ಮೌನದೊಳಗಿನ ಮುಳ್ಳುಗಳು........
ಮೌನದೊಳಗಿನ ಮುಳ್ಳುಗಳು........
ಅಬ್ಬರದ ಮಳೆ ಹೊಯ್ದು ಬಿಟ್ಟಂತೆ ಹೊರಗಿನ ಗಲಾಟೆ ತಣ್ಣಗಾಗಿತ್ತು .ಅರ್ಧ ರಾತ್ರಿ ಮೀರಿರಬೇಕು . ಜಗಳ , ವಾಗ್ವಾದ ಮಾಡಿ ದಣಿದ ಎಲ್ಲರೂ ಹಾಸಿಗೆ ಸೇರಿ ನಿದ್ದೆಯ ಜೊಂಪಿಗಿಳಿದಿರಬೆಕು . ಆದರೆ , ಎಲ್ಲಾ ವಾಗ್ವಾದಗಳು ಮೈಮನಸ್ಸಿನ ಮೂಲ ಕಾರಣವಾಗಿದ್ದ ರಾಮಣ್ಣನಿಗೆ ಇನ್ನೂ ನಿದ್ದೆ ಹತ್ತಿರಲಿಲ್ಲ . ಸದ್ಯಕ್ಕೆ ಹತ್ತುವ ಸೂಚನೆಯೂ ಇಲ್ಲ . ಮೊದಲಿನ ಕಾಲವಾಗಿದ್ದರೆ ಉಂಡು ಮಲಗಿದೊಡನೆ ಸಣ್ಣದೊಂದು ನಿದ್ದೆ ಹತ್ತುತ್ತಿತ್ತು . ನಡುರಾತ್ರಿಯಲ್ಲೊಮ್ಮೆ ಎಚ್ಚರವಾಗಿ ಬಚ್ಚಲವರೆಗೆ ಹೋಗಿ ಬಂದು ಮತ್ತೆ ಮಲಗಿದರೆ ಬೆಳಗಿನ ಜಾವದವರೆಗೆ ನಿದ್ದೆ . ಅರೆ ಎಚ್ಚರ , ಕನವರಿಕೆಗಳ ಮಂಪರು ಸ್ಥಿತಿ . ಬದಿಯ ಮಂಚದ ಜಾನಕಿ ಮುಲುಗುಡುತ್ತಾ ಹೊರಳಾಡಿದಾಗಲೊಮ್ಮೆ ಮಂಚ ಕಿರ್ ಗುಟ್ಟಿ , ಪೂರ್ತಿ ಎಚ್ಚರಿಕೆಯಾಗಿ " ಎಂತದೇ ? " ಎಂದು ವಿಚಾರಿಸಿಕೊಂಡು " ಏನಿಲ್ಲ " ಎನ್ನುವ ಮಾಮೂಲು ಉತ್ತರ ಪಡೆದು , ಈ ಬದುಕೆಂಬುದು ಪುಸ್ತಕದ ಪುಟ ತಿರುವಿ ಹಾಕಿದ ಹಾಗೆ ಸರಸರ ಎಂದು ಹಾಳೆ ಮುಗುಚಿಕೊಳ್ಳುತ್ತಾ ಇದೀಗ ಕೊನೆಯ ಪುಟಕ್ಕೆ ಬಂದು ನಿಂತಿರುವ ಪರಿ ನೆನೆದರೆ " ಎಷ್ಟು ಬೇಗ " ಎನ್ನುವ ಅಚ್ಚರಿಯೊಡನೆ ವಿಷಾದ !
ಜಾನಕಿಗೆ ಇಪ್ಪತ್ತೆಂಟು ಕಾಯಿಲೆ . ಒಂದಕ್ಕೆ ಔಷಧಿ ಮಾಡಿದರೆ ಮತ್ತೊಂದು , ಮತ್ತೊಂದಕ್ಕೆ ಮಾಡಿದರೆ ಇನ್ನೊಂದು . ಅವಳನ್ನು ನೋಡಿ ಮುದುಕ ಆಗಾಗ ಹಾಸ್ಯ ಮಾಡುತ್ತಿದ್ದುದಿತ್ತು . ಹಾಗೆಂದು ಅವನೇನೂ ಗಟ್ಟಿಯಲ್ಲ . ಒಂದು ಕಾಲದಲ್ಲಿ ಕಲ್ಲು ಹಿಂಡಿ ನೀರು ಬರಸುತ್ತಿದ್ದವ ಇವತ್ತು ಎರಡು ಹೆಜ್ಜೆ ನಡೆದರೆ ಉಬ್ಬುಸ ಬರುವಷ್ಟು ನಿತ್ರಾಣಿ . ಎಪ್ಪತ್ತು ಕಡಿಮೆ ವಯಸ್ಸೇನಲ್ಲ . ಆದರೂ , ಅವನಿಗೊಂದು ಜಂಭ . ವಯಸ್ಸಿನವಳಾದ ಹೆಂಡತಿಗಿಂತಾ ತಾನು ಗಟ್ಟಿಯಾಗಿದ್ದೇನೆ ಎನ್ನುವ ನಂಬಿಕೆ .
ಹೇಗಿದ್ದರೂ ಕೆಲಸ ಕಾರ್ಯಗಳಲ್ಲಿ ಜಾನಕಿ ಗಂಡನಿಗಿಂತಾ ಎಷ್ಟೋ ವಾಸಿ . ನರಳುತ್ತಲೇ ಮನೆಯ ಸಣ್ಣ ಪುಟ್ಟ ಕೆಲಸಗಳಲ್ಲಿ ಕೈ ಹಾಕುತ್ತಿದ್ದಳು .ಮೊದಲಿನಿಂದ ತಾವೇ ಕೈಯಾರೆ ಕೆಲಸ ಮಾಡಿದವರ ಹಣೆಬರಹವೇ ಇಷ್ಟು . ತಮಗೆ ಕೈಲಿ ಹರಿಯುವುದಿಲ್ಲ , ಬೇರೆಯವರು ಮಾಡಿದ್ದು ಹಿಡಿಸುವುದಿಲ್ಲ . ರಾಮಣ್ಣ ಮಾತ್ರ ಈ ವಿಷಯದಲ್ಲಿ ಸಂಪೂರ್ಣ ರಾಜಿ ಮಾಡಿಕೊಂಡು ಬಿಟ್ಟಿದ್ದ . ಬೀಗದ ಕೈ ಗೊಂಚಲಿನೊಡನೆ ಮನೆಯ ಸಮಸ್ತ ವ್ಯವಹಾರಗಳನ್ನು ಮಗನಿಗೊಪ್ಪಿಸಿ ನಿಶ್ಚಿಂತ ನಾಗಿದ್ದ .ದಿನದ ಬಹುಪಾಲು ಹೊತ್ತು ಮುಂಚೆ ಕಡೆಯ ಕುರ್ಚಿಯ ಮೇಲೆ ಕೈಯಲ್ಲೊಂದು ಪೇಪರ್ ಹಿಡಿದು ಶಾಲು ಹೊದ್ದು ಕುಳಿತುಬಿಟ್ಟರೆ ಕಳೆದು ಹೋಗುತ್ತಿತ್ತು . ಎಲ್ಲೋ ಎರಡು ತಲೆ , ನಾಲ್ಕು ಕಾಲಿನ ಮಗು ಹುಟ್ಟಿದ್ದು , ಇನ್ನೆಲ್ಲೋ ಅಪಘಾತವಾಗಿ ಹತ್ತಾರು ಜನ ಸತ್ತಿದ್ದು , ಮತ್ತೆಲ್ಲೋ ಭೂಮಿ ನಡುಗಿದ್ದು ...... ಮುಂತಾದ ಸ್ವಾರಸ್ಯಕರ ಸುದ್ದಿ ಪೇಪರಿನಲ್ಲಿ ಬಂದಿದ್ದರೆ ರಾಮಣ್ಣ ಜಾನಕಿಯನ್ನು ಕರೆದು ಓದಿ ಹೇಳುತ್ತಿದ್ದ .
