Prabhakar Tamragouri

Inspirational

4.8  

Prabhakar Tamragouri

Inspirational

ಪಾಲು

ಪಾಲು

7 mins
398     ಆರಾಂ ಕುರ್ಚಿಯಲ್ಲಿ ಕುಳಿತಿದ್ದ ಶ್ರೀನಿವಾಸರಾಯರು " ಪೋಸ್ಟ್ " ಎಂದು ಕರೆದದ್ದು ಕೇಳಿ , ಎಚ್ಛೆತ್ತುಕೊಂಡು ಹೋಗಿ ಬಾಗಿಲು ತೆರೆದರು . ಪೋಸ್ಟಮನ್ ಕವರೊಂದನ್ನು ಕೊಟ್ಟು ಹೋದ . ಒಳಗೆ ಬಂದು ಪತ್ರವನ್ನು ಬಿಡಿಸಿ ಒಂದಲ್ಲ , ಎರಡಲ್ಲ ಹತ್ತು ಸಲ ಓದಿದರು . ಎಷ್ಟು ಸಲ ಓದಿದರೂ ವಿಷಯ ಒಂದೇ ! ಓದುತ್ತಿದ್ದರೆ ಮನಸ್ಸು ಛಿದ್ರ ಛಿದ್ರ ವಾಗುತ್ತಿದೆ .ಆ ಪತ್ರದಲ್ಲಿ ಬರೆದ ಒಂದೊಂದು ಸಾಲೂ ಸೂಜಿ ಮೊನೆಯಂತೆ ಚುಚ್ಚುತ್ತಿದೆ . ಮನಸ್ಸು ಘಾಸಿಗೊಳಿಸುತ್ತಿದೆ .

     ಚಹಾ ತಂದ ಕಾವೇರಿ , ಗಂಡನ ಕೈನಲ್ಲಿದ್ದ ಪತ್ರ ಕಂಡು ಕುತೂಹಲದಿಂದ ಕೇಳಿದಳು , " ಯಾರದು ಕಾಗ್ದ ? ಮಹೇಶಂದಾ ? " " ಅಲ್ಲ ಹರೀಶನದು " " ಏನು ಬರೆದಿದ್ದಾನೆ ಹರೀಶ ?" ರಾಯರು ಅವಳ ಕೈಗೆ ಪತ್ರ ಕೊಡುತ್ತಾ " ನೀನೇ ಓದಿ ನೋಡು ಗೊತ್ತಾಗುತ್ತೆ " ಎಂದರು . " ನೀವೇ ಓದಿ ಹೇಳಿ " " ಬರುವ ಆದಿತ್ಯವಾರ ಮಹೇಶ , ಹರೀಶ , ರಾಮು ಮೂರು ಜನ ಅಣ್ಣ ತಮ್ಮಂದಿರೂ ಒಟ್ಟಿಗೇ ಊರಿಗೆ ಬರ್ತಾರಂತೆ " " ಯಾಕೆ ?" " ಇನ್ಯಾತಕ್ಕೆ ಹೇಳು ...? ಈ ಮನೇಲೂ ಪಾಲು ಕೇಳಕ್ಕೆ ಇರಬೇಕು ಬಹುಶಃ " " ಏನು ?! " ಆಶ್ಚರ್ಯದಿಂದ ನಿಂತ ಜಾಗ ಮರೆತು ಕೂಗಿದಳು ಕಾವೇರಿ .

    " ಮೈದುನರಿಗೆ ಈ ಮುರುಕು ಮನೆಯಲ್ಲೂ ಪಾಲು ಬೇಕೇ ...? " ಗಂಡನ ಮಾತಿನಲ್ಲಿ ನಂಬಿಕೆ ಬರಲಿಲ್ಲ . " ಏನೂಂದ್ರೆ , ಈ ಮನೆಯಲ್ಲೂ ಅವರಿಗೆ ಪಾಲು ಬೇಕೇ ? ಮುಂದೆ ನಮ್ಮ ಮಕ್ಕಳಿಗೆ ಯಾತಕ್ಕಾದರೂ ಆಗುತ್ತೆ ಅಂದುಕೊಂಡಿದ್ದೆ . ಅವರಿಗೆ ಈ ಮುರುಕು ಮನೆಯಿಂದ ಏನಾಗಬೇಕಾಗಿದೆ ? ಕೈತುಂಬಾ ಸಂಬಳ ತಗೊಂಡು ಸುಖವಾಗಿದ್ದಾರೆ . ಇದರ ಅವಶ್ಯಕತೆ ಇದೆಯೇ ಅವರಿಗೆ ....? " " ಅತೀ ಆಸೆ ಪಡಬಾರದು ಕಾವೇರಿ . ಪಾಲಿಗೆ ಬಂದದ್ದು ಪಂಚಾಮೃತ ಎಂದಂತೆ ನಮ್ಮ ಹಣೆ ಬರಹದಲ್ಲಿ ಬರೆದಷ್ಟೇ ಸಿಗುತ್ತದೆ . ಇಷ್ಟಕ್ಕೂ ಇದು ನನ್ನ ಸ್ವಂತ ಆಸ್ತಿಯೆಲ್ಲವಲ್ಲ . ಪಿತ್ರಾರ್ಜಿತ ಆಸ್ತಿ . ಅವರಿಗೂ ಸಮಪಾಲು ಇದೆಯಲ್ಲ ....." ಎಂದು ಹೇಳುತ್ತಾ ಎದ್ದು ಹೊರ ಹೋದರು . ಒಳಗೆ ಅಡಿಗೆ ಮಾಡುತ್ತಿದ್ದ ಕಾವೇರಿ ಮಂಕಾಗಿ ಅಲ್ಲಿ ಕುಳಿತು ಆಲೋಚಿಸುತ್ತಿದ್ದಳು .

