Vijaya Bharathi

Abstract Drama Inspirational

3.2  

Vijaya Bharathi

Abstract Drama Inspirational

ಅವನು - ಅವಳು- ರಾಖಿ

ಅವನು - ಅವಳು- ರಾಖಿ

3 mins
312ಎಂದಿನಂತೆ ಬಸ್ ಸ್ಟಾಪ್ ನಲ್ಲಿ ಬಸ್ ಗಾಗಿ ಕಾಯುತ್ತಾ ನಿಂತಿದ್ದ ವಸುಧಾ ,ಸಮಯ ಸರಿಯುತ್ತಿದ್ದುದರಿಂದ, ಆಗಾಗ್ಗೆ ವಾಚನ್ನು ನೋಡಿಕೊಳ್ಳುತ್ತಾ,ಕತ್ತನ್ನು ಅತ್ತ ಇತ್ತ ಹೊರಳಿಸುತ್ತಾ, ಸಮಯ ಮೀರುತ್ತಿದ್ದರೂ ಬಾರದ ಬಸ್ ಗಾಗಿ ಚಡಪಡಿಸುತ್ತಿರುವುದನ್ನು , ದೂರದಿಂದಲೇ ಗಮನಿಸುತಿದ್ದಸುಮಂತ್, ಅವಳನ್ನು ಪರಿಚಯ ಮಾಡಿಕೊಂಡು ಮಾತನಾಡಿಸುವುದಕ್ಕೆಇದೇಸುಸಮಯವೆಂದುಕೊಂಡು ಅವಳು ನಿಂತಿದ್ದ ಜಾಗಕ್ಕೆ ಬಂದು, ಅವಳ ಸನಿಹದಲ್ಲೇ ನಿಂತ. ಕಾಲೆಜ್ ಗೆ ಹೊತ್ತಾಯಿತೆಂಬ ತವಕದಲ್ಲಿದ್ದವಸುಧಾ, ತನ್ನ ಪಕ್ಕದಲ್ಲಿರುವವರನ್ನು ಗಮನಿಸುವ ಗೋಜಿಗೆ ಹೋಗಲಿಲ್ಲ. 


ಗಡಿಯಾರದ ಮುಳ್ಳು, ಐದು, ಹತ್ತು, ಹದಿನೈದು,ಇಪ್ಪತ್ತು ....ನಿಮಿಷಗಳು ಮುಂದೋಡುತ್ತಿದ್ದಂತೆ, ವಸುಧಾಳ ಆತಂಕ ಹೆಚ್ಚಾಗುತ್ತಿತ್ತು. ಬಾರದ ಬಸ್ ಅನ್ನು ಶಪಿಸುತ್ತಾ, ಆಟೋಗಾಗಿ ಪರದಾಡತೊಡಗಿದಳು. ಬೆಂಗಳೂರಿನಲ್ಲಿ,ಗ್ರಾಹಕರು ಕೇಳಿದ ಸ್ಥಳಕ್ಕೆ ಯಾವ ಆಟೋದವರು ಬರುವುದಿಲ್ಲವೆಂಬ ಸತ್ಯವನ್ನರಿತಿದ್ದ ಅವಳಿಗೆ, ಆಟೋ ಹಿಡಿಯುವುದು

