poorna madekar

Drama Inspirational

4  

poorna madekar

Drama Inspirational

ನಿನ್ನ ಪ್ರೀತಿಯೊಂದಿರಲು

ನಿನ್ನ ಪ್ರೀತಿಯೊಂದಿರಲು

7 mins
260


ಈ ಜನ್ಮವು ಒಂದೇ ಸಾಲದು

ನಿನ್ನ ಪ್ರೀತಿ ಪಡೆದ

ಋಣವ ತುಂಬಲು

ಕಾದಿರುವೆನು

ಸದಾ ಎದುರಲೇ

ಏನಾದರೂ

ಇರುವೆ ಜೊತೆಯಲೇ

ಎಂದು ಯಾವ ರೀತಿಯಲ್ಲಿಯೂ...

ಒಂದು ಸಣ್ಣ ನೋವು ನೀಡೆನು..

             ಕಿವಿಯಲ್ಲಿ ಇಯರ್ ಫೋನ್ ಹಾಕಿ ಕ್ಯಾಬ್ ಅಲ್ಲಿ ಕಣ್ಣು ಮುಚ್ಚಿ ಕುಳಿತಿದ್ದ ಪ್ರದ್ಯುಮ್ನ ತನ್ನ ಕಲ್ಪನೆಯ ಲೋಕದಲ್ಲಿ ವಿಹರಿಸುತ್ತಿದ್ದ. ಪ್ರದ್ಯುಮ್ನ ಪ್ರೈವೇಟ್ ಚಾನೆಲ್ ಒಂದರಲ್ಲಿ ನಿರೂಪಕ ಜೊತೆಗೆ ವಿಡಿಯೋ ಜಾಕಿ ಕೂಡ. ನೋಡಲು ಅಮೋಘ ಚೆಲುವು ಅವನದ್ದು. ಹೆಣ್ಣು ಮಕ್ಕಳೆಲ್ಲರೂ ಒಂದೇ ನೋಟಕ್ಕೆ ಆಕರ್ಷಿತರಾಗುವಂತಹ ಮನಮೋಹಕ ರೂಪ...!! ಮೂವತೈದು ಹರೆಯದ ವ್ಯಕ್ತಿ ಆತ. ಆದರೆ ಮುಖದಲ್ಲಿ ಆ ವಯ್ಯಸ್ಸಿನ ಕುರುಹುಗಳೇ ಇರಲಿಲ್ಲ. ಈಗ ತಾನೇ ಯಾವುದೋ ಕಾಲೇಜ್ನಲ್ಲಿ ಓದುತ್ತಿರುವ ನವಯುವಕನಂತಿದ್ದ.

ಪ್ರತಿಷ್ಠಿತ ಹೀರೋಗಳೆಲ್ಲರನ್ನೂ ಇವನ ಮುಂದೆ ನಿವಾಳಿಸಿ ಎಸೆಯಬೇಕು ಎನ್ನುವಷ್ಟು ಸುಂದರಾಂಗ. ಅದೆಷ್ಟೋ ಸಿನಿಮಾ ಆಫರ್ ಬಂದಾಗಲೂ ಸಹಿತ ಅದನ್ನ ನಿರಾಕರಿಸಿದ್ದ ಪ್ರದ್ಯುಮ್ನ. ಈ ನಿರೂಪಣೆಯ ಬದುಕೇ ಅವನಿಗೆ ಅಪ್ಯಾಯಮಾನವಾಗಿತ್ತು. ಆ ವೃತ್ತಿ ಜೀವನದಲ್ಲಿಯೇ ನೆಮ್ಮದಿಯ ಬದುಕ ಕಂಡಿದ್ದನಾತ.

             ದಿನಕ್ಕೆ ಬರುವ ಹಲವಾರು ಅಭಿಮಾನಿ ಪತ್ರಗಳು, ಹಿರಿಯ ಜೀವಿಗಳ ಆಶೀರ್ವಾದದ ಉಡುಗೊರೆ, ಸಮಯ ಸರಿಯಾಗಿ ಸಂಜೆ ಎಂಟು ಗಂಟೆಯಾಯಿತೆಂದರೆ ಸಾಕು ಟಿವಿ ಆನ್ ಮಾಡಿ ಕೂರುವ ಎಷ್ಟೋ ಹೆಂಗಳೆಯರ ನೆಚ್ಚಿನ ಮನೆ ಮಗ ಪ್ರದ್ಯುಮ್ನ.

"ಅಚ್ಚರಿ" ಎಲ್ಲರಂತೆ ಆಕೆ ಸಾಮಾನ್ಯ ಅಭಿಮಾನಿಯೇನೂ ಅಲ್ಲ. ಪ್ರದ್ಯುಮ್ನ ಎಂದರೆ ಹುಚ್ಚು ಅಭಿಮಾನ ಆಕೆಗೆ. ಇನ್ನೂ ಇಪ್ಪತ್ತು ವಸಂತ ದಾಡದ ಮುದ್ದು ಮೊಗದ ಚೆಲುವೆ. ಈಗ ತಾನೇ ಪಿಯುಸಿ ಮುಗಿಸಿ ಕಾಲೇಜು ಮೆಟ್ಟಿಲೇರಿದ್ದಳು. ದಿನವೂ ಅವನ ಕಾರ್ಯಕ್ರಮಕ್ಕೆ ಫೋನಾಯಿಸುವುದು. ಅವನ ಆಫೀಸ್ ವಿಳಾಸ ತಿಳಿದು ಹತ್ತು ಹಲವು ಲೆಟರ್ ಬರೆಯುವುದು ಎಲ್ಲವೂ ಆಕೆಯ ದಿನಚರಿಯಲ್ಲೊಂದು.....!! ಎಷ್ಟೇ ಪತ್ರ ಸಂದೇಶಗಳನ್ನ ಬರೆದಾಗಿಯೂ ಕೂಡ ಅದಿಕ್ಕೆ ಅವನಿಂದ ಪ್ರತಿಕ್ರಿಯೆ ಮಾತ್ರಾ ಶೂನ್ಯ. ಅವಳ ಜೀವನದ ಕೊನೆ ಆಸೆಯೇ ಅವನನ್ನೊಮ್ಮೆ ನೇರವಾಗಿ ಭೇಟಿಯಾಗ ಬೇಕೆಂಬುದಷ್ಟೇ ಆಗಿತ್ತು. ಅವನು ಬರುವ ದಾರಿಯನ್ನೇ ಕಾಯುತ್ತ ಗೇಟ್ ಬಳಿ ನಿಂತಿದ್ದ ಅಚ್ಚರಿ, ಅವನು ಕ್ಯಾಬ್ ಇಳಿದು ಬರುವುದನ್ನೇ ಕಾಯುತ್ತಿರುವಂತೆ ಓಡಿ ಬಂದಿದ್ದಳು ಅವನ ಬಳಿ.