ಇಬ್ಬರೂ ಸುದ್ದಿಯ ರೋಚಕತೆಯನ್ನೋ , ಭೀಕರತೆಯನ್ನೋ ಒಟ್ಟಿಗೆ ಹಂಚಿಕೊಂಡು ಪರಸ್ಪರ ಭಾವಾಭಿವ್ಯಕ್ತಿಗಳಲ್ಲಿ ಭಾಗಿಯಾಗುತ್ತಿದ್ದರು . ಮುದುಕ ಏನೂ ಬಾಯ್ಬಿಡದೆ ಮೌನವಾಗಿ ಪೇಪರು ತಿರುವಿ ಹಾಕುತ್ತಿದ್ದರೆ ಮುದುಕಿ ತಾನಾಗಿ ಕೇಳುತ್ತಿದ್ದಳು , " ಇವತ್ತು ಪೇಪರಿನಲ್ಲಿ ವಿಶೇಷ ಏನಿಲ್ವಾ " . " ಎಂತ ಮಣ್ಣೂ ಇಲ್ಲ " ಎಂದು ಮುದುಕ ನಿರುತ್ಸಾಹದಿಂದ ಉತ್ತರಿಸಿದರೆ ಆವತ್ತಿನ ಸುದ್ದಿಯಲ್ಲಿ ಯಾವ ಕೊಲೆ , ಕಳವು ,ದರೋಡೆ , ಅಪಘಾತಗಳೂ ಇಲ್ಲವೆಂದರ್ಥ . ಇಂತಾ ದಿನ ಮುದುಕಿಗೆ ಮೆಲಕು ಹಾಕಲು ಯಾವ ಗ್ರಾಸವೂ ಸಿಗದ ಹಾಗಾಗಿ ಬೇಜಾರೆನ್ನಿಸುತ್ತಿತ್ತು.
ಆದರೆ , ಇತ್ತೀಚಿನ ದಿನಗಳಲ್ಲಿ ಮನೆಗೊಂದು ಟಿವಿ ಬಂದ ಮೇಲೆ ಬೆಂಗಳೂರಿನ ಕಾರ್ಯಕ್ರಮ ಆರಂಭವಾಗಿ ಮುಗಿಯುವವರೆಗೆ ಅದು ಎಂತದೇ ಕಾರ್ಯಕ್ರಮವಿರಲಿ , ರಾಮಣ್ಣ , ಜಾನಕಿ ಅದರ ಮುಂದೆ ಸ್ಥಾಪನೆಯಾಗಿ ಬಿಡುತ್ತಿದ್ದರು , "ಸತ್ಯನಾರಾಯಣ ಪೂಜಾಫಲ " , "ರಾಘವೇಂದ್ರ ವೈಭವ "ಮುಂತಾದ ಸಿನೆಮಾಗಳು ಪ್ರಸಾರವಾದ ದಿನ " ಅಂತೂ ಬಹಳ ದಿನದ ಮೇಲೆ ಒಂದು ಒಳ್ಳೆ ಸಿನಿಮಾ ಹಾಕಿದ್ರು .ಇನ್ನು ಹಿಂಗಿದ್ದು ಹಾಕೋಕೆ ಇನ್ನೆಷ್ಟು ದಿನ ಕಾಯಬೇಕೋ ? " ಎಂದು ಜಾನಕಿ ಧನ್ಯತಾಭಾವದಿಂದ ಹೊಗಳುತ್ತಿದ್ದಳು . ಹೊಡೆದಾಟ , ಬಡಿದಾಟ ,ಪ್ರೀತಿ , ಪ್ರೇಮ ಕಂಡರೆ ಜಾನಕಿ "ಇಶ್ಯೀ" ಎನ್ನುವ ಹಾಗಾಗುತ್ತಿದ್ದರೂ ನೋಡದೇ ಇರುತ್ತಿರಲಿಲ್ಲ . ಹೊತ್ತು ಕಳೆಯಬೇಕಲ್ಲಾ !
ಜಾನಕಿ ಮನೆಯ ಕೆಲಸ ಕಾರ್ಯಗಳನ್ನು ಮಾಡಬೇಕಾದ್ದೇನಿರಲಿಲ್ಲ . ಅವಳು ಹೀಗೆ ಅಡ್ಡ ಕೈ ಹಾಕುವುದು ಸೊಸೆಗೆ ಹಿಡಿಸುತ್ತಲೂ ಇರಲಿಲ್ಲ . ಗೋಬರ್ ಗ್ಯಾಸ್ ಮಾಡಿಸಿಕೊಂಡ ಹೊಸದರಲ್ಲಿ ಜಾನಕಿ ಹತ್ತಿಸಿದ ಗ್ಯಾಸ್ ಒಲೆಯನ್ನು " ಉಫ್ ....ಉಫ್ ..." ಎಂದು ಊದಿ ಆರಿಸಲು ಹೋಗಿ ಅದನ್ನು ನೋಡಿದ ಸೊಸೆ ಜಾನಕಿಗೆ ತಾಕೀತು ಮಾಡಿಬಿಟ್ಟಿದ್ದಳು . " ಇನ್ನು ಇಂತದ್ದೆಲ್ಲಾ ನೀವು ಮುಟ್ಟೋಕೆ ಬರಬೇಡಿ " ಹಿಂದಿನ ಹಾಗೆ ಗಂಟೆಗಟ್ಟಲೆ ಅರೆಯುವ ಕಲ್ಲಿನ ಮುಂದೆ ಕೂತು ಅರೆಯಬೇಕಾದ್ದಿರಲಿಲ್ಲ . ಕೊಡಗಟ್ಟಲೆ ನೀರು ಸೇದಬೇಕಾದ್ದಿರಲಿಲ್ಲ . ಒಲೆ ಊದಬೇಕಾದ್ದಿರಲಿಲ್ಲ .
ಇಷ್ಟೆಲ್ಲಾ ಇದ್ದರೂ ಸೊಸೆ ಕೆಲಸ ಹೆಚ್ಚಾಯ್ತೆಂದು ಸಿಡಿಗುಟ್ಟುತ್ತಿದ್ದಳು . ಹೊರಗಿನ ಕೆಲಸಕ್ಕೆ ಆಳು ಇಟ್ಟುಕೊಂಡಿದ್ದಳು . ಅವಳ ವಯಸ್ಸಿನಲ್ಲಿ ತಾನು ಇದರ ಹತ್ತು ಪಟ್ಟು ಹೆಚ್ಚು ಕೆಲಸ ಮಾಡುತ್ತಿದ್ದುದರ ಬಗ್ಗೆ ಜಾನಕಿ ಗಂಡನೊಡನೆ ನೆನಪಿಸಿಕೊಳ್ಳುತ್ತಿದ್ದಳು . ಅದರಲ್ಲಿ ಅತಿಶಯೋಕ್ತಿಯೂ ಇರಲಿಲ್ಲ .ನಿಜವಾಗಿ ನೋಡಿದರೆ ಈ ಮನೆ ಇವತ್ತು ಈ ಮಟ್ಟಕ್ಕೆ ಬರಲು ಕಾರಣ ತನ್ನ ಹೆಂಡತಿಯ ಬಿಡುವಿಲ್ಲದ ದುಡಿಮೆ ಎಂದು ಇವತ್ತಿಗೂ ರಾಮಣ್ಣ ಅಭಿಮಾನದಿಂದ ನೆನಪಿಸಿಕೊಳ್ಳುತ್ತಾನೆ .
