ಅಡ್ಡದಾರಿಯ ಗೆಲುವಿಗಿಂತ ಗುಡ್ಡದಾರಿಯೇ ಮೇಲು
ಅಡ್ಡದಾರಿಯ ಗೆಲುವಿಗಿಂತ ಗುಡ್ಡದಾರಿಯೇ ಮೇಲು
ಶಾಲೆಯ ವಾರ್ಷಿಕ ಪರೀಕ್ಷೆ ನಡೆಯುತ್ತಿತ್ತು. ವರುಷದ ಕಡೆಯ ಪರೀಕ್ಷೆ ಅದಾಗಿತ್ತು. ಪರೀಕ್ಷೆಯ ಕೊಠಡಿಗೆ ಹೋಗಬೇಕಾಗಿದ್ದ ಹಿರಿಯ ಶಿಕ್ಷಕಿಯೊಬ್ಬರಿಗೆ ಇದ್ದಕ್ಕಿದ್ದಂತೆ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡ ಕಾರಣ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅವರು ಮಾಡಬೇಕಿದ್ದ ಮೇಲ್ವಿಚಾರಕರ ಕೆಲಸ ಮೈಥಿಲಿಗೆ ದೊರೆಯಿತು.
ಹೊಸದಾಗಿ ಕೆಲಸಕ್ಕೆ ಸೇರಿದ್ದ ಮೈಥಿಲಿಗೆ ಈ ಜವಾಬ್ದಾರಿ ತುಸು ದೊಡ್ಡದು ಎನಿಸಿದರು ಕರ್ತವ್ಯ ಪಾಲನೆಯಿಂದ ಹಿಂದೆ ಸರಿಯಲು ಇಚ್ಛೆಸದೆ ಒಪ್ಪಿಕೊಂಡಳು. ಶಾಲಾ ಮಟ್ಟದಲ್ಲಿ ನಡೆಯುವ ಎಂಟು ಹಾಗು ಒಂಬತ್ತನೆ ತರಗತಿಯ ಮಕ್ಕಳಿರುವ ಕೊಠಡಿಗೆ ಮೈಥಿಲಿಯನ್ನು ಹೋಗುವಂತೆ ಹೇಳಿದರು. ಮನದಲ್ಲಿ ಕೊಂಚ ಅಳುಕಿದ್ದರು ಮುಖದಲ್ಲಿ ತೋರ್ಪಡಿಸದೆ ಕೊಠಡಿಗೆ ನಡೆದಳು.
ಒಳಗೆ ಕಾಲಿಡುತ್ತಿದ್ದಂತೆ ಎದ್ದು ನಿಂತ ಮಕ್ಕಳನ್ನು ನೋಡಿ ಮುಗುಳ್ನಗುತ್ತಾ ಕುಳಿತುಕೊಳ್ಳಲು ಹೇಳಿದಳು. ಗಂಟೆ ಬಾರಿಸಿತು. ಬ್ಯಾಗ್ ಗಳನ್ನು ಹೊರಗಿಡಲು ಹೇಳಿದಳು. ಮಕ್ಕಳು ಅವಳ ಮಾತನ್ನು ಪಾಲಿಸಿದರು. ಮತ್ತೊಂದು ಗಂಟೆಯ ಸದ್ದು ಕೇಳುತ್ತಿದ್ದಂತೆ ಪ್ರಶ್ನೆ ಪತ್ರಿಕೆ ವಿತರಿಸಿದಳು. ಮಕ್ಕಳು ಬರೆಯಲಾರಂಭಿಸಿದರು.
