Prabhakar Tamragouri

Drama Classics Others

4  

Prabhakar Tamragouri

Drama Classics Others

ಅಂತರಾಳ

ಅಂತರಾಳ

10 mins
305



   " ಅಜ್ಜೀ ...ಅಜ್ಜೀ .....ನೀನು ಎಲ್ಲಿಗೂ ಹೋಗೋದು ಬೇಡಜ್ಜೀ . ನಮ್ಜೊತೆಗೇ ಇದ್ದುಬಿಡು . ನೀನಿಲ್ಲಿರಲ್ಲಾಂದ್ರೆ ನಮಗೆಲ್ಲಾ ತುಂಬಾ ಬೇಜಾರಾಗುತ್ತೆ ....."ಕಮಲಮ್ಮನವರ ನಾಲ್ವರು ಮೊಮ್ಮಕ್ಕಳು ಸುತ್ತಲೂ ಮುತ್ತಿಕೊಂಡು ಅತ್ತಿತ್ತ ನಡೆದಾಡಲೂ ಸಾಧ್ಯವಿಲ್ಲದಂತೆ ಅವರನ್ನು ಅಪ್ಪಿಕೊಂಡು ನಿಂತಿದ್ದರು . " ಅಜ್ಜೀ , ನೀನು ಎಷ್ಟು ದಿನ ಆಲ್ಲಿರ್ತೀ ....? ಪುನಃ ಇಲ್ಲಿಗೆ ಯಾವಾಗ ಬರ್ತಿ ? ಮತ್ತೆ ನನಗಿಲ್ಲಿ ಸ್ನಾನ ಮಾಡಿಸೋದು ಯಾರು ? ಊಟ ಮಾಡಿಸೋದು ಯಾರು ? ಶಾಲೆಯಿಂದ ಬರುವಾಗ ಕಾಫಿ ,ತಿಂಡಿ ಕೊಡೋದು ಯಾರು ? " ಆರು ವರ್ಷದ ಮೊಮ್ಮಗಳು ಜ್ಯೋತಿ ಅಳುತ್ತಾ ಒಂದೇ ಸಮನೆ ಕಮಲಮ್ಮನವರನ್ನು ಪ್ರಶ್ನಿಸುತ್ತಿದ್ದಳು ಅವಳಿಗಿಂತ ದೊಡ್ಡವರಾದ ಆಶಾ , ಸುಮಾ , ನಂದಿನಿ ಅವರೂ ಸುತ್ತಲೂ ಪೆಚ್ಚಾಗಿ ನಿಂತಿದ್ದರು- ಕಮಲಮ್ಮನವರಿಗೆ ಎರಡು ದಿನಗಳಿಂದೀಚೆಗೆ ಮೊಮ್ಮಕ್ಕಳನ್ನುಸಂತೈಸಿ ಸಾಕು ಸಾಕಾಗಿತ್ತು . ಅವರ ಮುಗ್ಧ ಪ್ರೀತಿಗೆ ಸೋತು ಕಣ್ಣು ತುಂಬಿ ಬರುತ್ತಿತ್ತು .


    " ಅಯ್ಯೋ , ಈ ಪುಟ್ಟ ಮಕ್ಕಳನ್ನು ನೋಡದೆ ತನಗಲ್ಲಿ ಬದುಕಲಾದರೂ ಸಾಧ್ಯವೇ ...? ಅವರ ನಗು , ಆಟಪಾಟ ಕೊನೆಗೆ ಹೊಡೆದಾಟ ನಡೆಯುವಾಗಲೂ ಅವರನ್ನು ಸಮಾಧಾನಪಡಿಸಲು ತಾನು ಬೇಕೇ ಬೇಕು . ಎಳೆ ಪ್ರಾಯದ ಒಂಟಿ ಹೆಣ್ಣು ಭವಾನಿ ತನ್ನ ಉಳಿದ ಕೆಲಸಗಳೊಂದಿಗೆ ಈ ನಾಲ್ವರು ಮಕ್ಕಳನ್ನೂ ಸುಧಾರಿಸಿಕೊಂಡು ಅದು ಹೇಗೆ ದಿನಗಳೆಯುತ್ತಾಳೋ ಏನೋ ....? " ಎಂದು ಯೋಚಿಸಿ ಖಿನ್ನರಾಗುತ್ತಿದ್ದರು . ಪುಟ್ಟ ಜ್ಯೋತಿ ವಿಪರೀತ ಹಠಹಿಡಿದಾಗ ಸೊಸೆ ಭವಾನಿ " ಮರೀ , ರಾಮು ಚಿಕ್ಕಪ್ಪನ ಮನೆಯಲ್ಲಿಯೂ ಎರಡು ಪುಟ್ಟ ಪಾಪುಗಳಿವೆ . ಅವು ಕೂಡ ನಿನ್ನಂತೆ ಅಜ್ಜಿ ಬೇಕು ಅಂತ ಅಳ್ತಾವಂತೆ .....ಅಜ್ಜಿ ಅಲ್ಲಿ ನಾಲ್ಕು ದಿನವಿದ್ದು ಬರ್ತಾರೆ . ನೀನು ಅಳದೇ ಇದ್ರೆ ಅಲ್ಲಿಂದ ಬರುವಾಗ ನಿನಗೆ ಬೇರೆ ಬೇರೆ ಆಟದ ಸಾಮಾನು ತರ್ತಾರೆ ...." ಎಂದು ಸಮಾಧಾನ ಪಡಿಸಿದರೂ ಮತ್ತೆ ಸ್ವಲ್ಪ ಹೊತ್ತಿಗೆ ತನ್ನ ಹಳೆ ರಾಗವನ್ನ ಶುರುಮಾಡಿಬಿಡುತ್ತಿದ್ದಳು  


ಕಮಲಮ್ಮನವರು ಮೊಮ್ಮಮಕ್ಕಳನ್ನು ಬಿಟ್ಟು ಎಲ್ಲಿಗೂ ಹೋದವರೇ ಅಲ್ಲ .ಯಾವಾಗಲಾದರೂ ಮನೆಯಿಂದ ಹೊರಗೆ ಹೊರಡುತ್ತಿದ್ದೆರೆ ನಾಲ್ಕು ಜನ ಮೊಮ್ಮಕ್ಕಳ ಪೈಕಿ ಒಬ್ಬಳಾದರೂ ಅವರ ಜೊತೆಯಲ್ಲಿರಲೇಬೇಕು ಮೊಮ್ಮಕ್ಕಳೂ ಅಷ್ಟೇ ....ತಾಯಿ ತಂದೆಗಿಂತ ಅಜ್ಜಿಯನ್ನೇ ಹೆಚ್ಚು ಹೊಂದಿಕೊಂಡಿದ್ದವು . ತಮ್ಮ ವಯಸ್ಸನ್ನೇ ಮರೆತು ಜೊತೆಗೆ ಬೆರೆಯುವ ಅಜ್ಜಿಯೆಂದರೆ ಅವರಿಗೆ ಬಹಳ ಅಚ್ಚು ಮೆಚ್ಚು . ಹಾಗೆ ನೋಡಿದರೆ ಕಮಲಮ್ಮನವರಿಗೆ ಇದು ಸ್ವಲ್ಪವೂ ಇಷ್ಟವಿಲ್ಲದ ಪ್ರಯಾಣ . ಆದರೆ , ಅವರ ಕಿರಿಯ ಮಗ ರಾಮುವಿನ ಹೆಂಡತಿ ಶ್ಯಾಮಲಾ ಅತ್ತೆಯನ್ನು ಕರೆದೊಯ್ಯಲು ಈಗ ಎರಡನೆಯ ಬಾರಿ ಬಂದಿದ್ದಳು .ರಾಮು ಇದಕ್ಕಿಂತ ಮೊದಲು ಒಂದು ವರ್ಷದಲ್ಲಿ ನಾಲ್ಕು ಸಲ ಬಂದಿದ್ದ .ಆಗೆಲ್ಲ ಕಮಲಮ್ಮನವರು ಉದಾಸೀನ ತೋರಿದ್ದರು .ಪ್ರತಿ ಬಾರಿಯೂ ಹೀಗೆ ಅವನ ಕರೆಯನ್ನು ತಿರಸ್ಕರಿಸಿ ತನ್ನ ಬಗ್ಗೆ ತಾನೇ ಏಕೆ ಅವನಲ್ಲಿ ಅಸಮಾಧಾನವನ್ನು ಮೂಡಿಸಿಕೊಳ್ಳಬೇಕು .....ಎಂದುಕೊಂಡು ಇದೀಗ ಅವರು ಮುಂಬಯಿಯಲ್ಲಿರುವ ಮಗನ ಮನೆಗೆ ಹೊರಟಿದ್ದರು . ಹೆಚ್ಚು ಕಡಿಮೆ ಇನ್ನು ಮುಂದೆ ಅಲ್ಲಿಯೇ ಇರುವುದೆಂದೂ ತೀರ್ಮಾನವಾಗಿತ್ತು . 