      ಹಿಂದಿನ ನೆನಪು ಮರುಕಳಿಸಿತು . ತಾನು ಮದುವೆಯಾಗಿ ಮೊಟ್ಟಮೊದಲು ಆ ಮನೆಗೆ ಸೊಸೆಯಾಗಿ ಕಾಲಿಟ್ಟಾಗ ಹದಿನೆಂಟು ವರುಷದ ತರುಣಿ , ಅತ್ತೆ ಇಲ್ಲದ ಮನೆ , ವಯಸ್ಸಾದ ಮಾವ . ಮೈದುನರಲ್ಲಿ ಹಿರಿಯವನಾದ ಹರೀಶ ಎಸ್. ಎಸ್. ಎಲ್ . ಸಿ ಯಲ್ಲಿ , ಮಹೇಶ ಏಳನೇ ಕ್ಲಾಸಿನಲ್ಲೂ , ರಾಮು ಎರಡನೇ ಕ್ಲಾಸಿನಲ್ಲೂ ಓದುತ್ತಿದ್ದರು .ಹಿರಿಯ ಸೊಸೆಯಾಗಿ ತುಂಬು ಮನಸ್ಸಿನಿಂದ ಕಾಲಿಟ್ಟ ಕಾವೇರಿ ಎಲ್ಲರ ಪ್ರಶಂಸೆಗೆ ಪಾತ್ರಳಾದಳು . ಮಾವ ನರಸಿಂಹ ಶಾಸ್ತ್ರಿಗಳು ಎರಡು ವರ್ಷದಲ್ಲಿಯೇ ಹೃದಯಾಘಾತದಿಂದ ತೀರಿಕೊಂಡರು . ಮನೆಯ ಎಲ್ಲಾ ಜವಾಬ್ದಾರಿಯೂ ಹಿರಿಯರಾದ ಶ್ರೀನಿವಾಸರ ಹೆಗಲ ಮೇಲೆ ಬಿತ್ತು. ಎಷ್ಟೇ ತೊಂದರೆ ಆದರೂ ಕಾವೇರಿ ರಾಯರಿಗೆ ಜೊತೆಯಾಗಿ ಸಹಕರಿಸಿದಳು .

     ಅದೇ ವರುಷ ರಾಮು ಪಿ ಯೂ ಸಿ ಪಾಸಾಗಿದ್ದ . ಅವನಿಗೆ ಡಾಕ್ಟರ್ ಆಗುವ ಹಂಬಲ . ಶ್ರೀನಿವಾಸರಾಯರು ಅವನ ಆಸೆಗೆ ಅಡ್ಡಿ ಬರದೇ ಬೆಂಗಳೂರಿನಲ್ಲಿ ಹಾಸ್ಟೆಲ್ಲಿನಲ್ಲಿಟ್ಟು ಓದಿಸಿದ್ದರು . ಎಷ್ಟೇ ತೊಂದರೆ ಆದರೂ , ಆತ ಕೇಳಿದಾಗಲೆಲ್ಲಾ ಹಣ ಕಳಿಸುತ್ತಿದ್ದರು . ಅಂತೂ , ಅವನು ಡಾಕ್ಟರ್ ಆಗುವಾಗ ಇದ್ದ ಎರಡೆಕರೆ ಗದ್ದೆ ಮಾರಾಟವಾಗಿತ್ತು . ಮಹೇಶ ಬಿ ,ಇ.ಗೆ ಸೇರಿದಾಗ ಕಾವೇರಿಯ ಮದುವೆಗೆ ಹಾಕಿದ್ದ ಒಡವೆಗಳೆಲ್ಲಾ ಮಾಯವಾಗಿದ್ದವು .

