Vijaya Bharathi

Abstract Romance Others

4  

Vijaya Bharathi

Abstract Romance Others

ಅಭೀಷ್ಟ

ಅಭೀಷ್ಟ

5 mins
661



    ರಾತ್ರಿ ಹನ್ನೆರಡು ಗಂಟೆಯಲ್ಲಿ ಆಳವಾದ ನಿದ್ರೆಯಲ್ಲಿ ದ್ದ ಡಾ.ಅಹನಾ, ಮೊಬೈಲ್ ರಿಂಗ್ ಆದಾಗ, ದಡಬಡಿಸಿ ಎದ್ದು, ಮೊಬೈಲ್ ಸ್ಕ್ರೀನ್ ಮೇಲೆ ಕಣ್ಣಾಡಿಸಿದಾಗ, 'ಡಾ.ಅಶೋಕ್ ಸೇನ್ ಕಾಲಿಂಗ್' ಎಂದು ಇರುವುದನ್ನು ನೋಡಿ,'ಹಲೋ' ಎಂದಳು.ಅವಳು ಈಗಿಂದೀಗಲೇ ನರ್ಸಿಂಗ್ ಹೋಂ ಗೆ ತುರ್ತಾಗಿ ಬರಬೇಕೆಂದು ಡಾ.ಅಶೋಕ್ ಸೇನ್ ತಿಳಿಸಿದಾಗ,  ಡಾ.ಅಹನಾ, ತನ್ನ ಅಮ್ಮನನ್ನು ಎಬ್ಬಿಸಿ,ಕಾರ್ ಕೀ ತೆಗೆದು ಕೊಂಡು ಹೊರಟಳು. ಹೀಗೆ ನಡುರಾತ್ರಿಯಲ್ಲಿ ಹೊರಟ ಮಗಳ ಮೇಲೆ ಅರುಂಧತಿಯವರಿಗೆ ಕನಿಕರ ಉಕ್ಕಿ, 'ಈ ಹುಡುಗಿ ಏಕಾದರೂ ಡಾಕ್ಟರ್ ಆದಳೋ,? ಹೊತ್ತಿಲ್ಲ ಗೊತ್ತಿಲ್ಲ, ಹೀಗೆ ಓಡಾಡಬೇಕು, ಈಗೇನೋ ಸರಿ, ಮುಂದೆ ಮದುವೆಯಾದ ಮೇಲೆ ಹೇಗೆ?' ಎಂದುಕೊಳ್ಳುತ್ತಾ ಬಾಗಿಲು ಭದ್ರಪಡಿಸಿ ರೂಂಗೆ ಹೋಗಿ ಮಲಗಿದರು.


ಮನೆಯಿಂದ ಹೊರಟ ಅಹನಾ, ತನ್ನ ಪೇಷಂಟ್ಸ ಬಗ್ಗೆ ಯೋಚಿಸುತ್ತಿದ್ದಳು.


'ಡೀನ್ ಏಕೆ ಹೀಗೆ ಅರ್ಜೆಂಟ್ ಆಗಿ ಬರಹೇಳಿದ್ದಾರೆ? ಯಾವುದಾದರೂ ಎಮರ್ಜೆನ್ಸಿ ಕೇಸ್ ಬಂದಿರಬೇಕು.ಇಲ್ಲದಿದ್ದರೆ ಹೀಗೆ ಅವೇಳೆಯಲ್ಲಿ ಅವರು ಫೋನ್ ಮಾಡುತ್ತಿರಲಿಲ್ಲ.,ಎನಿವೇ ಡಾ.ಅಶೋಕ್ ಸೇನ್ ಕೈಕೆಳಗೆ ಕೆಲಸ ಕಲಿಯಬೇಕೆಂದರೆ ಪುಣ್ಯ ಮಾಡಿರಬೇಕು'' ದಾರಿಯಲ್ಲಿ ಹೋಗುವಾಗ ಡಾ.ಅಹನಾ ನೆನಪಿನಾಳಕ್ಕಿಳಿದಳು.

ಡಾ.ಅಶೋಕ್ ಸೇನ್ ಅವರ ನೆನಪಿನೊಂದಿಗೆ ಅವಳ ನೆನಪಿನ ಸುರುಳಿ ಬಿಚ್ಚಿಕೊಳ್ಳತೊಡಗಿತು.


