ಹೃದಯ ಸ್ಪರ್ಶಿ

Drama Tragedy Classics

4.5  

ಹೃದಯ ಸ್ಪರ್ಶಿ

Drama Tragedy Classics

ಅನುರಾಗ ಪಲ್ಲವಿ

ಅನುರಾಗ ಪಲ್ಲವಿ

4 mins
700ಪಡುವಣ ಕಡಲಿನ ಮಡಿಲೊಳಗಿಳಿಯುತಾ ಮರೆಯಾದನು ದಿನಕರ ತನ್ನ ದಣಿವನು ಕಳೆಯಲು. ಹಕ್ಕಿಗಳೆಲ್ಲಾ ಗೂಡು ಸೇರುತ್ತಲೇ ಮನೆಯಿಂದ ಹೊರಗಡಿ ಇಟ್ಟಿದ್ದರು ಅನುಷ್ ಮತ್ತು ಪಲ್ಲವಿ. ಕಾಲಚಕ್ರದ ಸುಳಿಯಲಿ ಸಿಲುಕಿ ಸೋತು ನಿಂತ ಕಾಲುಗಳನ್ನು ಎಳೆಯುತ್ತಲೇ ಸಾಗಿತ್ತು ಅವರ ಪಯಣ ಸಮಾಧಿಯೆಡೆಗೆ. ಅಂದು ಜೊತೆಯಾಗಿ ನಡೆದ ಹೆಜ್ಜೆಗಳಿಂದು ನೆನಪಿನ ಪುಟ ಸೇರಿ, ಒಂಟಿ ಯಾತನೆಯಲಿ ಸ್ತಬ್ಧವಾಗಿದೆ. ನೂರು ನೆನಪುಗಳು ಕೈ ಬೀಸಿ ಕರೆಯುತಿರೆ ಮೂಕವಾಗಿರುವ ಮನಸಲಿ ಮತ್ತೊಮ್ಮೆ ಮಾತುಗಳ ಬಯಕೆ ಮೂಡಿದೆ. ಆದರೆ ಈಡೇರದ ಬಯಕೆಯ ಅರಿತು ಮತ್ತೆ ಮನಸ್ಸು ತನ್ನನ್ನು ತಾನೇ ಅಣಕಿಸಿ ನಕ್ಕಿದೆ...ಕೈ ಕೈ ಹಿಡಿದು ಜೊತೆಯಾಗಿ ನಡೆದರೂ ಇಬ್ಬರ ನಡುವೆ ಯಾವುದೇ ಮಾತುಕಥೆಯಿಲ್ಲ. ಇಬ್ಬರ ಮನಸ್ಸೂ ಯಾರದೋ ಮೂರನೇ ವ್ಯಕ್ತಿಯ ನೆನಪಲ್ಲಿ ಲೀನವಾಗಿದೆ. ಇಬ್ಬರ ಪಯಣ, ಗುರಿ ಮತ್ತು ಆಲೋಚನೆಗಳು ಒಂದೇ ಕಡೆಗೆ.! ಪಿಸು ಮಾತು, ಹುಸಿ ಕೋಪ, ಮುಗುಳ್ನಗು, ಮುತ್ತಿಕ್ಕುವ ಮುಂಗುರುಳು, ಗಾಳಿಯ ತಾಳಕ್ಕೆ ಹೆಜ್ಜೆ ಹಾಕುವ ಸೆರಗು... ಇಂದು ಕೇವಲ ನೆನಪು ಮಾತ್ರ..!!