ಅವನ ಕುರಿತ ಅವಳ ಅಭಿಮಾನಗಳು ಒಂದೇ ಉಸಿರಿಗೆ ಬಾಯಿಗೆ ಬಂದಿತ್ತು ಆಕೆಗೆ.

ಏನೇನೋ ಮಾತಾಡಿದ್ದಳು. ಅವಳ ಮಾತಿಗೆಲ್ಲವೂ ಅವನ ಮುಗುಳುನಗೆಯೊಂದೇ ಉತ್ತರ...!! ದಿನವೂ ಹೂವಿನ ಬೊಕ್ಕೆ, ಚಾಕ್ಲೆಟ್ ಹಿಡಿದು ಅವನಿಗಾಗಿ ಗೇಟ್ ಬಳಿ ಕಾಯುತ್ತಿರುತಿದ್ದಳು. ಆಫೀಸ್ ಗೇಟ್ ಅಲ್ಲಿ ಅವನನ್ನ ಸ್ವಾಗತಿಸುತ್ತಿದ್ದುದು ಅಚ್ಚರಿಯ ಮುಗುಳು ನಗೆಯೊಂದಿಗಿನ ಹೂವಿನ ಬೊಕ್ಕೆ ಅವಳಷ್ಟೇ ಸಿಹಿಯಾದ ಚಾಕ್ಲೆಟ್ಗಳು. ಈ ದಿನಚರಿ ಶುರುವಾಗಿದ್ದು ಸರಿ ಸುಮಾರು ಮೂರು ತಿಂಗಳಿಂದ. ಅವನ ಒಂದೇ ಒಂದು ಮುಗುಳು ನಗೆಗೆ ಅದೆಷ್ಟು ಪುಳಕಿತಳಾಗುತ್ತಿದ್ದಳೋ ಆಕೆ...!!

ಒಮ್ಮೆಯೂ ಅವಳೊಟ್ಟಿಗೆ ಆತ್ಮೀಯವಾಗಿ ಮಾತನಾಡದ ಪ್ರದ್ಯುಮ್ನನನ್ನ ತನ್ನ ಜೀವನದ ಉಸಿರು ಎನ್ನುವಂತೆ ಬಹುವಾಗಿ ಹಚ್ಚಿಕೊಂಡು ಬಿಟ್ಟಿದ್ದಳಾಕೆ.

ಪ್ರದ್ಯುಮ್ನನಿಗೆ ಅವಳ ಅಭಿಮಾನ ಕಂಡು ಬೆರಗಾಗಿತ್ತು. ಒಂದು ದಿನವೂ ಮಾತಾಡಿಲ್ಲ ಬರೀ ನನ್ನ ಮುಖದಲ್ಲಿನ ನಗುವ ನೋಡಲು ದಿನವೂ ಬರುತ್ತಲ್ಲ ಈ ಹುಡುಗಿ. ದೇವರ ದರ್ಶನ ಪಡೆದು ಅವನ ಎದುರಿಗೆ ಇಡುವ ಹೂವಿನಂತೆ ನನ್ನ ನೋಡಲು ಅದೆಷ್ಟು ಕಾತರಿಸುತ್ತೆ ಈ ಹುಡುಗಿ. ನೆನೆಸಿಕೊಂಡ ಪ್ರದ್ಯುಮ್ನನಿಗೆ ಅವಳ ಕುರಿತು ಮರುಕ ಹುಟ್ಟಿತ್ತು. ಒಮ್ಮೆಯಾದರೂ ಅವಳೊಟ್ಟಿಗೆ ಮಾತನಾಡಬೇಕೆಂದು ನಿರ್ಧರಿಸಿ ಈ ಸಲಾ ಆಫೀಸ್ಗೆಂದು ಹೊರಟವನು ಅವಳನ್ನ ನೋಡಿ ನಕ್ಕು ಅವಳೊಂದಿಗೆ ಮಾತಿಗಿಳಿದಿದ್ದ. "ನಿಮ್ಮ ಜೊತೆ ಮಾತಾಡ್ಬಾಹುದಾ?" ಪ್ರದ್ಯುಮ್ನ ಹೀಗೆ ಕೇಳಿದಾಗಲಂತೂ ನಿಂತಲ್ಲಿಯೇ ಕುಣಿದು ಬಿಟ್ಟಿದ್ದಳು ಅಚ್ಚರಿ.