     ಇಷ್ಟಾದರೂ ಅವರು ಮರುಗಲಿಲ್ಲ . ಮನೆಯಲ್ಲಿ ರಾಮೂನೇ ಸಣ್ಣ ಮಗುವಾಗಿದ್ದ . ಹರೀಶ , ಮಹೇಶ ಸ್ವಂತ ಕಾಲಮೇಲೆ ನಿಲ್ಲುವ ಸಮಯಕ್ಕೆ ಶ್ರೀನಿವಾಸರಾಯರು ಒಬ್ಬ ಮಗನ ತಂದೆಯಾಗಿದ್ದರು . ಅವನ ಹಿಂದೆ ಎರಡು ಹೆಣ್ಣು ಮಕ್ಕಳು ಶೀಲಾ , ಗೀತಾ . ಸಣ್ಣವನಾದ ರಾಮೂನ ಓದಿನ ಜವಾಬ್ಧಾರಿಯನ್ನು ಹರೀಶ ವಹಿಸಿಕೊಂಡ .ಇದರಿಂದ ರಾಯರಿಗೆ ಸ್ವಲ್ಪ ನೆಮ್ಮದಿಯಾಯಿತು . ಅವರಿಗೆ ತಮ್ಮ ಮಗ ತುಂಬಾ ಓದಬೇಕೆಂಬಾಸೆ . ಆದರೆ , ಇನ್ನೆರಡು ವರುಷಕ್ಕೆ ತಮ್ಮ ಸರ್ವೀಸ್ ಮುಗಿಯುತ್ತದೆ . ಆಗಾಗ ಹೆಂಡತಿಯ ಹತ್ತಿರ ಹೇಳುತ್ತಿದ್ದರು ರಾಯರು " ನನಗೆ ರಿಟೈರ್ಡ್ ಆದರೆ ಗ್ರಾಚ್ಯುಟಿ , ಇನಶೂರೆನ್ಸ ಎಲ್ಲಾ ಸೇರಿ ಸುಮಾರು ಐವತ್ತು ಸಾವಿರ ಬರುತ್ತದೆ . ಆಗ ಎಲ್ಲರೂ ಬೆಂಗಳೂರಿಗೆ ಹೋಗೋಣ , ಸತೀಶನನ್ನು ಬಿ .ಇ ಗೆ ಸೇರಿಸೋಣ . ಅವನು ಇಂಜಿನೀಯರ್ ಆಗಿ ಕೈತುಂಬಾ ಸಂಪಾದಿಸುವುದನ್ನು ನಾನು ನೋಡಬೇಕು ."

   ಅದಕ್ಕೆ ಕಾವೇರಿ , "ನೋಡಿ , ಎಷ್ಟೆಂದರೂ ಸತೀಶ ಗಂಡು ಹುಡುಗ . ಅವನ ಜೀವನ ಹೇಗೋ ಸಾಗುತ್ತದೆ . ಆದರೆ , ಶೀಲಾ , ಗೀತಾ ಅವರ ಮದುವೆ ಮಾಡಬೇಡವೇ ? ನಿಮ್ಮ ಹಣ ಬಂದ ಕೂಡಲೇ ಮೊದಲು ಇದರ ಬಗ್ಗೆ ವಿಚಾರ ಮಾಡೋಣ ." " ಅವರಿನ್ನೂ ಚಿಕ್ಕವರಲ್ಲವೇ ! ಅವರ ಮದುವೆಗೇನು ಆತುರ ." ನೀವು ಅವರ ಮದುವೆ ಯಾವಾಗ ಬೇಕಾದರೂ ಮಾಡಿ . ನನ್ನ ಅಭ್ಯಂತರವೇನೂ ಇಲ್ಲ . ಆದರೆ , ಅವರ ಹೆಸರಿಗೆ ಇಂತಿಷ್ಟು ಅಂತ ಹಣ ತೆಗೆದಿಟ್ಟುಬಿಡಿ . ಕಾವೇರಿ ಹೇಳುತ್ತಿದ್ದಳು . ಸತೀಶ ಈಗ ರಾಮುವಿನ ಮನೆಯಲ್ಲಿದ್ದ . ರಾಮುವಿಗೆ ಮಕ್ಕಳಿಲ್ಲ ಅವನಿಂದ ತಮಗೇನಾದರೂ ಸಹಾಯ ಆಗಬಹುದೆಂದು ಕಾವೇರಿ ಯೋಚಿಸುತ್ತಿದ್ದಳು . ಆದರೆ , ಈಗ ...? ಏನೇನೋ ನೆನಪಾಗಿ ದುಃಖ ಉಮ್ಮಳಿಸಿ ಬಂತು .

       ರಾತ್ರಿ ಎಷ್ಟು ಹೊತ್ತಾದರೂ ಶ್ರಿನಿವಾಸರಾಯರಿಗೆ ನಿದ್ರೆ ಹತ್ತಿರ ಸುಳಿಯಲಿಲ್ಲ . ಮನಸ್ಸು ಚಿಂತಿಸುತ್ತಿತ್ತು . ಅವರು ಬದುಕಿ ಬಾಳಿದ ಮನೆ ಅದು . ಯಾಕೋ ಏನೋ ಒಂದು ರೀತಿಯ ಮಮತೆ , ಮೋಹ ಆ ಮನೆಯ ಮೇಲೆ . ಮಕ್ಕಳಿಗಾಗಿ ಎಂದಾದರೊಂದು ದಿನ ಈ ಮನೆ ಮಾರಬೇಕಾಗಿ ಬರಬಹುದೆಂದು ಯೋಚಿಸಿ ಕಂಗೆಡಿಸುತ್ತಿದ್ದ ಮನಕ್ಕೆ ಈಗ ತಮ್ಮಂದಿರು ಈ ಮನೆಯಲ್ಲಿ ಪಾಲು ಕೇಳುತ್ತಾರೆಂಬ ಕಲ್ಪನೆಯೇ ಅವರಿಗೆ ನಂಬಲಸಾಧ್ಯ !

