STORYMIRROR

Ashritha Kiran ✍️ಆಕೆ

Abstract Inspirational Others

4  

Ashritha Kiran ✍️ಆಕೆ

Abstract Inspirational Others

ಕನಸು ನನಸಾಯಿತು..ಆದರೆ…!

ಕನಸು ನನಸಾಯಿತು..ಆದರೆ…!

3 mins
452



ಪ್ರಕೃತಿಯ ಮಡಿಲಲ್ಲಿ ಬೆಳೆದ ವಸುಂದರ ಮದುವೆಯಾಗಿ ಪಟ್ಟಣ ಸೇರಿದ್ದಳು.. ಪಟ್ಟಣ ಸೇರಿದ ದಿನದಿಂದ ತನ್ನ ಊರು ತನ್ನ ಜನರನ್ನು ಸದಾ ನೆನೆಯುತ್ತಾ ದಿನ ಕಳೆಯುತ್ತಿದ್ದಳು.. ಮಕ್ಕಳು ಚಿಕ್ಕವರಿದ್ದಾಗ ಆಗಾಗ ರಜಾ ಬಂದಾಗ ಊರಿಗೆ ಹೋಗುತ್ತಿದ್ದವಳಿಗೆ ಒಂದು ರೀತಿಯ ಸಮಾಧಾನವಿತ್ತು.. ಮಕ್ಕಳು ಬೆಳೆಯುತ್ತಿದ್ದಂತೆ ಅವರ ಶಾಲಾ ಕಾಲೇಜಿನ ದಿನಚರಿ ಬದಲಾದಂತೆ ಊರಿಗೆ ಹೋಗಲು ಆಗುತ್ತಿರಲಿಲ್ಲ.. ಮಕ್ಕಳನ್ನು ಬಿಟ್ಟು ಹೋಗಲು ವಸು ಮನಸು ಒಪ್ಪದ ಕಾರಣ ಅವಳು ಊರಿಗೆ ಹೋಗುವುದನ್ನು ಕಡಿಮೆ ಮಾಡಿದ್ದಳು.. ವರ್ಷದಲ್ಲಿ ಎರಡು ಮೂರು ಬಾರಿ ರಜಕ್ಕೆಂದು ಹೋಗುತ್ತಿದ್ದಳು.. ಕಳೆದ ಮೂರು ವರ್ಷಗಳಿಂದ ಊರಿಗೆ ಹೋಗಲಾಗದೆ ಬರೀ ಫೋನಿನಲ್ಲಿ ಮಾತನಾಡುವ ಮೂಲಕ ನೆಮ್ಮದಿ ಪಟ್ಟುಕೊಳ್ಳುತ್ತಿದ್ದಳು.


ಸೋಶಿಯಲ್ ಮೀಡಿಯಾದ ಯುಗವಾಗಿರುವ ಇಂದು ಎಲ್ಲಿ ಏನೇ ನಡೆದರೂ ತಿಳಿಯುತ್ತದೆ.. ವಸುಂದರ ತನ್ನಷ್ಟಕ್ಕೆ ಕುಳಿತು ಒಂದು ಮಧ್ಯಾಹ್ನ ಫೇಸ್ಬುಕ್ ನೋಡುವಾಗ ತನ್ನೂರಿನ ಜಾತ್ರೆಯ ಕುರಿತು ಓದಿದಳು… ಆ ವರುಷದ ಊರ ದೇವಿಯ ಜಾತ್ರೆಯ ದಿನಗಳು ಪ್ರಕಟವಾಗಿದ್ದನ್ನು ಕಂಡು ಗೋಡೆಯ ಮೇಲೆ ನೇತು ಹಾಕಿದ್ದ ಕ್ಯಾಲೆಂಡರ್ ನ ಕಡೆ ನೋಡಿದಳು… ಈ ಬಾರಿಯ ಜಾತ್ರೆಯಾದರು ಮಕ್ಕಳಿಗೆ ರಜವಿರುವ ಸಮಯದಲ್ಲಿ ಇರಲಿ ಎಂದು ಬೇಡುತ್ತಾ ಕ್ಯಾಲೆಂಡರ್ ಪುಟ ಮಗುಚಿದಳು… ಬರುವ ತಿಂಗಳ ನೆಡೆಯುವ ಜಾತ್ರೆಯ ದಿನಗಳಂದು ಮಕ್ಕಳಿಗೆ ಕಾಲೇಜ್ ರಜ ಇರಲಿ ಎಂದು ಅವಳ ಮನೆ ಬಯಸಿತು..