ದುಸ್ತರವೆನಿಸಿತು. ಇನ್ನು ಪರೀಕ್ಷೆಗೆ ಕೇವಲ ಒಂದು ಗಂಟೆ ಬಾಕಿ ಇದ್ದು, ಅಷ್ಟರೊಳಗೇ ಕಾಲೇಜ್ ಸೇರಬೇಕು. ಇಲ್ಲವಾದರೆ ಅವಳ ಭವಿಷ್ಯಕ್ಕೇ ಹೊಡೆತಬೀಳುವುದು ಗ್ಯಾರಂಟಿ. ಅವಳ ಆತಂಕ ಮೇರೆ ಮೀರಿತು, ಅಸಹಾಯಕತೆಯಿಂದ ಅವಳ ಕಣ್ಣಲ್ಲಿನೀರು ತುಂಬುತ್ತಿದೆ. ವಸುಧಾಳ ಪರದಾಟವನ್ನು ಹತ್ತಿರದಿಂದಲೇ ಗಮನಿಸುತ್ತಿದ್ದ ಸುಮಂತ್,ಅವಳ ಪಕ್ಕಕ್ಕೆ ಬಂದು, "ಎಕ್ಸ್ಯೂಸ್ ಮಿ, ನಿಮ್ಮ ಬಸ್ ಬಂದಿಲ್ವ? ಎನಿ ಹೆಲ್ಪ್?" ಎಂದಾಗ,ವಸುಧಾ ಅವನ ಮಾತಿಗೆ ಬೆಚ್ಚಿ, "ಇಟ್ ಈಸ್ ನನ್ ಆಫ್ ಯುವರ್ ಬಿಸ್ ನೆಸ್" ಪಟಾರ್ ಎಂದು ಉತ್ತರ ನೀಡಿ ಅವನಿಂದ ದೂರ ಸರಿದಳು.


ದೇವರ ದಯೆಯಿಂದ ಅವಳಿಗೆ ಆಟೋ ಸಿಕ್ಕಲಾಗಿ, ಅಂದು ಪರೀಕ್ಷೆಗೆ ಹತ್ತು ನಿಮಿಷ ಮೊದಲು ಕಾಲೇಜ್ ತಲುಪಿದಾಗ ,ಅವಳ ಮುಖದಿಂದ ಬೆವರಿಳಿಯುತ್ತಿತ್ತು. ಅಂದು ಪರೀಕ್ಷೆ ಮುಗಿಸಿ, ಮನೆಗೆ ಹಿಂತಿರುಗಿದಾಗ,ಅವಳಿಗೆ ಸಾಕುಸಾಕಾಗಿ ಹೋಗಿತ್ತು.


ಮತ್ತೆರಡು ದಿನಗಳು ಅದೇ ಬಸ್ ಸ್ಟಾಪ್ ನಲ್ಲಿ ಅದೇ ಹುಡುಗ(ಸುಮಂತ್)ನಿಂತಿರುವುದನ್ನು ಗಮನಿಸಿದಳು.ಅಷ್ಟೇ ಅಲ್ಲ, ಅವನು ಇವಳ ಚಲನವಲನಗಳನ್ನು ಗಮನಿಸುತ್ತಿರುವುದು ,ವಸುಧಾಳಿಗೆ ತಿಳಿಯದಿರಲಿಲ್ಲ. ’ಇದೇನಪ್ಪ ಹೊಸ ಕಷ್ಟ? ಈ ಹುಡುಗ ನನ್ನ ಹಿಂದೇಕೆ ಬಿದ್ದಿದ್ದಾನೆ. ಅವನನ್ನು ನೋಡಿದರೆ, ನನ್ನ ವಯಸ್ಸಿನವನಂತೆಯೇ ಇದ್ದಾನೆ. ಆದರೆ, ಅವನ ನೋಟ ನಡವಳಿಕೆಯೆಲ್ಲಾ ಬೇರೆ ರೀತಿಯೇ ಇದೆ.ಇವನಿಂದ ಹೇಗೆ ಪಾರಾಗುವುದು?’ ವಸುಧಾ ಮನದೊಳಗೇ ಉಪಾಯವನ್ನು ಹುಡುಕತೊಡಗಿದಳು.


