Prabhakar Tamragouri

Tragedy

4.5  

Prabhakar Tamragouri

Tragedy

ಮುಸ್ಸಂಜೆ ಹೊಂಬಿಸಿಲು

ಮುಸ್ಸಂಜೆ ಹೊಂಬಿಸಿಲು

11 mins
246



ಮನೆಯ ಮುಂದಿನ ಬಯಲಿನಲ್ಲಿ ಅನತಿ ದೂರದಲ್ಲಿ ಬೃಹದಾಕಾರವಾಗಿ ಬೆಳೆದ ಪಾರಿಜಾತದ ತುಂಬಾ ಗೊಂಚಲು ಗೊಂಚಲಾಗಿ ಹೂಬಿಟ್ಟ ಮರದತ್ತಲೇ ನೋಡುತ್ತಾ ಕುಳಿತಿದ್ದ ಲಾವಣ್ಯಳಿಗೆ ಅಲ್ಲಿನ ಅಪೂರ್ವ ದೃಶ್ಯವೊಂದು ಗಮನ ಸೆಳೆದಿತ್ತು . ಕೆಲವೇ ದಿನಗಳ ಹಿಂದೆ ಕಣ್ಣು ಬಿಟ್ಟಿದ್ದ ಹೂಕುಟಿಕದ ಪುಟ್ಟ ಮರಿಯೊಂದು ಎಲೆ ಮರೆಯಲ್ಲಿದ್ದ ಗೂಡಿನೊಳಗಿಂದ ತಲೆಯನ್ನಷ್ಟೇ ಹೊರಹಾಕಿ ಇನ್ನಿಲ್ಲದ ಕುತೂಹಲದಿಂದ ಹೊರಗಿನ ಪ್ರಪಂಚ ನೋಡುತ್ತಿತ್ತು . ಗೊಂಚಲು ಗೊಂಚಲಾಗಿ ಹೂಬಿಟ್ಟ ಪಾರಿಜಾತ ಮರದ ರಂಧ್ರದ ಅಂಚಿನಲ್ಲಿ ಕುಳಿತು ಮೆಲ್ಲನೆ ಬಗ್ಗಿ ನೋಡಿದಾಗ ಅದಕ್ಕೆ ಕಂಡದ್ದು ಇಳಿ ಸಂಜೆಯ ಹೊಂಬಿಸಿಲು , ಹಸಿರು ಹಾಸು , ಬಣ್ಣ ಬಣ್ಣದ ಹೂಗಳ ತೀರಾ ಹೊಸ ಪ್ರಪಂಚ . ಯಾವುದೊಂದೂ ಅರ್ಥವಾಗದೇ ಎಲ್ಲವನ್ನೂ ಪಿಳಪಿಳನೆ ಕಣ್ಣು ಬಿಟ್ಟು ನೋಡುತ್ತಾ ಕುಳಿತ ಪುಟ್ಟ ಮರಿ ಇದ್ದಕ್ಕಿದ್ದಂತೆ ಬೆಚ್ಚಿಬಿತ್ತು .



ಅನತಿ ದೂರದಲ್ಲಿಯೇ ಕುಳಿತು ಗೂಡಿನತ್ತಲೇ ನೋಡುತ್ತಾ ಕುಳಿತ ಅವಳನ್ನು ನೋಡಿ ಗಾಬರಿಯಾಗಿರಬೇಕು ." ಮನುಷ್ಯ ತೀರಾ ಅಪಾಯಕಾರಿ " ಎಂದು ಅಮ್ಮ ಹೇಳಿದ ಮಾತು ಎಚ್ಚರಿಕೆಯ ಗಂಟೆಯಾಗಿ ಬಾರಿಸಿರಬೇಕು .ಸದ್ದಿಲ್ಲದೇ ಗೂಡೊಳಗೆ ತೂರಿದ ಮರಿ ಮೂಲೆಯಲ್ಲಿ ಮುದುಡಿ ಕುಳಿತು ಅಮ್ಮನಿಗಾಗಿ ಕಾಯಿತು .ಅಮ್ಮ ಬಂದ ಕೂಡಲೇ ತನ್ನ 'ಕಿಚಪಿಚ ' ಭಾಷೆಯಲ್ಲಿ ವರದಿಯನ್ನೊಪ್ಪಿಸಿತು . ಗಾಬರಿಗೊಂಡ ಅಮ್ಮ ಎಚ್ಚರಿಕೆಯಿಂದ ಗೂಡಿನ ಹೊರಗೆ ತಲೆಹಾಕಿ ಒಂದೇ ಕ್ಷಣದಲ್ಲಿ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ತಡ ಮಾಡದೇ ಗೂಡಿನಿಂದ ಹಾರಿತು . ಮತ್ತೆ ಕೆಲವೇ ನಿಮಿಷಗಳಲ್ಲಿ ಹಿಂತಿರುಗಿ ಬಂದು ಪುಟ್ಟ ಪುಟ್ಟ ಹಣ್ಣುಗಳನ್ನು ಕೊಕ್ಕಿನಲ್ಲಿ ಹಿಡಿದು ಗೂಡಿನ ಅಂಚಿನಲ್ಲಿ ನಿಂತು ಮರಿಯನ್ನು ಕರೆಯಿತು . ಹೆದರಿಕೆಯಿಂದಲೇ ತಲೆ ಹೊರಗೆ ಹಾಕಿದ ಮರಿಗೆ ನಿಧಾನವಾಗಿ ಗುಟುಕುಣಿಸಿ ಮರಿಯೊಂದಿಗೆ ಗೂಡಿನೊಳಗೆ ಮಾಯವಾಯಿತು . ಮತ್ತೆ ಹೊರ ಬರಲೇ ಇಲ್ಲ . ಅದಾಗಲೇ ಅಲ್ಲಿ ಹೊಂಬಿಸಿಲು ಮಾಯವಾಗಿ ಸಂಜೆಗತ್ತಲು ಮೆಲ್ಲ ಮೆಲ್ಲನೆ ಕಾಲಿರಿಸುತ್ತಿತ್ತು .


ಲಾವಣ್ಯ ಯಾವಾಗ ಊರಿಗೆ ಬಂದರೂ ಹಾಗೇ . ಹೂಬಿಟ್ಟ ಮರದತ್ತಲೋ , ತುಂಬಿ ಹರಿಯುವ ನದಿಯತ್ತಲೋ , ದೂರದ ಬೆಟ್ಟದಂಚಿನಲ್ಲಿ ಮುಳುಗುತ್ತಿರುವ ಸೂರ್ಯನನ್ನು ನೋಡುತ್ತಲೋ .......... ಒಟ್ಟಾರೆ ಪ್ರಕೃತಿಯ ಸೊಬಗನ್ನು ಸವಿಯುತ್ತ ಗಂಟೆಗಟ್ಟಲೆ ಕುಳಿತುಬಿಡುತ್ತಿದ್ದಳು . " ವಾಸ್ತವವೆಂದರೆ ಸೂರ್ಯ ಹುಟ್ಟುವುದೂ ಇಲ್ಲ ....ಮುಳುಗುವುದೂ ಇಲ್ಲ . ಸೂರ್ಯನ ಸುತ್ತ ಭೂಮಿ ಚಲಿಸುತ್ತದೆ ಅಷ್ಟೇ ! ಭೂಮಿ ಮೇಲೆ ಬದುಕೋ ನಾವು ಭೂಮಿಯ ಚಲನೆಯನ್ನೇ ಮರೆತು ಸೂರ್ಯ ಹುಟ್ಟಿದ , ಸೂರ್ಯ ಮುಳುಗಿದ ಎನ್ನುತ್ತೇವೆ " ಎಂದುಕೊಂಡಳು .


ಅವಳು ತವರಿಗೆಂದು ಬರುತ್ತಿದ್ದುದು ಎರಡು ಅಥವಾ ಮೂರು ವರ್ಷಗಳಿಗೊಮ್ಮೆ . ಎಷ್ಟೇ ಆಧುನಿಕತೆಯ ಬೆರಗಿಗೆ ಮರುಳಾದರೂ ತನ್ನ ಊರಿನ ಪ್ರಕೃತಿ ಬದಲಾಗಿಲ್ಲ ಮತ್ತು ಎಂದಿಗೂ ಬದಲಾಗುವುದೂ ಇಲ್ಲ ಎಂದು ಅವಳಿಗೆ ಅನಿಸುತ್ತಿತ್ತು .ಅದಕ್ಕೆ ಅವಳು ಕನಿಷ್ಠ ವಾರವಾದರೂ ಇದ್ದು ಬರುವಹಾಗೆ ಪೂರ್ವ ಸಿದ್ಧತೆ ಮಾಡಿಕೊಂಡೇ ಊರಿಗೆ ಹೊರಡುತ್ತಿದ್ದಳು . ನಗರದ ಜಂಜಡ ಯಾಂತ್ರಿಕ ಬದುಕು ಏಕತಾನತೆಗಳನ್ನೆಲ್ಲಾ ಕಳೆದುಕೊಂಡು ಮತ್ತೆ ಇಲ್ಲಿಂದ ಹೊರಡುವಾಗ ಅವಳ ಎದೆಯಲ್ಲಿ ಹೊಸ ಉಲ್ಲಾಸ ತುಂಬಿಕೊಂಡಿರುತ್ತಿತ್ತು .


