ನನ್ನ ಮುದ್ದಿನ ಮಗಳು
ನನ್ನ ಮುದ್ದಿನ ಮಗಳು


ಅಮ್ಮ ಎನ್ನುವಾಗ ಎಲ್ಲರಿಗೂ ನೆನಪು ಆಗುವುದು ಆ ಪ್ರೀತಿ ತುಂಬಿದ ಮುಖ.ತನ್ನೊಳಗೆ ಎಂತದೇ ನೋವು ಇದ್ದರೂ ತೋರಿಸಿಕೊಳ್ಳದ್ದೇ ನಗುನಗುತ್ತಾ ಮಕ್ಕಳೊಂದಿಗೆ ಬೆರೆತು ಕಷ್ಟಪಟ್ಟು ಮಕ್ಕಳ ಸಾಕುವ ಮುದ್ದು ಅಮ್ಮ.ತಾಯಿ ಯಾವಾಗಲೂ ಮಕ್ಕಳ ಏಳಿಗೆಯನ್ನೇ ಬಯಸುವುದು. ಅದಕ್ಕೆ ಸ್ವಲ್ಪ ಅಡ್ಡಿ ಎದುರಾದರೂ ತಡೆದುಕೊಳ್ಳಲು ತಾಯಿಯಿಂದ ಅಸಾಧ್ಯ.
ಸುಮತಿಗೆ ಒಬ್ಬಳೇ ಒಬ್ಬಳು ಮುದ್ದಿನ ಮಗಳು ಕಾವ್ಯ.ಅಮ್ಮನಿಗೆ ಅವಳಲ್ಲಿ ಭಾರಿ ಪ್ರೀತಿ.ಅಪ್ಪ ಸೂರ್ಯನಿಗೂ ಅಷ್ಟೇ ಕಾವ್ಯ ಅಂದರೆ ಪ್ರಾಣ.ಅವಳು ಏನು ಕೇಳಿದರೂ ಇವರಿಬ್ಬರೂ ಇಲ್ಲ ಎನ್ನುತ್ತಿರಲಿಲ್ಲ.ಅದೇ ಸ್ವಾತಂತ್ರ್ಯ ಕಾವ್ಯ ತುಂಬಾ ಹಠಮಾರಿಯಾಗಿ ಬೆಳೆಯಲು ಕಾರಣವಾಯಿತು.ಚಿಕ್ಕಂದಿನಿಂದಲೂ ಕಾವ್ಯ ಹೇಳಿದ್ದೇ ಅವಳಿಗೆ ಆಗಬೇಕು.ಅವಳು ಹೆಚ್ಚಿಗೆ ಹಠ ಮಾಡುತ್ತಿದ್ದುದು ತಿನ್ನುವ ವಿಚಾರದಲ್ಲಿ.
ಒಂದು ದಿನ ಕಾಫಿಗೆ ಸಜ್ಜಿಗೆ ಆಗೊಲ್ಲ ಅವಳಿಗೆ.ಅವಲಕ್ಕಿ ಅಂತೂ ತಿಂದೇ ಗೊತ್ತಿಲ್ಲ.ಕಾಫಿಗೆ ಹಾಲು ಸರಿ ಬೀಳಬೇಕು. ಹಾಲಿನಲ್ಲೇ ಕಾಪಿ ಮಾಡಿದರೂ ಸರಿ .ದಿನವೂ ಚಪಾತಿ,ಇಡ್ಲಿ ,ಮಸಾಲೆ ದೋಸೆ,ಪರೋಟಾ ಎಂದು ಬೇರೆ ಬೇರೆ ತಿಂಡಿಗಳು ಆಗಬೇಕು.ಕೆಲವೊಂದು ಸಲವಂತೂ ಸುಮತಿಗೆ ಕಷ್ಟವಾಗಿ ಹೋಗುತ್ತಿತ್ತು ಹೋಟೆಲ್ನ ಲಿಯಾದರೂ ಇಷ್ಟು ಬಗೆ ತಿಂಡಿ ಮಾಡುವುದಿಲ್ಲವೇನು..ದಿನವೂ ಬಗೆ ಬಗೆಯದ್ದು ಆಗಬೇಕೆಂದರೆ ಏನು ಮಾಡುವುದು.
