Achala B.Henly

Abstract Classics Inspirational

4  

Achala B.Henly

Abstract Classics Inspirational

ನಾನು ಸ್ವತಂತ್ರಳು...

ನಾನು ಸ್ವತಂತ್ರಳು...

3 mins
371


ಬಂಗಾರದ ಪಂಜರದೊಳಗಿನ ಗಿಳಿಯಂತೆ ಬೆಳೆದವಳು ನಾನು. ಹೌದು, ನಾನು ಧಾತ್ರಿ. ಬೆಳ್ಳಿಯ ಚಮಚವನ್ನಲ್ಲ, ಬಂಗಾರದ ಚಮಚವನ್ನೇ ಇಟ್ಟುಕೊಂಡು ಹುಟ್ಟಿದ ಮುದ್ದಾದ ಚೆಲುವೆ..!! ಅಪ್ಪ ಅಮ್ಮನಿಗೆ ಏಕ ಮಾತ್ರ ಪುತ್ರಿ. ಸಕಲ ಅಷ್ಟೈಶ್ವರ್ಯಗಳು ನನಗೆ ಚಿಕ್ಕ ಮಗುವಿದ್ದಾಗಿನಿಂದಲೇ ಸಿಕ್ಕಿದವು. ನಾನು ಎಂದೂ ಇದು ಬೇಕು, ಅದು ಬೇಕು ಎಂದು ಕೇಳುವ ಪ್ರಸಂಗವೇ ಬರಲಿಲ್ಲ..!! ಕಾರಣ, ಕೇಳುವ ಮುಂಚೆಯೇ ಎಲ್ಲವೂ ನನಗೆ ಸಿಗುತ್ತಿದ್ದವು. ಸಕಲ ಐಶ್ವರ್ಯಗಳ ಜೊತೆ, ಕಣ್ಣಿಗೆ ಕುಕ್ಕುವ ಸೌಂದರ್ಯವೂ ಬಳುವಳಿಯಾಗಿ ನನಗೆ ಬಂದಿತ್ತು. ಇನ್ನೇನು ಬೇಕು ನನಗೆ..?! ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎನ್ನುತ್ತಿರುವಾಗಲೇ, ನನಗೆ ಕೋಟ್ಯಾಧೀಶ್ವರನ ಒಬ್ಬನೇ ಸುಪುತ್ರನಿಗೆ ಮದುವೆ ಮಾಡಿಕೊಡಲಾಯಿತು.


ಮೊದಲೆಲ್ಲ ಎಲ್ಲವೂ ಚೆನ್ನಾಗಿಯೇ ಇತ್ತು. ತವರೂರು ಗಂಡನ ಊರು ಬೇರೆ ಬೇರೆ ಎನ್ನುವ ಕೊರಗು ಬಿಟ್ಟರೆ, ಕೈಗೊಬ್ಬ ಕಾಲಿಗೊಬ್ಬ ಆಳು ಇದ್ದರು. ಮನೆಯಲ್ಲಿ ಇದ್ದು ಮಾಡುವುದಕ್ಕೆ ಯಾವ ಕೆಲಸವೂ ಇರಲಿಲ್ಲ. ಹೊರಗಡೆ ಹೋಗಿ ದುಡಿಯುವ ಅವಶ್ಯಕತೆಯೂ ನನಗೆ ಇರಲಿಲ್ಲ. ಆದ್ದರಿಂದ ಟಿವಿ ನೋಡುವುದು, ಕಥೆ ಪುಸ್ತಕಗಳನ್ನು ಓದುವುದು, ಬೇಸರವಾದರೆ ವಿಶಾಲವಾಗಿ ಹರಡಿಕೊಂಡ ಗಾರ್ಡನ್ ಏರಿಯಾದಲ್ಲಿ ಬಂದು ಕೂರುವುದು... ಈ ರೀತಿಯೇ ನನ್ನ ದಿನಗಳು ಕಳೆಯುತ್ತಿದ್ದವು.