" ಲಾವಣ್ಯ ......"ಎಂಬ ಅಮ್ಮನ ಕೂಗಿಗೆ ಎಚ್ಛೆತ್ತು ಎದ್ದು ಮನೆಯೊಳಗೇ ಹೊರಟಳು . ಎಲ್ಲರಿಗೂ ಕಾಫಿ ಹಂಚುತ್ತಿದ್ದ ಸವಿತಕ್ಕ ಅವಳ ಮುಂದೆ ಕಾಫಿ ಲೋಟವನ್ನಿರಿಸಿ " ಅದ್ಯಾಕೆ ಹಾಗೇ ಸಪ್ಪಗಿದ್ದೀ .....? ಯಾವ ಪೇಶಂಟಿಗೆ ಹಾರ್ಟ್ ಟ್ರಬಲ್ ಬಂದಿತ್ತೋ ಏನೋ ....? ಭಾವ ನಾಳೆ ಖಂಡಿತಾ ಬರ್ತಾರೆ ಬಿಡೆ " ಎಂದು ಕೀಟಲೆ ಮಾಡಿದಳು . ಸವಿತಕ್ಕ ಯಾವಾಗಲೂ ಹಾಗೇ . ಏನಾದರೊಂದು ಮಾತನಾಡುವುದು , ಎಲ್ಲರನ್ನೂ ನಗಿಸುವುದು . ಈಗ ಅವಳ ಜೊತೆ ಶೈಲಕ್ಕ , ಸರೋಜಕ್ಕ ,ಭಾವಂದಿರು ,ಅವರ ಮಕ್ಕಳು ಎಲ್ಲರೂ ಸೇರಿಕೊಂಡು ಮಾತಿಗೆ ಮಾತು ಬೆಸೆದು ಲಾವಣ್ಯಳ ಕೆನ್ನೆ ಕೆಂಪಾಗುವಂತೆ ಮಾಡಿದ್ದರು .ಸವಿತಕ್ಕಳಂತೂ ಮೊದಲಿನಿಂದಲೂ ಹಾಗೇ . ಕೊನೆಯ ತಂಗಿ ಲಾವಣ್ಯ ಅಂದರೆ ಪ್ರಾಣ ಬಿಡುವಷ್ಟು ಪ್ರೀತಿ . ಅವಳು ಅಮ್ಮನ ಮಡಿಲಿನಲ್ಲಿ ಬೆಳೆದುದಕ್ಕಿಂತಲೂ ಅಕ್ಕನ ಮಡಿಲಿನಲ್ಲೇ ಬೆಳೆದದ್ದು ಹೆಚ್ಚು .ಲಾವಣ್ಯಳಿಗೆ ತನ್ನ ಪ್ರೀತಿಯನ್ನು ಧಾರೆಯೆರೆಯುವುದರ ಮೂಲಕ ಹೆಣ್ಣುಮಕ್ಕಳಿಲ್ಲದಿದ್ದ ಕೊರಗನ್ನು ಸವಿತಕ್ಕ ತುಂಬಿಕೊಂಡಿದ್ದಳು . ಯಾರಾದರೂ ಹಾಗೆ ಆಡಿತೋರಿಸಿದರಂತೂ ಸವಿತಕ್ಕಳ ಎದೆ ತುಂಬಿರುತ್ತಿತ್ತು



ಎಲ್ಲಾ ಹೆಣ್ಣು ಮಕ್ಕಳು , ಅಳಿಯಂದಿರು ,ಮೊಮ್ಮಕ್ಕಳು ಬಂದಿದ್ದರಿಂದ ಮನೆ ,ಮದುವೆ ಮನೆಯಂತೆ ಭಾಸವಾಗುತ್ತಿತ್ತು .ಅಮ್ಮನ ಮನೆಗೆ ಬಂದ ಎಲ್ಲಾ ಹೆಣ್ಣು ಮಕ್ಕಳು ಪುಟ್ಟ ಮಕ್ಕಳಂತಾಗಿದ್ದರೆ ,ಮೊಮ್ಮಕ್ಕಳಂತೂ ರೆಕ್ಕೆ ಬಂದ ಹಕ್ಕಿಗಳಂತಾಗಿದ್ದರು .ನಡುಮನೆಯಲ್ಲಿ ಹಾಕಿದ್ದ ದೊಡ್ಡ ಸೋಫಾದಲ್ಲಿ ಕುಳಿತು ತಿಂಬಿದ ಮನೆಯ ಸಂಭ್ರಮವನ್ನು ಶಾರದಮ್ಮ ತಮ್ಮ ಕಣ್ಣುಗಳಲ್ಲಿ ತುಂಬಿಕೊಳ್ಳುತ್ತಿದ್ದರು .ಕಾಫಿ ಕುಡಿದು ಮುಗಿಸಿದ ಲಾವಣ್ಯಾ ಬಂದು ಅಮ್ಮನ ತೊಡೆಯ ಮೇಲೆ ಹೀಗೆ ಪುಟ್ಟ ಮಗುವಿನಂತೆ ಮಲಗಿ ಅದ್ಯಾವ ಕಾಲವಾಗಿತ್ತೋ ಏನೋ ...? ಲಾವಣ್ಯಳ ಮನಸ್ಸು ತುಂಬಿ ಬಂತು .


ಎಲ್ಲರೂ ತಮ್ಮದೇ ಆದ ಸಂಭ್ರಮದಲ್ಲಿ ಮುಳುಗಿದ್ದಾಗ ಯಾರೋ ಗೇಟು ತೆರೆದ ಸದ್ದಾಯಿತು . ಲಾವಣ್ಯಳೇ ಎದ್ದು ಹೋಗಿ ಬಾಗಿಲು ತೆರೆದಳು .ಎದುರಲ್ಲಿ ವಾಸು ದೊಡ್ಡಪ್ಪ ನಿಂತಿದ್ದರು .ಒಂದು ಕ್ಷಣ ಅವಳಿಗೆ ಗುರುತೇ ಹತ್ತಲಿಲ್ಲ .ಅಷ್ಟು ಬದಲಾಗಿ ಬಿಟ್ಟಿದ್ದರು ದೊಡ್ಡಪ್ಪ . " ಬನ್ನಿ ದೊಡ್ಡಪ್ಪ ....." ಎಂದು ಲಾವಣ್ಯ ಒಳ ಮನೆಯತ್ತ ಬರುತ್ತಲೇ ಅಮ್ಮ ತಮ್ಮ ಕಣ್ಸನ್ನೆಯಿಂದ " ಅವನನ್ನ ಕರೆಯಬೇಡಿ .ಅಲ್ಲಿಂದ ಹಾಗೇ ಕಳುಹಿಸು " ಎಂದು ಸೂಚಿಸುತ್ತಿದ್ದರು .ಮನೆಯ ತುದಿ ಬಾಗಿಲಿನಲ್ಲಿ ನಿಂತ ನೆಂಟರನ್ನು ಹಾಗೇ ಕಳುಹಿಸುವುದು ಸಭ್ಯತೆಯ ಲಕ್ಷಣವಲ್ಲ ಎಂಬ ಭಾವನೆ ತುಂಬಿಕೊಂಡ ಲಾವಣ್ಯಳ ಮನಸ್ಸಿಗೆ ಕಸಿವಿಸಿಯಾಯಿತು .ಅಷ್ಟರಲ್ಲಿ ವಾಸು ದೊಡ್ಡಪ್ಪನೇ , ತಮ್ಮ ಗೊಗ್ಗುರು ಧ್ವನಿಯಲ್ಲಿ ಮಾತನಾಡತೊಡಗಿದರು .

" ಯಾರು ,ಲಾವಣ್ಯ ಅಲ್ಲವೇನು ....? ಮಹಾಲಕ್ಷ್ಮೀನ ಕಣ್ಣೆದುರಲ್ಲಿ ಕಂಡಂಗಾತು" ಎಂದರು .ಮರುಕ್ಷಣ ತಮ್ಮ ಹೆಗಲ ಮೇಲಿದ್ದ ಹರಿದ ಹೆಗಲು ವಸ್ತ್ರದ ತುದಿಯಿಂದ ಕಣ್ಣೊರೆಸಿಕೊಂಡು " ನಿಮ್ಮ ದೊಡ್ಡಮ್ಮ ಸಂಜೆ ಹೋಗ್ಬಿಟ್ಟಳಮ್ಮ.ಹೇಳಿ ಕಲಿಸೋಣ ಅಂದ್ರೆ ಸುಬ್ರಾಯ ಎಲ್ಲಿದ್ದಾನೋ ? ಯಾವಾಗ ಬರ್ತಾನೋ ಗೊತ್ತಿಲ್ಲ ....." ಎಂದು ಹೇಳಿ ತನ್ನ ಎಡಗಾಲನ್ನು ಎತ್ತಿಡಲಾರದೆ ಎತ್ತಿಡುತ್ತಾ ,ಕೆಮ್ಮುತ್ತಾ ನಿಧಾನವಾಗಿ ನಡೆಯುತ್ತಾ ಕತ್ತಲಲ್ಲಿ ಕತ್ತಲಾಗಿ ಮರೆಯಾದ .




