Vijaya Bharathi

Drama Romance Others

4.3  

Vijaya Bharathi

Drama Romance Others

ಯಾರು ಹಿತವರು

ಯಾರು ಹಿತವರು

7 mins
482



ಕನ್ನಡಿಯ ಮುಂದೆ ಕುಳಿತು ಮದುವೆ ಮನೆಗೆ ಹೊರಡಲು ಮುಖಕ್ಕೆ ಮೇಕಪ್ ಮಾಡಿಕೊಳ್ಳುತ್ತಿದ್ದ ಸಿರಿಯನ್ನು ಅವಳ ಗಂಡ ಸುನಿಲ್ ಅವಸರಿಸಿದ. 

"ಸಿರಿ, ಕಮಾನ್ ಹರಿ ಅಪ್, ನೀವು ಹೆಂಗಸರು ಮದುವೆಗೆ ಹೊರಡಬೇಕೆಂದರೆ ಮದುವೆ ಹುಡುಗಿಯನ್ನು ಮೀರಿಸುವಂತೆ ಅಲಂಕಾರ ಮಾಡಿಕೊಳ್ಳುತ್ತಾ ಕುಳಿತುಬಿಡುತ್ತೀರ! ನಾವು ಹೋಗುವ ವೇಳೆಗೆ ಮುಹೂರ್ತ ಮುಗಿದೇ ಹೋಗತ್ತೆ. ಬೇಗ ರೆಡಿ ಆಗು.ನಾನು ಹೊರಗೆ ಕಾಯುತ್ತಿರುತ್ತೇನೆ."

ಸುನಿಲ್ ಅವಳತ್ತ ಗಮನಿಸಿದಯೇ ಹೊರಗೆ ಹೊರಟೇ ಹೋದಾಗ, ಸಿರಿಗೆ ನಿರಾಸೆಯಾಯಿತು. ತನ್ನ ಗಂಡ  ತನ್ನ ಈ ವಿಶೇಷ ಅಲಂಕಾರವನ್ನು ನೋಡಿ ವಿಸ್ಮಯಗೊಂಡು ಒಂದು ಮೆಚ್ಚುಗೆಯ ನೋಟ, ಬೆಚ್ಚಗಿನ ಆಲಿಂಗನ, ಪ್ರೀತಿಯ ಹೂಮುತ್ತು ನೀಡಬಹುದೆಂಬ ಕಲ್ಪನೆಯಲ್ಲಿದ್ದ ಅವಳಿಗೆ, ಅವನು ತನ್ನತ್ತ ತಿರುಗಿಯೂ ನೋಡದೆ ಹೊರಟೇ ಬಿಟ್ಟಾಗ ನಿರಾಸೆಯಾಯಿತು. ಆ ಕ್ಷಣಕ್ಕೆ ಅವಳ ಮನಸ್ಸು ತನ್ನ ಮಾಜಿ ಗಂಡ ಸಂದೀಪ್ನನ್ನು ನೆನೆಯಿತು. ಅಬ್ಬ, ಅವನೆಂತಹ ರಸಿಕ!

"ನಾನು ಅಲಂಕಾರ ಮಾಡಿಕೊಂಡದ್ದನ್ನು ನೋಡಿಬಿಟ್ಟರಂತೂ ನನ್ನನ್ನು ಬಿಡುತ್ತಲೇ ಇರಲಿಲ್ಲ. ಅವನ ವಿದ್ಯುದಾಲಿಂಗನದಲ್ಲಿ ನಾನು ಬಾಡಿಹೋಗುತ್ತಿದ್ದೆ. ಎಲ್ಲಿಗಾದರೂ ಸಮಾರಂಭಕ್ಕೆ ಹೋಗಬೇಕೆಂದರೆ, ಯಾವ ಸೀರೆ ಉಡಬೇಕು?,ಯಾವ ಡ್ರೆಸ್ ಗಳನ್ನು ಯಾವ ಅಕೇಶನ್ ನಲ್ಲಿ ಹಾಕಬೇಕು?, ಯಾವ ರೀತಿಯ ಹೇರ್ ಸ್ಟೈಲ್, ಯಾವ ಒಡವೆಯ ಸೆಟ್ ಹಾಕಬೇಕು ಎಲ್ಲವನ್ನೂ ಅವನೇ ನಿರ್ಧರಿಸುತ್ತಿದ್ದ. ಒಮ್ಮೊಮ್ಮೆ ಅವನ ಈ ರೀತಿಯ ಎಂಟರ್ಫಿಯರೆನ್ಸ್ ನನಗೆ ದಬ್ಬಾಳಿಕೆ ಎನಿಸುತ್ತಿತ್ತು. ಅಷ್ಟೇ ಅಲ್ಲದೆ ಅವನ ಅತಿಯಾದ ಕಾಳಜಿಯಿಂದ ನನ್ನ ಸ್ವಾತಂತ್ರ್ಯ

ಹರಣವೆನಿಸುತ್ತಿತ್ತು. ಯಾಕೋ ಈ ಕ್ಷಣದಲ್ಲಿ ಅವನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೇನೋ ಎಂದನಿಸುತ್ತಿದೆ. ಆದರೆ ಸುನಿಲನದೇ ಬೇರೆ ರೀತಿ. ಅವನು ನನ್ನ ವಿಷಯಕ್ಕೆ ಬರುವುದೇ ಇಲ್ಲ. ಅವನಿಗೆ ನನ್ನ ಅಲಂಕಾರ, ನನ್ನ ಮನಸ್ಸಿನ ಭಾವನೆಗಳಿಗೆ ಜಾಗ ಇಲ್ಲ. ಪ್ರಾಕ್ಟಿಕಲ್ ಮನುಷ್ಯ. 