ಹೀಗೆಯೇ ಒಂದು ವರ್ಷ ಕಳೆಯಿತು. ನನ್ನ ಗಂಡನ ನಿಜವಾದ ಬಣ್ಣ ಬಯಲಾಗುವ ಸಮಯ ಬಂದಿತು. ಅಂದು ಮನೆಯಲ್ಲಿಯೇ ತನ್ನ ಕಂಪನಿಯ ಸಹೋದ್ಯೋಗಿಗಳಿಗೆ ಪಾರ್ಟಿಯನ್ನು ಏರ್ಪಡಿಸಿದ್ದರು ನನ್ನ ಯಜಮಾನರು. "ಕೆಲವು ಫಾರಿನ್ ಕ್ಲೈಂಟ್ಸ್ ಕೂಡ ಬರುತ್ತಾರೆ, ನೀನು ಗೌರಮ್ಮನಂತೆ ಚೂಡಿದಾರ ಅಥವಾ ಸೀರೆಯನ್ನು ಉಡಬೇಡ, ಯಾವುದಾದರೂ ಮಾಡ್ರನ್ ಡ್ರೆಸ್ ಹಾಕಿಕೋ..." ಎಂದು ಆಜ್ಞೆಯಿತ್ತರು. ಇದೇನು ನನಗಿಷ್ಟವಾದ ಬಟ್ಟೆ ಹಾಕಿಕೊಳ್ಳುವುದಕ್ಕೂ ನನಗೆ ಸ್ವಾತಂತ್ರ್ಯವಿಲ್ಲವೇ...?! ನನ್ನಿಷ್ಟದ ಬಟ್ಟೆಯನ್ನು ನಾನು ಹಾಕಿಕೊಂಡರೆ, ಇವರಿಗೇನು ಕಿರಿಕಿರಿ..? ಅವರೇನು ನನ್ನನ್ನು ನೋಡಲು ಬರುತ್ತಿದ್ದಾರೆಯೇ..!" ಎಂದು ಒಳಗೊಳಗೆ ಸಿಡಿಮಿಡಿಗೊಂಡೆ.


ಆದರೆ ನಂತರ ಆದದ್ದೆಲ್ಲ ತೀರ ಅಸಹ್ಯ ಮತ್ತು ಯಾವ ಹೆಣ್ಣು ನಿರೀಕ್ಷಿಸದ ಹೀನಾಯ ಸಂಗತಿ. ಬಂದ ಗಂಡಸರು ನನ್ನನ್ನೇ ವಿಚಿತ್ರವಾಗಿ ತಿನ್ನುವಂತೆ ನೋಡಬೇಕೆ..? ಅದೇಕೆ ಆ ರೀತಿ ಕೆಟ್ಟ ದೃಷ್ಟಿಯಿಂದ ನನ್ನನ್ನೇ ನೋಡುತ್ತಿದ್ದಾರೆ..! ಎಂದೆನಿಸಿ ಇರುಸುಮುರುಸುಗೊಂಡೆ. ಆದರೆ ನನ್ನ ಗಂಡನಿಗೆ ಇದಾವುದರ ಪರಿವೆಯೇ ಇರಲಿಲ್ಲ..!! ಕಾರಣ ಕಂಠಪೂರ್ತಿ ಕುಡಿದಿದ್ದ ಆತ. ಒಂದಿಬ್ಬರು ಗಂಡಸರು ಕೈ ಕೊಡುತ್ತಾ, ವಿಶ್ ಮಾಡುವ ಧಾಟಿಯಲ್ಲಿ, ಅತಿರೇಕವಾಗಿ ವರ್ತಿಸಿದ್ದು, ನನಗೆ ತೀರ ಗಲಿಬಿಲಿಯನ್ನು ಉಂಟು ಮಾಡಿತು. ಆದರೆ ಅದು ಹೇಗೋ ಸಹಿಸಿಕೊಂಡೆ..!


ಮಾರನೇ ದಿನ ನನ್ನ ಗಂಡನ ಕುಡಿತದ ಅಮಲು ಇಳಿಯುವುದಕ್ಕೆ ಕಾಯುತ್ತಿದ್ದೆ. ಅಂತೂ ಮಧ್ಯಾಹ್ನ ಹನ್ನೆರಡು ಗಂಟೆಯ ಹಾಗೆ, ಪುಣ್ಯಾತ್ಮ ಸರಿಯಾದ. ಹಿಂದಿನ ರಾತ್ರಿಯ ಬಗ್ಗೆ ಎಲ್ಲವನ್ನು ವಿವರವಾಗಿ ಹೇಳಿದರೆ, ಅವನಿಗೇನು ಅದರ ಬಗ್ಗೆ ಕಾಳಜಿಯೇ ಇರಬಾರದೇ..? "ಓಹೋ, ನೀನೇನು ವಿಶ್ವ ಸುಂದರಿಯೇ, ನಿನ್ನನ್ನು ಎಲ್ಲರೂ ನೋಡುವುದಕ್ಕೆ..? ನಿನ್ನನ್ನು ಆ ರೀತಿ ಕೆಟ್ಟ ದೃಷ್ಟಿಯಿಂದ ಮುಟ್ಟಿ ಮಾತನಾಡಿಸುವುದಕ್ಕೆ ಅವರನ್ನೆಲ್ಲ ಏನೆಂದು ತಿಳಿದುಕೊಂಡಿದ್ದೀಯಾ..?! ಅವರೆಲ್ಲ ದೊಡ್ಡ ದೊಡ್ಡ ಹುದ್ದೆಯಲ್ಲಿ ಇರುವವರು. ಯಾರಿಗೆ ಗೊತ್ತು ನೀನೇ ಅವರನ್ನು ಆಮಂತ್ರಿಸುವಂತೆ ನೋಡಿದೆ ಅನಿಸುತ್ತೆ. 'ಕಳ್ಳನ ಮನಸ್ಸು ಹುಳ್ಳುಳ್ಳಗೆ' ಎನ್ನುವಂತೆ ಈಗ ನಿನಗೆ ಆ ರೀತಿ ಅನಿಸುತ್ತಿದೆಯೇನೋ..!!" ಎಂದು ನನ್ನ ಮೇಲೆಯೇ ಸಂಶಯವನ್ನು ವ್ಯಕ್ತಪಡಿಸಿದ.