ಹೈಸ್ಕೂಲ್ ಶಿಕ್ಷಣದ ಮೊದಲ ವರ್ಷದಲಿ ಪರಿಚಯವಾದವಳು ಅವಳು. ಪರಿಚಯ ಯಾವಾಗ ಸ್ನೇಹಕ್ಕೆ ತಿರುಗಿ, ಆ ಸ್ನೇಹ ಬಿಡಲಾರದಂತೆ ಮೂವರನ್ನು ಅದ್ಹೇಗೆ ಬಂಧಿಸಿತೋ ಯಾರ ಅರಿವಿಗೂ ಬಂದಿರಲಿಲ್ಲ. ಅವಳು, ಬಿಟ್ಟಿರಲಾರದಂತೆ ಬೆಸೆದ ಸ್ನೇಹದ ಬಂಧವನ್ನು ಕಳಚಿಕೊಂಡು ಅವರಿಂದ ದೂರ ನಡೆದು ಇಂದಿಗೆ ಸರಿ ಸುಮಾರು ಮೂರು ವರುಷಗಳೇ ಸಂದಿವೆ. ಆದರೆ ಅವಳ ನೆನಪಿನ್ನೂ ಮನದಂಗಳದ ತುಂಬಾ ಹಚ್ಚ ಹಸಿರಾಗಿವೆ. ಮಾನವೀಯತೆಯ ಎಲ್ಲೆ ಮೀರಿ, ರಕ್ಕಸತನದ ತೆಕ್ಕೆ ಸೇರಿ ನರಳಿ ಬಾಡಿದ ಹೂವಿನ ಕಂಪು ಇಂದಿಗೂ ಇಲ್ಲೇ ಎಲ್ಲೋ ಇರುವಂತೆ ಘಮಿಸುತ್ತಿದೆ. ಹೆಣ್ಣು ಹೆತ್ತ ತಾಯಿ, ಹೊತ್ತ ಭೂಮಿ ಎಂದು ಮರೆತಿರುವ ಗಂಡು ಎಂಬ ಪ್ರಾಣಿಯ ಅತ್ಯಾಚಾರಕ್ಕೆ ಬಲಿಯಾಗಬೇಕಿದ್ದ ಗೆಳತಿಯ ಜೀವನ ರಕ್ಷಿಸಿ ತನ್ನ ಜೀವನ ಪಣಕ್ಕಿಟ್ಟ ಅವಳ ಜೀವನವೇ ಒಂದು ಮಧುರ ಗೀತೆ.


ಅನುಷ್, ಪಲ್ಲವಿ ಮತ್ತು ಅವಳು... ಒಂದೇ ಜೀವ-ಮೂರು ದೇಹದಂತೆ ಬದುಕಿದವರು. ಸರಿ ಸುಮಾರು ಒಂಬತ್ತು ವರ್ಷ.!!


ಸದಾ ಉಲ್ಲಾಸ, ಉತ್ಸಾಹದ ಚಿಲುಮೆ. ಬತ್ತಿದೆದೆಗೆ ಭಾವಜಲವೆರೆದು ಆಸೆಗಳ ಚಿಗುರಿಸೋ ಅವಳಿಗೆ, ಬರಡು ಬಂಜರಿನಲ್ಲಿ ಹಸಿರು ಬೆಳೆಸಿ ನೊಂದವರ ಬಾಳಿಗೆ ಬೆಳಕಾಗಿ ನಿಲ್ಲಬೇಕೆಂಬುದೇ ಆಸೆ. ಅದೇ ಅವಳ ಜೀವನದ ಕನಸು ಮತ್ತು ಉದ್ದೇಶವಾಗಿತ್ತು.! ಮುದ್ದು ಮನದ ಚೆಲುವೆ ರಾಗ.

ಕರುಣೆಯಿಲ್ಲದ ಕಾಲ, ಕೈ ಬೀಸಿ ಕರೆಯುವ ಋಣದ ಸಾಲ.. ಯಾರ ಅನುಮತಿಗೂ ಕಾಯದೆ ಕತ್ತನ್ನು ಹಿಸುಕಿಯೇ ಬಿಟ್ಟಿತ್ತು. ಎಲ್ಲೆಲ್ಲೂ ಕವಿದ ಕಾರ್ಮೋಡಗಳ ಅಬ್ಬರಕ್ಕೆ ಅವಳ ಜೀವನ ಬರಿದಾಗಿತ್ತು ಒಂದೇ ಕ್ಷಣದಲ್ಲಿ.!!