"ಸಿರಿ,ಇನ್ನೂ ಮುಗಿಯಲ್ಲಿಲ್ಲವ ನಿನ್ನ ಅಲಂಕಾರ. ನಿನಗಾಗಿ ಹೊರಗಡೆ ಅಮ್ಮ, ಅಪ್ಪ ಎಲ್ಲರೂ ಕಾಯುತ್ತಿದ್ದಾರೆ.ಬೇಗ ಬೇಗ ಬಾ" ಸುನಿಲ್ ಮತ್ತೆ ರೂಮಿನೊಳಗೆ ಬಂದಾಗ, ತನ್ನ ಆಲೋಚನಾ ಲಹರಿಯಿಂದ ಹೊರ ಬಂದ ಸಿರಿ, "ಸಾರಿ ರೀ, ನಾನು ಯಾವ ಸೀರೆ ಉಡಲಿ ಎಂದು ಗೊತ್ತಾಗುತ್ತಾ ಇಲ್ಲ. ನೀವೇ ಸೆಲೆಕ್ಟ್ ಮಾಡಿ " ಎನ್ನುತ್ತಾ ಬೀರುವಿನ ಕಡೆ ಹೊರಟಾಗ,

" ಅಯ್ಯೋ, ನನಗೆ ಅವೆಲ್ಲಾ ಏನೂ ತಿಳಿಯದು. ನಿನಗೆ ಯಾವುದು ಬೇಕೋ ಅದನ್ನೇ ಉಟ್ಕೊಂಡು ಬೇಗ ಹೊರಡು ಮಾರಾಯ್ತಿ" ಎನ್ನುತ್ತಾ ಅವನು ಹೊರಗೆ ಹೊರಟೇಬಿಟ್ಟಾಗ, ಅವಳಿಗೆ ತುಂಬಾ ಬೇಸರವೆನಿಸಿತು. ಕಡೆಗೆ ಸಂದೀಪ್ ತೆಗೆದುಕೊಟ್ಟಿದ್ದ ಕೆಂಪು ಬುಟ್ಟ ಜರಿಯಿರುವ ಬನಾರಸ್ ಸೀರೆಯನ್ನೇ ಉಟ್ಟುಕೊಳ್ಳಲು ನಿರ್ಧರಿಸಿ ಅದನ್ನೇ ಉಟ್ಟುಕೊಳ್ಳುತ್ತಿರುವಾಗ, 

ಆ ಸೀರೆಯೊಂದಿಗೆ ಅವನಿತ್ತಿದ್ದ ಸಿಹಿನೆನಪುಗಳು ಕಾಡಿ ವಿಷಾದದ ನಗೆ ಮೂಡಿತು.


ಸಿರಿ ರೆಡಿಯಾಗಿ ಹೊರಗೆ ಬಂದ ನಂತರ ಎಲ್ಲರೂ ಹೊರಟರು. ಕಾರಿನ ಮುಂದುಗಡೆ ಸುನಿಲ್ ಮತ್ತು ಅವನ ತಂದೆ, ಹಿಂದುಗಡೆ ಸಿರಿ ತನ್ನ ಅತ್ತೆಯ ಜೊತೆ ಕುಳಿತಾಗ ಅವಳಿಗೆ ಮನ್ನಸ್ಸು ಚಿಕ್ಕದಾಯಿತು. ಇಷ್ಟೆಲ್ಲಾ ಅಲಂಕಾರ ಮಾಡಿಕೊಂಡು ಗಂಡನ ಪಕ್ಕದಲ್ಲಿ ಕುಳಿತು ಹೋಗುವ ಅವಳ ಆಸೆ ಮತ್ತೆ ಮುದುಡಿತು. ಆ ಮನೆಯಲ್ಲಿ ಅದೇ ಪದ್ದತಿಯೆಂಬುದು ಮದುವೆಯಾದ ಕೆಲದಿನದೊಳಗೆ ತಿಳಿಯಿತು. ಈ ಮನೆಯಲ್ಲಿ ದೊಡ್ಡವರೆನಿಸಿಕೊಂಡವರಿಗೇಕೆ ಕೆಲವು ಸೂಕ್ಷ್ಮಗಳು ತಿಳಿಯುವುದಿಲ್ಲವೆಂದುಕೊಳ್ಳುತ್ತಲೇ ಇದ್ದಳು. ಆದರೆ ಅವಳಿಗೆ ಯಾವುದನ್ನೂ ಬಾಯಿ ಬಿಟ್ಟು ಕೇಳಲಾಗುತ್ತಿರಲಿಲ್ಲ.  ಮದುವೆ ಮುಗಿಸಿಕೊಂಡು ವಾಪಸ್ ಬರುವ ವೇಳೆಗೆ ಅವಳಿಗೆ ಜೋರಾಗಿ ತಲೆನೋವು ಪ್ರಾರಂಭವಾಗಿತ್ತು. ಮನೆಗೆ ಬಂದಕೂಡಲೆ ಬಟ್ಟೆ ಬದಲಿಸಿ, ಮಂಚದ ಮೇಲೆ ಅಡ್ಡಾದಳು. ಅವಳಿಗೆ ಒಳ ಹೊರಗಿನ ಶೆಕೆ ಜಾಸ್ತಿಯಾಗಿ ಜೋರಾಗಿ ಫ್ಯಾನ್ ಹಾಕಿ ,ಆ ಫ್ಯಾನ್ ತಿರುಗುವುದನ್ನೇ ನೋಡುತ್ತ ಹಾಗೆ ಮಲಗಿದಳು. ತಲೆ ನೋಯುತ್ತಿದ್ದರೂ ನಿದ್ರೆ ಬರಲಿಲ್ಲ. ಹೋಗಲಿ, ಗಂಡ ಸುನಿಲ್ ಪಕ್ಕದಲ್ಲಿದ್ದಿದ್ದರೆ ಏನಾದರು ಮಾತಾಡುತ್ತಾ ಕಾಲ ಕಳೆಯಬಹುದಾಗಿತ್ತು. ಅವನು ಹೋಗಿ ಹಜಾರದ ಸೋಫಾದ ಮೇಲೆ ಅಡ್ಡಾಗಿ, ಟಿ.ವಿ.ಜೋರಾಗಿ ಹಾಕಿಕೊಂಡು ಮಲಗಿದ್ದ. ತಲೆನೋವಿನಿಂದ ಬಳಲುತ್ತಿದ್ದ ಅವಳಿಗೆ ಹೊರಗಿನಿಂದ ಕೇಳುತ್ತಿದ್ದ ಟಿ.ವಿ. ಶಬ್ದಕ್ಕೆ ತಲೆ ಚಚ್ಚಿಕೊಳ್ಳುವಂತಾಯಿತು.