ಹೋಗಲಿ ಮತ್ತೆ ಈ ರೀತಿಯ ಪಾರ್ಟಿಗಳು ನಡೆದರೆ ತಾನೇ..? ಏನೋ ಹೊಸ ವರ್ಷ ಅಂತ ಪಾರ್ಟಿ ಮಾಡಿದ. ಮತ್ತೆ ನಾನು ಸುಮ್ಮನೆ ಜಗಳ ಮಾಡುವುದು, ಅದೇ ದೊಡ್ಡದಾಗುವುದು ಏಕೆ ಎಂದು ಕಷ್ಟಪಟ್ಟು ಸುಮ್ಮನಾದೆ.


ಆದರೆ ಮತ್ತೆ ಮತ್ತೆ ಇದೇ ಪುನರಾವರ್ತನೆ ಆಗಬೇಕೇ..? ತಿಂಗಳಿಗೊಮ್ಮೆ ಪಾರ್ಟಿ ಮಾಡುವುದು, ಇವನ ಗೆಳೆಯರೆಲ್ಲ ಮನೆಗೆ ಬರುವುದು, ಅವರ ಮುಂದೆ ನಾನು ಬಾರದೇ ಇರುವ ನಗುವನ್ನು ಬರಸಿಕೊಂಡು ಅವರ ಸುತ್ತಮುತ್ತ ಓಡಾಡುವುದು..!! ಆ ಕುಡುಕರು ಕೆಟ್ಟದಾಗಿ ನನ್ನನ್ನು ನೋಡಿ, ಸ್ಪರ್ಶಿಸಲು ಪ್ರಯತ್ನಿಸುವುದು. ಅಬ್ಬಾ ದೇವರೇ, ನನಗೆ ಇಂತಹ ಪಾರ್ಟಿಗಳಲ್ಲಿ ಪಾಲ್ಗೊಳ್ಳಲು ಇಷ್ಟವಿಲ್ಲ ಎಂದು ಎಷ್ಟೇ ನನ್ನ ಗಂಡನಿಗೆ ಹೇಳಿದರೂ, ಅವನು ನನ್ನ ಮಾತನ್ನು ಕೇಳಲು ಸಿದ್ಧವಿರಲಿಲ್ಲ..!


ನಾನೇನು ಗೆಜ್ಜೆ ಕಟ್ಟಿಕೊಂಡು ತಕಥೈ ಎಂದು ಕುಣಿಯುವ ನವಿಲೇ..?! ನಾನೇಕೆ ಇವನ ತಪ್ಪಾದ ತಾಳಕ್ಕೆ ಗೆಜ್ಜೆಯನ್ನು ತೊಟ್ಟ ನವಿಲಿನಂತೆ ಕುಣಿಯಬೇಕು..! ನನಗೆ ನನ್ನದೇ ಆದ ವ್ಯಕ್ತಿತ್ವ ಎಂಬುದು ಇಲ್ಲವೇ..? ಅದೆಷ್ಟು ಆಸೆಪಟ್ಟಿದ್ದೆ ಇವನು ಮತ್ತೆ ಇವನ ಮನೆಯವರನ್ನು ಚೆನ್ನಾಗಿ ನೋಡಿಕೊಂಡು, ಈ ಮನೆಗೆ ನೆರಳಿನಂತೆ ಇದ್ದು ಇವರನ್ನೆಲ್ಲ ಕಾಯಬೇಕೆಂದು..!!