" ಈಗ ಆರು ತಿಂಗಳ ಹಿಂದೆ,"ಡಾ.ಸೇನ್ ನರ್ಸಿಂಗ್ ಹೋಂ "ನಲ್ಲಿ ಮೆಡಿಕಲ್ ಮುಗಿಸಿ  ಜೂನಿಯರ್ ಇಂಟರ್ನ್ ಆಗಿ ಕೆಲಸಕ್ಕೆ ಸೇರಿದ ಡಾ.ಅಹನಾ ,ಆ ನರ್ಸಿಂಗ್ ‌ಹೋಂನ ಡೀನ್, ಡಾ.ಅಶೋಕ್ ಸೇನನ ಅಸಿಸ್ಟೆಂಟ್ ಆಗಿ ನೇಮಕಗೊಂಡು ಅವನ ಕೈಕೆಳಗೆ ಕೆಲಸ ಕಲಿಯುತ್ತಾ ಅವನ ಮೆಚ್ಚುಗೆ ಗಳಿಸಿದ್ದು, ತಪ್ಪು ಮಾಡಿದಾಗ ಅವನಿಂದ ಬೈಸಿಕೊಳ್ಳುತ್ತಿದ್ದುದು, ಎಷ್ಟೋ ಬಾರಿ ತಾನು ಈ ವೈದ್ಯ ವೃತ್ತಿಯಿಂದ ಲೇ ಹೊರಗೆ ಬಂದು ಬಿಡಬೇಕೆಂದು ಯೋಚಿಸಿದ್ದು, ಕಡೆಗೆ ಡಾ.ಅಶೋಕಸೇನ್ ಅವರ ವೈದ್ಯಕೀಯ ಸಾಮರ್ಥ್ಯದಿಂದ ಆಕರ್ಷಿತಳಾಗಿ ತಾನೂ ಅವನಂತೆಯೇ ದೊಡ್ಡ ವೈದ್ಯೆಯಾಗುವ ಕನಸು ಕಂಡಿದ್ದು , ಬರಬರುತ್ತಾ ಅವನ ರೂಪಕ್ಕೆ ಮರುಳಾದದ್ದು...' ಎಲ್ಲವೂ ಅವಳ ಕಣ್ಮುಂದೆ ಹಾದು ಹೋಯಿತು.


ಡಾ. ಅಶೋಕ್ ಸೇನ್ ಈ ನಗರದಲ್ಲೇ ಹೆಸರು ಮಾಡಿರುವ ಪ್ರಖ್ಯಾತ ಸರ್ಜನ್. ಶಿಸ್ತಿನ ಸಿಪಾಯಿ ಹಾಗೂ ನೇರ ನುಡಿಯ ಡಾ.ಅಶೋಕ್ ನ ಕೈಕೆಳಗೆ ಕೆಲಸ ಕಲಿತು ಅವನ ಮೆಚ್ಚುಗೆ ಪಡೆಯುವುದೆಂದರೆ ಅಷ್ಟು ಸುಲಭದ ಮಾತಲ್ಲ.ಆದರೂ ಅವನ ಕೈಕೆಳಗೆ ಕೆಲಸ ಮಾಡುವ ಅವಕಾಶ ಕೆಲವರಿಗೆ ಮಾತ್ರ ದೊರಕುತ್ತಿತ್ತು.ಅಂತಹವರ ಪೈಕಿ ಡಾ.ಅಹನಾ ಒಬ್ಬಳು. ಅತ್ಯಂತ ಬುದ್ಧಿವಂತೆಯಾಗಿದ್ದ ಡಾ. ಅಹನಾ ಬಹಳ ಬೇಗ ಡಾ.ಅಶೋಕ್ ಸೇನ್ ಅವರ ಮೆಚ್ಚುಗೆ ಗಳಿಸಿದಳು.ಅವರ ಅಸಿಸ್ಟೆಂಟ್ ಆಗಿ ಭೇಷ್ ಅನ್ನಿಸಿಕೊಂಡಿದ್ದಳು ..ಇತ್ತೀಚೆಗಂತೂ ಅವರು ಅಹನಾಳನ್ನೇ ತನ್ನ ಸಹಾಯಕ್ಕೆ ಎಲ್ಲಾ ಸರ್ಜರಿಗೂ ತನ್ನ ಜೊತೆಗೆ ಕರೆದೊಯ್ಯುತ್ತಿದ್ದರು.


ಡಾ.ಅಶೋಕ್ ಸೇನ್ ಬಗ್ಗೆ ಯೋಚಿಸುತ್ತಲೇ , ಅವಳು ನರ್ಸಿಂಗ್ ಹೋಂ ತಲುಪಿದ್ದಳು. ಅವಳು ಒಳಗೆ ಹೋಗುತ್ತಿದ್ದಂತೆ, ರಿಸೆಪ್ಷನಿಸ್ಟ್ ಡಾ.ಅಶೋಕ್ ಸೇನ ಅವಳಿಗಾಗಿ ತನ್ನ ಚೇಂಬರ್ನಲ್ಲಿ ಕಾಯುತ್ತಿರುವ ವಿಷಯವನ್ನು ತಿಳಿಸಿದಾಗ, ಡಾ.ಅಹನಾ ಅತ್ತ ಕಡೆ ನಡೆದಳು.


