ಹೃದಯ ಸ್ಪರ್ಶಿ

Drama Romance Classics

4.5  

ಹೃದಯ ಸ್ಪರ್ಶಿ

Drama Romance Classics

ಏಳು ಹೆಜ್ಜೆಗಳ ಬಂಧ

ಏಳು ಹೆಜ್ಜೆಗಳ ಬಂಧ

4 mins
767



'ಏನೇನೋ ಆಸೆ... ನೀ ತಂದ ಭಾಷೆ..

ಇಂದು ಹೊಸ...ತನ ತಂದು ತನು..ಮನ...' ಗುನುಗುತ್ತಾ ಆಫೀಸಿಗೆ ಹೋಗಲು ರೆಡಿಯಾಗುತ್ತಿದ್ದವನ ಕಂಡು,


'ಏನೋ... ನಿನ್ನ ಕಥೆ?' ಎಂದಿದ್ದ ದಿಗ್ವಿ.


'ಏನಿಲ್ಲ, ಚುಕ್ಕಿ ನೆನಪಾದ್ಳು' ಚುಟುಕಾಗಿ ನುಡಿದ.


'ಬೇಡವೆಂದು ಹೋದವಳನ್ನು ನೆನೆಸ್ಕೊಂಡು ಯಾಕೋ ಈ ರೀತಿ ವರ್ತಿಸ್ತಿದ್ದೀಯಾ..?' ಸಿಡುಕಿದ ಅವನು.


'ನಿನಗ್ಯಾರು ಹೇಳಿದ್ರು ಅವಳು ನನ್ನ ಬಿಟ್ಟು ಹೋಗಿದ್ದಾಳೆ ಅಂತ...?' ಗೆಳೆಯನನ್ನೇ ದಿಟ್ಟಿಸಿದ.


'ಅಂದ್ರೆ..? ಏನು ನಿನ್ನ ಮಾತಿನರ್ಥ..?' ಅವನು ಒಂದೆರಡು ನಿಮಿಷ ಸುಮ್ಮನಾದ. 



'ಅವಳ ಪರಿಚಯ ನನಗೆ ಇಂದು ನಿನ್ನೆಯದಲ್ಲ. ನಾವಿಬ್ಬರೂ ಏಳು ವರ್ಷಗಳಿಂದ ಪರಸ್ಪರ ಪ್ರೀತಿಸ್ತಿದ್ದೀವಿ ಮತ್ತು ಒಂದು ತಿಂಗಳು ಜೊತೆಯಾಗಿ ಸಂಸಾರ ಕೂಡಾ ಮಾಡಿದ್ದೀವಿ. ಅವಳನ್ನು ನನಗೆ ಅರ್ಥ ಮಾಡ್ಕೊಳ್ಳೋಕೆ ಇದಕ್ಕಿಂತ ಹೆಚ್ಚಿನ ಸಮಯ ಬೇಕೂಂತ ನನಗನಿಸ್ತಿಲ್ಲ. ಇಂದಿನ ಅವಳ ನಡೆ ಬದಲಾಗಿರುವುದಕ್ಕೂ ಏನಾದರೂ ಕಾರಣ ಇರಬಹುದು...!!

ನನಗೆ ಡ್ಯೂಟಿಗೆ ತಡ ಆಯ್ತು. ನಾನು ಹೊರಟೆ ಬಾಯ್...' ಗೆಳೆಯನನ್ನು ಬದಿಗೆ ಸರಿಸಿ ಮನೆಯಿಂದ ಹೊರಬಿದ್ದ ಪ್ರಖ್ಯಾತ್.



'ಇವನೋ, ಪ್ರೀತಿಯ ಮೇಲಿರೋ ಇವನ ನಂಬಿಕೆಯೋ..? ಒಂದೂ ಅರ್ಥ ಆಗ್ತಿಲ್ಲ...!' ತಲೆಕೆರೆದುಕೊಂಡ ದಿಗ್ವಿ ತಾನೂ ಹೊರಟ.