ಅಂದು ಕಾಲೇಜಿನಲ್ಲಿ ಅಂತಿಮ ದಿನ. ಎಲ್ಲರ ಮನದಲ್ಲೂ ಎಲ್ಲೋ ಒಂದು ಕಡೆ ಬೇಸರವಿದ್ದರೆ ಮತ್ತೊಂದು ಕಡೆ ತಮ್ಮ ಜೀವನದಲ್ಲಿ ಒಂದು ಹಂತಕ್ಕೆ ತಲುಪಿದ ಸಂತಸ. ಈ ಮೂವರು ಗೆಳೆಯರೂ ತಮ್ಮ ಖುಷಿ, ಬೇಸರವನ್ನು ಪರಸ್ಪರ ಹಂಚಿಕೊಂಡು ತಮ್ಮ ತಮ್ಮ ಮನೆ ಸೇರಿದ್ದರು. ಅಲ್ಲಿಂದ ಬದಲಾಗಿತ್ತು ಮೂವರ ಜೀವನ. ಅಲ್ಲಿಯವರೆಗೆ ಸುಮ್ಮನಿದ್ದ ವಿಧಿಯೆಂಬ ಸೂತ್ರಧಾರ ಮೆಲ್ಲನೇ ತನ್ನ ಜಾಲ ಬೀಸಿ ಬಿಟ್ಟಿದ್ದ. ಮಗಳ ವಿದ್ಯಾಭ್ಯಾಸಕ್ಕಾಗಿ ಊರ ಜಮೀನುದಾರರಿಂದ ಕೊಂಡು ತಂದಿದ್ದ ಸಾಲದ ಹಣ ಅಂದು ಪಲ್ಲವಿಯ ಜೀವನಕ್ಕೆ ಉರುಳಾಗಿತ್ತು. ಸಾಲ ತೀರಿಸಲಾಗದ ತಂದೆ ಕೊನೆಯ ಕ್ಷಣದಲ್ಲಿ ಬೇರೆ ದಾರಿಯಿಲ್ಲದೆ ಅವನ ಶರತ್ತಿಗೆ ಒಪ್ಪಿಗೆ ನೀಡಿ ಮನೆಗೆ ಬಂದಿದ್ದರು.


ಅದೇ ದಿನ ಆಕಸ್ಮಿಕವೋ ಅಥವಾ ವಿಧಿ ನಿರ್ಣಯವೋ ಎಂಬಂತೆ ಪಲ್ಲವಿ ಮನೆಗೆ ಬಂದಿದ್ದಳು ರಾಗ. ಮುಂಜಾನೆಯಿಂದ ಮಧ್ಯಾಹ್ನದವರೆಗೆ ಹೆಚ್ಚು ಕಮ್ಮಿ ಯಾವುದೇ ಸಮಸ್ಯೆ ಇಲ್ಲದೆ ಸಾಗಿದ ಸಮಯ ಪಲ್ಲವಿಯ ತಂದೆ ಮನೆ ಸೇರುತ್ತಲೇ ಸ್ಫೋಟಗೊಂಡಿತ್ತು. ತಂದೆಯ ಮಾತು ಕೇಳಿ ಕುಸಿದು ಕುಳಿತ ಗೆಳತಿಗೆ ಧೈರ್ಯ ತುಂಬಿದ ರಾಗ, ಪಲ್ಲವಿಯ ಮನೆಯವರಲ್ಲಿ ವಿಧ ವಿಧವಾಗಿ ಬೇಡಿಕೊಂಡಿದ್ದಳು ಪೋಲಿಸರಿಗೆ ದೂರು ದಾಖಲಿಸುವಂತೆ! ಆದರೆ ಜಮೀನುದಾರನ ವಿರುದ್ಧ ಕೇಸ್ ಫೈಲ್ ಮಾಡಿದರೆ ಮುಂದಿನ ಜೀವನ ಸಾಗಿಸುವುದು ಕಷ್ಟ ಎಂದರಿವಿದ್ದ ಮನೆಯವರು ಮಗಳ ಜೀವನವನ್ನು ಬಲಿ ಪಶು ಮಾಡಲು ತಯಾರಾಗಿದ್ದರು. ಇನ್ನಿವರಲ್ಲಿ ಮಾತನಾಡಿ ಫಲವಿಲ್ಲ ಎಂದರಿತ ರಾಗ ಯಾರಿಗೂ ಅರಿವಿಲ್ಲದಂತೆ ಗೆಳತಿಯನ್ನು ಅಲ್ಲಿಂದ ನಗರದಲ್ಲಿರೋ ಅನುಷ್ ಮನೆಗೆ ಕಳುಹಿಸುವಲ್ಲಿ ಸಫಲಗೊಂಡಿದ್ದಳು. ಆದರೆ ವಿಧಿ ಇಲ್ಲಿ ಬೇರೆಯದೇ ಕಾರ್ಯ ತಂತ್ರ ರಚಿಸಿರುವುದನ್ನು ಅರಿಯುವಷ್ಟು ಪ್ರಬುದ್ಧತೆ ಮನುಷ್ಯನಿಗೆ ಎಲ್ಲಿರಬೇಕು...?


