Achala B.Henly

Abstract Classics Inspirational

4.5  

Achala B.Henly

Abstract Classics Inspirational

ರೇನ್ ಬೋ ಬೇಬಿ..!!

ರೇನ್ ಬೋ ಬೇಬಿ..!!

4 mins
401


 

ಮಾಲತಿ ಮತ್ತು ಸುಧೀರ್ ಕುಟುಂಬದವರು ಬಹಳ ಅನ್ಯೋನ್ಯವಾಗಿದ್ದರು. ಕಾರಣ ಬಹಳ ಸರಳ. ಮಾಲತಿಯ ಅಮ್ಮನ ತಮ್ಮನೇ ಸುಧೀರ್. ಹಾಗಾಗಿ ಇಬ್ಬರ ಮನೆಯವರೂ ಆಗಾಗ ಭೇಟಿ ಕೊಟ್ಟು ಸಂಬಂಧವನ್ನು ಗಟ್ಟಿ ಮಾಡಿಕೊಂಡಿದ್ದರು. ಏನೂ ಅರಿಯದ ಮಾಲತಿ ಮತ್ತು ಸುಧೀರರಿಗೆ, ಚಿಕ್ಕ ವಯಸ್ಸಿನಲ್ಲಿದ್ದಾಗಲೇ ಮುಂದೆ ಇವರಿಬ್ಬರಿಗೂ ಮದುವೆ ಮಾಡಬೇಕು ಎಂದು ತೀರ್ಮಾನಿಸಿ ಬಿಟ್ಟಿದ್ದರು ಮನೆಯ ಹಿರಿಯರು. ಯಾವುದರ ಅರಿವೇ ಇಲ್ಲದಿದ್ದ ಮಾಲತಿ ಸುಧೀರರು ತಮ್ಮ ಪಾಡಿಗೆ ತಾವು ಆಡಿಕೊಂಡು, ಓದಿಕೊಂಡು ದೊಡ್ಡವರಾದರು. ಡಿಗ್ರಿ ಮುಗಿಸಿ ಹತ್ತಿರವೇ ಇದ್ದ ಆಫೀಸೊಂದರಲ್ಲಿ ಮಾಲತಿ ಕೆಲಸಕ್ಕೆ ಸೇರಿದರೆ, ಸುಧೀರ್ ತನ್ನದೇ ಆದ ಸ್ವಂತ ವ್ಯಾಪಾರವನ್ನು ಶುರುಮಾಡಿದ. ಮೊದಮೊದಲು ಇವನ ವ್ಯಾಪಾರ ನಷ್ಟವಾದರೂ, ಬರುಬರುತ್ತಾ ಕೈಹಿಡಿಯಿತು. ಈಗ ತನ್ನದೇ ಎರಡು ಅಂಗಡಿಗಳನ್ನು ತೆರೆದು ಕೆಲಸಗಾರರನ್ನು ಇಟ್ಟು ದುಡಿಯುತ್ತಿದ್ದಾನೆ.


ಮದುವೆಯ ವಯಸ್ಸು ಸಮೀಪಿಸುತ್ತಿದ್ದಂತೆ ಮೊದಲೇ ತೀರ್ಮಾನಿಸಿದಂತೆ, ಮಾಲತಿಯ ಅಮ್ಮ ತನ್ನ ತಮ್ಮನಿಗೇ ಕೊಟ್ಟು ಮಾಲತಿಯನ್ನು ಮದುವೆ ಮಾಡೋಣ ಎಂದು ತನ್ನ ತಂದೆ ತಾಯಿಯರಿಗೆ ವಿಷಯ ತಿಳಿಸಿದರು. ತಮ್ಮ ಮನೆ ಬೆಳಗಲು ಬರುವುದು ಮೊಮ್ಮಗಳೆ ತಾನೇ ಮತ್ತೇಕೆ ಚಿಂತೆ..?