ಒಂದು ದಿನ, ಬಸ್ ನಲ್ಲಿ ತನ್ನ ಪಕ್ಕದಲ್ಲೇ ಆ ಹುಡುಗ ಕುಳಿತಾಗ,ವಸುಧಾಳ ಪಜೀತಿ ಹೇಳತೀರದು. ಅವನು ನೋಡುವುದಕ್ಕೆ ಪಿ.ಯು.ಸಿ.ಓದುತ್ತಿರುವ ಹುಡುಗನಂತೇ ಕಂಡು ಬಂದರೂ, ಅವನ ನೋಟ ಬೇರೆಯೇ ಇರುವುದನ್ನು ಗಮನಿಸಿದ ವಸುಧಾ, ಒಳಗೊಳಗೇ ಹೆದರುತ್ತಿದ್ದಳು. ಈ ವಿಷಯವನ್ನು, ಮನೆಯವರಲ್ಲಾಗಲೀ, ತನ್ನ ಸ್ನೇಹಿತೆಯರೊಂದಾಗಲೀ ಹಂಚಿಕೊಳ್ಳಲಾಗದೆ, ಒಳಗೊಳಗೇ ತೊಳಲಾಡುತ್ತಿದ್ದಳು. ಐದಾರು ತಿಂಗಳುಗಳು ಇದೇ ತೊಳಲಾಟದಲ್ಲೇ ವಸುಧಾ ದಿನಗಳನ್ನು ನೂಕುತ್ತಿದ್ದಳು.ಪ್ರತಿದಿನವೂ ಸುಮಂತ್, ಇವಳ ಬಸ್ ನಲ್ಲೇ ಹತ್ತುತ್ತಿದ್ದ, ಅವನು ಎಲ್ಲಿ ಇಳಿಯುತ್ತಾನೆಂದು ಅವಳಿಗೆ ಗೊತ್ತಾಗುತ್ತಿರಲಿಲ್ಲ,ಏಕೆಂದರೆ, ಅವನಿಗಿಂತ ಮೊದಲೇ ಇವಳು ಇಳಿಯುತ್ತಿದ್ದಳು. ಅವನೇನೂ ಇವಳಿಗೆ ತೊಂದರೆ ಮಾಡದಿದ್ದರೂ, ಅವನ ನೋಟವೇ ಬೇರೆ ರೀತಿ ಇರುವುದನ್ನ ಇವಳು ಗಮನಿಸುತ್ತಿದ್ದಳು. ಕೆಲವೊಮ್ಮೆ ಒಂದೆರಡು ಮಾತುಗಳ ವಿನಿಮಯವೂ ಆಗುತ್ತಿತ್ತು. ಸುಕಾಸುಮ್ಮನೆ ಹುಡುಗರನ್ನು ಎದುರು ಹಾಕಿಕೊಳ್ಳುವುದು ಸರಿಯಿಲ್ಲ ವೆಂದು ತಿಳಿದಿದ್ದ ವಸುಧಾ, ಅವನು ಕೇಳಿದ ಪ್ರಶ್ನೆಗಳಿಗೆ ಚುಟುಕಾಗಿ ಉತ್ತರಿಸಿ,ಸುಮ್ಮನಾಗುತ್ತಿದ್ದಳು. ಆದರೂ ಇವನ ಈ ವರಸೆಯಿಂದ ಮುಕ್ತಳಾಗುವ ಉಪಾಯವನ್ನು ಮನದೊಳಗೇ ಯೋಜಿಸುತ್ತಿದ್ದಳು. ಅವನು ಇನ್ನೂ ಪಿ.ಯು.ಸಿ.ಯಲ್ಲಿ ಓದುತ್ತಿರುವ ಹುಡುಗನೆಂಬುದು ಅವನು ಫೋನ್ ನಲ್ಲಿ ಮಾತನಾಡುವಾಗ ಅವಳಿಗೆ ತಿಳಿಯಿತು . ಆದರೂ ಇಂದಿನ ಕಾಲದಲ್ಲಿ ಯಾವ ವಯಸ್ಸಿನ ಗಂಡು ಜೀವಗಳನ್ನು ನಂಬುವುದು ಕಷ್ಟವೆಂಬುದು ಅವಳಿಗೆ ಮನದಲ್ಲಿ ಬೇರೂರಿತ್ತು.ಈ ಚಿಕ್ಕ ಹುಡುಗನ ಮನಸ್ಸಿನಲ್ಲಿ ಪ್ರೇಮ ಭಾವವನ್ನು ಹೋಗಲಾಡಿಸಿ,ಸಹೋದರ ಭಾವ ಮೂಡಿಸ ಬೇಕೆಂದು ನಿರ್ಧರಿಸಿದಳು. 