ಜಮೀನುದಾರನ ಆಸೆಯಂತೆ ಒಂದು ರಾತ್ರಿಗೆ ಅವನ ಮನದರಸಿಯಾಗಿಸುವ ಸಲುವಾಗಿ ಕರೆದುಕೊಂಡು ಹೋಗಲು ಬಂದ ಜನರಿಗೆ ಪಲ್ಲವಿ ಮನೆಯಲ್ಲಿ ಇಲ್ಲ ಎಂಬ ಸತ್ಯ ತಿಳಿಯಲು ತುಂಬಾ ಸಮಯ ಬೇಕಾಗಲಿಲ್ಲ. ವಿಷಯ ತಿಳಿದ ಜಮೀನುದಾರ ಪಲ್ಲವಿಯ ಮನೆಯವರ ಮೇಲೆಯೇ ದಂಡೆತ್ತಿ ಬಂದಿದ್ದ. ಯಾರೆಷ್ಟೇ ಹೇಳಿದರೂ, ಕೇಳಿಕೊಂಡರೂ ಮನ ಕರಗದ ಜಮೀನುದಾರನ ಕಣ್ಣು ಮೊದಲಿನಿಂದಲೂ ಪಲ್ಲವಿಯ ಮೇಲಿದ್ದಿದ್ದು ಊರ ಮುಂದೆ ಜಗಜ್ಜಾಹೀರಾಗಿತ್ತು. ಅದೇ ಕಾರಣಕ್ಕೆ ಕೇಳಿದಂತೆಲ್ಲಾ ಅವನು ಸಾಲ ನೀಡುತ್ತಿದ್ದ ಎಂಬುದು ಬಹಿರಂಗವಾಗಿತ್ತು..!!


ಮನೆ ಮಂದಿಯ ಗೋಳಾಟ ನೋಡಲಾಗದೆ ಒಂದು ಕ್ಷಣಕ್ಕೆ ಗೆಳತಿಯನ್ನು ಇಲ್ಲಿಂದ ಕಳುಹಿಸಿ ತಪ್ಪು ಮಾಡಿದೆನೇನೋ ಎಂದೆನಿಸಿದರೂ ಮತ್ತೊಂದು ಕ್ಷಣದಲ್ಲಿ ತಾನು ಮಾಡಿದ್ದೇ ಸರಿ, ಇವನ ದುರುದ್ದೇಶಕ್ಕೆ ಗೆಳತಿಯ ಜೀವನ ಹಾಳಾಗುವುದು ತಪ್ಪಿತು ಎಂದರಿವಾಗಿ ಸುಮ್ಮನೇ ನಿಂತಳು ರಾಗ. 


ಮೂಲೆಯಲಿ ನಿಂತ ರಾಗಳ ಚೆಲುವು ಅವನ ಕಣ್ಮನ ಸೆಳೆಯಲು ತಡವಾಗಲಿಲ್ಲ. ಅವಳಿಲ್ಲದಿದ್ದರೇನು? ಇವಳು ಬರಲಿ..! ಎಂಬ ಅವನ ಮಾತಿಗೆ ಕೋಪಗೊಂಡ ರಾಗ ಅವನಿಗೆ ಎದುರು ಮಾತನಾಡಿದ್ದೂ ಅಲ್ಲದೇ, ಕೈ ಹಿಡಿಯಲು ಬಂದವನಿಗೆ ಕಪಾಳ ಮೋಕ್ಷ ಮಾಡಿದ್ದಳು ಊರ ಜನರ ಮುಂದೆ. ಆ ಕೋಪಕ್ಕೆ ಪಲ್ಲವಿಯ ಮನೆ ಮಂದಿಯನ್ನು ಗುರಿ ಮಾಡಿದ್ದ ನಪುಂಸಕ. ಆದರೆ ಅದಕ್ಕೆಲ್ಲಾ ಬೆದರೋ ಹುಡುಗಿ ಅವಳಾಗಿರಲಿಲ್ಲ...! ಅದನ್ನು ತಿಳಿದ ಕ್ರೂರಿ ತನ್ನ ಕೊನೆಯ ಅಸ್ತ್ರ ಎಂಬಂತೆ ಪಲ್ಲವಿಯ ತಾಯಿಯನ್ನು ಇರಿದು ಕೊಲ್ಲುವಂತೆ ತನ್ನ ಅನುಚರರಿಗೆ ಆದೇಶ ನೀಡಿದ್ದ. ಅದರಂತೆ ಚಾಕು ಬೀಸಿದವನ ಚಾಕಿಗೆ ಬಲಿಯಾಗಿದ್ದಳು ರಾಗ. ಪಲ್ಲವಿಯ ತಾಯಿಯ ಎದೆಗೆ ಚುಚ್ಚಬೇಕಿದ್ದ ಚಾಕು ಅಡ್ಡ ಬಂದಿದ್ದರಿಂದ ರಾಗಳ ಹೊಟ್ಟೆ ಸೀಳಿದ್ದವು..!