ಅವನನ್ನ ನೋಡುವುದೇ ಆಕೆಗೊಂದು ಸಂಭ್ರಮ. ಸಿಕ್ಕಿರುವ ಅವಕಾಶವನ್ನ ಬಿಡದೇ ಒಮ್ಮೆಗೆ ಅವಳ ಪ್ರೇಮ ನಿವೇಧನೆಯನ್ನ ಮಾಡಿಯೇ ಬಿಟ್ಟಿದ್ದಳು. ಕುಡಿಯುತ್ತಿರುವ ಕಾಫಿ ನೆತ್ತಿಗೇರಿತ್ತು ಪ್ರದ್ಯುಮ್ನನಿಗೆ. ಕಣ್ಣರಳಿಸಿ ಆಶ್ಚರ್ಯದಿಂದಲೇ ಏನು ಎನ್ನುವಂತೆ ಕೇಳಿದ್ದ. "ಹೌದು ನಿಮ್ಮನ್ನ ಅತೀ ಎನ್ನುವಷ್ಟು ಇಷ್ಟ ಪಡ್ತಾ ಇದೇನೆ ನೀವಿಲ್ಲದೆ ನನಗೆ ಬದುಕೇ ಇಲ್ಲ" ಎಂದು ಅತ್ತಾಗಲಂತೂ ಪ್ರದ್ಯುಮ್ನನ ಕೋಪ ನೆತ್ತಿಗೇರಿತ್ತು. ಕೋಪದಿಂದ ಅಲ್ಲಿಂದ ಎದ್ದು ನಡೆದಿದ್ದ. ಇನ್ನೂ ಹದಿನೆಂಟು ಹತ್ತೊಂಬತ್ತರ ಆಸುಪಾಸಿನ ಹುಡುಗಿಯೊಬ್ಬಳು ನೀನೇ ನನ್ನ ಜೀವನದ ಧ್ಯೆಯ ಎನ್ನುವಂತೆ ಮಾತಾಡಿದರೆ ಏನು ಹೇಳಬೇಕು ಅವನಾದರು? ಬರೀಯ ಆಕರ್ಷಣೆಗೆ ಸೋತು ಹುಚ್ಚು ಕನಸುಗಳನ್ನ ಕಟ್ಟಿಕೊಂಡು ಅದರಿಂದ ಖಿನ್ನತೆಗೊಳಗಾದರೆ..?? ಅವನ ಸಹನೆ ಕೂಡ ಮೆರೆ ಮೀರಿತ್ತು.

ಆದರೂ ಅಚ್ಚರಿ ಬಿಡಲಿಲ್ಲ ಅವನಿಗಾಗಿ ಅವನ ಸ್ವಾಗತಕ್ಕಾಗಿ ಮತ್ತದೇ ಹೂವಿನ ಬೊಕ್ಕೆ ಹಿಡಿದು ಮತ್ತೆ ಅವನ ಆಫೀಸ್ ಗೇಟ್ ಬಳಿ ಕಾಯುತ್ತಿರುತಿದ್ದಳು. ಇಷ್ಟು ದಿನ ದಿನವೂ ಅವಳನ್ನ ನೋಡಿ ಒಂದು ಮುಗುಳು ನಗೆ ನಕ್ಕು ಅವಳು ಕೊಟ್ಟ ಬೊಕ್ಕೆ, ಚಾಕ್ಲೆಟ್ ಇಸಿದು ಕೊಳ್ಳುತ್ತಿದ್ದವ, ಅವಳ ಪ್ರೇಮ ನಿವೇಧನೆ ಕೇಳಿದಾಗಿನಿಂದ ಅವಳನ್ನ ಬಹುಪಾಲು ತಿರಸ್ಕರಿಸಿಯೇ ಬಿಟ್ಟಿದ್ದ. ಅವಳನ್ನ ನೋಡಿಯೂ ನೋಡದಂತೆ ಹೋಗುತ್ತಿದ್ದ. ಅವನಿಗಾಗಿ ತಂದ ಬೊಕ್ಕೆ ಚಾಕ್ಲೆಟ್ ಎರಡೂ ಮಣ್ಣು ಪಾಲಾಗುತಿತ್ತು.

ಪ್ರೀತಿ ಎನ್ನುವುದು ಪ್ರತಿಯೊಬ್ಬ ಮನುಷ್ಯನ ಪಾಲಿಗೆ ಪ್ರಾಣ ವಾಯು ರೀತಿ. ಪ್ರೀತಿ ಎನ್ನುವುದು ಒಂದು ನಯವಾದ ಹೂವಿನಂತೆ. ಆ ಕೋಮಲ ಹೂವನ್ನ ತಿರಸ್ಕರಿಸಲಿ ಅಥವಾ ಸ್ವೀಕರಿಸಲಿ ಪ್ರತಿಯೊಂದರಲ್ಲೂ ಅಷ್ಟೇ ಮೃದುತನವಿರಬೇಕು. ಆದರೇ ಪ್ರದ್ಯುಮ್ನ ಮಾಡಿದ್ದು.....!!??

ಅವನ ತಿರಸ್ಕಾರ ಸಹಿಸದೇ ಅಚ್ಚರಿ ಪತ್ರವೊಂದನ್ನ ಬರೆದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ಅವಳ ಹುಚ್ಚುತನದ ಪರಮಾವಧಿಗೆ ಏನು ಹೇಳಬೇಕು ಆತ..?

ಆಸ್ಪತ್ರೆಯಲ್ಲಿ ಇದ್ದವಳನ್ನ ನೋಡಲು ಹೋಗಿದ್ದ ಪ್ರದ್ಯುಮ್ನ.

ನಿಸ್ತೇಜಿತಳಾಗಿ ಮಲಗಿದ್ದಳು ಅಚ್ಚರಿ. ಆಕೆಯನ್ನ ಒಮ್ಮೆ ನೋಡಿದ ತನ್ನ ತಂಗಿಯಂತೆ ಕಂಡಿದ್ದಳು ಅವನಿಗೆ. ಅವಳನ್ನ ನೋಡಿ ಅವನಿಗೆ ಹುಟ್ಟಿದ್ದು ಮಮತೆ.

ಅಯ್ಯೋ ಎನಿಸಿತ್ತು ಅವನಿಗೆ.

ತನ್ನ ವೈಯಕ್ತಿಕ ಜೀವನವನ್ನ ಇಷ್ಟು ದಿನ ಯಾರೊಂದಿಗೂ ಹಂಚಿಕೊಳ್ಳದವ ಇವತ್ತು ಹೇಳಲೇ ಬೇಕು ಎಂದು ನಿರ್ಧರಿಸಿದ್ದ. ಅಚ್ಚರಿ ಎದ್ದು ಕುಳಿತುಕೊಳ್ಳುವಷ್ಟು ಹುಷಾರುಗುವುದನ್ನೇ ಕಾಯುತ್ತಿದ್ದ. ತನ್ನೊಡನೆ ಇದ್ದು ಇಷ್ಟು ಕಾಳಜಿ ತೋರಿಸುತ್ತಿರುವ ಪ್ರದ್ಯುಮ್ನನಲ್ಲಿ ಅವಳಿಗೆ ಕಂಡದ್ದು ಮತ್ತದೇ ಪ್ರೀತಿ.

