ಯೋಚನೆ ಬದಲಾಗಬೇಕಿದೆ..!
ಯೋಚನೆ ಬದಲಾಗಬೇಕಿದೆ..!
ಭುಜಂಗಯ್ಯನ ವಠಾರದಲಿ ಮಹಿಳಾ ಮಣಿಗಳು ಸಭೆ ಸೇರಿದ್ದರು..ಅದೇನು ಹೊಸತ್ತಲ್ಲ.ನಿತ್ಯ ಸಂಜೆ ಅಕ್ಕಪಕ್ಕದ ಮನೆಯ ಲಲನಾ ಮಣಿಯರು ಅಂದಿನ ಸಭೆಗೆ ಯಾರು ಗೈರು ಹಾಜರಿ ನೀಡಿರುತ್ತಾರೆ ಅವರ ಮನೆಯ ಬಗ್ಗೆ ಮಾತನಾಡುತ್ತಾ ಕಾಲ ಕಳೆಯುವುದು ಅವರ ದಿನಚರಿಯಲ್ಲಿ ಒಂದಾಗಿತ್ತು..ವಠಾರದ ಮುಂದೆ ಬಸ್ ನಿಲ್ದಾಣ ಇದ್ದ ಕಾರಣ ಅಲ್ಲಿ ಬಂದು ಹೋಗುವವರ ಬಗ್ಗೆಯೂ ಮಾತನಾಡುತ್ತಾ ಕಾಲ ಕಳೆಯುತ್ತಿದ್ದರು..ಗಂಡ ಮಕ್ಕಳು ಬರುವುದರೊಳಗೆ ಒಂದಿಷ್ಟು ಮಾತನಾಡಲಿಲ್ಲವೆಂದರೆ ಅವರ ಬಾಯಿಗೆ ತೃಪ್ತಿಯೆನಿಸುತ್ತಿರಲ್ಲಿಲ್ಲ.
” ಅಲ್ರಿ ಶಾರದಮ್ಮ ಅದೇನು ರಾತ್ರಿ ಗಂಡ ಹೆಂಡತಿ ಜೋರು ಜೋರು ಮಾತಾಡ್ತಾ ಇದ್ರಿ..ಜಗಳ ಆಡಿದಾಗೆ ಇತ್ತಪ್ಪ.” ಅಂದುಕೊಂಡಿದ್ದೆ ಈ ವನಜಾ ಳ ಒಂದು ಕಿವಿ ಸದಾ ನಮ್ಮ ಮನೆಯ ಕಡೆಗೆ ಇರುತ್ತೆ ಅಂತ.. ಎಷ್ಟು ಮೆತ್ತಗೆ ಮಾತಾಡಿದ್ರು ಕೇಳಿಸ್ಸುತ್ತೆ. ಏನು ಹೇಳಲಿ ಎಂದು ಯೋಚಿಸುವ ವೇಳೆಗೆ ವಠಾರದ ದೊಡ್ಡ ಗೇಟ್ ತೆಗೆದ ಸದ್ದಾಯ್ತು.ಎಲ್ಲರು ಬಂದವರಾರು ಎಂದು ಆ ಕಡೆ ತಿರುಗಿದಾಗ “ಅಬ್ಬ ಬಚ್ಚಾವ್ ಆದೆ “ಎಂದು ಶಾರದಮ್ಮ ಸಮಾಧಾನ ಪಟ್ಟುಕೊಂಡರು..
ಓಹೋ ಏನ್ರಿ ರಾಧಕ್ಕ ಒಂದು ವಾರದಿಂದ ಪತ್ತೆನೆ ಇಲ್ಲ..ಹೇಳ್ದೆನೆ ಎಲ್ಲಿಗೆ ಹೋಗಿದ್ರಿ..? ಎಂದ ಪಂಕಜಾ ಗೆ “ಶುರು ಮಾಡಿದ್ಳು ಇವಳ ಪ್ರಶ್ನೆಗಳನ್ನ..ಈಗಿನ್ನು ಬರ್ತಾ ಇದ್ದೀನಿ ಸುಧಾರಿಸುಕೊಳ್ಳಕ್ಕೆ ಸ್ವಲ್ಪ ಸಮಯ ಕೊಡು ಮಾರಾಯ್ತಿ “ಎಂದು ಸೀದಾ ಮನೆ ಕಡೆ ನಡೆದರು ರಾಧಕ್ಕ. “ಅಬ್ಬಬ್ಬಾ ಸ್ವಲ್ಪ ಮಾತಾಡಿ ಹೋಗಿದ್ರೆ ಏನಾಗುತ್ತಿತ್ತು ” ಎಂದು ಮೂತಿ ಮುರಿದಳು ಪಂಕಜ.