ಪತಿ ಹಾಗೂ ಮಕ್ಕಳೊಂದಿಗೆ ರಾತ್ರಿ ಊಟದ ವೇಳೆಯಲ್ಲಿ ಕಳೆದ ಮೂರು ನಾಲ್ಕು ವರ್ಷದಿಂದ ಊರಿಗೆ ಹೋಗಲಾಗಲಿಲ್ಲ. ಈ ಬಾರಿ ಅದೇಕೋ ಜಾತ್ರೆಗೆ ಹೋಗಬೇಕೆಂಬ ಆಸೆಯಾಗಿದೆ ಎಂದು ಹೇಳಿದವಳು ಜಾತ್ರೆ ನಡೆಯುವ ದಿನಾಂಕಗಳನ್ನು ಮಕ್ಕಳಿಗೆ ತಿಳಿಸಿ ರಜೆಯ ಬಗ್ಗೆ ವಿಚಾರಿಸಿದಳು.. ಮಕ್ಕಳಿಂದ ಬಂದ ಉತ್ತರ ಅವಳಿಗೆ ನಿರಾಸೆ ಮೂಡಿಸಿತು.. ಆದರೂ ಅದನ್ನು ತೋರ್ಪಡದೆ ನಗುಮುಖದಿಂದ ಮನೆಯ ಕೆಲಸವನ್ನೆಲ್ಲ ಮುಗಿಸಿ ಮಲಗಲು ಹೊರಟವಳಿಗೆ ಬಾಲ್ಯದಲ್ಲಿ ತಾನು ಸಂಭ್ರಮಿಸಿದ ಜಾತ್ರೆಯ ದಿನವನ್ನೆಲ್ಲ ಮೆಲುಕು ಹಾಕುತ್ತಾ ನಿದ್ರೆಗೆ ಜಾರಿದಳು…


ಹೂವಿನಿಂದ ಅಲಂಕಾರವಾದ ತೇರು ಅಂದದಲ್ಲಿ ಹೊಳೆಯುತ್ತಿರುವ ಅಮ್ಮನವರ ವಿಗ್ರಹ ಸಾಲು ಸಾಲು ಅಂಗಡಿಗಳು ಎಲ್ಲಿ ನೋಡಿದರಲ್ಲಿ ಜನ.. ವಸು ನಿಲ್ಲಮ್ಮ ಓಡಬೇಡ ಕಳೆದೋಗ್ತೀ..ನಿನಗೇನು ಬೇಕು ಹೇಳು ನಾನು ಕೊಡುಸ್ತೀನಿ ಹೀಗೆಲ್ಲ ತಪ್ಪಿಸಿಕೊಂಡು ಓಡಬಾರದು ಎನ್ನುತ್ತಾ ಹೆಗಲ ಮೇಲೆ ಕೂರಿಸಿಕೊಂಡು ಜಾತ್ರೆಯ ಬಯಲನ್ನು ಸುತ್ತಿ ಭಕ್ತಿಯಿಂದ ದೇವರಲ್ಲಿ ಕೈ ಮುಗಿದು ಬೇಡಿಕೊಂಡು ಮನೆಗೆ ವಾಪಸ್ ಆಗುವಾಗ ಕೈಯಲ್ಲಿದ್ದ ಬಲೂನ್ ಅಮ್ಮನ ಬಳೆ ತಾಗಿ ಒಡೆದು ಅಳಲಾರಂಭಿಸಿದಳು…


“ವಸು ಯಾಕ್ ಅಳ್ತಾ ಇದ್ಯಾ…ಏಳು ಮೇಲೆ ಎಂದು ಎಬ್ಬಿಸುತ್ತಿದ್ದ ಪತಿಯ ಮಾತಿಗೆ ಎಚ್ಚರಗೊಂಡವಳು ಸುತ್ತಲೂ ನೋಡಿದಳು..ಇಷ್ಟು ಹೊತ್ತು ಕಂಡದ್ದು ಕನಸು ಬಾಲ್ಯದಲ್ಲಿ ನಡೆದ ಘಟನೆ ಕನಸಿನ ರೂಪದಲ್ಲಿ ಕಂಡ ನೆನಪಾಗಿ ಮನದಲ್ಲಿ ನಕ್ಕು ತಿರುಗಿ ಮಲಗಿದಳು.. ಕನಸಿನಲಿ ತನ್ನ ಊರ ಜಾತ್ರೆಯ ನೆನೆಯುವಷ್ಟು ಮನದಾಳದಲ್ಲಿ ಜಾತ್ರೆಗೆ ಹೋಗಬೇಕೆಂಬಷ್ಟು ಬಯಕೆ ಆಳವಾಗಿತ್ತು..ಮತ್ತೇಕೋ ನಿದ್ದೆ ಬರಲೇ ಇಲ್ಲ. ದೇವಸ್ಥಾನಕ್ಕೆ ಹೋಗಬೇಕು ಜಾತ್ರೆಗೆ ಹೋಗಬೇಕು ಎಂಬ ಅವ

ಳ ಮಿಡಿತ ಹೆಚ್ಚಾಗಿತ್ತು..