'ಮೇ ಐ ಕಮಿನ್'ಎನ್ನುತ್ತಾ ಚೇಂಬರ್ ಒಳಕ್ಕೆ ಹೋದಾಗ, ಇವಳಿಗಾಗಿಯೇ ಕಾಯುತ್ತಿದ್ದ ಡಾ.ಅಶೋಕ್ ಸೇನ್, ಅವಳನ್ನು ತನ್ನೊಂದಿಗೆ ಎಮರ್ಜೆನ್ಸಿ ಆಪರೇಷನ್ಗೆ ಜೊತೆಯಾಗಿ ಬರಬೇಕೆಂದು ಆದೇಶಿಸಿ, ತಾನು ಹೊರನಡೆದಾಗ, ಅವನನ್ನು ಅನುಸರಿಸಿ ನಡೆದಳು. ಸುಮಾರು ಬೆಳಗಿನ ಜಾವದ ವೇಳೆಗೆ ಅಂದಿನ ಎಮರ್ಜೆನ್ಸಿ ಆಪರೇಷನ್ ಮುಗಿದಾಗ ,ಡಾ.ಅಶೋಕ್ , ಅವಳಿಗೆ "ಥ್ಯಾಂಕ್ಸ್" ಹೇಳಿ ಕಾಫಿ ತರಿಸಿದ್ದರು.ಅವಳ ನಿದ್ದೆಯನ್ನು ಕೆಡಿಸಿದ್ದಕ್ಕೆ ಸಾರಿ ಕೇಳಿದ್ದರು. ಅಂದು ಇಂಟರ್ನ್ ಆಗಿ ಸೇರಿದಾಗ   ಹುಡುಗಾಟವಾಡುತ್ತಿದ್ದ ಡಾ.ಅಹನಾಳ ಮೇಲೆ ರೇಗಾಡಿ ಕೂಗಾಡುತ್ತಿದ್ದ ಡಾಅಶೋಕ್ ಸೇನ್, ಇಂದು ಅವಳ ಬುದ್ಧಿವಂತಿಕೆ ಹಾಗೂ ಸಾಮರ್ಥ್ಯಕ್ಕೆ ಮೆಚ್ಚುಗೆ ಸೂಸುತ್ತಿದ್ದರು. ಈಗ ಅವರ ಕಣ್ಣುಗಳಲ್ಲಿ ಹೊಸ ನೋಟ ಇಣುಕುತ್ತಿದ್ದುದನ್ನು ಡಾ.ಅಹನಾ ಗಮನಿಸುತ್ತಿದ್ದಳು. ಮುಂದೆ ಡಾ.ಅಹನಾ ಒಬ್ಬ ಉತ್ತಮ ವೈದ್ಯೆಯಾಗಬಲ್ಲಳೆಂಬ ವಿಶ್ವಾಸ ಅವರಲ್ಲಿ ಮೂಡುತ್ತಿತ್ತು.ಅವರು ತನ್ನ ಎಲ್ಲಾ ಕೇಸ್ ಗಳಲ್ಲೂ ಡಾ.ಅಹನಾಳನ್ನೇ ತನ್ನ ಸಹಾಯಕ್ಕೆ ಕರೆಯುತ್ತಿದ್ದರು.

ಡಾ.ಅಹನಾಳೂ ಸಹ ಡಾ.ಅಶೋಕ್ ಸೇನ ನನ್ನು ಆರಾಧಿಸತೊಡಗಿದಳು.ಅವರ ಕೈಕೆಳಗೆ ಅವರ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದರೆ ತನಗೆ ಉತ್ತಮ ಭವಿಷ್ಯ ಇದೆ ಎಂದು ಬಲವಾಗಿ ನಂಬಿದ್ದಳು.ಅವರು ಎಷ್ಟು ಹೊತ್ತಿಗೆ ಕರೆ ಕಳುಹಿಸಿದರೂ, ಅವಳು ಇಲ್ಲವೆನ್ನುತ್ತಿರಲಿಲ್ಲ.


ಹೀಗೆ ಪ್ರಾರಂಭವಾದ ಇವರಿಬ್ಬರ ಕೆಮಿಸ್ಟ್ರಿ ಬರಬರುತ್ತಾ ತುಂಬಾ ಚೆನ್ನಾಗಿ ಹೊಂದಿಕೊಳ್ಳತೊಡಗಿತು. ಒಂದು ವರ್ಷದೊಳಗೆ ಡಾ.ಅಹನಾ, ಡಾ.ಅಶೋಕ ಸೇನರಿಂದ ಆಕರ್ಷಿತಳಾಗಿ, ತನ್ನ ಮನದಲ್ಲಿ ಅವರನ್ನು ಆರಾಧಿಸತೊಡಗಿದಳು.ಡಾ.ಅಶೋಕ್ ಸಹ ಅಹನಾಳನ್ನು ಒಳಗೊಳಗೇ ಪ್ರೀತಿಸತೊಡಗಿದ. ಹೀಗೆ ಜೊತೆ ಜೊತೆಗೆ ಒಟ್ಟಿಗೆ ಕೆಲಸ ಮಾಡುತ್ತಿದ್ದ ಡಾ.ಅಶೋಕ್ ಹಾಗೂ ಡಾ.ಅಹನಾಳ ನಡುವಿನ ಮೆಚ್ಚುಗೆ ಬರಬರುತ್ತಾ ಪ್ರೀತಿಯಾಗಿ ತಿರುಗಿತು.ಆದರೆ ಇದನ್ನು ಹೊರಗಡೆ ವ್ಯಕ್ತಪಡಿಸಿ

