಕರ್ಮಕ್ಕೆ ನಾನು ನೀನು ಇಬ್ಬರೂ ಅನುಭವಿಸಬೇಕಾದುದು ವಿಧಿಯ ನಿಯಮ..8 ತಿಂಗಳು ಉದರದಿ ಇಟ್ಟುಕೊಂಡ 8 ಜನುಮಕ್ಕೆ ಆಗುವಷ್ಟು ಪ್ರೀತಿ ಕೊಟ್ಟಿದ್ದೀಯ.. ಇನ್ನೊಮ್ಮೆ ಜನಿಸುವ ಅವಕಾಶವಿದ್ದರೆ ನಿನ್ನೇ ಕೊಡುವಂತೆ ಕೇಳಿದ್ದೇನೆ..ಬೇಗ ಸುಧಾರಿಸಿಕೋ ಅಮ್ಮ..ನಾನು ಮತ್ತೆ ಹುಟ್ಟಿ ಬರುವೆ.. ಪುನರ್ಜನ್ಮವನ್ನು ತಾಳುತ್ತೇನೆ ನಿನ್ನ ಮಡಿಲಿನಲ್ಲಿ ಆಡಲು ಬರುತ್ತೇನೆ" ಎಂದು ಹೇಳಿದಂತಾಯಿತು..
ಎಲ್ಲೆಡೆ ಮೌನ ...ಭಯದಿಂದ ಎದ್ದಳು... ಸುತ್ತ ಮುತ್ತ ನೋಡಿದಳು... ಕೇಳಿಸಿಕೊಂಡ ಮಾತು ಕನಸು ಎಂಬುದು ಸ್ಪಷ್ಟವಾಯಿತು... ಮತ್ತೆ ಹುಟ್ಟಿ ಬರುವೆ ಎಂದು ಹೇಳಿದ್ದು ಮನದಲ್ಲಿ ಅಚ್ಚಳಿಯದೆ ಉಳಿಯಿತು...ಆ ದಿನಕ್ಕಾಗಿ ಮೆಲ್ಲನೇ ಚೇತರಿಸಿಕೊಳ್ಳುತ್ತಾ ಕಾಯಲಾರಂಭಿಸಿದಳು..
ಇದಾಗಿ 4 ವರುಷ ಕಳೆಯಿತು.. ಮತ್ತೆ ಅದೇ ತಾರೀಕು ಅದೇ ಗಳಿಗೆ ಎದುರಾಯಿತು..ಆದರೆ ಉದರದಿ ಒಂದಲ್ಲ ಎರಡು ಜೀವಗಳಿದ್ದವು..ಈ ಬಾರಿ ಮೊದಲಿನಂತೆ ಆಗದಿರಲು ಕಾಣದ ದೇವರಿಗೆ ಸಿಂಧು ಮೊರೆಯಿಟ್ಟಳು.. ಅವಳ ತಂದೆ ತಾಯಿ ಅನೇಕ ಹರಕೆಗಳನ್ನು ಹೊತ್ತು ದೇವರನ್ನು ಬೇಡಿಕೊಳ್ಳುತ್ತಿದ್ದರು.. ಗಂಡನ ಮನೆಯವರದ್ದು ಸಹ ಪರಿಸ್ಥಿತಿ ಹೊರತಾಗಿರಲಿಲ್ಲ..