ಪ್ರಖ್ಯಾತ್ ಮತ್ತವನ ಚುಕ್ಕಿ... ಅಂದ್ರೆ, ಸುಕ್ಷಿತಾ.. ತಮ್ಮ ಏಳು ವರ್ಷಗಳ ಪ್ರೀತಿಗೆ ಕಳೆದ ತಿಂಗಳೇ ಮದುವೆಯೆಂಬ ಮೊಹರನ್ನು ಒತ್ತಿ ತಮ್ಮ ಅನುಬಂಧಕ್ಕೆ ಭದ್ರ ಬುನಾದಿ ಹಾಕಿದ್ದರು. ಆದರೆ ಅದೇನಾಯಿತೋ...?


ಸುಖ ತುಂಬಿದ ಸಂಸಾರ ಒಂದೇ ತಿಂಗಳಿನಲ್ಲಿ ಮುರಿದು ಬಿದ್ದಿತ್ತು. ಪತಿಯೊಂದಿಗೆ ಜಗಳವಾಡಿ ಮನೆಯಿಂದ ಹೊರ ನಡೆದ ಸುಕ್ಷಿತಾ ಗೆಳತಿಯ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾಳೆ.

ಆದ್ರೆ ಖ್ಯಾತ್ ಮನದಲ್ಲಿನ ಪ್ರೀತಿಯಾಗಲೀ, ಮಡದಿ ಬಗೆಗಿರುವ ನಂಬಿಕೆಯಾಗಲೀ ಕಡಿಮೆಯಾಗಿಲ್ಲ.?! 



ಪ್ರಖ್ಯಾತ್ ಐಟಿ ಕಂಪೆನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ತಾಯಿಯೊಬ್ಬಳೇ ಅವನ ಪ್ರಪಂಚ. ಮಧ್ಯಮವರ್ಗದ ತುಂಬು ಕುಟುಂಬದಲ್ಲಿ ಬೆಳೆದ ಸುಕ್ಷಿತಾ, ನಾಲಕ್ಕು ಮಂದಿ ಮಕ್ಕಳಲ್ಲಿ ಎರಡನೇಯವಳು.


ಮುದ್ದಾಗಿರೋ ಹುಡುಗಿ, ನೋಡಲದೆಷ್ಟು ಅಂದವೋ..? ಮನಸ್ಸೂ ಅಷ್ಟೇ ಮುದ್ದು. 



ಮಧ್ಯಾಹ್ನದ ಸಮಯ. ಲಂಚ್ ಬ್ರೇಕ್.. 

ಆಫೀಸಿನಿಂದ ಹೊರ ಬಿದ್ದಿತ್ತು ಗೆಳೆಯರಿಬ್ಬರ ಜೋಡಿ...


'ಖ್ಯಾತ್, ಅಲ್ನೋಡೋ ನಿನ್ನ ಹೆಂಡತಿ' ರೆಸ್ಟೋರೆಂಟೊಂದರಲ್ಲಿ ಯಾರೋ ಒಬ್ಬರ ಜೊತೆ ಕುಳಿತು ಮಾತನಾಡುತ್ತಿದ್ದವಳನ್ನು ತೋರಿಸಿದ ದಿಗ್ವಿಜಯ್. 



'ಈಗ ತಾನೇ ಅನ್ಕೋತಿದ್ದೆ, ಒಮ್ಮೆ ನೋಡಲು ಸಿಗ್ಬಾರ್ದಾ ಅಂತ...? ಬಾ ಅಲ್ಲೇ ಹೋಗೋಣ...' ಒಳ ನಡೆದ ಪ್ರಖ್ಯಾತ್.



'ಖ್ಯಾತ್.. ನಿಂತ್ಕೋ.

ಅವರ ಮಧ್ಯೆ ಹೋಗೋದು ಏನು ಚೆನ್ನ...?' ಎಂದ ದಿಗ್ವಿ.



