Vijaya Bharathi

Abstract Classics Inspirational

4  

Vijaya Bharathi

Abstract Classics Inspirational

ಪಿತ್ರಾರ್ಜಿತ ಭೂಮಿ

ಪಿತ್ರಾರ್ಜಿತ ಭೂಮಿ

1 min
427


ಸ್ಟೋರಿ ಮಿರರ್ ನಾನ್ ಸ್ಟಾಪ್ ನವೆಂಬರ

ಬಿಗಿನರ್ ಆವೃತ್ತಿ ೩


ದಿನ ೨

ವಿಷಯ : ಜಾಗ 


ಆ ಮನೆಯಲ್ಲಿ ವಯಸ್ಸಾದ ತಂದೆ ಕಾಲವಾಗಿದ್ದರು. ಅವರ ಇಬ್ಬರು ಗಂಡು ಮಕ್ಕಳು ಅವರ ದಿನ ಕಾಲಗಳನ್ನೆಲ್ಲಾ ಮುಗಿಸಿದ ನಂತರ, ತಂದೆಯ ಆಸ್ತಿ ಪತ್ರಗಳ ಕಡತವನ್ನು ತೆಗೆದು ಅದನ್ನು ಸಮವಾಗಿ ಹಂಚಿಕೊಳ್ಳಲು ಎಲ್ಲಾ ಸಿದ್ಧತೆಗಳಿಗೆ ಮುಂದಾದರು. ತಂದೆಗಿದ್ದ ದೊಡ್ಡದಾಗಿದ್ದ ಒಂದು ತೊಟ್ಟಿಮನೆ ಹಾಗೂ ತೆಂಗಿನ ತೋಟವನ್ನು ಇಬ್ಬರೂ ಸಮನಾಗಿ ಹಂಚಿಕೊಳ್ಳಬೇಕಾಗಿತ್ತು.. 


ಒಬ್ಬಮಗ ತೋಟವನ್ನೂ ಮತ್ತೊಬ್ಬ ಮಗ ಮನೆಯನ್ನು ಇಟ್ಟುಕೊಳ್ಳಿ ಎಂದು ತಾಯಿ ಹೇಳಿದ ಮಾತಿಗೆ ಒಪ್ಪದ ಅ ಇಬ್ಬರು ಗಂಡು ಮಕ್ಕಳು ಆಸ್ತಿಯನ್ನು ಸಮವಾಗಿ ಹಂಚಿಕೊಳ್ಳುತ್ತೇವೆಂದು ತಕರಾರು ತೆಗೆದಾಗ ಆ ತಾಯಿ ಸುಮ್ಮನಾಗದೆ ವಿಧಿ ಇರಲಿಲ್ಲ. 


ಒಂದು ವಾರದೊಳಗೇ ಕಾಗದ ಪತ್ರಗಳನ್ನು ಪರಿಶೀಲಿಸಿ ಮನೆ ಮತ್ತು ತೋಟವನ್ನು ಅಳೆಯಲಾರಂಭಿಸಿದರು. ಮನೆಯ ಮಧ್ಯದಲ್ಲಿ ದೇವರ ಮನೆ ಹಾಗೂ ತೋಟದ ಮಧ್ಯದಲ್ಲಿರುವ ಭಾವಿ ಇದ್ದುದರಿಂದ ಅಳತೆಯಲ್ಲಿ ಸ್ವಲ್ಪ ವ್ಯತ್ಯಾಸ ಬರುವಂತಾಯಿತು.ದೊಡ್ಡದಾಗಿದ್ದ ಮನೆಯಲ್ಲಿ ಮಧ್ಯ ಗೋಡೆ ಏಳಿಸಬೇಕೆಂದು ಮಾತುಕತೆಗಳು ಶುರುವಾದವು. ಇಬ್ಬರು ಮಕ್ಕಳೂ ಸೋಲದೆ , ಒಂದೆರಡು ಅಡಿ ಜಾಗಕ್ಕಾಗಿ ಗುದ್ದಾಡುತ್ತಿದ್ದಾಗ, ಮಕ್ಕಳ ಕಾದಾಟವನ್ನು ಕಂಡು ರೋಸಿ ಹೋದ ತಾಯಿ ಇಬ್ಬರನ್ನೂ ಕರೆಸಿ ಬುದ್ಧಿ ಹೇಳಿದಳು.


