Achala B.Henly

Abstract Romance Classics

4  

Achala B.Henly

Abstract Romance Classics

ಮಿಸ್ ಕಾಲ್ ಪ್ರೀತಿ

ಮಿಸ್ ಕಾಲ್ ಪ್ರೀತಿ

6 mins
297


ವಾಣಿಗೆ ಮೊದಲಿನಿಂದಲೂ ಫೋನು ಎಂದರೆ ಎಲ್ಲಿಲ್ಲದ ಹುಚ್ಚು. ಪುಟ್ಟ ಹುಡುಗಿಯಿದ್ದಾಗಿನಿಂದಲೂ ಫೋನು ಎಂದರೆ ಏನೋ ಆಕರ್ಷಣೆ. ದಿನಪೂರ್ತಿ ಫೋನಿನಲ್ಲಿ ಆಟವಾಡುತ್ತಿದ್ದಳು. ಕ್ರಮೇಣ ಅವಳು ಪ್ರೌಢಶಾಲೆಗೆ ಬರುವ ಹೊತ್ತಿಗೆ ಮೊಬೈಲ್ ಫೋನುಗಳು ಮಾರ್ಕೆಟ್ ಗೆ ಬಂದವು. ಈಗಂತೂ ಅವಳಿಗಿನ್ನು ಆಶ್ಚರ್ಯ ಮತ್ತು ಖುಷಿ! ವಯರ್ ಇಲ್ಲದ ಈ ಪುಟ್ಟ ಪೆಟ್ಟಿಗೆಯಿಂದ ಅದು ಹೇಗೆ ಫೋನಾಯಿಸಿ ಎಲ್ಲರೊಂದಿಗೆ ಮಾತನಾಡಬಹುದು ಎಂದು. ಬಿಡುವಾದಾಗಲೆಲ್ಲ ಮೊಬೈಲ್ ಫೋನ್ನಲ್ಲಿ ಅವಳ ಆಟ ಸಾಗುತ್ತಿತ್ತು. ಪೆಟ್ಟಿಗೆಯಂತಹ ಮೊಬೈಲ್ ಫೋನ್ನಲ್ಲಿ ಇರುತ್ತಿದ್ದ ಚಿಕ್ಕಪುಟ್ಟ ಆಟಗಳೇ ಅವಳಿಗೆ ಬೇಸರ ನೀಗಿಸುತ್ತಿದ್ದವು.


ಅಪ್ಪ-ಅಮ್ಮನಿಗೆ ಒಬ್ಬಳೇ ಮಗಳು ಬೇರೆ. ಹಾಗಾಗಿ ಆಡಲಿಕ್ಕೂ ಜೊತೆಗಾರರು ಎಂದು ಯಾರು ಇರಲಿಲ್ಲ. ಓದುವ ಟೈಮಿನಲ್ಲಿ ಓದು, ಊಟ, ನಿದ್ದೆ. ಆಟದ ಸಮಯದಲ್ಲಿ ಮಾತ್ರ ಮೊಬೈಲ್ನದ್ದೇ ಕಾರುಬಾರು. ಹಠ ಮಾಡಿಯಾದರೂ ತನ್ನ ಅಮ್ಮನ ಫೋನನ್ನು ಪಡೆದು ಒಂದರ್ಧ ಗಂಟೆ ಅದರಲ್ಲಿ ಇರುವ ಫೀಚರ್ಸ್ ನೆಲ್ಲ ಶೋಧಿಸಿ, ಆಟವಾಡಿ, ಇನ್ನೂ ಸಮಯವಿದ್ದರೆ ಗೆಳತಿಯರಿಗೆ ಫೋನಾಯಿಸಿ, ಮಾತನಾಡಿ ನಂತರ ಸುಮ್ಮನಾಗುತ್ತಿದ್ದಳು. ಈ ಕಾರ್ಯಗಳೆಲ್ಲ ಮುಗಿಯುವ ಹೊತ್ತಿಗೆ ಅವರಮ್ಮ ನಾಲ್ಕು ಸಲ "ವಾಣಿ ಫೋನ್ ಕೊಟ್ಟರೆ ಸರಿ ಈಗ!" ಎಂದು ಕಿರುಚಿಕೊಳ್ಳುತ್ತಿದ್ದರು.


ಅಮ್ಮನ ಕೂಗಿಗೆ ಕ್ಯಾರೆ ಎನ್ನದ ವಾಣಿ, ತಾನು ಫೋನಿನೊಂದಿಗೆ ಎಷ್ಟು ಹೊತ್ತು ಬೇಕೋ ಅಷ್ಟು ಹೊತ್ತು ಸಮಯ ಕಳೆದು, ನಂತರವಷ್ಟೇ ಮತ್ತೆ ಓದಲು ಕೂರುತ್ತಿದ್ದಳು. ಮೊಬೈಲಿನ ಗಾತ್ರ, ವಿನ್ಯಾಸ, ಆಂಡ್ರಾಯ್ಡ್ ವರ್ಷನ್ಗಳು ಬದಲಾಗುತ್ತಾ ಹೋದಂತೆ ನಮ್ಮ ಕಥಾನಾಯಕಿ ವಾಣಿಯು ಕೂಡ ವರ್ಷದಿಂದ ವರ್ಷಕ್ಕೆ, ವಯಸ್ಸಿಗೆ ತಕ್ಕಂತೆ ಮಾರ್ಪಾಡಾಗುತ್ತಾ ಹೋದಳು. ಪ್ರಸ್ತುತ ಡಿಗ್ರಿ ಓದುತ್ತಿದ್ದ ವಾಣಿ, ಅಪ್ಪ-ಅಮ್ಮ ಕೊಡಿಸಿದ ಸ್ಯಾಮ್ ಸಂಗ್ ಸ್ಮಾರ್ಟ್ ಫೋನಿನಲ್ಲಿ ಜೀವವಿರಿಸಿದ್ದಳು.