'ನಾನು ರೆಸ್ಟೋರೆಂಟಿನೊಳಗೆ ಹೋಗೋಣ ಅಂದಿದ್ದು...' ಒಳ ಬಂದವನು ಅವಳು ತನಗೆ ಸರಿಯಾಗಿ ಕಾಣಿಸುವಂತೆ ಟೇಬಲೊಂದನ್ನು ಅರಸಿ ಕುಳಿತ.



'ಖ್ಯಾತ್, ಏನೋ ಇದು. ಅವರು ನೋಡಿದ್ರೆ ಏನಂದ್ಕೊಳ್ಳಲ್ಲ..? ನಾವು ಅವರನ್ನು ಫಾಲೋ ಮಾಡ್ಕೋತಿದ್ದೀವಿ ಅನ್ಕೊಂಡ್ರೆ ಏನೋ ಗತಿ..? ಮೊದಲೇ ನಿಮ್ಮ ಸಂಸಾರ ಸರಿಗಿಲ್ಲ..?!' ಆದರೆ ಜಪ್ಪಯ್ಯ ಅಂದರೂ ಕುಳಿತ ಜಾಗದಿಂದ ಅಲುಗಾಡಲಿಲ್ಲ ಪ್ರಖ್ಯಾತ್.




ತನ್ನ ಮಾತುಕಥೆ ಮುಗಿಸಿ ತಲೆ ಎತ್ತುತ್ತಲೇ ಕಣ್ಣಿಗೆ ಬಿದ್ದಿದ್ದ ಪ್ರಖ್ಯಾತ್. ಯಾರದೋ ಜೊತೆ ಫೋನಿನಲ್ಲಿ ಮಾತನಾಡುತ್ತ ಊಟ ಮಾಡುತ್ತಿದ್ದವನ ಕಂಡು ಕಂಗಳು ತುಂಬಿ ನಿಂತವು. ಅತ್ತಿತ್ತ ನೋಡಿದವಳು ಕಣ್ಣೊರೆಸಿ, ಬೇಗ ಬೇಗನೇ ಅಲ್ಲಿಂದೆದ್ದು ಹೊರನಡೆದಳು ಸುಕ್ಷಿತಾ. 



'ಅಕ್ಕಾ..ಅಕ್ಕಾ... 

ಏನ್ಮಾಡ್ತಿದ್ದೀಯಾ ಇಲ್ಲಿ...?' ಅವಳನ್ನಲ್ಲಿ ನಿರೀಕ್ಷಿಸಿರದ ನಯನ ಪ್ರಶ್ನಿಸಿದಳು. 


'ಏನು ನಿನ್ನ ಮಾತಿನರ್ಥ...?' ಕಿರುನೋಟ ಬೀರಿದಳು. 



'ಖ್ಯಾತ್ ಇಲ್ಲಿದ್ದಾರೆ ಎಂದು ತಿಳಿದೇ ಇಲ್ಲಿಗೆ ಬಂದಿದ್ದೀಯಾ ಅಲ್ವಾ..?' ಅವಳ ರೀತಿಗೆ ಕೋಪ ಬಂದಿತು ಅವಳಿಗೆ.


'ಅವರು ನಿನ್ನ ಭಾವ. ಮಾತಿನಲ್ಲಿ ಹಿಡಿತವಿರಲಿ...!'



'ಆದರೆ.. ನಾನವರನ್ನು ಪ್ರೀತಿಸ್ತಿದ್ದೀನಿ. ಹೇಳಿದ್ದೀನಲ್ಲ..?' ಅವಳ ಪ್ರಶ್ನೆಗೆ ಸುಮ್ಮನೇ ನಿಂತಳು ಸುಕ್ಷಿತಾ.



