ಹೃದಯ ಸ್ಪರ್ಶಿ

Tragedy Fantasy Others

4.2  

ಹೃದಯ ಸ್ಪರ್ಶಿ

Tragedy Fantasy Others

ಬಾನ ಎದೆಯಲ್ಲಿನ ಮೌನ

ಬಾನ ಎದೆಯಲ್ಲಿನ ಮೌನ

3 mins
415


ಏನು ಬರೆಯಲಿ.!


ಮನಸ್ಸು ನಿನ್ನ ಸಾಂಗತ್ಯದ ಹಾದಿಯಲ್ಲಿ ಕಾಯುತ್ತಿದೆ ಎಂದೋ..? ಅಥವಾ ಮನದ ನೋವನ್ನು ಒಮ್ಮೆ ನಿವಾರಿಸಿ ಜೊತೆಯಾಗು ಎಂದೋ..? ಇವೆಲ್ಲಾ ಮನದ ಕೋರಿಕೆಗಳು ಅಷ್ಟೇ.


ನನ್ನ ಪತ್ರದ ನಿರೀಕ್ಷೆ ನೀನು ಮಾಡುತ್ತಿಯೋ.. ಇಲ್ಲವೋ.? ನಾ ಅರಿಯೆ.

ಪತ್ರಗಳನ್ನೇ ಜೀವಾಳ ಎಂದು ತಿಳಿದು ಬದುಕಿದ

ನನಗೆ ನಿನ್ನಿಂದ ಇದುವರೆಗೂ ಯಾವ ಉತ್ತರಗಳು ಬರಲೇ ಇಲ್ಲ. ಬಹುಶಃ ಮುಂದೆ ಬರುವುದು ಇಲ್ಲ.‌!


ನಿನ್ನ ಆಗಾಧವಾದ ಮೌನಕ್ಕೆ ನನ್ನ ಮನಸ್ಸಿನ ಭಾವಗಳು ಸ್ವರವಾಗುವುದೇ ಇಲ್ಲ. ಈ ಸತ್ಯ ಒಪ್ಪಿಕೊಂಡ ಮೇಲೂ ನನ್ನ ಪತ್ರಗಳು ನಿನ್ನ ಹೃದಯದೂರಿಗೆ ನಿತ್ಯ ಪ್ರಯಾಣವನ್ನು ಮಾಡುತ್ತಲೇ ಇದೆ. ಮೋಸ್ಟ್ಲೀ ಇದು ಈ ಉಸಿರು ಇರುವವರೆಗೂ ಹೀಗೆ ಸಾಗಬಹುದೇನೋ..? ನಿತ್ಯ ನಿರಂತರ!


ನಮ್ಮಲ್ಲಿರುವ ನೂನ್ಯತೆಗಳನ್ನೂ ಮೀರಿ ಪ್ರೀತಿಸಬೇಕು. ಆಗ ಪ್ರೀತಿ ಪರಿಶುದ್ಧವಾಗಿರುತ್ತದೆ. ನಿನ್ನಲ್ಲಿರುವ ಕೆಲವೊಂದು ಗುಣಗಳು ನನಗೆ ಅರ್ಥವಾಗುವ ಮುನ್ನವೇ ಅವುಗಳು ನನ್ನನ್ನು ಗೋಜಲಾಗಿ ಕಾಡುತ್ತದೆ. ಅದೇ ಕಾರಣವೋ ಏನೋ.. ನೀನು ನನ್ನನ್ನು ಈಗಲೂ ಪ್ರಶ್ನೆಯಾಗಿಯೇ ಕಾಡುವೆ.


ಈ ಜಗತ್ತಿನಲ್ಲಿ ಕ್ಷಣ ಮಾತ್ರದಲ್ಲಿ ಅದೆಷ್ಟೋ ಪ್ರೇಮಗಳು, ಪ್ರೇಮಿಗಳು ಹುಟ್ಟುತ್ತಾರಂತೆ. ಈ ಅಂತೆ ಕಂತೆಗಳು ನಿಜವಿರಲೂ ಬಹುದು. ಬಹುಶಃ ನಮ್ಮ ಪ್ರೇಮವೂ ಅದರಲ್ಲೇ ಸೇರಿರಬಹುದು. 


ಹಸಿವಿನ ಹಂಗಿಲ್ಲದೇ, ನಿದಿರೆಯ ಗುಂಗಿಲ್ಲದೇ, ನಿನ್ನ ಹೆಸರನ್ನೇ ಜಪಿಸುವ ಈ ಮನಸ್ಸಿನ ಗತಿ ಹೇಗಿರಬಹುದು..? ಒಂದು ಬಾರಿಯಾದರೂ ಯೋಚಿಸಿರುವೆಯಾ ನೀ..?