ಅವಳನ್ನ ಕರೆದುಕೊಂಡು ತನ್ನ ಮನೆಗೆ ಬಂದಿದ್ದ.

"ಅಚ್ಚರಿ ನೀನು ನನ್ನ ಮನೆಯನ್ನ ನೋಡಿಲ್ಲ ಅಲ್ವೇ? ಬಾ ಇದೆ ನಮ್ಮನೇ ಎಂದಿದ್ದ".

ಅರಮನೆಯಂತಹ ಮನೆ. ಶ್ರೀಮಂತಿಕೆಯ ಛಾಪು ಹೆಜ್ಜೆ ಹೆಜ್ಜೆಗೂ ಗೋಚರಿಸುತ್ತಿತ್ತು. ಏನೋ ವಿಸ್ಮಯ ನೋಡಿದಂತೆ ಇಡೀ ಮನೆಯನ್ನ ನೋಡುತಿದ್ದಳು ಅಚ್ಚರಿ.

"ನೀವೊಬ್ಬರೇನಾ ಇರೋದು?" ಪ್ರಶ್ನಿಸಿದ್ದಳು.

ಪ್ರದ್ಯುಮ್ನನದ್ದು ಕಿರುನಗೆಯಷ್ಟೇ ಉತ್ತರ.

"ಅಚ್ಚರಿ, ನಿಂಗೇ ಸಿಹಿ ಇಷ್ಟವೋ ಕಹಿ ಇಷ್ಟವೋ?"

"ಏನ್ ಸರ್ ಹೀಗೆ ಕೇಳ್ತಿದೀರಾ ಕಹಿನಾ ಯಾರು ಇಷ್ಟ ಪಡ್ತಾರೆ? ನಂಗೇ ಸಿಹಿ ಅಂದ್ರೇನೇ ತುಂಬಾ ಇಷ್ಟ. ಕಹಿ ಬೇಡ." ಎಂದಿದ್ದಳು ತನ್ನ ಪುಟ್ಟನೆಯ ಬಟ್ಟಲು ಕಣ್ಗಳನ್ನ ಪಿಳುಗುಟ್ಟುತ್ತ. 

ಪ್ರದ್ಯುಮ್ನ ಅವಳ ಕೈಗೊಂದು ಕಾಫಿ ಕಪ್ ಕೊಟ್ಟು ತಾನೂ ಒಂದು ಕಾಫಿ ಕಪ್ ಗುಟುಕರಿಸುತ್ತಾ, "ಅಲ್ವಾ? ಅಚ್ಚರಿ..? ಯಾರಿಗೆ ತಾನೇ ಕಹಿ ಇಷ್ಟ ಹೇಳು? ಜೀವನದಲ್ಲಿ ಎಲ್ಲರೂ ಸಿಹಿಯನ್ನೇ ಇಷ್ಟ ಪಡ್ತಾ ಹೋದ್ರೆ ಕಹಿಯನ್ನ ಸ್ವೀಕರಿಸೋದು ಯಾರು? ನೋಡು ನಾವು ಯಾರ ಬದುಕನ್ನ ನೋಡ್ತಿವೋ ಅದು ನೋಡಿದಷ್ಟೇ ಸುಂದರವಾಗಿರಲ್ಲ. ಅದರ ಹಿಂದೆಯೂ ಕೂಡ ಬದುಕಿನ ಕರಾಳತೆ ಇರುತ್ತೆ. ನಿಂಗೇ ನನ್ನ ಬಗ್ಗೆ ಏನು ಗೊತ್ತು? ಏನೂ ಗೊತ್ತಿಲ್ಲ. ಅಲ್ವಾ? ನಿನ್ನ ವಯ್ಯಸ್ಸು ಆಕರ್ಷಣೆಗೆ ಒಳಪಡುವ ವಯ್ಯಸ್ಸು ನನ್ಮೇಲೆ ಇರೋದು ಕೇವಲ ಅಟ್ರಾಕ್ಷನ್ ಅಷ್ಟೇ...!! ಅದರ ಹೊರತು ಬೇರೇನೂ ಇಲ್ಲ.." ಸಮಾಧಾನದಿಂದ ಹೇಳುತ್ತಿದ್ದವನ ಮಾತುಕೇಳುತ್ತಿದ್ದ ಅಚ್ಚರಿ ಕೋಪದಿಂದ ಎದ್ದು ನಿಂತು "ಈಗೇನು ಮತ್ತೊಮ್ಮೆ ನಿನ್ನ ಪ್ರೀತಿಸೋಕೆ ಆಗಲ್ಲ ಅಂತಿದಿರಾ ಅಲ್ವಾ? ಮತ್ತೆ ನನ್ನನ್ನ ತಿರಸ್ಕರಿಸ್ತಾ ಇದಿರಾ ಅಲ್ವೇ? ಯಾಕೆ ನನ್ನಲ್ಲಿ ಏನು ಕಮ್ಮಿ ಇದೆ? ಹತ್ತು ಜನರನ್ನ ಕೇಳಿದ್ರೂ ಹೇಳ್ತಾರೆ ನಾನು ನಿಮಗೆ ಅನುರೂಪನಾದ ಜೋಡಿ ಅಂಥಾ ಹಾಗಿರುವಾಗ ಏನು ನ್ಯೂನತೆ ಇದೆ ನನ್ನಲ್ಲಿ. ನೀವು ನನ್ನ ಇಷ್ಟ ಪಡದೇ ಇರೋಕೆ ಒಂದೇ ಒಂದು ಸರಿಯಾದ ಕಾರಣ ಹೇಳಿ ನೋಡಣ?" ಈ ಸಲಾ ಅಚ್ಚರಿಯ ಧ್ವನಿ ಜೋರಾಗಿತ್ತು. ಜೊತೆಗೆ ಅಳುವೂ ಕೂಡ ಒತ್ತರಿಸಿ ಬಂದಿತ್ತು.

