Best summer trip for children is with a good book! Click & use coupon code SUMM100 for Rs.100 off on StoryMirror children books.
Best summer trip for children is with a good book! Click & use coupon code SUMM100 for Rs.100 off on StoryMirror children books.

Vijaya Bharathi

Abstract Drama Others


4  

Vijaya Bharathi

Abstract Drama Others


ನಿರ್ಧಾರ

ನಿರ್ಧಾರ

9 mins 172 9 mins 172


ಆಪೀಸಿನಿಂದ ಮನೆಗೆ ಹೊರಡುವ ಸಮಯಕ್ಕೆ ಸರಿಯಾಗಿ, ಮ್ಯಾನೆಜರ್ ಇಂದ ನನಗೆ ಬುಲಾವ್ ಬಂದಾಗ, ಚೇಂಬರ್ ಕಡೆ ಹೊರಟೆ. ಇತ್ತೀಚೆಗೆಒಂದು ತಿಂಗಳಿನಿಂದ ,ಒಬ್ಬರಲ್ಲ ಒಬ್ಬರಿಗೆ ಈ ರೀತಿಯ ಕರೆ ಕಳುಹಿಸಿ,

"ಟರ್ಮಿನೇಶನ್ ಆರ್ಡರ್" ಕೊಡುತ್ತಿರುವುದು, ಈ ಆಫೀಸಿನಲ್ಲಿ ಸಾಮನ್ಯಸಂಗತಿಯಾಗಿ್ದ್ದು, ಇಂದು

ನನಗೆ ಬಂದಿರುವುದರಿಂದ,"ಇನ್ನು ನನಗೇನು ಕಾದಿದೆಯೋ?"ಎಂದು ಕೊಳ್ಳುತ್ತಲೇ ಮ್ಯಾನೆಜರ್ ಚೇಂಬರ್ ಕಡೆ ಹೊರಟೆ.’ಒಂದು ತಿಂಗಳ ಹಿಂದೆಯಷ್ಟೆಕೆಲಸದ ಅನಿಶ್ಚಿತತೆಯ ಬಗ್ಗೆ ತಿಳಿಸುತ್ತಾ, ಒಂದು ನೋಟಿಸ್, ನನಗೆ ನೀಡಿದ್ದು ಈಗ ನೆನಪಾಗುತ್ತಿದೆ. ಇನ್ನು ಇವತ್ತು ನನಗೆ ಕರೆ ಬಂದಿದೆ ಎಂದರೆ ನನಗೂ ಏನು ಗ್ರಹಚಾರ ಕಾದಿದೆಯೋ?’ ಚೇಂಬರ್ ಮುಂದೆ ನಿಂತು,

"ಮೇ ಐ ಕಮಿನ್ ಸರ್" ಎಂದು ಅನುಮತಿಗಾಗಿ ಕ್ಷಣ ಕಾಲ ನಿಂತೆ.

"ಎಸ್, ಪ್ಲೀಸ್ ಕಮಿನ್" ನಗುನಗುತ್ತಾ ನನ್ನನ್ನು ಸ್ವಾಗತಿಸಿದಾಗ, , ಒಳಗೆ ಕಾಲಿಟ್ಟೆ."ಪ್ಲೀಸ್ ಬಿ ಸೀಟೆಡ್" ಎಂದಾಗ, ಮ್ಯಾನೇಜರ್ ಮುಂದಿರುವ ಕುರ್ಚಿಯಲ್ಲಿ ಕುಳಿತೆ.

ಸ್ವಲ್ಪ ಹೊತ್ತಿನವರೆಗೂ ಮ್ಯಾನೇಜರ್ ಅದೂ ಇದೂ ಮಾತನಾಡುತ್ತ ಹೋದಾಗ, ನನಗೆ ಆಶ್ಚರ್ಯ.ಅವರು ಎಂದೂ ವೈಯಕ್ತಿಕ ವಿಷಯದ ಬಗ್ಗೆ ಕೇಳಿದವರೇ ಅಲ್ಲ. ’ಇಂದೇಕೆ ಹೀಗೆ?’ ನನ್ನ ಮನಸ್ಸು ಚಿಂತಿಸತೊಡಗಿತು.


. ಸಾಧಾರಣವಾಗಿ ಯಾವಾಗಲೂ ಕೆಲಸದ ಬಗ್ಗೆಯಷ್ಟೆ ವಿಚಾರವಿನಿಮಯ ಮಾಡುತ್ತಿದ್ದಅವರು, ಇಂದೇನು ಬೇರೆ ರೀತಿಯೇ ಮಾತನಾಡುತ್ತಿದ್ದಾರಲ್ಲ? ಎಂದು ಮನಸ್ಸಿನಲ್ಲೇ ಲೆಕ್ಕಾಚಾರ ಹಾಕುತ್ತ, ಆಗಾಗ ನನ್ನ ಕೈ ಗಡಿಯಾರದತ್ತ ನೋಡಿಕೊಳ್ಳುತ್ತಾ, ಚಡಪಡಿಸುತ್ತ ಕುಳಿತ್ತಿದ್ದ ನನ್ನನ್ನು ಗಮನಿಸಿದ ಅವರು ,

"ಒಕೆ,ಮಿ.ಅಜಯ್, ಇನ್ನು ಜಾಸ್ತಿ ಸಮಯ ತೆಗೆದುಕೊಳ್ಳುವುದಿಲ್ಲ,ವಿಷಯಕ್ಕೆ ಬರ್ತೀನಿ" ಎಂಬ ಪೀಠಿಕೆಯಿಂದ ಶುರುಮಾಡಿ, " ಇಂದಿನ ಬದಲಾದ ಆರ್ಥಿಕ ನೀತಿಯಿಂದಾಗಿ,ನಮಗೆ ಸ್ಟಾಫ಼್ ರಿಡಕ್ಷನ್ ಅನಿವಾರ್ಯ ವಾಗಿರುವುದರಿಂದ ಇದನ್ನು ನಿಮಗೆ ಕೊಡಬೇಕಾಗಿದೆ ಸಾರಿ" ಎಂದು ಹೇಳುತ್ತಾ, ನನ್ನ ಕೈಗೆ ಒಂದು ಕವರ್ ಕೊಟ್ಟಾಗ ನನಗೆ ಶಾಕ್ ಆಯಿತು. ನಾನು ಹೆದರಿದಂತೆಯೇ ನನ್ನನ್ನು ಕೆಲಸದಿಂದ ತೆಗೆಯಲಾಗಿತ್ತು. ಆದರೂ ತಕ್ಷಣ ಸೋಲು ಒಪ್ಪಿಕೊಳ್ಳುವುದು ಹೇಗೆ?

"ಸರ್, ಈ ರೀತಿ ಇದ್ದಕ್ಕಿದ್ದಂತೆ ಕೆಲಸದಿಂದ ತೆಗೆಯುವುದು ಎಷ್ಟು ಸಮಂಜಸ?"

ನಾನು ತುಂಬಾ ಆತಂಕದಿಂದ ಕೇಳಿದಾಗ,

"ಸಾರಿ ಮಿ. ಅಜಯ್, ಐ ಆಮ್ ಅಲ್ಸೋ ಹೆಲ್ಪ್ಲೆಸ್,ನಾನು ಈಗಾಗಲೇ ಈ ವಿಷಯವಾಗಿ ಒಂದು ನೋಟಿ ಸ್ ಕೊಟ್ಟಿದ್ದೆ,ನೆನಪು ಮಾಡಿಕೊಳ್ಳಿ, ನಾಳೆ ನನಗೂ ಇದೇ ಗತಿ ಬರಬಹುದು.ನಾನೂ ಕೂಡ ಸರದಿಯಲ್ಲಿರುವವನೇ, ಐ ಆಮ್ ಸಾರಿ" ಎಂದು ಹೇಳಿ , ಅವರು ಸುಮ್ಮನೆ ಕುಳಿತುಬಿಟ್ಟಾಗ, ’ಮುಂದೇನು?’ ಎಂದು ಯೋಚಿಸುತ್ತಾ ಸುಮ್ಮನೆ ಕುಳಿತೆ. ನಾನು ಪೆಚ್ಚುಮುಖ ಹಾಕಿಕೊಂಡು ಅವರ ಮುಂದೆ ಎಷ್ಟು ಸಮಯ ಕುಳಿತಿದ್ದೆನೋ ತಿಳಿಯಲಿಲ್ಲ..

ಕಡೆಗೆ ಮ್ಯಾನೆಜರ್ ಮಾತನಾಡಿದಾಗ, ನಾನು ನನ್ನ ಯೋಚನೆಗಳಿಂದ ಹೊರಬಂದದ್ದು.