ಮೇಕಪ್ ಮಾಡಿಕೊಳ್ಳಲು, ತಲೆಗೂದಲನ್ನು ಹಿಂದೆ ಸರಿಸಲು, ಹಣೆಬೊಟ್ಟನ್ನು ಇಡಲು, ರೀಲ್ಸ್ ಮಾಡಲು, ಕಾಲೇಜಿನಲ್ಲಿ ನೋಟ್ಸ್ ಗಳ ಫೋಟೋ ತೆಗೆದುಕೊಳ್ಳಲು, ಟೆಸ್ಟ್ ಅಸೈನ್ಮೆಂಟ್ ಗಳಿಗೆ ಗೂಗಲ್ ನೋಡಲು, ಫೇಸ್‌ಬುಕ್ ಇನ್ಸ್ಟಾಗ್ರಾಮ್ ನಲ್ಲಿ ಸ್ನೇಹಿತರೊಂದಿಗೆ ಫೋಟೋ ಹಂಚಿಕೊಂಡು ಹರಟಲು, ಸಿಕ್ಕ ಲೈಕ್ ಕಮೆಂಟ್ಗಳನ್ನು ಲೆಕ್ಕ ಹಾಕಿ ಖುಷಿಪಡಲು, ಆನ್ಲೈನ್ ನಲ್ಲಿ ಹಣವನ್ನು ವರ್ಗಾಯಿಸಲು, ಹೀಗೆ ಒಂದೇ ಎರಡೇ ಎಲ್ಲದಕ್ಕೂ ಫೋನಿಗೆ ಅವಲಂಬಿತವಾಗಿದ್ದಳು ವಾಣಿ..!!


ಫೋನಿಲ್ಲದೆ ಜೀವವೇ ಇಲ್ಲ, ಫೋನ್ ಇದ್ದರೆ ತಾನು, ಇಲ್ಲದಿದ್ದರೆ ತಾನು ಶೂನ್ಯ ಎನ್ನುವಷ್ಟರ ಮಟ್ಟಿಗೆ ಅಡಿಕ್ಟ್ ಆಗಿದ್ದಳು. ಓದಿನಲ್ಲಿ ಸುಮಾರಾಗಿದ್ದು, ಅಂಕಗಳು ಒಂದು ಮಟ್ಟಿಗೆ ಚೆನ್ನಾಗಿ ಬರುತ್ತಿದ್ದುದ್ದರಿಂದ ಅವರ ತಂದೆ-ತಾಯಿಯು ಸುಮ್ಮನಾಗಿದ್ದರು. ಬೇಸರವಾದಾಗ ಯುಟ್ಯೂಬ್ ನಲ್ಲಿ ನೋಡುತ್ತಿದ್ದ ಅಡುಗೆಗಳನ್ನು ತನ್ನಪ್ಪ ಅಮ್ಮನಿಗೆ ಉಣಬಡಿಸುತ್ತಿದ್ದಳು. ವಿಡಿಯೋ, ಹಾಡು, ಚಿತ್ರ ವೀಕ್ಷಣೆಯು ಅವಳ ಫೋನಿನಲ್ಲಿ ಸಿಗುವ ಮನೋರಂಜನೆಯ ಸಾಲಿನಲ್ಲಿ ಸೇರಿದ್ದವು.


ಕಾಲವು ಅದರ ಪಾಡಿಗೆ ಓಡುತಲಿತ್ತು. ಈಗ ವಾಣಿ ಮೂರನೇ ವರ್ಷದ ಡಿಗ್ರಿ ವಿದ್ಯಾರ್ಥಿನಿ. ಹೀಗೆ ಒಂದು ದಿನ ಮಿಸ್ಸಾಗಿ ಬಂದ ಒಂದು ಕರೆ ಅವಳ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದುಕೊಂಡಿರಲಿಲ್ಲ ಅವಳು..!! ಕರೆಯನ್ನು ಸ್ವೀಕರಿಸಿ "ರಾಂಗ್ ನಂಬರ್" ಎಂದರೂ, ಇವಳ ಇಂಪಾದ ದನಿಯಿಂದ ಆಕರ್ಷಿತನಾದ ಆ ಕಡೆಯ ವ್ಯಕ್ತಿ ಮತ್ತೆ ಮತ್ತೆ ಫೋನಾಯಿಸಲು ಪ್ರಾರಂಭಿಸಿದನು.