      ಹರೀಶ ಈಗ ಜಯನಗರದಲ್ಲಿ ತುಂಬಾ ಪ್ರಸಿದ್ಧ ಡಾಕ್ಟರ್ ಆಗಿದ್ದ . ದೊಡ್ಡ ಹಾಸ್ಪಿಟಲ್ ಕಟ್ಟಿ ಅದಕ್ಕೆ " ವಸಂತ ನರ್ಸಿಂಗ್ ಹೋಂ " ಎಂದು ಹೆಸರಿಟ್ಟಿದ್ದ . ವಸಂತ ನರ್ಸಿಂಗ್ ಹೋಂ ಹಣದ ಹೊಳೆಯನ್ನೇ ಹರಿಸುತ್ತಿತ್ತು . ಅವನ ಕೈ ಹಿಡಿದಿದ್ದ ತಾರಾಳ ಕಾಲ್ಗುಣ ನಿಜವಾಗಿಯೂ ಒಳ್ಳೆಯದಾಗೆ ಇತ್ತು . ಮುದ್ದಾದ ಎರಡು ಹೆಣ್ಣು ಮಕ್ಕಳು . ಕಳೆದ ವರುಷವಷ್ಟೇ ಹೊಸ ಮನೆ ಕಟ್ಟಿಸಿ ಗೃಹ ಪ್ರವೇಶ ಮಾಡಿ ಅಣ್ಣ ಅತ್ತಿಗೆಯರಿಗೆ ಭಾರಿ ಉಡುಗೊರೆ ಕೊಟ್ಟು ಕಳುಹಿಸಿದ್ದ .ಮನೆಯಲ್ಲಿ ಫ್ಯಾನ್, ಫೋನ್ , ಫ್ರಿಜ್ , ಕಾರು ಎಲ್ಲಾ ಸೌಕರ್ಯವೂ ಇತ್ತು . ಇದನ್ನು ನೋಡಿ ಶ್ರೀನಿವಾಸರಾಯರು ಬೆರಗಾಗಿದ್ದರು . ಆದರೆ , ಹರೀಶನ ಗುಣ ಮೊದಲಿನಂತೇಇತ್ತು . ಸ್ವಲ್ಪವೂ ಬದಲಾಯಿಸಿರಲಿಲ್ಲ . ಮಹೇಶ ತನ್ನ ಮಟ್ಟಿಗೆ ತಾನು ಅನುಕೂಲವಾಗಿದ್ದ . ರಾಧಾ ಅವನ ಕೈ ಹಿಡಿದ ಹೆಂಡತಿ .ಅವಳದು ಕೊಂಚ ಕಿರಿಕಿರಿ ಸ್ವಭಾವ . ಎಷ್ಟಿದ್ದರೂ ಸಂತೃಪ್ತಿ ಇಲ್ಲ .ಹೊಟ್ಟೆ ಬಾಕತನ . ಇಬ್ಬರು ಗಂಡು ಮಕ್ಕಳು . ಖರ್ಚು ಮಾಡುವ ಹೆಣ್ಣು ಮಕ್ಕಳಿರಲಿಲ್ಲ .

      ಹರೀಶನ ಮನೆಯ ಗೃಹ ಪ್ರವೇಶಕ್ಕೆಂದು ಹೋಗಿದ್ದಾಗ ಶ್ರೀನಿವಾಸರಾಯರು ಹಾಗೂ ಕಾವೇರಿ ಮಹೇಶನ ಮನೆಯಲ್ಲೂ ಎರಡು ದಿನ ಇದ್ದರು . ಮಹೇಶ ಅಣ್ಣನಿಗೆ ಕೈಗಡಿಯಾರ , ಅತ್ತಿಗೆಗೆ ಒಳ್ಳೆಯ ರೇಶ್ಮೆಸೀರೆ ಹಾಗೂ ಮಕ್ಕಳಿಗೆ ಬಟ್ಟೆಗಳನ್ನು ಉಡುಗೊರೆಯಾಗಿ ಕೊಟ್ಟಿದ್ದ . ಆಗ , ರಾಧಾಳ ಹುಬ್ಬು ಗಂಟಿಕ್ಕಿಕೊಂಡಿತ್ತು . ಅದನ್ನು ಅವರು ಗಮನಿಸಿದರು . ಮಹೇಶ ರಾಧಾಳನ್ನು ಗದರಿಸಿದ್ದನ್ನೂ ಕೇಳಿದ್ದರು . ಅಂಥ ಮಹೇಶ ಈಗ ಹೆಂಡತಿಗಾಗಿ ಬದಲಾದಾನೇ ? ಆದರೆ , ಎಲ್ಲರಿಗಿಂತ ಹೆಚ್ಚು ಆಶ್ಚರ್ಯ ತಂದಿದ್ದು ರಾಮುವಿನ ವರ್ತನೆ ! ಅವನೂ ಇದರಲ್ಲಿ ಪಾಲುಗಾರನೇ ? ಆತ ಎಲ್ .ಎಲ್ .ಬಿ . ಮುಗಿಸಿ ಮೈಸೂರಿನಲ್ಲಿ ಲಾಯರ್ ಆಗಿ ನೆಲೆಸಿದ ನಂತರ ಅವನು ಸಂಪಾದನೆಯಲ್ಲಿ ಅಣ್ಣಂದಿರನ್ನು ಮೀರಿಸಿದ್ದ . ಅವನ ಹೆಂಡತಿ ವಾಣಿ ಮುಗ್ದೆ . ಶ್ರೀಮಂತ ತಂದೆ ತಾಯಿಗಳಿಗೆ ಒಬ್ಬಳೇ ಮಗಳು .ಆದರೂ ಅಹಂಕಾರವಿಲ್ಲ .ಒಳ್ಳೆ ಗುಣ . ಸತೀಶ ರಾಮುವಿನ ಜೊತೆಯಲ್ಲಿದ್ದು ಅವನ ಮಕ್ಕಳಿಲ್ಲದ ದುಃಖವನ್ನು ನೀಗಿಸಿದ್ದ . ಇದೇ ಆಲೋಚನೆಯಲ್ಲಿಯೇ ನಿದ್ದೆ ಬಾರಾದೆ ಹೊರಳಾಡುತ್ತಿದ್ದರು ರಾಯರು .