ಒಬ್ಬರಿಗೊಬ್ಬರು ಹೇಳಿಕೊಳ್ಳದಿದ್ದರೂ, ಇಬ್ಬರೂ ತಮ್ಮ ಪ್ರೀತಿಯನ್ನು ಹೃದಯದೊಳಗೇ ಹುದುಗಿಸಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದರು.

ಇದಕ್ಕೆ ಕಾರಣವಿರದಿರಲಿಲ್ಲ.ಡಾ.ಅಶೋಕ್ ಸೇನ್ ಸಾಂಸಾರಿಕವಾಗಿ ತುಂಬಾ ನೋವನ್ನು ಅನುಭವಿಸಿದ್ದರು. ಮೂವತ್ತೆರಡರ ಹರೆಯದ ಅವರು ಮದುವೆಯಾದ ಒಂದೆರಡು ತಿಂಗಳಿನಲ್ಲೇ, ತಮ್ಮ ಹೆಂಡತಿಯನ್ನು ಕಳೆದುಕೊಂಡಿದ್ದರು. ತಮ್ಮ ವೈಯಕ್ತಿಕ ಬದುಕಿನ ನೋವನ್ನು ಮರೆಯಲು ಸದಾ ಕಾಲ ನರ್ಸಿಂಗ್ ಹೋಂನಲ್ಲೆ ಇರುತ್ತಾ ರೋಗಿಗಳ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ಮನೆಯಲ್ಲಿ ಅವರಿಗೆ ಮತ್ತೊಂದು ಮದುವೆಯಾಗುವಂತೆ ಒತ್ತಾಯ ಹಾಕುತ್ತಿದ್ದರೂ, ಅದನ್ನು ಕಿವಿಗೆ ಹಾಕಿಕೊಂಡಿರಲಿಲ್ಲ. ತಮ್ಮ ಜೀವನದಲ್ಲಾದ ಕಹಿಯನ್ನು ಮರೆತು ನಗುನಗುತ್ತಾ ರೋಗಿಗಳ ಸೇವೆ ಮಾಡುತ್ತಿದ್ದರು. ಇವರ ಈ ವೈಯ್ಯಕ್ತಿಕ ವಿಷಯ ಮನೆಯವರನ್ನು ಬಿಟ್ಟು ಹೊರಗಿನವರಾರಿಗೂ ತಿಳಿದಿರಲಿಲ್ಲ. ತಮ್ಮ ಹಳೆಯನೆನಪುಗಳಿಂದ ಹೊರ ಬರಲು ಅವರು ಕೊಲ್ಕತ್ತಾದಿಂದ ಬೆಂಗಳೂರಿಗೆ ಬಂದು ನೆಲೆಯೂರಿದ್ದರು.

ಆದರೆ ಇತ್ತೀಚೆಗೆ ಅವರ ಮನಸ್ಸು ಡಾ.ಅಹನಾಳತ್ತ ತಿರುಗಿತ್ತು.ಡಾ.ಅಹನಾಳಿಗೂ ಡಾ.ಅಶೋಕ್ ಸೇನ್ ಬಗ್ಗೆ ಗೌರವ ಮಿಶ್ರಿತ ಪ್ರೀತಿ ಬೆಳೆಸಿಕೊಂಡು ಬಿಟ್ಟಿದ್ದಳು. ಅವರನ್ನು ಒಂದು ದಿನ ನೋಡಲಾಗದಿದ್ದರೂ ಅವಳ ಮನಸ್ಸು ಚಡಪಡಿಸುತ್ತಿತ್ತು. ಇತ್ತೀಚೆಗೆ ಅವರ ಆಳವಾದ ನೋಟದಲ್ಲಿ ಪ್ರೀತಿಯನ್ನು ಅರಸುತ್ತಿದ್ದಳು.


ಮನೆಯಲ್ಲಿ ತನಗೆ ಮದುವೆಗೆ ಪ್ರಯತ್ನ ಮಾಡುತ್ತಿದ್ದಾಗ, ಅವಳು ಸಧ್ಯಕ್ಕೆ ತನಗೆ ಮದುವೆ ಬೇಡವೆಂದು ತಿಳಿಸಿಬಿಟ್ಟಿದ್ದಳು.