ಅಂತೂ ಮಿಸ್ ಕಾಲ್ ನಿಂದ ಶುರುವಾದ ಪರಿಚಯ, ಗೆಳೆತನಕ್ಕೆ ತಿರುಗಿ ಈಗ ಪ್ರೀತಿಯಾಗಿ ಮಾರ್ಪಟ್ಟಿತ್ತು. ಹುಡುಗನ ಹೆಸರು 'ನವೀನ್'. ತನ್ನದೇ ಒಂದು ಕಂಪ್ಯೂಟರ್ ಅಂಗಡಿ ಇಟ್ಟುಕೊಂಡಿದ್ದಾನೆ. ಅರ್ಜಿ ಸಲ್ಲಿಸಲು, ಇಂಟರ್ನೆಟ್ ವೀಕ್ಷಿಸಲು, ಜೆರಾಕ್ಸ್ ತೆಗೆಯಲು, ಬರುವ ಮಂದಿಗೆ ಇವನ ಅಂಗಡಿಯೇ ಪ್ರಿಯ. ಹಾಗಾಗಿ ಎಲ್ಲರ ಬಾಯಲ್ಲೂ 'ಕಂಪ್ಯೂಟರ್ ನವೀನನಾಗಿದ್ದಾನೆ'. ಹೇಳಿದ ಯಾವುದೇ ಕೆಲಸವನ್ನು ಪಟ್ ಎಂದು ಮಾಡಿ ಮುಗಿಸುವ ಕಲೆ ನವೀನನಿಗಿದೆ. ಆದ್ದರಿಂದಲೇ ತೀರ ಲಾಭ ಬರದಿದ್ದರೂ, ನಷ್ಟವಿಲ್ಲದೆ ಅಂಗಡಿ ಸಾಗುತ್ತಿದೆ. ನವೀನನಿಗೆ ಇರುವುದು ಒಬ್ಬ ಅಣ್ಣ ಮಾತ್ರ. ಅಪ್ಪ-ಅಮ್ಮ ತೀರಿಕೊಂಡಿದ್ದಾರೆ. ಇವರಿಬ್ಬರನ್ನು ಮೊದಲಿನಿಂದಲೂ ಸಾಕಿ ಸಲಹಿದ್ದು ಅಮ್ಮನ ಅಮ್ಮ ಅಂದರೆ ಅಜ್ಜಿ. ಈಗಲೂ ಅಷ್ಟೇ ತಿಂಡಿ-ಊಟವನ್ನು ನೋಡಿಕೊಳ್ಳುತ್ತಿರುವುದು ಅಜ್ಜಿಯೇ. ಅಣ್ಣ ಕಾಲ್ ಸೆಂಟರ್ ಉದ್ಯೋಗಿ. ಕೈ ತುಂಬಾ ಅಲ್ಲದಿದ್ದರೂ ಜೀವನ ಸಾಗಿಸುವಷ್ಟು ಸಂಬಳ ಅವನಿಗೂ ಬರುತ್ತದೆ.


ಹೀಗೆ ಅಜ್ಜಿ ಮೊಮ್ಮಕ್ಕಳ ಜೀವನ ಸಾಗುತ್ತಿದೆ. ಇದರ ನಡುವೆ ನವೀನನಿಗೆ ಮೊಬೈಲ್ ಮಾಯಾಂಗನೆ ಒಬ್ಬ ಹೊಸ ಪ್ರೇಮಿಯನ್ನು ಹುಡುಕಿ ಕೊಟ್ಟಿದ್ದಾಳೆ..?! ಅವಳೇ 'ವಾಣಿ'. ದಿನೇ ದಿನೇ ಇವರಿಬ್ಬರ ಪ್ರೀತಿ ಮೊಬೈಲ್ನಲ್ಲಿ ಅರಳುತ್ತಲೇ ಇದೆ. ವಾಣಿಯು ಕೂಡ ಕಾಲೇಜಿನಿಂದ ಬಂದ ತಕ್ಷಣ ರೂಮಿನ ಬಾಗಿಲು ಹಾಕಿಕೊಂಡು ಒಂದೆರಡು ಗಂಟೆ ನವೀನನೊಂದಿಗೆ ತನ್ನ ದಿನನಿತ್ಯದ ಆಗುಹೋಗುಗಳನ್ನು ವರದಿ ಒಪ್ಪಿಸುತ್ತಾಳೆ. ನವೀನನು ಇದಕ್ಕೆ ಹೊರತಲ್ಲ. ಮೊಬೈಲ್ ಹಿಡಿದುಕೊಂಡು ಮಾತನಾಡುತ್ತಿದ್ದರೆ ತನ್ನ ಅಂಗಡಿಗಳ ಕೆಲಸ ಆಗುವುದಿಲ್ಲವೆಂದು ಬ್ಲೂಟೂತ್ ಖರೀದಿಸಿ ಕತ್ತಿಗೆ ಹಾಕಿಕೊಂಡು ಮಾತಾಡುತ್ತಾ ಕೆಲಸ ಮಾಡುತ್ತಾನೆ. ಅದೇಕೋ ಗೊತ್ತಿಲ್ಲ ಒಂದು ದಿನವೂ ಇವರಿಬ್ಬರೂ ವಿಡಿಯೋ ಕಾಲ್, ಫೋಟೋ ಹಂಚಿಕೆ, ಭೇಟಿಯಾಗುವುದರ ಬಗ್ಗೆ ಮಾತೇ ಆಡಲಿಲ್ಲ. ಹೇಗಿದ್ದರೂ ಫೇಸ್ಬುಕ್ನಲ್ಲಿ ಫೋಟೋಗಳನ್ನು ನೋಡಿಯಾಗಿದೆ ಮತ್ತೂ ಏಕೆ ಇಲ್ಲದ ಗುಮಾನಿ ಎಂದು ತಮ್ಮ ಪಾಡಿಗೆ ಮಾತಿನ ಮೆರವಣಿಗೆಯಲ್ಲಿ ತೊಡಗಿರುತ್ತಾರೆ!