"ಮಿ. ಅಜಯ್, ತುಂಬಾ ಯೋಚನೆ ಮಾಡಬೇಡಿ, ದೇವರು ಒಳ್ಳೆಯದು ಮಾಡಲಿ,ನಿಮಗೆ ಬರಬೇಕಾಗಿರುವ ಬೆನಿಫ಼ಿಟ್ಸ್ ಗಳನ್ನೆಲ್ಲಾ, ಈಗಾಗಲೇ ಅರೇಂಜ್ ಮಾಡೀದ್ದೇನೆ. ನೀವು ಚೆಕ್ ಮಾಡಿಕೊಳ್ಳಿ",ಅವರು ನನಗೆ ಹೊರಡುವ ಸೂಚನೆ ಕೊಟ್ಟು, ಒಂದು ಫೋನ್ ಕಾಲ್ ನಲ್ಲಿ ತೊಡಗಿಕೊಂಡಾಗ, ನಾನು ಚೇಂಬರ್ ನಿಂದ ಹೊರಬಂದೆ.


ನಾನು ಹೊರಗೆ ಬರುವುದನ್ನೇ ಕಾಯುತ್ತಿದ್ದ ನನ್ನ ಆಪ್ತ ಗೆಳೆಯರು,ನನ್ನ ಸೋತ ಮುಖವನ್ನು ಗಮನಿಸಿ

ನಡೆದಿರಬಹುದಾದ ಘಟನೆಯನ್ನು ಊಹಿಸಿಕೊಂಡು ನನ್ನನ್ನು ಸಮಾಧಾನ ಪಡಿಸುವ ಪ್ರಯತ್ನ ನಡೆಸಿದರು.

" ಏನಾಯ್ತು ಅಜು, ಏನಮ್ಮ ಈ ಕವರ್?",ನನ್ನ ಕೈಲಿದ್ದ ಕವರನ್ನು ತೆಗೆದು ಓದಿದರು.

"ಸಾರಿ ಅಜು, ನೀನೇನೂ ಯೋಚನೆ ಮಾಡಬೇಡಾಮ್ಮ,ಇದಲ್ಲದಿದ್ದರೆ ಇನ್ನೊಂದು ಕೆಲಸ ಬೇರೆ ಎಲ್ಲಾದರೂ ಸಿಗುತ್ತೆ ಕಣಮ್ಮ,ಡೋಂಟ್ ವರಿ,ನಾವೆಲ್ಲರೂ ನಿನ್ನ ಜೊತೆ ಇರ್ತೀವಿ.

ಮುಂದೆ ಅಪೀಲ್ ಹೋಗು,ಹಾಗೇ ಬಿಡಬೇಡ" .ಎಲ್ಲರೂ ಅವರವರಿಗೆ ತೋಚಿದಂತೆ, ಸಾಂತ್ವನ ಹೇಳುತ್ತಿದ್ದರೂ, ಅವರ ಮಾತುಗಳು ನನ್ನ ಕಿವಿಯನ್ನು ತಲುಪುತ್ತಿರಲಿಲ್ಲ.ನನ್ನ ಮುಂದಿದ್ದ ಒಂದೇ ಪ್ರಶ್ನೆ,"ಮುಂದೇನು?ಹೇಗೋ ಎಲ್ಲರಿಂದ ಬೀಳ್ಕೊಂಡು, ಆಫೀಸ್ ಬಿಟ್ಟೆ.ಮನೆಯ ಕಡೆ ಹೊರಟೆ.

ಈಗ ನನ್ನ ತಲೆಯಲ್ಲಿ ಓಡುತ್ತಿದ್ದ ಒಂದೇ ಪ್ರಶ್ನೆ’ಮುಂದೇನು?’. ಈ ವಿಷಯವನ್ನು ಮನೆಯಲ್ಲಿ ಹೇಗೆ ತಿಳಿಸುವುದು?ಅಹನಾ ಹೇಗೆ ಪ್ರೆತಿಕ್ರಿಯಿಸುತ್ತಾಳೆ?.ಮನೆಯಲ್ಲಿ ಸಂಸಾರ ನಿರ್ವಹಣೆಗೆ

ತೊಂದರೆಯಾಗದಿದ್ದರೂ, ಈ ವಿಷಯವನ್ನು ತಿಳಿಸುವುದು ಸ್ವಲ್ಪ ಕಷ್ಟವೇ. ವಿಷಯವನ್ನು ಅಪ್ಪ ಅಮ್ಮನಿಗೆ ತಿಳಿಸುವುದು ಹೇಗೆ?ಇನ್ನೊಂದು ಕೆಲಸ ಸಿಗುವತನಕ ವಿಷಯವನ್ನು ಅವರಿಂದ ಮುಚ್ಚಿಟ್ಟು ನಿಭಾಯಿಸಬೇಕು. ಸಧ್ಯ, ಪುಣ್ಯಕ್ಕೆ ನಮಗಿನ್ನೂ ಮಕ್ಕಳಾಗಿಲ್ಲ.ಅದು ಇದ್ದಿದ್ದರೆ ಇನ್ನೂ ಫಜೇತಿ ಆಗಿರೋದು. ನಮ್ಮ ಮದುವೆಯಾಗಿ ನಾಲ್ಕು ವರ್ಷಗಳು ಕಳೆಯುತ್ತಾ ಬಂದಿದೆಯಾದರೂ, ಮಕ್ಕಳ ಬಗ್ಗೆ ಯೋಚಿಸುವುದಕ್ಕೇ ಭಯವೆನಿಸುವಂತಾಗಿದೆ. ಎಷ್ಟೋಬಾರಿ ಅಹನಾ(ನನ್ನ ಪತ್ನಿ),ಮಕ್ಕಳುಬೇಕೆಂದು ಆಸೆಪಟ್ಟರೂ, ’ಅದಕ್ಕೇನು ಅವಸರ,ನಮಗೆ ಇನ್ನೂ ವಯಸ್ಸು ಮೀರಿಹೋಗಿಲ್ಲ, ಆಗಲಿ ಬಿಡು ನಿಧಾನಕ್ಕೆ’ಅಂತ ನಾನೇ ಮುಂದೂಡುತ್ತಿದ್ದೇನೆ. ಸಧ್ಯ,ಇಂದಿನ ಈ ಉದ್ಯೋಗಳ ಅನಿಶ್ಚಿತತೆಯಲ್ಲಿ ಮಕ್ಕಳು ಮರಿ ಬೇಡವೇನೋ ಎನಿಸುವಂತಾಗಿದೆ. ಇಂದಿನಿಂದಲೇ ಮತ್ತೆ ಬೇರೆ ಉದ್ಯೋಗಕ್ಕೆ ಭೇಟೆ ನಡೆಸಬೇಕು. ಸ್ವದೇಶ,ವಿದೇಶಗಳ "ಜಾಬ್ ಪ್ರೊಫೈಲ್ " ಜಾಲಾಡಿಸಬೇಕು.


ಈ ಜಾಗತಿಕ ಆರ್ಥಿಕ ನೀತಿಯ ಏರುಪೇರುಗಳಿಂದಾಗಿ, ಇಂದು, ಎಮ್.ಎನ್.ಸಿ. ಉದ್ಯೋಗಗಳೇ ಅಲ್ಲಾಡಿಹೋಗುತ್ತಿವೆ. ಇನ್ನು ಸರ್ಕಾರಿ ನೌಕರಿಯತ್ತ ನಾವುಗಳು ಹೋಗಲು ಸಾಧ್ಯವೇ ಇಲ್ಲ. ಸರ್ಕಾರಿ ನೌಕರಿಯಲ್ಲಿ ಹೀಗಾಗಿದ್ದಿದ್ದರೆ, ನೌಕರರ ಪರವಾಗಿ ವಕಾಲತ್ ಹೋಗಬಹುದಾಗಿತ್ತೇನೋ?. ಇಲ್ಲಿ ಅದಕ್ಕೆಲ್ಲಾ ಅವಕಾಶವಿಲ್ಲ. ಆದರೂ ಯಾವುದಾದರೂ ವಕೀಲರನ್ನು ವಿಚಾರಿಸಿ ನೋಡಬೇಕು. ಈ ರೀ ತಿ ಇದ್ದಕ್ಕಿದ್ದಂತೆ ಕೆಲಸದಿಂದ ಕಿತ್ತು ಹಾಕುವುದು ಯಾವ ನ್ಯಾಯ? ನಾವು ಓದುವ ಕಾಲದಲ್ಲಿಸಾಫ್ಟ್ವೆರ್ ಪೀಲ್ಡ್ ನಲ್ಲಿ ತುಂಬಾ ಅವಕಾಶಗಳಿವೆಯೆಂದು, ನಾವೆಲ್ಲರೂ ’ಕಂಪ್ಯೂಟರ್ ಸೈನ್ಸ್’ ಅನ್ನೇ ತೆಗೆದುಕೊಂಡು ಬಿ.ಇ. ಮುಗಿಸಿ, ಈ ಫೀಲ್ಡನ್ನು ಅಪ್ಪಿಕೊಂಡಿದ್ದಾಯಿತು. ಅದೂ ಅಲ್ಲದೆ ಓದು ಮುಗಿಯುತ್ತಿದ್ದ ಹಾಗೆ, ಎಮ್.ಎನ್.ಸಿ ಕಂಪನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದೂ ಅಯಿತು. ನಮ್ಮ ಸ್ನೇಹಿತರಲ್ಲಿ ಕೆಲವರು, ಯು.ಸ್.,ಯು.ಕೆ,ಜೆರ್ಮನಿ, ಆಸ್ಟ್ರೇಲಿಯ ...ಎಂದು ದೇಶವನ್ನೂ ಬಿಟ್ಟು ಅನಿವಾಸಿಭಾರತೀಯರಾಗಿದ್ದೂ ಅಯಿತು. ನಾನೂ ಸಹ ವಿದೇಶಕ್ಕೆಹಾರುವ ಕನಸನ್ನು ಹೊತ್ತುಕೊಂಡೇ, ಶ್ರದ್ಧೆಯಿಂದ ಕೆಲಸ ಮಾಡುತ್ತಾ ಬಂದಿದ್ದೆ, ಎಷ್ಟೋ ಬಾರಿ, ಮೈಯಲ್ಲಿ ಆರಾಮವಿಲ್ಲದಿದ್ದರೂ, ಮಾತ್ರೆ ನುಂಗಿಕೊಂಡೇ ಕೆಲಸ ಮಾಡಿದ್ದೆ. ರಜ ತೆಗೆದುಕೊಳ್ಳುವುದು ತುಂಬಾ ಕಷ್ಟವಾಗುತ್ತಿತ್ತು. ಹೀಗಾಗಿ, ಎಂತೆಂತಹ ಅನಾರೋಗ್ಯದಲ್ಲೂ, ನಾನು