ಜಗಳ ಮಾಡಿ ದೂರ ಆಗುವವರ ಮಧ್ಯೆ ನಾವಿಬ್ಬರೂ ವಿಶೇಷವಾಗಿ ದೂರವಾಗಿದ್ದೇವೆ. ಅತಿಯಾದ ಪ್ರೀತಿ ವಿಶ್ವಾಸದ ಮಧ್ಯೆಯೇ ವಿಚಿತ್ರವಾಗಿ ಸುಮ್ಮನಾಗಿದ್ದೇವೆ.

ಒಮ್ಮೊಮ್ಮೆ ತುಂಬಾ ನೋವಾಗುತ್ತದೆ. ನಿನ್ನ‌ ನೆನಪಾದಾಗೆಲ್ಲಾ ಒಬ್ಬಳೇ ಕೂತು ಕಣ್ಣೀರಾಗುತ್ತೇನೆ. ನೆನಪುಗಳು ‌ತರುವ ನೋವಿಗೆ ಮದ್ದು ಎಲ್ಲಿದೆ ಎಂದು ಮತ್ತೆ ಹುಡುಕಾಡುತ್ತೇನೆ. ಕಾರಣಗಳೇ ಇಲ್ಲದೆ ದೂರವಾಗುವುದು ಅಂದ್ರೆ ಇದೆಯೆನೋ.?!


ಈ ಪ್ರೀತಿಗೆ ತುಂಬಾ ಸ್ವಾಭಿಮಾನ.. ಕೆಲವೊಮ್ಮೆ ಕೆಲವೊಂದು ವಿಷಯಗಳನ್ನು ಅವು ಸಹಿಸದು. ಬಹುಶಃ ನಮ್ಮಿಬ್ಬರ ಮಧ್ಯೆಯೂ ಇದೇ ನಡೆದಿರಬಹುದು...!


ಜಗಳ ಮಾಡದೇ ಸುಮ್ಮನಾದೆವೋ..? ಅದ್ಯಾವ ಮಾತು ನಮ್ಮಿಬ್ಬರ ಸ್ವಾಭಿಮನವನ್ನು ಕೆರಳಿಸಿತೋ..? ತಿಳಿಯದು. ಯಾಕೆಂದರೆ ಬಳಿ ಬಂದವನು ನೀನೇ. ಮತ್ತೆ ದೂರ ಮಾಡಿ ಹೋದವನು ನೀನೇ. ಇದು ಮೌನಗಳ ಸಮರ.‌!!


ಒಂದಂತೂ ಸತ್ಯ...

ನೀ ನೆನಪಾಗುವೆ ಎಂಬ ಕಾರಣಕ್ಕೆ ನಾ ಪತ್ರ ಬರೆಯುತ್ತಿಲ್ಲ. ನೆನಪು ಮತ್ತು ಬರವಣಿಗೆ ಒಂದು ನೆಪವಷ್ಟೇ! ನಿನ್ನ ನೆನೆಯಲು ಮತ್ತು ನಿನ್ನ ನೆನಪಲ್ಲೇ ಮುಳುಗಲು!


ಏನೆಂದು ಬರೆಯಲಿ...?

ಇದೇ ಪ್ರಶ್ನೆಯೊಂದಿಗೆ ಅದೆಷ್ಟು ಪತ್ರಗಳು ನಿನ್ನ ಮನೆಯಂಗಳವನ್ನಿರಲಿ, ಅಂಚೆಪೆಟ್ಟಿಗೆಯ ಮುಖವನ್ನೂ ಕಾಣದೆ, ಹರಿದು ಬರಿದಾಗಿ ಕಸದ ಬುಟ್ಟಿಯಲ್ಲಿ ಮೋಕ್ಷ ಪಡೆದಿವೆಯೋ..? ನಾ ಎಣಿಸಲಾರೆ. ಪರಸ್ಪರ ಮಾತನಾಡದೆ, ಮುಖ ನೋಡದೆ ಹಲವು ವಸಂತಗಳೇ ಕಳೆದು ಹೋಗಿದೆ. ಆದರೂ ನೀನಿನ್ನೂ ನನ್ನ ಮನಸ್ಸಿನಲ್ಲಿ, ನೆನಪಿನಲ್ಲಿ ಹೃದಯದಿ ಹಿತವಾಗಿ ನಳನಳಿಸುತ್ತಿರುವೆ ಎಂದರೆ ನೀ ನಂಬುವೆಯಾ..? ಮೋಸ್ಟ್ಲೀ ನೋ..! ನೀ ನಂಬಲಾರೆ.