“ಹೇಳ್ರಿ ಶಾರದಮ್ಮ ಏನು ಗಲಾಟೆ ನಿನ್ನೆ ನಿಮ್ಮಲ್ಲಿ..?””ಅಲ್ವೆ ವನಜ ನಿನಗ್ಯಾಕೆ ಅವರು ಮನೆ ಜಗಳ.ಗಂಡ ಹೆಂಡ್ತಿ ಅಂದ ಮೇಲೆ ಸಾವಿರ ಇರ್ತವೆ..ನೀನೇನು ನಿನ್ನ ಕಿವಿನ ಅವರ ಮನೆಗೆ ಪಾರ್ಟ್ ಟೈಮ್ ಕೆಲಸಕ್ಕೆ ಬಿಟ್ಟಿದ್ಯಾ “ಎಂದು ಪಂಕಜ ಹೇಳುತ್ತಿದ್ದಂತೆ ರಾಧಕ್ಕ ಪಂಚಾಯಿತಿ ಕಟ್ಟೆಗೆ ಹಾಜರಾದರು..
“ಅಬ್ಬಬ್ಬಾ ಅದೇನು ರಶ್ ಆಗುತ್ತೆ ಗೊತ್ತಾ ಗೌರ್ಮೆಂಟ್ ಬಸ್.ಕಾಲು ಇಡೋಕೆ ಜಾಗ ಇರೋಲ್ಲ” . ಮನೆಯಲಿ ಕಾರ್ ಇದೆ ನೀವ್ ಬಸ್ ನಲ್ಲಿ ಯಾಕೆ ಹೋದ್ರಿ ರಾಧಕ್ಕ..ಎಂದಳು ವನಜ.
“ಅಯ್ಯೋ ದಡ್ಡಿ ಅದಕ್ಕೆ ಹೇಳೋದು ಟೀ ವಿ ನೋಡು ಪೇಪರ್ ಓದು ಅಂತ.ನಿಂಗೆ ಗೊತ್ತಿಲ್ವಾ ಮಹಿಳೆಯರಿಗೆ ಬಸ್ ನಲ್ಲಿ ಟಿಕೇಟ್ ಇಲ್ಲ ಫ್ರೀ ಅಂತ .ನಾವು ರಾಜ್ಯದ ಯಾವ ಮೂಲೆಗೆ ಬೇಕಾದ್ರು ಹೋಗಬಹುದು..ನಂಗೆ ಸೌದತ್ತಿ ಯಲ್ಲಮ್ಮನ ದೇವಸ್ತಾನಕ್ಕೆ ಹೋಗಬೇಕಿತ್ತು..ಸೀದಾ ಬಸ್ ಹತ್ತಿದೆ. ಹೋಗಿ ದರುಶನ ಮಾಡಿ ಬಂದೆ ಅಬ್ಬ ಎಂಥಾ ರಶ್ ಗೊತ್ತ ಬಸ್ ತುಂಬಾ ಬರಿ ಮಹಿಳೆಯರೇ ಇದ್ದಿದ್ದು..”
“ಹುಂ ಹೌದು ನಮ್ಮ ಯಜಮಾನ್ರು ಹೇಳ್ತಿದ್ರು..ಬಸ್ ಫ್ರೀ ಇದೆ ಅಂತ ಪದೇ ಪದೆ ತವರುಮನೆಗೆ ಹೋಗ್ತಿದ್ರೆ ಚೆನ್ನಾಗಿರೊಲ್ಲ ಅಂತ” ಎಂದಳು ಪಂಕಜ.