'ತೆಗ್ದು ಒಂದು ಕೊಟ್ಟೆ ಅಂದ್ರೆ ಇರೋ ಬರೋ ಹಲ್ಲೆಲ್ಲಾ ಉದ್ರಿ ಹೋಗ್ಬೇಕು. ಅಕ್ಕನ ಸಂಸಾರ ಹಾಳು ಮಾಡಿ ಆ ಬೆಂಕಿಯಲ್ಲಿ ನಾನು ಖುಷಿಯಾಗಿರ್ತೀನಿ ಅಂತಿದ್ದೀಯಲ್ಲೆ..? ನೀನೇನು ತಂಗಿನಾ ಅಥವಾ ಅವಳ ಜೀವನ ಹಾಳ್ಮಾಡೋದಿಕ್ಕೇ ಅಂತ ಹುಟ್ಟಿರೋ ರಾಕ್ಷಸಿನಾ..?' ಹಿಂದಿನಿಂದ ಬಂದಿದ್ದ ಹಾಸಿನಿ ಇವರಿಬ್ಬರ ಮಾತನ್ನೂ ಆಲಿಸಿದ್ದಳು.



'ನೀನು ಸುಮ್ನಿರು ಹಾಸಿನಿ. ಮೊದ್ಲು ಬಾ ಇಲ್ಲಿಂದ...' ಕೈ ಹಿಡಿದು ಎಳೆದುಕೊಂಡು ನಡೆದಳು ಸುಕ್ಷಿತಾ.


'ಬಿಡು ನನ್ನ ಕೈ.

ನನ್ನ ಜೊತೆ ಮಾತನಾಡಬೇಡ, ನೀನು. 

ಅವಳಿಗಲ್ಲ ನಿನಗೆ ಬಾರಿಸ್ಬೇಕು ಮೊದಲು. ಅವಳು ಹೇಳಿದಂತೆ ಕೇಳಿ ಕೇಳಿ.. ನೀವೇ ಅವಳನ್ನು ಹಾಳು ಮಾಡಿ ಬಿಟ್ಟಿದ್ದೀರಿ. ಇದು ವಸ್ತು ಅಲ್ಲ ಸುಕ್ಷಿ...ಜೀವನ. ಹಾಗೇ ನಮಗೆ ಬೇಕಾದಂತೆ ಬದಲಾಯಿಸೋದಿಕ್ಕೆ ಆಗೋದಿಲ್ಲ'


ಹಾಸಿನಿ, ಸುಕ್ಷಿತಾಳ ಇನ್ನೊಬ್ಬ ಗೆಳತಿ. ಮತ್ತು ಖ್ಯಾತ್ ಗೆಳೆಯ ದಿಗ್ವಿ ಪತ್ನಿ ಕೂಡಾ. ಅದಕ್ಕಾಗೇ ಅವಳಿಂದ ಈ ವಿಷಯ ಮುಚ್ಚಿಟ್ಟು ಬಿಟ್ಟಿದ್ದಳು ಸುಕ್ಷಿತಾ. ಆದರೆ ಹೆಚ್ಚು ದಿನ ಅದು ರಹಸ್ಯವಾಗಿ ಉಳಿಯಲಿಲ್ಲ.



'ಖ್ಯಾತ್ ಇಲ್ಲದೆ ನಾನು ಬದುಕಲಾರೆ ನಿಜ. ಆದರೆ, ನಯನ ನನ್ನ ಒಡಹುಟ್ಟಿದವಳು. ಅವಳ ಸಾವಿಗೂ ನಾನು ಕಾರಣಳಾಗಲಾರೆ' ಅವಳ ಮಾತಿಗೆ ಹಾಸಿನಿಯ ಕೋಪ ಹೆಚ್ಚಿತ್ತು.


'ನಿನಗೆ ಹೀಗೆಲ್ಲಾ ಹೇಳಿದರೆ ಅರ್ಥ ಆಗೋದಿಲ್ಲ. ಯಾರಲ್ಲಿ ಹೇಳ್ಬೇಕೋ ಅವರಲ್ಲೇ ಹೇಳ್ಬೇಕು...

ಬಿಡು ನನ್ನ ಕೈ...' ಕೋಪದಿ ಕೈ ಕೊಡವಿಕೊಂಡು ಹೊರಟು ಹೋದಳವಳು.