ಇಬ್ಬರೂ ತಮ್ಮೊಳಗೇ ಬಚ್ಚಿಟ್ಟುಕೊಂಡಿದ್ದ ವಿಷಯವನ್ನು ಹೊರಗೆ ತಿಳಿಸುವ ಅವಕಾಶವೇ ಬಂದಿರಲಿಲ್ಲ."ತಾನು ಹೆಂಡತಿ ಕಳೆದುಕೊಂಡಿರುವ ವಿಧುರ, ಮೇಲಾಗಿ ಬೆಂಗಾಲಿ, ಡಾ.ಅಹನಾ ಈಗಷ್ಟೇ ವೈದ್ಯಕೀಯ ವೃತ್ತಿಗೆ ಕಾಲಿಟ್ಟಿರುವ ಹುಡುಗಿ, ಅವಳ ಮನೆಯಲ್ಲಿ ಏನನ್ನುತ್ತಾರೋ? ಹೇಗೆ ತಿಳಿಸುವುದು?" ಎಂದು ಡಾ.ಅಶೋಕ್ ಸೇನ್ ಯೋಚಿಸುತ್ತಿದ್ದರೆ,


"ತಾನಿನ್ನೂ ಈ ವೃತ್ತಿಗೆ ಕಾಲಿಟ್ಟವಳು,ಡಾ.ಅಶೋಕ್ ತನ್ನ ಬಾಸ್,ತಾನು ಅವರಿಗೆ ತನ್ನ ಮನದಿಚ್ಛೆಯನ್ನು ಹೇಗೆ ತಿಳಿಸುವುದು? ಇದೆಲ್ಲಾ ಎಷ್ಟು ಸರಿ?ಅದೂ ಅಲ್ಲದೆ ಅಪ್ಪಟ ಬೆಂಗಳೂರು ಕನ್ನಡಿಗರಾದ ನಮ್ಮ ಮನೆಯವರು ಬೆಂಗಾಲಿ ಹುಡುಗನನ್ನು ಒಪ್ಪುತ್ತಾರೆಯೆ?" ಎಂದು ಡಾ.ಅಹನಾ ಯೋಚಿಸುತ್ತಿದ್ದಳು.


ಈ ತೊಳಲಾಟದಲ್ಲೇ ಇನ್ನಾರು ತಿಂಗಳು ಕಳೆಯಿತು. ಡಾ.ಅಹನಾ ಅದೇ ನರ್ಸಿಂಗ್ ಹೋಂನಲ್ಲಿ ರೆಗ್ಯುಲರ್ ಡಾಕ್ಟರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದೂ ಆಯಿತು. ಆದರೂ ಇಬ್ಬರೂ ತಮ್ಮ ಪ್ರೀತಿಯನ್ನು ಒಬ್ಬರಿಗೊಬ್ಬರು ತಿಳಿಸಲು ಹಿಂಜರಿಯುತ್ತಿದ್ದರು.


ಒಂದು ಬಾರಿ ಮೆಡಿಕಲ್ ಕಾನ್ಫರೆನ್ಸಗೆ ಡಾ.ಅಶೋಕ್ ಸೇನನೊಂದಿಗೆ ದೆಹಲಿಗೆ ಹೋಗುವ ಅವಕಾಶ ಡಾ.ಅಹನಾಳಿಗೆ ದೊರಕಿದಾಗ, ಇಬ್ಬರೂ ತಮ್ಮ ಪ್ರೇಮ ನಿವೇದನೆಯನ್ನು ಮಾಡಿಕೊಂಡಿದ್ದರು. ಡಾ.ಅಶೋಕ್ ಸೇನ್ ಇದುವರೆಗೆ ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನೆಲ್ಲಾ ಹೇಳಿ, ಈಗ ತಮ್ಮ ಮನದೊಳಗೆ ಇರುವ ಪ್ರೀತಿಯನ್ನು ಡಾ.ಅಹನಾಳ ಮುಂದೆ ತೆರೆದಾಟ್ಟಾಗ, ಡಾ.ಅಶೋಕನನ್ನು ಮನಸ್ಸಿನಲ್ಲೇ ಆರಾಧಿಸುತ್ತಿದ್ದ ಡಾ.ಅಹನಾಗೆ ಸ್ವರ್ಗಕ್ಕೆ ಮೂರೇ ಗೇಣು ದೊರೆಯುವಂತಾಯಿತು. ಅವಳೂ ಸಹ ಸಂತೋಷದಿಂದ ಒಪ್ಪಿಗೆ ನೀಡಿದ್ದಳು.