ವಾಟ್ಸಪ್, ಟ್ವಿಟ್ಟರ್, ಇನ್ಸ್ಟಾ ಕಾಲದಲ್ಲಿ ಪತ್ರವನ್ನು ಗೀಚುತ್ತಿರುವ ನಾನು ನಿನಗೆ ಹುಚ್ಚಳಂತೆಯೇ ಗೋಚರಿಸಬಹುದು. ಆದರೆ ಈ ಪತ್ರದಲ್ಲಿ ಸಿಗುವ ನೆಮ್ಮದಿ ಅವುಗಳಲ್ಲಿ ಸಿಗದು ಎಂಬ ನಿನಗೆ ಹೇಗೆ ಅರಿವಾಗಬೇಕು..? ಒಂದು ಪತ್ರವನ್ನಾದರೂ ನೀ ಬರೆದರಲ್ಲವೇ!


ಇಷ್ಟು ವರ್ಷಗಳ‌ ಅನಾಥ ಭಾವಗಳಿಗೆ, ನಿನ್ನ ಹತ್ತಿರವಿದ್ದಾಗಲೂ ನಿನಗೆ ಹೇಳದೇ ಉಳಿದ ಮಾತುಗಳಿಗೆ, ದೂರವಾದರೂ ಮತ್ತೆ ಮತ್ತೆ ಕಾಡುವ ನಿನ್ನ ನೆನಪುಗಳಿಗೆ ಅಕ್ಷರ ರೂಪ ಕೊಡುವುದು ನನಗೊಂದು ರೀತಿಯ ಗೀಳೇ ಬಿಡು.


ನಾವಿಬ್ಬರೂ ವಾದಗಳನ್ನು ಮಾಡದೇ ದೂರವಾದವರು. ಪ್ರತೀ ಬಾರಿ ಹೀಗೆ ನಿನಗೊಂದು ಪತ್ರವನ್ನು ಹಾಕುವಾಗ ನನ್ನಲ್ಲಿ ಯಾವ ಭರವಸೆ ಇರುವುದಿಲ್ಲ. ಯಾಕೆಂದರೆ ನನ್ನೆಲ್ಲಾ ಭರವಸೆಗಳು ನಿನ್ನ ಮೌನದ ಮುಂದೆ ಸೋತು ಸುಮ್ಮನಾಗಿವೆ.

ಅದಕ್ಕೆ ಈ ಬಾರಿಯೂ ನನ್ನೆಲ್ಲ ಮನಸ್ಸಿನ ಭಾರವನ್ನು ಇಳಿಸಲು ಈ ಪತ್ರದ ಸಹಾಯವನ್ನು ಪಡೆದು ನಿನ್ನ ಹೃದಯದ ಅಂಚೆ ಪೆಟ್ಟಿಗೆಯೊಳಗೆ ಇಳಿಸುತ್ತಿರುವೆ ಅಷ್ಟೇ...‌ ಅವು ನಿನ್ನ ಮನಸ್ಸನ್ನು ಸೋಕದೆ ಮುದುಡಿ ಹೋಗುವುದು ಎಂಬ ಅರಿವಿದ್ದರೂ!


ಉರುಳುತ್ತಿದೆ ಒಂದೊಂದೇ ದಿನಗಳು. ಕರಗುತ್ತಿದೆ ಆಯುಷ್ಯದ ಕ್ಷಣಗಳು. “ಮರಳಿ” ನೀ ಬರಲಾರೆ! ನಿನಗಾಗಿ ಕೂಡಿಟ್ಟ ಅದೆಷ್ಟೋ ಕನಸುಗಳು ಮೂಲೆಯಲ್ಲಿರುವ ಪೆಟ್ಟಿಗೆಯೊಳಗಿನ ಪ್ರೇಮ ಪತ್ರಗಳಲ್ಲಿ ಮಾಸುತ್ತಿದೆ. ನಿಜ!


ಬಗೆಹರಿಯದ ಮಾತುಗಳನ್ನಾಡಿ ಪ್ರಯೋಜನವಿಲ್ಲ. ನೀನೆಲ್ಲೋ ದೂರದಲ್ಲಿ ಖುಷಿಯಾಗಿರುವೆ ಎಂಬ ನಂಬಿಕೆಯಲ್ಲಿ ಸಾಗುತ್ತಿದೆ ನನ್ನ ಬದುಕು. ದಿನದಲ್ಲಿ ಪ್ರತಿ ಕ್ಷಣಕ್ಕೊಮ್ಮೆ ಕಾಡುವ ನಿನ್ನ ನೆನಪುಗಳಿಗೆ ಸಮಾಧಾನದ ಮಾತುಗಳನ್ನು ನಾನೇ ಹೇಳಬೇಕಿದೆ ಮನಸ್ಸನ್ನು ಗಟ್ಟಿಯಾಗಿಸುತ್ತಾ.!