        ಆದಿತ್ಯವಾರ ಬಲುಬೇಗ ಬಂದಿತು . ಕಾವೇರಿ ತನ್ನ ದುಃಖ ಮರೆತು ಅಡಿಗೆ ಕೆಲಸದಲ್ಲಿ ನಿರತಳಾದಳು .ಮೊದಲು ಅಡಿಗೆ ಮನೆಗೆ ಕಾಲಿಟ್ಟಾಗಲೆಲ್ಲಾ ಅವಳಿಗೆ ಮೈದುನರ ಮನೆಯ ವೈಭವ ನೆನಪಾಗಿ ಸಿಟ್ಟು ಬರುತ್ತಿತ್ತು .ಆದರೆ ಈಗ , ಕತ್ತಲೆ ತುಂಬಿದ ಈ ಮಣ್ಣು ನೆಲದ ಅಡಿಗೆ ಮನೆ ಅವರಿಗೆ ಸ್ವರ್ಗದಂತೆನಿಸಿತು . ಇನ್ನು ಮೇಲೆ ಈಗಿನ ಕತ್ತಲೆಯ ಕೋಣೆಯೂ ತಮ್ಮ ಪಾಲಿಗೆ ಇಲ್ಲವಲ್ಲ ಎಂದು ಅನ್ನಿಸಿ ಅಡಿಗೆ ಸಿದ್ಧತೆ ಮಾಡಿದಳು .

       ಹತ್ತು ಗಂಟೆಯ ಹೊತ್ತಿಗೆ ಹರೀಶ , ಮಹೇಶ ಹೆಂಡತಿಯರೊಂದಿಗೆ ಹಾಜಾರಾದರು . ಹನ್ನೊಂದು ಗಂಟೆಗೆ ರಾಮು , ರಾಧಾ ಬಂದರು . ಸತೀಶ ಬರಲಿಲ್ಲ . ಬಂದವರ ಊಟವಾಯಿತು . ಎಲ್ಲರೂ ಕೋಣೆಯಲ್ಲಿ ಹರಟುತ್ತಾ ಕುಳಿತಾಗ ರಾಮು " ಅಣ್ಣಾ , ನಮ್ಮ ಮೈಸೂರಿನ ಕೆನರಾ ಬ್ಯಾಂಕ್ ಮ್ಯಾನೇಜರ್ ಗೆ ಇಲ್ಲಿಗೆ ವರ್ಗವಾಗಿದೆ . ಯಾವುದಾದ್ರೂ ಮನೆ ಇದ್ರೆ ನೋಡಿ ಅಂತ ಹೇಳಿದ್ರು ......." "ಬೇರೆ ಮನೆ ಯಾಕೆ ನೋಡಬೇಕು ? ಈ ಮನೆಯಲ್ಲಿ ಎರಡು ಭಾಗ ಮಾಡಿ ದುರಸ್ತಿ ಮಾಡಿಸಿ ಬಾಡಿಗೆಗೆ ಕೊಟ್ಟರಾಯಿತು . ಅವರೂ ಬಹಳ ಒಳ್ಳೆಯವರು . ಅಕ್ಕಂಗೆ ಒಳ್ಳೆ ಜೊತೆ ಸಿಕ್ಕಂಗೆ ಆಯ್ತು " ಅಂದಳು ರಾಧಾ . ಓಹ್ ! ಇವರ ಪಾಲಿನ ಮನೆಯನ್ನು ಮ್ಯಾನೇಜರ್ ಗೆ ಬಾಡಿಗೆಗೆ ಕೊಡುತ್ತಾರೆ ಎಂದುಕೊಂಡರು ಶ್ರೀನಿವಾಸರಾಯರು .