ಇವರ ಪಾಲಿಗೆ ಬಂದದ್ದು ಯಾತಕ್ಕೂ ಬೇಡದ ಹಾಳು ಜಮೀನು. ಅಣ್ಣ ಕುತಂತ್ರ ಒಳಗೊಳಗೇ ಮಾಡುವಷ್ಟು ಗಂಟು ಮಾಡಿಕೊಂಡ . ಆಮೇಲೆ ತಮ್ಮನನ್ನು ಹೊರಕ್ಕೆ ಹಾಕಿದ . ಇಂವ ಆಡುವಂತಿಲ್ಲದೆ , ಆಡಿದರೂ ಅದರಿಂದ ಪ್ರಯೋಜನವಾದೀತೆಂಬ ನಂಬಿಕೆ ಇಲ್ಲದೆ , ಪಾಲಿಗೆ ಬಂದದ್ದು ಪಂಚಾಮೃತವೆಂದು ಸ್ವೀಕರಿಸಿದ . ಗಂಡ , ಹೆಂಡತಿ ತಮ್ಮ ಆಯಸ್ಸು,ಆರೋಗ್ಯ ಎಲ್ಲಾ ಪಣಕ್ಕಿಟ್ಟು ಹೊತ್ತುಗೊತ್ತಿನ ಪರಿವೆ ಇಲ್ಲದೆ ದುಡಿದರು . ಭೂಮಿತಾಯಿ ಕೈ ಬಿಡಲಿಲ್ಲ ಹಚ್ಚಿದ ಎಳೆ ಅಡಿಕೆ ಸಸಿಗಳು ಬೆಳೆದು ಫಲ ಕೊಡುವಂತಾದಾಗ ಇವರೂ ಒಂದು ಕುಳ ಎನ್ನಿಸಿಕೊಂಡರು . ಈ ನಡುವೆ ಮೂರು ಮಕ್ಕಳ ಬೆಳೆಸಿ , ಮತ್ತೆರಡನ್ನು ಮಣ್ಣಿಗಿಟ್ಟು ಬದುಕಿನ ಹೋರಾಟದಲ್ಲಿ ದಿನ ಸರಿದದ್ದೇ ಗೊತ್ತಾಗದೆ ದಣಿದ ಚೇತನಗಳಲ್ಲಿ ಮುಪ್ಪು ಯಾವತ್ತೂ ಮೊದಲ ಹೆಜ್ಜೆ ಇಟ್ಟು ಆಕ್ರಮಿಸಿಕೊಳ್ಳತೊಡಗಿತೋ ಯಾರು ಬಲ್ಲರು ....? ಹಿರಿಯವ ಹೆಚ್ಚು ಓದದೆ ಮನೆಯಲ್ಲೇ ಉಳಿದ . ಎರಡನೆಯವನು ಎಂ. ಎ. ಮಾಡಿಕೊಂಡು ಕಾಲೇಜಿನ ಕೆಲಸ ಹಿಡಿದ . ಕೊನೆಯವಳು ಮಗಳು ಮದುವೆಯಾಗಿ ಗಂಡನ ಮನೆಯಲ್ಲಿರುವವಳು . ವರ್ಷಕ್ಕೊಮ್ಮೆ ಒಂದು ವಾರ ಒಪ್ಪೊತ್ತೋ ಇದ್ದು ಹೋಗುತ್ತಾಳೆ . ಅವಳದೂ ಹಳ್ಳಿಮನೆ .
ಎಲ್ಲರಿಗೂ ಅವರವರ ಸಂಸಾರ ತಾಪತ್ರಯ ಇದ್ದೇ ಇರುತ್ತದೆ . ಮೊದ ಮೊದಲು ಗಟ್ಟಿಯಾಗಿದ್ದಾಗ ರಾಮಣ್ಣ ಹಾಗೂ ಜಾನಕಿ ಮಗಳ ಮನೆಗೆ ಹೋಗಿ ನಾಕು ದಿನ ಇದ್ದು ಬರುತ್ತಿದ್ದುದಿತ್ತು . ಇತ್ತೀಚಿನ ಕೆಲ ವರ್ಷಗಳಿಂದ ಆ ಪದ್ಧತಿಯೂ ತಪ್ಪಿತ್ತು . ತಾವಾಯ್ತು , ತಮ್ಮ ಮನೆಯಾಯ್ತು . ಅಲ್ಲೇ ಹಗೂರಕ್ಕೆ ಓಡಾಡಿಕೊಂಡಿರುವುದಕ್ಕಷ್ಟೇ ಇಬ್ಬರೂ ಲಾಯಕ್ಕಾಗಿಬಿಟ್ಟಿದ್ದರು . ಎಷ್ಟೇ ಕೈಲಾಗದಿದ್ದರೂ ಜಾನಕಿ ಗಂಡನ ಕೆಲ ಸೇವೆಗಳನ್ನು ಸ್ವ ಇಚ್ಛೆಯಿಂದ ತಾನೇ ಮಾಡುತ್ತಿದ್ದಳು . ರಾಮಣ್ಣನಿಗೆ ದಿನಕ್ಕೆ ಹತ್ತು ಸಲ ಕಾಫಿ ಕುಡಿಯುವ ಚಟ . ಜಾನಕಿ ಸೌದೆ ಓಲೆ ಹೊತ್ತಿಸಿ ಕಾಫಿ ಕಾಸಿ ಕೊಡುತ್ತಿದ್ದಳು .
ರಾತ್ರಿ ಉಂಡರೆ ಜೀರ್ಣವಾಗುವುದಿಲ್ಲವೆಂದು ಊಟ ಬಿಟ್ಟವನಿಗೆ ಅವನ ಅಲುಗಾಡುವ ಹಲ್ಲುಗಳಿಗೆ ತ್ರಾಸವಾಗದಂತಹ ಮೆತ್ತಗಿನ ಉಪ್ಪಿಟ್ಟೋ , ದೋಸೆಯೋ ಮಾಡಿಕೊಡುತ್ತಿದ್ದಳು .ತಪ್ಪದೆ ಎರಡು ಹೊತ್ತು ಹಾಲು ಕೊಡುತ್ತಿದ್ದಳು . ಅವನು ಸಪ್ಪಗಿದ್ದರೆ " ಹುಷಾರಿಲ್ವಾ ...? " ಎಂದು ವಿಚಾರಿಸಿಕೊಳ್ಳುತ್ತಿದ್ದಳು . ತಾನು ಎಷ್ಟರ ಮಟ್ಟಿಗೆ ಅವಳಿಗೆ ಜೋತುಕೊಂಡು ಪರಾವಲಂಬಿಯಾಗಿಬಿಟ್ಟಿದ್ದೆ ಎಂಬುದು ರಾಮಣ್ಣನಿಗೆ ಅರಿವಿಗೆ ಬಂದುದು ಇದ್ದಕ್ಕಿದ್ದಂತೆ ಒಂದು ದಿನ ಹೇಳದೆ ಕೇಳದೆ ಅವಳು ಸತ್ತಾಗಲೇ . ಪುಣ್ಯಾತಗಿತ್ತಿ ಹಾಸಿಗೆ ಹಿಡಿದು ಮಲಗಲಿಲ್ಲ , ಯಾರ ಕೈಲಿ ಸೇವೆ ಮಾಡಿಸಿಕೊಳ್ಳಲಿಲ್ಲ . ಅನಾಯಾಸದ ಮರಣ . ಬೆಳಗಿನ ತಿಂಡಿ ತಿಂದವಳು " ಯಾಕೋ ಸಂಕಟವಾಗುತ್ತೆ ಸ್ವಲ್ಪ ಮಲಗ್ತೀನಿ " ಎಂದಿದ್ದಳು . ಸ್ವಲ್ಪ ಎಂದು ಮಲಗಿದವಳು ಬಹಳ ಹೊತ್ತು ಏಳದಿದ್ದಾಗ , ರಾಮಣ್ಣ ಕಾಫಿಯ ಸಲುವಾಗಿ ಮಲಗಿದವಳು ರಾಮಣ್ಣ ಕಾಫಿಯ ಸಲುವಾಗಿ "ಏನೇ , ಏಳಲ್ವೇನೇ ....?" ಎಂದು ಕರೆದಿದ್ದ .