 

    


              ಬಾಗಿಲುಹಾಕಿ ಬಂದ  ಲಾವಣ್ಯ ಬಾಯಿ ಬಿಡುವ ಮುನ್ನವೇ ಆಕೆಯ ತಾಯಿ ಶಾರದಮ್ಮ ಬಾಯಿ ಬಿಟ್ಟರು " ಹೆಂಡ್ತಿ ಸತ್ತೋದ್ಲು ಅಂತ ಹೇಳಲಿಕ್ಕೆ ಬಂದಿದ್ದನೇನು ಆವ......? ಒಳ್ಳೇದೇ ಆಯ್ತು . ಅವನ ವಂಶ ನಾಶವಾಗ ....."ಎಂದು ಹಿಡಿ ಶಾಪ ಹಾಕಿದಳು .ತಾಯಿಯ ವರ್ತನೆ ಲಾವಣ್ಯಳಿಗೆ ತುಂಬಾ ಕೆಡುಕೆನಿಸಿತು .ಅವಳ ಮುಖಭಾವ ಓದಿದವಳಂತೆ ಸವಿತಕ್ಕ " ನಿಂಗೆ ಗೊತ್ತಿಲ್ಲದ್ದು ಯಾವುದಿದೆ . ನಮಗೆ ಕಡಿಮೆ ಕಷ್ಟ ಕೊಟ್ಟನೇನು ಅವ...? ಅವನ ಹತ್ತಿರ ಮಾತನಾಡೋದಿರಲಿ ಅವನ ಮುಖ ನೋಡೋಕೂ ನನಗಿಷ್ಟವಿಲ್ಲ "ಎಂದಳು . ಎರಡನೇ ಅಕ್ಕ ಶೈಲಾ " ದೊಡ್ಡಪ್ಪ ಅಂತ ಹೇಳಿಕೊಂಡು ಹಲ್ಲು ಕಿಸ್ಕೊಂಡು ಬಂದಿದ್ದಾನೆ ನಾಚ್ಗೆ ಇಲ್ದೆ . ಅವನು ಅಪ್ಪಂಗೆ ಮಾಡಿದ ಅವಮಾನ ಇನ್ನೂ ಎದೆಯಲ್ಲಿ ಉರೀತಿದೆ "ಎಂದು ಅವಾಚ್ಯ ಶಬ್ದಗಳಿಂದ ಬೈದಳು . ಮೂರನೇ ಅಕ್ಕ ಸರೋಜ , " ನಮ್ಮ ಆಸ್ತೀನೆಲ್ಲಾ ನುಂಗಿ ನೀರು ಕುಡ್ದಾ . ದೇವರು ಅವನಿಗೆ ತಕ್ಕ ಶಿಕ್ಷೆ ಕೊಟ್ಟ " ಎಂದು ತನ್ನದನ್ನೂ ಸೇರಿಸಿದಳು . ಹೆಡೆ ತುಳಿಸಿಕೊಂಡ ಏಳು ಹೆಡೆಯ ಸರ್ಪದಂತೆ ಭುಸುಗುಡುತ್ತಿದ್ದ ಅಣ್ಣ " ಅಪ್ಪಂಗೆ ಅವಮಾನ ಮಾಡಿದಂಗಲ್ಲ . ಭಿಕ್ಷೆ ,ಭಿಕ್ಷೆ ಬೇಡಬೇಕು .ಅಲ್ಲೀವರ್ಗೂ ನನಗೆ ಸಮಾಧಾನವಿಲ್ಲ " ಎಂದು ಬೈಯುತ್ತಿದ್ದ .


ಸೇಡು ತೀರಿಸಿಕೊಳ್ಳುವ ಪ್ರವೃತ್ತಿ ಇಂದು ನಿನ್ನೆಯದಲ್ಲ .ಅದು ಮನುಷ್ಯನಲ್ಲಿ ಅಡಕವಾಗಿರುವ ರಕ್ತದ ಗುಣ . ಹಿಂಸೆಯ ಹಾಗೆ ನೆತ್ತರಿನಲ್ಲಿ ಬೆರೆತುಹೋದ ಮೂಲ ಪ್ರವೃತ್ತಿ ಅದು . ಮಕ್ಕಳಲ್ಲಿ ಒಬ್ಬ ಇನ್ನೊಬ್ಬನಿಗೆ ಒಂದೇಟು ಕೊಟ್ಟರೆ ಇನ್ನೊಬ್ಬ ಕೂಡಾ ತನ್ನನ್ನು ಹೊಡೆದವನಿಗೆ ಅಷ್ಟೇ ಬಲವಾದ ಏಟನ್ನು ಅವನು ಕೊಟ್ಟ ಜಾಗಕ್ಕೇ ಮರಳಿ ಕೊಡುತ್ತಾನೆ .ಕೆಲವರಲ್ಲಿ ಬೆಳೆದು ದೊಡ್ಡವರಾದ ಮೇಲೂ ಸೇಡಿನ ಪ್ರವೃತ್ತಿ ಉಳಿದು ಬಿಡುತ್ತೆ . ಸಾಮಾನ್ಯವಾಗಿ ಶೇಕಡಾ ತೊಂಬತ್ತರಷ್ಟು ಜನರಲ್ಲಿ ಅಂಥ ಪ್ರವೃತ್ತಿ ಇರುವುದರಿಂದಲೇ " ಕ್ಷಮೆ " ಎಂಬ ಪರಿಕಲ್ಪನೆಗೆ ಬೆಲೆ ಬಂದಿರುವುದು .


ಇವರಿಗೆಲ್ಲಾ ಏನಾಗಿದೆ ಎಂಬುದನ್ನು ಅರಿಯದವಳೇನಾಗಿರಲಿಲ್ಲ ಲಾವಣ್ಯ . ಕಡು ಕಷ್ಟದ ದಿನಗಳಲ್ಲಿ ಬಡತನದಲ್ಲಿ ಈ ಮನೆಯ ಮಗಳೊಬ್ಬಳು ಡಾಕ್ಟರಾಗುತ್ತಾಳೆ ಎಂಬುದು ನಂಬುವುದಕ್ಕೆ ಅಸಾಧ್ಯವಾದ ಕುಟುಂಬದಿಂದ ಆಕೆ ಬಂದಿದ್ದಳು ."ಅವನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ .ದೂರದ ಪ್ರಯಾಣದಿಂದ ಬಂದಿದ್ದಿ . ಊಟ ಮಾಡಿ ಮಲಗು . ಬೆಳಿಗ್ಗೆ ಮಾತನಾಡೋಣ ...."ಎಂದು ಹೇಳಿ ಅಣ್ಣ ಹೊರಟು ಹೋದ .


ಲಾವಣ್ಯಳ ಗಂಟಲಲ್ಲಿ ಏಕೋ ಅನ್ನ ಇಳಿಯಲಿಲ್ಲ .ಶಾಸ್ತ್ರಕ್ಕೆ ಉಂಡೆದ್ದು ಕೈ ತೊಳೆದುಕೊಂಡು ಅಟ್ಟದ ಮೇಲಿನ ರೂಮಿನಲ್ಲಿ ಅಡ್ಡಾದಳು . ಕೆಳಗೆ ಅಕ್ಕಂದಿರ ಮಾತುಕತೆ ಇನ್ನೂ ಮುಗಿದಿರಲಿಲ್ಲ . ಮಾಡಿನ ಜಂತಿಯನ್ನೇ ನೋಡುತ್ತಾ ಮಲಗಿದ್ದವಳಿಗೆ ನಿದ್ದೆ ಹತ್ತಲಿಲ್ಲ . ಅವಳ ಮನಸ್ಸಿನ ತುಂಬಾ ಕಾಲೆಳೆಯುತ್ತಾ ನಿಧಾನವಾಗಿ ನಡೆದು ಕಟ್ಟಲು ಸೇರಿದ್ದ ದೊಡ್ಡಪ್ಪನ ಆಕೃತಿಯೇ ತುಂಬಿಕೊಂಡಿತ್ತು . ಅಮ್ಮ ಆಗಾಗ ಹೇಳುತ್ತಲೇ ಇದ್ದ ಮಾತುಗಳು ಮನಃ ಪಟಲದ ಮೇಲೆ ಒಂದೊಂದಾಗಿ ಮೂಡತೊಡಗಿದವು . ಅಮ್ಮ ಹೇಳುವುದು ಆ ಕ್ಷಣ ನೆನಪಿಗೆ ಬಂದ ಕೆಲವೇ ಸಂಗತಿಗಳಾದರೂ , ಅದು ಸಾವಿರ ಪುಟಗಳ ಸಾಹಿತ್ಯದಂತೆ ಕಣ್ಣೆದುರು ಆಗಾಗ ತೆರೆದುಕೊಳ್ಳುತ್ತಿತ್ತು .