  ಮೊದಲಸಲ ಮನೆಗೆ ಬಂದ ತಾಯಿಯನ್ನು ರಾಮು ಅತ್ಯಾದರದಿಂದ ಉಪಚರಿಸುತಿದ್ದ . ಶ್ಯಾಮಲಾ ಕೂಡ ಪ್ರೀತಿಯ ಮಾತುಗಳಿಂದ , ಊಟ ಉಪಚಾರಗಳಿಂದ ಅತ್ತೆಯನ್ನು ಸಂತೋಷಗೊಳಿಸುತ್ತಿದ್ದಳು . ಕಮಲಮ್ಮನವರು ಮಗನ ಮನೆಗೆ ಬಂದು ಒಂದು ತಿಂಗಳಾಗುತ್ತಾ ಬಂದಿತ್ತು . ರಾಅಮುವಿನ ಮಕ್ಕಳು ಅವರನ್ನು ಹಚ್ಚಿಕೊಂಡುಬಿಟ್ಟರೂ , ವಾರವಾರಕ್ಕೆ ಊರಿನಿಂದ ಬರುತ್ತಿದ್ದ ಮೊಮ್ಮಕ್ಕಳ ಪತ್ರ ಅವರನ್ನು ಊರಿನ ಕಡೆಗೆ ಸೆಳೆಯುತ್ತಿತ್ತು . ಆ ದಿನ ಬೆಳಿಗ್ಗೆ ಕಮಲಮ್ಮ ತಿಂಡಿ ಮುಗಿಸಿ ದಿನಪತ್ರಿಕೆಯನ್ನೋದುತ್ತಾ ಕುಳಿತಿದ್ದರು .ಭಾನುವಾರವಾಗಿದ್ದರಿಂದ ರಾಮು ಮನೆಯಲ್ಲಿಯೇ ಇದ್ದ . ಅವನು ಕೂಡಾ ಬಂದು ತಾಯಿಯೆದುರಿಗಿದ್ದ ಕುರ್ಚಿಯಲ್ಲಿ ಕುಳಿತು ಯಾವ ರೀತಿಯಲ್ಲಿ ಮಾತು ಆರಂಭಿಸಲಿ .....? ಎಂದುಕೊಳ್ಳುತ್ತಾ ಇನ್ನೊಂದು ಪತ್ರಿಕೆ ಕೈಗೆತ್ತಿಕೊಂಡ . ಆನಂತರ ನಿಧಾನವಾಗಿ , " ಅಮ್ಮಾ , ನಿನ್ನಲ್ಲಿ ಒಂದು ಮಾತು ಕೇಳಬೇಕಾಗಿತ್ತು ......" ಎಂದು ಅಷ್ಟಕ್ಕೇ ನಿಲ್ಲಿಸಿದ . " ಕೇಳಪ್ಪಾ , ಏನು ಕೇಳ್ಬೇಕೋ ಕೇಳು . ಯಾಕಿಷ್ಟು ಸಂಕೋಶ .....? " ಎನ್ನುತ್ತಾ ಪತ್ರಿಕೆಯನ್ನು ಮಡಚಿಟ್ಟು ಕನ್ನಡಕ ತೆಗೆದು ಮೇಜಿನ ಮೇಲಿರಿಸಿ ಮುಂದಿನ ಮಾತಿಗಾಗಿ ಅವನ ಮುಖ ನೋಡಿದರು .


 " ಅಮ್ಮಾ , ನಾನು ಮತ್ತು ದತ್ತಣ್ಣ ಆಲೋಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದೇವೆ . ಅದೇನೆಂದರೆ , ಅಪ್ಪ ಸಾಯುವುದಕ್ಕೂ ಮೊದಲು ಮನೆ ಹಾಗೂ ತೋಟವನ್ನು ನಿನ್ನ ಹೆಸರಿಗೆ ಮಾಡಿದ್ದಾರಲ್ಲಾ........ಇಷ್ಟರವರೆಗೆ ಜಯಣ್ಣ ಇರುವಾಗ ಎಲ್ಲವನ್ನೂ ಸರಿಯಾಗಿ ನೋಡಿಕೊಂಡು ಬರುತ್ತಿದ್ದ . ಈಗ ಅವನೇ ಇಲ್ಲವಾದಮೇಲೆ ಅಲ್ಲಿನ ವ್ಯವಹಾರಗಳನ್ನು ನೋಡುವವರು , ಮಾಡುವವರು ಯಾರು ....?ನಿನಗೂ ವಯಸ್ಸಾಯಿತು " ಅಂತ ಹೇಳಿ ಸ್ವಲ್ಪ ಹೊತ್ತು ಸುಮ್ಮನಿದ್ದು ಪುನಃ ಹೇಳಿದ . " ಹಾಗೆಯೇ , ಕೆಲವು ಸಮಯದ ಹಿಂದೆ ನಾನು ಊರಿಗೆ ಬಂದಿದ್ದಾಗ ನನ್ನ ಗೆಳೆಯನೊಬ್ಬ ಸಿಕ್ಕಿದ್ದ . ಈಗ ಅವನು ದೊಡ್ಡ ಕೈಗಾರಿಕೋದ್ಯಮಿಯಾಗಿ ಹೆಸರು ಪಡೆದಿದ್ದಾನೆ . ಅವನಿಗೆ ನಮ್ಮ ಊರಿನಲ್ಲಿ ಏನೋ ಒಂದು ಸಣ್ಣ ಕಾರ್ಖಾನೆ ತೆರೆಯಬೇಕೆಂಬ ಉದ್ದೇಶವಿದೆ . ಅಲ್ಲಿ ಪೇಟೆಯ ಹೊರವಲಯದಲ್ಲಿ ಎಲ್ಲಿಯೂ ಅವನಿಗೆ ಸರಿಯಾದ ಜಾಗ ಸಿಗಲಿಲ್ಲವೆಂದು ತಿಳಿಸಿದ್ದ . ಇನ್ನು ನಮ್ಮ ತೋಟ ಕೃಷಿ ಮಾಡುವವರಿಲ್ಲದೆ ಸುಮ್ಮನೆ ಹಾಲು ಬೀಳುವುದೇಕೆ ? ಅದನ್ನು ಇಟ್ಟುಕೊಂಡು ನಾವು ಏನು ತಾನೇ ಸಾಧಿಸಬೇಕಾಗಿದೆ ...? ಒಂದಷ್ಟು ತೆಂಗು , ಅಡಿಕೆ , ಹಣ್ಣಿನ ಮರಗಳಿಂದ ಸಿಗುವ ಆದಾಯ , ಅದನ್ನು ಪಡೆಯಲು ಮಾಡಬೇಕಾದ ಖರ್ಚಿಗೆ ಸಹಿತ ಸಾಕಾಗಲಾರದು . ಅದರ ಬದಲಿಗೆ ಅದನ್ನು ಲಕ್ಷಗಟ್ಟಲೆ ಬೆಲೆಗೆ ಮಾರಾಟ ಮಾಡಿದರೆ ಸಿಗುವ ಹಣದಿಂದ ನಾವು ನೆಮ್ಮದಿಯಾಗಿ ಜೀವನ ಸಾಗಿಸಬಹುದು . ಅವನು ಅಲ್ಲಿರುವ ದೊಡ್ಡ ದೊಡ್ಡ ಮರಗಳನ್ನು ಸ್ವಂತಕ್ಕೆ ಕಡಿಸಿಕೊಂಡು ಅಥವಾ ಬೇರೆಯವರಿಗೆ ಕೊಟ್ಟು ಅವನ ಉದ್ಯಮವನ್ನು ಆರಂಭಿಸಲಿ . ಇದರಿಂದಾಗಿ ನನ್ನ ಗೆಳೆಯನಿಗೆ ನಾನೊಂದು ಸಹಾಯ ಮಾಡಿದಂತೆಯೂ ಆಗುತ್ತದೆ ,ಅಲ್ಲದೆ , ನಮ್ಮ ಕಷ್ಟಗಳೂ ನಿವಾರಣೆಯಾಗುತ್ತವೆ ....."