ರಜ ಹಾಕದೆ ಕೆಲಸ ಮಾಡಿದ್ದೆ,. ಆದರೆ ಇಂದು ನನಗೆ ಸಿಕ್ಕ ಪ್ರತಿಫಲವಾದರು ಏನು? ಇತ್ತೀಚಿಗಂತೂ ಪ್ರೊಜೆಕ್ಟ್ ಸಿಕ್ಕುವುದೂ ತುಂಬಾಕಷ್ಟವಾಗುತ್ತಿದೆ. ಗಳಿಸಿರುವ ಕೆಲಸವನ್ನು ಉಳಿಸಿಕೊಳ್ಳಲು ಹರಸಾಹಸ

ಪಡಬೇಕು. ’ಅಯ್ಯೋ,ನಾನು ಈಗಾಗಲೇ ವಿದೇಶಕ್ಕೆ ಹಾರಿಬಿಡಬೇಕಾಗಿತ್ತು,ಆದರೆ ಅಪ್ಪ ಅಮ್ಮನದು ಒಂದೇ ರಾಗ ....ಮಗ ನಮ್ಮ ಕಣ್ಣೆದುರಿಗೇ ಇರಬೇಕು ಅಂತ......ಅವರ ಎಮೋಷನಲ್

ಬ್ಲಾಕ್ ಮೆಲ್ ನಿಂದಾಗಿ, ನಾನು ಇಲ್ಲೇ ಇರಬೇಕಾಗಿ ಬಂತು. ’ ಆದರೆ ಇನ್ನು ಮುಂದೆ ಅವರ ಮಾತುಗಳನ್ನು ಲೆಕ್ಕಿಸುವುದಿಲ್ಲ. ಇಂದೇ ನನ್ನ ಸ್ನೇಹಿತರನ್ನು ಸಂಪರ್ಕಿಸಬೇಕು. ಸಧ್ಯ, ಅಹನಾಳದು ಹಾರ್ಡ್ವೆವೆರ್ ಫೀಲ್ಡ್ಆಗಿರುವುದು ಒಳ್ಳೆಯದೇ ಆಯಿತು. ಅವಳ ಆಫಿಸಿನ ಪರಿಸ್ಥಿತಿ ಹೇಗಿದೆಯೋ?


ನೂರಾರು ಆಲೋಚನೆಗಳ ಆವರಣದೊಂದಿಗೇ ಗಾಡಿ ಓಡಿಸುತ್ತಿದ್ದ ನನಗೆ , ಮನೆ ಬಂದದ್ದೇ ತಿಳಿಯಲಿಲ್ಲ. ನಾನು ಮನೆ ಸೇರಿದ್ದರೂ, ಇನ್ನೂ ಅಹನಾ ಬಂದಂತಿರಲಿಲ್ಲ. ಎದುರಿಗೇ ಇದ್ದ ಅಮ್ಮನನ್ನು ಕೇಳಿದೆ,

"ಅಮ್ಮ, ಅಹನಾ ಬಂದಿಲ್ಲವ?"(ನನ್ನ ಬೇಸರವನ್ನು ಅಮ್ಮನೆದುರು ಮುಚ್ಚಿಡುವ ಪ್ರಯತ್ನ ಮಾಡುವುದಕ್ಕೆ, ಸಹಜತೆಯ ಪ್ರದರ್ಶನ ಆಗಲೇಬೇಕಲ್ಲ)

" ಇನ್ನೂ ಇಲ್ಲ ಕಣೊ, ಸರಿ, ನಾನು ಕಾಫಿ ತರುತ್ತೇನೆ" ಅಮ್ಮ ಒಳಗೆ ಹೋದಾಗ , ನಾನೂ ಅಲ್ಲೇ ಸೋಫಾದ ಮೇಲೆ ಉಸ್ ಎಂದು ಕುಳಿತೆ.

ಕಣ್ಣುಮುಚ್ಚಿ ,’ಮುಂದೇನು” ಅಂತ ಯೋಚಿಸುತ್ತಾ ಕುಳಿತ್ತಿದ್ದ ನನಗೆ ಅಮ್ಮ ಕಾಫಿ ಹಿಡಿದು ಬಂದಿದ್ದು ಗೊತ್ತಾಗಲೇ ಇಲ್ಲ.

"ಅಜು,ಯಾಕೋ ಹೀಗೆ ಕೂತೆ? ಹುಷಾರಗಿದ್ಯ ತಾನೆ?ಆಕಾಶ ತಲೆ ಮೇಲೆ

ಕಳಚಿ ಬಿದ್ದವರ ಹಾಗೇ ಕೂತಿದ್ಯಲ್ಲ,ಏನಾಯ್ತೋ?" ಅಮ್ಮ ನನ್ನ ಪಕ್ಕ ಕುಳಿತು, ಭುಜ ಹಿಡಿದು ಮಾತನಾಡಿಸಿದಾಗ, ಕಣ್ಣು ಬಿಟ್ಟೆ.

’ಏನಿಲ್ಲಮ್ಮ,ಹೀಗೇ ಆಫಿಸಿನ ವಿಷಯ" ಎಂದು ಹೇಳುತ್ತ,ಕಾಫಿ ಹಿಡಿದು,ನನ್ನ ರೂಂ ಕಡೆ ಹೊರಟೆ.


’ಅಬ್ಬಬ್ಬ ಏನು ಹುಡುಗಾನೋ, ಮನೆಗೆ ಬಂದ ಮೇಲಾದರೂ, ಎಲ್ಲರ ಜೊತೆ ಮಾತನಾಡಿಕೊಂಡಿರುವುದೂ ಬೇಕಾಗಿಲ್ಲ, ದೊಡ್ಡವರ ಕಡೆ ಗಮನ ಇರೋದೇ ಇಲ್ಲ, ಈ ಕಾಲದ ಹುಡುಗರನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ,ನಾವುಗಳೂ ಸಹ ಹೊರಗಡೆ ದುಡಿದು ಬರುತ್ತಿದ್ದೆವು, ಮನೆ ಮಕ್ಕಳು ಹಿರಿಯರು, ಅತಿಥಿಗಳು,ಅಂತ ಚಾಚೂ ತಪ್ಪದೆ, ಮನೆ ಹಾಗೂ ಬ್ಯಾಂಕ್ ಕೆಲಸಗಳನ್ನು ತೂಗಿಸಿಕೊಂಡು ಹೋಗ್ತಿದ್ದೆವು. ಎಲ್ಲವನ್ನೂ ನಿಭಾಯಿಸ್ತಿದ್ದೆವು. ಈಗಿನ ಕಾಲದ ಮಕ್ಕಳು ಹೊರಗಡೆ ಹೋಗಿ ಬಂದು ಬಿಟ್ಟರೆ ಮುಗಿಯಿತು, ಮನೆ ಕಡೆ ಏನೂ ಬೇಕಾಗಿಲ್ಲ, ಮುಂದೆ ಮಕ್ಕಳು ಮರಿ ಆದರೆ ಹೇಗೆ ನಿಭಾಯಿಸುತ್ತಾರೋ?ಆ ದೇವರಿಗೆ ಗೊತ್ತು,’ ಅಮ್ಮ ಹೊರಗಡೆ ಒಬ್ಬಳೆ ಪೇಚಿಕೊಳ್ಳುತ್ತಿದ್ದುದ್ದು ನನ್ನ ಕಿವಿಗೆ ಬಿತ್ತು.


