ನನ್ನೊಳಗಿನ ನಾನು
ನನ್ನೊಳಗಿನ ನಾನು
ನದಿಯ ದಡದಲ್ಲಿ ಕುಳಿತು ಮಣ್ಣ ಮೇಲೆ ಕೈಯಾಡಿಸುತ್ತಾ ಕುಳಿತವಳಿಗೆ ತನ್ನ ಬಾಲ್ಯ ನೆನಪಾಯಿತು. ಬಾಲ್ಯದ ದಿನಗಳನ್ನು ನೆನೆಯುತ್ತಿದ್ದವಳ ಕಂಗಳು ತುಂಬಿದವು. ಅವಳ ಅಪ್ಪಣೆಯನ್ನು ಕೇಳದೆ ಕಣ್ಣೀರು ಹರಿಯಿತು. ಹರಿಯುವ ಕಂಬನಿಯನ್ನು ತಡೆಯದೆ ಅತ್ತು ಮನವನ್ನು ಹಗುರ ಮಾಡಿಕೊಳ್ಳಲು ನಿರ್ಧರಿಸಿದಳು. ನೆನಪುಗಳು ಕಿತ್ತು ತಿನ್ನುತ್ತಿತ್ತು. ಆ ನೆನಪಿನಲ್ಲಿ ಅಡಗಿದ್ದ ಪ್ರೀತಿ ಕಾಳಜಿಯನ್ನು ನೆನೆಪಿಸಿಕೊಂಡವಳಿಗೆ ಬದುಕು ಬೇಡವೆನಿಸಿತು. ಅದೇ ನದಿಗೆ ಹಾರಲು ಯೋಚಿಸಿದವಳು ನದಿಯ ನೀರಿನಲ್ಲಿ ತನ್ನ ಬಿಂಬವನ್ನು ನೆನೆಸಿಕೊಂಡಳು.. ಅವಳ ಬಿಂಬ ಅವಳನ್ನು ನೋಡಿ ನಕ್ಕಂತೆ ಭಾಸವಾಯಿತು. ಅವಳ ಮನ ಪ್ರಶ್ನೆಗಳನ್ನು ಮುಂದಿಟ್ಟಿತು.
"ನೀನು ಆರಿಸಿದ ದಾರಿ ನಿನಗೆ ಬೇಡವಾಯಿತೇ? ಈ ಬದುಕನ್ನು ಒಪ್ಪಿಕೊಂಡು ಅಪ್ಪಿಕೊಂಡು ಕುಟುಂಬದಿಂದ ಹೊರಬಂದವಳು ನೀನು. ಈಗ ಒಂಟಿ ಎಂದು ಕೊರಗುತ್ತಿದ್ದೀಯಲ್ಲ ಇದು ಸರಿಯೇ?" ಎಂದು ಅವಳ ಮನ ಪ್ರಶ್ನೆ ಮಾಡಿದಾಗ ಉತ್ತರಿಸಲು ಮಾತುಗಳು ಹೊರಬರಲಿಲ್ಲ.
"ನೀನು ಬಾಲ್ಯದಲ್ಲಿ ಹೇಗಿದ್ದೆ? ಮನೆಯವರಿಗೆಲ್ಲಾ ನೀನು ಅಚ್ಚುಮೆಚ್ಚಾಗಿದ್ದೆ. ನೀನು ಕೇಳಿದ್ದನ್ನು ಇಲ್ಲವೆನ್ನುತ್ತಿರಲಿಲ್ಲ. ಅಷ್ಟು ಮುದ್ದಾಗಿ ಬೆಳೆಸಿದ್ದಕ್ಕೆ ನೀನು ಕೊಟ್ಟ ಉಡುಗೊರೆ ನೋವು ಅವಮಾನ. ನಿನ್ನಿಂದಾಗಿ ನಿನ್ನ ಕುಟುಂಬ ಸಮಾಜದಲ್ಲಿ ತಲೆ ತಗ್ಗಿಸುವಂತಾಗಿದೆ " ಎಂಬ ಮಾತು ಕೇಳಿದೊಡನೆ ಸಿಡಿದಳು.