ಆಯಿತು ತಿಂಡಿ ಬೇರೆ ಬೇರೆ ಆದರೂ ಅದರಲ್ಲಿ ಕಾವ್ಯಳದು ಹೊಸ ಕಾನೂನುಗಳು ಇತ್ತು. ಎಂತದ್ದೇ ದೋಸೆ ಆದರೂ ತುಂಬಾ ತುಪ್ಪ ಬೀಳಬೇಕು .ಉದ್ದಿನ ದೋಸೆ ಸೆಟ್ ದೋಸೆಯಂತೆ ಆಗಬೇಕು.ತೆಳ್ಳವು ಪೇಪರ್ನಂತೆ ಆಗಬೇಕು.ಇಡ್ಲಿ ಹೂವಿನಂತೆ ಆಗಬೇಕು.ಊಟಕ್ಕಂತೂ ಎರಡು ಬಗೆ ಸಾಂಬಾರು ಆಗಲೇ ಬೇಕು. ಎರಡು ವಾರಕ್ಕೊಂದು ಸ್ವೀಟ್ ಮತ್ತೆ ಪಾಯಸ.ಈಗಿನ ಹೊಸ ನಮೂನೆ ತಿಂಡಿಗಳನಲ್ಲಾ ಮಾಡುವಂತೆ ಹಠ ಹಿಡಿಯುತ್ತಿದ್ದಳು ಕಾವ್ಯ.ಅದು ಸುಮತಿಗೆ ತಿಳಿಯುತ್ತಿರಲಿಲ್ಲ.
ಕೆಲವೊಂದು ದಿವಸ ಮಗಳ ಈ ಅವತಾರಗಳನ್ನು ನೋಡಿ ಸುಮತಿಗೆ ಕೋಪ ಬರುತ್ತದೆ. ಮಾಡಿ ಮಾಡಿ ಕೋಪ ಬರುವಾಗ ಸುಮತಿ ಕಾವ್ಯಳಿಗೆ ಬೈಯುತ್ತಿದ್ದಳು "ಹೋಗು ನೀನು ದೊಡ್ಡ ತಿಂಡಿಪೋತಿ.ನಿನ್ನದು ಆಯಿತು ಮುಗಿಯಿತು ಅನ್ನುವ ಮಾತೇ ಇಲ್ಲವೇ.ನನ್ನಿಂದ ಇನ್ನು ನಿನಗೆ ಮಾಡಿ ಹಾಕೋದು ಸಾದ್ಯವಿಲ್ಲ.ನೀನು ಹೇಳಿದಂತೆ ಮಾಡೋಕೆ ನನ್ನಿಂದಾಗದು.ಅಲ್ಲ ಮಾರಾಯ್ತಿ ನೀನು ಇಲ್ಲಿ ಹೀಗೆ ತಿಂದರೆ ಮುಂದೆ ಮದುವೆ ಆದ ಮೇಲೆ ಏನು ಮಾಡ್ತಿಯ ಅಂತ . ಅಲ್ಲಿಯೂ ಹಿಂಗೆ ರಾಗ ಏಳಿತಿಯ. ಅದು ಬೇಕು ಇದು ಬೇಕು ಅಂತ ಹಠ ಹಿಡಿತೀಯ.ಒಳ್ಳೆ ಜೋರಿನ ಅತ್ತೆ ಸಿಗಬೇಕು ನಿನಗೆ.ಆಗ ಏನು ಮಾಡ್ತಿ".
ಅದಕ್ಕೆ ಕಾವ್ಯ ನಗುತ್ತಾ ಹೇಳುವುದುಂಟು"ಹೋಗ್ಲಿ ಬಿಡು ಅಮ್ಮ .ಅದು ಮುಂದಿನ ವಿಷಯ.ಆಮೇಲೆ ಆಲೋಚನೆ ಮಾಡೋದು.ಈಗ ಯಾಕೆ ನಿನಗೆ ತಲೆಬಿಸಿ" ಅದಕ್ಕೆ ಅಪ್ಪನದು ಸಪೋರ್ಟ್ ಬೇರೆ.