ರೂಮಿನಲ್ಲಿ ಕುಳಿತು, ಕಾಫಿ ಕುಡಿಯುತ್ತ,ಅಮ್ಮನಾಡಿದ ಮಾತುಗಳನ್ನೇ ಮೆಲಕು ಹಾಕಿದೆ.ಅಮ್ಮ ಹೇಳಿದ್ದರಲ್ಲಿ ಯಾವ ಉತ್ಪ್ರೇಕ್ಷೆಯೂ ಇರಲಿಲ್ಲ. ನಾನು ಮತ್ತು ಅಕ್ಕ ಚಿಕ್ಕವರಾಗಿದ್ದಾಗ, ಅಮ್ಮ ಬ್ಯಾಂಕ್ ಹಾಗೂ ಮನೆಯ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ,ಇಬ್ಬರನ್ನೂ ಒಂದು ಮಟ್ಟಕ್ಕೆ ತಂದು ನಿಲ್ಲಿಸಿ,ತಮ್ಮ ಕರ್ತವ್ಯಗಳನ್ನು ಮುಗಿಸಿದ್ದರು. ಅಕ್ಕನ ಮದುವೆ, ನನ್ನ ಮದುವೆ ಎಲ್ಲವನ್ನೂ ಅವರು ಸರ್ವೀಸ್ ನಲ್ಲಿದ್ದಾಗಲೇ ಮಾಡಿ ಮುಗಿಸಿದ್ದರು.ಆಗಿನ ಕಾಲದಲ್ಲಿ ಅವರಿಗೆ ಮೈ ತುಂಬಾ ಕೆಲಸ ವಿರುತ್ತಿತ್ತೆಂಬುದು ನಿಜವೇ. ಆದರೆ ಅವರಿಗೆ ಕೆಲಸ ದ ಅಭದ್ರತೆ ಇರಲಿಲ್ಲ.ಒಮ್ಮೆ ಕೆಲಸಕ್ಕೆ ಸೇರಿದರೆಂದರೆ ಅವರಾಗಿಯೇ ಬಿಡುವವರೆಗೂ ಯಾರೂ ಅವರನ್ನು ಕದಲಿಸುವಂತಿರಲಿಲ್ಲ. ಅವರಿಗೆ ನಮ್ಮ ರೀತಿಯ ಕಷ್ಟಗಳು ಅರ್ಥವಾಗುವುದಿಲ್ಲ. ಒಂದು ರೀತಿ ಅಂತಹ ಕೆಲಸಗಳೇ ಒಳ್ಳೇದು ಅಂತ ಅನ್ನಿಸುತ್ತೆ. ನಮಗೆ ಯಾವ ರೀತಿಯ ಕಷ್ಟವೂ ಕಾಡದಂತೆ, ತುಂಬಾ ಚೆನ್ನಾಗೆ ಬೆಳಸಿದ್ದರು. ’ಅಮ್ಮನಿಗೆ ಕೆಲಸ ಕಳೆದುಕೊಂಡ ವಿಷಯವನ್ನು ಹೇಗೆ ತಿಳಿಸುವುದು’?ಈಗ ತಿಳಿಸುವುದೇ ಬೇಡ, ಮುಂದೆ ಹೇಗೂ ಯಾವುದಾದರೂ ಕೆಲಸ ದೊರೆಕುವವರೆಗೆ ಈ ವಿಷಯವನ್ನು ಮುಚ್ಚಿಡುವುದೇ ಸರಿ.

ಕಾಫಿ ಕುಡಿದು ಮುಗಿಸಿ, ನಾನು ಹೊರಗೆ ಬರುವ ವೇಳೆಗೆ, ಅಹನಾ ಬಂದಿದ್ದಳು.


"ಹಾಯ್,ಹೇಗಿತ್ತು ಈ ದಿನದ ಕೆಲಸ?" ನಾನು ಕೇಳಿದಾಗ,ಅವಳು ಆಶ್ಚರ್ಯ ಪಡುತ್ತ,

"ಇದೇನು ಹೊಸದಾಗಿ ಈ ರೀತಿ ಕೇಳ್ತಿದ್ದಿಯಲ್ಲ,ಎವೆರಿತಿಂಗ್ ಈಸ್ಆಸ್ ಯೂಶುಯಲ್" ಎಂದು ಹೇಳಿದ ಅವಳು ರೂಮಿನತ್ತ ಹೋದಾಗ, ನಾನೂ ಸಹ ಅವಳ ಹಿಂದೆಯೇ ಹೋದೆ.ಅವಳೂ ಸಹ ಯಾಕೋ ಮಾಮೂಲಿನಂತೆ ಕಾಣುತ್ತಿರಲಿಲ್ಲ.

"ಅಹನಾ, ಎನಿ ಪ್ರಾಬ್ಲಮ್?" ಎನ್ನುತ್ತಾ, ಅವಳ ಹತ್ತಿರಕ್ಕೆ ಹೋಗಿ,ಅವಳ ಭುಜವನ್ನು ಬಳಸಿದೆ.

"ನಥಿಂಗ್, ನಿನಗೆ ಯಾಕೆ ಈ ರೀತಿ ಅನುಮಾನ?"ನನ್ನನ್ನು ತಳ್ಳಿ, ಅವಳುಹೊರಗಡೆ ಹೊರಟಾಗ, ನಾನೂ ಸಹ ಹೊರಗೆ ಹಜಾರಕ್ಕೆ ಬಂದು,ಅಲ್ಲಿಯೇ ಟಿ.ವಿ.ನೋಡುತ್ತಾ ಕುಳಿತಿದ್ದ, ಅಮ್ಮನ ಪಕ್ಕ ಕುಳಿತೆ.

ಇಂದೇಕೋ, ಅಮ್ಮನ ಮಡಿಲಲ್ಲಿ ತಲೆಯಿಟ್ಟು, ಮಲಗಿ ಅತ್ತುಬಿಡಬೇಕಿನಿಸಿತು. ಆದರೆ ಹಾಗೆ ಮಾಡಿದ್ರೆ, ವಿಷಯ ಹೊರಬಿದ್ದೇಬೀಳುತ್ತದೆ. ಹೀಗಾಗಿ ನನ್ನೊಳಗೆ ಉಕ್ಕಿಬರಲು ತವಕಿಸುತ್ತಿದ್ದಭಾವನೆಗಳನ್ನು ತಡೆದೆ.

"ಯಾಕೋ ಮಗು,ನೀನು ಎಂದಿನಂತಿಲ್ಲ, ಏನಾದರೂ ಸಮಸ್ಯೆಯೇನೋ? ನಾನೂ ಸಹ ನೀನು ಬಂದಾಗಲಿಂದ ನಿನ್ನನ್ನು ಗಮನಿಸ್ತಾ ಇದ್ದೀನಿ,ನೀನು ಮಾಮೂಲಿನಂತೆ ಇಲ್ಲ, ಏನು ಸಮಾಚಾರ?" ಅಮ್ಮನ ಕಳಕಳಿಯ ಮಾತುಗಳನ್ನು ಕೇಳಿದೊಡನೆಯೇ,ನನ್ನ ಕಣ್ಣಿಂದ ಕಂಬನಿ ಉಕ್ಕಿ ಉಕ್ಕಿ ಹರಿದುಬಿಡುಉದೇನೋ ಎಂದು ಹೆದರಿ ಅಲ್ಲಿಂದ ಎದ್ದು ಹೊರಟೆ.

"ಏನೂ ಇಲ್ಲಮ್ಮ ಹೀಗೆ ಆಫಿಸಿನಲ್ಲಿ ಯಾವುದಾದರೂ ವಿಷಯಕ್ಕೆ ಟೆನ್ಶನ್ ಇದ್ದೆ ಇರುತ್ತದಲ್ಲ" ಎನ್ನುತ್ತಾ, ಇನ್ನೂ ಅಲ್ಲೇ ಕುಳಿತರೆ ಸಮಸ್ಯೆ ಗ್ಯಾರಂಟಿ ಎಂದುಕೊಳ್ಳೂತ್ತ, ಅಲ್ಲಿಂದ ಮೇಲೆದ್ದು, ಮನೆಯಿಂದ ಹೊರ ಹೊರಟೆ.ಮನೆಯಿಂದ ಹೊರಟ ನಾನು ಪಾರ್ಕ್ ಕಡೆಗೆ ಹೊರಟೆ. ಬಿರುಸಿನ ನಡಿಗೆಯನ್ನು ನಡೆಯುತ್ತಾ, ನಡುನಡುವೆ ವಿದೇಶದಲ್ಲಿರುವ ನನ್ನ ಎಲ್ಲಾ ಗೆಳೆಯರಿಗೂ ವಿಷಯ ಮುಟ್ಟಿಸಿ, ಸಹಾಯ ಕೇಳಿದಾಗ, ಅಲ್ಲಿಂದ ಬಂದ ಪ್ರತಿಕ್ರಿಯೆಯಾದರೂ ಏನು?