ಜಾನಕಿ ಅಲುಗಾಡಿದ ಸೂಚನೆ ಕಾಣದಿದ್ದಾಗ " ಎಂತಾ ನಿದ್ದೇನೇ ಎಂದು .....? ಸ್ವಲ್ಪ ಜಬರ್ದಸ್ತೂ ತೋರಿಸಿದ್ದ .ಆದರೂ ಜಾನಕಿಗೆ ಎಚ್ಚರವಾಗಿರಲಿಲ್ಲ .ಒಂದಷ್ಟು ಕಾಡು ಹತ್ತಿರ ಹೋಗಿ ಮೈ ಮುಟ್ಟಿ ಅಲುಗಿಸಿದರೆ ಯಾವ ಮಾಯದಲ್ಲಿ ಜೀವ ಹಾರಿಹೋಗಿತ್ತೋ ? ಬಿಪಿ ಇದ್ದದ್ದು ಹೌದು .ಆದರೂ , ಜಾನಕೀ ಡಾಕ್ಟರು ಹೇಳಿದ ಹಾಗೆ ಕ್ರಮ ಪ್ರಕಾರ ಮಾತ್ರೆ ತಿನ್ನುತ್ತಿರಲಿಲ್ಲ . ಸೊಂಟ ನೋವು , ಮಂಡಿ ನೋವು ಪಿತ್ಥ ,ವಾತ ಎಂದು ದಿನಕ್ಕೊಂದು ಕಾಯಿಲೆ ಹೇಳಿಕೊಳ್ಳುತ್ತಿದ್ದ ಜಾನಕಿಯ ನೋವಿನ ಬಗ್ಗೆ ಬಹಳ ವರ್ಷಗಳಿಂದ ಕೇಳಿ ಕೇಳಿ ಅಭ್ಯಸ್ತನಾಗಿದ್ದ ರಾಮಣ್ಣನಿಗೆ ಅದೊಂದು ದೈನಂದಿನ ವರದಿಯಾಗಿತ್ತೇ ಹೊರತು ಸ್ಪಂದಿಸಬೇಕಾದ ವಿಚಾರವೆಂಬುದೇ ಮರೆತುಹೋದ ಹಾಗಿತ್ತು .
ಅವಳು ಏನೊಂದು ಕಾಯಿಲೆಯನ್ನು ಹೇಳಿಕೊಂಡು ಗೊಣಗಾಡದ ದಿನ ಅವನಿಗೆ ಭಣ ಭಣ ಎನಿಸುತ್ತಿದ್ದುದೂ ನಿಜ ! ತಾನಾಗಿ " ಇವತ್ತು ನಿನ್ನ ಸೊಂಟ ನೆಟ್ಟಗಾದ ಹಾಗಿದೆ ...." ಎಂದು ಕೆಣಕುತ್ತಿದ್ದ . ಜಾನಕಿಗೆ ಚುಚ್ಚಿದಂತಾಗುತ್ತಿತ್ತು . " ನಿಮಗೆ ತಮಾಷೆ . ನನಗಂತೂ ಸಾಕಾಗಿ ಹೋಗಿದೆ . ಇನ್ನು ಏನಾದ್ರೂ ಯಾರ ಹತ್ರಾನೂ ಹೇಳ್ಳೆ ಬಾರ್ದೂಅಂತ ಅಂದ್ಕೊಂಡಿದ್ದೀನಿ . ನನ್ನ ಕರ್ಮ ನಂದು " ಎಂದು ಹೇಳಿದರೂ ಮತ್ತೆ ಹತ್ತು ನಿಮಿಷಕ್ಕೆ " ಯಾಕೋ ಎದೇಲಿ ಕಳಕ್ ಅಂದ ಹಾಗಾಯ್ತು . ಉಸಿರು ಹಿಡಕಂಡ್ ಬಿಟ್ಟಿದೆ ...." ಎಂದು ರಾಮಣ್ಣನೊಡನೆ ಅವಳು ತನಗಾಗಿದ್ದ ನೋವು ಹೇಳಿಕೊಳ್ಳಲೇಬೇಕು . ರಾಮಣ್ಣ " ನಿಧಾನಕ್ಕೆ ಉಸಿರಾಡು . ಬೇಕಾದ್ರೆ ಸ್ವಲ್ಪ ಹೊತ್ತು ಮಲಕ್ಕೋ " ಎಂದು ಸಾಂತ್ವನ ಹೇಳಲೇಬೇಕು .
ಹಗಲಿರುಳೂ ತನ್ನ ಒಡನಾಡಿಯಾಗಿದ್ದ ಜಾನಕಿ ಕಣ್ಣು ಮುಚ್ಚಿ ತೆರೆಯುವುದರೊಳಗೆ ಎನ್ನುವಂತೆ ಛೂ ಮಂತ್ರ ಹಾಕಿದ ಹಾಗೆ ಎಲ್ಲಾ ಕೊಡವಿ ಹೊರಟು ಹೋದದ್ದೇ ರಾಮಣ್ಣನಿಗೆ ದಿಗ್ಭ್ರಮೆ ಹಿಡಿದ ಹಾಗಾಯ್ತು . ಕಣ್ಣು ಕಟ್ಟಿ ಕಾಡಲ್ಲಿ ಬಿಟ್ಟ ಸ್ಥಿತಿ . ಮೊದಲ ಹದಿನೈದು ದಿನ ಬರುವವರು , ಹೋಗುವವರು ಗದ್ದಲ ಗಲಾಟೆಗಳಲ್ಲಿ , ಪರ ಊರಿಂದ ಬಂದ ಮಕ್ಕಳು , ಮೊಮ್ಮಕ್ಕಳ ಒಡನಾಟದಲ್ಲಿ ಕರ್ಮಕಾಂಡಗಳ ಗಡಿಬಿಡಿಯಲ್ಲಿ ಏನಾಗಿದೆ ಎಂಬುದರ ಬಗ್ಗೆ ಗಾಢವಾಗಿ ಚಿಂತಿಸಲೂ ಆಗದ ಪರಿಸ್ಥಿತಿಯಲ್ಲಿ ದಿನ ಕಳೆದು ಹೋಗಿತ್ತು . ಆದರೆ, ಯಾವತ್ತೂ ಎಲ್ಲರೂ ಹೊರಟುಹೋಗಿ ಮನೆ ಭಣಗುಟ್ಟತೊಡಗಿತೋ ರಾಮಣ್ಣ ಕಂಗೆಟ್ಟು ಹೋದ . ತಾನೊಬ್ಬ ಹೇಳಕೇಳುವವರಿಲ್ಲದ ಅನಾಥ ಎಂಬ ಸ್ವಾನುಕಂಪ ಎದೆ ಹಿಂಡತೊಡಗಿತು .