"ನೂಲಿನಂತೆ ಸೀರೆ, ಅಮ್ಮನಂತೆ ಮಗಳು" ಎಂಬ ಗಾದೆಯಂತೆ, ನಮ್ಮ ಮಗಳಂತೆ ನಮ್ಮ ಸೊಸೆಯ ನಡವಳಿಕೆಯು ಇರುತ್ತದೆ. ಹಾಗಾಗಿ ಹೊರಗಿನಿಂದ ಹೆಣ್ಣು ತಂದು ಚಿಂತಿಸುವ ಬದಲು, ಇದೇ ಸರಿ ಎಂದು ಒಪ್ಪಿದರು. ಈ ನಿಟ್ಟಿನಲ್ಲಿ ಮಾಲತಿ ಸುಧೀರರ ಬಳಿ ಅಭಿಪ್ರಾಯ ಕೇಳುವ ಬದಲು, ನಿರ್ಧಾರವನ್ನೇ ಪ್ರಕಟಿಸಿಬಿಟ್ಟರು ಎರಡು ಕುಟುಂಬದವರು..!!



ಗಂಡು ಹೆಣ್ಣಿಗೂ ಒಪ್ಪದೇ ಇರಲು ಏನೂ ಕಾರಣಗಳಿರಲಿಲ್ಲ. ಹಾಗಾಗಿ ಮದುವೆಯು ಸಾಂಗವಾಗಿ ನೆರವೇರಿ, ಮಾಲತಿ ಸುಧೀರನ ಮಡದಿಯಾದಳು. ತನ್ನ ಅಜ್ಜಿ ತಾತರಿಗೆ ಮೊಮ್ಮಗಳಾಗಿದ್ದ ಮಾಲತಿ ಈಗ ಅವರನ್ನು ಅತ್ತೆ ಮಾವ ಎಂದು ಕರೆದು ಸೊಸೆಯಾಗುವ ಪ್ರಸಂಗ ಎದುರಾಯಿತು..!!



ಮದುವೆಯಾಗಿ ಒಂದು ವರ್ಷಕ್ಕೆ ಮಾಲತಿ ಗರ್ಭಿಣಿಯಾದಳು. ಇಡೀ ಮನೆಯಲ್ಲಿ ಸಂಭ್ರಮ ಮನೆ ಮಾಡಿತು. ತಿನ್ನಲು ಬಗೆಬಗೆ ರೀತಿಯ ಸಿಹಿ ತಿನಿಸು, ಕೇಸರಿ ಹಾಲು, ಹೊತ್ತು ಹೊತ್ತಿಗೆ ತಿಂಡಿ ಊಟಗಳನ್ನು ಕೊಡಲು ಶುರುಮಾಡಿದರು. ಮಾಲತಿಗೂ ಇದೆಲ್ಲ ಹೊಸತು. ಇಲ್ಲಿಯವರೆಗೂ ಬೆಳಗಿನಿಂದ ರಾತ್ರಿವರೆಗೂ ಅಡುಗೆ ಮನೆಯಲ್ಲಿ ಕಾಲ ಕಳೆಯುತ್ತಿದ್ದವಳು, ಈಗ ದಿಢೀರ್ ಎಂದು ಹಾಲಿನಲ್ಲಿ ಯಾವಾಗಲೂ ಟಿವಿ ನೋಡುತ್ತಾ ತಿಂಡಿ ತಿನ್ನುವುದಕ್ಕೆ ಕಷ್ಟವಾಯಿತು..!! ತನ್ನ ಅತ್ತೆ ಈಗ ಅಡುಗೆ ಮನೆಯ ಸುಪರ್ದಿಯನ್ನು ತೆಗೆದುಕೊಂಡು ಮಾಲತಿಗೆ ಬಿಡುವು ಮಾಡಿಕೊಟ್ಟಿದ್ದರು.



