ಮೊದಲ ದೀಪಾವಳಿ
ಮೊದಲ ದೀಪಾವಳಿ
ಮೊದಲ ದೀಪಾವಳಿ
ಈ ವರ್ಷದ ದೀಪಾವಳಿ ಹಬ್ಬ ರಾಮರಾಯರ ಮನೆಯಲ್ಲಿ ಅತ್ಯಂತ ವಿಶೇಷವಾಗಿತ್ತು. ಎಲ್ಲಾ ತಯಾರಿಗಳು ಸಂಭ್ರಮದಿಂದ ನಡೆಯುತ್ತಿದ್ದವು. ಹೊಸದಾಗಿ ಮದುವೆಯಾಗಿದ್ದ ಮಗಳು ಅಳಿಯನ ಸ್ವಾಗತಕ್ಕಾಗಿ ಎಲ್ಲವೂ ಸಿದ್ಧಗೊಳ್ಳುತ್ತಿದ್ದವು. ತಮ್ಮ ಮಗಳು ಅಳಿಯನಿಗೆ ಇದು ಮೊದಲನೆ ದೀಪಾವಳಿಯಾಗಿದ್ದರಿಂದ, ಮಾವನ ಮನೆಯಲ್ಲಿ ಅಳಿಯನ ಉಪಚಾರಕ್ಕಾಗಿ ದೊಡ್ಡ ಮಟ್ಟದಲ್ಲಿ ಸಿದ್ಧತೆಗಳು ನಡೆಯುತ್ತಿದ್ದವು. ರಾಮರಾಯರು ಮತ್ತು ರಾಜಮ್ಮ ಇಬ್ಬರೂ ಹೋಗಿ ತಮ್ಮ ಮಗಳು ಅಳಿಯ ಹಾಗೂ ಬೀಗರಿಗೆ ಆಹ್ವಾನ ಕೊಟ್ಟು ಬಂದಿದ್ದರು. ಇಬ್ಬರ ಮನಸ್ಸಿನೊಳಗೂ ಹರುಷ ತುಂಬಿ ಹೋಗಿತ್ತು. ದೀಪಾವಳಿ ಅಂದಾಗ ನಾಲ್ಕು ದಿನಗಳ ಹಬ್ಬದ ಸಾಲು. ನೀರು ತುಂಬುವ ಹಬ್ಬ, ನೀರು ಹಾಕಿಕೊಳ್ಳುವ ಹಬ್ಬ, ಲಕ್ಷ್ಮಿಫೂಜೆ ಮತ್ತು ಗೋವರ್ಧನ ಪೂಜಾ ಮತ್ತು ದೀಪದ ಪೂಜೆ ಹೀಗೆ ನಾಲ್ಕು ದಿನಗಳು ಸಂಭ್ರಮದಿಂದ ಆಚರಿಸುವ ಹಬ್ಬದ ಸಾಲು. ಅದರಲ್ಲೂ ಮಗಳ ಮದುವೆ ಮಾಡಿದವರ ಮನೆಯಲ್ಲಂತೂ ಆ ವರ್ಷದ ಸಡಗರ ಹೇಳತೀರದು.
ರಾಮರಾಯರ ನಿರೀಕ್ಷೆಯಂತೆ ಮಗಳು ಅಳಿಯ ಹಾಗೂ ಬೀಗರು ಒಂದು ದಿನ ಮುಂಚಿತವಾಗಿ ಅವರ ಮನೆಗೆ ಬಂದಾಗ, ಅವರ ಉಪಚಾರದ ಹೊಣೆಯನ್ನು ಖುದ್ಧಾಗಿ ತಾವೇ ವಹಿಸಿಕೊಂಡರು. ಬಗೆಬಗೆಯ ಸಿಹಿ ಖಾದ್ಯ್ಗಳು, ಭೂರು ಭೋಜನಗಳು ಸಿದ್ಧಗೋಂಡವು. ನರಕ ಚತುರ್ದಶಿಯ ಹಿಂದಿನ ದಿನವೇ ಹಬ್ಬದ ಅಡುಗೆ ಗಳು ತಯರಾದವು. ಬಂದವರಿಗೆಲ್ಲಾ ಊಟ ತಾವೇ ನಿಂತು ಬಡಿಸಿದರು. ಮನೆಯಲ್ಲಿ ಮಾತುಕತೆಗಳು, ತಿಳಿಹಾಸ್ಯ, ನಗು ತುಂಬಿ ಹೋಗಿದ್ದವು.