ದೊಡ್ಡಪ್ಪನೆಂದರೆ ಅವನೇನು ತಂದೆಯ ಖಾಸಾ ಅಣ್ಣನಾಗಿರಲಿಲ್ಲ . ಇವಳ ತಂದೆಯೂ , ಅವನೂ ಅಣ್ಣ ತಮ್ಮಂದಿರ ಮಕ್ಕಳಾಗಿದ್ದರು . ಆ ಮನೆಗೆ ಲಾವಣ್ಯಳ ತಾತನೇ ಹಿರೀ ಮಗ . ಎರಡನೆಯವನು ಗಣು ತಾತ . ಹುಟ್ಟುತ್ತಲೇ ಕಾಯಿಲೆಯ ಮನುಷ್ಯ . ಮೂರನೆಯವನೇ ವಾಸು ದೊಡ್ಡಪ್ಪನ ಅಪ್ಪ ರಾಘು ತಾತ . ಅವನಿಗೆ ವಾಸು ದೊಡ್ಡಪ್ಪನೂ ಸೇರಿದಂತೆ ನಾಲ್ಕು ಗಂಡು ಮಕ್ಕಳು . ಇಬ್ಬರು ಹೆಣ್ಣು ಮಕ್ಕಳು . ನಾಲ್ಕನೆಯ ತಾತ ಬಾಲಚಂದ್ರ ಎಂಜಿನೀಯರ್ ಆಗಿ ಮುಂಬೈ ಸೇರಿ , ಆ ಕಾಲದಲ್ಲೇ ಅಂತರ್ಜಾತಿ ವಿವಾಹ ಮಾಡಿಕೊಂಡು ಈ ಮನೆ ಸಂಬಂಧವನ್ನು ತಾವಾಗಿಯೇ ಕಡಿದುಕೊಂಡುಬಿಟ್ಟಿದ್ದ . ಅಪ್ಪ ವಯಸ್ಸಿಗೆ ಬರುವ ಮುನ್ನವೇ ಅಜ್ಜಿ , ತಾತ ಇಬ್ಬರೂ ಸತ್ತುಹೋದರಂತೆ . ಮನೆಯಲ್ಲಿ ರಾಘು ತಾತನದೇ ಯಜಮಾನಿಕೆ . ನಾಲ್ಕು ಜನ ಗಂಡುಮಕ್ಕಳು ಬೇರೆ . ಸಾಕಷ್ಟು ಆಸ್ತಿ ಇತ್ತು .ಹತ್ತಾರೆಕರೆ ಹೊಲ , ತೋಟ , ಗದ್ದೆ ಎಲ್ಲವೂ ಇದ್ದವು .ಅಪ್ಪ ವಯಸ್ಸಿಗೆ ಬರುವ ಕಾಲಕ್ಕೆ ಎಲ್ಲವೂ ತನ್ನ ಸಂಪಾದನೆಎಂತಲೂ , ತನ್ನ ಅಣ್ಣ ಯಾವಾಗಲೂ ಎಲೆ ತಿರುವುತ್ತಾ ಕಾಲ ಕಳೆದವನೆಂತಲೂ ತಾರತಮ್ಯ ಮಾಡಿ ಉಪಾಯವಾಗಿ ಅವನನ್ನು ಮನೆಯಿಂದ ಆಚೆ ಹಾಕಿಬಿಟ್ಟ .


ಜೀವನೋಪಾಯಕ್ಕೆ ಕೂಲಿನಾಲಿ ಮಾಡಿ ಎರಡು ಹಸು ಕಟ್ಟಿಕೊಂಡು ಮುಂದೆ ಬಂದ ಅಪ್ಪನಿಗೆ , ಒಳ್ಳೆಯ ಮನೆತನದ ಹೆಣ್ಣು ಸಿಕ್ಕ ಮೇಲೆ ತಾನೂ ಒಬ್ಬ ಮನುಷ್ಯನಾದ . ಗಂಡ ಹೆಂಡತಿ ಇಬ್ಬರೂ ದುಡಿದು ನಾಲ್ಕಾರೆಕರೆ ಹೊಲ ಗದ್ದೆ ಅಂತ ಮಾಡಿಕೊಂಡರು . ಹೀಗೆ ಸ್ವಂತ ದುಡಿಮೆಯಿಂದಲೇ ಮುಂದೆ ಬಂದ ಅಪ್ಪ ಆ ಕಾಲಕ್ಕೆ ಈ ಹದಿನಾರು ಅಂಕಣದ ಮನೆ ಕಟ್ಟುಬಿಟ್ಟ . ಇದೆಲ್ಲವೂ ರಾಘುತಾತನಿಗೂ ಅವನ ನಾಲ್ಕು ಜನ ಮಕ್ಕಳಿಗೂ ಕಣ್ಣು ಕಿಸಿದಿತ್ತು . ತನ್ನ ಅಪ್ಪ ಹಾಗೂ ವಾಸು ದೊಡ್ಡಪ್ಪನೂ ಹೆಚ್ಚುಕಡಿಮೆ ಒಂದೇ ವಾರಿಗೆಯವರಾಗಿದ್ದರು . ಅಪ್ಪ ಬದುಕಿನಲ್ಲಿ ಏನೇ ಉನ್ನತಿಯನ್ನು ಸಾಧಿಸಿದರೂ ವಾಸು ದೊಡ್ಡಪ್ಪ್ಪ ಕರುಬುತ್ತಿದ್ದ . ಆಗಿನ ದಿನಗಳಲ್ಲಿ ರಾಜಕೀಯ ಪಕ್ಷ ಅಂತೆಲ್ಲಾ ಓಡಾಡುತ್ತಾ ತನ್ನದೇ ಆದ ಪ್ರಭಾವವನ್ನು ಬೆಳೆಸಿಕೊಂಡಿದ್ದ . ವಾಸು ದೊಡ್ಡಪ್ಪ ಸಂದರ್ಭ ಸಿಕ್ಕಾಗಲೆಲ್ಲಾ ಅಪ್ಪನಿಗೆ ತೊಂದರೆ ಕೊಡುತ್ತಿದ್ದ .


ಅಪ್ಪನಿಗೆ ಸಾಲಾಗಿ ಮೂರು ಹೆಣ್ಣು ಮಕ್ಕಳು ಆದಾಗ ಲೇವಡಿಯಾಡಿದ್ದ . ಅದೇ ಕಾಲಕ್ಕೆ ವಾಸು ದೊಡ್ಡಪ್ಪನಿಗೆ ಆರತಿಗೊಬ್ಬ ಮಗ , ಕೀರುತಿಗೊಬ್ಬ ಮಗಳು ಎಂಬಂತೆ ಒಂದು ಗಂಡು ಒಂದು ಹೆಣ್ಣು ಇಬ್ಬರೇ . ಅಪ್ಪ ಊರಿನಲ್ಲಿ ಯಾರ ತಂಟೆಗೂ ಹೋಗದೆ , ಯಾರನ್ನೂ ಹೆಚ್ಚು ಹಚ್ಚಿಕೊಳ್ಳದೆ ತನ್ನ ಪಾಡಿಗೆ ತಾನು ಇರುತ್ತಿದ್ದ .ಆತನಿಗೆ ಮೂರು ಹೊತ್ತೂ ಹೊಲ ಗದ್ದೆಯದೇ ಚಿಂತೆ . ದುಡಿಮೆಯದೇ ಚಿಂತೆ . ಒಮ್ಮೆ ಒಳ್ಳೆ ಫಸಲು ಬಂದಿದ್ದಾಗ ಸಹಿಸಲಾಗದ ಇದೇ ವಾಸು ದೊಡ್ಡಪ್ಪ ತನ್ನ ಪುಂಡು ದನಗಳನ್ನು ಬಿಟ್ಟು ರಾತ್ರಿ ಇಡೀ ಮೇಯಿಸಿಬಿಟ್ಟಿದ್ದ . ರಾಜಕೀಯ ಬಲ , ಧನ ಬಲ ಇರುವ ಅವನೆದುರು ಅಪ್ಪ ಏನೂ ಮಾಡುವಂತಿರಲಿಲ್ಲ . " ನಾನೇ ದಾನ ಬಿಟ್ಟು ಮೇಯಿಸಿರೋದು . ಅದೇನು ಮಾಡ್ತೀಯೋ ಮಾಡು ಹೋಗು ...." ಎಂದು ಎದುರಾ ಎದುರೇ ಹೇಳಿ ಹೋಗಿದ್ದ .




ಆ ವರ್ಷ ಇಡೀ ಕುಟುಂಬ ತುತ್ತು ಕೂಳಿಗಾಗಿ ಪರದಾಡಿದ್ದಾಯ್ತು . ಅಂತಹ ಬರಗಾಲದಲ್ಲಿ ಅಮ್ಮ ತುಂಬಿದ ಬಸುರಿ ಬೇರೆ . ಕೈಯಲ್ಲಿ ಚಿಕ್ಕಾಸು ಇಲ್ಲದ ಪರಿಸ್ಥಿತಿ . ಅಪ್ಪ ಮಕ್ಕಳ ಹತ್ತಿರ ಏನೂ ಹೇಳಿಕೊಳ್ಳುತ್ತಿರಲಿಲ್ಲ .ಮನಸ್ಸಿನಲ್ಲೇ ನೋವುಣ್ಣುತ್ತಿದ್ದ .ಹೆಚ್ಚೆಂದರೆ ಮೂರು ಹೆಣ್ಣುಮಕ್ಕಳನ್ನೂ ತಬ್ಬಿ ಆಳುತ್ತಿದ್ದ ಅಂತಹ ಸಮಯದಲ್ಲಿ ನಮ್ಮ ಈ ಎಲ್ಲಾ ಕಷ್ಟಗಳಿಗೆ ವಾಸು ದೊಡ್ಡಪ್ಪನೇ ಕಾರಣ ಎಂಬ ಸತ್ಯ ಕಣ್ಣೆದುರು ಕುಣಿಯುತ್ತಿತ್ತು .


