ಎಲ್ಲಿ ಮರೆಯಾದೆ?
ಎಲ್ಲಿ ಮರೆಯಾದೆ?
ಎಲ್ಲಿ ಮರೆಯಾದೆ?
ಅಂದು ಆಫ಼ಿಸ್ ಗೆ ಹೋದ ಕೂಡಲೇ ನಿತ್ಯಾಳಿಗೆ ಅವಳ ಬಾಸ್ ನಿಂದ ಕರೆ ಬಂದಾಗ, ಅವಳು ಅಟೆಂಡೆನ್ಸ್ ರಿಜಿಸ್ಟರ್ ನಲ್ಲಿ ಸಹಿ ಹಾಕಿ, ಬ್ಯಾಗ್ ಅನ್ನು ತನ್ನ ಸೀಟ್ ಹತ್ತಿರ ಇಟ್ಟು, ಬಾಸ್ ಚೇಂಬರ್ ಕಡೆ ಹೊರಟಳು. ಹೊರಗಿನಿಂದ ಅನುಮತಿ ಪಡೆದು, ಅವಳು ಒಳಗೆ ಹೋದಾಗ, ಬಾಸ್ ಅವಳಿಗೆ ,
ಅವಳ ವಿಭಾಗದ ಒಂದು ಕೋರ್ಟ್ ಫ಼ೈಲ್ ಅನ್ನು ತಕ್ಷಣ ತರುವುದಕ್ಕೆ ಹೇಳಿದರು. "ಒ.ಕೆ ಸರ್" ಅಂತ ಹೇಳಿ ಅಲ್ಲಿಂದ ಹೊರಗೆ ಬಂದು ತನ್ನ ಅಲ್ಮೇರಾಹ್ ತೆಗೆದು ಆ ಫ಼ೈಲ್ ಇಟ್ಟಿದ್ದ ಜಾಗದಲ್ಲಿ ನೋಡುತ್ತಾ ಹೋದಳು. ಆದರೆ ಅದು ಮಾಮೂಲು ಜಾಗದಲ್ಲಿ ಕಾಣಿಸದಿದ್ದಾಗ, ಇಡೀ ಬೀರುವನ್ನು ಜಾಲಾಡಿಸಿದಳು. ಆದರೆ ಆ ಮುಖ್ಯವಾದ ಕೋರ್ಟ್ ಫ಼ೈಲ್ ಎಷ್ಟು ಹುಡುಕಿದರೂ ಸಿಗದೇ ಹೋದಾಗ,ಅವಳಿಗೆ ಭಯ ಶುರುವಾಯಿತು. ’ಅಯ್ಯೋ ಆ ಫ಼ೈಲ್ ಸಿಗದಿದ್ದರೆ, ನನಗೆ ಪನಿಶ್ಮೆಂಟ್ ಗ್ಯಾರೆಂಟಿ, ಅದೂ ಅಲ್ಲದೇ ನಾಳೆಯೇ ಆ ಫ಼ೈಲ್ ಅನ್ನು ಕೋರ್ಟ್ ಗೆ ತೆಗೆದುಕೊಂಡು ಹೋಗಬೇಕು. ಈಗ ಏನಪ್ಪ ಮಾಡುವುದು?’