ಗಂಡ ಹೆಂಡತಿ ಇಬ್ಬರೂ ಡಾಕ್ಟರನ್ನು ಭೇಟಿ ಮಾಡಿದಾಗ, ತಾನು ಹೇಳಿದ ಟೈಮ್ ಗೆ ಸ್ಕ್ಯಾನ್ ಮಾಡಿಸಿ ತನ್ನನ್ನು ಬಂದು ಭೇಟಿಯಾಗಬೇಕೆಂದು ಹೇಳಿದರು. ಪಪ್ಪಾಯಿ, ಪೈನಾಪಲ್ ಹಣ್ಣುಗಳನ್ನು ಬಿಟ್ಟು ಇನ್ನೆಲ್ಲವನ್ನು ತಿನ್ನಬಹುದು. ಆದರೆ ಯಾವುದೂ ಅತಿಯಾಗದೆ ಕಂಟ್ರೋಲ್ ನಲ್ಲಿ ಇರಲಿ ಎಂದು ಹೇಳಿದರು. ಗರ್ಭಿಣಿಯಾದವಳು ಕುಳಿತಲ್ಲೇ ಕೂತಿರಬಾರದು. ಚೆನ್ನಾಗಿ ಓಡಾಡಿ ಆಕ್ಟಿವ್ ಆಗಿ ಇರಬೇಕೆಂದು ತಾಕೀತು ಮಾಡಿದರು ಡಾಕ್ಟರ್. ಇವೆಲ್ಲದಕ್ಕೂ ತಲೆಯಾಡಿಸಿದ ದಂಪತಿ ಮನೆಗೆ ಬಂದು ಎಲ್ಲಾ ವಿಷಯವನ್ನು ಅತ್ತೆ ಮಾವನವರಲ್ಲಿ ಹೇಳಿದರು.



"ಹೌದೌದು ಬಸುರಿಯಾದವಳು ಚೆನ್ನಾಗಿ ವಾಕ್ ಮಾಡಬೇಕು. ಚೆನ್ನಾಗಿ ತಿಂದುಂಡುಕೊಂಡು ಇರಬೇಕು" ಎಂದು ಅಜ್ಜಿಯ ಟೋನ್ ನಲ್ಲಿ ಮಾಲತಿ ಅತ್ತೆ ಮತ್ತೊಮ್ಮೆ ಹೇಳಿದರು. ಹೀಗೆ ನಾಲ್ಕು ತಿಂಗಳುಗಳು ಉರುಳಿ ಐದನೇ ತಿಂಗಳಿನ ಅನಾಮಲಿ ಸ್ಕ್ಯಾನ್ ಗೆ ಮಾಲತಿ ಮತ್ತು ಸುಧೀರ್ ಹೋದರು. ಕೈ ಸೇರಿದ ರಿಪೋರ್ಟ್ ಅನ್ನು ತೆಗೆದುಕೊಂಡು ಎಂದಿನಂತೆ ತಮ್ಮ ಡಾಕ್ಟರ್ ಬಳಿ ಹೋದರು. ಎಲ್ಲವನ್ನು ಕೂಲಂಕುಷವಾಗಿ ನೋಡಿದ ಡಾಕ್ಟರ್, ಹುಟ್ಟಲಿರುವ ಮಗುವಿಗೆ ಕೆಲವು ಅಸಹಜತೆಗಳು (ದೋಷಗಳು) ಇವೆ. ಅಕಸ್ಮಾತ್ ಮಗು ಹುಟ್ಟಿದರೆ ಮುಂದೆ ಜೀವನ ಪೂರ್ತಿ ನಿಮ್ಮ ಮೇಲೆಯೇ ಅವಲಂಬಿತವಾಗಿರುತ್ತದೆ. ಭ್ರೂಣವನ್ನು ಗರ್ಭಪಾತ ಮಾಡುವುದೇ ಸರಿ ಎಂದು ಹೇಳಿದರು.