ಇದೇ ಮೊದಲ ಬಾರಿಗೆ ವಾಣಿ ಅಂತಿಮ ವರ್ಷದ ಪರೀಕ್ಷೆಗೆ ಪ್ರೇಮಿಯೊಂದಿಗೆ ಮಾತನಾಡುತ್ತಲೇ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದಳು. "ಅಂಕಗಳು ಚೆನ್ನಾಗಿ ಬರದಿದ್ದರೂ ಚಿಂತೆಯಿಲ್ಲ, ಫೇಲ್ ಆಗದಿದ್ದರೆ ಸಾಕು ದೇವರೇ" ಎಂದುಕೊಳ್ಳುತ್ತಾ ಎಲ್ಲಾ ಪರೀಕ್ಷೆಗಳಿಗೂ ಹಾಜರಾದಳು. ಫಲಿತಾಂಶವು ಹೊರ ಬೀಳುವ ಮುನ್ನವೇ ತನ್ನ ಮನೆಯ ಹತ್ತಿರವೇ ಇದ್ದ ಕಂಪನಿಯಲ್ಲಿ ಆಫೀಸು ಕೆಲಸಕ್ಕೆ ಸೇರಿದಳು. ಎಲ್ಲವೂ ಸುಸೂತ್ರವಾಗಿ ನಡೆಯಲು, ಡಿಗ್ರಿಯನ್ನು ಫಸ್ಟ್ ಕ್ಲಾಸಿನಲ್ಲಿ ಮಾಡಿ ಮುಗಿಸಿಯೇಬಿಟ್ಟಳು ವಾಣಿ.


ವಾಣಿಯ ಅಪ್ಪ-ಅಮ್ಮನಿಗಂತೂ ಎಲ್ಲಿಲ್ಲದ ಖುಷಿ. ಮಗಳು ಸಾಧಿಸಿ ತನ್ನ ಕೈಯಲ್ಲಿ ಎಲ್ಲಾ ಆಗುತ್ತದೆ ಎಂದು ಇಡೀ ಜಗತ್ತಿಗೆ ತೋರಿಸಿದಳೆಂದು..! ಇದರ ಜೊತೆಗೆ ಕೆಲಸವು ತಕ್ಷಣವೇ ಸಿಕ್ಕಿದ್ದರಿಂದ ಅವರಿಬ್ಬರ ಸಂತೋಷವನ್ನು ದುಪ್ಪಟ್ಟು ಮಾಡಿತ್ತು. ಇದೇ ಸಂತೋಷದಲ್ಲಿ "ಮಗಳೇ ಇನ್ನು ನಿನಗೆ ಗಂಡನ್ನು ಹುಡುಕುವುದೊಂದೇ ಬಾಕಿ. ಆ ಕಾರ್ಯವು ಸಾಂಗವಾಗಿ ನೆರವೇರಿದರೆ, ನಾವೇ ಪುಣ್ಯವಂತರು" ಎಂದರು. ಇಷ್ಟು ದಿನ ಮುಚ್ಚಿಟ್ಟಿದ್ದ ಸತ್ಯ ಈಗ ಬಯಲಾಗಲೇಬೇಕಿತ್ತು. ಹೇಗಪ್ಪಾ ತಿಳಿಸುವುದು ಎಂದು ಅಳಕುತ್ತಲೇ ನವೀನನ ವಿಷಯವನ್ನು ಇಬ್ಬರಿಗೂ ಹೇಳಿದಳು ವಾಣಿ.