'ಈ ರೀತಿಯ ಬಲೆ ಹೆಣೆದು ನನ್ನ ಪಡೆಯಬಹುದೆಂಬ ಆಸೆಯನ್ನು ಇಟ್ಕೋ ಬೇಡ್ವೋ ನಾಯಿ, ನಾನು ಯಾವತ್ತಿಗೂ ನಿನಗೆ ದಕ್ಕಲಾರೆ.!' ಅವಳು ಕೊನೆಯಲ್ಲಿ ನುಡಿದ ಮಾತು ಆಗಷ್ಟೇ ಪೋಲಿಸರ ಸಮೇತ ಅಲ್ಲಿಗೆ ಬಂದ ಅನುಷ್ ಮತ್ತು ಪಲ್ಲವಿಯ ಕಿವಿ ತಲುಪಿ ಕಲ್ಲಿನಂತೆ ನಿಂತು ಬಿಟ್ಟರು.


'ನೀನ್ಯಾಕಮ್ಮಾ ಅಡ್ಡ ಬಂದೆ...?' ಅಳುತ್ತಲೇ ಕೇಳಿದರು ತಾಯಿ.


'ಯಾಕಂದ್ರೆ ನಿಮ್ಮನ್ನು ರಕ್ಷಿಸುವುದು ನನ್ನ ಕರ್ತವ್ಯ ಆಗಿತ್ತು. ನಿಮ್ಮ ಮಗಳನ್ನು ಇಲ್ಲಿಂದ ಕಳುಹಿಸಿ, ನಿಮ್ಮ ಜೀವನಕ್ಕೆ ಕುತ್ತು ತಂದಿದ್ದೂ ನಾನೇ. ಅದರಿಂದ ನಿಮ್ಮನ್ನು ರಕ್ಷಿಸುವ ಜವಾಬ್ದಾರಿ ಕೂಡಾ ನನ್ನ ಮೇಲೆಯೇ ಇತ್ತಲ್ವಾ..? ಅದನ್ನೇ ಮಾಡಿರುವೆ. ಆದರೆ ನನ್ನ ಗೆಳತಿಯನ್ನು ರಕ್ಷಿಸಬೇಕಿತ್ತು ಅಮ್ಮಾ. ಅದಕ್ಕಾಗಿ ಕಳುಹಿಸಿ ಬಿಟ್ಟೆ ನಾನು. ನಿಮಗೆ ತೊಂದರೆ ಕೊಡೋದು ನನ್ನ ಉದ್ದೇಶ ಆಗಿರಲಿಲ್ಲ... ನಿಮ್ಮಲ್ಲಿ ಕೇಳಿಕೊಂಡೆ, ಬೇಡಿಕೊಂಡೆ. ಆದರೆ ನೀವು ನನ್ನ ಮಾತು ಕೇಳಲು ತಯಾರಿರಲಿಲ್ಲ. ಹಾಗಾಗಿ ನನಗೆ ಬೇರೆ ದಾರಿಯೂ ಇರಲಿಲ್ಲ! ಬಡವರ ಜೀವನವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳೋ ಇಂತಹವರನ್ನು ಸುಮ್ಮನೇ ಬಿಡಬಾರದು ಅಮ್ಮಾ. ಬಡವರಿಗೂ ಹಕ್ಕಿದೆ ಬದುಕೋದಿಕ್ಕೆ, ಅದನ್ನು ಕಸಿದುಕೊಳ್ಳೋ ಹಕ್ಕು ಇವನಿಗೆ ಕೊಟ್ಟವರಾರು?' ಹೊಟ್ಟೆ ಹಿಡಿದೇ ನೆಲದ ಮೇಲೆ ಕುಸಿದಿದ್ದವಳ ಕಡೆಗೆ ಓಡಿ ಬಂದಿದ್ದರು ಅನುಷ್ ಮತ್ತು ಪಲ್ಲವಿ. 