“ನಮ್ಮ ಮನೇಲಿ ನಿನ್ನೆ ಇದೇ ವಿಷಯಕ್ಕೆ ಜಗಳ ಆಯ್ತು.ನಾನು ಧರ್ಮಸ್ಥಳ ಸುಬ್ರಹ್ಮಣ್ಯಕ್ಕೆ ಹೋಗಿ ಬರ್ತೀನಿ ಅಂದೆ.ನಿನಗೆ ಫ್ರೀ ನನಗೆ ಚಾರ್ಜ್ ಜಾಸ್ತಿ ಆಗಿದೆ..ಈಗ ಬೇ
ಡ ಅಂತ ನನ್ನ ಮನೆಯವರು.. ನಾನೊಬ್ಳೆ ಹೋಗ್ತಿನಿ ಅಂದ್ರೆ ಅದಕ್ಕೂ ಬೇಡ ಅಂದ್ರು “ಎಂದು ಸೆರಗಿನ ತುದಿಯಿಂದ ಕಣ್ಣನ್ನು ಒರೆಸಿಕೊಂಡರು ಶಾರದಮ್ಮ.
” ಅಯ್ಯೋ ಅದಕ್ಕೇನಂತೆ ಅವರಿಗೆ ಹೇಳದೆ ನೀವು ಒಬ್ಬರೆ ಹೋದರಾಯಿತು ” ಎಂದಳು ವನಜ. “ಹಾಗೆ ಹೋಗುವುದಾದರೆ ಪುನಃ ಮನೆಗೆ ಬರಬೇಡ ಅಂತ ಅಂದ್ರು “ಎನ್ನುತ್ತಾ ಅಳಲಾರಂಭಿಸಿದರು..
ಅದೇ ಸಮಯಕ್ಕೆ ಅದೇ ವಠಾರದಲ್ಲಿ ವಾಸವಾಗಿದ್ದ ಜಾನಕಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದವಳು ಪ್ರೈವೇಟ್ ಬಸ್ ಇಳಿದು ಬರುವುದನ್ನು ಎಲ್ಲರು ನೋಡಿದರು.ಜಾನಕಿ ಸುಮ್ಮನೆ ಇವರೊಂದಿಗೆ ಕುಳಿತು ಕಾಲಹರಣ ಮಾಡಲು ಒಪ್ಪುತ್ತಿರಲ್ಲಿಲ್ಲ. ಹಾಗಾಗಿ ಪಂಕಜಾ ಗೆ ಮೊದಲಿನಿಂದಲು ಜಾನಕಿಯನ್ನು ಕಂಡರೆ ಅಸಮಾಧಾನ.ಜಾನಕಿ ವಠಾರದ ಒಳಗೆ ಕಾಲು ಇಡುತ್ತಿದ್ದಂತೆ “ಅದೇನು ಜಾನಕಿ ಮೇಡಂಗೆ ಫ್ರೀ ಬಸ್ ಇರುವ ವಿಷಯ ಗೊತ್ತಿಲ್ವ ಹೇಗೆ ” ಎಂದು ವ್ಯಂಗ್ಯವಾಡಿದಳು..
ಸುಮ್ಮನೆ ಎಲ್ಲರನ್ನೂ ನೋಡಿ ನಕ್ಕಳು..ಬಸ್ ಟಿಕೆಟ್ ಫ್ರೀ ಇದೆ.ಆದರೆ ಪ್ರಜ್ಞಾವಂತ ನಾಗರಿಕರಂತೆ ವರ್ತಿಸದೆ ಎಲ್ಲಾ ಹೆಂಗಸರು ಕೆಲಸವಿಲ್ಲದಿದ್ದರು ಸುಮ್ಮನೆ ತಿರುಗಾಡಲು ಹತ್ತಿ ಸುಮ್ಮನೆ ನೂಕು ನುಗ್ಗಲು ಮಾಡುತ್ತಿದ್ದಾರೆ..ಪಾಪ ಶಾಲೆ ಮಕ್ಕಳಿಗೂ ಹತ್ತಲು ಅವಕಾಶ ಕೊಡದೆ ನುಗ್ಗುತ್ತಿದ್ದಾರೆ..ಫ್ರೀ ಸಿಗುತ್ತದೆ ಎಂಬ ಆಸೆಗೆ ಮುಂದೆ ಬಾಳಬೇಕಾದ ಮಕ್ಕಳ ಬಗ್ಗೆ ಯೋಚಿಸುವ ಸಂಯಮವನ್ನು ಕಳೆದುಕೊಂಡಿದ್ದಾರೆ..