" ಅಲ್ಲಿಯೂ, ಒಬ್ಬಬರದು ಒಂದು ರೀತಿಯ ಪರಿಸ್ಥಿತಿ. ಬಹಳ ವರ್ಷಗಳ ಹಿಂದೆ ಬಂದು ಒಳ್ಳೊಳ್ಳೆ ಕಂಪನಿಗಳಲ್ಲಿ ಇಲ್ಲಿಯೇ ಉದ್ಯೋಗ ಮಾಡುತ್ತಿರುವ ಕೆಲವು ಅನಿವಾಸಿ ಭಾರತೀಯರನ್ನು ಹೊರತು ಪಡಿಸಿ, ಇತ್ತೀಚೆಗೆ ಬಂದವರದೆಲ್ಲಾ ಪರದಾಟವೇ .ಅವರೆಲ್ಲಾ ಹೇಗೋ ಮ್ಯನೇಜ್ ಮಾಡುತ್ತಿದ್ದಾರೆ.ಕೆಲವರು ಕೆಲಸ ಕಳೆದುಕೊಂಡು,ಭಾರತಕ್ಕೆ ವಾಪಸ್ ಬರುವುದಕ್ಕೂಆಗದೆ,ಅಲ್ಲಿ ಮತ್ತೊಂದು ಒಳ್ಳೆಯ ಕೆಲಸವೂ ಸಿಗದೆ, ಪಟ್ರೋಲ್ ಬಂಕ್,ರೆಸ್ಟೋರೆಂಟ್,ಮಾಲ್ ಗಳಲ್ಲಿ ದುಡಿಯುತ್ತಾ, ಹೇಗೋ ಜೀವನ ನಡೆಸುತ್ತಿದ್ದಾರೆಂಬುದು ಗೊತ್ತಾದಾಗ, ನಾನು ಮತ್ತೆ ನಿರಾಶೆಗೊಂಡೆ. ಈಗ ಅಲ್ಲಿಯೂ ರೆಸಿಷನ್ ಎಂಬ ಉದ್ಯೋಗ ಭೂತ

ಆವರಿಸಿದೆ, ಅಲ್ಲಿನವರಿಗೂ ಇದೇ ಭೀತಿ ಇದ್ದೇಇದೆ,ಆದರೆ ದೂರದ ವಿದೇಶಗಳಲ್ಲಿ ಯಾವುದೇ ರೀತಿಯ ಕೆಲಸಗಳನ್ನು ಮಾಡುವುದಕ್ಕೂ,ಮುಜುಗರ ಪಟ್ಟುಕೊಳ್ಳದೆ,,ಹೇಗೋ ಜೀವನ ನಡಸುತ್ತಿದ್ದಾರೆ,ಆದರೆ ಭಾರತಕ್ಕೆ ವಾಪಸ್ ಬರುವುದಕ್ಕೆ ಹಿಂಜರಿಯುತ್ತಾರೆ, " ಎಂಬ ಕರಾಳ ಸತ್ಯ ಗೊತ್ತಾದಾಗ, ನನ್ನ ವಿದೇಶದಲ್ಲಿ ಉದ್ಯೋಗ ಹುಡುಕುವ ಪ್ರಯತ್ನ ವ್ಯರ್ಥ ವೆನಿಸಿ,ಮನಸ್ಸು ಮುದುಡಿಹೋಯಿತು. ಆದರೂ ಅಲ್ಲಿಯ ನನ್ನ ಗೆಳೆಯರು ಸಾಧ್ಯವಾದಷ್ಟು ಸಹಾಯ ಮಾಡುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿ,ನನ್ನಲ್ಲಿ ಭರವಸೆಯನ್ನು ತುಂಬಿದಾಗ,ಇದು ನನ್ನನ್ನು ಸಮಾಧಾನಗೊಳಿಸುವುದಕ್ಕಾಗಿ ಅಷ್ಟೆ ಎಂದೆನಿಸಿದಿರಲಿಲ್ಲ.ಸರಿ, ನಾವು ವಿದೇಶಕ್ಕಾದರೂ ಹೋಗಿ ದುಡಿಯೋಣವೆಂದರೆ ಅಲ್ಲಿಯ ಪರಿಸ್ಥಿತಿ ಇನ್ನೂ ಹದಗೆಡುತ್ತಿದೆ ಯಲ್ಲಾ,ಇನ್ನು ಈ ಆಸೆಯನ್ನು ಬದಿಗಿರಿಸಿ,ನಮ್ಮದೇಶದಲ್ಲೇಬೇರೆಕೆಲಸಹುಡಿಕಿಕೊಳ್ಳಬೇಕು,ನೋಡೋಣ, ಇಷ್ಟು ವರ್ಷಗಳ ಅನುಭವ ಏನಾದರೂ ಸಹಾಯ ವಾಗುತ್ತದಾ?, ಕಾದು ನೋಡೋಣ.ಮತ್ಯಾವ ಆಪ್ಷನ್ ಗಳಿವೆ?ಮನಸ್ಸುಅಲೆದಾಡತೊಡಗಿತು. ಈ ಕಂಪನಿಯ ಅನುಭವದ ಆಧಾರದ ಮೇಲೆ ಬೇರೆ ಕಂಪನಿಗಳಿಗೆ ಕೆಲಸಕ್ಕೆ ಅಪ್ಲೈ ಮಾಡುವುದು,ಅದು ಸಿಗುವ ತನಕ ಯಾವುದಾದರೂ ಕಾಲೆಜ್ ಗಳಿಗೆ ಉಪನ್ಯಾಸಕರಾಗಿ ಸೇರಿದರೆ? ಅಯ್ಯೋ ಇತ್ತೀಚೆಗೆ ಇದಕ್ಕೂ ಕಷ್ಟವಾಗಿದೆ ಎಂದು ನನ್ನ ಕೊಲೀಗ್ ಸತೀಶ್ ಹೇಳ್ತಿದ್ದ. ಎಮ್.ಟೆಕ್. ಮಾಡಿಕೊಂಡವರಿಗೆ ಮಾತ್ರ ಆದ್ಯತೆ,ಅದೂ ತಾತ್ಕಾಲಿಕ ಹುದ್ದೆ ಮತ್ತು ತುಂಬಾ ಕಡಿಮೆ ಸಂಬಳ,ಎಂದಿದ್ದ. ಇನ್ನು ನಮ್ಮ ಉದ್ಯೋಗಕ್ಕೆ ಅನುಕೂಲವಾಗುವಂತಹ ಅಪ್ಡೇಟ್ ಕೋರ್ಸ್ ಗಳನ್ನು ಮಾಡಿಕೊಳ್ಳಬೇಕು. ಪ್ರೈವೇಟ್ ಟ್ಯೂಶನ್ ಮಾಡಿದರೆ ? ಅದಕ್ಕೂ ಬಹುಶಃ ಯಾರೂ ಬರಲಾರರು. ಎಲ್ಲರೂ ನುರಿತ ಲೆಕ್ಚರರ್ಸ್ ಗಳನ್ನೇ ಬಯಸುತ್ತಾರೆ. ಅದೂ ನಿಜ, ಐ.ಟಿ. ಕಂಪನಿಯ ನಾಲ್ಕು ಗೋಡೆಯ ಮಧ್ಯೆ ಕುಳಿತು, ಕಂಪ್ಯೂಟರ್ ನೊಳಗೆ ಕೆಲಸ ಮಾಡುವ ನಮಗೆ, ಉಪಾಧ್ಯಾಯ ವೃತ್ತಿ ಆಗಬರುವುದಿಲ್ಲ,ಅದೂ ಅಲ್ಲದೆ ನಮ್ಮನ್ನು ಆ ವೃತ್ತಿಗೆ ತೆಗೆದುಕೊಳ್ಳುವುದೂ ಇಲ್ಲ.

ನಂತರ ಕಡೆಗೆ ಉಳಿದಿರುವುದು "ಕಾಲ್ ಸೆಂಟರ್" ಕೆಲಸ. ಯಾವುದು ನನ್ನ ಹಣೆಯಲ್ಲಿ ಬರೆದಿದೆಯೋ ? ನೋಡೋಣ,.