ಈ ಬಾರಿ ಹುಟ್ಟಿದ ಮಗು ಗಂಡಾಗಿತ್ತು .ಅಮ್ಮನ ತವರ ಮನೆಯ ನೆರವಿಲ್ಲದಿದ್ದಿದ್ದರೆ ಅಪ್ಪ ಕುಟುಂಬ ಸಮೇತ ಬೀದಿ ಪಾಲಾಗಬೇಕಿತ್ತು .ಅಲ್ಲಿಂದ ಕಷ್ಟಗಳ ಸರಮಾಲೇ ಎದುರಾಗಿತ್ತು . ಸವಿತಕ್ಕ ದೊಡ್ಡವಳಾಗಿದ್ದಳು . ಅಪ್ಪನ ದುಡಿಮೆಗೆ ಸಹಾಯಕ್ಕೆಂದು ನಿಂತಳು . ಮಳೆ , ಬೆಳೆ ಸರಿಯಾಗಿ ಆಗಲಿಲ್ಲ .ಮೋಡಗಳು ಬಡವರ ಬದುಕಿನೊಡನೆ ಆಟವಾಡುತ್ತಿದ್ದವು .ಕೈಗೆ ಬಂದಿದ್ದು ಬಾಯಿಗೆ ಬರುತ್ತಿರಲಿಲ್ಲ . ಅಪ್ಪ ಕುಟುಂಬಕ್ಕಾಗಿ ಮೂಗೆತ್ತಿನಂತೆ ದುಡಿಯುತ್ತಿದ್ದ .ಬಡತನವನ್ನು ಹೇಗೋ ಸಹಿಸಿಕೊಳ್ಳಬಹುದಿತ್ತು .ಆದರೆ , ವಾಸು ದೊಡ್ಡಪ್ಪನ ಕಿತಾಪತಿ ಸಹಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ .


ಅಪ್ಪನ ಸಂಯಮವನ್ನು ಅವನು ದುರುಪಯೋಗ ಪಡಿಸಿಕೊಳ್ಳುತ್ತಿದ್ದನೋ , ಅಪ್ಪನ ಸಂಯಮ ಅವನನ್ನು ಇನ್ನಷ್ಟು ಕೆರಳಿಸುತ್ತಿತ್ತೋ ಅಥವಾ , ಅದು ಸಂಯಮ ರೂಪದಲ್ಲಿದ್ದ ಹೇಡಿತನವೋ ಒಂದೂ ಸ್ಪಷ್ಟವಾಗುತ್ತಿರಲಿಲ್ಲ . ವಾಸು ದೊಡ್ಡಪ್ಪನಂತೂ ಅಪ್ಪನನ್ನು ಹರಿಶ್ಚಂದ್ರನನ್ನು ಬೆನ್ನತ್ತಿದ ನಕ್ಷತ್ರಿಕನಂತೆ ಕಾಡುತ್ತಲೇ ಇದ್ದ .ನಮ್ಮ ಆಸ್ತಿಯನ್ನೇ ನುಂಗಿ , ನಮಗೇ ತೊಂದರೆ ಕೊಡುತ್ತಿದ್ದ ಅವನ ದಾಷ್ಟ್ಯ ಅಮ್ಮನನ್ನು ಕೆರಳುವಂತೆ ಮಾಡುತ್ತಿತ್ತು . ಇನ್ನು ಸಹಿಸಲು ಸಾಧ್ಯವಿಲ್ಲವೆಂದಾಗ ಅಮ್ಮ ಕೆರಳಿದ ಸರ್ಪದಂತೆ ಅವನ ಮೇಲೆ ಎಗರುತ್ತಿದ್ದಳು .


ಇಂತಹ ಒಂದು ಸಣ್ಣ ಜಗಳವನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ನಮ್ಮ ಸರ್ವನಾಶ ಮಾಡಬೇಕೆಂದು ಪಣ ತೊಟ್ಟಂತೆ ಒಮ್ಮೆ ಶ್ರೀಗಂಧವನ್ನು ಕದ್ದು ಕಡಿದು ತಂದು ಕೊಟ್ಟಿಗೆಯಲ್ಲಿ ಅವಿತಿಟ್ಟು ತಾನೇ ಪೊಲೀಸರಿಗೆ ಮಾಹಿತಿ ನೀಡಿದ್ದ . ಆ ಸಮಯದಲ್ಲಿ ಅಮ್ಮನ ಹೊಟ್ಟೆ ತುಂಬಿಕೊಂಡಿತ್ತು . ಈ ಬಾರಿ ವಾಸು ದೊಡ್ಡಪ್ಪ ಮತ್ತೆ ನಾವುಗಳು ತಲೆಯೆತ್ತಲಾಗದಂತಹ ಏಟನ್ನು ಕೊಟ್ಟಿದ್ದ . ಪೊಲೀಸ್ ಜೀಪು ಮನೆಯೆದುರು ಬಂದು ನಿಂತು , ಖುದ್ದು ದೊಡ್ಡ ಸಾಹೇಬರೇ ಮುಂದೆ ನಿಂತು ತಪಾಸಣೆ ಮಾಡಲಾಗಿ ಕೊಟ್ಟಿಗೆಯಲ್ಲಿ ಅವಿತಿಟ್ಟಿದ್ದ ಶ್ರೀಗಂಧ ಪತ್ತೆಯಾಗಿತ್ತು .


ಪೊಲೀಸರು ಅಪ್ಪನನ್ನು ಒದ್ದು ಜೀಪಿಗೆ ತುಂಬಿಕೊಂಡು ಹೊರಡುವ ವೇಳೆ , ವಾಸು ದೊಡ್ಡಪ್ಪನ ತುಟಿಯಂಚಿನಲ್ಲಿ ಕಳ್ಳ ನಗು . ಮುಖದಲ್ಲಿ ಮಹತ್ತರವಾದದ್ದನ್ನು ಸಾಧಿಸಿದವನಂತೆ ತೃಪ್ತಿಯ ಚಹರೆ . ಮೂಗಿನ ಹೊಳ್ಳೆ ಬೇಟೆಗೆ ಸಿಕ್ಕಿಬಿದ್ದ ಪ್ರಾಣಿಯೊಂದರ ರಕ್ತ ಹೀರುವ ನಿರೀಕ್ಷೆಯಲ್ಲಿ ಇದ್ದಂತೆ ಅರಳಿಕೊಳ್ಳುತ್ತಿದ್ದವು . ಆ ನಗುವಿನಲ್ಲಿ ತಣ್ಣನೆ ಕ್ರೌರ್ಯ ತುಂಬಿದ ವ್ಯಂಗ್ಯ , ಭೀಕರತೆ ಅಡಗಿತ್ತು .ಕೆಲವು ಘಟನೆಗಳಲ್ಲಿ , ಕೆಲವು ಸಂದರ್ಭಗಳಲ್ಲಿ ತಾನೇಕೆ ಸಾಯುತ್ತಿರುವೆನೆಂದು ಸಾಯುತ್ತಿರುವ ವ್ಯಕ್ತಿಗೂ , ತಾನೇಕೆ ಕೊಲ್ಲುತ್ತಿರುವೆನೆಂದು ಕೊಲೆ ಮಾಡುವವನಿಗೂ ಗೊತ್ತಿರುವುದಿಲ್ಲವಂತೆ .


ಆ ದೃಶ್ಯ ಮೂವರು ಅಕ್ಕಂದಿರಿಗೂ ಜೀವನದಲ್ಲಿ ಎಂದಿಗೂ ಮರೆಯಲಾಗದ ದೃಶ್ಯವಾಗಿತ್ತು . ಆ ಘಟನೆ ನೆನಪಿಗೆ ಬಂದಾಗ ಪುಟ್ಟ ಮಕ್ಕಳಂತೆ ಅವರು ಇವತ್ತಿಗೂ ಬಿಕ್ಕಿ ಬಿಕ್ಕಿ ಅಳುವುದನ್ನು ತಾನೇ ಅನೇಕ ಬಾರಿ ಕಂಡಿದ್ದಳು . ಜೈಲು , ಕೋರ್ಟುಗಳ ನಿರಂತರ ಅಲೆತದ ನಂತರ ಮತ್ತೆ ಅಪ್ಪ ಮನೆಗೆ ಹಿಂತಿರುಗುವಾಗ ನಾಲ್ಕಾರು ವರ್ಷಗಳೇ ಹಿಡಿಸಿತ್ತು . ತಾತ ಖುದ್ದು ನಿಂತು ಹೊಲ , ಗದ್ದೆಗಳನ್ನು, ನಮ್ಮನ್ನು ರಕ್ಷಿಸಿದ್ದರು . ಅಪ್ಪನ ಮುಖದಲ್ಲಿನ ರಕ್ತ ಇಂಗಿ ಹೋದಂತಾಗಿತ್ತು . ಮನಸ್ಸು ಬಾಡಿಹೋಗಿತ್ತು .