ಯೋಚಿಸಿದ ಅವಳು , ಅವಳ ಅಕ್ಕ ಪಕ್ಕ,ಎದುರುಬದುರು ,ಇದ್ದ ತನ್ನ ಕೊಲೀಗ್ ಗಳ ಹತ್ತಿರವೆಲ್ಲಾ ಆ ಫ಼ೈಲ್ ಬಗ್ಗೆ ಹೇಳಿ, ವಿಚಾರಿಸಿದಳು. ಯಾರ ಹತ್ತಿರವೂ ಆ ಫ಼ೈಲ್ ಇಲ್ಲವೆಂಬುದು ಪಕ್ಕಾ ಆದಾಗ, ನಿತ್ಯಾ ಳ ಆತಂಕ ಹೆಚ್ಚಾಯಿತು. ಪುಣ್ಯಕ್ಕೆ ಅವಳ ಬಸ್ ನಿಂದ ಅವಳಿಗೆ ಮತ್ತೊಮ್ಮೆ ಬುಲಾವ್ ಬಂದಿರಲಿಲ್ಲ. ಕಡೆಗೆ ಟೈಪಿಂಗ್ ಚೇಂಬರ್ ಗೆ ಹೋಗಿ ನೋಡಿಕೊಂಡು ಬಂದಳು, ಅಲ್ಲಿಯೂ ಇರಲಿಲ್ಲ, ಅವಳ ಎದೆ ಡಬಡಬ ಹೊಡೆದುಕೊಳ್ಳತೊಡಗಿತು. ’ಅಯ್ಯೋ ಬಾಸ್ ಅದನ್ನು ಕೇಳದೇ ಬಿಡುವುದಿಲ್ಲ, ಏನು ಹೇಳುವುದು? ಆ ಫ಼ೈಲ್ ಮಿಸಿಂಗ್ ಅಂತ ಹೇಗೆ ಹೇಳುವುದು? ’ ನಿತ್ಯಾಳಿಗೆ ಹೆದರಿಕೆಯಿಂದ ಎದೆ ಬಡಿತ ಹೆಚ್ಚಾಯಿತು. ಇಡಿ ಆಫ಼ೀಸ್ ನವರಿಗೆ ಆ ಫ಼ೈಲ್ ಮಿಸ್ ಆಗಿರುವುದು ಗೊತ್ತಾಗಿ, ಎಲ್ಲರೂ ಆಫ಼ಿಸ್ ನ ಮೂಲೆಮೂಲೆಯಲ್ಲಿ ಹುಡುಕುತ್ತಾ ಹೊದರು.
ಆದರೆ ಅದು ಯಾರ ಕಣ್ಣಿಗೂ ಬೀಳಲೇ ಇಲ್ಲ.
ಆ ಹೊತ್ತಿಗೆ ನಿತ್ಯಾ ಎಲ್ಲಾ ದೇವರಿಗೂ ಹರಕೆ ಹೊತ್ತಳು. ಇಂದು ಆ ಫ಼ೈಲ್ ಸಿಗದಿದ್ದರೆ ತನಗೇನಾಗುತ್ತದೋ? ಏನೋ? ಅವಳಿಗೆ ಟೆನ್ಷನ್ ಹೆಚ್ಚಾಗುತ್ತಾ ಹೋಯಿತು. ಕೆಲಸ ಮಾಡುವುದಕ್ಕೆ ಆಗದೇ ಸುಮ್ಮನೆ ಏನೂ ತೋಚದೇ ಕುಳಿತು ಬಿಟ್ಟಳು.
ಸುಮಾರು ಒಂದು ಗಂಟೆಯ ಹುಡುಕಾಟ ಮುಗಿದಿತ್ತು,ಆದರೆ ಆ ಫ಼ೈಲ್ ಅಂತೂ ಸಿಕ್ಕಿರಲಿಲ್ಲ. ಮನಸ್ಸಿನಲ್ಲೇ ಹನುಮಾನ್ ಚಾಲೀಸ್ ಹೇಳಿಕೊಳ್ಳುತ್ತಾ ಕುಳಿತು ಬಿಟ್ಟಳು. ಒಳಗಿನಿಂದ ಚೇಂಬರ್ ಬೆಲ್ ಹೊಡೆದ ಶಬ್ದ ಕೇಳಿದಾಗ, ಇವಳಿಗೆ ಹೃದಯವೇ ಬಾಯಿಗೆ ಬಂದ ಹಾಗೆ ಆಯಿತು. ಅವಳು ನಿರೀಕ್ಷಿಸಿದಂತೆಯೇ ಬಾಸ್ ಅವಳನ್ನೇ ಕರೆದಿದ್ದರು.