ಸೊಸೆ ಹೊತ್ತು ಹೊತ್ತಿಗೆ ಊಟಕ್ಕೆ , ಕಾಫಿಗೆ ಕರೆಯುತ್ತಿದ್ದಳೇನೋ ನಿಜ . ಆದರೆ ಬೇಕೆನಿಸಿದಾಗಲೊಮ್ಮೆ ಹಕ್ಕಿನಿಂದ ಕಾಫಿ ಮಾಡಿಸಿಕೊಂಡು ಕುಡಿಯುವಂತಿಲ್ಲ . ಊಟಕ್ಕೆ ಕೂತಾಗ " ಅದು ತಿನ್ನಿ ... ಇದು ತಿನ್ನಿ ..." ಎಂದು ಒತ್ತಾಯಿಸುವವರಿಲ್ಲ . ಇನ್ನು ರಾತ್ರಿಯ ತಿಂಡಿಯಂತೂ ಅವಳು ಹೋದ ಮೇಲೆ ಒಗ್ಗರಣೆ ಅವಲಕ್ಕಿಗೆ ಇಳಿದಿದೆ . ಸೊಸೆಗೆ ಅವಳ ಕೆಲಸ ಮಾಡಿಕೊಳ್ಳುವುದೇ ಏಳೋ ಹನ್ನೊಂದು , ಇನ್
ನು ಇವನ ಬೇಕು ಬೇಡಗಳಿಗೆ ಗಮನ ಕೊಡುವಷ್ಟು ಪುರಸೊತ್ತು ಇಲ್ಲವೇ ..? ಇವೆಲ್ಲ ಹಾಳಾಗಲಿ , ಹಾಳು ಶರೀರಕ್ಕೆ ಎಷ್ಟು ಸೇವೆ ಮಾಡಿದರೂ ಅಷ್ಟೇ ! ಒಂದು ದಿನ ಮಣ್ಣಿನೊಡನೆ ಮಣ್ಣಾಗಲೇಬೇಕು. ಇವೆಲ್ಲಕ್ಕಿಂತ ಮಿಗಿಲಾಗಿ ತನಗಾಗಿ ಮಿಡಿಯುತ್ತಿದ್ದ ಒಂದು ಜೀವ ಇನ್ನಿಲ್ಲವಾಗಿರುವುದರಿಂದುಂಟಾದ ಶೂನ್ಯವನ್ನು ಯಾವುದರಿಂದ ತುಂಬಿಸಲಾದೀತು ....?
ಯಾವತ್ತೂ ತುಂಬಿ ಬಾರದ ಈ ಕೊರತೆಯ ಅರಿವು ತೀವ್ರವಾಗತೊಡಗಿದ್ದೇ ರಾಮಣ್ಣ ಮಂಕಾಗಿ ಹೋದ . ದಿನ ನಿತ್ಯದ ಪೇಪರ್ ಪಠಣದಲ್ಲಿಯ ಸ್ವಾದ ಎಲ್ಲೋ ತಲೆ ತಪ್ಪಿಸಿಕೊಂಡಿತು . ತನ್ನದೇ ರೀತಿಯಲ್ಲಿ ವಿಮರ್ಶೆ ಮಾಡುತ್ತಿದ್ದ ಸಹ ವೀಕ್ಷಕಳಿಲ್ಲದೆ ದೂರದರ್ಶನ ರುಚಿ ಕಳೆದುಕೊಂಡಿತು . ಸದಾ ಮುಲುಗುವ , ನರಳುವ ಜಾನಕಿ ಸನಿಹದ ಮಂಚದಲ್ಲಿ ಲ್ಲದೆ , ಕತ್ತು ಹಿಸುಕುವ ಏಕಾಂತತೆ ಭೀತಿ ಹುಟ್ಟಿಸತೊಡಗಿತು . ರಾತ್ರಿಯ ನಿದ್ದೆ ಹೇಳದೆ , ಕೇಳದೆ ಪರಾರಿಯಾಯಿತು . ರಾಮಣ್ಣನಿಗೆ ಯಾವುದೂ ಬೇಡವೆನ್ನಿಸುವ ಒಂದು ಮನೋಸ್ಥಿತಿ ಏನೋ ಪಾಪಪ್ರಜ್ಞೆ ತಾನು ಜಾನಕಿಯನ್ನು ಸರಿಯಾಗಿ ನೋಡಿಕೊಳ್ಳಲಿಲ್ಲವೇನೋ ಎನ್ನುವ ಶಂಕೆ . ರಾಮಣ್ಣನಾದರೂ ಏನು ಮಾಡುವಂತಿದ್ದ ?
ವಯಸ್ಸಾಗುತ್ತಾ , ಆಗುತ್ತಾ ತಾವೇ ಕಟ್ಟಿದ ಸ್ವಂತ ಮನೆಯಲ್ಲಿ ತಾವೇ ಪರಕೀಯರಾಗತೊಡಗಿದ ಪರಿ ಅವರಿಬ್ಬರನ್ನೂ ಘಾಸಿಗೊಳಿಸಿದ್ದಿತು . ಜಾನಕಿಗೆ ಈ ಬಗ್ಗೆ ಆಕ್ರೋಶವಿತ್ತು . " ಯಜಮಾನಿಕೆ ಅವನ ಕೈಗೆ ಕೊಟ್ಟಿದ್ದೇ ತಪ್ಪು" ಎಂದು ಅವಳು ರಾಮಣ್ಣನನ್ನು ಹಳಿಯುತ್ತಿದ್ದಳು . ರಾಮಣ್ಣನಿಗೆ ಮನೆಯ ಮೆಟ್ಟಿಲು ನಾಲ್ಕು ಮಾರು ನಡೆಯಲಾಗದ ಅತಂತ್ರ ಸ್ಥಿತಿ . ಇಂತವನು ಮಂದಿ ವ್ಯವಹಾರ , ಪೇಟೆಯ ವೈವಾಟು ಆಳುಕಾಳುಗಳ ಲೆಕ್ಕಾಚಾರ ಎಲ್ಲಾ ಹೇಗೆ ನೋಡಿಕೊಂಡಾನು ? ಒಂದೊಂದಾಗಿ , ಒಂದೊಂದಾಗಿ ಬಣ್ಣದ ವೇಷ ಕಳಚಿಕೊಳ್ಳುವಂತೆ ಕಳಚಿಕೊಳ್ಳಬೇಕಾದ್ದು ಅನಿವಾರ್ಯವಾಗಿತ್ತು . ಮಗನ ದರ್ಬಾರು ಬಂದ ಮೇಲೆ ಮನೆಯ ಕಳೆಯೇ ಬದಲಾಯಿಸಿಬಿಟ್ಟಿತು . ಸೊಸೆ ಕೇಳಿದ್ದು ಅವಳು ಕೇಳಿ ಬಾಯಿ ಮುಚ್ಚುವುದರೊಳಗೆ ಮನೆಗೆ ಬಂದಿತೆಂದೇ ಲೆಕ್ಕ . ಯಾವತ್ತೂ ಕೈ ಬಿಗಿ ಹಿಡಿದು ಅವಶ್ಯಕವಾದದ್ದಷ್ಟಕ್ಕೇ ಖರ್ಚು ಮಾಡಿಕೊಂಡು ಬಂದವರಿಗೆ ಈ ಬಾಜೀರಾಯನ ದರ್ಬಾರು ನೋಡಿ ದಿಗ್ ಬ್ರಾಂತಿ . ಇವನು ಮನೆ ಉಳಿಸುತ್ತಾನೆಯೇ ಎನ್ನುವ ಅನುಮಾನ . ಅಪ್ಪ ಮಗನಲ್ಲಿ ಪರಸ್ಪರ ಹೊಂದಾಣಿಕೆಯೇ ಆಗದೆ ಆಗಾಗ ಚಕಮಕಿಯ ಕಿಡಿ ಹಾರತೊಡಗಿ " ಎಲ್ಲಾದ್ರೂ ಹಾಳಾಗೋಗ್ಲಿ . ಅವರವರ ಹಣೇಬರ . ನಮಗೆ ಇನ್ನೆಷ್ಟು ದಿನ ಕೇಳೀಬೇಕು ...? ಎಂದು ಜಾನಕಿ ಬುದ್ದಿವಾದ ಹೇಳತೊಡಗಿದ ಮೇಲೆ ರಾಮಣ್ಣನೂ ಬಾಯಿಗೆ ಬೀಗ ಹಾಕಿಕೊಂಡ . ಹೇಗೂ ಹೊಂದಿಕೊಂಡು ಕಳೆಯಲು ಬೇಕಷ್ಟೇ ?