ಅಂದು ಕಾಲೇಜ್ ನಲ್ಲೆಲ್ಲಾ, "ರಕ್ಷಾ ಬಂಧನ್" ದೇ ಮಾತುಗಳು. ನಾಳೆ ಆಚರಿಸಬೇಕಾಗಿರುವ "ರಕ್ಷಾಬಂಧನ"ಕ್ಕಾಗಿ ವಸುಧಾಳ ಗೆಳತಿಯರೆಲ್ಲರೂ, "ರಾಖಿ" ಕೊಳ್ಳಲು, ಹತ್ತಿರದ ಅಂಗಡಿಗೆ ಹೋಗುವಾಗ,

ಅವಳೂ ಸಹ ಅವರ ಜೊತೆ ಹೋಗಿ ರಾಖಿಯೊಂದನ್ನು ಕೊಂಡು,ತನ್ನ ಬ್ಯಾಗ್ ನಲ್ಲಿ ಸೇರಿಸಿದಳು. ಅವಳ ಮನಸಿನಲ್ಲಿ ಒಂದು ಹೊಸ ಯೋಜನೆ ರೂಪಗೊಂಡಿತ್ತು.   ಅಂದು ರಾತ್ರಿ,ಮಲಗುವ ಮುಂಚೆ, ಇಂದಿನ ಯುವ ಪೀಳಿಗೆಗೆ ಅತ್ಯಂತ ಇಷ್ಟವಾಗಿರುವಈ ರಾಖಿ ಹಬ್ಬದ ಬಗ್ಗೆ ತಿಳಿಯುವ ಕುತೂಹಲ ಉಂಟಾಗಿ, ಗೂಗಲ್ ಸರ್ಚ್ ಗೆ ಹೋದಳು. ಸರ್ಚ್ ಮಾಡುತ್ತ ಹೋದಂತೆ, ಈ ರಕ್ಷಾಬಂಧನದ ಬಗ್ಗೆ ಅನೇಕ ವಿಷಯಗಳು ತಿಳಿಯುತ್ತಾ ಹೋಯಿತು.