ಅಪ್ಪ ಜೈಲಿಗೆ ಹೋಗುವಾಗ ಅಮ್ಮನ ಹೊಟ್ಟೆಯಲ್ಲಿದ್ದ ತನಗೆ , ಬಿಡುಗಡೆಯಾಗಿ ಬರುವಾಗ ಮೂರು ವರ್ಷ ತುಂಬಿತ್ತು . ಅದೇನು ಅದೃಷ್ಟವೋ ತಾನು ಹುಟ್ಟಿದ ನಂತರ ಮನೆಯಲ್ಲಿ ಸ್ವಲ್ಪ ನೆಮ್ಮದಿ ನೆಲೆಸಿತ್ತಂತೆ .ಮೊದಲೇ ಹೆಚ್ಚು ಮಾತನಾಡದ ಅಪ್ಪ ಈಗ ಮೌನಿಯಾಗಿಬಿಟ್ಟಿದ್ದ . ಇಲ್ಲಿನ ಹೊಲ , ಗದ್ದೆ , ಮನೆ ಮಾರಿ ತಮ್ಮ ಊರಿಗೆ ಬಂದುಬಿಡುವಂತೆ ತಾತ ಬಲವಂತ ಮಾಡಿದ್ದರು . ಅಮ್ಮನೂ ಮನಸೂ ಮಾಡಿದ್ದಳು . ಆದರೆ ಅಪ್ಪ ತಾನೆಂದಿಗೂ ಈ ಊರನ್ನು ಬಿಟ್ಟು ಬರುವುದಿಲ್ಲ ಎಂದುಬಿಟ್ಟಿದ್ದ .ಜೈಲಿನಿಂದ ಬಂದ ನಂತರ ಅಪ್ಪ ಹೆಚ್ಚುದಿನ ಬದುಕಲಿಲ್ಲ . ಅನಾರೋಗ್ಯದ ನೆಪವೊಡ್ಡಿ ಮನೆಯ ಮೂಲೆಯೊಂದರಲ್ಲಿ ಮಲಗಿರುತ್ತಿದ್ದ . ಇಲ್ಲವೆಂದರೆ ಹೊಲದ ಹತ್ತಿರವಿದ್ದ ಬಂಡೆ ಮೇಲೆ ಆಕಾಶದತ್ತ ನೋಡುತ್ತಾ ಕುಳಿತುಬಿಡುತ್ತಿದ್ದ .


ಬಡತನವೋ , ಸಿರಿತನವೋ ನಂದನವನದಂತಿದ್ದ ತನ್ನ ಬದುಕು ದೊಡ್ಡಪ್ಪನ ಕುಟಿಲತನಕ್ಕೆ ಈಡಾಗಿ ಕೆಲವೇ ದಿನಗಳಲ್ಲಿ ಸುಂಟರಗಾಳಿಗೆ ಸಿಲುಕಿದ ಗುಬ್ಬಚ್ಚಿ ಗೂಡಂತಾದದ್ದರ ಬಗ್ಗೆ ಅವನಿಗೆ ನೋವಿತ್ತು . ಸೂಕ್ಷ್ಮ ಮನಸ್ಸಿನ ಅಪ್ಪ ತಾನು ಮಾಡದ ತಪ್ಪಿಗೆ , ತನಗಾದ ಶಿಕ್ಷೆಗೆ ಒಳಗೊಳಗೇ ನವೆದುಹೋಗಿದ್ದ . ಕೊನೆಗೆ ಒಂದು ದಿನ ಅಪ್ಪ ನಮ್ಮನ್ನೆಲ್ಲಾ ಅನಾಥರನ್ನಾಗಿಸಿ ಕಣ್ಣು ಮುಚ್ಚಿದ್ದ . ಅಪ್ಪ ಸಾಯುವಾಗ ತಾನಿನ್ನೂ ಅಮ್ಮನ ಕಂಕುಳಲ್ಲಿದ್ದ ಕೂಸು . ಅಪ್ಪನ ಸಾವಿನ ದೃಶ್ಯದ ಕಲ್ಪನೆಯಿಂದ ಲಾವಣ್ಯಳ ಕಣ್ಣು ಹನಿಗೂಡಿದ್ದವು .ಅಪ್ಪನ ಸಂಯಮ ಬಹುಶಃ ತಮಗಾರಿಗೂ ಬರಲೇ ಇಲ್ಲಾ ....ಎಂದುಕೊಂಡು ಮಗ್ಗುಲು ಬದಲಿಸಿದಳು . ಅಪ್ಪನ ನೆನಪಿನೊಂದಿಗೆ ಗತ ಇತಿಹಾಸದ ಪುಟಗಳನ್ನು ತೆರೆದು ನೋಡುತ್ತಾ ನಿದ್ದೆ ಎಲ್ಲೋ ಮಾಯವಾಗಿತ್ತು .


ವಾಸು ದೊಡ್ಡಪ್ಪನ ಮನೆಯಲ್ಲಿ ಹೆಣ ಕಾಯಲು ಅವನ ವಿನಃ ಬೇರೆ ಯಾರೂ ಇರಲಿಲ್ಲ . ಮೊದಲೇ ಮುದಿ ಜೀವ. ಯಾವ ಹೊತ್ತಿನಲ್ಲಿ ತೂಕಡಿಸುತ್ತಾನೋ ಹೇಳಲು ಬರುವಂತಿರಲಿಲ್ಲ .ಹೆಣ ಕಾಯುವಾಗ ಯಾರೂ ಇರದಿದ್ದರೆ ಅಥವಾ ಕಾಯುವವರು ಮಲಗಿಬಿಟ್ಟರೆ ಹೆಣ ಎದ್ದು ಕೂತುಬಿಡುವುದಂತೆ . ವಾಸು ದೊಡ್ಡಪ್ಪ ಹಾಗೆ ಮಲಗಿದಾಗ , ಹೆಣ ಎದ್ದು ಕೂತುಬಿಟ್ಟಿರಬಹುದೇ ? ನೋಡಿಬರಬೇಕು ಎನಿಸಿತು . ತನಗೆ ಮೂಡಿದ ಕಲ್ಪನೆಗೆ ಒಬ್ಬ ನುರಿತ ವೈಧ್ಯೆಯಾದ ಅವಳ ಹಣೆಯಲ್ಲೂ ಬೆವರು ಮೂಡಿದಂತಾಯಿತು . ಕತ್ತಲೆಯೇ ಹಾಗೆ . ಕಣ್ಣು ಮುಂದೆ ಏನೇನೋ ವಿಚಿತ್ರ ಕಲ್ಪನೆಗಳು ಗರಿಗೆದರುವಂತೆ ಮಾಡುತ್ತದೆ , ಹೆದರಿಸುತ್ತದೆ . ಹೆದರಿದರೆ ಮತ್ತೂ ಹೆದರಿಸುತ್ತದೆ . ಹೆದರದೆ ಎದುರಿಸಿದರೆ ಕತ್ತಲು ಕೇವಲ ಕತ್ತಲಾಗಿಯೇ ಉಳಿಯುತ್ತದೆ .






ದಾಯಾದಿ ದ್ವೇಷ ಅಂತಹ ಪ್ರಭಲವಾದ ವಿಷಬೆರುಗಳುಳ್ಳದ್ದೇ ....?? ವಾಸು ದೊಡ್ಡಪ್ಪ ವಿನಾ ಕಾರಣ ಏಕೆ ಅಷ್ಟೊಂದು ಕಾಡಿದ ? ನಮಗೆ ತೊಂದರೆಗೀಡು ಮಾಡುವುದರಿಂದ ಅವನಿಗೇನು ಲಾಭವಿತ್ತು ? ವಿಕೃತ ಆನಂದವೇ ? ವಿಕೃತ ಮನಸ್ಸು ಮನುಷ್ಯನನ್ನು ಎಂತಹ ನೀಚ ಮಟ್ಟಕ್ಕೂ ಇಳಿಸಬಲ್ಲದೇ ?! ಅವನು ನಮ್ಮ ಮೇಲೆ ಏಕೆ ಹಾಗೆ ಹಗೆ ಸಾಧಿಸಿದ ? ಮನುಷ್ಯ ಮನುಷ್ಯನ ನಡುವಿನ ಸಂಬಂಧಗಳು ಕೆಲವೊಮ್ಮೆ ಏಕೆ ಇಂತಹ ಕ್ರೂರ ಸ್ವರೂಪ ಪಡೆದುಬಿಡುತ್ತವೆ ?


ನಡೆಯುವಷ್ಟು ದಿನಗಳು ದೊಡ್ಡಮ್ಮ ಮಹಾರಾಣಿಯಂತೆ ಮೆರೆದಳು . ದೊಡ್ಡಮ್ಮನೆಂದರೆ ಮೈತುಂಬಾ ಆಭರಣ ತೊಟ್ಟು , ದುಬಾರಿ ಜರತಾರಿ ಸೀರೆಯನ್ನುಟ್ಟು ಬೇಕೆಂದೇ ನಮ್ಮನ್ನು ಕೀಳು ಮಟ್ಟಕ್ಕೆ ಇಳಿಸಿ ಮಾತನಾಡಿಸುತ್ತಿದ್ದ ಬಿಂಕದ ಸಿಂಗಾರಿಯ ಚಿತ್ರವೇ ಇಂದಿಗೂ ಕಣ್ಣು ಮುಂದೆ ಬರುವುದು . ಅವರಿವರೆದುರು ನಮ್ಮನ್ನು ಹಂಗಿಸಿ , ಹೀಯಾಳಿಸಿ ಮಾತನಾಡುವುದೇ ಅವಳ ಮುಖ್ಯ ಕಸುಬಾಗಿತ್ತು . ಈಗ ಸತ್ತು ಮಲಗಿರುವ ಅವಳು ಇದ್ದಷ್ಟೂ ದಿನ ನಮ್ಮನ್ನ ಹಂಗಿಸಿ ಏನು ಸಾಧಿಸಿದ ಹಾಗಾಯಿತು ? ಮಣ್ಣಿಗೆ ಹೋಗುವ ಜೀವವೇ ನಿನಗೇಕಿಷ್ಟು ಹೀನ ನಡೆ ಎಂದುಕೊಂಡಳು ಲಾವಣ್ಯ . ಮೆದುಳಿನ ನರಗಳಲ್ಲಿ ಏನೇನೋ ವಿಚಾರ ಬಂದು ಹೋದವು .