ಎರಡನೆಯವನು ಇನ್ನೊಂದು ಫಜೀತಿ ಮಾಡಿಕೊಂಡಿದ್ದ . ತನ್ನ ಸಹೋದ್ಯೋಗಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದ . ಮದುವೆಯಾದ ಮೇಲೆ ಮನೆಗೆ ಸುದ್ದಿ ತಲುಪಿಸಿದ್ದ . ಸುದ್ದಿ ತಲುಪಿಸಿದ ಮೇಲೆ ಒಂದು ದಿನ ಸುಮ್ಮನೆ ಸಪತ್ನೀಕನಾಗಿ ಬಂದು ಹೋಗಿದ್ದ . ಅನ್ಯ ಜಾತೀಯ ಹುಡುಗಿ . ಸಂಪ್ರದಾಯ ನಿಷ್ಠಳಾದ ಜಾನಕಿಗೆ ತಲೆಯ ಮೇಲೆ ಕಲ್ಲು ಹೊತ್ತು ಹಾಕಿದಂತಾಗಿತ್ತು . ಹೇಗೋ ಇಲ್ಲಷ್ಟು ದಿನ ಕೊನೆಗಾಲ ಕಳೆದುಬಿಡೋಣವೆಂಬ ಆಶಯಕ್ಕೆ ಕೊಡಲಿ ಏಟು ಬಿದ್ದಿತ್ತು .
ಇದ್ದುದರಲ್ಲಿ ರಾಮಣ್ಣ ವಾಸಿ . ಪೇಪರು ಗೀಪರು ಓದಿ ಹೊರಗಿನ ವಿದ್ಯಮಾನ ಅರಿತವನು . " ಇಂತವು ಪ್ರಪಂಚದಲ್ಲಿ ಸಾವಿರ ನಡೆಯುತ್ತೆ . ನಿಂಗೆಲ್ಲೋ ಮರುಳು ಅದೇ ಕನವರಿಸ್ತಿದ್ದಿ . ಇನ್ನು ನಮ್ಮಕಾಲ ಮುಗೀತು . ಅವರಿಗೆ ಇಷ್ಟಬಂದಹಾಗೆ ಕುಣೀಲಿ ....." ಎಂದು ಬುದ್ಧಿ ಮಾತು ಹೇಳುವ ಹೊಣೆಯನ್ನು ತಾನು ವಹಿಸಿಕೊಂಡ .
ಜಾನಕಿ ಏನೂ ಹೇಳದೆ ಸುಮ್ಮನಾದಳು . ಹೀಗೇ ಕಾಲ ಕಳೀತಾ ಕಳೀತಾ ಅವರಿಗೆ ಗೊತ್ತಿಲ್ಲದ ಹಾಗೆ ಮನೆಯಲ್ಲಿ ಎರಡು ಪಾರ್ಟಿ ಆದವು . ರಾಮಣ್ಣ ,ಜಾನಕಿ ಒಂದು ಪಾರ್ಟಿ . ಹಿರೀ ಮಗ ಅವನ ಹೆಂಡತಿ ಮಕ್ಕಳು ಇನ್ನೊಂದು ಪಾರ್ಟಿ .ಒಂದು ಪಾರ್ಟಿಯವರು ಇನ್ನೊಂದು ಪಾರ್ಟಿಯವರ ಹತ್ತಿರ ಅನಾವಶ್ಯಕ ಮಾತಾಡುತ್ತಿರಲಿಲ್ಲ . ಅವಶ್ಯ ಬಿದ್ದರೆ ಮಾತು ಆಡ್ತಿರಲಿಲ್ಲಾಂತಲೂ ಅಲ್ಲ . ಆದರೆ ಅವಶ್ಯಕತೆ ಬೀಳುತ್ತಿದ್ದುದು ಕಮ್ಮಿ . ರಾಮಣ್ಣನಿಗೆ ತನ್ನ ಮಗ ತನ್ನ ಕಾರುಬಾರು , ಹಣಕಾಸಿನ ವ್ಯವಹಾರದ ಬಗ್ಗ್ಗೆ ಹೇಳಲಿ ಎಂದು ಒಳ ಆಸೆ . ಕೇಳಲು ಬಿಗುಮಾನ . ಮಗ ಏನೂ ಹೇಳುತ್ತಿರಲಿಲ್ಲ . ಎಲ್ಲಿಗೆ ಹೋಗ್ತೀನಿ , ಯಾವಾಗ ಬರ್ತೀನಿ ಅನ್ನೋದೂ ಇವರಿಗೆ ಹೇಳಬೇಕೆಂದು ಅವನಿಗೆ ಅನ್ನಿಸುತ್ತಿರಲಿಲ್ಲ . ಕೇಳದೆ ಯಾಕೆ ಹೇಳಲಿ ಎನ್ನುವುದು ಅವನ ಇರಾದೆ ಇದ್ದೀತು .
ಇತ್ತ ಜಾನಕಿಗೆ ದಿನಕ್ಕೊಂದು ಕಾಯಿಲೆ ಶುರುವಾಗತೊಡಗಿದ ಮೇಲೆ ರಾಮಣ್ಣ ಮೆತ್ತಗಾಗಬೇಕಾಯ್ತು . ಮಗನ ಹತ್ತಿರ "ಔಷಧಿ ತಂದ್ಕೊಡು " ಎಂದು ಅವನು ಬಾಯಿಬಿಟ್ಟು ಹೇಳಬೇಕು . ದಿನಾ ಯಾರಾದರೂ " ಇವತ್ತು ನಿಂಗೇನು ಕಾಯಿಲೆ ?" ಎಂದು ಕೇಳಲು ಬರುತ್ತಾರಾ ? ಮಗ ಮಾತ್ರೆ , ಗೀತ್ರೆ ತಂದು ಕೊಡುತ್ತಿದ್ದ . ತೆಗೆದುಕೊಳ್ಳುವ ಕ್ರಮ ವಿವರಿಸುತ್ತಿದ್ದ .ಬೆಲೆಯ ವಿವರ ಕೊಡುತ್ತಿದ್ದ . ಯಾಕೋ ಈ ಕೊನೆಯದು ಬೇಡ ಅನ್ನಿಸುತ್ತಿತ್ತು ರಾಮಣ್ಣನಿಗೆ ..... ಈ ಮನೆಗೆ ಇಷ್ಟರ ಮಟ್ಟಿಗೆ ಜೀವ ತೇಯ್ದವಳಿಗೆ ಸೇವೆ ಮಾಡುವುದು ಅವನ ಕರ್ತವ್ಯ ! ಮಾಡಿಸಿಕೊಳ್ಳುವುದು ತಮ್ಮ ಹಕ್ಕು. ಮಕ್ಳು, ಮರಿ ಅನ್ನೋದೆಲ್ಲಾ ನಮ್ಮ ಭ್ರಮೆ. ಯಾರಿಗೆ ಯಾರೂ ಇಲ್ಲಎಂದು ರಾಮ್ಮಣ್ಣ ಹೇಳುತ್ತಿದ್ದಾಗ ಜಾನಕಿ ” ಹೂಂ .. .” ಗುಡುತ್ತಿದ್ದಳಷ್ಟೇ. ಕಡಿಮೆ ಉಂಡರೆ ಒತ್ತಾಯ ಮಾಡಲು ಮಕ್ಕಳೆನ್ನಿಸಿಕೊಂಡವರು ಹತ್ತಿರ ಇರುತ್ತಿರಲಿಲ್ಲ.ಆದರೆ ಜಾನಕಿಗೆ ಹಾಗೆ ಅನ್ನಿಸುತ್ತಿರಲಿಲ್ಲ . ” ಸುಮ್ನೆ ಡಾಕ್ಟ್ರಿಗೆ ದುಡ್ಡು ಸುರೀಬೇಕಲ್ಲಪ್ಪಾ ಎನ್ನುವ ಸಂಶಯದಲ್ಲಿ ಅವಳು ತೀರಾ ಅನಿವಾರ್ಯವೆನ್ನಿಸಿದಾಗ ಮಾತ್ರ ಮಾತ್ರೆ ನುಂಗುವ ಅಭ್ಯಾಸ ಮಾಡಿಕೊಂಡಿದ್ದಳು. ಮೂರು ಕಾಸಿಗೂ ಕಂಡೋರ ಮುಂದೆ ಹಲ್ಲು ಗಿಂಜೋ ಸ್ಥಿತಿ ಅವಳ ಸ್ವಾಭಿಮಾನಕ್ಕೆ ಒಗ್ಗುವಂತದ್ದಾಗಿರಲಿಲ್ಲ. ಹೀಗಿದ್ದೂ ಮಗ ಕೈಬಿಟ್ಟ ಎಂದು ದೋಷಾರೋಪಣೆ ಮಾಡುವ ಹಾಗೂ ಇರಲಿಲ್ಲ. ಜಾನಕಿಯ ಆರೋಗ್ಯ ತೀರಾ ಕೆಟ್ಟಾಗ ಅವನು ಕಾರು ಮಾಡಿ ಅವಳನ್ನು ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗಿದ್ದೂ ಇತ್ತು. ಪ್ರೀತಿ ಇಲ್ಲ ಅಂತಲ್ಲ, ಇದೆ ಎಂದು ಹೇಳುವಂತೆಯೂ ಇಲ್ಲ.