ಎಲ್ಲವನ್ನು ಕೇಳುತ್ತಿದ್ದ ಮಾಲತಿ ಅಲ್ಲೇ ಜೋರಾಗಿ ಅಳಲು ಪ್ರಾರಂಭಿಸಿದಳು. "ಮುಂಚೆ ಬಂದ ಸ್ಕ್ಯಾನ್ ರಿಪೋರ್ಟ್ ಎಲ್ಲ ಸರಿಯಾಗಿದೆ ಎಂದು ಹೇಳಿತು ಆದರೆ ಈಗ ಹೀಗೇಕೆ ಬಂತು ಡಾಕ್ಟರ್..?" ಎಂದು ಹನಿಗಣ್ಣಾದಳು. ಅದಕ್ಕೆ ಡಾಕ್ಟರ್ "ಮಾಲತಿ ಗರ್ಭಿಣಿಗೆ ಐದು ತಿಂಗಳಾಗುತ್ತಿದೆ ಎನ್ನುವಾಗ ಅನಾಮಲಿ ಸ್ಕ್ಯಾನ್ ಮಾಡುತ್ತಾರೆ. ಇದರಲ್ಲಿ ಮಗುವಿಗೆ ಹುಟ್ಟಿನಿಂದಲೇ ಬರಬಹುದಾದ ಕಾಯಿಲೆಗಳು, ವಂಶಪಾರಂಪರ್ಯವಾಗಿ ಬರಬಹುದಾದ ಹಾನಿಕಾರಕ ರೋಗಗಳು, ಭ್ರೂಣದ ಬೆಳವಣಿಗೆ ಇವೆಲ್ಲವನ್ನೂ ತೋರಿಸಿಕೊಡುತ್ತದೆ. ತಪ್ಪು ತಿಳಿಯಬೇಡಿ, ನೀವಿಬ್ಬರೂ ಹತ್ತಿರದ ಸಂಬಂಧಿಗಳು ಅಲ್ಲವೇ..?" ಎಂದರು.



"ಹೌದು ಡಾಕ್ಟರ್ ಸುಧೀರ್ ನನಗೆ ಮಾವನಾಗಬೇಕು. ಅಂದರೆ ನನ್ನ ಅಮ್ಮನ ಸ್ವಂತ ತಮ್ಮನೇ ಇವರು" ಎಂದಳು ಮಾಲತಿ. "ಹಾಂ ಹೌದು. ಈ ಬಗ್ಗೆ ನೀವು ಫಸ್ಟ್ ಟೈಮ್ ನನ್ನಲ್ಲಿ ಬಂದಾಗ, ಎಲ್ಲಾ ವಿಚಾರಗಳನ್ನು ಕೇಳುವಾಗ ಇದನ್ನು ಕೇಳಿ ತಿಳಿದುಕೊಂಡಿದ್ದೆ. ಕೆಲವು ಸಲ ಹತ್ತಿರದ ಸಂಬಂಧಿಗಳ ಜೊತೆ ಮದುವೆಯಾದಾಗ, ಈ ತರಹ ಹುಟ್ಟಲಿರುವ ಮಗುವಿಗೆ ತಲುಪಬಹುದಾದ ಜೆನೆಟಿಕ್ ಡಿಸಾರ್ಡರ್ ನ ರಿಸ್ಕ್ ಹೆಚ್ಚಿರುತ್ತದೆ. ಹಾಗಾಗಿ ನಿಮ್ಮ ಮಗುವಿಗೂ ಅನುವಂಶಿಕವಾಗಿ ಬರಬಹುದಾದ ಕಾಯಿಲೆಗಳ ಅಪಾಯದ ಬಗ್ಗೆ ಈ ರಿಪೋರ್ಟ್ ತೋರಿಸುತ್ತಿದೆ. ಅದರಂತೆ ಹುಟ್ಟಲಿರುವ ಮಗು ದೈಹಿಕವಾಗಿ ಬೆಳವಣಿಗೆಯಾಗದೆ ಇರುವ ಸಂಭವವೇ ಹೆಚ್ಚು ಎಂದು ಹೇಳುತ್ತಿದೆ. ಆದ್ದರಿಂದ ಈ ಮಗುವನ್ನು ಗರ್ಭಪಾತ ಮಾಡಿಸುವುದೇ ಸರಿ" ಎಂದು ಹೇಳಿದರು.