     " ಅಣ್ಣಾ , ಮಹಡಿ ಮೇಲೆ ಒಂದು ಅಡಿಗೆ ಮನೆ , ಬಚ್ಚಲು ಮನೆ , ರೂಮು ಹಾಕಿಸಿದ್ರೆ ಅದನ್ನೂ ಯಾರಿಗಾದರೂ ಬಾಡಿಗೆಗೆ ಕೊಡಬಹುದಲ್ಲವೇ ......?" ಎಂದು ಮಹೇಶ ಕೇಳಿದಾಗ ರಾಯರು ನಿರುತ್ತರರಾದರು . ಸಾಯಂಕಾಲ ಎಲ್ಲರೂ ಒಟ್ಟಿಗೇ ತಿರುಗಾಡಲು ಹೋದಾಗ ಹರೀಶ ಕೇಳಿದ , " ಏನಣ್ಣಾ , ಹಿತ್ತಲಿಗೆ ಭದ್ರವಾದ ಬೇಲಿ ಹಾಕಿಸಿ , ಇಪ್ಪತ್ತೈದು ತೆಂಗಿನ ಸಸಿ ಹಾಕಿಸಬಹುದಲ್ವಾ ? ಈಗ ಹಾಕಿದರೆ ಏನಿಲ್ಲವೆಂದರೂ ಹತ್ತು ವರುಷದಲ್ಲಿ ಫಲ ಕೊಡುತ್ತೆ ....." " ನಿಮ್ಮಿಷ್ಟದಂತೆ ನೀವು ಮಾಡಬಹುದು . ನನ್ನನ್ನೇನು ಕೇಳ್ತೀರಾ ....?" ಎಂದರು ರಾಯರು . " ಹಾಗಲ್ಲಣ್ಣಾ , ನೀನು ಈ ಮನೆಗೆ ಹಿರಿಯವ . ನಾವು ನಮ್ಮ ನಮ್ಮ ಅಭಿಪ್ರಾಯ ಏನೂಂತ ಹೇಳಿದ್ದೀವಿ . ಆದರೂ , ನೀನು ಹಿರಿಯವನಿರುವಾಗ ನಿನ್ನ ಅಭಿಪ್ರಾಯವೂ ನಮಗೆ ಅಷ್ಟೇ ಮುಖ್ಯ ! " ಎಂದು ಹೇಳಿದ ಮಹೇಶ .

       ರಾತ್ರಿ ಎಲ್ಲರೂ ನಿದ್ರೆ ಮಾಡುತ್ತಿದ್ದಾಗ ಶ್ರೀನಿವಾಸರು ಹೊರಗೆ ಬಂದರು . ಹೆಂಡತಿ ಅಳುತ್ತಿದ್ದಳು . " ಅಳು ನಿಲ್ಲಿಸು ಕಾವೇರಿ . ಇದು ಅಪ್ಪನ ಆಸ್ತಿ . ಇದರಲ್ಲಿ ಅವರು ಪಾಲು ಕೇಳೋದು ಸಹಜ . ನನ್ನ ತಮ್ಮಂದಿರು ಇಷ್ಟಾದರೂ ಪ್ರೀತಿ ಇಟ್ಟುಕೊಂಡಿದ್ದಾರಲ್ಲ ಅದಕ್ಕೆ ಸಂತೋಷ ಪಡು...." ಗದರಿಸಿದರು ರಾಯರು . " ಅಲ್ರೀ , ಇವರ ಪ್ರೀತಿ , ವಿಶ್ವಾಸದಿಂದ ಹೊಟ್ಟೆ ತುಂಬುತ್ಯೇ ? ನಾಳೆ ನಮ್ಮ ಮಕ್ಕಳ ಗತಿ ಏನು ...? " " ಹೇಗೋ ಸಾಗುತ್ತೆ ಬಿಡು . ದೇವರು ಖಂಡಿತಾ ನಮ್ಮ ಕೈ ಬಿಡೋಲ್ಲಾ . ನೀನು ಎಲ್ಲರೆದುರೂ ಅಳಬೇಡ " ಕಾವೇರಿ ಕಣ್ಣೀರೊರೆಸಿಕೊಂಡಳು . ಆದರೂ ಅವಳಿಗೆ ಸಮಾಧಾನವಿಲ್ಲ . ಇಷ್ಟು ಚೆನ್ನಾಗಿ ನೋಡಿಕೊಂಡಿದ್ದ ಮೈದುನರು ಇಂದು ಮುಳ್ಳಾದರೇ ? ಹರೀಶನ ವಿದ್ಯಾಭ್ಯಾಸಕ್ಕಾಗಿ ಇದ್ದ ಎರಡೆಕರೆ ಭೂಮಿ ಮಾರಲಿಲ್ಲವೇ ? ಮಹೇಶನಿಗೆ , ಇದ್ದ ಒಡವೆ ಮಾರಲಿಲ್ಲವೇ ? ಎಂಟು ವರ್ಷದಿಂದ ಹದಿನೆಂಟು ವರ್ಷದವರೆಗೆ ಪ್ರೀತಿಯಿಂದ ಸಾಕಲಿಲ್ಲವೇ ? ಆದರೆ , ಇದಾವುದೂ ಅವರಿಗೆ ಗೊತ್ತಿಲ್ಲವೇ ? ಉಪಕಾರದ ಸ್ಮರಣೆಯೇ ಇಲ್ಲವೇ ....?