ಸೊಸೆಯೂ ಅಂತದೇ. ಮಾತಿಲ್ಲ ಕತೆಯಿಲ್ಲ. ಹೊಟ್ಟೆಗೆ ಹಾಕುವುದಕ್ಕೆ ಕಡಿಮೆ ಮಾಡುವುದಿಲ್ಲ. ಕಡಿಮೆ ಉಂಡರೆ ಒತ್ತಾಯವೂ ಇಲ್ಲ. ಒಟ್ಟಿನಲ್ಲಿ ಏನೋ ಸರಿಯಿಲ್ಲ. ಎಲ್ಲಿ ಎಂದು ಹೇಳಲು ಬರುವುದಿಲ್ಲ. ಅಂತೂ ರಾಮಣ್ಣ ಜಾನಕಿಯ ಮನಸ್ಸಿನಲ್ಲಿ ನಿಶ್ಚಿಂತೆಯ ಸುರಕ್ಷಿತತೆಯ ಭಾವನೆ ಇರಲಿಲ್ಲ. ಎಲ್ಲೋ ಏನೋ ತಪ್ಪಾಗಿದೆ ಎನ್ನುವ ಅಸಹನೆ. ಇದೇನು ತಲೆಮಾರುಗಳ ಅಂತರವೋ? ತಮ್ಮ ಮನೆಯಲ್ಲಿ ಮಾತ್ರ ಹೀಗೋ…? ಅಥವಾ ಎಲ್ಲರ ಮನೆಯಲ್ಲೂ ಹೀಗೇನೋ ..? ರಾಮಣ್ಣನಿಗೆ ಅರ್ಥವಾಗುತ್ತಿರಲಿಲ್ಲ .
ಎರಡನೆಯವನು ಅಪರೂಪಕ್ಕೊಮ್ಮೆ ಮನೆಗೆ ಬರುತ್ತಿದ್ದ. ಬಂದಾಗ ತನ್ನ ಕರ್ತವ್ಯ ಎನ್ನುವಂತೆ ನೂರೋ, ಇನ್ನೂರೋ ಕೈಗೆ ಕೊಡುತ್ತಿದ್ದ. ಅವನಿಗೆ ಅವನದೇ ತಾಪತ್ರಯ. ಸೈಟ್ ಕೊಳ್ಳುವುದು, ಮನೆ ಕಟ್ಟಿಸುವುದು ಎಂದು ಅವನು ಅವನ ರಗಳೆಗಳಲ್ಲಿ ಮುಳುಗಿ ಹೋಗಿದ್ದಾನೆ. ಇನ್ನು ಮಗಳು ಬಂದರೆ ಅವಳೂ ಕೆಲ ದಿನಗಳ ಅತಿಥಿ. ಮಗ, ಸೊಸೆಯ ಕಣ್ಣು ತಪ್ಪಿಸಿ ಇವರು ಏನಾದರೂ ಗುಸು ಗುಟ್ಟಿದರೆ ಕೇಳಿದಂತೆ ಮಾಡುತ್ತಿದ್ದಳು. ಮುಖ ಸಣ್ಣ ಮಾಡಿದಂತೆ ಮಾಡುತ್ತಿದ್ದಳು. ಆಮೇಲೆ ತನ್ನ ಪಾಡಿಗೆ ತಾನು ಹೊರತು ಹೋಗುತ್ತಿದ್ದಳು. ಅವಳಿಂದ ಇವರು ನಿರೀಕ್ಷೆ ಮಾಡುವುದಾದರೂ ಏನು? ಏನೂ ಇಲ್ಲಾ. ಆದರೂ ರಾಮಣ್ಣ ಜಾನಕಿಯೊಡನೆ ಹೇಳುತ್ತಿದ್ದುದಿತ್ತು. ” ಮಕ್ಳು, ಮರಿ ಅನ್ನೋದೆಲ್ಲಾ ನಮ್ಮ ಭ್ರಮೆ. ಯಾರಿಗೆ ಯಾರೂ ಇಲ್ಲ ….”. ” ಹೂಂ .. .” ಗುಡುತ್ತಿದ್ದಳು ಜಾನಕಿ. ಮನಸ್ಸಿಗೆ ಮುಜುಗರವೆನ್ನಿಸುವ ಎಂತದೇ ಸಂದರ್ಭ ಬಂದರೂ ಒಬ್ಬರು ಇನ್ನೊಬ್ಬರೊಡನೆ ಹೇಳಿಕೊಂಡು ಹಗುರಾಗುತ್ತಿದ್ದರು. ನೋವ ಮರೆಯುತ್ತಿದ್ದರು. ಆದರೆ ಈಗ ಹಠಾತ್ತನೆ ತಾನು ಆಧರಿಸಿಕೊಂಡು ಬಂದಿದ್ದ ಅವಲಂಬನೆಯೇ ಕಡಿದು ಬಿದ್ದು ರಾಮಣ್ಣ ತತ್ತರಿಸಿದ್ದಾನೆ. ತಡವರಿಸುತ್ತಿದ್ದಾನೆ.
ಜಾನಕಿ ಪಂಚಭೂತಗಳಲ್ಲಿ ಲೀನವಾಗಿ ನಾಲ್ಕೈದು ತಿಂಗಳು ಕಳೆಯುವಷ್ಟರಲ್ಲಿ ರಾಮಣ್ಣ ಗುರುತು ಸಿಗದಷ್ಟು ಬದಲಾಗಿ ಹೋದ. ಎಲುಬು, ಚರ್ಮದ ಕೋಲಾದ. ತಟ್ಟನೆ ಕೂತಲ್ಲಿಂದ ಎದ್ದರೆ ತಲೆ ಗಿರ್ ಎನ್ನತೊಡಗಿ, ಕಣ್ಣು ಮಂಜಾಗಿ ನಡೆದು ಹೋದರೆ ಹಿಂದಿನಿಂದ ಯಾರೋ ದೂಡುತ್ತಿದ್ದಾರೆಂಬಂತೆ ಮುಗ್ಗರಿಸಿ ಬಿದ್ದೇನೆನ್ನುವ ಅಂಜಿಕೆ. ಬಿಚ್ಚಿದ ಹಾಸಿಗೆ ಮಡಿಸುವುದು ನಿಂತು ಹೋಯ್ತು. ಮೂರು ಹೊತ್ತೂ ಹಾಸಿಗೆ ಹಿಡಿದು ಮಲಗಿರುವ ನಿತ್ರಾಣಿ ಅಪ್ಪ, ಮಗನ ತಲೆ ನೋವಾದ. ತಮ್ಮನಿಗೆ ಬುಲಾವ್ ಹೋಯ್ತು. ತಮ್ಮ ರಜೆ ಹಾಕಿ ಬಂದ. ” ಈ ಹಳ್ಳೀ ಮನೇಲಿ ಇವನ್ನ ಇಟ್ಕಂಡಿದ್ರೆ ಇನ್ನು ಹೆಚ್ಚು ದಿನ ಕಳೆಯಲ್ಲ. ನಾಳೆ ಪೂರಾ ಹಾಸಿಗೆ ಹಿಡಿದ್ರೆ ಏನು ಗತಿ?. ನೀನಾದ್ರೆ ಪೇಟೇಲಿದ್ದಿ. ಸಾವಿರ ಜನ ಡಾಕ್ಟರ್ಸ್ ಇದ್ದಾರೆ. ಅಪ್ಪನ್ನ ಕರ್ಕೊಂಡ್ ಹೋಗಿ ಸರಿಯಾದ ಡಾಕ್ಟರ್ ಹತ್ತಿರ ತೋರಿಸು. ನಂಗಂತೂ ತಲೆ ಕೆಟ್ಟು ಹೋಗಿದೆ ….” ಡಾಕ್ಟರ್ ಇರೋದೂ ಹೌದು ….. ಆದ್ರೆ ಮನೇಲಿ ಅಪ್ಪನ್ನ ನೋಡ್ಕೊಳ್ಳೋರು ಯಾರು …..? ” ಎಂದು ಸಣ್ಣವನ ಸಂಕಟ. ” ಏನಾದ್ರೂ ಮಾಡಬೇಕು. ಯಾರಿಲ್ಲಿದ್ರಿ ಜನ ಇಟ್ಕೋಬೇಕು ಎಂದು ಅಣ್ಣ ಅನ್ನುತ್ತಾನೆ.