ನಯನ ಸ್ವಭಾವದಿ ಹಠಮಾರಿ ಹುಡುಗಿ. ಕಣ್ಣಿಗೆ ಕಂಡಿದ್ದೆಲ್ಲಾ ತನ್ನದಾಗಬೇಕೆಂಬ ಹುಚ್ಚು ಸ್ವಾರ್ಥ.!!

ಆಕಸ್ಮಿಕವಾಗಿ ಕಣ್ಣಿಗೆ ಬಿದ್ದಿದ್ದ ಖ್ಯಾತ್ ಕೂಡಾ ಒಂದು ವಸ್ತುವಿನಂತೆ ಇಷ್ಟವಾಗಿ ಬಿಟ್ಟಿದ್ದ ಅವಳಿಗೆ. ಅದನ್ನೇ ಪ್ರೀತಿಯೆಂದುಕೊಂಡವಳು, ಅವನು ತನ್ನ ಅಕ್ಕನ ಪತಿಯೆಂದು ತಿಳಿದ ನಂತರವೂ ತನ್ನ ಹುಚ್ಚಾಟ ಬಿಟ್ಟಿರಲಿಲ್ಲ.



ಅವನನ್ನು ತನಗೆ ಬಿಟ್ಟು ಕೊಡದಿದ್ದಲ್ಲಿ ಸಾಯುವುದಾಗಿ ಬೆದರಿಸಿ ಪತಿ-ಪತ್ನಿಯನ್ನು ದೂರ ಮಾಡುವಲ್ಲಿ ಸಫಲವಾಗಿದ್ದಳು. ಮನೆಯಲ್ಲಿ ತಿಳಿದರೆ ಎಲ್ಲಿ ತನಗೆ ಸಮಸ್ಯೆಯಾಗುವುದೋ ಎಂದು ಅವಳಿಗೆ ತವರು ಮನೆಗೆ ಹೋಗುವುದಕ್ಕೂ ನಿರ್ಬಂಧ ಹೇರಿಬಿಟ್ಟಿದ್ದಳು. 

ಆದರೆ ಅವರ ನಡುವೆಯಿರೋ ಪ್ರೀತಿ ಮತ್ತು ನಂಬಿಕೆಯನ್ನು ಮುರಿಯಲು ಸಾಧ್ಯವಾಗಿರಲಿಲ್ಲ...!


ಭಾವನ ಬಗ್ಗೆ ಇಲ್ಲಸಲ್ಲದ ಗಾಸಿಪ್ ಹುಟ್ಟಿಸಿ ಅಕ್ಕನ ಮನದಲ್ಲಿ ಶಂಕೆ ಹುಟ್ಟು ಹಾಕುವ ಪ್ರಯತ್ನ ಮಾಡಿ ಅದರಲ್ಲೂ ಸೋತಿದ್ದಳು..!



'ನಯನ...' ತಾನೇ ಮೊದಲಾಗಿ ಮಾತಿಗೆ ಆರಂಭಿಸಿದ ಪ್ರಖ್ಯಾತ್. 


'ಅ...ಅ..ಅದು ಭ್..ಭಾ..ಭಾವ' ಸಂಕೋಚಿಸಿದಳು. 


'ಅದೇನೋ, ನೀನು ನನ್ನನ್ನು ಪ್ರೀತಿಸ್ತಿದ್ದೀಯಂತೆ..?' ನೇರವಾಗಿ ಮಾತಿಗಿಳಿದವನ ಕಡೆ ದಿಟ್ಟಿಸಿದವಳು, 

'ಓಹ್, ನಿಮಗೆ ಗೊತ್ತಾಯಿತಾ? ಹೇಗೆ ಹೇಳೋದು ಅಂತ ಯೋಚಿಸ್ತಿದ್ದೆ' ನಿಟ್ಟುಸಿರು ಚೆಲ್ಲಿದಳು. 