ಎಲ್ಲವನ್ನು ಕೇಳಿಸಿಕೊಂಡ ಅವಳ ತಂದೆ-ತಾಯಿ "ಮಗಳೇ ನಿನ್ನ ಬಗ್ಗೆ ನಮಗೆ ಅತೀವ ಹೆಮ್ಮೆಯಿದೆ. ಅದರಲ್ಲಿ ಎರಡು ಮಾತಿಲ್ಲ. "ಸಾವಿರ ಸುಳ್ಳು ಹೇಳಿ ಮದುವೆ ಮಾಡು" ಎನ್ನುತ್ತಾರೆ ಹಿರಿಯರು. ಸರಿ ಒಪ್ಪೋಣ. ಆದರೆ ನೀನು ಅವನಿಂದ ಬಲು ದೊಡ್ಡ ವಿಷಯವನ್ನೇ ಮುಚ್ಚಿಟ್ಟಿದ್ದಿ. ಪ್ರೀತಿಸಲು ಶುರು ಮಾಡಿ ಒಂದು ವರ್ಷದ ಮೇಲಾಯ್ತು ಎಂದು ಹೇಳಿದೆ. ಒಂದು ದಿನವೂ ನಿಮ್ಮಿಬ್ಬರಿಗೆ ಭೇಟಿಯಾಗಬೇಕೆಂದು ಅನಿಸಲಿಲ್ಲವೇ?! ಅದು ಹೇಗೆ ಫೇಸ್‍ಬುಕ್ ಫೋಟೋಗಳನ್ನೇ ನೋಡಿ ನಂಬಿ ಕೂತಿದ್ದೀರಾ? ವಾಸ್ತವ ಬೇರೆಯದೇ ಇರಬಹುದು ಎಂದು ಒಂದು ಸಲವೂ ನಿಮಗೆ ಅನಿಸಲಿಲ್ಲವೇ? ನಮ್ಮಿಬ್ಬರಿಗೆ ನಿನ್ನ ಪ್ರೀತಿಯ ಬಗ್ಗೆ ಬೇಸರವಿಲ್ಲ. ಆದರೆ ಗುಟ್ಟನ್ನು ಮುಚ್ಚಿಟ್ಟು ಆ ಹುಡುಗನನ್ನು ಪ್ರೀತಿಸಿದ್ದು ತಪ್ಪಲ್ಲವೇ? ಎಲ್ಲವೂ ಗೊತ್ತಿದ್ದು ಪ್ರೀತಿ ಪ್ರೇಮ ಎಂದರೆ ಅಡ್ಡಿಯಿಲ್ಲ. ಆದರೆ ಇಂತಹ ದೊಡ್ಡ ಸತ್ಯವನ್ನು ಮುಚ್ಚಿಟ್ಟು ಅದು ಹೇಗೆ ಅವನನ್ನು ಅಷ್ಟು ಗಾಢವಾಗಿ ಪ್ರೀತಿಸಿದೆ ಮಗಳೇ..?! ಈಗ ನೋಡು ನೀನೊಬ್ಬ ಕುಂಟಿ!ನಿನ್ನ ಕಾಲು ಊನವಾಗಿದೆ, ಬೇರೆಯವರಂತೆ ಸರಾಗವಾಗಿ ನಡೆಯಲು ಕಷ್ಟಪಡುತ್ತಿಯಾ ಎಂದು ಗೊತ್ತಾದ ತಕ್ಷಣ, ಅವನು ನಿನ್ನ ಪ್ರೀತಿಯನ್ನು ತಿರಸ್ಕರಿಸಿ ಹೋದರೆ ನಿನ್ನ ಗತಿ ಏನು ಮಗಳೇ..! ಏಕೆ ಈ ರೀತಿ ಮಾಡಿದೆ? " ಎಂದು ಮಗಳಿಗೆ ಕೇಳಿದರು.


ಅಲ್ಲಿಯವರೆಗೂ ಪ್ರೀತಿಯಲ್ಲೇ ವಿಹರಿಸುತ್ತಿದ್ದ ವಾಣಿಗೆ, ಈಗ ತನ್ನಪ್ಪ ಹೇಳಿದ್ದು ಹೌದೆನಿಸಿತು. "ಹೌದು ನನಗೆ ನನ್ನ ಪ್ರೀತಿ ಬೆಂಬಲಿಸಲು ನನ್ನ ಅಪ್ಪ-ಅಮ್ಮ ಇದ್ದಾರೆ. ಡಿಗ್ರಿ ಪಡೆದಿದ್ದೇನೆ, ಕೆಲಸವೂ ಸಿಕ್ಕಿದೆ. ಜೊತೆಗೆ ಪ್ರೀತಿಸುವವನು ಸಿಕ್ಕಿದ್ದಾನೆ. ಆದರೆ ಅವನಿಗೆ ನನ್ನ ನ್ಯೂನ್ಯತೆಯನ್ನು ಹೇಳದಿದ್ದದ್ದು ದೊಡ್ಡ ತಪ್ಪಾಯಿತಲ್ಲವಾ? ತುಂಟಾಟವೆಂದು ಶುರುವಾದ ಈ ಫೋನಿನ ಕರೆಗಳು, ನಂತರ ಗೆಳೆತನಕ್ಕೆ ತಿರುಗಿ, ಕ್ರಮೇಣ ಪ್ರೀತಿಯ ಹೆಮ್ಮರವಾಯಿತು. ನವೀನನು ತನ್ನ ಮನೆಯ ಎಲ್ಲಾ ಪರಿಸ್ಥಿತಿಗಳನ್ನು ಹೇಳಿಕೊಂಡಿದ್ದಾನೆ. ಒಂದನ್ನು ಮುಚ್ಚು ಮರೆಮಾಡಿಲ್ಲ! ಆದರೆ ನಾನು ಕುಂಟಿ ಎನ್ನುವುದನ್ನೇ ಅವನಿಂದ ಮರೆಮಾಚಿದೆನಲ್ಲ..?! ಮುಂದೆ ಹೇಳೋಣ ಸದ್ಯಕ್ಕೆ ಬೇಡ ಎನ್ನುತ್ತಲೇ ಒಂದು ವರ್ಷ ದೂಡಿದೆನಲ್ಲ. ಈಗ ವಾಸ್ತವದ ಕಹಿ ಸತ್ಯವನ್ನು ಅವನಿಗೆ ಹೇಳಿದರೆ, ನಿಜವಾಗಲೂ ಅವನು ನನ್ನನ್ನು ಒಪ್ಪುತ್ತಾನಾ? ಇಲ್ಲ, ಖಂಡಿತ ಅವನು ನನ್ನನ್ನು ಒಪ್ಪಲು ಸಾಧ್ಯವಿಲ್ಲ. ಕೆಲಸದಲ್ಲಿ ಇಲ್ಲದಿದ್ದರೂ ಪರವಾಗಿಲ್ಲ, ಆರೋಗ್ಯವಾಗಿರುವ ಹುಡುಗಿಯೇ ಬೇಕು ಎಂದು ನನಗೆ ಸರಿಯಾಗಿ ಬೈದು ನನ್ನಿಂದ ದೂರವಾಗುತ್ತಾನೆ. ಇದೇ ಸತ್ಯ. ಅವನು ನನ್ನಿಂದ ದೂರಾದಾಗ ಕಾಡುವ ವಿರಹ ವೇದನೆಯನ್ನು ನಾನು ಈಗಿನಿಂದಲೇ ಅಭ್ಯಾಸ ಮಾಡಿಕೊಳ್ಳುತ್ತೇನೆ!! ಸತ್ಯವನ್ನು ಮುಚ್ಚಿಟ್ಟು ನಾನು ಮಾಡಿದ್ದು ತೀರ ತಪ್ಪಿನ ಕೆಲಸ. ದೇವರೇ ನನ್ನನ್ನು ಮತ್ತೊಮ್ಮೆ ಕ್ಷಮಿಸಪ್ಪ" ಎಂದು ನವೀನನಿಗೆ ಇರುವ ಸಂಗತಿಯನ್ನು ಹೇಳುವ ಸಂದೇಶವನ್ನು ಟೈಪ್ ಮಾಡಿ ಕಳುಹಿಸಿದಳು.