''ಮದುವೆಯಾಗಿ ಹತ್ತಿರ ಹತ್ತಿರ ಆರು ತಿಂಗಳು ಕಳೆಯುತ್ತಾ ಬಂದರೂ, ಅವನೇಕೋ ನನ್ನಿಂದ ಸ್ವಲ್ಪ ದೂರವಾಗೇ ಇರುತ್ತಾನೆ. ಸಂದೀಪನೊಂದಿಗೆ ಅಷ್ಟೊಂದು ಹರಟುತ್ತಿದ್ದ ನನಗೆ ಸುನಿಲನ ಗಂಭೀರ ಮುಖವನ್ನು ನೋಡಿದಾಗ, ಮಾತು ಹೊರಗೆ ಬರಲು ಹಿಂಜರಿಯುತ್ತದೆ. ಅಯ್ಯೋ ದೇವರೆ ಈ ಎರಡನೇ ಮದುವೆಯೂ ಸರಿ ಹೋಗುವುದೋ ಇಲ್ಲವೋ ?" ತುಂಬಾ ಬೇಸರವಾಗಿ ದುಃಖ ತಡೆಯಲಾಗದೆ ಬಿಕ್ಕಿ ಬಿಕ್ಕಿ ಅಳುತ್ತಾ ದಿಂಬನ್ನು ತೋಯಿಸುತ್ತಿದ್ದಳು. ಅವಳಿಗೆ ಅವಳ ದುರ್ವಿಧಿಯ ಬಗ್ಗೆ ತುಂಬಾ ಸಿಟ್ಟು ಬಂದಿತು. ’ತಾನು ಮರುವಿವಾಹವಾಗಿ ತಪ್ಪು ಹೆಜ್ಜೆ ಇಟ್ಟೆನ? ಆ ದರಿದ್ರ ಸಂದೀಪ್ ಅಡ್ಡ ದಾರಿ ಹಿಡಿಯದಿದ್ದರೆ ಅವನೆಷ್ಟು ಒಳ್ಳೆಯ ಗಂಡನಾಗಿರುತ್ತಿದ್ದ. ಅವನ ಆ ದೊಡ್ಡ ತಪ್ಪಿನಿಂದ ನನಗೆ ಈ ಅವಸ್ಥೆ. ಹೆಂಡತಿಯಿಂದ ವಿಚ್ಚೇದಿತನಾಗಿದ್ದ ಸುನಿಲನಿಗೆ ನನ್ನ ಮೇಲೆ ಯಾವ ರೀತಿಯ ಮೋಹವೂ ಇಲ್ಲ.ತುಂಬಾ ಅರಸಿಕ. ತಿರುಗುತ್ತಿರುವ ಫ್ಯಾನ್ ಜೊತೆ ಜೊತೆಗೇ ಸಿರಿಯ ಗತ ಜೀವನದ ನೆನಪುಗಳೂ ಅವಳ ಸುತ್ತಲೂ ತಿರುಗತೊಡಗಿದವು.


ಕಂಪ್ಯೂಟರ್ ಸೈನ್ಸ್. ಬಿ.ಇ.ಮುಗಿಸಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ, ಸಿರಿಗೆ ಜಗತ್ತನ್ನೇ ಗೆಲ್ಲಬಲ್ಲೆನೆಂಬ ಆತ್ಮ ವಿಶ್ವಾಸ ತುಂಬಿ ತುಳುಕುತ್ತಿತ್ತು. ಜೊತೆಗೆ ತಂದೆ ತಾಯಿಯ ಕಿರಿಯ ಮಗಳಾಗಿದ್ದ ಅವಳು ಆ ಮನೆಯಲ್ಲಿ ಅತ್ಯಂತ ಪ್ರೀತಿ ಪಾತ್ರಳು. ಅವಳು ಹೇಳಿದ್ದಕ್ಕೆ ಯಾರೂ ಇಲ್ಲವೆನ್ನುತ್ತಿರಲಿಲ್ಲ. ಅವಳ ಬಾಯಿಂದ ಬರುವುದೇ ತಡ ಅವಳಿಗೆ ದೊರಕುತ್ತಿತ್ತು. ಅವಳ ಇಷ್ಟದಂತೆಯೇ ಅವಳ ಆಫೀಸ್ನಲ್ಲಿ ಅವಳ ಟೀಮ್ ಹೆಡ್ ಆಗಿದ್ದ ಸಂದೀಪ್ ನನ್ನು ಪ್ರೀತಿಸಿ ಮದುವೆಯಾಗಿದ್ದಳು. ಅವನ ರೂಪ, ಪದವಿ, ಅವನ ಅಕ್ಕರೆಯ ಸಕ್ಕರೆಯ ಸಿಹಿ ಮಾತುಗಳಿಗೆ ಮಾರುಹೋಗಿದ್ದಳು. ಮಗಳ ಆಯ್ಕೆಯನ್ನು ತಂದೆ ತಾಯಿಯೂ ವಿರೋಧಿಸದೆ ಕಾಲಕ್ಕೆ ತಕ್ಕಂತೆ ತಮ್ಮ ಅನುಮತಿ ನೀಡಿದ್ದರು. ಒಳ್ಳೆಯ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವನ ಬಗ್ಗೆ ಯಾರಿಗೂ ಏನೂ ಕೇಳಬೇಕಿನಿಸಲಿಲ್ಲ. ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡು ಅಣ್ಣನ ಆಸರೆಯಲ್ಲಿ ಓದಿಕೊಂಡು ಮುಂದೆ ಬಂದಿದ್ದ ಸಂದೀಪನಿಗೆ ಅವನ ಅಣ್ಣನನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ. ಇದ್ದ ಒಬ್ಬ ಅಣ್ಣನೂ ವಿದೇಶದಲ್ಲಿ ಸೆಟ್ಲ್ ಆಗಿದ್ದರಿಂದ, ಅವನ ಬಗ್ಗೆ ಹೆಚ್ಚಿಗೆ ವಿಚಾರಿಸುವ ಗೋಜಿಗೆ ಹೋಗದ ಸಿರಿಯ ಅಪ್ಪ, ಅಮ್ಮ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿಕೊಟ್ಟಿದ್ದರು.