'ಆದರೆ, ನಾನೂ ನಿನ್ನ ಪ್ರೀತಿಸ್ತಿದ್ದೀನಾ ಇಲ್ವಾ ಅಂತ ತಿಳ್ಕೊಳ್ಳೋ ಪ್ರಯತ್ನ ಕೂಡಾ ಮಾಡ್ಬೇಕಿತ್ತಲ್ಲ...?' ಕೇಳಿದ. 


'ಈಗ ಪ್ರೀತಿಸದಿದ್ದರೇನು? ನಂತರ ಪ್ರೀತಿಸಬಹುದಲ್ವಾ..?' ನುಡಿದಳು. 



'ಪ್ರೀತಿಸದೆಯೇ ಇದ್ರೆ..?' ಅವಳಲ್ಲಿ ಉತ್ತರವಿಲ್ಲ. 


'ನಿನಗೂ ಗೊತ್ತು, ನಯನ. 

ನಾನು ನಿನ್ನನ್ನು ಯಾವತ್ತಿಗೂ ಪ್ರೀತಿಸೋದಿಕ್ಕೆ ಸಾಧ್ಯ ಇಲ್ಲ ಅಂತ. ಮತ್ತೂ ಯಾಕೆ ಈ ಹುಚ್ಚು ಸಾಹಸ?

ನಿನಗೆ ನಾನು ಕೇವಲ ಇಷ್ಟವಾಗಿದ್ದೀನಿ ಅಷ್ಟೇ. ಆದರೆ ನಿನ್ನ ಅಕ್ಕಾ ನನ್ನ ಮಡದಿ.

ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿದ್ದೇನೆ. ಆ ಸಮಯದಿ ಅವಳಿಗೆ ನೀಡಿರೋ ವಚನ ಮುರಿದು ನಾನು ನಿನ್ನ ಹಿಂದೆ ಬರ್ತೀನಿಂತ ನೀನು ಅದ್ಹೇಗೆ ಅನ್ಕೊಂಡೆ...?


ಈ ಪ್ರೀತಿ-ಮದುವೆ ಅನ್ನೋ ಬಂಧಗಳು ಕೇವಲ ಹೆಸರುಗಳಲ್ಲ. ಅದು ಪವಿತ್ರವಾದ ಸಂಬಂಧ, ಅನುಭವಿಸಲು ಮಾತ್ರ ಸಾಧ್ಯ..!


ನಮ್ಮಿಬ್ಬರನ್ನು ನೀನು ದೂರ ಮಾಡ್ಬಹುದು. ಆದರೆ ನಮ್ಮ ನಡುವೆಯಿರೋ ಈ ನಂಬಿಕೆ ಮತ್ತು ಪ್ರೀತಿಯನ್ನು ನೀನೂ ದೂರ ಮಾಡಲು ಸಾಧ್ಯ ಇಲ್ಲ. ಅದರಿಂದ ಹೇಳ್ತಿದ್ದೀನಿ, ಈ ಹುಚ್ಚು ಸಾಹಸ ಬಿಟ್ಟು ಬಿಡು.


ಹ್ಞಾಂ.. ನಿನ್ನ ಅಕ್ಕನನ್ನು ಹೆದರಿಸಿದಂತೆ ನನ್ನ ಹೆದರಿಸೋಕೆ ನೋಡ್ಬೇಡ. ನಮ್ಮ ಸಂಸಾರದ ಇಂದಿನ ಸ್ಥಿತಿಗೆ ಕಾರಣ ಯಾರು ಅನ್ನೋದು ನಿನಗೂ ಗೊತ್ತು, ನನಗೂ ಕೂಡಾ. ಎಲ್ಲರಿಗೂ ತಿಳಿದರೆ..???' ಸುಮ್ಮನಾದಳು ನಯನ.



