ಜೀವ ಹೂವಾಗಿದೆ
ಜೀವ ಹೂವಾಗಿದೆ


ಡಾಕ್ಟರ್ ನೀಡಿದ ಪ್ರಿಸ್ಕ್ರಿಪ್ಷನ್ ಹಿಡಿದು ಬ್ಲಡ್ ಟೆಸ್ಟ್ ಮಾಡಿಸಲು ಆಸ್ಪತ್ರೆಯ ಪೆತಾಲಜಿ ಲ್ಯಾಬಿಗೆ ಬಂದ ರಶ್ಮಿ, ಸ್ಯಾಂಪಲ್ಸಗಳನ್ನು ಕೊಟ್ಟು ಅಲ್ಲೇ ಇದ್ದ ಕುರ್ಚಿ ಯಲ್ಲಿ ಕುಳಿತಳು. ತನಗಾಗಿರುವ ಖುಷಿಯನ್ನು ತನ್ನ ಪತಿ ರಂಜನ್ಗೆ ತಿಳಿಸಬೇಕೆಂದು ಆತುರದಿಂದ ಮೊಬೈಲ್ ತೆಗೆದಳು. ಆದರೆ ಅವಳ ಕೈ ತಡೆಯಿತು. "ಬೇಡ ಅವನಿಗೂ ಈಗಲೇ ವಿಷಯ ತಿಳಿಸುವುದು ಬೇಡ. ಎಲ್ಲಾ ಟೆಸ್ಟ್ಗಳ ಫಲಿತಾಂಶ ಬಂದು ಕನ್ಫರ್ಮ್ ಆದ ನಂತರವೇ ಅವನಿಗೆ ಹೇಳೋಣ. ಕಳೆದ ಬಾರಿ ಮನೆಯಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಕೊಂಡ ಕೂಡಲೇ ನಾವಿಬ್ಬರೂ ಪರಸ್ಪರ ಎಷ್ಟೊಂದು ಸಂತಸ ಪಟ್ಟು ಮನೆಯವರಿಗೆಲ್ಲ ಖುಷಿಯಿಂದ ವಿಷಯ ತಿಳಿಸಿದ್ದೆವು. ಆದರೆ ಬ್ಲಡ್ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಎಂದು ತಿಳಿದಾಗ ಎಲ್ಲರಿಗೂ ಎಷ್ಟು ನಿರಾಸೆಯಾಗಿತ್ತು. ಈ ಬಾರಿ ಹಾಗಾಗಬಾರದು. ಮೊದಲು ರಿಪೋರ್ಟ್ ಬರಲಿ ನಂತರ ರಂಜನ್ಗೆ ಹೇಳಿದರಾಯಿತು" ಎಂದುಕೊಂಡು ಮೊಬೈಲ್ ಬ್ಯಾಗಿನೊಳಗೆ ಸೇರಿಸಿ, ಮೇಲೆಕ್ಕೆದ್ದಳು.
ಅಂದು ಅವಳಿಗೆ ಆಫೀಸಿನಲ್ಲಿ ಗಮನವಿಟ್ಟು ಕೆಲಸ ಮಾಡಲಾಗದೆ, ಅರ್ಲಿ ಪರ್ಮಿಷನ್ ತೆಗೆದುಕೊಂಡು ಒಂದು ಗಂಟೆ ಮುಂಚಿತವಾಗಿ ಆಫೀಸ್ ಬಿಟ್ಟು ಲ್ಯಾಬ್ನತ್ತ ಹೊರಟಳು. ಕೈಗೆ ಸಿಕ್ಕಿದ್ದ ರಿಪೋರ್ಟ ಅನ್ನು ನಡುಗುವ ಕೈಗಳಿಂದ ಬಿಡಿಸಿ ನೋಡಿದಾಗ ಅವಳ ಕಣ್ಣನ್ನು ಅವಳೇ ನಂಬಲಿಲ್ಲ. ಅವಳಿಗೆ ಸಂತೋಷದಿಂದ ಕುಣಿದಾಡುವಂತಾಯಿತು. ಅವಳ ಪ್ರೆಗ್ನೆನ್ಸಿ ಕನ್ಫರ್ಮ್ ಆಗಿತ್ತು. ಕೂಡಲೇ ರಂಜನ್ಗೆ ಫೋನ್ ಮಾಡಿ ಸಂತೋಷವನ್ನು ಹಂಚಿಕೊಂಡಳು.