ಹೇಗೂ ಅದು ಆಗುವುದಿಲ್ಲ ಎಂದು ತಿಳಿದ ಮೇಲೆ ಮನಸ್ಸಿಗೆ ಸಮಾಧಾನ ಹೇಳಿ ನಿತ್ಯದಂತೆ ಅವಳ ಕೆಲಸವನ್ನು ಮಾಡುತ್ತಿದ್ದಳು… ಜಾತ್ರೆಯ ದಿನ ಬಂದೇ ಬಿಟ್ಟಿತು ..ಮನದಲ್ಲಿ ಅದೇನೋ ತಳಮಳ ದೇವಿ ಕರೆಯುತ್ತಿದ್ದಾಳೆ ಎಂಬ ಸೆಳೆತ.. ಕೆಲಸಕ್ಕೆ ಎಂದು ಹೋದ ಗಂಡ ದಿಡೀರನೆ ಬಂದು ಹೊರಡುವಂತೆ ಹೇಳಿದಾಗ ಗಾಬರಿಯಾಯಿತು.. ಮಕ್ಕಳಂತೂ ಮೊದಲೇ ಕಾದು ಕುಳಿತವರಂತೆ ಹೊರಟಿದ್ದರು ಎಲ್ಲವೂ ಅಯೋಮಯ ಆತಂಕದಲ್ಲಿ ಕಾರ್ ಹತ್ತಿದಳು.. ಹೊರಟಿದ್ದು ವಸು ತವರೂರಿಗೆ.. ತವರೂರಿಗೆ ಹೋಗುತ್ತಿದ್ದೇನೆ ಎಂಬ ಸಂತಸಕ್ಕಿಂತ ದಿಡೀರನೆ ಹೋಗುತ್ತಿರುವುದಕ್ಕೆ ಆತಂಕವಾಗಿತ್ತು.. ತಾಯಿಗೆ ಕರೆ ಮಾಡಲು ಯತ್ನಿಸಿದಳು ಆದರೆ ಕಾಲ್ ಕನೆಕ್ಟ್ ಆಗಲಿಲ್ಲ..


ವಸುವಿನ ಆಸೆಯಂತೆ ಊರ ಜಾತ್ರೆಯ ದಿವಸ ವಸು ಮನೆಯಂಗಳದಲ್ಲಿ ಇದ್ದಳು.. ಗಂಡ ಮಕ್ಕಳು ಕೊಟ್ಟ ಸರ್ಪ್ರೈಸ್ ಇದಾಗಿತ್ತು.. ಹೇಳಲಾಗದ ಖುಷಿ ವ್ಯಕ್ತಪಡಿಸಲಾಗದ ಭಾವ ವಸುವನ್ನು ಆನಂದ ಭಾಷ್ಪ ಸುರಿಸುವಂತೆ ಮಾಡಿತು.. ಊರ ಜಾತ್ರೆಗೆ ಹೋಗಬೇಕೆಂಬ ಕನಸು ನನಸಾಗಿತ್ತು.. ಜಾತ್ರೆಯ ಬಯಲಿಗೆ ಅವಳ ಆಸೆಯಂತೆ ಮನೆಯವರೊಂದಿಗೆ ಹೊರಟಳು…


ವಿಜೃಂಭಣೆಯಿಂದ ಜಗಮಗಿಸುತ್ತಿದ್ದ ದೇವಸ್ಥಾನದ ಆವರಣ ಕಂಡು ದಂಗಾದಳು.. ಪ್ರತಿಯೊಂದಕ್ಕೂ ಚೀಟಿ ತೆಗೆದುಕೊಂಡು ದುಡ್ಡು ಕೊಡಬೇಕೆಂಬುದನ್ನು ತಿಳಿದು ಮನದಲ್ಲಿ ನೊಂದಳು… ದುಡ್ಡು ಕೊಡಬೇಕೆಂಬ ಬೇಸರವಲ್ಲ ಭಕ್ತಿ ಮಾರಾಟವಾಗುತ್ತಿದೆಯೆಲ್ಲಾ ಎಂಬ ಬೇಸರ ಅವಳನ್ನು ಕಾಡುತ್ತಿತ್ತು… ದೇವರ ಮುಂದೆ ನೆಮ್ಮದಿಯಾಗಿ ಕೈಮುಗಿದು ಎರಡು ನಿಮಿಷಗಳ ಕಾಲ ನಿಲ್ಲಲಾಗಲಿಲ್ಲ.. ನೂಕು ನುಗ್ಗಲಿನಲ್ಲಿ ದೇವರನ್ನು ನೋಡಿದೆನೋ ಇಲ್ಲವೋ ಎಂದು ತಿಳಿಯದೆ ಗೊಂದಲದಲ್ಲಿ ಹೊರ ಬಂದಳು…