ಪಲ್ಲವಿಯನ್ನು ಕಂಡು ಕಣ್ಣರಳಿಸಿದ ಜಮೀನುದಾರನ ಕೈಗೆ ಕೋಳ ಹಾಕಿದ್ದರು ಪೋಲಿಸರು. ಆಸೆ ಕಂಗಳಿಂದ ಅವಳನ್ನು ನೋಡುತ್ತಿದ್ದವನಿಗೆ ಅವರ ಜೊತೆ ಬಂದಿದ್ದ ಪೋಲಿಸರ ಕಡೆಗೆ ಗಮನ ಇರಲಿಲ್ಲ!


'ನನ್ನ ಆಸೆಯನ್ನು ನೀವು ನೆರವೇರಿಸುವಿರಿ ಎಂದು ತಿಳಿದಿದೆ ನನಗೆ. ನನಗೆ ಅಪ್ಪಣೆ ಕೊಡಿ, ನಾನು ಹೊರಡೋ ಸಮಯವಾಯಿತು' ಅಲ್ಲಿಗೆ ನಿಂತಿತು ಅವಳ ಮಾತು ಮತ್ತು ಅದರ ಜೊತೆಗೆ ಉಸಿರೂ ಕೂಡಾ. ಮಾತನಾಡಬೇಕೆಂದಿದ್ದ ನೂರು ಮಾತು ಗಂಟಲಲ್ಲೇ ಉಳಿದು ಹೋಗಿತ್ತು.?!


ಸುಳಿವ ಗಾಳಿಗೆ ಸಿಲುಕಿ ನಲುಗಿ ಹೋಗಿದೆ ಮನದಿ ಮೂಡಿದ ಹಲವು ಭಾವ. ಚಿಗುರಿ ಬೆಳೆಯಬೇಕಿದ್ದ ಜೀವ ಎಳವೆಯಲ್ಲೇ ಕಮರಿ ಹೋಗಿ ಕನಸು ಕಟ್ಟಿದ ಮನಸು ಮೆಲ್ಲನೇ ಮರಣ ನಿದಿರೆಗೆ ಜಾರಿತ್ತು. ಒಡಲು ಸಿಡಿದಿತ್ತು ಸಿಡಿಲು ಬಡಿದು, ಒಳಗೆ ಗುಡುಗಿತ್ತು ಮೋಡ ಕವಿದು. ಹೃದಯ ಹರಿದಿತ್ತು ಸುರಿದ ಬೆಂಕಿಗೆ.. ಸ್ನೇಹದೊಲುಮೆಯ ಸೆಲೆಯ ಬತ್ತಿಸಿ!


ವಿಶ್ರಾಂತಿಯಿಲ್ಲದೆ ಸಾಗಿದ ಪಯಣ ರಾಗಾಳ ಸಮಾಧಿ ಮುಂದೆ ತಟಸ್ಥವಾಗಿತ್ತು. ಇಂದಿಗೆ ಅವಳ ಕನಸಿನ ಕೂಸು ಅನುರಾಗ ಪಲ್ಲವಿಯ ಮೂರನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ. ಹಾಗಾಗಿ ಇಲ್ಲಿಗೆ ಬಂದಿದ್ದಾರೆ ಅವರಿಬ್ಬರೂ. ತನ್ನ ಜೀವನ ತ್ಯಾಗ ಮಾಡಿ ಗೆಳತಿಗೆ ಪುನರ್ಜನ್ಮ ನೀಡಿದ ರಾಗ, ಈಗ ಅವರ ಜೀವನದ ಪ್ರೇಮರಾಗ ಹಾಡುತ್ತಿದ್ದಾಳೆ. ಮದುವೆಯಾಗಿ ತಮಗೆ ಹುಟ್ಟಿದ ಮಗುವಿಗೆ ಗೆಳತಿಯ ನೆನಪಿಗಾಗಿ ರಾಗ ಎಂದೇ ಹೆಸರಿಟ್ಟಿದ್ದಾರೆ. ಒಳಿತು-ಕೆಡುಕುಗಳು ಅವನದೇ ಬಳುವಳಿ. ಅನುಭವಿಸದೆ ವಿಧಿ ಇಲ್ಲ! 

ಕಷ್ಟವೋ ಸುಖವೋ ಸಾಗಲೇಬೇಕಿದೆ ಜೀವನ.


Rate this content
Log in

Similar kannada story from Drama