ಸುಮಾರು ಅರ್ಧ ಗಂಟೆಯ ನಂತರ ಮಕ್ಕಳು ಮೌನವಾಗಿ ತಲೆ ತಗ್ಗಿಸಿ ಬರೆಯುವುದನ್ನು ನೋಡುತ್ತಾ ಕೋಣೆಯ ಒಳಗೆ ತಿರುಗಾಡುವ ವೇಳೆಗೆ ಒಂದು ಹುಡುಗ ಚಿಕ್ಕ ಹಾಳೆಯನ್ನು ನೋಡಿಕೊಂಡು ಉತ್ತರ ಬರೆಯುವುದನ್ನು ಗಮನಿಸಿ ಮೈಥಿಲಿ ಅವನ ಬಳಿ ನಿಂತಳು. ಟೀಚರ್ ಪಕ್ಕದಲ್ಲಿ ಇರುವುದನ್ನು ಗಮನಿಸದ ಹುಡುಗ ಉತ್ತರವನ್ನು ನಕಲು ಮಾಡುವುದರಲ್ಲಿ ನಿರತನಾಗಿದ್ದ. ಮೈಥಿಲಿ ಏನನ್ನೂ ಮಾತನಾಡದೆ ಅವನ ಕೈಯಲ್ಲಿದ್ದ ಪೇಪರ್ ಎಳೆದುಕೊಂಡಳು. ಹುಡುಗ ಗಾಬರಿಯಿಂದ ಅವಳನ್ನೇ ನೋಡಿದನು .
" ಮೇಡಂ ನನ್ನದಲ್ಲ..ಅವನು ಕೊಟ್ಟಿದ್ದು..ಚೀಟಿ ತಂದವನು ಅವನು " ಎಂದು ಹಿಂದಿನ ಬೆಂಚಿನ ಹುಡುಗನ ಮೇಲೆ ಹಾಕಿದ. ಹಿಂದಿನ ಬೆಂಚಿನ ಹುಡುಗ ಗಾಬರಿಯಿಂದ " ಇಲ್ಲ ಮೇಡಂ..ನಾನಲ್ಲ..ನನಗೇನು ಗೊತ್ತಿಲ್ಲ" ಎಂದನು. ಮೈಥಿಲಿ ಏನೂ ಮಾತಾಡದೆ ನಕಲು ಮಾಡುತ್ತಿದ್ದ ಹುಡುಗನನ್ನೇ ನೋಡುತ್ತಾ ನಿಂತಳು. ಹುಡುಗ ತಲೆ ತಗ್ಗಿಸಿ ನಿಂತನು.
"ನಿನಗೆ ಎಷ್ಟು ಗೊತ್ತು ಅಷ್ಟು ಬರಿ. ನಾನು ನಿನ್ನನ್ನು ಈಗಲೇ ಹೊರ ಹಾಕಬಹುದು. ಆದರೆ ಹಾಗೆ ಮಾಡಿ ನಿನಗೆ ಅವಮಾನ ಮಾಡಲ್ಲ. ಈ ಹಾಳೆ ಕೊಡುವುದಿಲ್ಲ. ತಿಳಿದಷ್ಟು ಬರಿ" ಎನ್ನುತ್ತಾ ಉತ್ತರಗಳಿರುವ ಹಾಳೆಯನ್ನು ಹರಿದು ಹಾಕಿದಳು.
ಚೀಟಿ ಕಸಿದುಕೊಂಡ ನಂತರ ಬೇರೆಯವರ ಪೇಪರ್ ನೋಡಬಹುದು ಎನ್ನುವ ಅವಳ ಊಹೆ ಸುಳ್ಳಾಗಲಿಲ್ಲ . ಆಚೆ ಈಚೆ ನೋಡಿ ಕಾಪಿ ಮಾಡಿ ಬರೆಯಬೇಕೆಂದು ಕೊಂಡವನ ಯೋಜನೆ ಹಾಳಾಯ್ತು. ತಲೆ ತಗ್ಗಿಸಿ ಕುಳಿತು ಕೊನೆಗೆ ಒಂದಿಷ್ಟು ಪುಟ ಬರ್ತಿ ಮಾಡಿದ. ಮೈಥಿಲಿ ಅವನ ಮೇಲೆ ಕಣ್ಣಿಟ್ಟಿದ್ದಳು. ಅವನಿಗೆ ಬೈದು ಹೇಳಿದರೆ ಅವನು ಅರ್ಥ ಮಾಡಿಕೊಳ್ಳಲಾರ ಎಂದನಿಸಿತು. ಅವನಿಗೆ ಅವನ ತಪ್ಪನ್ನು ಬಿಡಿಸಿ ಹೇಳಬೇಕೆಂದುಕೊಂಡಳು.