ಊರಲ್ಲಿ ಒಬ್ಬ ಹುಚ್ಚನಿದ್ದ .ಅವನನ್ನು ಎಲ್ಲರೂ ಹುಚ್ಚ ಎಂತಲೇ ಕರೆಯುತ್ತಿದ್ದು , ಅವನ ಅಸಲಿ ಹೆಸರು ಏನೆಂಬುದು ಯಾರಿಗೂ ಗೊತ್ತಿರಲಿಲ್ಲ . ಒಂದಿನ ಎಲ್ಲಿಂದಲೋ ಹಾರವನ್ನೂ , ಮೂರುಕಾಸಿನ ಬಾಸಿಂಗವನ್ನೂ ಸಂಪಾದಿಸಿ ಹಣೆಗೆ ಕಟ್ಟಿಕೊಂಡು ತಮ್ಮ ಮನೆಯ ಜಗುಲಿಯ ಮೇಲೆ ಬಂದು ಕುಳಿತುಬಿಟ್ಟಿದ್ದ . ಇದ್ಯಾವ ಗ್ರಹಚಾರ ಬೆಳಿಗ್ಗೆಯೇ ವಕ್ಕರಿಸಿತು ಎಂದರೆ , " ನನಗೆ ಸವಿತ ಬೇಕು . ನಾನು ಅವಳನ್ನು ಮದುವೆ ಆಗ್ತೀನಿ " ಎಂದು ಒಂದೇ ಸಮನೆ ಕಂಠಪಾಟ ಮಾಡಿದವನಂತೆ ಉರು ಹೊಡೆಯತೊಡಗಿದ .


ಏನು ಮಾಡಿದರೂ ಜಗುಲಿಯಿಂದ ಮೇಲೆ ಏಳಲೊಲ್ಲ . ಇವೆಲ್ಲಾ ದೊಡ್ಡಪ್ಪನದೇ ಕಿತಾಪತಿ ಎಂದು ತಿಳಿದರೂ ನಾವು ಏನೂ ಮಾಡುವಂತಿರಲಿಲ್ಲ .ಅವನನ್ನು ಪುಸಲಾಯಿಸಿ , ಗದರಿಸಿ ಅಲ್ಲಿಂದ ಎಬ್ಬಿಸಿ ಕಳುಹಿಸುವಷ್ಟರಲ್ಲಿ ಸಾಕುಬೇಕಾಗಿತ್ತು . ಮನೆಯ ಮುಂದಿನ ತಮಾಷೆಯನ್ನು ಊರಜನ ನೋಡಿ ನಕ್ಕಿದ್ದಾಗಿತ್ತು . ಅವಮಾನದಿಂದ ಕುಗ್ಗಿಹೋಗಿದ್ದ ಸವಿತಕ್ಕ ಮನೆಯೊಳಗೆ ಅಳುತ್ತಾ ಕುಳಿತವಳು ಹದಿನೈದು ದಿನ ಹೊರ ಬಂದಿರಲಿಲ್ಲ . ಮುಂದೆ ಸವಿತಕ್ಕಳನ್ನು ಅಮ್ಮನ ಕೊನೆಯ ತಮ್ಮ ಚಂದ್ರು ಮಾಮನೇ ಕೈಹಿಡಿದಿದ್ದ . ಗಂಡು ದಿಕ್ಕಿಲ್ಲದ ನಮ್ಮ ಮನೆಗೊಂದು ಆಸರೆಯಾಗಿದ್ದ . ಪಕ್ಕದ ಹಳ್ಳಿಯಲ್ಲಿ ಶಾಲಾ ಮಾಸ್ತರನಾಗಿದ್ದ ಚಂದ್ರು ಮಾಮನಿಗೆ ಒಳ್ಳೆಯ ಹೆಸರಿತ್ತು . ಮನೆಯ ಮುಂದಿನ ವ್ಯವಹಾರಗಳು ಅವನ ಉಸ್ತುವಾರಿಯಲ್ಲಿಯೇ ನಡೆಯಿತು .


ಶೈಲಕ್ಕನಿಗೆ ಸಿಕ್ಕಿದ ಗಂಡು ಸರ್ಕಾರಿ ಕಚೇರಿಯೊಂದರಲ್ಲಿ ಗುಮಾಸ್ತನಾಗಿದ್ದ . ಸರೋಜಕ್ಕನಿಗೆ ಸಿಕ್ಕಿದ ಗಂಡು ಸ್ವಂತ ವ್ಯವಹಾರ ನಡೆಸುತ್ತಿದ್ದ . ಮನೆಯಲ್ಲಿ ಮೂರು ಮದುವೆಗಳು ಜರಗುವಷ್ಟರಲ್ಲಿ ಅಣ್ಣನ ಮೀಸೆ ಚಿಗುರಿತ್ತು . ಓದು ತಲೆಗೆ ಹತ್ತದ ಅವನು ಒಳ್ಳೆ ರೈತನಾಗಿದ್ದ . ರಾಜಕೀಯದಲ್ಲಿ ಮಿಂಚತೊಡಗಿದ್ದ . ಸದ್ಯ ತಾಲ್ಲೂಕು ಪಂಚಾಯತಿ ಸದಸ್ಯನಾಗಿ ಕಣ್ಣುಗಳಲ್ಲಿ ಏನೇನೋ ಕನಸುಗಳನ್ನು ತುಂಬಿಕೊಂಡಿದ್ದ . ಅವನಿಗೆ ರಾಜಕೀಯ ವಲಯದಲ್ಲೇ ಒಳ್ಳೆಯ ಕಡೆ ಸಂಬಂಧ ಕುದುರಿತ್ತು . ಅವನ ಜೀವನದಲ್ಲಾಗಲೇ ಮಹತ್ವಾಕಾಂಕ್ಷೆ ಚಿಗುರತೊಡಗಿತ್ತು . ಇಷ್ಟೆಲ್ಲದರ ಮಧ್ಯೆ ಬೆಳಗಿನ ಜಾವದ ಕನಸಿನಂತೆ ತನಗೆ ಮೆರಿಟ್ ನಲ್ಲಿ ಮೆಡಿಕಲ್ ಸೀಟು ಸಿಕ್ಕಿ , ವೈದ್ಧ್ಯೆಯಾಗಿ ಮುಂದೆ ಎಂ ,ಡಿ ,ಸೀಟು ದೊರೆತು ತನ್ನ ಉನ್ನತ ಶಿಕ್ಷಣ ಮುಗಿದಿತ್ತು . ಮೆಚ್ಚಿದ ವರನೇ ತನಗೆ ಸಿಕ್ಕು ಉಜ್ವಲ ಭವಿಷ್ಯಕ್ಕೆ ನಾಂದಿಯಾಗಿತ್ತು . ಕಷ್ಟದ ದಿನಗಳು ಕರಗಿ ಸುಖದ ಕ್ಷಣಗಳು ನಮ್ಮೆಲ್ಲರ ಪಾಲಿಗೆ ದೊರೆತಿತ್ತು .ಅಪ್ಪ ಇಲ್ಲ ಎಂಬ ಕೊರಗು ಬಿಟ್ಟರೆ ಉಳಿದದ್ದೆಲ್ಲವೂ ಸುಖಾಂತವಾಗಿತ್ತು .


ನಮ್ಮ ಕಣ್ಣ ಮುಂದೆಯೇ ವಾಸು ದೊಡ್ಡಪ್ಪನ ಅಣ್ಣ ತಮ್ಮಂದಿರು ಬೇರೆ ಬೇರೆಯಾದರು . ಅವರಲ್ಲಿ ಈಗ ಒಬ್ಬರ ತಲೆ ಕಂಡರೆ ಒಬ್ಬರಿಗಾಗುತ್ತಿರಲಿಲ್ಲ . ತಮ್ಮಂದಿರ ಬಲವಿದ್ದಾಗ ಮೀಸೆ ತಿರುವುತ್ತಿದ್ದ ವಾಸು ದೊಡ್ಡಪ್ಪ ಈಗ ಖಿನ್ನನಾಗಿದ್ದ . ಅವನ ರಾಜಕೀಯ ಭವಿಷ್ಯ ಎಂದೋ ಮಣ್ಣು ಪಾಲಾಗಿ ಇದ್ದ ಬಂಗಾರದಂತಹ ಹೊಲ , ಗದ್ದೆ ಕಂಡವರ ಪಾಲಾಗಿತ್ತು .ಜೀವಮಾನದ ಅಮೂಲ್ಯ ಕಾಲವನ್ನು ಕೋರ್ಟು ,ಕಚೇರಿಗಳಲ್ಲೇ ಕಳೆದು , ಉಳಿದಿದ್ದ ತುಂಡು ಜಮೀನಿನಲ್ಲಿ ಜೀವನ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಬಂದೊದಗಿತ್ತು .


ಇದ್ದ ಒಬ್ಬ ಮಗ ಸುಬ್ರಾಯ ಸಿನಿಮಾದ ಹುಚ್ಚಿನಲ್ಲಿ ಕೊಚ್ಚಿಹೋಗಿದ್ದ . ಅವನ ಪಾಲಿಗೆ ಸಿನಿಮಾ ಕನಸಿನ ಗಂಟಾಗಿ ಕೊನೆಗೆ ಯಾವುದೋ ವೃತ್ತಿ ನಿರತ ಕಂಪನಿಯೊಂದರಲ್ಲಿ ನಾಯಕನ ಪಾರ್ಟು ಮಾಡುವುದರೊಂದಿಗೆ ತಾನೂ ಒಬ್ಬ ಕಲಾವಿದನಾಗಲು ಹೆಣಗುತ್ತಿದ್ದ . ಅದೇ ನಾಟಕದ ಕಂಪನಿಯಲ್ಲಿ ಇರುವವಳನ್ನೇ ಕಟ್ಟಿಕೊಂಡಿದ್ದಾನೆಂಬ ಸುದ್ದಿಯೂ ಇತ್ತು . ಅಷ್ಟ ಐಶ್ವರ್ಯ ತುಂಬಿದ್ದ ಒಬ್ಬಳೇ ಮಗಳು ಜಲಜಾಳನ್ನು ಬಯಸಿ ಬಂದ ವರಗಳನ್ನು ತಾಯಿ ಮಗಳು ಒಪ್ಪದೇ ಒಳ್ಳೆ ಸಂಬಂಧಗಳು ಕೈತಪ್ಪಿದ್ದವು . ಯಾವುದೋ ರಾಜಕುಮಾರನ ಬರುವಿಕೆಯ ನಿರೀಕ್ಷೆಯಲ್ಲಿದ್ದವಳಿಗೆ ಕನಸಿನಿಂದ ಎಚ್ಚರವಾಗುವಷ್ಟರಲ್ಲಿ ಕಾಲ ಸರಿದಿತ್ತು . ಇತ್ತ ವಿದ್ಯಾಭಾಸವಿಲ್ಲದೆ , ಅತ್ತ ವಿವಾಹವಿಲ್ಲದೆ ಕೊನೆಗೊಂದು ದಿನ ಊರಿನ ಯಾವನೋ ನಾಗರಾಜನೊಂದಿಗೆ ಓಡಿಹೋಗಿದ್ದಳು . ನಂತರ ಅವಳ ಸುದ್ದಿ ತಿಳಿದಿರಲಿಲ್ಲ . ವಾಸು ದೊಡ್ಡಪ್ಪ ಅದೆಷ್ಟು ಮನೆ ಹಾಳುಮಾಡಿದ್ದನೋ ? ಅವನ ಕಣ್ಣೆದುರೇ ಅವನ ಮನೆ ಸರ್ವನಾಶದ ಅಂಚಿನಲ್ಲಿತ್ತು .



ಲಾವಣ್ಯಳಿಗೆ ಇನ್ನು ಮಲಗಿರಲು ಸಾಧ್ಯವಾಗಲಿಲ್ಲ . ಬದುಕಿದ್ದಾಗ ಜೀವನ ಪ್ರೀತಿಸದೇ ಹೋದವರ , ಪ್ರೀತಿಸಲಾಗದವರ ಕಣ್ಣುಗಳಿಂದ ಪ್ರೀತಿ ಹುಟ್ಟಿಸುವುದಾದರೂ ಹೇಗೆ ? ಎದುರಿನ ಗೋಡೆಯಲ್ಲಿ ತೂಗು ಹಾಕಿದ್ದ ಅಪ್ಪನ ಭಾವಚಿತ್ರ ಒಂದು ವಿಚಾರದ ಪ್ರತಿಬಿಂಬದಂತೆ ಕತ್ತಲಿನಲ್ಲಿ ಉರಿಯುತ್ತಿರುವ ಸಣ್ಣ ದೀಪದಂತೆ ಅದು ತನ್ನಷ್ಟಕ್ಕೇ ಬೆಳಗುತ್ತಿರುವಂತೆ ಭಾಸವಾಯಿತು . ಒಂದು ಕ್ಷಣ , " ಜೀವನದಲ್ಲಿ ಯಾವ ಸಂಬಂಧಗಳೂ ಶಾಶ್ವತವಲ್ಲ ....., ಯಾವುದೂ ಶಾಶ್ವತವಲ್ಲ ......" ಎನಿಸಿತು . ಗಡಿಯಾರದತ್ತ ಕಣ್ಣು ಹಾಯಿಸಿದಳು . ಆಗಲೇ ನಾಲ್ಕರ ಜಾವ . ಎದ್ದು ಮುಖಕ್ಕೆ ನೀರು ಹಾಕಿಕೊಂಡು ಶಾಲನ್ನು ಹೊದ್ದು ಕೈಯಲ್ಲಿ ಟಾರ್ಚ್ ಹಿಡಿದು ವಾಸು ದೊಡ್ಡಪ್ಪನ ಮನೆಯತ್ತ ಹೆಜ್ಜೆ ಹಾಕಿದಳು .


" ಒಬ್ಬಳೇ ಹೋಗಬೇಡ . ನಾನೂ ಬರ್ತೀನಿ ತಡೆ ........" ಎಂದು ಬಾಲಚಂದ್ರನೂ ಜೊತೆಗೂಡಿದ . ಅಣ್ಣನಲ್ಲಿ ಕಂಡು ಬಂದ ದಿಢೀರ್ ಬದಲಾವಣೆ ಲಾವಣ್ಯಳನ್ನು ಮೂಕಳನ್ನಾಗಿಸಿತ್ತು . ಬೆಳಕು ಹರಿಯುವಷ್ಟರಲ್ಲಿ ಒಬ್ಬೊಬ್ಬರೇ ಬರತೊಡಗಿದ್ದರು . ಸುಬ್ರಾಯ ಎಲ್ಲಿರುವನೆಂದು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ . ದೊಡ್ಡಪ್ಪನ ಅನುಮತಿಯ ಮೇರೆಗೆ ಹೆಣವನ್ನು ಸಾಗಿಸಲಾಯಿತು . ಅಣ್ಣ ಮಾಡಿದ್ದ ಏರ್ಪಾಡು ವ್ಯವಸ್ಥಿತವಾಗಿದ್ದವು . ಬೆಂಕಿ ಇಟ್ಟರೆ ಶ್ರಾದ್ಧದ ಎಲ್ಲ ಖರ್ಚು ಎಲ್ಲಿ ತಮ್ಮ ತಲೆಮೇಲೆ ಬೀಳುತ್ತದೋ ಎಂದು ತಮ್ಮಂದಿರಾಗಲೀ ಅವರ ಮಕ್ಕಳಾಗಲೀ ಮುಂದೆ ಬರಲಿಲ್ಲ .


ವಾಸು ದೊಡ್ಡಪ್ಪ ಅಣ್ಣನಿಗೆ ಕಂಬನಿಗೆರೆಯುತ್ತಾ ಕೈ ಮುಗಿದ . ಅಣ್ಣನಿಗೆ ಏನೆನ್ನಿಸಿತೋ , ತಲೆ ಬೋಳಿಸಿಕೊಂಡು ಚಿತೆಗೆ ಬೆಂಕಿ ಇಟ್ಟ . ಚಿತೆ ಹತ್ತಿ ಉರಿಯತೊಡಗಿದಂತೆಲ್ಲಾ ಮನಸ್ಸಿನಲ್ಲಿನ ಉರಿ ಆರತೊಡಗಿತ್ತು . ಈಗ ಅಲ್ಲಿ ಇಳಿ ಸಂಜೆಯ ಹೊಂಬಿಸಿಲಿನಂತೆ ಮನಸ್ಸು ಶಾಂತವಾಗಿತ್ತು . ಅಣ್ಣ ಏನೋ ಧ್ಯಾನಿಸಿ ಕಣ್ಣು ಮುಚ್ಚಿದ . ಲಾವಣ್ಯ ಅಣ್ಣನ ಹೆಗಲುಮುಟ್ಟಿ ಸಂತೈಸಿದಳು . ಚಿತೆ ಧಗಧಗನೆ ಹತ್ತಿ ಉರಿಯತೊಡಗಿತ್ತು . ಸಂಬಂಧಿಕರು ಇನ್ನು ತಾವು ಬಂದ ಕೆಲಸವಾಯಿತು ಎಂಬಂತೆ ಒಬ್ಬೊಬ್ಬರೇ ಚದುರತೊಡಗಿದರು . ಉರಿಯುತ್ತಿದ್ದ ಚಿತೆಯ ಮುಂದೆ ದೊಡ್ಡಪ್ಪ , ಬಾಲಚಂದ್ರ , ಲಾವಣ್ಯ ಮೂವರೂ ನಿಂತೆ ಇದ್ದರು .


Rate this content
Log in

Similar kannada story from Tragedy