"ಹೌದು ನನ್ನಿಂದ ಮರ್ಯಾದೆ ಹೋಯಿತು. ಆದರೆ ಇದರಲ್ಲಿ ನನ್ನ ತಪ್ಪೇನಿದೆ ? ಆ ಶಿವನಿಟ್ಟ ಶಾಪವೋ ಅಥವಾ ವರವೋ ಗೊತ್ತಿಲ್ಲ ಹುಟ್ಟುತ್ತಾ ಗಂಡಾಗಿದೆ. ಆದರೆ ಬೆಳೆಯುತ್ತಿದ್ದಂತೆ ನನ್ನಲ್ಲಿ ಬದಲಾವಣೆಯಾಯಿತು. ನನ್ನ ನಡೆ ನುಡಿ ನನಗಿರವಿಲ್ಲದಂತೆ ಬದಲಾಯಿತು. ನಾನು ಮುಚ್ಚಿಡುವ ಪ್ರಯತ್ನ ಪಟ್ಪಷ್ಟು ದಿನ ನಾನು ನಾನಾಗಿರದೆ ನಾಟಕ ಮಾಡುತ್ತಿದ್ದೇನೆ ಎಂದನಿಸಿತು. ನನ್ನಲ್ಲಿ ಹೆಣ್ಮನದ ಭಾವನೆ ಅತಿಯಾದಾಗ ಸಂಪೂರ್ಣವಾಗಿ ಹೆಣ್ಣಾಗಿ ಬದುಕಲು ನಿರ್ಧರಿಸಿದೆ. ನನ್ನೊಳಗಿನ ನನ್ನನ್ನು ಹೊರತಂದೆ. ಹೆಣ್ಣಾಗಿ ಬದಲಾದೆ. ಇದಕ್ಕೆ ಸಿಕ್ಕ ಪ್ರತಿಫಲವೇ ಒಂಟಿತನ. ಇಲ್ಲಿ ನನ್ನ ತಪ್ಪೇನಿದೆ ? ನಾನು ನಾನಾಗಿ ಬದುಕಲು ಇಚ್ಛಿಸಿದ್ದು ತಪ್ಪೇ...!
ನಾನು ಹೀಗೆ ಬದುಕುವುದು ತಪ್ಪು ಎಂದು ನನ್ನನ್ನು ದ್ವೇಷಿಸಿ ದೂರವಿಡುವ ಈ ಸಮಾಜ ನನ್ನ ಈ ಬದಲಾವಣೆಗೆ ಕಾರಣವಾದ ಆ ಭಗವಂತನನ್ನು ಬಹಿಷ್ಕಾರ ಮಾಡುವುದಿಲ್ಲವೇಕೆ? ಅರ್ಧನಾರೀಶ್ವರನನ್ನು ಪೂಜಿಸುವ ಈ ಸಮಾಜ ನನ್ನಂತವರನ್ನು ಹೊಡೆದೋಡಿಸುವುದೇಕೆ" ಎನ್ನುತ್ತಾ ಜೋರಾಗಿ ಅತ್ತಳು..
ಅದೇ ವೇಳೆಗೆ ನದಿ ದಡದಲ್ಲಿದ್ದ ದೀಪದ ಕಂಬದಿಂದ ಬೆಳಕು ಚಿಮ್ಮಿತು. ತಲೆ ತಗ್ಗಿಸಿ ಅಳುತ್ತಿದ್ದವಳು ತಲೆ ಎತ್ತಿ ಬೆಳಕನ್ನು ನೋಡಿದಳು. ಆ ಈಶ್ವರ ಬೆಳಕು ನೀಡಿದಂತೆ ಅನ್ನಿಸಿತು. ದೂಷಿಸುವ ಸಮಾಜದ ಮುಂದೆ ನ್ಯಾಯುತವಾಗಿ ಬದುಕಿ ಸಾಧನೆ ಮಾಡಬೇಕೆಂಬ ಆಲೋಚನೆ ಮೂಡಿತು. ಆದರೆ ಅವಕಾಶ ಕೊಡುವವರು ಯಾರು ಎನ್ನುವ ಪ್ರಶ್ನೆ ಕಾಡಿತು. ಮತ್ತೆದೇ ದೀಪವನ್ನು ನೋಡಿದಳು. ಹುಟ್ಟಿಸಿದ ದೇವರು ಖಂಡಿತ ದಾರಿ ತೋರುತ್ತಾನೆ ಎನ್ನುವ ಭರವಸೆಯನ್ನಿಟ್ಟುಕೊಂಡು ಪ್ರಶ್ನೆ ಕೇಳಿದ ಮನವನ್ನು ನೆನೆದು ನಗುತ್ತಾ "ನಾನು ತಪ್ಪು ಮಾಡಿಲ್ಲ. ನಾನು ನನ್ನ ಬದುಕನ್ನು ರೂಪಿಸಿಕೊಳ್ಳುತ್ತೇನೆ. ಸಾಧಿಸಿ ತೋರಿಸುತ್ತೇನೆ" ಎಂದು ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಂಡಳು.
✍️ ಆಶ್ರಿತ ಕಿರಣ್