ಪರೀಕ್ಷೆಯ ಸಮಯ ಮುಗಿಯುತ್ತಿದ್ದಂತೆ ಎಲ್ಲಾ ಪೇಪರ್ ಗಳನ್ನು ಮಕ್ಕಳಿಂದ ಪಡೆದು ಕೋಣೆಯಿಂದ ಹೊರಗೆ ಹೊರಟವಳು ಆ ಹುಡುಗನನ್ನು ಅಲ್ಲಿಯೇ ಇರುವಂತೆ ಹೇಳಿ ಉಳಿದವರನ್ನು ಕಳುಹಿಸಿದಳು.
ಹುಡುಗ ಪೂರ್ತಿ ಹೆದರಿ ಹೋಗಿದ್ದ. ಮೈಥಿಲಿ ಅವನನ್ನು ಬೆಂಚ್ ನಲ್ಲಿ ಕೂರಿಸಿ ಅವನ ಪಕ್ಕದಲ್ಲಿ ಕುಳಿತಳು.
"ಮೇಡಂ ಸಾರಿ. ಇನ್ನು ಹೀಗೆ ಮಾಡಲ್ಲ.. ನನ್ನನ್ನು ಕ್ಷಮಿಸಿ. ನನಗೆ ಓದೋಕೆ ಆಗಿರಲಿಲ್ಲ. ಅದಕ್ಕೆ ಕಾಪಿ ಚೀಟಿ ತಂದಿದ್ದೆ. ಮನೆಯಲ್ಲಿ ಗೊತ್ತಾದರೆ ಹೊಡಿತಾರೆ. ಯಾರಿಗೂ ಹೇಳ್ಬೇಡಿ. ನನ್ನನ್ನು ಹೋಗೋಕೆ ಬಿಡಿ" ಎಂದು ಹೇಳಿದನು.
"ನಿನ್ನ ಸ್ನೇಹಿತರಿಗೆಲ್ಲಾ ವಿಷಯ ಗೊತ್ತಾಗಿದೆಯೆಲ್ಲಾ ಅವರಿಂದ ಯಾರಿಗಾದ್ರು ಗೊತ್ತಾದ್ರೆ?" ಎಂದು ಕುತೂಹಲದಿಂದ ಕೇಳಿದಳು. ಹುಡುಗ ಏನೂ ಮಾತಾಡಲಿಲ್ಲ. ನೀನು ಮಾಡಿದ ತಪ್ಪನ್ನು ನಿನ್ನ ಹಿಂದಿರುವವನ ಮೇಲೆ ಹೊರೆಸಲು ನೋಡಿದ್ದು ತಪ್ಪಲ್ವಾ?" ಎಂದಳು. ಹುಡುಗ ಅದಕ್ಕೂ ಮಾತಾಡಲಿಲ್ಲ.
"ಕಾಪಿ ಚೀಟಿ ತರಬೇಕು ಅಂತ ತಲೆ ಓಡಿಸಿದವನಿಗೆ ಅದನ್ನು ಓದಿ ತಲೆಯೊಳಗೆ ಹಾಕಿಕೊಳ್ಳಬಹುದಿತ್ತಲ್ಲ..! ಅಷ್ಟಕ್ಕೂ ಹೀಗೆ ಕಾಪಿ ಮಾಡಿ ಪರೀಕ್ಷೆ ಬರೆದರೆ ಏನು ಪ್ರಯೋಜನ? ಪಾಸ್ ಆಗಲು, ಸುಳ್ಳು, ಮೋಸ ಮಾಡಿದರೆ, ಅದು ನಿನ್ನನ್ನು ತಾತ್ಕಾಲಿಕವಾಗಿ ಕಾಪಾಡಬಹುದು. ಕ್ಷಣಿಕ ನೆಮ್ಮದಿ ಕೊಡಬಹುದು. ಆದರೆ ನೀನು ಯಾವಾಗಲೂ ಹೀಗೆ ಮಾಡಲಾಗುತ್ತದೆಯೇ? ಪ್ರಾಮಾಣಿಕತೆ ಮತ್ತು ಪರಿಶ್ರಮದಿಂದ ಕೂಡಿದ ಗೆಲುವು ಶಾಶ್ವತವಾಗಿರುತ್ತೆ. ಗೌರವ ದೊರೆಯುತ್ತದೆ. ಕಷ್ಟ ಪಟ್ಟು ಓದಿ ಪಾಸ್ ಆದರೆ ಅದಕ್ಕೊಂದು ಬೆಲೆ. ನಿನ್ನ ಹಿಂದಿನವನು ಅವನಷ್ಟಕ್ಕೆ ಬರೆಯುತ್ತಿದ್ದ..ಅವನ ಮೇಲೆ ಯಾಕೆ ಹಾಕಿದೆ" ಎಂದು ಮತ್ತೆ ಕೇಳಿದಳು.