" ನೀವಿಬ್ಬರೂ ಅಣ್ಣತಮ್ಮಂದಿರು. ಒಬ್ಬರಿಗೆ ಒಂದೆರಡು ಅಡಿ ಜಾಗ ಹೆಚ್ಚು ಅಥವಾ ಕಡಿಮೆಯಾದರೆ ಏನೂ ಪ್ರಮಾದವಾಗುವುದಿಲ್ಲ. ಜಾಗಕ್ಕಾಗಿ ಗುದ್ದಾಡುತ್ತಿರುವ ನಿಮ್ಮನ್ನು ಮೇಲಿನಿಂದ ನೋಡುತ್ತಿರುವ ದೇವರು,. ’ಈ ಭೂಮಂಡಲವೇ ನನ್ನದಾಗಿರುವಾಗ, ಒಂದು ಇಂಚು ಭೂಮಿ ತನ್ನದೆನ್ನುತ್ತಾನಲ್ಲ ಈ ಹುಲು ಮಾನವ. ಅವನಿಗೆ ಕಡೆಯಲ್ಲಿ ಬೇಕಾಗುವುದು ಕೇವಲ ಆರಡಿ ಮೂರಡಿಯ ಜಾಗ. ಅದೂ ಸಹ ನಾನು ನೀಡಿರುವ ಭಿಕ್ಷೆ. ಇದು ತಿಳಿಯದೇ ಹೀಗೆ ಕಚ್ಚಾಡುವರಲ್ಲ.’ ಎಂದು ನಗುತ್ತಿರುತ್ತಾನಂತೆ. ನಿಮ್ಮತಂದೆ ಮಾಡಿಟ್ಟ ಆಸ್ತಿ ಈಗ ನಿಮಗೆ ಬಂದಂತೆ ಮುಂದೆ ಇದು ನಿಮ್ಮ ಮಕ್ಕಳದಾಗುತ್ತದೆ. ಈ ಆಸ್ತಿ ಯಾರಿಗೂ ಶಾಶ್ವತವಲ್ಲ. ಈ ಕಟು ವಾಸ್ತವವನ್ನು ಅರ್ಥ ಮಾಡಿಕೊಂಡು ಸ್ವಲ್ಪ ಹೆಚ್ಚು ಕಡಿಮೆಯಾದರೂ ಹೊಂಡಾವಣಿಕೆ ಮಾಡಿಕೊಂಡು ನೀವಿಬ್ಬರೂ ದಾಯಾದಿಗಳಾಗದೆ,

ರಾಮಲಕ್ಷ್ಮಣರಂತೆ ನೆಮ್ಮದಿಯಿಂದ  ಜೀವನ ನಡೆಸಿ. ನಿಮ್ಮ ತಾಯಿಯ ಈ ಮಾತನ್ನು ನಡೆಸಿಕೊಡಿ" 


ತಾಯಿಯ ಹಿತವಚನ ಇಬ್ಬರ ಮನಸ್ಸಿಗೂ ನಾಟಿ, ಒಬ್ಬ ಮಗ ತೋಟವನ್ನು, ಇನ್ನೊಬ್ಬ ಮಗ ಮನೆಯನ್ನೂ ಹಂಚಿಕೊಂಡು ಒಬ್ಬರಿಗೊಬ್ಬರು ಜೊತೆಯಾಗಿ ಜೀವನ ನಡೆಸುವ ನಿರ್ಧಾರ ಮಾಡಿದಾಗ, ಆ ತಾಯಿಗೆ ತುಂಬಾ ನೆಮ್ಮದಿಯಾಯಿತು.




Rate this content
Log in

Similar kannada story from Abstract