ಸಿಂಧುಗೆ ಬಿಟ್ಟುಹೋದ ಮಗುವಿನ ಮಾತು ನೆನಪಾಯಿತು.ಮತ್ತೆ ಹುಟ್ಟಿ ಬರುವೆ ಎಂದಿರುವೆ ಕಂದಾ ಬಿಟ್ಟು ಹೋಗಬೇಡ ಎಂದು ಬೇಡಿಕೊಂಡಳು.. ಆಪರೇಷನ್ ಗೆ ರೆಡಿ ಮಾಡುವುದು ಕಾಣಿಸಿತು.. ಸುತ್ತಲೂ ಮಂಪರಾಯಿತು..ಒಂದು ದಿನದ ನಂತರ ಎಚ್ಚರವಾದಾಗ ಸುತ್ತ ಮುತ್ತ ಹುಡುಕಾಡಿದಳು ಎಲ್ಲಿಯೂ ಮಗುವಿನ ಸುಳಿವು ಕಾಣಲ್ಲಿಲ್ಲ..ಈ ಬಾರಿಯೂ ಮೋಸ ಮಾಡಿದನೆಂದು ದೇವರನ್ನು ನೆನೆದು ಕೋಪಿಸಿಕೊಂಡು ಬೈಯಲು ತಾಯಾರಾದವಳಿಗೆ ಮಕ್ಕಳ ಅಳು ಕೇಳಿಸಿತು..ಬಾಗಿಲ ಕಡೆಗೆ ನೋಡಿದಳು ಅಮ್ಮ ಮತ್ತು ಪತಿ ಮಕ್ಕಳೊಂದಿಗೆ ಬರುವುದನ್ನು ನೋಡಿದಳು..ಖುಷಿಗೆ ಎದೆ ಭಾರವಾಯ್ತು..ಮಲಗಿದಲ್ಲೇ ಮಕ್ಕಳನ್ನು ನೋಡಿ ತಲೆ ಸವರಿದಳು..ಮತ್ತೆ ನಿದ್ದೆಯ ಮಂಪರಿಗೆ ಜಾರಿದಳು..
ಅಮ್ಮ...!ನಾನು ಹೇಳಿದಂತೆ ಬಂದಿರುವೆ.. ನಾನು ಮರುಜನ್ಮ ಪಡೆದು ನನ್ನೊಂದಿಗೆ ತಂಗಿಯನ್ನು ಕರೆದುಕೊಂಡು ಬಂದಿರುವೆ..ನಿಶ್ಚಿಂತೆ ಇಂದ ಇರು..ದೇವರು ಕಟುಕನಲ್ಲ...ಎಂದಂತೆ ಭಾಸವಾಯಿತು...ಕಂಬನಿ ಕರಗಿ ಆನಂದಭಾಷ್ಪ ಹರಿಯಿತು.... ನೆಮ್ಮದಿಯ ನಿಟ್ಟುಸಿರು ದಬ್ಬಿ ನಿದ್ರಿಸಿದಳು....
ರಾಧಾ ದೇವಿ ಹಾಗೂ ವಸಂತ್ ದಂಪತಿಗಳು ಮಗಳ ನೆಟ್ಟುಸಿರನ್ನು ಕಂಡು ಸಂತಸ ಪಟ್ಟರು.. ತಾಯಿಯಾಗಬೇಕೆಂಬ ಬಯಕೆಗೆ ಸಿಂಧುವನ್ನು ಕರುಣಿಸುವ ಮೂಲಕ ತಾಯಿಯ ಮಮತೆಗೆ ಪುನರ್ಜನ್ಮ ನೀಡಲು ಅವಕಾಶ ಕಲ್ಪಿಸಿದ ದೇವರನ್ನು ಸ್ಮರಿಸಿದರು..
ಇತ್ತ ಸಿಂಧು ಒಂದನ್ನು ಕಿತ್ತುಕೊಂಡು ಎರಡನ್ನು ಕೊಟ್ಟಿರುವ ದೇವರ ಆಟವನ್ನು ನೆನೆದಳು.."ಕರ್ಮದ ಫಲ ಎಲ್ಲರಿಗೂ ದೊರೆಯುವುದು... ಭರವಸೆಯ ಬೆಳಕು ಹರಿಯದೆ ಇರದು..."ಎಂದು ಓದಿದ ಸಾಲುಗಳು ನೆನಪಿಸಿಕೊಂಡಳು....