"ಅಂದ ಚಂದ ನೋಡಿ ಬರೋದು ಪ್ರೀತಿನಾ ನಿನ್ನ ಪ್ರಕಾರ?" ಈ ಸಲಾ ಪ್ರದ್ಯುಮ್ನನ ನೋಟ ತೀಕ್ಷ್ಣವಾಗಿತ್ತು.

"ಮತ್ತೇನು..? ಸಿನಿಮಾದಲ್ಲಿ ನೋಡಿಲ್ವೆ ಅಂದವಾಗಿರೊ ಹೀರೋಯಿನ್ ಗೆ ಅಲ್ವಾ ಹೀರೊ ಪ್ರಪೋಸ್ ಮಾಡೋದು?" ಅವಳ ಮುಗ್ದ ಪ್ರಶ್ನೆಗೆ ಪ್ರದ್ಯುಮ್ನ ನಗಬೇಕೋ ಬೇಸರಿಸಿಕೊಳ್ಳಬೇಕೋ ಏನೊಂದೂ ತಿಳಿಯದಾಗಿತ್ತು.

"ಪ್ರೀತಿ ಅಂದ್ರೆ ಅದಲ್ಲ ಅಚ್ಚರಿ....!" ಮುಂದೆ ಹೇಳುವನನ್ನ ತಡೆದ ಅಚ್ಚರಿ

"ಈಗೇನು ನಾನಿಷ್ಟ ಇಲ್ಲ ಅಲ್ವಾ ನಿಮಗೆ ಹಾಗಾದ್ರೆ ಬಿಡಿ ನೀವಿಲ್ಲದ ಜೀವನ ನಂಗೆ ಬೇಡವೇ ಬೇಡ ಎಂದು ಅಲ್ಲೆ ಡೈನಿಂಗ್ ಟೇಬಲ್ ಮೇಲಿಟ್ಟ ಚಾಕು ಹಿಡಿದು ಕೈ ಕುಯ್ದುಕೊಳ್ಳಲು ಮುಂದಾದವಳನ್ನ ತಡೆದು ನಿಲ್ಲಿಸಿದ್ದ.

ಅವನ ಯಾವ ಮಾತುಗಳನ್ನ ಕೇಳದೇ ತನ್ನ ಹಠ ಸಾಧಿಸುತ್ತಿರುವ ಅಚ್ಚರಿಯನ್ನ ನೋಡಿ ಎರಡು ಭಾರಿಸಿಯೇ ಬಿಟ್ಟಿದ್ದ ಕೂಡ.

"ಏನೇ ನಿಂದು? ನನ್ನ ಬಗ್ಗೆ ಏನೇ ಗೊತ್ತು ನಿಂಗೇ? ಬರೀ ಪ್ರೀತಿ ಪ್ರೀತಿ ಪ್ರೀತಿ ಯಾವ್ದು ಪ್ರೀತಿ? ಇನ್ನೂ ಬಾಟಲ್ ಅಲ್ಲಿ ಇರೋ ಹಾಲಿಗೂ ಆಲ್ಕೋಹಾಲ್ಗೂ ವ್ಯತ್ಯಾಸವೇ ಗೊತ್ತಿಲ್ದೆ ಇರೋ ಅಮುಲ್ ಬೇಬಿ ನೀನು ಸಿನಿಮಾದಲ್ಲಿ ಕಾಣೋ ಕೈ ಕೈ ಹಿಡ್ಕೊಂಡ್ ಓಡಾಡೋ ಸೀನ್ ನೋಡಿ ಹಿಂದೆ ಬಿದ್ದು ಬಿಟ್ಯಾ? ನನ್ನಲ್ಲಿ ಏನು ಕಮ್ಮಿ ಅಂಥಾ ನನ್ನನ್ನ ಇಷ್ಟ ಪಡ್ತಾ ಇಲ್ಲ ನೀವು ಅಂತಾ ಕೇಳಿದ್ಯಾಲ್ಲ ಹಾಗಾದ್ರೆ ನನ್ನಲ್ಲಿ ಏನು ನೋಡಿ ಇಷ್ಟ ಪಟ್ಟೆ ನೀನು? ನನ್ನ ಆಸ್ತಿ? ನನಗೆ ಇರೋ ಹೆಸರು, ಗೌರವ? ಏನು ಹೇಳು ಹೇಳು? ಅವಳ ಭುಜ ಹಿಡಿದು ಗದರಿಸಿ ಕೇಳಿದ್ದ. ಪಾಪಾ ಅಚ್ಚರಿ ಹುಲಿ ಬೋನಿಗೆ ಸಿಕ್ಕ ಜಿಂಕೆಯಂತಾಗಿದ್ದಳು. ಪ್ರದ್ಯುಮ್ನನ ಅಷ್ಟು ಗಡಸುತನವನ್ನ ಆಕೆ ಎಂದೂ ನೋಡಿರಲೇ ಇಲ್ಲ. ನಡುಗುತ್ತಲೇ ನಂಗೇ ನೀ...ವು....ಬೇ...ಕು... ಎನ್ನುವಷ್ಟರ ಹೊತ್ತಿಗೆ ಆಕೆಯ ಕೆನ್ನೆಗೆ ಮತ್ತೊಂದು ಏಟು ಬಿದ್ದಿತ್ತು ಪ್ರದ್ಯುಮ್ನನ ಕಡೆಯಿಂದ.