ಉನ್ನತ ಶಿಕ್ಷಣಕ್ಕೆ ಸೇರಬೇಕೆಂಬ ಆಸೆ ಬಲವಾಗಿದ್ದರೂ ಸಹ, ಕಂಡ ಕನಸುಗಳನ್ನೆಲ್ಲ ಮೂಟೆಯಲ್ಲಿ ಕಟ್ಟಿಟ್ಟು, ತವರಿನಲ್ಲೇ ಬಿಟ್ಟು ಬಂದೆ. ಒಬ್ಬಳೇ ಇವರೊಂದಿಗೆ ಬೆರೆಯಲು ಕಷ್ಟವಾದರೂ, ಅದು ಹೇಗೋ ಅನುಸರಿಸಿಕೊಂಡು ಹೋಗುತ್ತಿದ್ದೆ. ಹೊರಗಿನವರಿಗೆ ನೋಡುವುದಕ್ಕೆ ನಾನೊಬ್ಬಳು ಸದಾ ಖುಷಿಯಿಂದ ಇರುವ ಹೆಣ್ಣು ಮಗಳು..! ಆದರೆ ವಾಸ್ತವದಲ್ಲಿ ನನ್ನ ಮನದೊಳಗಿನ ಖುಷಿ ಸಂತೋಷಗಳನ್ನು ಈಡೇರಿಸದ, ಸದಾ ತನ್ನ ವ್ಯವಹಾರದಲ್ಲಿಯೇ ಮುಳುಗಿರುವ ಕುಡುಕನೊಬ್ಬನ ಹೆಂಡತಿ ನಾನು..! ಜೊತೆಗೆ ಏನೋ ತೊಂದರೆಯಾಯಿತು ಎಂದು ಹೇಳಲು ಹೋದರೆ, ನನ್ನನ್ನೇ ಅನುಮಾನದಿಂದ ನೋಡುವ ಸ್ಫುರದ್ರೂಪಿ ಸಂಶಯ ಪಿಶಾಚಿಯ ಪತ್ನಿಯೂ ಸಹ..!!


ಇದೆಲ್ಲವನ್ನು ಸಹಿಸಿಕೊಂಡು ನಾನೂ ಎಷ್ಟು ದಿನವೆಂದು ಸುಮ್ಮನೆ ಇರಲಿ..? ನನ್ನನ್ನೇ ಅಪರಾಧಿ ಸ್ಥಾನದಲ್ಲಿ ನಿಂತು ನೋಡುವ ಇಂತಹ ಗಂಡನೊಂದಿಗೆ ಎಷ್ಟು ದಿನವೆಂದು ಬಾಳಿ ಬದುಕಲಿ..? ತನ್ನ ಸ್ನೇಹಿತರೆಲ್ಲ ತುಂಬಾ ನಂಬಿಕಸ್ತರು, ನಾನು ಮಾತ್ರ ಕೆಟ್ಟವಳು... ಎಂಬಂತೆ ನೋಡಿ ಅನುಮಾನಿಸುವ, ಅವಮಾನಿಸುವ ಗಂಡನೊಂದಿಗೆ ಹೆಚ್ಚೆಂದರೆ ಎಷ್ಟು ದಿನವೆಂದು ಜೀವನ ಸಾಗಿಸಬಹುದು..?!


ಒಂದು ನಾನೇ ಅವನ ಜೀವನಶೈಲಿಗೆ ಹೊಂದಿಕೊಳ್ಳಬೇಕು, ಇಲ್ಲವೆಂದರೆ ನನ್ನ ಕಷ್ಟಗಳನ್ನು ಅರಿತು ಸರಿಯಾಗಿ ಬಾಳುವ ಗಂಡ ಅವನಾಗಬೇಕು..!! ಆದರೆ ನಾನು ಕಂಡಂತೆ ಎರಡೂ ಆಗಲು ಖಂಡಿತ ಸಾಧ್ಯವಿಲ್ಲ. ಈ ಬಗ್ಗೆ ಯಾವಾಗಲೋ ನಾನು ಅಂದಾಜಿಸಿದ್ದೆ. ಆದರೂ ಪರಿಸ್ಥಿತಿ ಸರಿಯಾಗಬಹುದೆಂಬ ಆಶಾಭಾವನೆಯನ್ನು ಹೊಂದಿದ್ದೆ. ಆದರೆ ದಿನ ಕಳೆದಂತೆ ಪರಿಸ್ಥಿತಿ ಬಿಗಡಾಯಿಸುತ್ತಿದೆಯೇ ಹೊರತು ಸರಿಯಾಗುತ್ತಿಲ್ಲ..!!