ಇತ್ತ ಬೆಳಗಿನಿಂದಲೂ ಬ್ಯುಸಿ ಇದ್ದ ನವೀನ ಸಂಜೆಯ ಹೊತ್ತಿಗೆ ವಾಣಿಗೆ ಕಾಲ್ ಮಾಡಿದ. ಎರಡು ಮೂರು ಸಲ ಕರೆ ಮಾಡಿದರೂ ವಾಣಿ ಸ್ವೀಕರಿಸದಿದ್ದಾಗ, "ಇವಳಿಗೆ ಏನಾಯ್ತಪ್ಪಾ" ಎಂದು ಚಡಪಡಿಸಿದ. ಕೆಲಸ ಮುಗಿಸಿ ಬಂದ ತನ್ನ ಅಣ್ಣನಿಗೆ ವಾಣಿ ಕರೆಯನ್ನು ಸ್ವೀಕರಿಸುತ್ತಿಲ್ಲದಿರುವ ವಿಷಯವನ್ನು ಹೇಳಿದ. ಇವರ ಪ್ರೀತಿಯ ಬಗ್ಗೆ ಮೊದಲೇ ತಿಳಿದಿದ್ದ ಅವನ ಅಣ್ಣ ಎಲ್ಲವನ್ನು ಕೇಳಿಸಿಕೊಂಡ. ನಂತರ ನವೀನನ ಮೊಬೈಲ್ ಗೆ ಸಂದೇಶ ಏನಾದರೂ ಬಂದಿದ್ದೀಯಾ ಎಂದು ಸಂದೇಶಗಳನ್ನು ಚೆಕ್ ಮಾಡಿದ. ಅವನೆಂದುಕೊಂಡಂತೆ ವಾಣಿಯಿಂದ ಒಂದು ದೀರ್ಘವಾದ ಮೆಸೇಜ್ ಬಂದಿತ್ತು. ಎಲ್ಲವನ್ನು ಓದಿಕೊಂಡ ಅವನಣ್ಣ "ದೇವರೇ ಹೀಗೂ ಆಗುತ್ತಾ? ಇದೆಂತಹ ವಿಚಿತ್ರವಪ್ಪ...?!" ಎಂದು ನವೀನನಿಗೆ ವಾಣಿ ಕಳುಹಿಸಿದ ಸಂದೇಶವನ್ನು ಜೋರಾಗಿ ಓದಿ ಹೇಳಿದ.


ವಿಷಯವನ್ನು ತಿಳಿಯುತ್ತಿದ್ದಂತೆ ನವೀನನ ಕಣ್ಣಾಲಿಗಳು ತುಂಬಿಕೊಂಡವು. ಎಷ್ಟು ಗಾಢವಾಗಿ ಅವಳನ್ನು ಪ್ರೀತಿಸಿದೆ! ಆದರೆ ನನ್ನಿಂದ ವಿಷಯವನ್ನು ಮುಚ್ಚಿಟ್ಟಳಲ್ಲ. ಈಗ ಬೇರೆ ದೂರವಾಗುವ ಮಾತುಗಳನ್ನು ಆಡುತ್ತಿದ್ದಾಳೆ. ಹಾಗಾದರೆ ಇಷ್ಟು ದಿನಗಳ ಪ್ರೀತಿಗೆ ಬೆಲೆಯೇ ಇಲ್ಲವೇ? ಪ್ರೀತಿ ಗೀತಿ ಎಲ್ಲ ಸುಳ್ಳೇ?! ಇವಳೇಕೆ ಹೀಗೆ ಎಂದು ಚಡಪಡಿಸಿದ. ಎಲ್ಲವನ್ನು ಗಮನಿಸುತ್ತಿದ್ದ ಅವರಣ್ಣ "ನವೀನ್ ಇನ್ನೂ ತಡ ಮಾಡುವುದು ಸರಿಯಲ್ಲ. ಆಕೆಯ ಮನೆಗೆ ಈಗಲೇ ಹೋಗೋಣ" ಎಂದು ಗಾಡಿ ತೆಗೆದ. ಅಂದೊಮ್ಮೆ ಅವಳಿಗೆ ಹುಟ್ಟಿದ ಹಬ್ಬಕ್ಕೆ ಗಿಫ್ಟ್ ಕಳುಹಿಸಲೆಂದು ವಿಳಾಸವನ್ನು ಪಡೆದಿದ್ದ ನವೀನ್. ಅದರ ಉಪಯೋಗ ಈಗ ಬಂದಿತ್ತು. ಒಳಗೊಳಗೆ ಹೃದಯವನ್ನು ಗಟ್ಟಿ ಮಾಡಿಕೊಳ್ಳುತ್ತಾ, "ದೇವರೇ ಅಲ್ಲಿ ಹೋದ ಮೇಲೆ ಇನ್ನು ಯಾವ ಗ್ರಹಚಾರ ಕಾದಿದೆಯೋ? ಅವರ ಅಮ್ಮ-ಅಪ್ಪ ನನ್ನನ್ನು ಹೇಗೆ ನಡೆಸಿಕೊಳ್ಳುತ್ತಾರೋ? ನಮ್ಮಿಬ್ಬರ ಪ್ರೀತಿ ನಿಜವೇ ಆಗಿದ್ದರೆ, ದಯವಿಟ್ಟು ಈ ಪ್ರೀತಿಗೆ ನ್ಯಾಯ ಒದಗಿಸು" ಎಂದು ಬೇಡಿಕೊಂಡನು.