ಮಾರನೇ ದಿನ ನರಕಚತುರ್ದಶಿಯಂದು ಬೆಳಗಿನ ಜಾವ ಬೇಗ ಎದ್ದು, ಮಗಳು ಅಳಿಯನಿಗೆ ಎಣ್ಣೆ ಶಾಸ್ತ್ರ ಮಾಡಿ, ಎಲ್ಲರೂ ಎಣ್ಣಿಯನ್ನು ಹಚ್ಚಿಕೊಂಡು ಸ್ನಾನ ಮಾಡಿ ಮುಗಿಸಿದರು. ನಂತರ ರಾಮರಾಯರು ಮನೆ ದೇವರ ಪೂಜೆ ಮಾಡಿ ಎಲ್ಲರಿಗೂ ತೀರ್ಥ ಪ್ರಸಾದಗಳನ್ನು ಕೊಟ್ಟ ನಂತರ ಉಪ್ಪಿಟ್ಟು ಕೇಸರಿಬಾತ್ ನ ತಿಂಡಿ ಕಾರ್ಯ ಕ್ರಮ ಮುಗಿದ ನಂತರ ,ಮನೆಯ ಹೆಂಗಸರು ಅಡುಗೆಯ ಕಡೆ ಗಮನ ಕೊಟ್ಟಾರೆ, ಗಂಡಸರು ಹರಟೆಯಲ್ಲಿ ತೊಡಗಿದರು. ನೂತನ ದಂಪತಿಗಳಿಗೆ ಹೊತ್ತು ಹೋಗುವುದು ಕಷ್ಟವಾಗಿ ಒದ್ದಾಡುತ್ತಿದ್ದಾಗ, ಹಿರಿಯರೆಲ್ಲರೂ ಅವರಿಬ್ಬರನ್ನು ಹೊರಗಡೆ ಹೋಗಿ ಸುತ್ತಾಡಿಕೊಂಡು ಬರಲು ಹೇಳಿ ಕಳುಹಿಸಿದರು. ಇಬ್ಬರೂ ಖುಷಿಯಿಂದ ಹೊರಗಡೆ ಹೊರಟರು.
ಅಂದು ಎಲ್ಲರೂ ಒಟ್ಟಿಗೆ ಕುಳಿತು ಹಬ್ಬದೂಟ ಮಾಡಿ, ಮಧ್ಯಾಹ್ನ ದ ನಿದ್ದೆ ಮುಗಿಸಿದ ನಂತರ, ಅಂದು ಆ ಮನೆಯ ಹೊಸ ಅಳಿಯ ಅರವಿಂದ ಮತ್ತು ಮಗಳು ಆರವಿ ಇಬ್ಬರೂ ಪಟಾಕಿಗಳನ್ನು ಹೊಡೆದು ಸಂಭ್ರಮಿಸಿದರು. ನಂತರ ರಾಮರಾಯರು ಎಲ್ಲರನ್ನೂ ಕೂರಿಸಿಕೊಂಡು, ನರಕ ಚತುರ್ದಶಿಯ ಪೌರಾಣಿಕ ಕಥೆಯನ್ನು ಹೇಳಿದರು. ದ್ವಾಪರ ಯುಗದಲ್ಲಿ ಎಲ್ಲರಿಗೂ ಹಿಂಸೆ ಕೊಡುತ್ತಿದ್ದ ನರಕಾಸುರನನ್ನು ಕೊಂದು, ಅವನ ಸೆರೆಯಲ್ಲಿದ್ದ ಹದಿನಾರು ಸಾವಿರ ಹೆಂಗಸರನ್ನು ಸೆರೆಯಿಂದ ಬಿಡಿಸಿ, ಅವರೆಲ್ಲರಿಗೂ ಜೀವನ ಕೊಟ್ಟ ಶ್ರೀ ಕೃಷ್ಣನನ್ನು ಪೂಜೆ ಮಾಡುವ ಮಹಾ ಪರ್ವ ದಿನ. ಇಲ್ಲಿ ನರಕಾಸುರ ನೆಂಬ ರಾಕ್ಷಸ ಎಂದೋ ದ್ವಾಪರದಲ್ಲಿದ್ದವನು ಮಾತ್ರವಲ್ಲ. ಇಂದಿಗೂ ನಮ್ಮೊಳಗೇ ಕಾಮ ಕ್ರೋಧಾದಿ ಅರಿಷಡ್ವರ್ಗ ರೂಪದಲ್ಲಿ ಇರುವ ಕತ್ತಲಿನ ರಾಕ್ಷಸರುಗಳನ್ನು ಮೆಟ್ಟಿ ನಿಂತು ಜ್ಞಾನದ ಸೊಡರುಗಳನ್ನು ಬೆಳಗಿಸುವುದಕ್ಕಾಗಿ ಇದೊಂದು ಸಾಂಕೇತಿಕವಾಗಿ ಆ
ಚರಿಸುವ ಸಾಂಪ್ರದಾಯಿಕ ಹಬ್ಬವಾಗಿದೆ.