ಎಲ್ಲವನ್ನು ಕೇಳಿಸಿಕೊಂಡ ದಂಪತಿಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ. ಈ ರೀತಿಯ ಫಸ್ಟ್ ಕಸಿನ್ ಮ್ಯಾರೇಜ್ ನಿಂದ ಹುಟ್ಟಲಿರುವ ಮಗುವಿಗೆ ತೊಂದರೆಯಾಗಬಹುದೆಂದು ಕೇಳಿದ್ದರು. ಆದರೆ ಈಗ ಅದು ತಮಗೇ ಆಗಿದೆಯಲ್ಲ ಎಂದು ತಿಳಿದು ಬಹಳ ಸಂಕಟಪಟ್ಟರು. ಡಾಕ್ಟರ್ ಮತ್ತೊಮ್ಮೆ ಇಬ್ಬರನ್ನು ಸಮಾಧಾನಿಸಿ, "ಅಬಾರ್ಷನ್ ಆದ ಮೇಲೆ ಒಂದು ವರ್ಷದ ನಂತರ, ನೀವು ಮತ್ತೆ ಮಗುವಿಗೆ ಪ್ರಯತ್ನಿಸುವುದು ಒಳ್ಳೆಯದು. ಚಿಂತಿಸಬೇಡಿ ಬರಲಿರುವ ಹೊಸ ಮಗುವಿಗೆ ಯಾವುದೇ ತೊಂದರೆಗಳು ಆಗದಿರಲಿ ಎಂದು ಈಗಿನಿಂದಲೇ ನಾನು ಪ್ರಾರ್ಥಿಸುತ್ತೇನೆ" ಎಂದು ಸಮಾಧಾನಿಸಿ ಇಬ್ಬರನ್ನು ಬೀಳ್ಕೊಟ್ಟರು.



ಮೊದಲೇ ಆಕಾಶ ತಲೆಯ ಮೇಲೆ ಬಿದ್ದಂತೆ ಆಗಿದ್ದ ಮಾಲತಿ, ಮನೆಗೆ ಬಂದ ತಕ್ಷಣ ಅಳುತ್ತ ರೂಮು ಸೇರಿಕೊಂಡಳು. ಗಾಬರಿಯಾದ ಸುಧೀರನ ಅಮ್ಮ ವಿಷಯವನ್ನು ತಿಳಿದು ಬಹಳ ಬೇಸರಿಸಿದರು. ಮನಸ್ಸಿನೊಳಗೆ ಇದಕ್ಕೆ ಕಾರಣಕರ್ತರು ತಾವೇ ಎಂದು ಗೊತ್ತಿದ್ದರೂ, ಘಾಟಿ ಅತ್ತೆಯಂತೆ "ನಾನು ಹೇಳಿದ್ದೆ ಅವಳಿಗೆ ಜಾಸ್ತಿ ಓಡಾಡಬೇಡ, ಭಾರ ಎತ್ತಬೇಡ, ಖುಷಿ ಖುಷಿಯಾಗಿರು, ದೇವರನ್ನು ಪ್ರಾರ್ಥಿಸು, ಚೆನ್ನಾಗಿ ತಿನ್ನು ಎಂದು. ಮಾತು ಕೇಳಲಿಲ್ಲ. ಈಗ ನೋಡು ಹೀಗಾಯ್ತು..!!" ಎಂದು ಸುಳ್ಳು ಸುಳ್ಳೇ ಮಾಲತಿಯನ್ನು ದೂಷಿಸಿದರು.

ಗರ್ಭಪಾತವಾದ ಮೇಲೆ ಮತ್ತೆ ಎಲ್ಲವನ್ನು ಮರೆತು ಮೊದಲಿನಂತೆ ಆಗಲು, ಮಾಲತಿಗೆ ಬಹಳ ಸಮಯ ಹಿಡಿಯಿತು. ಯಾವಾಗಲೂ ಕಳೆದುಕೊಂಡ ಮಗುವಿನ ಬಗ್ಗೆಯೇ ಕನವರಿಸುತ್ತಿದ್ದಳು. ಎರಡು ಕುಟುಂಬಗಳು ತೆಗೆದುಕೊಂಡ ನಿರ್ಧಾರಕ್ಕೆ, ತನ್ನ ಮಗು ಬಲಿಯಾಯಿತೇ ಎಂದು ಅಪ್ಪ ಅಮ್ಮನಲ್ಲೂ ಸಿಟ್ಟಾಗಿ ಮಾತನಾಡಿಸಲು ಬಿಟ್ಟಳು. ಮತ್ತೆ ಕೆಲಸಕ್ಕೆ ಸೇರಿಕೊಂಡು ಮನಸ್ಸಿಗಾದ ಗಾಯವನ್ನು ಮರೆಯಲು ಪ್ರಯತ್ನಿಸಿದಳು.