ಪ್ರೀತಿಸಿ ಮದುವೆಯಾದ ಸಿರಿ, ಸಂದೀಪ್ ಜೊತೆ ಆರು ತಿಂಗಳು ಸ್ವರ್ಗಕ್ಕೆ ಕಿಚ್ಚು ಹತ್ತಿಸಿದಂತೆ ಕಳೆದಳು. ಸಂದೀಪನಂತೂ ಅವಳ ಹಿಂದೆ ಹಿಂದೆಯೇ ಸುತ್ತಾಡುತ್ತಾ, ಅವಳ ಎಲ್ಲಾ ನಿರ್ಧಾರವನ್ನು ತಾನೇ ತೆಗೆದುಕೊಳ್ಳುತ್ತ, ಅವನನ್ನು ಬಿಟ್ಟರೆ ಬೇರಾರೂ ಸರಿಯಿಲ್ಲವೆನ್ನುವಂತೆ ಸೈ ಅನಿಸಿಕೊಂಡಿದ್ದ.  ಸಿರಿ ತಾನು ಹೇಳಿದ ಡ್ರೆಸ್ ಹಾಕಿಕೊಳ್ಳಬೇಕು, ಅದಕ್ಕೆ ತಕ್ಕಂತೆ ಮ್ಯಾಚಿಂಗ್ ಒಡವೆಗಳು, ಲಿಪ್ಸ್ಟಿಕ್, ವ್ಯಾನಿಟಿ ಬ್ಯಾಗ್ ಮೊದಲುಗೊಂಡು ಎಲ್ಲವೂ ಅವನದೇ ಆಯ್ಕೆ. ಸಂದೀಪನ ಅತಿ ಪ್ರೀತಿಯಿಂದ ಕುರುಡಾಗಿದ್ದ ಸಿರಿ, ಎಲ್ಲವನ್ನೂ ಸಕಾರಾತ್ಮಕವಾಗಿ ಸ್ವೀಕರಿಸುತ್ತಿದ್ದಳು. ಆದರೆ ಬರಬರುತ್ತಾ ಅವನ ಈ ಪ್ರೀತಿ, ದಬ್ಬಾಳಿಕೆಯೆನಿಸಿ ಅವಳಿಗೆ ಹಿಂಸೆಯಾಗುತ್ತಿತ್ತು. ಒಂದು ವರ್ಷದೊಳಗೆ ಅವನೊಬ್ಬ,ಶುಗರ್ ಕೋಟ್ ಟ್ಯಾಬ್ಲೆಟ್ ಎಂದು ತಿಳಿಯತೊಡಗಿದಾಗ, ಸಿರಿ ಸಿಡಿದೇಳುತ್ತಿದ್ದಳು. ತುಂಬಾ ಶೋಕಿಲಾಲನಾಗಿದ್ದ ಸಂದೀಪ್, ತನಗೆ ಬರುವ ಸಂಬಳವನ್ನೆಲ್ಲಾ, ಪಾರ್ಟಿ, ಪಿಕ್ನಿಕ್, ಫ಼್ರೆಂಡ್ಸಗಳೊಂದಿಗೆ ಉಡಾಯಿಸುತ್ತ, ತಿಂಗಳ ಕೊನೆಯ ವಾರ ಬರುವಷ್ಟರಲ್ಲಿ ಹಣಕ್ಕಾಗಿ ಸಿರಿಯನ್ನು ಪುಸಲಾಯಿಸುತ್ತಿದ್ದ. ಬರಬರುತ್ತಾ ಅವನು ಕೆಟ್ಟ ಸ್ನೇಹಿತರ ಸಹವಾಸ ಮಾಡುತ್ತಾ, ಎಲ್ಲಾ ಖರ್ಚನ್ನೂ ಅವಳ ಹೆಗಲಿಗೇರಿಸಿ ಸುಲಿಗೆ ಮಾಡಲು ಪ್ರಾರಂಭಿಸಿದಾಗ, ಸಿರಿಗೆ ದಿಕ್ಕೇ ತೋಚದಂತಾಯಿತು. ಸಂದೀಪನಿಗೆ ಭವಿಷ್ಯದ ಚಿಂತೆಯೇ ಇರದೆ, ಕೇವಲ ವರ್ತಮಾನದಲ್ಲಿ ತನಗೆ ಬೇಕಾದ ಹಾಗೆ ಖರ್ಚು ಮಾಡುವುದನ್ನು ನೋಡಿದಾಗ, ಸಿರಿಗೆ ಯೋಚನೆಯಾಗಿ, ಅವನನ್ನು ದಾರಿಗೆ ತರಲು ಸಾಮ, ದಾನ, ಭೇದಗಳನ್ನು ಉಪಯೋಗಿಸಿ ಸೋತು ಹೋದಳು. ಸಂದೀಪ್ ಹೆಣ್ಣು ಮಕ್ಕಳೊಂದಿಗೆ ಫ್ಲರ್ಟ್ ಮಾಡುತ್ತಿದ್ದು, ಅವರಿಗಾಗಿ ಬೇಕಾದಷ್ಟು ಖರ್ಚು ಮಾಡುವುದನ್ನು ಕಂಡಾಗ, ಗಂಡನ ಯೋಚನೆಯಿಂದ ತುಂಬಾ ನೊಂದು ಅವನನ್ನು ಬಿಟ್ಟು ಹೋಗುತ್ತೇನೆಂದು ಹೆದರಿಸಿದರೂ, ಅವನು ಅವಳಿಗೆ ಬಗ್ಗದಿದ್ದಾಗ, ತನ್ನ ಒಡವೆ ವಸ್ತ್ರಗಳನ್ನು ಮತ್ತು ಇತರ ಮುಖ್ಯವಾದ ಡಾಕ್ಯುಮೆಂಟಗಳನ್ನು ಜೋಪಾನ ಮಾಡಿಕೊಂಡು, ಒಂದು ದಿನ ನೇರವಾಗಿ ಜಗಳ ಮಾಡಿಕೊಂಡು, ಗಂಡನ ಮನೆ ಬಿಟ್ಟು ತವರಿಗೆ ಬಂದಳು. ಮುದ್ದಿನ ಮಗಳ ಜೀವನದಲ್ಲಿ ಈ ರೀತಿಯ ಕ್ಲಿಷ್ಟ ಪರಿಸ್ಥಿತಿ ಎದುರಾಗಬಹುದೆಂದು ಅವಳ ತಂದೆ ತಾಯಿ ಕನಸಿನಲ್ಲೂ ಊಹಿಸಿರಲಿಲ್ಲ. ಸಿರಿಯ ಅಣ್ಣ ಸೀಮಂತ್ ತಂಗಿಯ ಅಸಹಾಯಕತೆಯನ್ನು ನೋಡಿ, ಸಿಡಿದೆದ್ದ. 