"ನೀವು ನನ್ನ ಹೊರಗೆ ಹಾಕ್ತೀರಾ ಅಂತ ಭಯ ಆಗಿ ಅವನ ಹೆಸರು ಹೇಳಿದೆ. ಅವನು ನನಗಿಂತ ಕಡಿಮೆ ಅಂಕ ತಗೊತ್ತಾನೆ. ಅವನೇ ಮಾಡಿರಬಹುದು ಅಂತ ಅವನನ್ನು ಹಿಡಿದುಕೊಂಡು ನನ್ನನ್ನು ಬಿಡಬಹುದು ಅಂತ ಅವನ ಮೇಲೆ ಹಾಕಿದೆ" ಎಂದು ತನ್ನ ತಪ್ಪನ್ನು ಒಪ್ಪಿಕೊಂಡನು.
"ನೀನು ಮುಂದೆ ಹೋಗ್ಬೇಕು ಅಂತ ಮೋಸ ಮಾಡುವುದು ದೊಡ್ಡ ತಪ್ಪು. ಪ್ರಾಮಾಣಿಕವಾಗಿರುವವರಿಗೆ, ನಿನ್ನ ನಂಬಿದ ತಂದೆ ತಾಯಿಗೆ , ನಿನ್ನ ಗುರುಗಳಿಗೆ ನೀನು ಮೋಸ ಮಾಡಿ ಮೇಲೇರಿದರೂ ನೀನು ನೆಮ್ಮದಿಯಾಗಿ ಇರಲಾರೆ. ನಿನಗೆ ನೀನು ಮೋಸ ಮಾಡಿದ್ದಿ ಅನ್ನುವ ವಿಚಾರ ಗೊತ್ತಿರುತ್ತೆ. ಅದೇ ನಿನ್ನನ್ನು ಕಾಡುತ್ತೆ. ಮೋಸದಿಂದ ಸಂಪಾದಿಸಿದ ಗೌರವ ಉಳಿಯಲ್ಲ. ಗೌರವ ಗಳಿಸೋದು ಉಳಿಸಿಕೊಳ್ಳೋದು ಅಷ್ಟು ಸುಲಭವಲ್ಲ.. ಪ್ರಾಮಾಣಿಕತೆಗೆ ಗೆಲುವು ತಡವಾದರೂ ಅದು ಶಾಶ್ವತ ಹೆಸರನ್ನು ತಂದುಕೊಡುತ್ತದೆ.
ಶ್ರೀ ಕೆ.ಸಿ.ಶಿವಪ್ಪನವರ ಪ್ರಸಿದ್ದ ಮುಕ್ತಕವೊಂದಿದೆ..
"ತುಳಿದು ನೀ ಉಳಿದವರ ಮೇಲೇರುವುದು ಮೋಸ
ನಯದ ವಂಚನೆ ದಾರಿ ಗೌರವದ ಸೇತು.
ಮನಸು ಕುರುಡಾಗುವುದು ಸುಳಿದಾಗ ಒಳಸಂಚು
ಕಲಿ ಮಮತೆ ಸಮತೆಯನು - ಮುದ್ದುರಾಮ".