  " ಮತ್ತೆ , ಭವಾನಿ ಅತ್ತಿಗೆಗೆ ಈಗಾಗಲೇ ಜವುಳಿ ಅಂಗಡಿಯಿರುವ ನಮ್ಮ ಕಟ್ಟಡದ ಬಾಡಿಗೆ ಬರುತ್ತಿದೆಯಲ್ಲಾ ......ಅದರ ಜೊತೆಗೆ ಒಂದಿಷ್ಟು ಜೀವನಕ್ಕೆ ಅಂತ ಕೊಟ್ಟರಾಯಿತು . ನಾಲ್ಕು ಜನ ಹೆಣ್ಣು ಮಕ್ಕಳ ಜವಾಬ್ದಾರಿ ಹೊರುವುದೆಂದರೆ ಅಷ್ಟು ಸುಲಭವೇನಮ್ಮಾ ? ಅತ್ತಿಗೆ ತನ್ನ ಮಕ್ಕಳೊಂದಿಗೆ ಅವಳ ತವರು ಮನೆಯಲ್ಲಿರಲಿ . ನೀನು ನಮ್ಮ ಜೊತೆಗೆ ಇಲ್ಲೇ ಹಾಯಾಗಿರು . ಪುನಃ ಅಲ್ಲಿಗೆ ಹೋಗುವುದೇ ಬೇಡ ಆಗದೇನಮ್ಮಾ ....? " ರಾಮು ದೀರ್ಘವಾಗಿ ನುಡಿಯುತ್ತಿದ್ದಂತೆಯೇ ಅವನ ಒಂದೊಂದು ಮಾತುಗಳೂ ಅವರ ಹೃದಯವನ್ನು ಈಟಿಯಂತೆ ಇರಿಯುತ್ತಾ ಹೋಗುತ್ತಿದ್ದವು . ರಾಮು ತನ್ನ ಮೇಲೆ ಅಷ್ಟೊಂದು ಪ್ರೀತಿ , ಆದರೆ , ಗೌರವಗಳನ್ನು ತೋರಿಸುತ್ತಿದ್ದುದು , ಇದ್ದಕ್ಕಿದ್ದಂತೆಯೇ ತನ್ನನ್ನು ಇಲ್ಲಿಗೆ ಕರೆದೊಯ್ಯಲು ಪ್ರಯತ್ನಿಸಿದುದು ಯಾಕೆಂದು ಈಗ ಕಮಲಮ್ಮನವರಿಗೆ ಅರ್ಥವಾಗಿಬಿಟ್ಟಿತ್ತು . ಇದೇ ಏನು ನಾನು ಮಕ್ಕಳಿಂದ ಬಯಸಿದ್ದು ? ಆ ಹಸಿರು ತೋಟಗಳ ಮಧ್ಯೆ ಆಡಿ ಬೆಳೆದ ಮಕ್ಕಳು ಇವರೇ ಏನು ? ಹೊತ್ತು ಹೆತ್ತು ಸಾಕಿ ಸಲಹಿದ ನನ್ನನ್ನೂ , ತನ್ನ ತೆಕ್ಕೆಯಲ್ಲಿ ಬೆಳೆಸಿ ಕಾಪಾಡಿದ ಪ್ರಕೃತಿ ತಾಯಿಯನ್ನು ಒಂದೇ ಮಾತಿಗೆ ಎಷ್ಟು ಸಲೀಸಾಗಿ ತನಗೆ ಸಂಬಂಧವೇ ಇಲ್ಲವೆಂಬಂತೆ ಮಾತನಾಡಿದನಲ್ಲಾ ....ನಾನೆಲ್ಲಿಯಾದರೂ ತಪ್ಪಿದೆನೇನು ? ಇಲ್ಲ ...ಖಂಡಿತಾ ಇಲ್ಲ . ನಾನಂತೂ ಎಲ್ಲಾ ಮಕ್ಕಳಿಗೂ ಸಮಾನಾಗಿ ಹಾಲು ಅನ್ನ ಕೊಟ್ಟು ಬೆಳೆಸಿದೆ . ಆದರೆ , ಇವರ ಬುದ್ದಿ ವಿಷದಷ್ಟು ಕಠಿಣ ಹೇಗಾಯಿತು ...?


  ಅವರು ಆ ಹಸಿರಿನ ತೋಟಕ್ಕಾಗಿ ಎಷ್ಟೆಲ್ಲಾ ಕಷ್ಟಪಟ್ಟು ತಮ್ಮ ಜೀವನವನ್ನೇ ತೇಯ್ದರು . ಅದೇ ನಮ್ಮೆಲ್ಲರ ಜೀವಸೆಲೆ ಎಂದು ಭಾವಿಸಿದರು . ತನ್ನ ಕೊನೆಯ ಕ್ಷಣಗಳಲ್ಲಿಯೂ , " ಕಮಲಾ , ನಾನು ಇಲ್ಲವಾದರೂ ನನ್ನ ಉಸಿರು ಮಾತ್ರ ಎಂದಿಗೂ ಆ ಹಸುರಿನ ರಾಶಿಯೊಳಗೆ ,ಪ್ರತಿ ಗಿಡ ,ಮರಗಳ ಎಲೆಯೊಳಗೆ ಉಸಿರಾಡುತ್ತಿರುತ್ತದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೋ ....." ಎಂದಿದ್ದರು . ಆ ತಂದೆಗೂ ಈ ಮಕ್ಕಳಿಗೂ ಅದೆಷ್ಟು ವ್ಯತ್ಯಾಸ .....!! ಬರಡು ಭೂಮಿಯನ್ನು ಸಹಜವಾಗಿ ಚಿಗುರಿಸಿ ಪ್ರಕೃತಿ ಕೊಟ್ಟ ಫಲವನ್ನು ಸ್ವೀಕರಿಸಿದ ತಂದೆ ಒಂದು ಕಡೆಯಾದರೆ .....ಫಲಭರಿತ ಭೂಮಿಯನ್ನು ಬಲಾತ್ಕಾರದಿಂದ ಬರಡು ಭೂಮಿಯನ್ನಾಗಿಸಿ ಹಣ ಸಂಪಾದಿಸಲು ಹೊರಟಿರುವ ಮಕ್ಕಳು ಇನ್ನೊಂದು ಕಡೆ .....! ಎಲ್ಲಿಂದೆಲ್ಲಿಯ ಅಂತರ !! ಈ ಮಕ್ಕಳೇಕೆ ಹೀಗೆ ? ದೊಡ್ಡ್ದನಗರಕ್ಕೆ ಕಾಲಿಟ್ಟ ಕೂಡಲೇ ತಾವು ನಡೆದು ಬಂದ ಹಾದಿಯನ್ನೇ ಮರೆತುಬಿಡುತ್ತಾರಲ್ಲ....ಈ ಹಸಿರು , ಕಾಡು ,ನದಿ ,ಪ್ರಾಣಿ , ಪಕ್ಷಿ ಎಲ್ಲವನ್ನೂ ದೂರವಾಗಿಸಿಕೊಂಡು ಮಾನವೀಯತೆಯನ್ನೇ ಮಾರಿಕೊಳ್ಳುತ್ತಾರಲ್ಲಾ ....ಏಕೆ ಹೀಗೆ ಪಟ್ಟಣದ ಮೋಹ ...? ಅಲ್ಲಿನ ಬಂಗಲೆ , ಕಾರು , ಅಂತಸ್ತು ಎಲ್ಲದಕ್ಕೂ ಮರುಳಾಗಿ ಕೃತಕತೆಯನ್ನೇ ಮೈಗೂಡಿಸಿಕೊಂಡುಬಿಡುತ್ತಾರೆ . ಆನಂತರ ಅಲ್ಲಿನ ಯಾಂತ್ರಿಕ ಜೀವನಕ್ಕೆ ಒಗ್ಗಿಕೊಳ್ಳುತ್ತಾರೆ . ತಾವು ಸಂತೋಷದಲ್ಲಿದ್ದೇವೆಂಬ ಭ್ರಮೆಯಲ್ಲಿಯೇ ದಿನಗಳೆಯುತ್ತಾರೆ . ಕೊನೆಗೆ ಈ ಕಾಂಕ್ರೀಟಿನ ಕಟ್ಟಡಗಳ ಮೂಲೆ ಮೂಲೆಗಳಲ್ಲಿ ತಮ್ಮ ಆತ್ಮ ಸಾಕ್ಷಿಯನ್ನೇ ಸಮಾಧಿ ಮಾಡಿಬಿಡುತ್ತಾರೆ ...! ಏನು ವಿಚಿತ್ರ ಈ ಪ್ರಪಂಚ .......!!