ಹೀಗೆ ಪ್ರಾರಂಭವಾದ ಇವರಿಬ್ಬರ ಒಲವು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋಯ್ತು. ಆದರೆ ಇಬ್ಬರೂ ಸಹ ತಮ್ಮ ಮನೆಗಳಲ್ಲಿ ಈ ವಿಷಯವನ್ನು ಇನ್ನೂ ತಿಳಿಸಿರಲಿಲ್ಲ..ಇಬ್ಬರ ಪ್ರೀತಿ ಗಟ್ಟಿಯಾಗಿ ಮುಂದುವರಿದಿದ್ದು, ಎಂದಾದರೊಂದು ದಿನ ಈ ವಿಷಯವನ್ನು ಮನೆಯವರಿಗೆ ತಿಳಿಸಬೇಕೆಂದು ತೀರ್ಮಾನಿಸಿದರು.

ಇತ್ತ ಡಾ.ಅಹನಾಗೆ ಮನೆಯಲ್ಲಿ ಮದುವೆಗೆ ಗಂಡು ಹುಡುಕಲು ಶುರು ಮಾಡಿದಾಗ, ಅವಳು ತಾನು ತನ್ನ ಡೀನ್ ‌ಡಾ.ಅಶೋಕ್ ಸೇನ್ ಅವರನ್ನು ಪ್ರೀತಿಸುತ್ತಿರುವ ವಿಷಯ ತಿಳಿಸಿ ಅವರನ್ನೇ ಮದುವೆಯಾಗುವುದಾಗಿ ತಿಳಿಸಿ ಬಿಟ್ಟಳು.


ಡಾ.ಅಶೋಕ್ ಸೇನಗೆ ತಂದೆ ತಾಯಿ ಇಲ್ಲದಿದ್ದುದ್ದರಿಂದ, ಅವರು, ತಮ್ಮ ಅಣ್ಣನಿಗೆ ತನ್ನ ಮತ್ತು ಡಾ.ಅಹನಾಳ ಪ್ರೀತಿಯು ವಿಷಯ ತಿಳಿಸಿದಾಗ, ಅವನ ಅಣ್ಣ ಅರುಣ್, ತಮ್ಮನ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದರು. ಈ ಮದುವೆಗೆ ಡಾ.ಅಶೋಕನಿಂದ ಗ್ರೀನ್ ಸಿಗ್ನಲ್ ಸಿಕ್ಕಿದರೂ, ಡಾ.ಅಹನಾಳ ಮನೆಯಲ್ಲಿ ಈ ಮದುವೆಗೆ ಒಪ್ಪಲಿಲ್ಲ. ಇದಕ್ಕೆ ಮುಖ್ಯ ಕಾರಣ  ಇಬ್ಬರ ಕುಟುಂಬಗಳ ನಡುವೆ ಇರುವ ಧಾರ್ಮಿಕ ಸಂಪ್ರದಾಯಗಳ ಅಂತರ ಹಾಗೂ ವಯಸ್ಸಿನ ಅಂತರ. ಮೇಲಾಗಿ ಈಗಾಗಲೇ ಮದುವೆಯಾಗಿ ವಿಧುರನಾಗಿರುವವನಿಗೆ , ನಮ್ಮ ಪಂಗಡದವನಲ್ಲವನಿಗೆ ಮಗಳನ್ನು ಹೇಗೆ ಮದುವೆ ಮಾಡಿಕೊಡುವುದು? ಅಹನಾಳ ತಂದೆ ಅನಿರುದ್ಧ ಹಾಗೂ ತಾಯಿ ಅರುಂಧತಿ ವಿಷಯ ತಿಳಿದು ಹೌಹಾರಿದರು. ಹುಡುಕಿದರೆ ನಮ್ಮ ಜನಾಂಗದಲ್ಲೇ ಡಾ.ಅಶೋಕ್ ಸೇನನನ್ನು ಮೀರಿಸುವ, ವಿದೇಶಗಳಲ್ಲಿ ನೆಲೆಸಿರುವ ಬೇಕಾದಷ್ಟು ಹುಡುಗರು ಸಿಗುವುದಿಲ್ಲವೆ?ಎಂದು ಗುಡುಗಾಡಿ ಈ ಮದುವೆಗೆ ತಮ್ಮ ಒಪ್ಪಿಗೆ ಇಲ್ಲವೆಂದು ಬಿಟ್ಟಾಗ, ಅಹನಾ ಕೂಡ ತನ್ನ ನಿರ್ಧಾರವನ್ನು ತಿಳಿಸಿದಳು.