ಈ ಐ.ಟಿ. ಕಂಪನಿಗಳಲ್ಲಿ ಕಣ್ಣುಕುಕ್ಕುವಷ್ಟು ಸಂಬಳವೇನೋ ಸಿಗುತ್ತದೆ. ಆದರೆ, ಕೆಲಸ ಯಾವಾಗ ಕಳೆದುಕೊ ಳ್ಳುತ್ತೇವೋ? ಎಂಬ ಆತಂಕವಂತೂ ತಪ್ಪುವುದಿಲ್ಲ. ಛೆ, ಇವತ್ತು ತಾನೇ ಟರ್ಮಿನೇಶನ್ ಲೆಟರ್ ಬಂದಿದೆ. ಒಂದೇ ದಿನ ಎಲ್ಲಾ ಯೋಚನೆಗಳನ್ನೂ ಮಾಡುವುದಕ್ಕಾಗುವುದಿಲ್ಲ.’ಹುಟ್ಟಿಸಿದ ದೇವರು ಹುಲ್ಲು ಮೇಯಿಸದೆ ಇರುತ್ತಾನೆಯೆ’ ಎಂದು ನಮ್ಮ ಅಜ್ಜಿ ಆಗಾಗ ಹೇಳುತ್ತಲೇ ಇದ್ದರು. ಯೋಚನೆ ಮಾಡುತ್ತಾ ಮಾಡುತ್ತಾ ಬಿರುಸಿನ ನಡಿಗೆಯನ್ನುಮುಂದುವರಿಸುತ್ತಲೇ ಹೋದೆ. ಸಮಯದ ಅರಿವೇ ಇರಲಿಲ್ಲ.ಒಮ್ಮೆ ವಾಚ್ ನೋಡಿಕೊಂಡಾಗ ಆಗಲೇ ಗಂಟೆ ಹತ್ತಾಗಿ ಹೋಗಿರುವದನ್ನು ತಿಳಿದು, ಇನ್ನು ಮನೆಗೆ ಹಿಂದಿರುಗಬೇ್ಕು, ಅಹನಾ ಕಾಯುತ್ತಿರುತ್ತಾಳೆ,ಎಂದುಕೊಂಡು ಮನೆಕಡೆ ನಿಧಾನವಾಗಿ ಹೆಜ್ಜೆಹಾಕಿದೆಮನೆಗೆ ಹಿಂತಿರುಗಿದಾಗ, ರಾತ್ರಿ ಹತ್ತೂವರೆ ಆಗಿಹೋಗಿತ್ತು. ಅಪ್ಪ ಅಮ್ಮ ಇಬ್ಬರೂ ಮಲಗಿಬಿಟ್ಟಿದ್ದರು, ಅಹನಾ ಇನ್ನೂ ಅಡುಗೆಮನೆಯಲ್ಲಿ, ನಾಳೆಗಾಗಿ ಏನೋ ತಯಾರಿ ನಡೆಸುತ್ತಿದ್ದಳು.

’ಅಜಯ್, ಇಷ್ಟು ಹೊತ್ತು ಎಲ್ಲಿ ಹೋಗಿದ್ದೆ?,ನಾನೂ ಸಹ ಊಟ ಮಾಡಿಲ್ಲ, ನೀನು ಹೀಗೇ ಬಂದೇಬಿಡು, ಊಟ ಮುಗಿಸೋಣ."

ಅಡುಗೆಮನೆಯಿಂದಲೇ ಕೂಗಿದಾಗ, ಸೀದ ಡೈನಿಂಗ್ ಟೇಬಲ್ ನತ್ತ ನಡೆದೆ.

ಯಾವುದೇ ಹರಟೆ,ನಗು,ಮಾತುಕತೆಗಳಿಲ್ಲದೇ ಊಟ ಸಾಗಿದಾಗ,ನಾನು ಅಹನಾಳನ್ನೆ ಗಮನಿಸುತ್ತಿದ್ದೆ. ಇವಳು ಯಾಕೋ ಮಾಮೂಲಿನಂತಿಲ್ಲ, ಇವಳಿಗೇನಾಯಿತು?ಮನಸ್ಸು ಬೇರೆ ಏನನ್ನೋಲೆಕ್ಕ ಹಾಕಿ ಹೆದರುತ್ತಿತ್ತು.

"ಹೇ ಅಜಯ್, ನಿನಗೇನಾಗಿದೆಯೋ? ಹೀಗಿದ್ದೀಯ?" ಕಡೆಗೂ ಅವಳು ಬಾಯಿ ಬಿಟ್ಟಾಗ,

"ಹೆ, ನತಿಂಗ್,ಅಹನಾ." ಎಂದು ತೇಲಿಸಿಬಿಟ್ಟೆ.

"ನೀನು ’ನಥಿಂಗ್’ ಅಂತ ಬಾಯಲ್ಲಿ ಹೇಳಿದರೂ, ನಿನ್ನ ಮುಖ’ಸಮ್ ಥಿಂಗ್’ ಇದೆ ಎಂದು ಹೇಳುತ್ತಿದೆ. ನಿನಗೆ ಗೊತ್ತಲ್ಲ,

’ಪೇಸ್ ಈಸ್ ದ ಇಂಡೆಕ್ಸ್ ಆಫ್ ಮೈಂಡ್’ ಅನ್ನುವ ವಿಷಯ. ಏನೋ ಆಗಿದೆ ನಿನಗೆ. ಆದರೆ ನೀನು ಹೇಳಿಕೊಳ್ಳುತ್ತಿಲ್ಲ,ಒ.ಕೆ.ನಿನಗೆ ಹೇಳಿಕೊಳ್ಳಬೇಕೆನಿಸಿದಾಗ ನನ್ನ ಹತ್ತಿರ ಹೇಳಿಕೊ" ಅಹನಾ ಮಾಮೂಲಿನಂತೆ ಮಾತನಾಡಿ,ಸುಮ್ಮನಾದಳು.ಅವಳಿಗೆ ಏನೂ ಉತ್ತರಿಸದೆ ನನ್ನ ಪಾಡಿಗೆ ನಾನು ಊಟ ಮಾಡುತ್ತಿದ್ದೆ. ಆದರೆ ನನ್ನ ಮೌನ ಅಹನಾಳನ್ನುಕೆರಳಿಸಿ, ಮಾತನಾಡುವಂತೆ ಮಾಡಿತು.

"ಛೆ, ಏನು ಗಂಡಸರಪ್ಪ ನೀವು, ನಿಮ್ಮ ಸಮಸ್ಯೆಗಳನ್ನು ಒಳಗೇ ಇಟ್ಟುಕೊಂಡು ಕೊರಗುತ್ತಿರುತ್ತೀರ, ನಿಮ್ಮ ಪ್ರಾಬ್ಲ್ಂ ಏನೂ ಅಂತ ಹೇಳಿದರೆ ತಾನೆ ಪರಿಹಾರ ಹುಡುಕುವುದಕ್ಕೆ ಆಗೋದು, ಒಳ್ಳೆ ಮುಸುಕಿನೊಳಗಿನ ಗುದ್ದು ಅಂತಾರಲ್ಲ, ಹಾಗಾಯಿತು ನಿಮ್ಮದು."

ಅಹನಾ ತನ್ನಷ್ಟಕ್ಕೆ ತಾನೇ ಬಡಬಡಿಸ್ತಿದ್ದರೂ,ನಾನು ನನ್ನ ಮೌನವನ್ನು ಮುರಿಯಲಿಲ್ಲ.


ಅಂತೂ ಇಂತೂ ಊಟ ಮುಗಿಸಿ, ಮಲಗುವುದಕ್ಕೆಂದು ರೂಂ ಸೇರಿದಾಗ, ರಾತ್ರಿ ಹನ್ನೊಂದಾಗಿತ್ತು.ಪ್ರತಿನಿತ್ಯವೂ ಹಾಸಿಗೆ ಮೇಲೆ ಮಲಗಿದ ಕೂಡಲೇ ನಿದ್ರೆ ಆವರಿಸುತ್ತಿತ್ತು.ಆದರೆ ಇಂದು ಅದು ನನ್ನಿಂದ ದೂರ ಸರಿದಿದೆ.ಸುಮ್ಮನೆ ಕಣ್ಣು ಮುಚ್ಚಿ ಮಲಗಿದ್ದೆ. ಅಹನಾ ಎಂದಿನಂತೆ ಹಾಲು ತಂದುಕೊಟ್ಟಾಗ, ಅದನ್ನು ಬೇಡವೆಂದೆ. ಆದರೆ ಅವಳು ನಾನು ಅದನ್ನು ಕುಡಿಯುವವರೆಗೂ ಬಿಡಲಿಲ್ಲ. ನಂತರ,ಅವಳು ಸ್ವಲ್ಪಹೊತ್ತು ಅಲ್ಲಿಯೇ ಇದ್ದ ಟೇಬಲ್ ಬಳಿ ನಿಂತು ,ನಮ್ಮಿಬ್ಬರ ಬ್ಯಾಗ್ ಗಳನ್ನು ನಾಳೆಗೆ ಸಿದ್ದಪಡಿಸುತ್ತಿರುವುದನ್ನು ಗಮನಿಸಿ, ಒಮ್ಮೆಲೇ ಬೆದರಿದೆ.