 ತಾಯಿ , ಹೆತ್ತ ಮಕ್ಕಳಿಗೆ ತಾಯಿಯಾದವರು ಮನೆಗೆ ತಂದ ಹೆಣ್ಣಿಗೂ ತಾಯಿಯಲ್ಲವೇ ....? ಭವಾನಿ , ತಾನು ಅವಳನ್ನು ಸೊಸೆಯೆಂದು ಭಾವಿಸಿಯೇ ಇಲ್ಲ .ಮಗಳಂತೆಯೇ ನಡೆಸಿಕೊಳ್ಳುತ್ತಿದ್ದೆ .ಅವಳೂ ಅಷ್ಟೇ , ನನ್ನನ್ನು ತಾಯಿಗಿಂತ ಹೆಚ್ಚಿನ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು . ಜಯರಾಮ ಜೀವಂತವಾಗಿದ್ದಾಗ ನನಗೇನೂ ಕೊರತೆ ಮಾಡಿರಲಿಲ್ಲ . ಈಗ ಮಗನಿಲ್ಲದಿರುವಾಗ ಮಗಳಂತಹ ಸೊಸೆಯ ಸಂಬಂಧ ಕಡಿದುಕೊಂಡು , " ಭವಾನಿ , ನೀನು ಮಕ್ಕಳೊಂದಿಗೆ ನಿನ್ನ ತವರಿಗೆ ಹೋಗಮ್ಮ . ನಾನು ಈ ಮನೆ , ತೋಟವನ್ನು ಮಾರಾಟ ಮಾಡಿ ಗಂಡುಮಕ್ಕಳೊಂದಿಗೆ ಹಾಯಾಗಿರುತ್ತೇನೆ " ಎಂದು ಯಾವ ಬಾಯಿಯಿಂದ ಹೇಳಲಿ ? ನಾನೆಂದಿಗೂ ಅಂತಹ ಸ್ವಾರ್ಥಿ ತಾಯಿಯಾಗಲಾರೆ ...ಹಸಿರನ್ನು ಕೊಲ್ಲುವ ಕಟುಕಿಯೂ ಆಗಲಾರೆ .... ಹಲವು ಆಲೋಚನೆಗಳೆಡೆಯಲ್ಲಿ ಸಿಕ್ಕಿಕೊಂಡ ಕಮಲಮ್ಮನವರಿಗೆ ತಾನೀಗ ತನ್ನ ಮಗನಿಗೇ ಪರಕೀಯಳಾದಂತೆನಿಸಿ ಮೆಲ್ಲನೆ ಬಿಕ್ಕಿದರು . ರಾಮು ತತ್ ಕ್ಷಣ ಓದುತ್ತಿದ್ದ ಪತ್ರಿಕೆಯಿಂದ ಮುಖವೆತ್ತಿ " ಛೆ ..ಛೆ ..ಅಮ್ಮಾ , ನಾನೇನೂ ಲೋಕರೂಢಿಯಲ್ಲಿಲ್ಲದುದನ್ನು ಹೇಳಲಿಲ್ಲ . ಇದು ವಾಸ್ತವದ ಸಂಗತಿ . ನಿನಗದು ಏನೂ ತಿಳಿಯೋದಿಲ್ಲ . ನಾನು ಹೇಳಿದರೆ ನಿನಗೆ ಅರ್ಥವಾಗುವುದೂ ಇಲ್ಲ . ಆ ಮನೆ , ತೋಟ ಇಟ್ಟುಕೊಂಡು ಈ ಪ್ರಾಯದಲ್ಲಿ ಏನು ಸಾಧಿಸುತ್ತೀಯೋ ಏನೋ ....? ಇದ್ದರೂ , ಮಾರಿದರೂ ನಿನ್ನ ಮಕ್ಕಳಿಗೇ ತಾನೇ ....? ಸರಿಯಾಗಿ ಯೋಚಿಸಿ ನಾಳೆ ಉತ್ತರ ಹೇಳಮ್ಮಾ . ಆದಷ್ಟು ಬೇಗನೆ ನನ್ನ ನಿರ್ಧಾರವನ್ನು ಸ್ನೇಹಿತನಿಗೆ ತಿಳಿಸಬೇಕಾಗಿದೆ ...."ಎಂದು ಅವರ ಉತ್ತರಕ್ಕೂ ಕಾಯದೆ ಕಾರು ಚಲಾಯಿಸುತ್ತಾ ಹೊರಟು ಹೋದ .


    " ರಾಮೂ , ನಿನ್ನ ಈ ನಿರ್ಧಾರ ಖಂಡಿತವಾಗಿಯೂ ಸರಿಯಾದುದಲ್ಲಪ್ಪಾ . ನೀನು ನಿನ್ನ ಹೆತ್ತ ತಾಯಿಯನ್ನೂ , ಸಾಕು ತಾಯಿಯಾನ್ನೂ ಜೊತೆಜೊತೆಗೆ ಕೊಂಡು ಕೊಲೆಗಾರನಾಗುತ್ತಿದ್ದೀಯಾ ...." ಎಂದು ಕೂಗಿ ಹೇಳಬೇಕೆನ್ನಿಸಿದರೂ ಗಂಟಲಿನಿಂದ ಈಚೆಗೆ ಧ್ವನಿ ಹೊರಡದೆ ಅವನು ಹೋದ ದಿಕ್ಕನ್ನೇ ದಿಟ್ಟಿಸಿದರು . ಮತ್ತೆ ಅಲ್ಲಿ ಕುಳಿತಿರಲಾರದೆ ಮೆಟ್ಟಲೇರಿ ನೇರವಾಗಿ ಟೆರೇಸಿಗೆ ಬಂದರು . ಸುತ್ತಲೂ ಕಣ್ಣು ಹಾಯಿಸಿ ನೋಡಿದಾಗ , ಎಲ್ಲೆಲ್ಲೂ ಕಾಂಕ್ರೀಟು ಕಟ್ಟಡಗಳ ಸಾಲು ಸಾಲು ಮಾಲಿನ್ಯದ ನಡುವೆ ಗಡಿಬಿಡಿಯ ಬದುಕು . ನಿತ್ಯವೂ ಇದನ್ನೇ ನೋಡುತ್ತಾ ಇದುವೇ ಬದುಕೆಂದು ತಿಳಿಯುವ ಜನರಿಗೆ ಈ ಬದುಕಿಗೆ ಇನ್ನೊಂದು ಮುಖವಿದೆ ಎಂದು ತಿಳಿಯುವುದಾದರೂ ಹೇಗೆ ? ಆಯಾಸವಾದಂತೆನಿಸಿ ಗಾಳಿಗೆ ತೂಗುವ ತೆಂಗಿನ ಗರಿಗಳ ನೆರಳಿನಲ್ಲೇ ಕುಳಿತುಕೊಂಡರು . ಹಾಗೇಯೇ ಅವರ ನೆನಪಿನ ಗರಿಯೂ ಬಿಚ್ಚಿಕೊಳ್ಳತೊಡಗಿತು .