ಮತ್ತೆರಡು ವರ್ಷಕ್ಕೆ ಮಾಲತಿ ಇನ್ನೊಮ್ಮೆ ಗರ್ಭ ಧರಿಸಿದಳು. ಈ ಎರಡು ವರ್ಷಗಳಲ್ಲಿ ಅವಳು ಬೇಡಿಕೊಂಡ ದೇವರಿಲ್ಲ, ಕಟ್ಟಿದ ಹರಕೆ ಇಲ್ಲ. "ಒಂದೇ ಮಗುವಾದರೂ ಸಾಕು, ಆದರೆ ಹುಟ್ಟುವ ಮಗು ಆರೋಗ್ಯದಿಂದ ಹುಟ್ಟಿ ದೀರ್ಘಾಯುಷ್ಯವಾಗಿ ಬದುಕಿ ಬಾಳಲಿ" ಎಂದು ಪ್ರಾರ್ಥಿಸುತ್ತಿದ್ದಳು. ಅಂತೂ ದೇವರು ಕಣ್ಣುಬಿಟ್ಟನು. ಮಾಡಿಸಿದ ಎಲ್ಲಾ ಸ್ಕ್ಯಾನ್ ರಿಪೋರ್ಟ್ ಮಗು ಆರೋಗ್ಯವಾಗಿದೆ ಎಂದು ಹೇಳಿತು. ಐದನೇ ತಿಂಗಳಿನ ಅನಾಮಲಿ ಸ್ಕ್ಯಾನ್ ಕೂಡ ಮಗು ಆರೋಗ್ಯವಾಗಿ ಹುಟ್ಟಲಿದೆ ಎಂದು ಹೇಳಿದಾಗ, ಮಾಲತಿ ಮತ್ತು ಸುಧೀರರಿಗೆ ತುಂಬಾ ಸಮಾಧಾನವಾಯಿತು..!!



ಡಾಕ್ಟರ್ ಹೇಳಿದ ಎಲ್ಲಾ ಮಾತುಗಳನ್ನು ಆಲಿಸಿ, ಕಟ್ಟುನಿಟ್ಟಾಗಿ ಪಾಲಿಸಲು ಶುರುಮಾಡಿದಳು ಮಾಲತಿ. ಏಳನೇ ತಿಂಗಳು ಸಮೀಪಿಸುತ್ತಿದ್ದಂತೆ ಕೆಲಸಕ್ಕೆ ರಾಜೀನಾಮೆ ನೀಡಿ ಪೂರ್ತಿ ತನ್ನ ಮಾತೃತ್ವವನ್ನು ಅನುಭವಿಸಲು ಸಜ್ಜಾದಳು. ಒಳ್ಳೊಳ್ಳೆಯ ಪುಸ್ತಕಗಳನ್ನು ಓದುವುದು, ಚಂದದ ಮಕ್ಕಳ ಫೋಟೋವನ್ನು ನೋಡುವುದು, ಹಣ್ಣು ತರಕಾರಿಗಳನ್ನು ತಿನ್ನುವುದು, ಡ್ರೈ ಫ್ರೂಟ್ಸ್ ಅನ್ನು ಆಗಾಗ ಮೆಲ್ಲುವುದು, ಯಥೇಚ್ಛವಾಗಿ ನೀರು ಕುಡಿಯುವುದು, ಸಮಯಕ್ಕೆ ಸರಿಯಾಗಿ ತಿಂಡಿ ಊಟಗಳನ್ನು ಮಾಡುವುದು, ಗಂಡನೊಟ್ಟಿಗೆ ವಾಕಿಂಗ್ ಹೋಗುವುದು, ಮನಸ್ಸನ್ನು ಸಂತೋಷದಿಂದ ಇಟ್ಟುಕೊಳ್ಳುವುದು, ಯಾರು ಏನೇ ಅಂದರೂ ಅದರ ಬಗ್ಗೆ ಚಿಂತಿಸದಿರುವುದು, ಹೀಗೆ ಎಲ್ಲವನ್ನು ಕಟ್ಟುನಿಟ್ಟಾಗಿ ಪಾಲಿಸಿದಳು.