"ನಿನಗೆ ಯಾಕೆ ಮಾರಾಯ್ತಿ ಮಗಳಲ್ಲಿ ಇಷ್ಟು ಕೋಪ,ಪಾಪ ಚಿಕ್ಕವಳು. ಅವಳು ಹೇಳಿದ ಹಾಗೆ ಮಾಡು.ನಮ್ಮ ಮಗಳು ಅಲ್ವಾ."ಎಂದು ಹೇಳಿ ಸುಮತಿಯನ್ನೇ ಜೋರು ಮಾಡುತಿದ್ದರು ಅಪ್ಪ.ಇನ್ನು ಕೇಳಬೇಕಾ ಕಾವ್ಯಳ ಕತೆ "ನೋಡು ಅಮ್ಮ ಅಪ್ಪನಿಗೆ ಕೂಡ ಅರ್ಥವಾಗುತ್ತಿದೆ.ನಿನಗೆ ಗೊತ್ತಾಗ್ತಾಯಿಲ್ಲ.. ಮತ್ತೆ ನೀನು ಯಾವ ಸೀಮೆಯ ಅಮ್ಮ" ಎಂದು ಹೇಳಿ ಕಿಸಕಿಸ ನೆ ನಕ್ಕಾಗ ಸುಮತಿಗೆ ಕೋಪ ತಡೆಯದೇ"ಹೌದು ಹೌದು ನೀವು ಅಪ್ಪ ಮಗಳು ಯಾವಾಗಲೂ ಒಂದೇ.ಅವಳಿಗೆ ಬೇಕಾದಂತೆ ಮಾಡಿದರೆ ನಿಮಗು ಹೊಟ್ಟೆ ತುಂಬಾ ತಿನ್ನಬಹುದಲ್ಲ.ಒಳ್ಳೇ ಜೋಡಿ ಅಪ್ಪ ಮಗಳದ್ದು.ಅದ್ಕೆ ಒಳ್ಳೆ ಐಡಿಯಾ ಮಾಡ್ತಿರ ನೀವು ಕೂಡ "
ಎಂದು ಹೇಳಿ ಬಿರಬಿರನೆ ಒಳನಡೆದವಳು ಸುಮತಿ.
ಇಷ್ಟೆಲ್ಲ ಕಾನೂನು ಮಾತಾಡುವ ಕಾವ್ಯಳಿಗೆ ದೇವರ ದಯದಲ್ಲಿ ಚನ್ನಾಗಿ ಒಂದು ಗ್ಲಾಸ್ ಕಾಫಿ ಮಾಡಲೂ ಬರುತ್ತಿರಲಿಲ್ಲ.ಕಾಲ ಹೀಗೆ ಇರುತ್ತ.ಕಾವ್ಯಳಿಗೆ ಮದುವೆ ನಿಶ್ಚಯವಾಗಿ ದೂರದ ಬೆಂಗಳೂರಿನ ಹುಡುಗ ಕಿಶನ್ ನೊಂದಿಗೆ ಮದುವೆಯೂ ಆಯಿತು.ಸುಮತಿಗೆ
ಮಗಳ ಮನೆಗೆ ಹೋಗಿ ನಾಲ್ಕು ದಿನ ನಿಲ್ಲುವ ಆಸೆ.ಆದರೆ ಮನೆಯಲಿ ಹಾಲು ಕರೆಯುವ ದನ ಮೂರು ಇತ್ತು.ಅದು ಹೇಗೋ ಕಾವ್ಯಳ ಅಪ್ಪನ ಒಪ್ಪಿಸಿ ಮೂರು ದಿನಕ್ಕೆ ಬೇಕಾದಷ್ಟು ಅಡಿಗೆ ಮಾಡಿ ಕೊಟ್ಟು ಮನೆಯಿಂದ ಹೊರಟಳು ಸುಮತಿ.ಈಗಲೇ ಕಾವ್ಯಳಿಗೆ ಮದುವೇ ಆಗಿ ಆರು ತಿಂಗಳು ಕಳೆದಿತ್ತು. ಕಾವ್ಯಳ ಮನೆಯಲಿ ಅವಳ ಅತ್ತೆ ಮಾವ ಕಾವ್ಯ ಅವಳ ಗಂಡ ಎಲ್ಲಾ ಸೇರಿ ನಾಲ್ಕು ಜನ ಇದ್ದರು.ಸುಮತಿ ಕಾವ್ಯಳ ಮನೆಗೆ ಹೋಗುವಾಗ ಅವಳಿಗೆ ಪ್ರೀತಿಯ ಚಕ್ಕುಲಿ,ಕೊಡುಬಾಳೆ,ಹಪ್ಪಳ, ಸೆಂಡಗೆ ಎಲ್ಲಾ ಮಾಡಿ ತೆಗೆದುಕೊಂಡು ಹೊರಟಳು. ಒಟ್ಟಿಗೆ ಮನೆಯಲ್ಲಿಯೇ ಬೆಳೆದ ಬೆಂಡೆಕಾಯಿ,ತೊಂಡೆಕಾಯಿಯು ಇತ್ತು.