     ಮರುದಿನ ಸಾಯಂಕಾಲ ಶ್ರೀನಿವಾಸರಾಯರು ತಮ್ಮಂದಿರನ್ನು ಕರೆದು ಹೇಳಿದರು , " ನೋಡಿ , ನಿನ್ನೆ ನಾನು ಲಾಯರ್ ಸೀತಾರಾಂರವರ ಮನೆಗೆ ಹೋಗಿದ್ದೆ . ಅವರಿಗೆ ವಿಷಯ ಎಲ್ಲಾ ಹೇಳಿದ್ದೇನೆ . ಇವತ್ತು ನಾಲ್ಕು ಗಂಟೆಗೆ ಲಾಯರ್ ಸೀತಾರಾಂ ಬರ್ತಾರೆ . ನಿಮಗೆಲ್ಲಾ ಯಾವ ಯಾವ ಭಾಗ ಬೇಕೋ ಹೇಳಿಬಿಡಿ . ನೀವು ಬಿಟ್ಟ ಭಾಗ ನನಗಿರಲಿ . ಅಪ್ಪ ಬಿಟ್ಟು ಹೋದ ಆಸ್ತಿ ಈ ಮನೆ . ಎರಡೆಕರೆ ಭೂಮಿ , ಅಮ್ಮನ ಒಡವೆ ಕೊಂಚ ಇದ್ದವು . ನಿಮಗೆ ತಿಳಿದಿರೋ ಹಾಗೆ ನಿಮ್ಮ ಓದಿಗಾಗಿ ಭೂಮಿ , ಒಡವೆಗಳು ಕರಗಿದವು . ಕಾವೇರಿಯ ಹತ್ತಿರ ಎರಡೆಳೆ ಸರವಿದೆ . ಅದೊಂದೇ ಅಮ್ಮನ ಆಸ್ತಿಯಲ್ಲಿ ಉಳಿದಿರೋದು ....."

    " ಅಣ್ಣಾ , ನೀವು ಏನು ಮಾತನಾಡುತ್ತಿದ್ದೀರಿ ಅಂತ ನಮಗ್ಯಾರಿಗೂ ಅರ್ಥವಾಗ್ತಿಲ್ಲ " ರಾಮು ಅವರ ಮಾತನ್ನು ತಡೆದು ಹೇಳಿದ . " ಇದರಲ್ಲಿ ಅರ್ಥವಾಗೋದು ಏನಿದೆ ? ನೀವೆಲ್ಲಾ ಒಟ್ಟಿಗೇ ಸೇರಿ ಬಂದಿರೋದು ಪಾಲು ಕೇಳೋದಕ್ಕಲ್ಲವೇ ? ಬಂದು ಒಂದು ದಿನ ಕಳೆದರೂ ನಿಮಗೆ ಆ ವಿಷಯ ಮಾತನಾಡಲಿಕ್ಕೆ ಸಂಕೋಚವಾಗ್ತಿರೋದು ನೋಡಿ ನಾನೇ ಮಾತನಾಡಬೇಕಾಯ್ತು "

      ಹರೀಶ ಈಗ ಜೋರಾಗಿ ನಕ್ಕು ಹೇಳಿದ . " ಅಣ್ಣಾ , ನಾವೆಲ್ಲಾ ಇಲ್ಲಿಗೆ ಬಂದಿರೋದು ಮನೆಯ ವಿಷಯ ಮಾತನಾಡಲಿಕ್ಕೆ ನಿಜ . ಆದ್ರೆ , ಪಾಲು ಕೇಳಲಿಕ್ಕಲ್ಲ . ಕೈತುಂಬಾ ಸಂಪಾದನೆ ಇದ್ರೂ , ನಮಗೆ ಒಂದೊಂದು ಸಲ ಸಂಸಾರ ತೂಗಿಸೋದು ಕಷ್ಟವಾಗುತ್ತದೆ . ಅಂಥದರಲ್ಲಿ ನೀನು ಪ್ರೈಮರಿ ಸ್ಕೂಲ್ ಟೀಚರ್ ಆಗಿ ನಿನಗೆ ಬರುವ ಆದಾಯದಲ್ಲಿ ಮನೆ ಖರ್ಚನ್ನು ತೂಗಿಸಿ , ನಮ್ಮನ್ನು ಯಾವ ಕೊರತೆಯೂ ಇಲ್ಲದೆ ಹೇಗೆ ಓದಿಸಿದೆ.....? ಅಂತ ಯೋಚಿಸಿದ್ರೆ ಆಶ್ಚರ್ಯವಾಗ್ತದೆ . ಇದು ಪಿತ್ರಾರ್ಜಿತ ಆಸ್ತಿ ನಿಜ . ನ್ಯಾಯವಾಗಿ ನಮಗೆ ಪಾಲು ಬೇಕು ನಿಜ . ಆದರೆ , ನಮ್ಮ ದೃಷ್ಟಿಯಲ್ಲಿ ಅದು ನ್ಯಾಯ ಅಲ್ಲ ..... 