ಅವಳ ಕೈ ರಟ್ಟೆ ಹಿಡಿದು ಒಳಗೆ ಕರೆದುಕೊಂಡು ಹೋಗಿದ್ದ. ಮಲಗಿರುವ ತನ್ನ ಮಡದಿಯನ್ನ ದೂರದಿಂದಲೇ ತೋರಿಸಿ "ನೋಡು ಅವಳೇ ನನ್ನ ಹೆಂಡತಿ...!! ಎಂದಾಗ ಅಚ್ಚರಿಯ ಎದೆ ಒಡೆದು ಹೋಗಿತ್ತು. ನಿಂತ ನೆಲವೇ ಕುಸಿದು ಹೋದ ಭಾವ....!! ಬರುತ್ತಿರುವ ಕಣ್ಣೀರನ್ನ ಒರೆಸಿಕೊಂಡು ಅವನು ಹೆಂಡತಿ ಎಂದು ತೋರಿಸಿದವಳನ್ನೊಮ್ಮೆ ನೋಡಿದಳು.

ಆಸಿಡ್ ಇಂದ ಸುಟ್ಟ ಭಾಗಶಃ ಮುಖ, ಎರಡೂ ಕಾಲುಗಳಿಲ್ಲದೆ ಓಡಾಡಲು ಸಾಧ್ಯವಾಗದೇ ಹಾಸಿಗೆ ಹಿಡಿದಿದ್ದ ಯುವತಿ..! ಅವಳ ಕಣ್ಣನ್ನ ಅವಳೇ ನಂಬಲಾಗಲಿಲ್ಲ. ಇವ್ರು ನಿಮ್ಮ ಹೆಂಡತಿನಾ? ನಾನ್ ನಂಬಲ್ಲ...!! ಈ ಸಲ ತನ್ನ ಮೈಯ ಶಕ್ತಿಯನ್ನೆಲ್ಲಾ ಒಗ್ಗೂಡಿಸಿ ಧೈರ್ಯದಿಂದ ಕೇಳಿಯೇ ಬಿಟ್ಟಿದ್ದಳು. 

"ನಂಬೋಕೆ ಕಷ್ಟ ಅಲ್ವಾ? ಆದ್ರೆ ಇದೇ ವಾಸ್ತವ...!! ಇವ್ಳು ನನ್ನ ಹೆಂಡತಿ ಖುಷಿ. ನಾನು ಇವಳು ಕಾಲೇಜ್ ಡೇಸ್ ಇಂದಲೂ ಇಷ್ಟಪಟ್ಟು ಮನೆಯವರ ವಿರೋಧ ಕಟ್ಕೊಂಡು ಪ್ರೀತಿಸಿ, ಮದ್ವೆ ಕೂಡ ಆದ್ವಿ. ಜಗತ್ತಲ್ಲಿ ಅವಳ ವಿನಃ ನಂಗೇ ನನ್ನ ವಿನಃ ಅವಳಿಗೆ ಯಾರೂ ಇಲ್ಲ ಅಂಥಾ ಜೀವನ ಸಾಗಿಸ್ತಾ ಇದ್ವಿ. ಬಹುಶಃ ನಮ್ಮನ್ನ ನೋಡಿ ಆ ವಿಧಿಗೂ ಕೂಡ ಸಹಿಸೋಕೆ ಆಗ್ಲಿಲ್ಲ ಅನ್ಸತ್ತೆ, ಆಗ್ಲೇ ಎದುರಾಗಿದ್ದು ನಮ್ಮ ಜೀವನದ ಈ ಅಗ್ನಿಪರೀಕ್ಷೆ. ಅವಳು ನಾನು ಇಬ್ಬರೂ ಜರ್ನಲಿಸಂ ವಿದ್ಯಾರ್ಥಿಗಳು. ಪ್ರತಿಷ್ಠಿತ ಸುದ್ದಿ ಪತ್ರಿಕೆಯೊಂದರಲ್ಲಿ ಅವಳು ಪತ್ರಕರ್ತೆಯಾಗಿ ಕೆಲಸಕ್ಕೆ ಸೇರಿದ್ಲು. ಖುಷಿ ಯಾರಿಗೂ ಹೆದರುವ ಜಾಯಮಾನದವಳೇ ಅಲ್ಲ. ರಾಜಕೀಯ ಬಿಲದಲ್ಲಿ ರಕ್ಷಣೆ ಪಡೆದು ಜನಸಾಮಾನ್ಯರ ಜೀವನ ಮತ್ತು ಜೀವಕ್ಕೆ ತೊಂದ್ರೆ ಕೊಡೋ ಎಷ್ಟೋ ಪುಂಡ ರೌಡಿಗಳನ್ನ ಸಾಕಿ ಬೆಳೆಸ್ತಾ ಇರೋ ರಾಜಕಾರಣಿಗಳ ಬಗ್ಗೆ ಒಂದು ಲೇಖನ ಬರೆದು ಹಾಕಿದ್ಲು. ತಮ್ಮ ಬಣ್ಣ ಎಲ್ಲಿ ಬಯಲಾಗುತ್ತೋ ಅಂಥಾ ಹೆದರಿ ನನ್ನ ಖುಷಿಯನ್ನ ಈ ಸ್ಥಿತಿಗೆ ತಂದು ಬಿಟ್ರು ಪಾಪಿಗಳು.. ಅವಳ ಜೀವ ಉಳಿದಿದ್ದೆ ಹೆಚ್ಚು. ಅವತ್ತು ನಮ್ಮ ಮದ್ವೆ ಆಗಿ ಮೂರು ವರ್ಷಗಳು ಕಳೆದಿದ್ವು. ಪ್ರತಿ ಯಾನಿವರ್ಸರಿನೂ ತುಂಬಾ ಜೋರಾಗಿ ಸೆಲೆಬ್ರೇಟ್ ಮಾಡೋ ನಾವು ಅವತ್ತೊಂದಿನ ಹೊರಗಡೆ ಎಲ್ಲಾದ್ರೂ ಒಂದಿನ ಟ್ರಿಪ್ ಹೋಗ್ಬೇಕು ಅಂಥಾ ಪ್ಲಾನ್ ಮಾಡಿದ ನಂಗೇ ತುರ್ತಾಗಿ ಕೆಲಸದ ಇದೆ ಅನ್ನೋ ನೆಪ ಹೇಳಿ ಮನೆಗೆ ಬರೋದು ಕೂಡ ತಡ ಮಾಡಿದ್ಲು. ನಂಗೋ ಅವಳ ಮೇಲೆ ಹುಸಿಕೋಪ. ಯಾವ ವರ್ಷವೂ ಕೂಡ ತಪ್ಪಿಸದೇ ಇದ್ದ ಯಾನಿವರ್ಸರಿ ಸೆಲೆಬ್ರೇಷನ್ ಈ ವರ್ಷ ತಪ್ಪಿಸೋದಾ ಅದ್ಹೇಗೆ ಸಾಧ್ಯ? ಪಾಪಾ ನನ್ನ ಖುಷಿಗೆ ಕೆಲಸದ ಒತ್ತಡ ಅಂಥಾ ತಿಳಿದು ಮನೆಯಲ್ಲಿಯೇ ಕ್ಯಾಂಡಲ್ ಲೈಟ್ ಡಿನ್ನರ್ ಮಾಡೋಣ ಅಂಥಾ ಅವಳಿಗಾಗಿ ನಾನು ನನ್ನ ಕೈಯಾರೆ ಅಡ್ಗೆ ಮಾಡಿ ಕಾಯ್ತಾ ಇದ್ದೆ. ತಕ್ಷಣ ಅವಳ ಫೋನ್..! ನಾನು ಬಹುಶಃ ನಂಗೇ ಕೋಪ ಬಂದಿದೆ ಅಲ್ವಾ ಸಮಾಧಾನ ಮಾಡೋಕೆ ಫೋನ್ ಮಾಡ್ತಿರ್ಬೇಕು. ಈಗ ಕಾಲ್ ಪಿಕ್ ಮಾಡೋದ್ರ ಬದಲು ಹೀಗೆ ಕೋಪ ಇರೋರ್ ರೀತಿ ನಟಿಸಿ ಅವಳು ಮನೆಗೆ ಬಂದಾಗ ಸರ್ಪ್ರೈಸ್ ಕೊಡ್ಬೇಕು ಅಂತಲೇ ನಿರ್ಧಾರ ಮಾಡಿದ್ದೆ...!!