ದೀಪಾವಳಿಯ ಮೂರನೇ ದಿನದ ಹಬ್ಬ ಆಶ್ವಯುಜ ಮಾಸದ ಅಮಾವಾಸ್ಯೆ. ಅಂದು ಸಾಯಂಕಾಲ ಲಕ್ಷ್ಮೀ ಪೂಜೆ ಅತ್ಯಂತ ಮಹತ್ವವಾದದ್ದು. ಅಮಾವಾಸ್ಯೆಯ ಕತ್ತಲನ್ನು ಕಳೆಯಿಸಿ, ಕಾರ್ತೀಕದ ಹೊಂಬೆಳಕನ್ನು ಮೂಡಿಸುವ ರಾತ್ರಿ. ಆ ದಿನವೂ ರಾಮರಾಯರ ಮನೆಯಲ್ಲಿ ಹೆಂಗಸರೆಲ್ಲರೂ ಸಡಗರ ಸಂಭ್ರಮಾಗಳಿಂದ ಲಕ್ಷ್ಮಿ ಪೂಜೆ ಮಾಡಿ ಮನೆಯನ್ನು ಬೆಳಗಿಸಿದರು.
ಅಮಾವಾಸ್ಯೆ ಕಳೆದ ನಂತರ ಬರುವ ದೀಪಾವಳಿ,. ಸಾಲು ಸಾಲು ದೀಪಗಳನ್ನು ಬೆಳಗಿಸಿ ಮನೆ ಮನದ ಕತ್ತಲನ್ನು ತೊಲಗಿಸುವ ಒಂದು ಮಾಹಾಪರ್ವ. ಅಂದೂ ಸಹ ಹೋಳಿಗೆ, ಜಿಲೇಬಿ, ಪಕೋಡಗಳು, ಬಿಸಿ ಬೇಳೆ ಬಾತ್, ಪಾಯಿಸ, ಮೊಸರನ್ನ ಮುಂತಾದ ಹಬ್ಬದ ಅಡುಗೆಗಳನ್ನು ಮಾಡಿಸಿದ್ದರು. ಎಲ್ಲರೂ ಒಟ್ಟಿಗೆ ಕುಳಿತು ಸಂತೋಷದಿಂದ ಊಟ ಮುಗಿಸಿದರು.
ಅಂದು ಗೋಧೂಳಿ ಸಮಯದಲ್ಲಿ ಗೋವರ್ಧನ ಪೂಜೆಗೆ ಎಲ್ಲಾ ತಯಾರಿಗಳು ನಡೆದವು. ಹಸುವಿನ ಸೆಗಣಿಯಿಂದ ಬಲೀಂದ್ರನ ಕೋಟೆ ಕಟ್ಟಿ ಅದರ ಮೇಲೆ ಹಳದಿ ಬಣ್ಣದ ಆವರಿಕೆ ಹೂವನ್ನು ಸಿಕ್ಕಿಸಿ, ದೇವರ ಮುಂದೆ ಇಟ್ಟರು . ನಂತರ ಎರಡು ಬೆಳ್ಳಿಯ ಕಂಬಗಳಿಗೆ ಅಲಂಕಾರ ಮಾಡಿ, ದೀಪಗಳನ್ನು ಬೆಳಗಿಸಿ ಅದಕ್ಕೆ ಪೂಜೆ ಮಾಡಿ, ಹಾಡುಗಳನ್ನು ಹೇಳಿ, ಆ ದೀಪದ ಕಂಬದಿಂದ ಮಣ್ಣಿನ ಹಣತೆಗಳನ್ನು ಬೆಳಗಿಸಿ, ಮನೆಯ ಮೂಲೆ ಮೂಲೆಯಲ್ಲೂ ಆ ಹಣಾತೆಗಳನ್ನು ಇಟ್ಟು ಕತ್ತಲನ್ನು ಓಡಿಸಿದರು.
ನಂತರ ಹೊಸ್ದಾಗಿ ಮದುವೆಯಾಗಿದ್ದ ಆರವಿ ಮತ್ತು ಅರವಿಂದ್ ಪಟಾಕಿಗಳನ್ನು ಸಿಡಿಸಿ, ಸುರುಸುರು ಬತ್ತಿಗಳನ್ನು ಹಚ್ಚಿ, ಸಂಭ್ರಮ ಪಟ್ಟರು.