 ತಾನು ಡಾ.ಅಶೋಕನ ಬಿಟ್ಟು ಬೇರೆ ಯಾರನ್ನೂ ಮದುವೆಯಾಗುವುದಿಲ್ಲವೆಂದು ಪಟ್ಟು ಹಿಡಿದಾಗ, ಅವಳ ತಂದೆ ತಾಯಿಯರು ಅಸಹಾಯಕರಾದರು. ಎಷ್ಟು ಹೇಳಿದರೂ ಡಾ.ಅಹನಾ ತನ್ನ ಹಠ ಬಿಡದಿದ್ದಾಗ ಅವಳ ತಂದೆ ತಾಯಿಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಕಡೆಗೆ ಅವರಿಬ್ಬರೂ ಡಾ.ಅಶೋಕ್ ಜೊತೆ ಮಾತುಕತೆ ನಡೆಸಿ, ತಮ್ಮ ಅನುಮಾನಗಳನ್ನು ಅವರೊಂದಿಗೆ ಚರ್ಚಿಸಿದ್ದೂ ಆಯಿತು. ಅವರೊಂದಿಗೆ ಮಾತನಾಡಿದ ಮೇಲೆ ಅವರು ಬೆಂಗಾಲಿ ಎಂಬುದನ್ನು ಬಿಟ್ಟರೆ, ಅವರನ್ನು ಅಳಿಯನನ್ನಾಗಿ ಒಪ್ಪಿಕೊಳ್ಳದಿರಲು ಬೇರೆ ಯಾವ ಕಾರಣವೂ ಇರಲಿಲ್ಲ. ಆದರೆ ತಮ್ಮ ಮಗಳ ವಯಸ್ಸಿಗೆ ಅವನು ಸ್ವಲ್ಪ ದೊಡ್ಡವನೆನಿಸಿತು. ಈ ಅಂತರವೂ ಸರಿಯಿಲ್ಲವೆಂಬುದು ಡಾ.ಅಹನಾಳ ತಂದೆತಾಯಿಯ ವಾದವಾಗಿತ್ತು. ಮಗಳಿಗೆ ಮನಸ್ಸು ಬದಲಾಯಿಸುವಂತೆ ಸ್ವಲ್ಪ ಕಾಲಾವಕಾಶ ನೀಡಿ, ಸುಮ್ಮನಾದರು.


ಇತ್ತ ಡಾ.ಅಶೋಕ್ ಹಾಗೂ ಡಾ.ಅಹನಾ ಇನ್ನೂ ಹತ್ತಿರವಾಗತೊಡಗಿದರು .ಮೆಡಿಕಲ್ ಕಾನ್ಫರೆನ್ಸ್ ಗಳಿಗೆ ಒಟ್ಟಿಗೆ ಹೋಗುತ್ತಿದ್ದರು. ಇವರಿಬ್ಬರ ಓಡಾಟವನ್ನು ನೋಡುತ್ತಾ ಇದ್ದ ನರ್ಸಿಂಗ್ ಹೋಂನಲ್ಲಿ ಇವರ ಬಗ್ಗೆಗುಸುಗುಸು ಪಿಸುಪಿಸು ಶುರುವಾಗಿತ್ತು.

ಡಾ.ಅಹನಾಳ ತಂದೆ ತಾಯಿಗೆ ಇದೊಂದು ‌ಸಂದಿಗ್ಧವಾಯಿತು. ಅವರಿಗೆ ಇವರಿಬ್ಬರ ಒಡನಾಟವನ್ನು ಬೇರ್ಪಡಿಸುವುದಕ್ಕೆ ಯಾವುದೇ ದಾರಿ ತೋಚಲಿಲ್ಲ. ಮದುವೆಯ ವಿಷಯದಲ್ಲಿ ಬೆಳೆದ ಮಗಳ ವಿರೋಧ ಕಟ್ಟಿಕೊಳ್ಳಲು ಆಗಲಿಲ್ಲ.


"ತನ್ನ ಮುಂದಿನ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಡಾ.ಅಶೋಕನಿಂದ ಮಾತ್ರ ಸಾಧ್ಯ, ವೈವಾಹಿಕ ಜೀವನದ ಸಾಧಕ ಬಾಧಕಗಳನ್ನು ನಾವು ಈಗಾಗಲೇ ಚರ್ಚಿಸಿದ್ದೇವೆ, ಇದರ ಬಗ್ಗೆ ನೀವು ಚಿಂತಿಸುವ ಅಗತ್ಯವಿಲ್ಲ. ಎಲ್ಲಕ್ಕೂ ಹೆಚ್ಚಾಗಿ ನಾವಿಬ್ಬರಿಗೂ ಒಬ್ಬರನ್ನೊಬ್ಬರು ಬಿಟ್ಟು ಬದುಕಲು ಸಾಧ್ಯವಿಲ್ಲ. ನಮ್ಮಿಬ್ಬರ ಮನಸ್ಸು ಒಂದಾದ ಮೇಲೆ ವಯಸ್ಸಿನ ಅಂತರವಾಗಲೀ , ಸಾಂಪ್ರದಾಯಿಕ ಭೇದವಾಗಲೀ ನಮ್ಮನ್ನು ಕಾಡುವುದಿಲ್ಲ. ಮದುವೆಯಾದರೆ ಡಾ.ಅಶೋಕ್ ಅವರನ್ನೇ, ಇಲ್ಲವಾದರೆ ಮದುವೆಯಾಗದೆ ಹೀಗೆ ಉಳಿದು ಬಿಡುತ್ತೇನೆ" ಮಗಳು ಡಾ.ಅಹನಾ ಹೀಗೆ ಪಟ್ಟು ಹಿಡಿದಾಗ,