ಸಮಯ ಆಗ್ಲೇ ರಾತ್ರಿ ಹನ್ನೊಂದು ಗಂಟೆ..!! ಇನ್ನೂ ಖುಷಿ ಸುಳಿವಿಲ್ಲ. ಅವಳಿಗೆ ಕಾಲ್ ಮಾಡಿದ್ರೆ ಸ್ವಿಚ್ ಆಫ್. ಆಫೀಸ್ ಗೆ ಫೋನ್ ಮಾಡಿದ್ರೆ ಖುಷಿ ಆಗ್ಲೇ ಏಳು ಗಂಟೆಗೆ ಹೋಗಿದಾಳೆ ಅಂಥಾ ಹೇಳಿಬಿಟ್ರು ಎಲ್ಲಿ ಹೋದ್ಲು ಅಂಥಾ ನಡುರಾತ್ರಿಯಲ್ಲಿ ಹುಚ್ಚನ ಥರಾ ರೊಡಲ್ಲೆಲ್ಲಾ ಹುಡುಕಾಡಿದ್ದೆ ಬಂತು ಭಾಗ್ಯ. ಖುಷಿಯ ಸುಳಿವೆಯೇ ಇಲ್ಲ. ತಲೆ ಹೊತ್ತು ರೋಡ್ ಅಲ್ಲಿ ಕುಳಿತಿರುವಾಗ ಆಸ್ಪತ್ರೆಯಿಂದ ಫೋನ್ "ನಿಮ್ಮ ಹೆಂಡತಿ ಮೇಲೆ ಆಸಿಡ್ ಅಟ್ಯಾಕ್ ಆಗಿದೆ. ಬಂದು ನೋಡಿ" 

ರೋಡ್ ಅಲ್ಲಿ ಬಿದ್ದು ಒದ್ದಾಡ್ತಾ ಇರೋರನ್ನ ತಂದು ಹಾಸ್ಪಿಟಲ್ ಗೇ ಸೇರಿದ್ದ ಪುಣ್ಯಾತ್ಮರು ಒಬ್ಬರು ಕಾಲ್ ಮಾಡಿ ಹೇಳಿದ್ರು.

ಅಲ್ಲಿಂದ ನಿಲ್ಲದೇ ಆಸ್ಪತ್ರೆಗೆ ಹೋಗಿ ನೋಡಿದ್ರೆ ಎರಡೂ ಕಾಲಿನ ಮೇಲೆ ಬೈಕ್ ಓಡಿಸಿ ಬಿಟ್ಟಿದ್ರು.

ಖುಷಿಯನ್ನ ಎದೆಗಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದೆ. ಬಡವನ ಕೋಪ ದವಡೆ ಮೂಲ ಅನ್ನೋ ಹಾಗೆ ಕೋರ್ಟ್ ಕೇಸು, ಪೊಲೀಸ್ ಅಂತೆಲ್ಲಾ ಹೋದ್ರೆ ಏನಾಗುತ್ತೆ ಅನ್ನೋದರ ಅರಿವಿತ್ತು. ಏನೇ ಆಗಲಿ ನನ್ನ ಹೆಂಡತಿ ಜೀವ ಉಳಿದದ್ದೇ ಹೆಚ್ಚು ಅನಿಸಿತ್ತು ನಂಗೇ. ಅವಳ ಪ್ರೀತಿಯೊಂದಿರಲು ಜಗತ್ತಲ್ಲಿ ಬೇರೆ ಏನೂ ಬೇಡ ಎನ್ನುವ ಧೋರಣೆ ನಂದು. ದುಷ್ಟರನ್ನ ಕಂಡ್ರೆ ದೂರ ಇರ್ಬೇಕು ಅನ್ನೋ ಹಾಗೆ ಅಲ್ಲಿಂದ ನನ್ನ ಖುಷಿಯನ್ನ ಕರ್ಕೊಂಡು ಬಂದುಬಿಟ್ಟೆ. ನನ್ನ ಜೀವನದಲ್ಲಿ ಖುಷಿಯ ಮಹಾಪುರವನ್ನೇ ಹರಿಸಿದ ನನ್ನ ಖುಷಿಗಾಗಿಯೇ ನನ್ನ ಬದುಕು. ನನ್ನ ಜೀವನ, ನನ್ನ ಪ್ರೀತಿ, ಎನಿದ್ರೂ ಅದು ಅವಳಿಗೆ ಮಾತ್ರವೇ ಸ್ವಂತ...!! ಹೇಳುತ್ತಿದ್ದವನ ಮಾತುಗಳು ಮುಗಿದಿತ್ತು. ಅಚ್ಚರಿಯ ಕಣ್ಣಾಲಿಗಳು ತುಂಬಿ ಬಂದಿತ್ತು.