ಬೈಕ್ ನಿಂದ ಇಳಿದ ಇಬ್ಬರೂ, ವಾಣಿಯ ಮನೆಯ ಕರೆ ಘಂಟೆಯನ್ನು ಒತ್ತಿದರು. ಇಷ್ಟು ಹೊತ್ತಿನಲ್ಲಿ ಯಾರಪ್ಪ ಬಂದದ್ದು ಎಂದು ಸ್ವತಃ ವಾಣಿಯೇ ಕುಂಟುತ್ತಾ ಹೋಗಿ ಬಾಗಿಲು ತೆಗೆದಳು. ನೋಡಿದರೆ ಎದುರಿಗೆ ಇಷ್ಟು ದಿನ ಫೇಸ್ಬುಕ್ ಫೋಟೋಗಳಲ್ಲಿ ನೋಡಿದ್ದ ತನ್ನ ಕನಸಿನ ರಾಜಕುಮಾರ 'ನವೀನ್'!! ಆದರೆ ಅವನ ಕಣ್ಣಿಗೊಂದು ಕಪ್ಪು ಕನ್ನಡಕ, ಜೊತೆಗೆ ಕೈಯಲ್ಲಿ ಬಿಳಿ ಕೋಲು. ಅಂದರೆ ನನ್ನವ ನವೀನ್ ಕುರುಡನೇ? ಎಂದು ದಿಗಿಲಾಯಿತು ವಾಣಿಗೆ..!!


ಇದನ್ನು ಮೊದಲೇ ನಿರೀಕ್ಷಿಸಿದ್ದ ನವೀನನ ಅಣ್ಣ "ಬನ್ನಿ ಒಳ ಕೂತು ಮಾತಾಡೋಣ" ಎಂದು ನವೀನನನ್ನು ಒಳಗೆ ಕರೆದುಕೊಂಡು ಹೋದ. ವಾಣಿಯ ಅಪ್ಪ ಟಿವಿ ನೋಡುತ್ತಿದ್ದರೆ, ಅಮ್ಮ ಅಡುಗೆ ಕೆಲಸದಲ್ಲಿ ನಿರತರಾಗಿದ್ದರು. ಹೊಸ ಯುವಕರನ್ನು ನೋಡಿ ಇಬ್ಬರೂ ಆಶ್ಚರ್ಯಗೊಂಡರು. ಕೊನೆಗೆ ವಾಣಿಯೇ ಪರಿಸ್ಥಿತಿಯನ್ನು ತಿಳಿಯಾಗಿಸಲು, "ಅಪ್ಪ ಇವರು ನವೀನ್ ಮತ್ತು ಇವರು...?" ಎಂದು ನವೀನನ ಅಣ್ಣನ ಕಡೆ ನೋಡಿದಳು. ಎಲ್ಲರಿಗೂ ನಮಸ್ಕರಿಸಿದ ನವೀನನ ಅಣ್ಣ "ನವೀನನ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. ನಿಮ್ಮ ಮಗಳಂತೆ ಇವನೂ ಮುಂದೆ ಹೇಳೋಣ ಎಂದು ತನ್ನ ನ್ಯೂನ್ಯತೆಯನ್ನು ಮುಚ್ಚಿಡುತ್ತಾ ಬಂದ. ಈಗ ಪರಿಸ್ಥಿತಿ ವಿಕೋಪಕ್ಕೆ ಹೋದ ಮೇಲೆ ಅಳುತ್ತ ಕೂತಿದ್ದಾನೆ. ಅದಕ್ಕೆ ನಾನೇ ಮತ್ತೆ ಈ ಕಣ್ಣಾಮುಚ್ಚಾಲೆ ಆಟ ಬೇಡವೆಂದು ನಿಮ್ಮ ಮನೆಗೆ ಕರೆದುಕೊಂಡು ಬಂದೆ. ಹೌದು ನನ್ನ ತಮ್ಮ ನವೀನ ಕುರುಡ! ಪೂರ್ತಿ ಕುರುಡನಲ್ಲದಿದ್ದರೂ ಒಂಚೂರು ಪ್ರಪಂಚವನ್ನು ಕಾಣುವ ಭಾಗ್ಯವನ್ನು ಆ ದೇವರು ಕರುಣಿಸಿದ್ದಾನೆ. ಆದ್ದರಿಂದಲೇ ಸ್ವಲ್ಪವೇ ದೃಷ್ಟಿ ಇದ್ದರೂ ಅಷ್ಟರ ಸಹಾಯದಿಂದಲೇ ಅಂಗಡಿ ನೋಡಿಕೊಳ್ಳುತ್ತಾನೆ. ಜೊತೆಗೆ ಒಬ್ಬ ಹುಡುಗನನ್ನು ಸಹಾಯಕ್ಕೆ ಇಟ್ಟುಕೊಂಡಿದ್ದಾನೆ. ಹುಡುಗ-ಹುಡುಗಿ ಇಬ್ಬರ ಕಡೆಯಿಂದಲೂ ತಪ್ಪಾಗಿ ಹೋಗಿದೆ. ಈಗ ನಾವೇ ಅವರಿಬ್ಬರನ್ನು ಕ್ಷಮಿಸಿ ಮುಂದಿನ ತೀರ್ಮಾನ ಮಾಡೋಣ. ನನ್ನ ತಮ್ಮನನ್ನು ಮದುವೆಯಾಗಲು ನಿಮ್ಮ ಮಗಳಿಗೆ ಒಪ್ಪಿಗೆ ಇದ್ದರೆ ನಮ್ಮದೇನೂ ಅಭ್ಯಂತರವಿಲ್ಲ" ಎಂದು ಮಾತು ಮುಗಿಸಿದ.