ನನಗೆ ಆಫೀಸಿನವರು ನೀಡಿದ್ದ ಲೆಟರ್ ಅದರೊಳಗೇ ಇತ್ತು,. ನಾನು ಊಹಿಸಿದಂತೆಯೇಆಯಿತು,

’ಹೇ,ಅಜಯ್, ವಾಟ್ ಈಸ್ ದಿಸ್? ಪಿಂಕ್ ಸ್ಲಿಪ್"

ಅದನ್ನು ಹಿಡಿದುಕೊಂಡೇ ಬಂದ ಅವಳು, ನನ್ನ ಮೈ ಅಲುಗಾಡಿಸಿ ಕೇಳಿಯೇ ಬಿಟ್ಟಾಗ, ನಾನು ಏನು ತಾನೆ ಹೇಳಲು ಸಾಧ್ಯ?

"ನೀನೇ ಓದು, ಗೊತ್ತಾಗುತ್ತದೆ, ನಿನಗೆ ಗೊತ್ತಾಗದಿರುವಂತಹುದ್ದೇನಿಲ್ಲ ಅದರಲ್ಲಿ." ನಾನೂ ಸುಮ್ಮನಾದೆ.

"ಆಂದರೆ, ನಿನ್ನನ್ನು ಟರ್ಮಿನೇಟ್ ಮಾಡಿದ್ದಾರ?"ಅವಳಿಗೆ ಶಾಕ್ ಆಗಿತ್ತು.

ಹೌದು ಎಂದು ತಲೆ ಆಡಿಸುತ್ತ, ಮೇಲೆದ್ದು, ಅವಳನ್ನು ಎಳೆದುಕೊಂಡುನನ್ನೆದೆಗೆ ಒರಗಿಸಿಕೊಂಡು,ಎಲ್ಲಾ ವಿಷಯವನ್ನೂ ವಿವರಿಸಿ,

’ಮುಂದೆ ಯಾವುದಾದರೂ ಬೇರೆ ಕೆಲಸ ಹುಡಿಕಿದರಾಯಿತು, ಅಲ್ಲಿವರೆಗೆ

ನಿನಗೆ ಕೆಲಸ ಇದೆಯಲ್ಲ?"ಎನ್ನುತ್ತ ಅವಳನ್ನು ಸಾಂತ್ವನ ಗೊಳಿಸಿದಾಗ,ಅವಳು, ಅವಳ ಆಫಿಸಿನ ಪರಿಸ್ಥಿಯನ್ನು ವಿವರಿಸಿ ಹೇಳುತ್ತ,

" ಸರಿ ಅಜಯ್, ಈಗ ಸಧ್ಯಕ್ಕೆ ನನ್ನ ಕೆಲಸದ್ದು ಪ್ರಾಬ್ಲೆಮ್ ಆಗಲಾರದು ಅಂತ ಅಂದ್ಕೊಂಡಿದ್ದೀನಿ, ಆದರೆ ನಾಳೆ ಏನಾಗುವುದೆಂದು ಹೇಳಲಾಗುವುದಿಲ್ಲ,ನನಗೂ ಇಂತಹ ಭಯ ಇದ್ದೇಇದೆ..ಅದುಸರಿ, ಈವಿಷಯವನ್ನು ನಿಮ್ಮ ಅಪ್ಪ ಅಮ್ಮನಿಗೆಹೇಳುವುದು ಹೇಗೆ? " ಅಹನಾ ಗೂ ಚಿಂತೆ ಶುರುವಾಯಿತು.

"ಇರಲಿ ಇಡು ಅಹನಾ, ಈ ವಿಷಯವನ್ನು ಈಗಲೇ ಅವರಮುಂದೆ ಹೇಳಿ, ಅವರ ಚಿಂತೆಯನ್ನು ಹೆಚ್ಚಿಸುವುದು ಬೇಡ,ಹೇಗೂ ಯಾವುದಾದರೊಂದು ಕೆಲಸ ಸಿಕ್ಕೆ ಸಿಗುತ್ತದೆ.ಆಗ ಹೇಳಿದರಾಯಿತು.ನಾನು ಈಗಾಗಲೇ ಈ ವಿಷಯದ ಬಗ್ಗೆ ನನ್ನ ’ಆನ್ ಶೋರ್’ ಫ್ರೆಂಡ್ಸ್ಗಳಿಗೂ ವಿಷಯ ತಿಳಿಸಿದ್ದೇನೆ. ನಿನೇನೂ ಚಿಂತೆ ಮಾಡಬೇಡ".

"ಏನಂತಾರೆ ನಿಮ್ಮ ಆನ್ ಶೋರ್ ಫ್ರೆಂಡ್ಸ್?" ಅಹನಾ ಕೇಳಿದಾಗ, ಅವಳಿಗೆ ವಿದೇಶದ ಇಂದಿನ ಪರಿಸ್ಥಿತಿಯನ್ನು ವಿವರಿಸಿದೆ.

ಅವಳಿಗೆ ಬೇಸರವಾದರೂ ತೋರಿಸಿಕೊಳ್ಳದೆ, ನನ್ನೆದೆಯ ಮೇಲೆ ಬೆರಳಾಡಿಸುತ್ತ,(ಅವಳು ಯಾವಾಗಲೂ ಹೀಗೆ,ಏನೇ ಸಮಸ್ಯೆ ಬಂದರೂ ಸಮಾಧಾನವಾಗಿ ತೆಗೆದುಕೊಂಡು,ಅದಕ್ಕೆ ಪರಿಹಾರದ ಮಾರ್ಗಗಳನ್ನು ಚರ್ಚಿಸುತ್ತಾಳೆ.)

"ಇರಲಿ ಬಿಡು ಅಜು, ಈಗ ಸದ್ಯಕ್ಕೆ ನನಗೆ ಕೆಲಸ ಇದೆ. ನಿನಗಿರುವ ಅನುಭವಕ್ಕೆ ಬೇರೆ ಎಲ್ಲಾದರೂ ಪ್ರಯತ್ನಿಸಿದರಾಯಿತು"ಹೇಳಿದಾಗ,ಇಷ್ಟು ಹೊತ್ತು ನನ್ನ ಮನದೊಳಗಿದ್ದ ದುಗುಡಗಳೆಲ್ಲ ಕರಗಿ ಹೋಗಿ, ನನ್ನ ಮನಸ್ಸು ಹಗುರವಾಗಿ ಹೋಯಿತು.

"ಥ್ಯಾಂಕ್ಯು ಅಹು,ನಿನ್ನ ಬೆಂಬಲವೊಂದಿದ್ದರೆ,ಎಂತಹ ಕಷ್ಟಗಳನ್ನಾದರೂ ಎದುರಿಸುತ್ತೇನೆ" ಎನ್ನುತ್ತಾ ಅವಳನ್ನು ಇನ್ನೂ ಹತ್ತಿರಕ್ಕೆಎಳೆದುಕೊಂಡೆ.

"ನಾಳೆಯಿಂದ ಮತ್ತೆಕೆಲಸಕ್ಕೆ ಭೇಟಿ ನಡೆಸೋಣವಂತೆ, ಈಗ ಮಲಗೋಣ"

ಅವಳನ್ನು ಒತ್ತರಿಸಿಕೊಂಡೇ ದೀಪವಾರಿಸಿ,ಮಲಗಿದೆ.


ಅಹನಾಳಿಗೇನೋ ನಿದ್ರೆ ಬೇಗ ಹತ್ತಿತು. ನಾಳೆಯಿಂದ ಕೆಲಸ ಇಲ್ಲದ ನನಗೆ ನಿದ್ರೆಯಾದರೂ ಹೇಗೆ ಬಂದೀತು? ತಲೆಯಲ್ಲಿ ನೂರೂರು ಆಲೋಚನೆಗಳು ಒಮ್ಮೆಗೇ ನುಗ್ಗಿದವು.


’ಈ ಜಾಗತಿಕ ಆರ್ಥಿಕ ಅಸಮತೋಲನಗಳ ಅಬ್ಬರದಲ್ಲಿ, ನಮ್ಮಂತಹವರು ಗುರಿಯಾಗುತ್ತಿದ್ದೇವೆ, ವಿದೇಶಗಳಲ್ಲೂ ಈಗ ಕೆಲಸ ದೊರೆಯುವುದು ಅಷ್ಟು ಸುಲಭವಲ್ಲ, ನನ್ನ ಹಿಂದಿನ ಬ್ಯಾಚ್ ನವರೆಲ್ಲಾ ಹೇಗೋ ಅಮೆರಿಕ,ಇಂಗ್ಲೆಂಡ್,ಜಪಾನ್, ಜರ್ಮನಿ,ಆಸ್ಟ್ರೇಲಿಯ,ಮುಂತಾದದೇಶಗಳಲ್ಲಿ ಹೋಗಿ ನೆಲಸಿಬಿಟ್ಟರು.