ಎಚ್ಚರವಾದ ಖುಷಿ ಎದ್ದು ಕುಳಿತುಕೊಳ್ಳಲು ಪ್ರಯಾಸ ಪಡುತ್ತಿರುವಾಗಲೇ ಅವಳ ತೋಳ ಬಳಸಿ ನಿಂತಿದ್ದ ಪ್ರದ್ಯುಮ್ನ...!!

ಅಚ್ಚರಿ ಅವನ ಹಿಂದೆಯೇ ಓಡಿದ್ದಳು.

ಖುಷಿ ಪ್ರದ್ಯುಮ್ನನ ನೋಡಿ "ಏನು ಸಾಹೇಬ್ರು ಇಷ್ಟು ಬೇಗ ಬಂದು ಬಿಟ್ಟಿದೀರಾ?" ನಗುತ್ತಲೇ ಕೇಳಿದ್ದಳು ಅವಳಿಗೆ ತನ್ನ ನೋವಿನ ಖಿನ್ನತೆ ಲವಲೇಶವೂ ಇರಲಿಲ್ಲ.

ಪಕ್ಕದಲ್ಲಿ ಇರುವ ಅಚ್ಚರಿಯನ್ನ ನೋಡಿ ಏನು ಹೊಸ ಪ್ರಪೋಸಲ್ ಹಾ? ಪ್ರದ್ಯುಮ್ನ ನಕ್ಕಿದ್ದನಷ್ಟೇ.

ಖುಷಿ ಅವಳನ್ನ ನೋಡಿ ಚೆನ್ನಾಗಿ ಇದೆ ಹುಡುಗಿ ಏನು ನಿನ್ನ ಹೆಸರು? ಎಂದಾಗ ಆಕೆಯ ಹತ್ತಿರ ಹೋಗುವುದಕ್ಕೂ ಭಯ ಅಚ್ಚರಿಗೆ.. ಆಕೆಯ ಕುರುಪವನ್ನ ನೋಡಿ ಕಣ್ಣು ಮುಚ್ಚಿಯೇ ಅವಳೆದುರು ನಿಂತಿದ್ದಳು. "ಅಚ್ಚರಿ" ಅಂಥಾ ನನ್ನ ಹೆಸರು ಸುಮ್ಮನೆ ಪಿಸುನುಡಿದಿದ್ದಳು.

"ನೈಸ್ ನೇಮ್...!! ನಿನ್ನ ಬಗ್ಗೆ ತುಂಬಾ ಹೇಳ್ತಿದ್ರು ಇವ್ರು. ನೋಡು ಜೀವ ಅಮೂಲ್ಯವಾದದ್ದು ಸಾವು ನಮ್ಮನ್ನರಸಿ ಬರಬೇಕೆ ವಿನಃ ನಾವು ಸಾವನ್ನ ಹುಡ್ಕೊಂಡು ಹೋಗ್ಬಾರ್ದು ತಿಳಿತಾ? ಬದುಕು ಸ್ವೀಕಾರಕ್ಕಿದೆಯೇ ವಿನಃ ನಿರಾಕರಣೆಗಲ್ಲ.. ನಿಂಗೇ ಪ್ರದ್ಯುಮ್ನನಿಗಿಂತ ಒಳ್ಳೆ ಹುಡ್ಗ ಸಿಗ್ತಾನೆ ಯೋಚಿಸ್ಬೇಡ ಎಂದು ಅವಳ ನೆತ್ತಿ ಸವರಿದ್ದಳು ಖುಷಿ.

ಖುಷಿಯ ದುಃಖದ ಕಟ್ಟೆ ಒಡೆದಿತ್ತು. ಖುಷಿಯ ಕೈಮೇಲೆ ಪ್ರದ್ಯುಮ್ನನ ಕೈ ಇರಿಸಿ. "ನೀವು ಯಾವತ್ತೂ ಹೀಗೆಯೇ ಇರಿ. ನಿಮ್ಮ ಮೇಲೆ ಯಾರ ದೃಷ್ಟಿಯೂ ಬೀಳದೆ ಇರಲಿ. you are ಗ್ರೇಟ್ ಸರ್. ಮತ್ತೊಮ್ಮೆ ನನ್ನ ಕಣ್ಣಿಗೆ ಇಷ್ಟು ಮುದ್ದಾಗಿ ನೀವು ಕಂಡ್ರೆ ನಾನೇ ಓಡಿಸ್ಕೊಂಡ್ ಹೋಗಿ ಮದ್ವೆ ಆಗಿಬಿಡ್ತೀನಿ ಅಷ್ಟೇ. ಜೋಪಾನ ಮಾಡಿ ನಿಮ್ಮ ಯಜಮಾನರನ್ನ" ಎಂದು ನಗುತ್ತಲೇ ಹೇಳಿದ ಅಚ್ಚರಿಯ ಮನಸ್ಸು ಭಾರವಾಗಿತ್ತು. ಅಲ್ಲಿಂದ ಭಾರವಾದ ಹೆಜ್ಜೆ ಇಡುತ್ತಾ ಮನೆ ಸೇರಿದ್ದಳು...



Rate this content
Log in

Similar kannada story from Drama