  ಮನೆಯ ಮುಂದಿನ ಆ ಹಸಿರು ಸಿರಿಯನ್ನು ನೋಡಿಯೇ ಕಣ್ತಣಿಯಬೇಕು ಫಲಬಿಟ್ಟ ತೆಂಗಿನ ಮರಗಳು ಸುತ್ತಲೂ ಗೊನೆಗಳ ರಾಶಿಯನ್ನು ಹೊತ್ತು ಸುಯ್ಯೆಂದು ಬೀಸುವ ತಂಗಾಳಿಗೆ ತೊನೆದಾಡುತ್ತಿರುವಾಗ ಆ ತೆಂಗಿನ ತೋಪಿನಲ್ಲಿ ನಡೆದಾಡುವುದೇ ಒಂದು ಖುಶಿ . ಅಡಿಕೆಯ ಮರಗಳಲ್ಲಿ ಸಿಂಗಾರದ ಹಾಳೆ ಒಡೆದು ಬಿಚ್ಚಿಕೊಳ್ಳುತ್ತಿದ್ದಂತೆಯೇ ಗಾಳಿಗೆ ತೇಲಿಬರುವ ಕಡು ಸುಗಂಧ ಎಂತಹವರನ್ನೂ ಮೈ ಮರೆಸುತ್ತದೆ . ಗೊನೆಯ ಭಾರಕ್ಕೆ ಬಾಗಿನಿಂತ ಬಾಳೆ ಬೇಕಾದಷ್ಟು ಫಲ ನೀಡುವ ಹಲಸು , ಮಾವು ಲಿಂಬೆ ಒಂದೇ ,ಎರಡೇ .....ಆ ಒಂದಿಚು ಜಾಗ ಕೂಡ ಬಿಡದೆ ಶ್ಯಾಮರಾಯರು ಕೃಷಿ ಮಾಡಿದ್ದರು . ಹಸಿರನ್ನು ಚಿಗುರಿಸಿದ್ದರು .ಕಡು ಬಡತನದಲ್ಲಿ ಹುಟ್ಟಿ ಎಳೆವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಶ್ಯಾಮರಾಯರು , ತಂದೆಯ ಅಕಾಲ ಮರಣದಿಂದಾಗಿ ಮನೆಯಿಂದ ದೊರೆತ ತನ್ನ ಪಾಲಿನ ಸಣ್ಣ ಮೊತ್ತದ ಗಂಟಿನೊಂದಿಗೆ ಮನೆ ಬಿಟ್ಟು ಹತ್ತಿರದ ಪಟ್ಟಣಕ್ಕೆ ಬಂದಿದ್ದರು . ಆ ಹಣದಿಂದ ಮೊದಲು ಒಂದು ಬಟ್ಟೆ ಅಂಗಡಿ ತೆರೆದು ಉಳಿದದ್ದರಲ್ಲಿ ಪೇಟೆಯ ಹೊರವಲಯದ ಸದ್ದುಗದ್ದಲವಿಲ್ಲದೆ ಪ್ರಶಾಂತವಾಗಿದ್ದ ಜಾಗದಲ್ಲಿ ಕೆಲವು ಎಕರೆಗಳಷ್ಟು ಬರಡು ಭೂಮಿಯನ್ನು ಖರೀದಿಸಿದ್ದರು ಮುಂದೆ ಅವರೇ ಸ್ವತಃ ಬೆವರು ಸುರಿಸಿ ದುಡಿದಿದ್ದರು .ಶ್ಯಾಮರಾಯರ ಪರಿಶ್ರಮಕ್ಕೆ ತಕ್ಕ ಹಾಗೆ ಒಡಲಿನಿಂದ ಜೀವಜಲವನ್ನು ಉಕ್ಕಿಸಿದ ವಸುಂಧರೆ ತನ್ನೊಡಲು ಎಂದಿಗೂ ಬರಡಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಳು . ರಾಯರ ನಾಲ್ಕು ಮಂದಿ ಮಕ್ಕಳೂ ಹಒಡ್ಡವರಾಗುತ್ತಿದ್ದಂತೆಯೇ ಸಿರಿನ ಮಧ್ಯೆ ಕುಣಿಯುತ್ತಲೇ ಬೆಳೆಯುತ್ತಿದ್ದರು .ಗದ್ದೆ ತೋಟಗಳೇ ಅವರಿಗೆ ಪಾಠಶಾಲೆಯಾಗಿತ್ತು . ಮಕ್ಕಳು ದೊಡ್ಡವರಾಗುತ್ತಿದ್ದಂತೆಯೇ ಗಿಡಮರಗಳೂ ಫಲಭರಿತವಾಗತೊಡಗಿದ್ದವು . ಪುಟ್ಟ ಬಟ್ಟೆಯಂಗಡಿ ದೊಡ್ಡ ವ್ಯಾಪಾರಿ ಮಳಿಗೆಯಾಗಿತ್ತು . ಹಿರಿಯವ ದತ್ತಾತ್ರಯ ಇಂಜನೀಯರ್ ಆಗಿದ್ದ . ಕಿರಿಯವ ರಾಮಚಂದ್ರ ಬ್ಯಾಂಕ್ ಉದ್ಯೋಗಿಯಾಗಿದ್ದ ಅವರಿಬ್ಬರೂ ಮುಂಬೈ ಸೇರಿದರು . ಎರಡನೆಯವ ಜಯರಾಮನಿಗೆ ವಿದ್ಯೆ ತಲೆಗೆ ಹತ್ತದೆ ಮನೆಯಲ್ಲೇ ಇದ್ದುಕೊಂಡು ಅಂಗಡಿಯ ವ್ಯವಹಾರದ ಜೊತೆಗೆ ತಂದೆಗೆ ಕೃಷಿಯಲ್ಲಿ ನೆರವಾಗುತ್ತಿದ್ದ . ಮಗಳು ಚಂದ್ರಿಕಾಳಿಗೆ ಮದುವೆಯಾಗಿತ್ತು 