ಅದರೂ ದಾರಿ ತಪ್ಪಿರುವ ಅವಳ ಜೀವನವನ್ನು ಸರಿಪಡಿಸಬೇಕೆಂದು ಸೀಮಂತ್, ಸಂದೀಪನನ್ನು ಕೂರಿಸಿಕೊಂಡು ಬೇಕಾದಷ್ಟು ತಿಳುವಳಿಕೆ ಹೇಳಿದ. ತಂದೆ ತಾಯಿಯನ್ನು ಕಳೆದುಕೊಂಡಿದ್ದ ಸಂದೀಪನಿಗೆ ತಿಳುವಳಿಕೆ ಹೇಳಲು ಅವನ ಕಡೆ ಯಾರೂ ಇರಲಿಲ್ಲ. ಸಿರಿಯ ಅಪ್ಪ ಅಮ್ಮನೇ ಸಾಕಷ್ಟು ತಿಳುವಳಿಕೆ ಹೇಳಿ ನೋಡಿದರು. ಯಾವುದೂ ಪ್ರಯೋಜನವಾಗಲಿಲ್ಲ. ಸ್ವಲ್ಪ ಕಾಲ ಇಬ್ಬರೂ ದೂರವಿರುವುದು ಒಳ್ಳೆಯದೆಂದು ತೀರ್ಮಾನಿಸಿ, ಸಿರಿಯನ್ನು ತಮ್ಮ ಮನೆಯಲ್ಲೇ ಇರುವಂತೆ ಹೇಳಿದರು. ಅವಳು ತವರು ಮನೆಯಿಂದಲೇ ಕೆಲಸಕ್ಕೆ ಹೋಗಿ ಬರುತ್ತಿದ್ದಳು. ಆಫೀಸನಲ್ಲಿ ಕಂಡಾಗಲೆಲ್ಲ ಸಂದೀಪ್, ಸಿರಿಯನ್ನು ಹಣಕ್ಕಾಗಿ ಪೀಡಿಸುತ್ತಲೇ ಇದ್ದ. ಬೇಡದ ಶೋಕಿ ಹಾಗೂ ದುಶ್ಚಟಗಳಿಂದ ಅವನು ಸಾಲಗಾರನೂ ಆಗಿದ್ದಾನೆಂಬುದು ಬರಬರುತ್ತಾ ತಿಳಿದಾಗ, ಸಿರಿಗೆ ತುಂಬಾ ಯೋಚನೆಯಾಯಿತು. ಅವಳಿಗೆ ತಾನು ಪ್ರೀತಿಸಿದ ಸಂದೀಪ್, ತನ್ನ ಮೇಲೆ ಪ್ರೀತಿಯ ಹೊಳೆಯನ್ನೇ ಹರಿಸಿ, ಸಕ್ಕರೆಯ ಸಿಹಿ ಮಾತುಗಳಾನ್ನಾಡುತ್ತಿದ್ದ ಸಂದೀಪನ ಇನ್ನೊಂದು ವ್ಯಕ್ತಿತ್ವದ ಪರಿಚಯವಾಗತೊಡಗಿತು. ಮದುವೆಯಾಗಿ ಕೇವಲ ಒಂದು ವರ್ಷದೊಳಗೇ ಸಂದೀಪನ ಬಂಡವಾಳ ಗೊತ್ತಾಗಿಹೋಗಿತ್ತು. ತನ್ನ ವೈವಾಹಿಕ ಜೀವನ ಇಷ್ಟು ಬೇಗ ಹಾಳಗಿಹೋಯಿತಲ್ಲ, ನಾನು ದುಡುಕಿದೆನಾ ? ಅವನ ನಯವಾದ ಮಾತುಗಳಿಗೆ ಪ್ರೀತಿಯ ಸೋಗಿಗೆ ಬೇಸ್ತು ಬಿದ್ದೆನಾ? ಮುಂದೇನು? 

ಸಿರಿ ಹಗಲೂ, ಇರುಳೂ ಕೊರಗಿ ಕಣ್ಣೀರಿಡುವುದನ್ನು ನೋಡಲಾರದೆ ಅವರ ತಂದೆ ಮತ್ತು ಅಣ್ಣ ಇಬ್ಬರೂ ಯೋಚಿಸಿ ಒಂದು ನಿರ್ಧಾರಕ್ಕೆ ಬಂದರು. 

ಮುಂದೆ ಆರು ತಿಂಗಳಲ್ಲಿ ಸಿರಿ ಮತ್ತು ಸಂದೀಪನಿಗೆ ವಿಚ್ಛೇದನ ದೊರಕಿತ್ತು. ಮೊದ ಮೊದಲು ಸಂದೀಪ್ ವಿಚ್ಛೇದನಕ್ಕೆ ಒಪ್ಪದೆ ಸಿರಿಯ ಮನವನ್ನು ಒಲಿಸಲು ಪರಿ ಪರಿಯಾಗಿ ಬೇಡಿಕೊಂಡ. ಆದರೆ ಸಿರಿ ಮಾತ್ರ ತನ್ನ ನಿರ್ಧಾರವನ್ನು ಬದಲಿಸಲಿಲ್ಲ. 