ಇತ್ತ ವಾಣಿ ತನ್ನ ಮನದಲ್ಲಿ ಆಗಲೇ ಮದುವೆಯಾದರೆ ಅದು ನವೀನನನ್ನೇ ಎಂದು ನಿರ್ಧರಿಸಿದ್ದಳು. ನಾನು ಕುಂಟಿಯಾದರೇನು, ಅವ ಕುರುಡನಾದರೇನು ನಮ್ಮಿಬ್ಬರದು ಪವಿತ್ರ ಪ್ರೇಮ. ಈ ಪ್ರೇಮವನ್ನು ಮದುವೆಯ ಮುಖೇನ ಇನ್ನೂ ಹೆಚ್ಚು ಗಟ್ಟಿಗೊಳಿಸಬೇಕೆಂದುಕೊಂಡಳು. ಅದನ್ನೇ ಅವರಪ್ಪ ಅಮ್ಮನಿಗೂ ಹೇಳಿದಳು. "ಅಪ್ಪ ನನಗೆ ಈ ಮದುವೆಯ ಬಗ್ಗೆ ಸಂಪೂರ್ಣವಾಗಿ ಒಪ್ಪಿಗೆಯಿದೆ. ತಿಳಿದೋ ತಿಳಿಯದೆಯೋ ನಾವಿಬ್ಬರೂ ಪ್ರೀತಿಯಲ್ಲಿ ಮೈಮರೆತು, ಬಹಳ ದೊಡ್ಡ ಸತ್ಯವನ್ನು ಮುಚ್ಚಿಟ್ಟಿದ್ದೇವೆ. ಆದರೂ ಸಹ ದೇವರು ನಮಗೆ ಮೋಸ ಮಾಡಿಲ್ಲ. ಇಬ್ಬರೂ ಆದ ತಪ್ಪನ್ನು ಒಪ್ಪಿಕೊಂಡು ಮುಂದೆ ಬಂದಿದ್ದೇವೆ. ನೀವುಗಳೇ ನಮಗೆ ಮುಂದಿನ ದಾರಿಯನ್ನು ತೋರಿಸಬೇಕು" ಎಂದಳು.


ವಾಣಿಯ ಅಪ್ಪ-ಅಮ್ಮ ಸಂತೋಷದಿಂದಲೇ ಈ ಮದುವೆಗೆ ಒಪ್ಪಿಗೆ ಸೂಚಿಸಿದರು. ಒಂದೊಳ್ಳೆ ಮುಹೂರ್ತದಲ್ಲಿ ವಾಣಿ ನವೀನನ ಕೈ ಹಿಡಿದಳು. ನವೀನನಿಗೆ ಈಗ ವಾಣಿ ಕಣ್ಣಾದರೆ, ವಾಣಿಗೆ ನವೀನನೇ ಕಾಲುಗಳು..!! ಇಬ್ಬರೂ ಒಬ್ಬರ ಸಹಾಯದಿಂದ ಇನ್ನೊಬ್ಬರು ಬೇಕಾದ ಕಡೆಗೆ ಹೋಗಿ ಬರುತ್ತಾರೆ. ಯಾವುದೇ ಕೆಲಸವನ್ನು ಕಷ್ಟವಿಲ್ಲದೆ ಮಾಡಿ ಮುಗಿಸುತ್ತಾರೆ. ಇಬ್ಬರ ಪ್ರೀತಿ ಈಗ ಹೆಮ್ಮರವಾಗಿ ಬೆಳೆದುಬಿಟ್ಟಿದೆ. ಕಾಣದ ದೇವರಿಗೆ ಕೈ ಮುಗಿಯುತ್ತಾ ಮಿಸ್ ಕಾಲ್ ನಲ್ಲಿ ಶುರುವಾದ ಪ್ರೀತಿಯನ್ನು ನೆನೆಯುತ್ತಾ, ಸುಖದಿಂದ ಜೀವನ ಸಾಗಿಸುತ್ತಿದ್ದಾರೆ.



Rate this content
Log in

Similar kannada story from Abstract