ನಂತರ ರಾಮರಾಯರು ಈ ಬಲಿಪಾಡ್ಯಮಿಯ ಪೌರಾಣಿಕ ಹಾಗೂ ಸಾಂಪ್ರದಾಯಿಕ ಹಿನ್ನೆಲೆಯ ಬಗ್ಗೆ ಎಲ್ಲರಿಗೂ ತಿಳಿಸಿಕೊಟ್ಟರು.
’ಇದು ಭಗವಂರನ ವಾಮನಾವತಾರಕ್ಕೆ ಸಂಬಂಧ ಪಟ್ಟ ಹಬ್ಬ , ವಾಮನನಾಗಿ ಬಂದು ಬಲಿ ಚಕ್ರವರ್ತಿಯಲ್ಲಿ ಮೂರು ಹೆಜ್ಜೆ ದಾನ ಬೇಡಿ, ನಂತರ ತ್ರಿವಿಕ್ರಮನಾಗಿ, ಇಡೀ ಬ್ರಹ್ಮಾಂಡವನ್ನು ಅಳೆದು ಬಿಟ್ಟ ವಾಮನ ಮೂರ್ತಿಯ ತ್ರಿವಕ್ರಮದ ಕಥೆ ಈ ಹಬ್ಬದ ಜೊತೆ ಹೆಣೆದುಕೊಂಡಿದೆ. ತನಗಿಂತ ಮಿಗಿಲಾದ ದಾನಿಗಳು ಈ ಪ್ರಪಂಚದಲ್ಲಿ ಇಲ್ಲವೆಂಬ ಅಹಂಕಾರದಿಂದ ಬೀಗುತ್ತಿದ್ದ ಬಲಿಚಕ್ರವರ್ತಿಯ ಅಹಂಕಾರವನ್ನು ಮೆಟ್ಟಿ, ಭಕ್ತ ಬಲಿಯನ್ನಾಗಿ ಮಾಡಿದ ದಿನ ಈ ಬಲಿಪಾಡ್ಯಮಿ ಅಥವಾ ದೀಪಾವಳಿ. ಈ ದಿನ ಗೋವರ್ಧನ ಪೂಜೆ ನಡೆದ ದಿನ. ಬಲಿ ಚಕ್ರವರ್ತಿಯ ಮನೆಯ ಬಾಗಿಲನ್ನು ಕಾಯುತ್ತೇನೆಂದು ಮಾತು ಕೊಟ್ಟ ಶ್ರೀ ಕೃಷ್ಣ(ವಾಮನ) ನನ್ನು ಪೂಜಿಸುವ ಗೋವರ್ಧನ ಪೂಜೆಯೂ ಇಂದೇ ಮಾಡುವ ಸಂಪ್ರದಾಯವಿದೆ. ಒಟ್ಟಾರೆ ಈ ದೀಪಾವಳಿ ಮಹಾಪರ್ವ ನಮ್ಮ ಭಾರತದಲ್ಲಿ ಸಡಗರ ಸಂಭ್ರಗಳಿಂದ ಆಚರಿಸುವುದಕ್ಕೆ ಈ ಹಿನ್ನೆಲೆಯೇ ಕಾರಣ. ಈ ಹಬ್ಬಗಳಲ್ಲಿ ಕೇವಲ ಹೊರಗಿನ ಕತ್ತಲೆಯನ್ನು ಕಳೆಯುವದಷ್ಟೇ ಅಲ್ಲ, ಎಲ್ಲರ ಮಸ್ಸಿನೊಳಗಿರುವ ಕಾಮಕ್ರೋಧಾದಿ ಅರಿಷಡ್ವರ್ಗಗಳ ಕತ್ತಲೆಯನ್ನೂ ಕಳೆಯುವಂತಾಗಬೇಕು. "
ಆಗ ರಾಮರಾಯರ ಮಗಳು ಅಳಿಯ ಹಾಗೂ ಬೀಗರು ಈ ಹಬ್ಬದ ಆಚರಣೆಯ ಹಿನ್ನೆಲೆಗಳನ್ನು ತಿಳಿಸಿಕೊಟ್ಟ ರಾಮರಾಯರಿಗೆ ಧನ್ಯವಾದವನ್ನು ತಿಳಿಸಿದರು. ನಂತರ ಮಗಳು ಅಳಿಯ,ಬೀಗರಿಗೆಲ್ಲಾ ಉಡುಗೊರೆಗಳನ್ನು ಕೊಟ್ಟು ಬೀಳ್ಕೊಟ್ಟರು.
ವಿಜಯಭಾರತೀ ಎ.ಎಸ್.