ಅವಳ ತಾಯಿ ಅರುಂಧತಿ ಹಾಗೂ ತಂದೆ ಅನಿರುಧ್ ಅಸಹಾಯಕರಾದರು. ಕಡೆಗೆ ಅವರಿಬ್ಬರೂ ಗಟ್ಟಿ ಮನಸ್ಸು ಮಾಡಿ, ದೇವರ ಮೇಲೆ ಭಾರ ಹಾಕಿ, ಇಬ್ಬರ ಮದುವೆಗೆ ಒಪ್ಪಿಗೆ ನೀಡಿದಾಗ ಡಾ.ಅಹನಾ ಖುಷಿಯಿಂದ ಕುಣಿದಾಡಿದಳು.


ಮುಂದೆ ಒಂದು ಶುಭ ಮುಹೂರ್ತದಲ್ಲಿ ಡಾ.ಅಶೋಕ್ ಸೇನ್ ಹಾಗೂ ಡಾ.ಅಹನಾ ಸತಿಪತಿಗಳಾದರು. ತಮ್ಮ ನಡುವೆ ಅಡ್ಡವಾಗಿದ್ದ ಎಲ್ಲಾ ಅಂತರಗಳನ್ನು ಮೀರಿ, ತಮ್ಮ ಪ್ರೀತಿ ಗೆದ್ದುದರ ಬಗ್ಗೆ ಇಬ್ಬರಿಗೂಖುಷಿಯಾಗಿತ್ತು. ತಮ್ಮ ಮಗಳು ಹಾಗೂ ಅಳಿಯ ನೂರು ಕಾಲ ನೆಮ್ಮದಿಯಿಂದ ಚೆನ್ನಾಗಿ ಬಾಳಲಿ ಎಂದು ಡಾ.ಅಹನಾಳ ತಂದೆ ತಾಯಿ ಹಾರೈಸಿದರು.


ಮದುವೆಯ ದಿನದ ಮೊದಲ ರಾತ್ರಿ ,ಡಾ.ಅಹನಾ ಕೇಸರಿಹಾಲನ್ನು ಹಿಡಿದು ಡಾಅಶೋಕ್ ಹತ್ತಿರ ಬಂದಾಗ , ಸಂತೋಷದಿಂದ ಮಂದಸ್ಮಿತಳಾಗಿ ಹತ್ತಿರ ಬಂದ ಮಡದಿಯ ಕೈ ಹಿಡಿದು, ತನ್ನ ಪಕ್ಕದಲ್ಲಿ ಕೂರಿಸಿಕೊಂಡ ಡಾ.ಅಶೋಕ್. ನಾಚಿಕೆಯಿಂದ ತಲೆ ತಗ್ಗಿಸಿಕೊಂಡು ಕುಳಿತಿದ್ದ ಡಾ.ಅಹನಾಳ ಮುಖವನ್ನು ತನ್ನ ಕಡೆಗೆ ತಿರುಗಿಸಿಕೊಂಡು, ಅವಳನ್ನು ತೋಳಿನಲ್ಲಿ ಬಂಧಿಸಿ, "ಕಂಗ್ರಾಜುಲೇಷನ್ಸ ಮೈ ಡಿಯರ್ ಡಾ.ಅಹನಾ ಅಶೋಕ್" ಎಂದು ಪಿಸುಗುಟ್ಟಿದಾಗ ಅವರನ್ನು ನೇರವಾಗಿ ನೋಡಲಾಗದೆ, ಡಾ.ಅಹನ ಅವರ ಎದೆಗೊರಗಿ ಕಣ್ಮುಚ್ಚಿಕೊಂಡಳು. ಇಬ್ಬರ ಮನೋಭೀಷ್ಟಗಳು ನೆರವೇರಿ, ಸುಖಾಂತ್ಯವಾಗಿತ್ತು. ಈ ಪ್ರೇಮಿಗಳಿಬ್ಬರ ಸಮಾಗಮವನ್ನು ಕಿಟಿಕಿಯ ಮರೆಯಿಂದ ನೋಡುತ್ತಿದ್ದ ಚಂದ್ರ ನಸುನಗುತ್ತಿದ್ದ.


....ಶುಭಂ





Rate this content
Log in

Similar kannada story from Abstract