ಸದಾ ಲವಲವಿಕೆಯಿಂದ ಉತ್ಸಾಹದ ಬುಗ್ಗೆಯಂತಿರುತ್ತಿದ್ದ ಸಿರಿ, ವಿಚ್ಛೇದನದ ನಂತರ ತುಂಬಾ ನಿರುತ್ಸಾಹಿಯಾದಳು. ಉದ್ಯೋಗವನ್ನು ಬದಲಾಯಿಸಿಕೊಂಡಳು. ಆದರೂ ಸಂದೀಪನ ಪ್ರೀತಿಯನ್ನು ಮರೆಯಲು ಅವಳಿಗೆ ತುಂಬಾ ಕಷ್ಟವಾಗುತ್ತಿತ್ತು. ಮಗಳ ಈ ಪರಿಸ್ಥಿತಿಯನ್ನು ನೋಡಲಾರದ ಅವಳ ಅಪ್ಪ, ಮಗಳ ಮರುಮದುವೆಗೆ ಪ್ರಯತ್ನ ಪಟ್ಟರು. ತನ್ನ ಮಗಳು ಎಂದೂ ಹೀಗೆ ಹತಾಶಳಾಗಿ ಸೋಲಬಾರದೆಂದು ನಿರ್ಧರಿಸಿದ ಅವರು ಇವಳ ಪುನರ್ವಿವಾಹಕ್ಕೆ ಗಂಡುಗಳನ್ನು ನೋಡಲು ಪ್ರಾರಂಭಿಸಿದರು. 


ಮರುಮದುವೆಯೆಂಬುದು ಅಷ್ಟು ಸುಲಭವಲ್ಲವೆಂಬುದು ಅವರ ಅನುಭವಕ್ಕೆ ಬರತೊಡಗಿತು. ಹೋದ ಕಡೆಯಲ್ಲೆಲ್ಲಾ ಇವಳ ವಿಚ್ಛೇದನದ ವಿಷಯ ಕೇಳಿದ ಗಂಡಿನವರು ತಮ್ಮ ಅವಿವಾಹಿತ ಗಂಡು ಮಕ್ಕಳಿಗೆ ಇವಳನ್ನು ತಂದುಕೊಳ್ಳಲು ಒಪ್ಪುತ್ತಿರಲಿಲ್ಲ. ’ಮುಂದೆ ತಮ್ಮ ಮಗನನ್ನೂ ಬಿಟ್ಟು ಹೋದರೆ? ’ಎಂದು ಯೋಚಿಸುತ್ತಿದ್ದರು. 

ಈ ಪ್ರಯತ್ನದಲ್ಲೇ ಮತ್ತೊಂದು ವರ್ಷ ಕಳೆದು ಹೋದಾಗ, ಸಿರಿಯ ತಾಯಿಗೆ ತುಂಬಾ ಯೋಚನೆಯಾಯಿತು. ನಾಳೆ ಮಗ ಸೀಮಂತ್ ಮದುವೆ ಮಾಡುವುದು ಹೇಗೆ? ಬರುವ ಸೊಸೆ ಹಾಗೂ ಅವರ ಮನೆಯವರು ಒಪ್ಪುತ್ತಾರೆಯೆ? ಮನೆಯಲ್ಲಿ ತಂದೆ,ತಾಯಿ,ಅಣ್ಣನ ಹೊಯ್ದಾಟವನ್ನು ಗಮನಿಸುತ್ತಿದ್ದ ಸಿರಿಗೆ ದ್ವಂದ್ವ ಶುರುವಾಯಿತು.’ಮರುಮದುವೆ ಬೇಕೆ? ಬೇಡವೆ? ಮರುಮದುವೆಯಾದರೂ ತಾನು ಸಂದೀಪನನ್ನು ಮರೆಯಲಾಗುವುದೆ? ಸುಮ್ಮನೆ ಹೀಗೆ ಉಳಿದುಬಿಡುವುದೇ ಸರಿ’ ಎಂದು ಯೋಚಿಸುತ್ತಿದ್ದಳು. ಮೂವತ್ತೂ ತುಂಬಿರದ ಸಿರಿ ಮುಂದಿನ ಸುದೀರ್ಘ ಜೀವನವನ್ನು ಒಂಟಿಯಾಗಿ 

ಸುರಕ್ಷಿತವಾಗಿ ಕಳೆಯುವುದು ಅಸಾಧ್ಯ, ಅದೂ ಅಲ್ಲದೆ ಇವಳಿಗೆ ಮಕ್ಕಳಿಲ್ಲದಿರುವುದು ಒಂದು ಪ್ಲಸ್ ಪಾಯಿಂಟ್ ಆಗಿತ್ತು. 


ಕಡೆಗೆ ಸಿರಿಯ ಅಣ್ಣ ಸೀಮಂತ್ ಮದುವೆಯ ಮಾತುಕತೆಗಳು ಪ್ರಾರಂಭವಾದಾಗ, ಅವನಿಗೆ ಗೊತ್ತಾಗಿರುವ ಹುಡುಗಿಯ ಕಸಿನ್ ಸುನಿಲ್ ಸಹ ಹೆಂಡತಿಯಿಂದ ಇತ್ತೀಚೆಗೆ ವಿಚ್ಚೇದನ ಪಡೆದುಕೊಂಡಿರುವ ಮೂವತ್ತರ ಯುವಕನೆಂದು ತಿಳಿದಾಗ, ಸಿರಿಯ ಮದುವೆಯ ಬಗ್ಗೆ ಮತ್ತೆ ಆಸೆ ಹುಟ್ಟಿಕೊಂಡಿತು. ಹೇಗಾದರಾಗಲಿ, ಅವರ ಮನೆಗೆ ಹೋಗಿ ವಿಚಾರಿಸೋಣವೆಂದು, ಸಿರಿಯ ತಂದೆ ತಾಯಿಯರು ಸುನಿಲ್ ಮನೆಗೆ ಹೋಗಿ ಅವನ ತಂದೆ ತಾಯಿಯೊಂದಿಗೆ ಮಾತುಕತೆ ನಡೆಸಿದರು.