"ಶ್ರಾವಣ ಮಾಸದ ಹುಣ್ಣಿಮೆಯಂದು ಸಹೋದರ ಸಹೋದರಿಯರ ಬಾಂಧವ್ಯದ ಶ್ರೇಯಸ್ಸಿಗಾಗಿ, ಈ ಹಬ್ಬದ ಆಚರಣೆ ಬೆಳದು ಬಂದಿದೆ. ಇದಕ್ಕೆ, ನೂಲು ಹುಣ್ಣಿಮೆ, ರಕ್ಷಾಬಂಧನ್, ರಾಖಿ, ಎಂಬ ಹೆಸರುಗಳಿಂದ ಪ್ರಸಿದ್ಧಿ ಹೊಂದಿದೆ.ಇದು ಕೇವಲ ರಕ್ತಸಂಬಂಧಿಗಳಷ್ಟೆ ಸೀಮಿತವಾಗಿರದೆ, ಭಾವನಾತ್ಮಕ ಭ್ರಾತೃತ್ವ ದ ಬಂಧನಗಳವರೆಗೂ ಹಬ್ಬಿದೆ. ಸ್ವಂತ ಅಣ್ಣ ತಮ್ಮಂದಿರು ಇಲ್ಲದವರು, ಅವರಿಗೆ ಅತ್ಯಂತ ಹತ್ತಿರವಾದವರೊಂದಿಗೆ, ರಾಖಿ ಕಟ್ಟುವುದರ ಮೂಲಕ, ಸಹೋದರತ್ವವನ್ನು ಬೆಸೆದುಕೊಳ್ಳುತ್ತಾರೆ.ಈ ಹಬ್ಬಕ್ಕೆ,ಪ್ರಾಚೀನ, ಐತಿಹಾಸಿಕ ಹಿನ್ನಲೆಗಳು ಇವೆ. ಒಮ್ಮೆ ದ್ರೌಪದಿ, ಕೃಷ್ಣನ ಕೈಯಲ್ಲಿ ರಕ್ತ ಬಂದಾಗ, ತನ್ನ ಸೀರೆಯ ಸೆರಗನ್ನು ಹರಿದು, ತನ್ನ ಭ್ರಾತೃ ಸಮಾನನಾದ ಕೃಷ್ಣನಿಗೆ ಕಟ್ಟುತ್ತಾಳೆ. ದೌಪದಿ ಕೃಷ್ಣರ ಸಂಬಂಧ, ಅಣ್ಣ ತಂಗಿಯರ ಸಂಬಂಧವಾಗಿದ್ದು, ದ್ರೌಪದಿಯ ಸಂಕಟ ಸಮಯದಲ್ಲಿ ಕೃಷ್ಣ ಓಡೋಡಿ ಬಂದು, ಅವಳಿಗೆ ಸಹಾಯ ಮಾಡಿ, ಅವಳನ್ನು ಕಾಪಾಡುತ್ತಿದ್ದನೆಂಬೆಂದು ಇತಿಹಾಸದಿಂದ ತಿಳಿದುಬರುವ ಅಂಶ,ಇದೇ ರೀತಿ,ಅಲೆಕ್ಸಾಂಡರ್ ನ ಪತ್ನಿ,ಪುರೂರವನಿಗೆ ರಾಖಿಯನ್ನು ಕಟ್ಟಿ,

ಸೋದರತ್ವದ ಹೊಣೆಗಾರಿಕೆಯನ್ನು ಹೊರೆಸಿ, ತನ್ನ ಗಂಡನನ್ನು ಉಳಿಸಿಕೊಳ್ಳುವ ಪ್ರಸಂಗವಿದೆ.ಸಹೋದರ ಬಾಂಧವ್ಯದ ಒಳಿತಿಗಾಗಿ,ಸಹೋದರರಿಗೆ ರಾಖಿ ಕಟ್ಟಿ, ಅವರ ಒಳಿತಿಗಾಗಿ ಪ್ರಾರ್ಥಿಸುತ್ತಾ, ಅವರಿಗೆ 

ಆರತಿ ಬೆಳಗುವುದು. ಹೀಗೆ ಈ ರಕ್ಷಾಬಂಧನದ ಹಬ್ಬ ಪುರಾಣಿಕ,ಐತಿಹಾಸಿಕ ಹಿನ್ನಲೆಯನ್ನು ಹೊಂದಿದೆ.ಇದರ ಇನ್ನೊಂದು ರೂಪವಾಗಿ, ನಮ್ಮ ಕರ್ನಾಟಕದಲ್ಲಿ,ನಾಗರ ಪಂಚಮಿಯಂದು, ಸಹೋದರಿಯರು ತಮ್ಮಸಹೋದರರನ್ನು ಮನೆಗೆ ಕರೆದು ಹೊಟ್ಟೆ ಬೆನ್ನಿಗೆ ಹಾಲು ತುಪ್ಪ ಹಚ್ಚಿ, ಒಳ್ಳೆಯದಾಗಲೆಂದು ಪ್ರಾರ್ಥಿಸುತ್ತಾ, ಉಡುಗೊರೆಗಳನ್ನು ಕೊಡುವ ಸಂಪ್ರದಾಯವಿದೆ."