  ಆನಂತರ ದಿನಗಳಲ್ಲಿ ರಾಯರ ಆರೋಗ್ಯ ಹದಗೆಟ್ಟಾಗ ಅವರು ತಮ್ಮ ಹೆಸರಿನಲ್ಲಿದ್ದ ಮನೆ ಹಾಗೂ ತೋಟವನ್ನು ಪತ್ನಿಯ ಹೆಸರಿಗಿ ಮಾಡಿದ್ದರು . " ನಮ್ಮ ಇಳಿವಯಸ್ಸಿನಲ್ಲಿ ಎಂದಿಗೂ ನಾವು ಮಕ್ಕಳಿಗೆ ಭಾರವಾಗಬಾರದು " ಎಂಬುದು ಅವರ ನಿಲುವಾಗಿತ್ತು ಆನಂತರ ಕಮಲಮ್ಮನವರು ಒಂದೇ ವರ್ಷದಲ್ಲಿ ಪತಿಯನ್ನು ಕಳೆದುಕೊಂಡಿದ್ದರು . ಕಮಲಮ್ಮನವರ ಮನದಲ್ಲಿ  ಹಿರಿಯ ಮಗ ದತ್ತಾತ್ರಯನಿಗೆ ಮದುವ ಮಾಡಬೇಕೆಂದು ಯೋಚನೇ ಬರುತ್ತಿದ್ದಂತೆಯೇ ಅವನು ಮುಂಬೈಯಲ್ಲಿ ಒಂದು ಹುಡುಗಿಯನ್ನು ಮದುವೆಯಾಗಿದ್ದ . ದಿನಗಳೆದಂತೆ ಇತ್ತ ಕಡೆಗೆ ತಿರುಗಿಯೂ ನೋಡದೆ ಅಲ್ಲಿಯವನೇ ಆಗಿಬಿಟ್ಟಿದ್ದ . ಇನ್ನು ಮುಂಬಯಿಯಲ್ಲೇ ಇದ್ದ ಕಿರಿಯವ ರಾಮಚಂದ್ರ " ತನಗೆ ಈ ಹುಡುಗಿಯೇ ಆಗಬೇಕು " ಎಂದು ತಾಯಿಯಲ್ಲಿ ಹೇಳಿ ತಾನು ಪ್ರೀತಿಸಿದವಳ ಕೈ ಹಿಡಿದಿದ್ದ . ಆದರೆ ಜಯರಾಮ ಮಾತ್ರ ತಾಯಿ ನೋಡಿ ಮೆಚ್ಚಿದ ಹುಡುಗಿ ಭವಾನಿಯನ್ನು ಮದುವೆಯಾಗಿದ್ದ . ದತ್ತಾತ್ರಯ ಮತ್ತು ರಾಮಚಂದ್ರ ಇಬ್ಬರಿಗೂ ಒಂದೊಂದು ಹೆಣ್ಣು ಮತ್ತು ಗಂಡುಮಕ್ಕಳಾಗಿದ್ದರು .ಆದರೆ ಜಯರಾಮನಿಗೆ ನಾಲ್ಕು ಮಂದಿ ಹೆಣ್ಣುಮಕ್ಕಳೇ ಹುಟ್ಟಿದಾಗ ಅಸಮಾಧಾನವಾಗಿತ್ತು . ಆಗೆಲ್ಲಾ ಕಮಲಮ್ಮನವರು , " ಗಂಡಾಗಲಿ , ಹೆಣ್ಣಾಗಲಿ ಒಳ್ಳೆಯ ಗುಣ ಮುಖ್ಯವಪ್ಪಾ ....ಇವರನ್ನು ಹೆಣ್ಣುಮಕ್ಕಳಲ್ಲಿ ಗಂಡುಮಕ್ಕಳೆಂದೇ ಸಾಕು .ಅವರು ಕೂಡಾ ನಿನ್ನ ಮನೆ ಬೆಳಗಿಸುತ್ತಾರೆ " ಎಂದು ತಿಳಿ ಹೇಳುತ್ತಿದ್ದರು . ಆದರೆ ಏನಿದ್ದರೇನು .....? ವಿಧಿಯಾಟದ ಮುಂದೆ ತಲೆಬಾಗದವರೇ ಇಲ್ಲ . ಎಂದಿನಂತೆಯೇ ಒಂದು ದಿನ ರಾತ್ರಿ ಅಂಗಡಿಯಿಂದ ಸ್ಕೂಟರಿನಲ್ಲಿ ಮನೆಗೆ ಬರುತ್ತಿದ್ದ ಜಯರಾಮನನ್ನು ಲಾರಿಯೊಂದು ಬಲಿ ತೆಗೆದುಕೊಂಡಿತ್ತು . ಅವನ ದೇಹ ಗುರುತು ಸಹ ಸಿಗದಂತೆ ಚೂರು ಚೂರಾಗಿ ಹೋಗಿತ್ತು 


    ಯಾವತ್ತೂ ಮನೆಯ ಕಡೆಗೆ ತಿರುಗಿಯೂ ನೋಡದಿದ್ದ ದತ್ತಾತ್ರಯ ಮತ್ತು ರಾಮಚಂದ್ರ ಜಯರಾಮನ ದೇಹಾಂತ್ಯದ ಎರಡು ದಿನಗಳ ಬಳಿಕ ಬಂದಿದ್ದರು . ಆ ಹನ್ನೊಂದು ದಿನಗಳಲ್ಲಿ ಭವಾನಿ ಮತ್ತು ಕಮಲಮ್ಮ ಬರಸಿಡಿಲಿನಂತೆ ಬಂದೆರಗಿದ ಆಘಾತದಿಂದ ಸೋತು ಸಣ್ಣವರಾಗಿದ್ದರೆ ಅವರಿಬ್ಬರೂ ,ಮದುವೆ  ಮನೆಯಲ್ಲಿದಂತಹ ಸಂಭ್ರಮದಲ್ಲಿದ್ದರು ಅವರಿಬ್ಬರ ಗುಸುಗುಸು ಮಾತು ಕತೆ ಕಮಲಮ್ಮನವರಿಗೆ ಕಂಡರೂ ಕಾಣದಂತೆ ವರ್ತಿಸಿದ್ದರು . ಮುಂಬಯಿಗೆ ಹೊರಡುವ ಮುನ್ನಾ ದಿನ ರಾಮಚಂದ್ರ ಕಮಲಮ್ಮನವರ ಹಿಂದೆಮುಂದೆ ಸುತ್ತುತ್ತಾ ಮೆಲ್ಲನೆ ಮಾತು ತೆಗೆದಿದ್ದ . " ಅಮ್ಮಾ ,ನಾವಿಬ್ಬರೂ ನಾಳೆ ಹೊರಡುತ್ತಿದ್ದೇವ . ನಾನು ಹೀಗೆ ಹೇದು ಳುತ್ತಿದ್ದೇನೆಂದು ತಿಳಿಯಬೇಡಮ್ಮಾ ....ನೀನು ಇಷ್ಟಪಟ್ಟರೆ ನಾಳೆ ನಮ್ಮೊಂದಿಗೆ ಬರಬಹುದು . ಜಯಣ್ಣನಂತೂ ನಮ್ಮಿಂದ ದೂರಾದ . ನೀನು ಈ ಪ್ರಾಯದಲ್ಲಿ ಗಂಡುಮಕ್ಕಳ ಹತ್ತಿರವಿದ್ದರೇ ಕ್ಷೇಮವಲ್ಲವೇ ? ಇಲ್ಲಿ ಇಲ್ಲದ ಜವಾಬ್ದಾರಿಗಳನ್ನು ಹೊತ್ತುಕೊಂಡು ಪರದಾಡುವ ಬದಲು ರಾಮಾ ಕೃಷ್ಣಾ ಅಂತ ಹಾಯಾಗಿ ನಮ್ಮ ಬಳಿಯಲ್ಲಿ ಬಂದಿರಬಾರದೇ ....." ಎಂದಿದ್ದ .ಆಗ ಕಮಲಮ್ಮನವರು ರಾಮುವನ್ನು ಆಶ್ಚರ್ಯದಿಂದ ದಿಟ್ಟಿಸಿದ್ದರು .ತಾಯಿಯ ನೂರು ಅರ್ಥ ತುಂಬಿದ್ದ ನೋಟ ಅವನಿಗೆ ತಿಳಿದರೂ ಏನೂ ತಿಳಿಯದವನಂತೆ ವರ್ತಿಸಿದ್ದ . ಹಿಂದೊಮ್ಮೆ ಅವರು ಕೆಲವು ದಿನಗಳ ಮಟ್ಟಿಗೆ ತನಗೆ ರಾಮುವಿರುವಲ್ಲಿಗೆ ಹೋಗಬೇಕು ಎಂಬ ದೂರದ ಆಸೆಯಿಂದ ನುಡಿದಿದ್ದನು . " ಯಾಕೋ ಮನೆಯಲ್ಲೇ ಇದ್ದೂ ಬೇಜಾರು ಬಂದಿದೆಯಪ್ಪಾ ರಾಮು. ಕೆಲವು ದಿನಗಳು ಬೇರೆಯಲ್ಲಿಯಾದರೂ ತಿರುಗಾಡಿ ಬಂದಿದ್ದರೆ ಮನಸ್ಸಿಗೆ ಸ್ವಲ್ಪ ಉಲ್ಲಾಸವಿರುತ್ತಿತ್ತು ...." ಎಂದು ನುಡಿದಾಗ , ಆತ ಅವರ ಮನದಾಸೆಯನ್ನು ತಿಳಿದವನಂತೆ ತಟ್ಟನೆ ಉತ್ತರವಿತ್ತಿದ್ದ .