"ಅಬ್ಬಾ, ಮದುವೆಯಾಗಿ ಮೂರು ವರ್ಷ ದ ನಂತರ ಕೊನೆಗೂ ಈ ಸಿಹಿಸುದ್ದಿ ಸಿಕ್ಕಿ ತಲ್ಲಾ, ಎಷ್ಟು ಜನರಿಂದ ಬಂಜೆ ಬಂಜೆ ಅಂತ ಅನ್ನಿಸ್ಕೊಂಡು ಸಾಕಾಗಿ ಹೋಗಿತ್ತು.
ಸಧ್ಯ,ಈಗಲಾದರೂ ನಾನು ತಾಯಿಯಾಗುವ ಸೌಭಾಗ್ಯ ದೊರೆಯಿತಲ್ಲಾ, ಥ್ಯಾಂಕ್ಸ್ ಗಾಡ್ " ಮನದಲ್ಲೇ ಮಂಡಿಗೆ ತಿನ್ನುತ್ತಾ ರಿಪೋರ್ಟ್ ಹಿಡಿದು ಡಾಕ್ಟರ್ಗೆ ತೋರಿಸಿ
ಮನೆಗೆ ಬಂದಾಗ ಅವಳು ಆಕಾಶದಲ್ಲಿ ತೇಲುತ್ತಿದ್ದಳು.
ಈಗಾಗಲೇ ಮನೆಗೆ ಬಂದಿದ್ದ ರಂಜನ್, ಹೆಂಡತಿಯನ್ನು ಬಿಗಿದಪ್ಪಿ ಮುದ್ದಿಸಿದ್ದೇ ಮುದ್ದಿಸಿದ್ದು. ಹೊಟ್ಟೆಯ ಮೇಲೆಲ್ಲ ಪ್ರೀತಿಯಿಂದ ಕೈ ಆಡಿಸಿದ್ದೇ ಆಡಿಸಿದ್ದು.
ಅಂದಿನಿಂದ ರಶ್ಮಿಯ ಹೆಜ್ಜೆ ನೆಲದ ಮೇಲಿರಿಸದಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಿದ್ದ ರಂಜನ್ , ಮನಸ್ಸಿಲ್ಲದ ಮನಸ್ಸಿನಿಂದ ಹೆರಿಗೆಗಾಗಿ ಅವಳನ್ನು ತಾಯಿಯ ಮನೆಗೆ ಕಳುಹಿಸಿ, ಕಂದನ ಆಗಮನಕ್ಕಾಗಿ ಚಡಪಡಿಸತೊಡಗುತ್ತಾ ಕಾಲ ಕಳೆಯುತ್ತಿದ್ದ. ಇತ್ತ ರಶ್ಮಿ ಪ್ರತಿಕ್ಷಣವೂ ಮಗುವಿನ ಚಲನವಲನಗಳನ್ನು ಆಸ್ವಾದಿಸುತ್ತಾ,ಬಯಸಿದ ತಿಂಡಿ ತೀರ್ಥಗಳನ್ನು ಸವಿಯುತ್ತ, ತನ್ನ ಕರುಳ ಕುಡಿಯ ಆಗಮನಕ್ಕಾಗಿ ಕಾಯುತ್ತಾ ಕುಳಿತಳು.