ಜನ ಸಿಗೋದು ಅಷ್ಟು ಸುಲಭನಾ ?. ಯಾರ್ಯಾರನ್ನೋ ಇಟ್ಟಕೊಂಡು ನಾಳೆ ಯಾರೂ ಮನೆಯಲ್ಲಿ ಇಲ್ಲದಿದ್ದಾಗ ಇವನ ತಲೆ ಒಡೆದು ಮನೆ ದೋಚಕೊಂಡು ಹೋದ್ರೆ …..? ” ಎಂದು ತಮ್ಮ ಅಳುತ್ತಾನೆ. ಅವನು ಹೇಳುವುದು ಅವನ ಮಟ್ಟಿಗೆ ಸರಿ. ಇವನು ಹೇಳುವುದು ಇವನ ಮಟ್ಟಿಗೆ ಸರಿ. ರಾತ್ರೆಯ ಊಟವಾದ ಮೇಲೆ ಹೀಗೇ ಮಾತಿಗೆ ಮಾತು ಬೆಳೆದು ಅವರವರಿಗೇ ಅರಿವಿಲ್ಲದೇ ದನಿ ದೊಡ್ಡದಾಗಿ ಈಚೆ ಕೋಣೆಯಲ್ಲಿ ಮಲಗಿದ ರಾಮಣ್ಣನ ಕಿವಿ ಮಂದವಾಗಿಲ್ಲ. ಎಲ್ಲಾ ಕೇಳುತ್ತಲೇ ಇತ್ತು. “ನೀನೇನು ಮಗನಲ್ವಾ ? ನಿನ್ನ ಸಾಕಿಲ್ವಾ? ಓದಿಸಿಲ್ವಾ? ಅಮ್ಮನ್ನ ನಾನು ನೋಡ್ಕಳ್ಳಿಲ್ವಾ? ಈಗ ಅಪ್ಪನನ್ನಾದ್ರೂ ನೀನು ನೋಡ್ಕೋಬಾರ್ದಾ?”.
ದೊಡ್ಡವನಿಗೆ ಅಪ್ಪನನ್ನು ಸಾಗಹಾಕಬೇಕೆಂಬ ಒಂದೇ ಛಲ. ಸಣ್ಣವನಿಗೆ ಅದನ್ನು ಹೇಗಾದರೂ ಒದರಿಕೊಳ್ಳಬೇಕೆನ್ನುವ ಹಂಬಲ. ಕೇಳುತ್ತಾ- ಕೇಳುತ್ತಾ ರಾಮಣ್ಣನಿಗೆ ಹೊಟ್ಟೆ ತೊಳಸಿದಂತಾಗಿ ಹೊರಗಿನ ಯಾವ ಗದ್ದಲವೂ ಕಿವಿಗೆ ಬೀಳದಂತೆ ಕಿವಿಯ ಮೇಲೆ ಕಂಬಳಿ ಎಳೆದುಕೊಂಡು ಮಗ್ಗುಲು ಹೋಗಿ ತಿರುಗಿ ಮುದುರಿ ಮಲಗಿದ. ಎಷ್ಟೊಂದು ಪ್ರೀತಿಯಿಂದ ಹಾಲು, ಮೊಸರು ಉಣ್ಣಿಸಿ ಸಾಕಿದ ಮಕ್ಕಳು ಯಾರಲ್ಲಾದರೂ ಭೇದ ಮಾಡಿದ್ದಿತ್ತೇ ?. ಒಬ್ಬನು ಹೆಚ್ಚಲ್ಲ, ಇನ್ನೊಬ್ಬ ಕಡಿಮೆ ಅಲ್ಲ. ಮೂರಲ್ಲ ಇನ್ನು ಆರು ಜನ ಇದ್ದರೂ ಭೇದ ಮಾಡುತ್ತಿರಲಿಲ್ಲ. ಸಣ್ಣವರಿದ್ದಾಗ ಇವರಿಗೂ ಎಷ್ಟೊಂದು ಪ್ರೀತಿ. ‘ಅಮ್ಮಾ…’ ಎಂದು ಸೆರಗು ಹಿಡಿದು ಅಪ್ಪಾ ಎಂದು ಮೊಣಕಾಲು ತಬ್ಬಿ ಹಿಂದೆ- ಮುಂದೆ ನೆರಳಿನಂತೆ ತಿರುಗುತ್ತಿದ್ದರಲ್ಲವೇ?.
ಬುದ್ಧಿ ಬೆಳೆಯುತ್ತಿದ್ದಂತೆ, ರೆಕ್ಕೆ ಬಲಿಯುತ್ತಿದ್ದಂತೆ ಎಲ್ಲಿ ಹೋಯ್ತು ಆ ಮಮತೆ …?. ಹೆತ್ತವರೇ ಹೊರೆಯಾಗುವ ಈ ವೈಚಿತ್ರ್ಯಕ್ಕೆ ಏನು ಕಾರಣ ? ಹರೆಯಕ್ಕೆ ಯಾವಾಗಲೂ ಮುಪ್ಪು ಕಂಡರೆ ಮೊದಲಿಕೆಯೇ ? ತಾತ್ಸಾರವೇ ? ಅರೆ ಹೊಟ್ಟೆ ಉಂಡೂ ಹತ್ತು ಮಕ್ಕಳ ಹೆತ್ತವರು ಸಾಕ ಬಲ್ಲವರಾದರೆ , ಹತ್ತೂ ಮಕ್ಕಳು ಸೇರಿ ಅಪ್ಪ ಅಮ್ಮನನ್ನು ಯಾಕೆ ಸಾಕಲಾರರು ?? ಯಾಕೆ ಹೊಣೆ ಕಳಚಿಕೊಳ್ಳುವ ಧೂರ್ತತನ ? ಯಾಕೆ ? ಯಾಕೆ …?? ರಾಮಣ್ಣನ ತಲೆಯೊಳಗೆ ಉತ್ತರವಿಲ್ಲದ ಪ್ರಶ್ನೆಯ ಚಕ್ರ ಗಿರಗಿರನೆ ತಿರುಗುತ್ತಲೇ ಇತ್ತು. ಹೊಟ್ಟೆಯೊಳಗೆ ಸಂಕಟ ಏರುತ್ತಲೇ ಇತ್ತು …..