   " ಹೌದಮ್ಮಾ , ನಿನ್ನನ್ನೊಮ್ಮೆ ನಾನಿರುವಲ್ಲಿಗೆ ಕರೆದುಕೊಂಡು ಹೋಗಬೇಕೆಂಬ ಆಸೆಯೇನೋ ಇದೆ . ಆದರೆ ಏನು ಮಾಡಲಿ ಹೇಳು ...? ನನ್ನ ಎರಡು ಕೋಣೆಗಳ ಮನೆ ತುಂಬಾ ಚಿಕ್ಕದಾಯಿತು . ನಾನು ,ಶ್ಯಾಮಲಾ ಮತ್ತು ಮಕ್ಕಳಿಗೇ ಕಷ್ಟವಾಗುತ್ತಿದೆ . ಅದೂ ಅಲ್ಲದೆ ಈಗ ಅಲ್ಲಿ ಶ್ಯಾಮಲಾಳ ಅಮ್ಮನೂ ಇದ್ದಾರೆ . ಮತ್ತೆ ನಿನಗೆ ಅಲ್ಲಿನ ಹವೆಯೂ ಒಮ್ಮೆಲೇ ಹಿಡಿಸಲಿಕ್ಕಿಲ್ಲ . ಏನಾದರೂ ಅನಾರೋಗ್ಯವುಂಟಾದರೆ ತುಂಬಾ ಕಷ್ಟ . ಅದಕ್ಕಿಂತ ಜಯಣ್ಣನೊಡನೆ ಇಲ್ಲಿಯೇ ಎಲ್ಲಾದರೂ ಹತ್ತಿರದ ದೇವಸ್ಥಾನಕ್ಕೋ, ನೆಂಟರ ಮನೆಗೋ ಹೋಗಿ ಬಂದರೆ ಬದಲಾವಣೆಯಾದಂತೆ ಆಗುತ್ತದೆ ...." ಎಂದು ನಯವಾಗಿ ಅವರ ಆಸೆಯನ್ನು ತಳ್ಳಿಹಾಕಿದ್ದ . ಜೊತೆಗಿದ್ದ ಶ್ಯಾಮಲಾ ಕಣ್ಣರಳಿಸಿ ಗಂಡನನ್ನು ನೋಡಿ ತನ್ನ ಆಕ್ಷೇಪಣೆ ವ್ಯಕ್ತಪಡಿಸಿದ್ದನ್ನು ಕಮಲಮ್ಮನವರು ಗಮನಿಸದಿದ್ದರೂ ಅವಳು ಮೌನವಾಗಿದ್ದುದನ್ನು ಕಂಡು ಅವಳಿಗೂ ತಾನು ಹೋಗುವುದು ಇಷ್ಟವಿರಲಾರದೆಂದು ತಿಳಿದುಕೊಂಡಿದ್ದರು . ಆದರೆ ಈಗ , ಆದೇ ರಾಮು ಒತ್ತಾಯದಿಂದ ಯಾಕೆ ಕರೆಯುತ್ತಿದ್ದಾನೆ ? ಈಗತಾನೇ ಜಯರಾಮನ ಕರ್ಮಾಂತರಗಳು ಮುಗಿದಿವೆಯಷ್ಟೇ . ಇಂತಹ ಸಂದರ್ಭದಲ್ಲಿ ಇವನಿಗೆ ಈ ಯೋಚನೆ ಹೇಗೆ ಬಂತು ? ಎಂದು ಯೋಚಿಸುತ್ತಿದ್ದರು . ಮೈದುನನ ಮಾತು ಕೇಳಿದ ಭವಾನಿ ಅತ್ತೆಯ ಮುಖ ನೋಡಿ ಕಣ್ಣೀರು ಮಿಡಿದಿದ್ದಳು .ಆಗ ತಕ್ಷಣ ಸಾವರಿಸಿಕೊಂಡ ಕಮಲಮ್ಮನವರು " ನಿನ್ನ ಜೊತೆಯಲ್ಲಿ ಬರಬಾರದೆಂದೇನೂ ಇಲ್ಲಪ್ಪ್ಪಾ ....ಇನ್ನಂತೂ ನಾನು ಬದುಕಿದರೇನು , ಸತ್ತರೇನು ...? ನನ್ನ ಯೋಚನೆಯೇನೂ ನನಗಿಲ್ಲ ರಾಮೂ , ಆದರೆ ಅಲ್ಲಿ ನೋಡು ಭವಾನಿ ನಿನ್ನ ಅತ್ತಿಗೆ , ಅವಳ ನಾಲ್ವರು ಮಕ್ಕಳು .... ನಿನ್ನ ಅಣ್ಣನ ಕರುಳ ಕುಡಿಗಳು . ಅವನು ಇಲ್ಲವಾಗಿ ಬರೀ ಹನ್ನೆರಡು ದಿನಗಳು ಮಾತ್ರ ಕಳೆದಿವೆ . ಇಂತಹ ಸಂದರ್ಭದಲ್ಲಿ ಇಲ್ಲಿಂದ ನಾನು ಬರುವುದಿಲ್ಲಪ್ಪಾ . ಏನಿದ್ದರೂ ಕೆಲವು ತಿಂಗಳುಗಳು ಕಳೆಯಲಿ . ಆನಂತರ ಯೋಚಿಸೋಣ ..." ಎಂದು ಮಾತು ಮುಗಿಸಿದ್ದರು .ತಾಯಿಯ ನುಡಿಗೆ ಎದುರು ಹೇಳದೆ ದತ್ತಾತ್ರಯ ಹಾಗೂ ರಾಮಚಂದ್ರ ಹಿಂತಿರುಗಿದ್ದರು 


     ದಿನಗಳೆದಂತೆ ಮನದ ನೋವು ತಹಬಂದಿಗೆ ಬಂದು ಮನೆಯ ವ್ಯವಹಾರವನ್ನು ನೋಡಿಕೊಳ್ಳತೊಡಗಿದ್ದರು . ಈ ಮಧ್ಯೆ ರಾಮು ಕೆಲವು ಬಾರಿ ಬಂದು ತಾಯಿಯನ್ನು ತಾನಿದ್ದಲ್ಲಿಗೆ ಕರೆದುಕೊಂಡು ಹೋಗುವ ಪ್ರಯತ್ನ ನಡೆಸಿದ್ದರೂ ಕೊನೆಗೆ ಅವನ ಪ್ರಯತ್ನ ಫ್ಹಲಿಸಿ ಕಮಲಮ್ಮ ಮುಂಬಯಿಗೆ ಬಂದಿದ್ದರು . ಸೂರ್ಯ ಮುಂದೆ ಸಾಗುತ್ತಿದ್ದಂತೆಯೇ ತೆಂಗಿನ ಗರಿಗಳ ನೆರಳು ಸರಿದು ಮೈಮೇಲೆ ಬಿಸಿಲು ಬೀಳತೊಡಗಿದಾಗ ಅವರಿಗೆ ವಿಪರೀತ ಧಗೆಯೆನಿಸತೊಡಗಿತು . " ಇನ್ನಿಲ್ಲಿ ಕುಳಿತಿರಲು ಸಾಧ್ಯವಿಲ್ಲ " ಎಂದೆನಿಸಿತು . ಮುಖದಲ್ಲಿ ಬೆವರಿನ ಸೆಲೆಯೊಡೆದಾಗ ಸೆರಗಿನಿಂದ ಗಾಳಿ ಹಾಕಿಕೊಂಡರು . " ಏನು ಉರಿ ಬಿಸಿಲು ....ಕೆಲವರ ಮನಸ್ಸಿನ ಹಾಗೆ , ಕೆಲವರ ಮಾತಿನ ಹಾಗೆ . ಅದೇ ಈಗ ತಾನು ಊರಲ್ಲಿದ್ದಿದ್ದರೆ ಇಂತಹ ಸೆಖೆಗೆ ಅವಕಾಶವೆಲ್ಲಿತ್ತು ? ಬಂದ ದಿನದಿಂದಲೂ ನೋಡುತ್ತಿದ್ದೇನೆ ಇಲ್ಲಿನ ವಾತಾವರಣದಲ್ಲಿ ಹುಡುಕಿಕೊಂಡು ಹೋದರೂ ಶಾಂತಿ , ನೆಮ್ಮದಿ ಸಿಗಲಾರದು .ಅವೆಲ್ಲವೂ ಇಲ್ಲಿ ಬಿಸಿಲ್ಗುದುರೆ ...." ಎಂದುಕೊಳ್ಳುತ್ತಿದ್ದಂತೆಯೇ ಮನದಲ್ಲಿ ಹೊಸ ನಿರ್ಧಾರ ಗಟ್ಟಿಯಾಗತೊಡಗಿತ್ತು 