ಕಾವ್ಯ ಅಮ್ಮನನು ಕಂಡ ಕೂಡಲೇ ಓಡಿ ಬಂದು ಅಮ್ಮನ ಕೈ ಹಿಡಿದುಕೊಂಡು ಲಗುಬಗೆಯಿಂದ ಒಳಗಡೆ ಕರೆದುಕೊಂಡು ಹೋಗಿ ಬಿಸಿ ಬಿಸಿ ಕಾಫಿ ಮಾಡಿಕೊಟ್ಟಳು.ಆ ಕಾಫಿಯ ಸ್ವಾದ ಸವಿಯುತ್ತಾ ಸುಮತಿಗೆ ಬಂದ ಸುಸ್ತು ಎಲ್ಲಾ ಮಾಯವಾಗಿತ್ತು.ಅಷ್ಟು ಅದ್ಭುತ ವಾಗಿತ್ತು ಕಾವ್ಯಳ ಕಾಫಿ.ಅದರೊಂದಿಗೆ ಅಚ್ಚರಿ ಯಾಗಿತ್ತು ಮಗಳ ಕೈ ರುಚಿ ನೋಡಿ.ಸುಮತಿ ಹೋದುದಕ್ಕೆ ಕಾವ್ಯಳ ಅತ್ತೆ ಹಲಸಿನ ಹಣ್ಣು ಪಾಯಸ ಮಾಡಿದರು.ಕಾವ್ಯ ಅಮ್ಮನೊಂದಿಗೆ ಕುಳಿತು ಗಬಗಬನೆ ಸರಿಯಾಗಿ ಪಾಯಸ ತಿನ್ನುವಾಗ ಸುಮತಿ ತಾನು ತಿನ್ನುವುದು ಬಿಟ್ಟು ಕಾವ್ಯಳ ಬಾಯಿಗೆ ನೋಡುತ್ತಿದ್ದರು.ಸುಮತಿ ಹಾಗೆ ನೋಡುವುದನ್ನು ನೋಡಿ ಕಾವ್ಯ"ಎನು ಅಮ್ಮ ನನ್ನ ಹಾಗೆ ನೋಡೋದು.ಮತ್ತೆ ನನಗೆ ಹೊಟ್ಟೆ ನೋವು ಬಂದರೆ ಏನು ಮಾಡುವುದು.ಮೊದಲು ಊಟ ಮಾಡು ಮತ್ತೆ ನನ್ನ ಮುಖ ನೋಡುವೆಯಂತೆ ಆಗದ" ನಗುತ್ತ ಹೇಳಿದಳು ಕಾವ್ಯ.ಅದಕ್ಕೆ ಸುಮತಿ"ಅಲ್ಲ ಮಗ ನಿನಗೆ ಮೊದಲು ಹಲಸಿನಹಣ್ಣು ಪಾಯಸ ಆಗದಲ್ಲ.ನನಗೆ ಮಾಡಿದರೆ ಆ ನಮೂನೆ ಬೈಕೊಂಡು ಇರುತಿದ್ದೆ.ಈಗ ಹೇಗೆ ತಿನ್ನೋಕೆ ಶುರು ಮಾಡಿದೆ ನೀನು"ಮೆಲ್ಲಗೆ ಆಶ್ಚರ್ಯದಿಂದ ಕೇಳಿದಳು ಸುಮತಿ.ಅದಕ್ಕೆ ಕಾವ್ಯ ಸಮಾಧಾನದಿಂದಲೇ ಹೇಳಿದಳು."ಹಂಗೆಂನು ಇಲ್ಲಮ್ಮ, ಈಗ ನನಗೆ ಎಲ್ಲಾ ಬಗ್ಗೆಯೂ ಆಗುತ್ತೆ"ಸುಮತಿಗೆ ಮನಸಿಗೆ ಆಯಿತು ಕಾವ್ಯ ಅತ್ತೆ ಮಾವ ಅಲ್ಲಿಯೇ ಇದ್ದಿದುದರಿಂದ ಸುಳ್ಳು ಹೇಳುತ್ತಿರಬಹುದೇ?"ಎಂತದಕ್ಕೂ ಕೇಳುವ ಎಂದು ಮನದಲ್ಲಿ ನೆನೆದು ಕಾವ್ಯ ಒಬ್ಬಳೇ ಇರುವಾಗ "ಏನು ಕಾವ್ಯ ನಿನಗೆ ಊಟಕ್ಕೆ ತಿಂಡಿಗೆ ಇಲ್ಲಿ ಏನಾದರು ಸಮಸ್ಯೆ ಇದಿಯೇನೆ?ಇದ್ದರೆ ಹೇಳು ನಾನು ಅಳಿಯಂದ್ರ ಹತ್ತಿರ ಮಾತಾಡುತ್ತೇನೆ.ಆಗದ ಮಗಳೇ"..