ಸುನಿಲ್ ಸಹ ಸಾಫ್ಟ್ವೇರ್ ಇಂಜಿನಿಯರ್. ಅವನ ಹೆಂಡತಿ ಸೀಮ, ಆಧುನಿಕತೆಯ ಬಣ್ಣ ಬಣ್ಣದ ಬದುಕನ್ನು ಅಪ್ಪಿಕೊಂಡು, ತನ್ನ ಅತಿಯಾದ ನವನಾಗರೀಕತೆ ಹಾಗೂ ಅತಿ ದುರಾಸೆಯಿಂದ, ಪ್ರತಿನಿತ್ಯ ಗಂಡ, ಅತ್ತೆ, ಮಾವನನ್ನು ತುಚ್ಛವಾಗಿ ಕಾಣುತ್ತ, ಸ್ನೇಹಿತರೊಂದಿಗೆ ಕ್ಲಬ್ ಪಬ್ ಗಳಿಗೆ ಹೋಗುತ್ತ, ಗಂಡನನ್ನು ಹಣಕ್ಕಾಗಿ ಪೀಡಿಸುತ್ತ, ಅವನು ಕೊಡದಿದ್ದಾಗ, ಆತ್ಮಹತ್ಯೆ ಹಾಗೂ ಪೋಲಿಸ್ ಕಂಪ್ಲೈಂಟಗಳ ಬೆದರಿಕೆ ಹಾಕುತ್ತ, ಸ್ವಚ್ಚಂದವಾಗಿ ಬದುಕುತ್ತಿದ್ದ ಅತ್ಯಾಧುನಿಕ ಹೆಣ್ಣು! ಹೇಗಾದರೂ ಸರಿ, ಅವಳಿಂದ ಮುಕ್ತಿ ಸಿಕ್ಕಿದರೆ ಸಾಕೆಂದು ಅವಳು ಕೇಳಿದಷ್ಟು ಪರಿಹಾರವನ್ನು ಕೊಟ್ಟು ಕೈತೊಳೆದುಕೊಂಡಿದ್ದರು ಸುನಿಲ್ ಮನೆಯವರು. ಅವರ ಮನೆಯ ವಿಷಯ ಕೇಳಿದಾಗ ಸಿರಿ ಹಾಗೂ ಅವಳ ತಂದೆ ತಾಯಿಯರಿಗೆ ಹುಡುಗಿಯರು ಹೀಗೆ ಹಾಳಾಗುತ್ತಾರಾ ಎನಿಸದಿರಲಿಲ್ಲ. 


ಮುಂದೆ ಒಂದು ದಿನ ಸುನಿಲ್ ಹಾಗೂ ಸಿರಿ ಇಬ್ಬರೂ ತಮ್ಮ ತಮ್ಮ ಗತಜೀವನವನ್ನು ಹಂಚಿಕೊಂಡರು. ಇಬ್ಬರಿಗೂ ಮರುಮದುವೆಯ ಬಗ್ಗೆ ಭಯವಿತ್ತು. ಆದರೆ ಅವರ ಹಿಂದಿನ ಅನುಭವದಿಂದ, ಮುಂದಿನ ಜೀವನವನ್ನು ಹೇಗೆ ಹಸನು ಮಾಡಿಕೊಳ್ಳಬಹುದೆಂಬುದರ ಬಗ್ಗೆ ಇಬ್ಬರೂ ಮಾತನಾಡಿಕೊಂಡು ತೀರ್ಮಾನಿಸಿದರು. ಅವರಿಬ್ಬರೂ ಒಪ್ಪಿದ ಮೇಲೆ, ಸಿರಿ ಮತ್ತು ಸುನಿಲ್ ತುಂಬಾ ಸರಳವಾಗಿ ದೇವಸ್ಥಾನದಲ್ಲಿ ವಿವಾಹವಾಗುವುದಾಗಿ ತೀರ್ಮಾನಿಸಿದಾಗ, ಇದಕ್ಕೆ ಒಪ್ಪದ ಎರಡೂ ಮನೆಯ ಹಿರಿಯರು, ಇಬ್ಬರಿಗೂ ಶಾಸ್ತ್ರೋಕ್ತವಾಗಿ, ಬಂಧು ಮಿತ್ರರ ಸಮ್ಮುಖದಲ್ಲಿ ಮತ್ತೊಮ್ಮೆ ವಿಜೃಭಂಣೆಯಿಂದ ಮದುವೆ ಮಾಡಿದರು. "