  ಇನ್ನು ಇಲ್ಲಿ ಕುಳಿತಿರಲು ಸಾಧ್ಯವೇ ಇಲ್ಲ ಎಂದು ಎರಡನೆಯ ಬಾರಿಗೆ ಅನ್ನಿಸತೊಡಗಿ ಹೊರಡಲನುವಾದಾಗ ಕೆಳಗಿನಿಂದ ಯಾರೋ ಮೆಟ್ಟಿಲೇರಿ ಬರುತ್ತಿರುವ ಸಡ್ಡು ಕೇಳಿಸಿತು . ಮೇಲೆ ಬಂದ ರಾಮು " ಇದೇನಮ್ಮಾ , ಊಟದ ಹೊತ್ತಾದರೂ ಇಲ್ಲಿ ಈ ಬಿಸಿಲಲ್ಲಿ ಕುಳಿತಿದ್ದೀಯಲ್ಲಾ .....? ಕೆಳಗಿಳಿದು ಬಾ . ಜೊತೆಯಲ್ಲೇ ಊಟ ಮಾಡೋಣ " ಎಂದು ಬೆನ್ನು ತಿರುಗಿಸಿ ಹೊರಟಾಗ , " ಇಲ್ಲ ರಾಮೋ , ನನಗೀಗ ಹಸಿವಾಗುತ್ತಿಲ್ಲ . ಇಲ್ಲೇ ಸ್ವಲ್ಪ ಹೊತ್ತು ಕುಳಿತುಕೋ ನಿನಗೀಗಲೇ ನಿರ್ಧಾರ ತಿಳಿಸಿಬಿಡುತ್ತೇನೆ ..." ಎಂದು ಉದ್ವೇಗದಿಂದ ನುಡಿದರು . ಅವರ ಮಾತು ಕೇಳಿದ ರಾಮು ಲೋಹಚುಂಬಕದಿಂದ ಸೆಳೆಯಲ್ಪಟ್ಟವನಂತೆ ತತ್ ಕ್ಷಣ ಅಲ್ಲೇ ಕುಳಿತುಕೊಂಡ . " ನೋಡಪ್ಪಾ ಮಗೂ , ನಿನಗೂ ತಿಳಿದಿರುವಂತೆ ಆ ತೋಟ , ಮನೆ ಇಂದು ನಿನ್ನೆಯದಲ್ಲ . ನಿನ್ನಪ್ಪನ ಬೆವರಿನ ಫ್ಹಲ . ಅವರು ತಮ್ಮ ನಿಸ್ವಾರ್ಥ ತಪಸ್ಸಿನಿಂದ ಪಡೆದುಕೊಂಡ ಸ್ವರ್ಗ . ಅವರು ನಿಮ್ಮೆಲ್ಲರನ್ನೂ ಯಾವ ರೀತಿ ಬೆಳೆಸಿದರೋ ಅದೇ ರೀತಿಯಲ್ಲಿ ಆ ಗಿಡಮರಗಳನ್ನೂ ಅಕ್ಕರೆಯಿಂದ ಸಲಹಿದ್ದಾರೆ . ಹಾಗೆಯೇ ಅವುಗಳು ಕೂಡಾ ಸ್ವಾರ್ಥಿಗಳಲ್ಲ. ಅಂದಿನಿಂದ ಇಂದಿನವರೆಗೂ ನಮ್ಮೆಲ್ಲರನ್ನೂ ಪೋಷಿಸಿ ನಮಗೆ ಉಸಿರು ನೀಡಿವೆ . ಆ ನೆಲ ನೀವು ತಿಂದುಂಡು ಬೆಳೆದ ತಾಯಿಯ ಮಡಿಲು ! ಅಲ್ಲಿನ ಪ್ರತಿಯೊಂದು ಗಿಡ ಮರಗಳಲ್ಲೂ ನಿಮ್ಮೆಲ್ಲರ ಪುಟ್ಟ ಹೆಜ್ಜೆಗಳ ಗುರುತಿದೆ !! ಆ ಮಣ್ಣಿನಲ್ಲಿ ಇಂದಿಗೂ ಬತ್ತದ ಕಂಪು ,ತಂಪು ಇದೆ .


    ರಾಮೂ , ನನಗೆ ಗೊತ್ತು ನಿಮಗೂ ನಿಮ್ಮದೇ ಆದ ಆಸೆ , ಆಕಾಂಕ್ಷೆ, ಜವಾಬ್ದಾರಿಗಳಿವೆ . ನೀವು ನನ್ನ ಮಕ್ಕಳಾದರೂ ಈಗ ನಿಮ್ಮ ಹೆಂಡತಿಯರ ಗಂಡಂದಿರು . ಅವರ ನಿರೀಕ್ಷೆಗಳನ್ನು ನೀವು ಹುಸಿಯಾಗಿಸಬಾರದಲ್ಲ ....ಹಾಗೆಯೇ ನೀನು ಹೇಳಿದಂತೆ ಭವಾನಿ ಹಾಗೂ ಅವಳ ಮಕ್ಕಳಿಗೆ ನಾನು ತವರಿನ ದಾರಿಯತ್ತ ಕೈ ತೋರಿಸಲಾರೆ . ನೀನು ಮತ್ತು ದತ್ತಾತ್ರಯ ಅಲ್ಲಿನ ಬಾಂಧವ್ಯ ಕಡಿದುಕೊಂಡಷ್ಟು ಸುಲಭವಾಗಿ ನಾನು ಕಡಿದುಕೊಳ್ಳಲಾರೆ . ಈ ಕೊನೆಗಾಲದಲ್ಲಿ ನಾನು ಬದುಕಿದ್ದರೂ   ಅಲ್ಲೇ .... ಸತ್ತರೂ ಅಲ್ಲೇ .... ಮಗೂ , ನನ್ನ ಬದುಕು ಬರೀ ನನ್ನದು ಮಾತ್ರ ಆಗಿರಲಪ್ಪಾ ....ಬಾಡಿಗೆಯ ಬದುಕು ಆಗುವುದು ಖಂಡಿತ ಬೇಡ . ಹಾಗೆಯೇ , ನನ್ನ ಅನಂತರಕ್ಕೆ ನಾನು ತೋಟ ಮತ್ತು ಮನೆಯನ್ನು ಯಾರಿಗೆಂದು ವಿಲ್ ಬರೆದಿಡುತ್ತೇನೆಯೋ ಅವರಿಗದು ಸೇರಲಿ . ಆದರೆ ಒಂದು ಮಾತು , ಪ್ರಕೃತಿಯನ್ನು ಪ್ರೀತಿಯಿಂದ ಒಲಿಸಿಕೊಳ್ಳುವವರಿಗೇ ಹೊರತು ಬಲಾತ್ಕಾರದಿಂದ ಜಯಿಸಿದೆವೆಂದು ತಿಳಿದುಕೊಳ್ಳುವ ಭ್ರಮಾಧೀನರಿಗಲ್ಲ ...." ಮೂಕನಾಗಿ ಕುಳಿತ ರಾಮು ತಾಯಿಯ ಮಾತುಗಳನ್ನಾಲಿಸುತ್ತಿದ್ದಂತೆಯೇ ಅವರು ಎಚ್ಚರಿಸಿದರು . " ರಾಮೂ , ಈ ಸಂಜೆಯ ಬಸ್ಸಿಗೇ ನನ್ನನ್ನು ನನ್ನೂರಿಗೆ ಕಲಿಸಿಬಿಡಪ್ಪಾ ..." ತಾಯಿ ಹಕ್ಕಿಗೆ ಕತ್ತಲೆಯಾಗುವುದಕ್ಕಿಂತ ಮೊದಲು ತನ್ನ ಗೂಡು ಸೇರುವ ಹಂಬಲವಿದ್ದಂತೆ ,ಅವರಿಗೆ ಪ್ರಕೃತಿಯೊಡಲಿನಲ್ಲಿರುವ ತಮ್ಮ ಪುಟ್ಟ ಮೊಮ್ಮಕ್ಕಳಿರುವ ಗೂಡು ಸೇರಬೇಕೆಂಬ ಕಾತರ ಹೆಚ್ಚಾಗತೊಡಗಿದಂತೆ ರಾಮು ಮೌನವಾಗಿ ಕೆಳಗಿಳಿದು ಹೋದ .



Rate this content
Log in

Similar kannada story from Drama