ಸುಮತಿಗೆ ಮೂರೇ ದಿನಗಳಲ್ಲಿ ತುಂಬಾ ಅಚ್ಚರಿ ಆಗಿತ್ತು.ಅಲ್ಲಿ ದಿನವು ಕಾಫಿಗೆ ತೆಳ್ಳವು,ಅದು ತುಪ್ಪ ಕಾಣದ ದೋಸೆ,ಊಟಕ್ಕೆ ಒಂದೇ ಬಗೆ.ಎಲ್ಲ್ಲ ಒಟ್ಟಿಗೆ ಕಾವ್ಯ ಸೂಪರ್ ಆಗಿ ಕಾಪಿ ಮಾಡಲು ಕಲಿತಿದ್ದಳು. ಸಜ್ಜಿಗೆ ಅವಲಕ್ಕಿ ಅಲ್ಲಿ ಮಾಮೂಲು.ಇಡ್ಲಿ ಚಪಾತಿ ಎಲ್ಲಾ ಎರಡು ತಿಂಗಳಿಗೆ ಒಮ್ಮೆ ಮಾಡುತ್ತಾರಷ್ಟೇ.ಅದೇ ಅಲೋಚನೆಯಲಿ ಕಾವ್ಯ ಹತ್ತಿರ ಕೇಳಿದಳು ಸುಮತಿ.ಅದಕ್ಕೆ ಕಾವ್ಯ"ಅಮ್ಮ ನನಗೆ ಹೇಗಿದ್ದರೂ ತೊಂದರೆ ಆಗೋದಿಲ್ಲ.ಹಿಂಗೆ ಆಗಬೇಕು ಅಂತ ಹೇಳೋದು ನಿನ್ನತ್ರ ಮಾತ್ರ.ಯಾಕೆ ಅಂದರೆ ನೀನು ಏನು ಹೇಳಿದ್ರೂ ಮಾಡ್ತಿ.ನಿನ್ನತ್ರ ಏನು ಬೇಕಾದರೂ ಮಾಡಿಸಿಕೊಂಡು ತಿನ್ನುವ ಅಧಿಕಾರ ನನಗಿದೆ.ಆದರೆ ನಾನು ಇಲ್ಲಿ ಈ ಮನೆಗೆ ಸೊಸೆ . ನನಗೆ ನನ್ನದೆ ಅದ ಕೆಲವು ಇತಿಮಿತಿಗಳಿವೆ ಜವಾಬ್ದಾರಿಗಳಿವೆ.ನಾನು ಹಠ ಮಾಡಬಾರದು.ಇನ್ನೊಬ್ಬರಿಗೆ ತೊಂದರೆ ಆಗದಂತೆ ನಡೆದುಕೊಳ್ಳಲು ಕಲಿತಿರಬೇಕು. ಅಲ್ಲವೇ ಅಮ್ಮ.ಆ ಹಠ ಎಲ್ಲಾ ನಿನ್ನ ಬಳಿ ಮಾತ್ರ.ಈಗಲೂ ನಿನ್ನತ್ರ ಹಠ ಮಾಡಲೇ ಬೇಕು..ಅದು ಮಾಡ್ಲೆ ಬೇಕಲ್ಲ.ಯಾಕಂದ್ರೆ ನಾನು ನಿನಗು ಅಪ್ಪನಿಗೂ ಮುದ್ದಿನ ಮಗಳಲ್ಲವೇ ಅಮ್ಮ"ಎಂದು ಪ್ರೀತಿಯಿಂದ ಅಮ್ಮನನ್ನು ಗಟ್ಟಿಯಾಗಿ ಅಪ್ಪಿಕೊಂಡು ಹೇಳಿದರೆ ಸುಮತಿಗೆ ಏನು ಹೇಳುವುದೆಂದು ಗೊತ್ತಾಗಲಿಲ್ಲ.ಒಂದು ಮಾತ್ರ ಅರ್ಥ ಆಗಿತ್ತು.ನನ್ನ ಮುದ್ದಿನ ಮಗಳು ಬೆಳದಿದ್ದಾಳೆ.ಪರಿಸರಕ್ಕೆ ತಕ್ಕಂತೆ ಹೊಂದಿಕೊಂಡು ಹೋಗಲು ಕಲಿತಿದ್ದಾಳೆ. ಸುಮತಿಗೆ ಗೊತ್ತಿಲ್ಲದೆ ಕಣ್ಣಂಚಲಿ ಕಂಬನಿ ಜಿನುಗಿದ್ದು ಕಾವ್ಯಳಿಗೆ ಗೊತ್ತೇ ಆಗಲಿಲ್ಲ.
ಅದು ಆನಂದಭಾಷ್ಪ......