       ಶ್ರೀನಿವಾಸರಾಯರು ಆಶ್ಚರ್ಯದಿಂದ ಅವನೆಡೆ ನೋಡಿದರು . " ದೇವರು ನಮಗೆ ಸಾಕಷ್ಟು ಕೊಟ್ಟಿದ್ದಾನೆ . ತೊಂದರೆ ಇರೋದು ನಿನಗೆ .ನೀನು ರಿಟೈರ್ಡ್ ಆಗುವ ಹೊತ್ತಿಗೆ ಸತೀಶ ನಿನ್ನ ಕೈಗೆ ಬಂದಿರಲ್ಲ . ನಾಳೆ ಶೀಲಾ , ಗೀತಾಳ ಮಾಡುವೆ ಆಗಬೇಕು . ಇದಕ್ಕೆಲ್ಲಾ ಹಣ ಎಲ್ಲಿದೆ ?" " ದೇವರಿದ್ದಾನೆ . ಹೇಗೋ ಆಗುತ್ತೆ " ರಾಯರು ಉತ್ತರಿಸಿದರು . " ದೇವರಿದ್ದಾನೆ ನಿಜ . ಆದರೆ , ಸುಮ್ಮನೆ ಕುಳಿತರೆ ಆಗುತ್ತದೆಯೇ ? ನಮ್ಮ ಪ್ರಯತ್ನಾನೂ ಮಾಡಬೇಕು . " " ನಾನೇನು ಮಾಡಲಪ್ಪ ? ಕೈಲಾದಷ್ಟು ದುಡಿದಿದ್ದೇನೆ . ನಾನು ಇದುವರೆಗೂ ಯಾರಿಗೂ ಅನ್ಯಾಯ ಮಾಡಿಲ್ಲ . ದೇವರು ಇರೋದು ನಿಜವಾದ್ರೆ ನನ್ನ ಕೈ ಬಿಡೋಲ್ಲ ..." ನಿನ್ನ ನಂಬಿಕೆ ನಿಜ . ನಿಮಗೆ ಇರುವ ನಂಬಿಕೆ ನಮಗೆ ನಮ್ಮಲ್ಲೇ ಇಲ್ಲ . ಅದಕ್ಕೇ ಈ ಏರ್ಪಾಡು ....."

     " ಯಾವ ಏರ್ಪಾಡು ? " " ನಾವು ನಿನ್ನ ತಂಮ್ಮದಿರು . ನಿನ್ನ ಮೇಲೆ ಪ್ರೀತಿ ಇರಬಹುದು . ಆದ್ರೆ , ನಾಳೆ ನಮ್ಮ ಮಕ್ಕಳು . ನಿನ್ನ ಮಕ್ಕಳ ಮೇಲೆ ಇದೇ ವಿಶ್ವಾಸ ಇಟ್ಟಿರ್ತಾರೆ ಅಂತ ಹೇಗೆ ಹೇಳೋದು ? ನಾಳೆ ನಾವೇ ಬದಲಾಗಬಹುದು . ಅದಕ್ಕೇ ಹೋದ ವಾರ ಬೆಂಗಳೂರಿನಲ್ಲಿ ನಾವು ಮೂವರೂ ಸೇರಿ ಒಂದು ನಿರ್ಧಾರಕ್ಕೆ ಬಂದೆವು ...."ಎಂದು ಮಹೇಶ ಹೇಳಿದ . " ಯಾವ ನಿರ್ಧಾರಕ್ಕೆ ಬಂದ್ರಿ .....? " " ಅಣ್ಣಾ , ನಾನು ಮಹಡಿ ಮೇಲೆ ಒಂದು ಸಂಸಾರಕ್ಕೆ ಅನುಕೂಲ ಆಗುವ ಹಾಗೆ ಅಡಿಗೆ ಮನೆ , ಒಂದು ರೂಂ ಕಟ್ಟಿಸುತ್ತೀನಿ . ಹರೀಶ ಇಪ್ಪತ್ತೈದು ತೆಂಗಿನ ಸಸಿ ನೆಡಿಸುತ್ತಾನೆ . ರಾಮು ಈ ಮನೆ ದುರಸ್ತಿ ಮಾಡಿಸಿ ಮಧ್ಯೆ ಗೋಡೆ ಹಾಕಿಸ್ತಾನೆ. ನೀನು ತೋಟ ಮಾಡಿಸು . ಮೇಲಿನ ಹಾಗೇ ಕೆಳಗಿನ ಮನೇನ ಬಾಡಿಗೆಗೆ ಕೊಡು . ಆ ಹಣನ ತೆಗೆದಿಟ್ಟು ಮಕ್ಕಳಿಗೆ ಉಪಯೋಗಿಸು ......" 

     ಹರೀಶನ ಮುಂದಿನ ಮಾತುಗಳು ಕೇಳಿಸಲೇ ಇಲ್ಲ . ಮೂರ್ನಾಲ್ಕು ದಿನಗಳಿಂದ ತಾವು ಯೋಚಿಸಿದ ಸಮಸ್ಯೆಯ ಮರ ನಿಧಾನವಾಗಿ ಉರುಳತೊಡಗಿದಂತೆ ಶ್ರೀನಿವಾಸರಾಯರಿಗೆ ಭಾಸವಾಗತೊಡಗಿತು . ತಾವು ಅಂದುಕೊಂಡಿದ್ದೇ ಒಂದು , ಈಗ ಆಗುತ್ತಿರುವುದು ಬೇರೊಂದು ಎಂದು ತಿಳಿದ ಅವರಿಗೆ ಗಗನದಲ್ಲಿ ತೇಲಾಡುತ್ತಿರುವಂತೆ ಸಂತಸವಾಯಿತು . ಹರ್ಷ ತಡೆಯಲಾರದೆ ಅವರು ಅವನನ್ನು ಅಪ್ಪಿಕೊಂಡು ಎಳೆ ಮಗುವಿನಂತೆ ಅತ್ತರು . ಅಡಿಗೆ ಮನೆಯಿಂದಲೇ ಇದನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದ ಕಾವೇರಿಯ ಕಣ್ಣುಗಳಲ್ಲಿ ಆನಂದಭಾಷ್ಪ ಉದುರತೊಡಗಿದವು .


Rate this content
Log in

Similar kannada story from Inspirational