ಮನಸ್ಸಿನಲ್ಲೇ ಹನುಮಂತನ ಸ್ತೋತ್ರಗಳನ್ನು ಪಠಿಸುತ್ತಾ, ಹೆದರಿಕೆಯಿಂದಲೇ ಚೇಂಬರ್ ಒಳಗೆ ಹೋದಳು. ಇವಳು ಹೋದ ತಕ್ಷಣ ಅವಳ ಬಾಸ್ ಮತ್ತೆ ಆ ಫ಼ೈಲ್ ಬಗ್ಗೆಯೇ ಕೇಳಿದಾಗ, ಅವಳಿಗೆ ಒಂದು ಕ್ಷಣ ವಿಷಯವನ್ನು ಹೇಗೆ ಹೇಳಬೇಕೆಂದು ತಿಳಿಯದೇ, ಅಲ್ಲಿ ಬಾಸ್ ಟೆಬಲ್ ಮೇಲೆ ಇದ್ದ ಫ಼ೈಲ್ ಗಳನ್ನು ನೋಡುತ್ತಾ ಸುಮ್ಮನೆ ನಿಂತು ಬಿಟ್ಟಳು,. ಅವಳ ಕಣ್ಣಿಗೆ ಬ್ಲೂ ಕಲರ್ ಫ಼ೈಲ್ ಕಣ್ಣಿಗೆ ಬಿದ್ದಾಗ, ಅವಳಿಗೆ ಹೋದ ಜೀವ ಬಂದ ಹಾಗಾಗಿ,
"ಸರ್, ಆ ಫ಼ೈಲ್ ಅನ್ನು ಸಹಿಗಾಗಿ ನಿಮ್ಮ ಹತ್ತಿರ ಕಳುಹಿಸಿಕೊಟ್ಟಿದ್ದೆ. ಈಗ ಅದನ್ನು ತೆಗೆದುಕೊಡಲಾ?"
ಅವಳು ಮನದಲ್ಲೇ ಹನುಮಂತನಿಗೆ ಥ್ಯಾಂಕ್ಸ್ ಹೇಳುತ್ತಾ, ಆ ಬ್ಲೂ ಫ಼ೈಲ್ ಅನ್ನು ತೆಗೆದು ನೋಡಿದಳು. ಅದು ಅವಳು ಹುಡುಕುತ್ತಿದ್ದ ಕೋರ್ಟ್ ಫ಼ೈಲ್ ಆಗಿದ್ದು, ಅದರ ಮೇಲೆ "ಅರ್ಜೆಂಟ್" ಸ್ಲಿಪ್ ಇತ್ತು. ಅದನ್ನು ಮೋಡಿದ ಅವಳಿಗೆ ತುಂಬಾ ಖುಷಿಯಾಗಿ, ಆ ಫ಼ೈಲ್ ಅನ್ನು ಬಾಸ್ ಮುಂದೆ ಇಟ್ಟು ಹೊರಗೆ ಬಂದಳು.
ಹೊರಗೆ ಬಂದ ಕೂಡಲೇ ಅವಳು ಖುಷಿಯಿಂದ ಕುಣಿದಾಡುವಂತಾಗಿ, ಎಲ್ಲರಿಗೂ ಕೇಳಿಸುವಂತೆ
"ಹಾಯ್ ಫ಼್ರೆಂಡ್ಸ್ , ನಾನು ಹುಡುಕುತ್ತಿದ್ದ ಆ ಇಂಪಾರ್ಟೆಂಟ್ ಫ಼ೈಲ್ ಸಿಕ್ಕಿತು. ಐ ಆಮ್ ಸೋ ಹ್ಯಾಪಿ, ಎನಿವೇ ಥ್ಯಾಂಕ್ಯು ಆಲ್ ಆಫ಼್ ಯು."
ತಮ್ಮ ತಮ್ಮ ಕೆಲಸದಲ್ಲಿ ಮುಳುಗಿದ್ದ ಎಲ್ಲರೂ ಅವಳ ಹತ್ತಿರ ಓಡಿ ಬಂದು ಅವಳನ್ನು ಮುತ್ತಿಕೊಳ್ಳುತ್ತಾ,
"ಹೋ, ಗುಡ್ ನ್ಯೂಸ್, ಹಾಗಾದರೆ ನಮಗೆಲ್ಲಾ ಗ್ರಾಂಡ್ ಪಾರ್ಟಿ ಬೇಕು. ಬಿ ರೆಡಿ ನಿತ್ಯಾ. " ಅಂತ ಒಟ್ಟಿಗೆ ಕೂಗಿದರು.
ನಿತ್ಯಾಳಿಗೆ ಕಳೆದು ಹೋದ ಜೀವ ಮತ್ತೆ ಬಂದಂತಾಗಿತ್ತು.
ವಿಜಯಭಾರತೀ ಎ.ಎಸ್.