ಗೂಗಲ್ ಸರ್ಚ್ ನಿಂದ ವಸುಧಾಳಿಗೆ, ಈ ರಕ್ಷಾಬಂಧನದ ಪ್ರಾಮುಖ್ಯತೆಯ ಬಗ್ಗೆ ಅನೇಕ ವಿಷಯಗಳು ತಿಳಿಯಿತು.ಅವಳು ತಕ್ಷಣ ಒಂದು ನಿರ್ಧಾರಕ್ಕೆ ಬಂದಳು. ತನ್ನನ್ನು ಹಿಂಬಾಲಿಸುತ್ತಿರುವ ಆ ಸುಮಂತ್ ಗೆ ರಾಖಿ ಕಟ್ಟಿಬಿಟ್ಟು, ಸಹೋದರನನ್ನಾಗಿ ಸ್ವೀಕರಿಸಿಬಿಟ್ಟರೆ ತನಗೆ ನಿರಾಳವಾಗುತ್ತದೆ ಎಂದು ವಸುಧಾ ನಿರ್ಧರಿಸಿದಳು.


ಮಾರನೆಯ ದಿನ, ಮಾಮುಲಾಗಿ ಬಸ್ ಸ್ಟಾಪ್ ನಲ್ಲಿ ಸುಮಂತ್, ನಿಂತಿದ್ದಾಗ, ವಸುಧಾ, ಅವನ ಹತ್ತಿರ ಹೋಗಿ," ಹಲೋ ಬ್ರದರ್,ಹ್ಯಾಪಿ ರಕ್ಷಾ ಬಂಧನ್"ಎಂದು ಹೇಳುತ್ತಾ, ಅವನ ಹಣೆಗೆ ತಿಲಕ ಹಚ್ಚಿ,ಅವನ ಬಲಗೈಗೆ ’ರಾಖಿ’ ಕಟ್ಟಿದಾಗ, ಸುಮಂತ್ ತಬ್ಬಿಬ್ಬಾದ.ವಸುಧಾಳನ್ನು ತನ್ನ ಪ್ರೇಯಸಿಯಂತೆ ಕಲ್ಪಿಸಿಕೊಂಡೂ, ಅವಳ ಹಿಂದೆ ಹಿಂದೆ ಸುತ್ತುತ್ತಿದ್ದಸುಮಂತ್ ಗೆ ಶಾಕ್ ಆಯಿತು.


ವಸುಧಾ ಕಟ್ಟಿದ್ದ ರಾಖಿಯನ್ನು ಮುಟ್ಟಿನೋಡಿಕೊಳ್ಳುತ್ತಾ,ಅವಳನ್ನು ಸಹೋದರಿ ಭಾವದಿಂದ ನೋಡಲು ಪ್ರಾರಂಭಿಸಿದ.ಅವನ ನೋಟದಲ್ಲಿ ಬದಲಾವಣೆ ಯಾಗತೊಡಗಿತು.  ಪ್ರೇಯಸಿಯ   ಭಾವದಿಂದ, ಭ್ರಾತೃತ್ವಭಾವಕ್ಕೆ ತಿರುಗಿಸಿದ ಈ "ರಾಖಿ"ಯ ಬಗ್ಗೆ ವಸುಧಾಳಿಗೆ ಹೆಮ್ಮೆಯೆನಿಸಿತು. ಇಬ್ಬರ ಕಣ್ಣುಗಳು ಭಾವುಕತೆಯಿಂದ ತೇವಗೊಂಡವು.ವಸುಧಾಳ ಜಾಣ್ಮೆಗೆ ತಲೆದೂಗಿದ ಸುಮಂತ್, ತನ್ನ ವಾಲೆಟ್ನಿಂದ ನೂರರ ನೋಟೊಂದನ್ನು ತೆಗೆದು, ತನ್ನ ಹೊಸ ಸಹೋದರಿಗೆ  ಉಡುಗೊರೆ ನೀಡುವುದರ ಮೂಲಕ ವಸುಧಾಳನ್ನು ಹರಸಿದ.


                     


Rate this content
Log in

Similar kannada story from Abstract