ನಿನಗೆ ಈ ಮುಕ್ತಕ ಎಷ್ಟು ಅರ್ಥ ಆಯ್ತು ಅಂತ ಗೊತ್ತಿಲ್ಲ. ಇದರ ಅರ್ಥವನ್ನು ನಾನು ಇಷ್ಟು ಹೊತ್ತು ನಿನಗೆ ಹೇಳಿದ್ದೀನಿ. ಇನ್ನೆಂದೂ ಗೆಲುವಿಗೆ ಅಡ್ಡದಾರಿ ಹುಡುಕಬೇಡ. ಕಠಿಣವಾಗಿದ್ದರೂ ಪರಿಶ್ರಮಪಡು. ಗೆಲುವು ತಡವಾಗಿಯಾದರೂ ಸಿಗುತ್ತದೆ..ಹೋಗು " ಎಂದಳು.
"ತಪ್ಪಾಯ್ತು ಮೇಡಂ" ಎಂದು ಎದ್ದು ಹೊರಟವನು ಮತ್ತೆ ಅವಳ ಬಳಿ ಬಂದು ಕಾಲು ಮುಟ್ಟಿ ನಮಸ್ಕಾರ ಮಾಡಿ " ಬೇರೆ ಯಾರೆ ಆಗಿದ್ರು ಇವತ್ತು ನನಗೆ ಹೊಡೆದು, ಮನೆಯವರನ್ನು ಕರೆದುಕೊಂಡು ಬರೋಕೆ ಹೇಳ್ತಿದ್ರು. ನೀವು ಯಾವುದೂ ಮಾಡದೆ ನನ್ನ ತಪ್ಪನ್ನು ಅರ್ಥ ಮಾಡಿಸಿದ್ರಿ. ಇನ್ಯಾವತ್ತೂ ಯಾರಿಗೂ ಯಾವ ವಿಚಾರದಲ್ಲೂ ಮೋಸ ಮಾಡಲ್ಲ. ಒಳ್ಳೆಯ ರೀತಿಯಲ್ಲಿ ಪರೀಕ್ಷೆ ಬರೆದು ಒಳ್ಳೆಯ ಕೆಲಸಕ್ಕೆ ಸೇರುವೆ" ಎನ್ನುತ್ತಾ ಅಳಲಾರಂಭಿಸಿದನು.
ಮೈಥಿಲಿ ಹುಡುಗನನ್ನು ಮೇಲೆತ್ತಿ ಕಣ್ಣೀರು ಒರೆಸಿ "ತಪ್ಪು ಎಲ್ಲರೂ ಮಾಡ್ತಾರೆ. ಆದರೆ ತಪ್ಪು ಅಂತ ಗೊತ್ತಾದಾಗ ಅದನ್ನು ತಿದ್ದಿಕೊಂಡು ಮುಂದೆ ಹೋಗುವ ಮನಸ್ಸಿರಬೇಕು.. ಇನ್ಮುಂದೆ ಮೋಸದಿಂದ ಗೆಲ್ಲುವ ಯೋಚನೆ ಮಾಡಬೇಡ. ಆ ಯೋಚನೆ
ಬಾರದಂತೆ ನೋಡಿಕೊ" ಎಂದವಳು ಅವನನ್ನು ಕಳುಹಿಸಿ ಪೇಪರ್ ಗಳೊಂದಿಗೆ ಕೆಳ ಬಂದಳು.
ಮನದಲ್ಲಿ ಕೆ.ಸಿ ಶಿವಪ್ಪನವರ ಮುದ್ದು ರಾಮನ ಚೌಪದಿ ಪುಸ್ತಕವನ್ನು , ಅದನ್ನು ಕೊಟ್ಟ ಅವಳ ಗುರುಗಳನ್ನು ನೆನೆದಳು. ಬೈದು ಹೇಳುವುದಕ್ಕೂ ತಿಳಿಸಿ ಹೇಳುವುದಕ್ಕೂ ಇರುವ ವ್ಯತ್ಯಾಸ ಅರಿತಿದ್ದ ಮೈಥಿಲಿ ಹುಡುಗನಿಗೆ ಅವಮಾನ ಮಾಡದೆ ಅವನ ಮನ ಪರಿವರ್ತನೆ ಮಾಡುವ ಪ್ರಯತ್ನ ಮಾಡಿದಳು.
✍️ ಆಶ್ರಿತ ಕಿರಣ್