ಮದುವೆಯೇನೋ ಚೆನ್ನಾಗಿಯೇ ಆದರೂ, ಸುನಿಲ್ ಮತ್ತು ಸಿರಿ ಇಬ್ಬರೂ ತಮ್ಮ ಗತಜೀವನದ ಕಹಿ ನೆನಪುಗಳಿಂದ ಹೊರ ಬಂದಿರಲಿಲ್ಲ. ಇಬ್ಬರಿಗೂ ತುಂಬಾ ಸಲುಗೆಯಿಂದ ಇರಲು ಆಗುತ್ತಿರಲಿಲ್ಲ, ಹೀಗಾಗಿ, ಇಬ್ಬರೂ ತಮ್ಮ ಮುಂದಿನ ಜೀವನಕ್ಕೆ ಹೊಂದಿಕೊಳ್ಳಲು ಸ್ವಲ್ಪ ಕಾಲಾವಕಾಶ ತೆಗೆದುಕೊಂಡಿದ್ದರು. ಸುನಿಲ್ ತುಂಬಾ ಜವಾಬ್ದಾರಿಯ ಮನುಷ್ಯ, ತುಂಬಾ ಪ್ರಾಕ್ಟಿಕಲ್. ಹಣದ ಬಗ್ಗೆ ಅತಿಯಾದ ಮುಂದಾಲೋಚನೆಯಿಂದ, ಖರ್ಚು ಮಾಡಲು ಹೆದರುತ್ತಿದ್ದ. ಜೊತೆಗೆ ಮನೆಯಲ್ಲಿ ತಂದೆ, ತಾಯಿ, ತಂಗಿಯರ ಜವಾಬ್ದಾರಿಯೂ ಅವನಿಗಿದ್ದುದರಿಂದ, ತನ್ನ ಸಾಂಸಾರಿಕ ಸುಖದ ಸ್ವಾರ್ಥವನ್ನು ಹೆಚ್ಚು ಗಮನಿಸುತ್ತಿರಲಿಲ್ಲ. ಸ್ವಭಾವತಃ ಮಿತಭಾಷಿ. ಜೊತೆಗೆ ಹಳೆಯ ಕಹಿ ನೆನಪುಗಳು. ಹೀಗಾಗಿ ಸಿರಿಯೊಡನೆ ಇನ್ನೂ ಹೊಸಬನಂತೆಯೇ ಇರುತ್ತಿದ್ದ. ತುಂಬಾ ಭಾವುಕತೆಯ ಸಿರಿಗೆ, ಸುನಿಲನ ಈ ಗುಣಗಳಿಂದ ನಿರಾಸೆಯಾಗುತ್ತಿದ್ದರೂ, ಅವನ ಹಣಕಾಸಿನ ಅಚ್ಚುಕಟ್ಟುತನದ ಬಗ್ಗೆ ಹೆಮ್ಮೆ ಪಡುತ್ತಿದ್ದಳು.ಈ ವಿಷಯದಲ್ಲೂ ಸುನಿಲ್, ಸಂದೀಪಗಿಂತ ಭಿನ್ನನಾಗಿದ್ದ. ಆದರೆ ಅವಳು ಒಳ್ಳೆಯ ಕಾಲಕ್ಕೆ ಕಾಯಬೇಕಾಗಿತ್ತು. ತನ್ನ ಮೇಲೆ ಅವನಿಗೆ, ಅವನ ಮೇಲೆ ತನಗೆ ನಂಬಿಕೆ ಬೆಳೆಯದೆ, ವೈವಾಹಿಕಜೀವನ ಆಗದು ಎಂಬುದು ಅವಳಿಗೂ ಗೊತ್ತಿತ್ತು. ತಾನು ಸುನಿಲ್ ಮನಸ್ಸನ್ನು ಗೆಲ್ಲಬೇಕೆಂದು ತೀರ್ಮಾನಿಸಿ, ಮನಸ್ಸಿಗೆ ಧೈರ್ಯ ತಂದುಕೊಂಡಳು. ವಜ್ರವೆಂದುಕೊಂಡಿದ್ದ ಸಂದೀಪ್ ಕೇವಲ ಚುಚ್ಚಿ ಗಾಯಗೊಳಿಸುವ ಗಾಜಾದರೆ, ಕೇವಲ ಗಾಜಿನಂತೆ ಬರಡಾಗಿರುವ ಸುನಿಲ್ ಒಳಗೆ ವಜ್ರವಿರಬಾರದೇಕೆ? ಯಾರು ಹಿತವರು ನನಗೆ ಈ ಈರ್ವರೊಳಗೆ? "

ನೆನಪಿನ ದೋಣಿಯಲ್ಲಿ ತೇಲುತ್ತಿದ್ದ ಸಿರಿಗೆ ಸಮಯ ಸರಿದದ್ದೇ ತಿಳಿಯಲಿಲ್ಲ. ರೂಮಿನ ಬಾಗಿಲನ್ನು ನೂಕಿಕೊಂಡು ಕಾಫಿ ಕಪ್ನೊಂದಿಗೆ ಬಂದ ಗಂಡ ಸುನಿಲನನ್ನು ನೋಡಿದಾಗ, ಧಿಗ್ಗನೆ ಎದ್ದು ಕುಳಿತಳು.


ಹೇಗಿದೆ ಹೆಡ್ಡೇಕ್ ? ಆರ್ ಯು ಒ ಕೆ ನೌ? ಸುನಿಲ್ ಅವಳ ಹಣೆಯನ್ನು ಮುಟ್ಟಿ ನೋಡಿ, ಅವಳ ಕೈಗೆ ಕಾಫಿ ಇತ್ತು, ಅವಳಿಗಂಟಿದಂತೆ ಅವನೂ ಸಹ ಕುಳಿತ. ಕಾಫಿ ಹೀರುತ್ತಿದ್ದಾಗ, ಅವನನ್ನು ಓರೆಗಣ್ಣಿನಿಂದ ನೋಡುತ್ತ,  "ಐ ಆಮ್ ಸಾರಿ, ತುಂಬಾ ಹೊತ್ತು ಮಲಗಿಬಿಟ್ಟೆ. ನೀವೇ ಕಾಫಿ ತಂದುಕೊಡುವ ಹಾಗಾಯಿತು" ಎಂದು ಮೆಲ್ಲನೆ ಉಸುರಿದಾಗ, ಅವನು ಇವಳ ಭುಜವನ್ನು ಬಳಸಿ ಹತ್ತಿರಕ್ಕೆಳೆದುಕೊಂಡು,  "ಇಟ್ಸ್ ಓಕೆ. ಹೆಂಡತಿಗಾಗಿ ಗಂಡ ಇಷ್ಟು ಮಾಡಬಾರದಾ" ಎಂದು ಹುಸಿನಗೆಯನ್ನು ಬೀರಿದ.


ಗಂಡನ ತೋಳಿನಲ್ಲಿದ್ದ ಸಿರಿಗೆ ಅವನ ಭರವಸೆಯ ಮಾತುಗಳನ್ನು ಕೇಳಿ, ಬೆಳಗಿನಿಂದಲೂ ದುಗುಡದಿಂದ ಒದ್ದಾಡುತ್ತಿದ್ದ ಅವಳ ಮನಸ್ಸಿನ ಕಾರ್ಮೋಡ ಕಳೆದು ತಿಳಿಯಾಯಿತು. ಮದುವೆಯಾದ ದಿನದಿಂದಲೂ ಹತ್ತಿರವೇ ಆಗದಿದ್ದ ಅವರಿಬ್ಬರೂ ಎಷ್ಟೊ ಹೊತ್ತು ಒಬ್ಬರನ್ನೊಬ್ಬರು ಬಿಡದಂತೆ ಅಪ್ಪಿಕೊಂಡು ಕುಳಿತಿದ್ದರು. ಹಿತವಾದ ಈ ಸ್ಪರ್ಶ ಇಬ್ಬರ ದೂರವನ್ನು ಕಡಿಮೆ ಮಾಡುತ್ತಾ, ಮನದ ಬೇಗುದಿಯನ್ನು ನಿಧಾನವಾಗಿ ಕಳೆಸುತ್ತಿತ್ತು.




Rate this content
Log in

Similar kannada story from Drama