'ಪತಿ-ಪತ್ನಿ ಸಂಬಂಧ ಕೇವಲ ಜೊತೆಯಲ್ಲಿರುವಾಗ ಮಾತ್ರವಲ್ಲ, ದೂರ ಇರುವಾಗಲೂ ಜೀವಂತವಾಗಿರುತ್ತೆ..' ಒಂದುಕ್ಷಣ ನಿಲ್ಲಿಸಿ, 


'ಇದೆಲ್ಲಾ ಮೊದಲೇ ನನಗೆ ತಿಳಿದಿದ್ರೆ ಈ ತರ ಸಮಸ್ಯೆಯೇ ಆಗ್ತಿರಲಿಲ್ಲ. ಹೋಗ್ಲಿ ಬಿಡು, ಹಾಸಿನಿ ಇದನ್ನು ಹೇಳಿ ಒಳ್ಳೆಯದನ್ನೇ ಮಾಡಿದ್ದಾಳೆ.

ನನ್ನಿಂದ ವಿಷಯ ಮುಚ್ಚಿಟ್ಟು ನೀನು ತಪ್ಪು ಮಾಡ್ಬಿಟ್ಟೆ ಚುಕ್ಕಿ. ಆದ್ರೆ ಬೇಸರ ಇಲ್ಲ ನನಗೆ, ನೀನು ನಿನ್ನ ತಂಗಿಗಾಗಿ ಮಾಡ್ದೆ..' ಅಕ್ಕನನ್ನು ಕಂಡು ಅಚ್ಚರಿಗೊಂಡಳು ನಯನ.




'ನಾನೇ ಬರಹೇಳಿದ್ದು. ಇಂದಿಗೆ ನಿಮ್ಮಿಬ್ಬರ ಗೊಂದಲವೂ ಬಗೆಹರಿದಿದೆ ಅನ್ಕೋತೀನಿ...

ನೀನು, ನನ್ನಿಂದ ಚುಕ್ಕಿಯನ್ನು ದೂರ ಮಾಡಿದ್ರೂ... ನಿನ್ನ ಅಕ್ಕ ನಿನಗಾಗಿ ನನ್ನಿಂದ ದೂರ ಆದ್ರೂ., ಏನೇ ಆದ್ರೂ ಇಲ್ಲಿ ನಮ್ಮ ಮೂವರ ಜೀವನವೂ ಹಾಳಾಗುತ್ತೆ. ಅದರಲ್ಲೂ ಹೆಚ್ಚಾಗಿ...


ನಯನ, ನಿನ್ನ ಜೀವನ...!!


ಚುಕ್ಕಿಯ ಜಾಗದಲ್ಲಿ ನಿನ್ನನ್ನಲ್ಲ, ಬೇರೆ ಯಾರನ್ನೂ ನಾನು ಕಲ್ಪಿಸಿಯೂ ಕೊಳ್ಳಲಾರೆ. ಈ ಪವಿತ್ರ ಬಂಧಕ್ಕೆ ಒಂದು ಮರ್ಯಾದೆ ಇದೆ, ಅದನ್ನು ಮುರಿಯೋ ಪ್ರಯತ್ನ ಮಾಡ್ಬೇಡ...' ಮಡದಿಯ ಕೈ ಹಿಡಿದು ಅಲ್ಲಿಂದ ನಡೆದ ಖ್ಯಾತ್. ಅವನ ಕೈಯೊಳಗಿರುವ ತನ್ನ ಕೈಯ್ಯ ಹಿಡಿತವನ್ನು ಇನ್ನೂ ಬಲಗೊಳಿಸಿದಳು ಸುಕ್ಷಿತಾ. 


ಇನ್ಮುಂದೆ ಈ ರೀತಿ ಯಾವುದನ್ನೂ ಮುಚ್ಚಿಡೋದಿಲ್ಲ ಎಂಬ ಭರವಸೆಯಿದ್ದಂತಿತ್ತು ಆ ಹಿತವಾದ ಹಿಡಿತದಲ್ಲಿ. ಅವಳತ್ತ ನೋಡಿ ನಗು ಬೀರಿದರೆ ಆ ನಗು ಅವಳ ಮುಖದಲ್ಲೂ ರಂಜಿಸಿತ್ತು.




ಮುಗಿಯಿತು.




Rate this content
Log in

Similar kannada story from Drama