ಫ್ರೀ ಯಾರಿಗೆ ಅವಶ್ಯಕತೆ ಇದೆಯೋ ಅವರಿಗೆ ತಲುಪುತ್ತಿಲ್ಲ ಎಂಬುದು ಬೇಸರದ ಸಂಗತಿ..ನನಗೆ ಫ್ರೀ ಅವಶ್ಯಕತೆ ಇಲ್ಲ..ದುಡಿದು ತಿನ್ನುವ ತಾಕತ್ತು ನನಗಿದೆ..ಸಮಯ ಬಂದಾಗ ತಿರುಗಾಡುವೆ…ಒಂದು ಕಡೆ ಫ್ರೀ ಕೊಟ್ಟು ಇನ್ನೊಂದು ಕಡೆಯಿಂದ ವಸೂಲಿ ಮಾಡುತ್ತಿರುವುದರ ಬಗ್ಗೆ ಸ್ವಲ್ಪವೂ ಅರಿವಿಲ್ಲದೆ ಮುಂದಾಗುವ ಪರಿಣಾಮಗಳ ಯೋಚನೆಯಲ್ಲಿದೆ ಬದುಕುವ ಮನಸ್ಥತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾ ಮನೆ ಕಡೆ ಹೊರಡಲು ಮುಂದಾದಳು ಜಾನಕಿ.
“ಓಹೋ ನೀವೊಬ್ಬರು ಹೋಗದ ಮಾತ್ರಕ್ಕೆ ಎಲ್ಲಾ ಸರಿ ಹೋಗುತ್ತಾ ” ಎಂದು ವನಜ ಹೇಳಿ ಬಾಯಿ ಮುಚ್ಚುವಷ್ಟರಲ್ಲಿ” ಇಲ್ಲ ನನ್ನಂತೆ ನೀವೆಲ್ಲರು ಯೋಚಿಸಿದರೆ ಸಾಧ್ಯವಾಗುತ್ತೆ…”ಎನ್ನುತ್ತಾ ಮನೆ ಸೇರಿದಳು.
“ಹೌದು ಅವಳು ಹೇಳ್ತಿರೋದು ನಿಜ.ಮುಂಚಿನ ಹಾಗೆ ಕೆಲಸವಿದ್ದವರು ಮಾತ್ರ ತಿರುಗಾಡುವುದರಿಂದ ಯಾರಿಗೂ ತೊಂದರೆಯಾಗದು..ಶಾಲೆ ಮಗುವೊಂದು,ವೃದ್ದರೊಬ್ಬರು ಬಸ್ ಬಾಗಿಲಲ್ಲಿ ನಿಂತು ಬಸ್ಸಿನಿಂದ ಬಿದ್ದು ಸಾವನ್ನಪ್ಪಿದ ಸುದ್ದಿಯನ್ನು ಮನೆಯವರು ಹೇಳುತ್ತಿದ್ದರು” ಎಂದ ಶಾರದಮ್ಮನ ಮಾತಿಗೆ ಎಲ್ಲರೂ ಹುಂ ಗುಟ್ಟಿದ್ದರು..
ಅಂದಿನ ಪಂಚಾಯಿತಿಯನ್ನು ಮುಗಿಸಿ ಮನೆಗೆ ಸೇರಿದರು..ಆದರೆ ತಲೆಯಲ್ಲಿ ನಡೆದ ಮಾತುಕತೆಗಳ ಮೆಲುಕು ಹಾಕುತ್ತಿದ್ದರು…
ಅನಗತ್ಯ ತಿರುಗಾಟ ನೀಡಬಹುದು ಮನಸಿಗೆ ಸಂತಸ. ನಿತ್ಯ ಓಡಾಡುವರಿಗೆ ತಂದೊಡ್ಡಿಹುದು ಫ್ರೀ ಟಿಕೇಟ್ ಹೆಚ್ಚಿನ ಆಯಾಸ..ನೂಕು ನುಗ್ಗಲಿನಿಂದ ಕಳೆದುಕೊಳ್ಳುತ್ತಿಹರು ಆಯುಷ್ಯ..ವರ್ತಿಸುತಿಹರು ಮರೆತಂತೆ ಭವಿಷ್ಯ…