ರಶ್ಮಿಯನ್ನು ಹೆರಿಗೆಗಾಗಿ ಆಸ್ಪತ್ರೆಗೆ ಸೇರಿಸಿರುವ ಸುದ್ದಿ ತಿಳಿದ ಕೂಡಲೇ , ರಂಜನ್ ನೇರ ಆಸ್ಪತ್ರೆಗೆ ಹೋದ. ಲೇಬರ್ ವಾರ್ಡಿಗೆ ಹೊರಡುವ ಮೊದಲು, ರಶ್ಮಿಯ ಕೈ ಹಿಡಿದು ತಲೆ ಸವರಿ ಧೈರ್ಯ ಹೇಳಿದ ರಂಜನ್ ಅಲ್ಲೇ ಕಾಯುತ್ತಾ ಕುಳಿತ.
ಲೇಬರ್ ವಾರ್ಡ್ ನಲ್ಲಿ ನೋವು ತಿಂದು ಒದ್ದಾಡುತ್ತಿದ್ದ ರಶ್ಮಿ, "ಅಮ್ಮ, ನೋವು ತಡೆಯುವುದಕ್ಕಾಗುವುದಿಲ್ವ" ಎಂದು ಕಿರುಚಾಡಿ ಸುಸ್ತಾಗಿ ಕಡೆಗೂ, ಮುದ್ದಾದ ಗಂಡು ಮಗು ಹೊರಗೆ ಬಂದಾಗ, ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಇಷ್ಟು ಹೊತ್ತು ಅನುಭವಿಸಿದ ನೋವೆಲ್ಲಾ ಮುದ್ದು ಮಗುವನ್ನು ನೋಡಿದ ಕೂಡಲೇ ಮರೆತೇ ಹೋಯಿತು. ತನ್ನೊಡಲ ಮೊಗ್ಗು ಜೀವಹೂವಾಗಿ ಅರಳಿರುವ ಸಮಯದಲ್ಲಿ ಅವಳ ಮಾತೃ ಹೃದಯ ಸಂತಸದಿಂದ ತುಂಬಿ ಹೋಗಿತ್ತು. ಬಿಳಿಯ ಟರ್ಕಿ ಟವಲ್ನಲ್ಲಿ, ಕೆಂಪು ಕೆಂಪಾಗಿ, ಗುಂಡು ಗುಂಡಾಗಿ ಮುದ್ದಾಗಿ ಇದ್ದ ತನ್ನ ಮಗುವನ್ನು ನೋಡಿ ನೋಡಿ ರಶ್ಮಿ ಮೈಮರೆತಿದ್ದ ರೆ,ಈ ತಾಯಿ ಮತ್ತು ಮಗುವನ್ನು ನೋಡಿ ನಗುತ್ತಾ ನಿಂತಿದ್ದ ರಂಜನ್,ಹೆಂಡತಿಯ ಕಿವಿಯಲ್ಲಿ "ಕಂಗ್ರಾಟ್ಸ್ ಮೈ ಡಿಯರ್ ಮಮ್ಮಿ"ಎಂದಾಗ ರಶ್ಮಿ ರಂಜನ್ ನತ್ತ ತಿರುಗಿ "ಕಂಗ್ರಾಟ್ಸ್ ಮೈ ಡಿಯರ್ ಪಪ್ಪಾ" ಎನ್ನುತ್ತಾ ಪರಸ್ಪರ ಅಭಿನಂದಿಸಿಕೊಳ್ಳುತ್ತಿರುವಾಗ, ತೊಡೆಯಲ್ಲಿ ಮಲಗಿದ್ದ ಮಗು ಅಳತೊಡಗಿದಾಗ, ಮೆಲ್ಲಗೆ ಅದರ ತಲೆ ಸವರಿ ಸಮಾಧಾನ ಮಾಡುತ್ತಾ ಹಾಲೂಡಿಸುವಾಗ ರಶ್ಮಿಯ ಮಾತೃತ್ವ ಜಾಗೃತವಾಗತೊಡಗುತ್ತ, ಮುಖದಲ್ಲಿ ಸಂತೃಪ್ತಿ ತುಂಬಿತ್ತು.
"ಮಾತೃಭ್ಯೋ ನಮಃ"