ಊರದೇವರ ಜಾತ್ರೆಗೆ ಹೋಗಬೇಕೆಂಬ ಕನಸು ನನಸಾಗಿತ್ತು ಆದರೆ ಅಲ್ಲಿ ನೆರದಿರವರ ಭಕ್ತಿಯಲ್ಲಿರುವ ಕೊರತೆಯನ್ನು ಕಂಡು ಮನದಲಿ ನೊಂದಳು.. ದೇವರನ್ನು ಭಕ್ತಿಯಿಂದ ಬೇಡಿಕೊಳ್ಳುವವರ ಸಂಖ್ಯೆಗಿಂತ ಸೆಲ್ಫಿ ತೆಗೆದುಕೊಳ್ಳುವವರನ್ನು ಕಂಡು ಆಶ್ಚರ್ಯ ಪಟ್ಟಳು.. ಫೋಟೋ ತೆಗೆಯಬೇಡಿ ಎಂದು ಅಲ್ಲಿದ್ದ ಪೊಲೀಸಿನವರು ಗದರುತ್ತಿದ್ದರು ಅವರ ಮಾತಿಗೆ ಬೆಲೆ ಕೊಡದೆ ಒಂದು ಚೂರು ಭಯವೆಂಬುದಿಲ್ಲವೇ ಸುತುತ್ತಿದ್ದ ಜನರನ್ನು ಕಂಡು ನೊಂದುಕೊಂಡಳು.. ಭಯ ಭಕ್ತಿ ಎರಡು ಇಲ್ಲದೆ ಮನಸ್ಸಿಗೆ ಬಂದಿದ್ದನ್ನು ಮಾಡುವಲ್ಲಿ ಮುಳುಗಿ ಹೋಗಿರುವ ಜನತೆಯ ಮನಸ್ಥಿತಿಯನ್ನು ಬದಲಾಯಿಸುವರು ಎಂದು ಮನದಲ್ಲೇ ಪ್ರಶ್ನೆ ಹಾಕುತ್ತಾ ನಡೆದಳು.. ಕನಸಿನಲ್ಲಿ ಕಂಡಂತೆ ಅವಳಿಗೊಂದು ಬಲೂನ್ ಕೊಡಿಸಲಾಗಿತ್ತು.. ಈ ಬಾರಿ ಕೊಡಿಸಿದ್ದು ಅಪ್ಪನಾಗಿರಲಿಲ್ಲ ಕೈ ಹಿಡಿದ ಗಂಡನಾಗಿದ್ದ… ತನ್ನ ಆಸೆ ಕನಸಿಗೆ ಬೆಲೆ ಕೊಡುವ ಈ ನನ್ನ ಸಂಸಾರವನ್ನು ಸದಾ ಸುಖದಿಂದ ಇಡು ಎಂದು ಭಕ್ತಿಯಿಂದ ಬೇಡಿ ಸಂತಸದಿಂದ ಮನೆಯವರೊಂದಿಗೆ ಹೆಜ್ಜೆ ಹಾಕಿದಳು…


ಎಲ್ಲವೂ ಬದಲಾಗಿದೆ ಮನಸ್ಥಿತಿಗಳು ಬದಲಾಗಿವೆ.. ಯಾರದು ತಪ್ಪಲ್ಲ ಯಾವುದು ಸರಿ ಎಂದು ತಿಳಿಯುತ್ತಿಲ್ಲ ಎಂಬ ಹಂತಕ್ಕೆ ತಲುಪಿದ್ದೇವೆ.. ದೇವರ ಮೇಲೆ ಭಯವಾಗಲಿ ಭಕ್ತಿಯಾಗಲಿ ಈಗ ಉಳಿದಿಲ್ಲ….ಎಲ್ಲೋ ಬೆರಳೆಣಿಕೆ ಎಷ್ಟು ಜನ ಭಯ ಭಕ್ತಿಯಿಂದ ನೀತಿ ನೇಮಗಳನ್ನು ಪಾಲಿಸುತ್ತಾ ಬದುಕುತ್ತಿದ್ದಾರೆ ಎಂದು ಮನದಲಿ ನುಡಿದಳು 


Rate this content
Log in

Similar kannada story from Abstract