ಆದರೆ ನನ್ನ ಹೆಸರು ಬರುವ ವೇಳೆಗೆ ವಿದೇಶಗಳಿಗೆ ಕಳುಹಿಸುವುದು ನಿಂತೇಹೋಯಿತು.ನಾನೂ ಮೊದಲೇ ಅಲ್ಲಿಗೆ ಹೋಗಿಬಿಡಬೇಕಾಗಿತ್ತು.

ಹೋಗಲಿ, ಇಲ್ಲಿಯೇ ಹೇಗೋ ನೆಮ್ಮದಿಯಾಗಿ ಇರೋಣವೆಂದರೆ, ಅದಕ್ಕೂ ಹೀಗೆ ಕಲ್ಲು ಬಿತ್ತಲ್ಲ? ಅಹನಾ ಳಿಗೂ ಈ ಪರಿಸ್ಥಿತಿ ಯಾವಾಗ ಬೇಕಾದರೂ ಬರಬಹುದು? ನೋಡೋಣ,ಎಲ್ಲಾ ಪ್ರಯತ್ನಗಳನ್ನೂ

ನಾಳೆಯಿಂದ ಮಾಡೋಣ. ಹಾಗೇ ನಿದ್ರೆ ಬಂದಂತಾಗಿ,ಕಣ್ಣು ಮುಚ್ಚಿ ಮಲಗುವ ಪ್ರಯತ್ನ ಮಾಡಿದೆ.ಆದರೆ ಇದ್ದಕ್ಕಿದ್ದಂತೆ ನನಗೊಂದು ಆಲೋಚನೆ ಮಿಂಚಿನಂತೆಹೊಳೆಯಿತು.

"ನಾನು ಮತ್ತು ಅಹನಾ ಇಬ್ಬರೂ ತಾಂತ್ರಿಕ ಶಿಕ್ಷಣ ಪಡೆದು, ಉದ್ಯೊಗದಲ್ಲಿ ಅನುಭವ ಪಡೆದಿದ್ದೇವೆ. ನಮ್ಮಂತವರು ಕೆಲಸಕ್ಕಾಗಿ ಪರದಾಡುವ ಬದಲು, ನಾವಿಬ್ಬರೇ ಸೇರಿ, ಯಾವುದಾದರೊಂದು

ಸ್ವಂತ ಉದ್ಯೋಗ ವನ್ನು ಪ್ರಾರಂಭ ಮಾಡಿದರೆ ಹೇಗೆ? ಬೇರೆ ಕಡೆ ಉದ್ಯೋಗದ ಭೇಟೆ ಯಾಕೆ ಬೇಕು? ಎಲ್ಲಿ ಕೆಲಸಕ್ಕೆ ಸೇರಿದರೂ ಇದೇ ಅಭದ್ರತೆಇದ್ದೇ ಇರುತ್ತದೆ. ನಾವೇ ಏನಾದರೂ ಸ್ವಂತವಾಗಿ ಮಾಡಲು

ಪ್ಲಾನ್ ಮಾಡಬೇಕು,ಹಾಗೆ ಮುಂದೆ ಬರಬೇಕಾದರೆ, ಕೇವಲ ಬಿ.ಇ. ಡಿಗ್ರಿ ಸಾಕಾಗುವುದಿಲ್ಲ, ಎಮ್.ಎಸ್.ಮಾಡಬೇಕು, ಈಗ ನನಗೆ ದೊರೆತಿರುವ ಅವಕಾಶವನ್ನು ಉಪಯೋಗಿಸಿಕೊಂಡು, ಎಮ್.ಎಸ್. ಮಾಡಿದರೆ ಹೇಗೆ? ಸಧ್ಯ, ಕೈ ತುಂಬಾ ಸಂಬಳ ಬಂದಾಗ, ಹೆಚ್ಚು ದುಂದು ವೆಚ್ಚ ಮಾಡದೆ,ಸ್ವಲ್ಪ ಹಣವನ್ನು ಸೇವಿಂಗ್ಸ್ ಮಾಡಿರುವುದರಿಂದ ಈಗ ಓದುವುದಕ್ಕೆ ಹೋಗಲು ಅಷ್ಟು ಕಷ್ಟವಾಗಲಾರದು, ಕೆಲಸಕ್ಕೆ ಸೇರಿದಾಗಲಿಂದಲೂ ನನ್ನ ಅಮ್ಮ ಅಪ್ಪ ಇಬ್ಬರೂ ದುಂದುವೆಚ್ಚ ಮಾಡದಿರುವಂತೆ ತಿಳುವಳಿಕೆ ಹೇಳುತ್ತಲೇ ಇದ್ದುದ್ದರಿಂದ, ನನಗಾಗಲೀ ಅಹನಳಿಗಾಗಲೀ, ಸುಮ್ಮಸುಮ್ಮನೆ ಮಾಲ್ ಗಳಿಗೆ ನುಗ್ಗಿ ಬೇಕಾದ್ದು ಬೇಡವಾದದ್ದನ್ನು ತರುವ ಚಟ ಇಲ್ಲ. ಈಗ ಅದು ಎಷ್ಟು ಸಹಾಯವಾಯಿತೆನಿಸುತ್ತಿದೆ.

ಹೇಗೋ ಎರಡು ವರ್ಷ ಎಂ.ಎಸ್. ಮುಗಿಸಿಬಿಟ್ಟರೆ,ಆಗ ಏನು ಬೇಕಾದರೂ ಮಾಡಬಹುದು,ಇಲ್ಲವೆ ಒಳ್ಳೆಯ ಕೆಲಸ ಸಿಗಲೂಬಹುದು. ಇರಲಿ, ನಾಳೆ ಅಹನಾಳೊಂದಿಗೆ ಇದರ ಬಗ್ಗೆ ಡಿಸ್ಕಸ್ ಮಾಡಿದರಾಯಿತು, ಈಗ ನಿದ್ದೆ ಮಾಡೋಣ. "

ನನ್ನ ಈ ನಿರ್ಧಾರ ಘಟ್ಟಿಯಾಗುತ್ತಾ ಹೋದಂತೆ, ಮನಸ್ಸು ಸ್ವಲ್ಪ ಸ್ವಲ್ಪ ಹಗುರವಾಗತೊಡಗಿತು. ಮಗ್ಗಲು ಬದಲಾಯಿಸಿದಾಗ, ಮಗುವಿನಂತೆ ಮಲಗಿ ನಿದ್ರಿಸುತ್ತಿದ್ದ ಅಹನಾಳನ್ನು ಮುದ್ದಿಸಬೇಕೆನಿಸಿ, ಅವಳ ಹತ್ತಿರಕ್ಕೆ ಹೋಗಿ, ಅವಳನ್ನು ತಬ್ಬಿಕೊಂಡು ಮಲಗಿದಾಗ,ಸಾಯಂಕಾಲದಿಂದ ನನನ್ನು ಕಾಡುತ್ತಿದ್ದ ಮಾನಸಿಕ ಸಂಘರ್ಷ ಕಡಿಮೆಯಾದಂತಾಗಿ, ಮನಸ್ಸು ಹಗುರವಾಯಿತು.


ಮಾರನೆಯ ದಿನ ಎದ್ದ ಕೂಡಲೇ ಅಹನಾಳೊಂದಿಗೆ ,ನಾನು ಎಮ್.ಎಸ್, ಮಾಡಬೇಕೆಂದುಕೊಂಡಿರುವ ವಿಷಯವನ್ನು ತಿಳಿಸಿದಾಗ,ಮೊದಮೊದಲು ಅವಳು ಅದನ್ನು ಒಪ್ಪಿಕೊಳ್ಳದಿದ್ದರೂ,ಅದರಿಂದ ಮುಂದೆ ಆಗುವ ಎಲ್ಲಾ ರೀತಿಯ ಪ್ರಯೋಜನಗಳನ್ನೂ ವಿವರಿಸಿ ಹೇಳಿದಾಗಅವಳು ಒಪ್ಪಿಕೊಂಡಳು. ಹಿಂದಿನ ದಿನ ಸಂಜೆಯಿಂದ ನನ್ನ ಮನಸ್ಸಿಗೆ ಕವಿದಿದ್ದ ಮಬ್ಬು ಹರಿದು, ಮುಂಜಾವಿನ ಮುಂಬೆಳಕು ಹೊಸ ಹೊಳಪು ಹರಡಿಕೊಳ್ಳತೊಡಗಿತು. ಮನಸ್ಸು ಹಕ್ಕಿಯಂತೆ ಹಾರಾಡತೊಡಗಿ, ಈ ನನ್ನ ನಿರ್ಧಾರವನ್ನು ಅಪ್ಪ ಅಮ್ಮನಿಗೆ ಈಗಲೇ ತಿಳಿಸಬೇಕೆಂದು,ರೂಂನಿಂದ ಹೊರಗೋಡಿದೆ.


Rate this content
Log in

More kannada story from Vijaya Bharathi

Similar kannada story from Abstract