ತಿಂಗಳಿಗೊಮ್ಮೆ ನಡೆಯುತ್ತಿದ್ದ ಕುಡಿತದ ಪಾರ್ಟಿ ಈಗ ವಾರಕ್ಕೊಮ್ಮೆ ನಮ್ಮ ಮನೆಯಲ್ಲಿ ನಡೆಯುತ್ತಿದೆ..! ಈ ಬಗ್ಗೆ ಅತ್ತೆ-ಮಾವರಲ್ಲಿ ಹೇಳಿದರೂ ಪ್ರಯೋಜನವಿಲ್ಲ. ಅವರು ಜಾಣ ಕುರುಡರಂತೆ ತಾವಾಯಿತು, ತಮ್ಮ ಪಾಡಾಯಿತು ಎಂಬಂತೆ ಇರುತ್ತಾರೆ. ಅವರಿಗೂ ಈ ಪಾರ್ಟಿಗಳು ಎಂದೋ ಅಭ್ಯಾಸವಾಗಿಬಿಟ್ಟಿದೆ..! ಹಾಗಾಗಿ ಅವರಿಗೆ ಇಂಥವುಗಳಲ್ಲಿ ತಪ್ಪು ಕಾಣುತ್ತಿಲ್ಲ..!!


ಇನ್ನೂ ನಾನು ಸುಮ್ಮನೆ ಇದ್ದರೆ ಕುಡಿತದ ಅಮಲಿನಲ್ಲಿ ನನ್ನ ಗಂಡ ನನ್ನನ್ನು ಮಾರುವುದಕ್ಕೂ ಹೇಸುವುದಿಲ್ಲ..?! ಅಂತಹ ಹೀನ ಸಂಸ್ಕೃತಿ ಅವನದ್ದು. ಮತ್ತೂ ಇಲ್ಲಿ ಇದ್ದು ಕಷ್ಟಗಳನ್ನು ಮೈಮೇಲೆ ಎಳೆದುಕೊಳ್ಳುವುದಕ್ಕಿಂತ, ಈ ಸಂಸಾರದಿಂದ ಬಿಡುಗಡೆ ಹೊಂದುವುದೇ ಸರಿ..!


ಅವನ ಜೀವನ ಅವನಿಗೆ, ನನ್ನ ಜೀವನ ನನಗೆ..! ಯಾವ ಕಷ್ಟವನ್ನು ನೋಡದೇ ಬೆಳೆದ ನನಗೆ, ದೇವರು ಅದೇಕೋ ಬಂಡೆಯಂತಹ ಕಷ್ಟವನ್ನೇ ತಂದೊಡ್ಡಿದ್ದಾನೆ ಈಗ..! ಇದನ್ನು ನಾನೇ ಸಮರ್ಪಕವಾಗಿ ಸರಿಪಡಿಸಿಕೊಳ್ಳಬೇಕು.


ಈ ದಾಂಪತ್ಯ ಸಂಬಂಧದಿಂದ ಹೊರಬಂದು, ಇನ್ನು ಮುಂದೆ ನನ್ನ ಇಷ್ಟದ ಜೀವನವನ್ನು ನಾನೇ ಕಟ್ಟಿಕೊಳ್ಳಬೇಕು. ನನ್ನ ತವರು ಮನೆಯಲ್ಲಿ ಬಿಟ್ಟು ಬಂದ ಕನಸುಗಳನ್ನು ಮತ್ತೊಮ್ಮೆ ನನಸಾಗಿಸಿಕೊಳ್ಳುವ ಸರದಿ ಈಗ ನನಗೆ ಬಂದಿದೆ..!! ಕಷ್ಟಪಟ್ಟಾದರೂ ಸರಿಯೇ ನಾನು ಮತ್ತೆ ಉನ್ನತ ವ್ಯಾಸಂಗವನ್ನು ದೃಢ ಮನಸ್ಸಿನಿಂದ ಮಾಡುತ್ತೇನೆ. ಈ ಪಾಪ ಕೂಪದಿಂದ ಸಂಪೂರ್ಣವಾಗಿ ಹೊರಬಂದು, ಸ್ವತಂತ್ರ ಪಕ್ಷಿಯಂತೆ ಬದುಕನ್ನು ಕಟ್ಟಿಕೊಳ್ಳುತ್ತೇನೆ..! ಎನ್ನುತ್ತಾ ಆ ಮನೆಯ ಹೊಸ್ತಿಲನ್ನು ಶಾಶ್ವತವಾಗಿ ನನ್ನೆಲ್ಲಾ ವಸ್ತುಗಳ ಜೊತೆಗೆ ದಾಟಿ ಬಂದೆ...!!



Rate this content
Log in

Similar kannada story from Abstract