ಮಗುವಿನ ಒದೆತ, ಮೀನಿನಂತೆ ಮಗು ಈಜುವುದು, ಪದೇ ಪದೇ ಹೊಟ್ಟೆ ಹಸಿವು, ಅತಿಯಾದ ಸುಸ್ತು, ದಿನದಿಂದ ದಿನಕ್ಕೆ ಗುಂಡಾಗುತ್ತಿದ್ದ ತನ್ನ ಹೊಟ್ಟೆ ಇವೆಲ್ಲವೂ ಅವಳಲ್ಲಿ ಮಗುವಿನ ಬಗ್ಗೆ ಒಂದು ಮಧುರವಾದ ಅನುಭೂತಿಯನ್ನು ಉಂಟುಮಾಡಿತು..!! ಹೊಟ್ಟೆಯಲ್ಲಿರುವ ಮಗುವಿನ ಜೊತೆ ಮಾತನಾಡುತ್ತಾ, ಆನ್ಲೈನ್ ನಲ್ಲಿ ಪ್ರಗ್ನೆನ್ಸಿ, ಲೇಬರ್, ಮಗುವಿನ ಪಾಲನೆಯ ಶೈಲಿಯ ಬಗ್ಗೆ ದೊರಕುವ ವಿಡಿಯೋಗಳು ಮತ್ತು ಕ್ಲಾಸ್ ಗಳನ್ನು ಅಟೆಂಡ್ ಮಾಡುತ್ತಾ, ತಾಯ್ತನದ ಬಗ್ಗೆ ಸರಿಯಾಗಿ ತಿಳಿಯುತ್ತಾ ಹೋದಳು.



ಒಂಬತ್ತು ತಿಂಗಳು ಕಳೆದು, ಮಾಲತಿ ಆರೋಗ್ಯವಂತ ಪುಟ್ಟ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಎರಡು ಕುಟುಂಬದವರು ಆಗಮಿಸಿದ ಹೊಸ ಅತಿಥಿಯನ್ನು ಸಂಭ್ರಮದಿಂದ ಸ್ವಾಗತಿಸಿದರು..!! ಮಾಲತಿ ಅತ್ತೆ ಹುಟ್ಟಿದ ಮಗು ಗಂಡಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದುಕೊಂಡರೂ, ಪರವಾಗಿಲ್ಲಾ ಹೆಣ್ಣಾಗಲಿ ಗಂಡಾಗಲಿ ಮಗು ಆರೋಗ್ಯದಿಂದಿರಲಿ ಅಷ್ಟೇ ಸಾಕು..!! ಎಂದು ಸುಮ್ಮನಾದರು. ಹಿಂದೊಮ್ಮೆ ಕಣ್ಮರೆಯಾದ ಕಣ್ಮಣಿಯನ್ನು ನೆನೆದು ದುಃಖಿಸುತ್ತಿದ್ದ ಮಾಲತಿ ಸುಧೀರ್ ದಂಪತಿ, ಈಗ ರೇನ್ ಬೋ ಬೇಬಿಯ ಆಗಮನದಿಂದ ಬಹಳ ಸಂತೋಷಗೊಂಡಿದ್ದಾರೆ..!! ಜೋಪಾನವಾಗಿ ನೋಡಿಕೊಂಡು, ಒಳ್ಳೆಯ ಶಿಕ್ಷಣವನ್ನು ಕೊಡಿಸಿ, ಅವಳನ್ನು ಸ್ವಾವಲಂಬಿಯನ್ನಾಗಿ ಮಾಡುತ್ತೇವೆ ಎಂದು ಮಗುವಿನ ಕಂಗಳನ್ನು ನೋಡಿ ಕನಸು ಕಾಣುತ್ತಿದ್ದಾರೆ..!!



** ರೇನ್ ಬೋ ಬೇಬಿ ಎಂದರೆ ಗರ್ಭಪಾತ ಅಥವಾ ಬೇರೆ ಕಾರಣಗಳಿಗೆ ಮಗುವನ್ನು ಕಳೆದುಕೊಂಡ ಪೋಷಕರಿಗೆ, ಮಳೆಬಿಲ್ಲಿನಂತೆ ಆರೋಗ್ಯಕರವಾದ ಮಗು ಹುಟ್ಟಿದಾಗ, ಅಂತಹ ಮಗುವಿಗೆ ಈ ರೀತಿ ಹೇಳುತ್ತಾರೆ. **

 



Rate this content
Log in

Similar kannada story from Abstract