ಪ್ರತಿ ಬಾರಿಯೂ ಮೊರೆಯುತ್ತಾ ಬಂದು ತೀರವನ್ನು ಚುಂಬಿಸಿ ಹೋಗೋ ಸಾಗರದ ಅಲೆಗಳ ಮೇಲೆ ತಂಗಾಳಿಗೆ ವಿಪರೀತ ವ್ಯಾಮೋಹ. ಅಲೆಗಳ ಮಾತನ್ನು ಆ ತಂಗಾಳಿ ಮಾತ್ರ ಆಲಿಸುತ್ತದೆ. ಅದೆಂತಹ ಬಾಂಧವ್ಯವೋ ಅವುಗಳದ್ದು.! ಒಂದೊಮ್ಮೆ ಅವುಗಳನ್ನು ನೋಡುವಾಗ ಹೊಟ್ಟೆಕಿಚ್ಚೂ ಆಗಿದ್ದಿದೆ. ಅದರ ಜೊತೆಗೆ ಮನಸ್ಸು ಪುಳಕಗೊಂಡಿದ್ದೂ ಕೂಡಾ ಸತ್ಯ. ಆದರೂ ಈ ಅಲೆಗಳ ಸರಸ ಸಾಗುತ್ತಲೇ ಇರುತ್ತವೆ. ನಿನ್ನ ನೆನಪುಗಳ ಜೊತೆ ಬದುಕುವ ನನ್ನಂತೆ..!


ಒಲವು ಇದ್ದ ಮೇಲೆ ನೋವು ನೂರು ಸಲ ಬಂದು ಒಡಲನ್ನು ಹಿಂಡುತ್ತದೆ ಅನ್ನುವ ಸತ್ಯವನ್ನು ಅರಿತಾಗಿದೆ.. ಈಗ ನನ್ನ ಮೌನಕ್ಕೆ ತಂಗಾಳಿಯೊಂದೇ ಸಾಂತ್ವನ ನೀಡೋ ಆಲಯ.


ರಾಮನಂತೆ ಬದುಕಬೇಕು ಎಂಬ ಗುರಿಯುಳ್ಳ ನಿನ್ನಲ್ಲಿ ಅವನ ಅಷ್ಟೂ ಗುಣಗಳಿವೆ. ಆದರೆ ನಾನು ರಾಧೆಯಂತೆ ಬದುಕಿದವಳು, ಬದುಕುವವಳು!

ಇಲ್ಲೂ ನಮ್ಮಿಬ್ಬರ ಬದುಕು ಅವರಿಬ್ಬರ ಕಥೆಗಳಂತೆ ಅದಲು ಬದಲಾಗಿವೆ.


ಆ ರಾಧೆಗೆ ಕೃಷ್ಣನ ಹೆಸರೊಂದೇ ಜೊತೆಯಾಯಿತು. ನನ್ನ ಬದುಕಿನಲ್ಲಿ ನಿನ್ನ ಹೆಸರೊಂದು ನೆನಪಾಗಿ ಉಳಿದು ಹೋಯಿತು. ಇರಲಿ ಬಿಡು...


"ಹಿಡಿಯಷ್ಟಿರುವ ಹೃದಯದಲ್ಲಿ

ಹಿಡಿದಿಲಾರದಷ್ಟು ಭಾವಗಳಿರುತ್ತದೆ


ನನ್ನ ಕನಸುಗಳೆಲ್ಲಾ ಎತ್ತರದ ಗೋಡೆಯೇರಿ ಕುಳಿತಿದೆ.. ನಿನ್ನ ಆಗಮನದ ನಿರೀಕ್ಷೆಯಲ್ಲಿ.. ಅಲ್ಲಿ ಕುಳಿತು ನಿನ್ನ ದಾರಿಯನ್ನು ದೂರದವರೆಗೂ ದಿಟ್ಟಿಸುತ್ತದೆ. ನೀನು ಬರುವುದಿಲ್ಲ ಎಂಬ ಸತ್ಯಕ್ಕಿಂತ ಬರಬಹುದು ಎಂಬ ನಂಬಿಕೆಗೇ ಬಲ ಜಾಸ್ತಿ ನೋಡು..?

ಅದೇ ಕಾರಣಕ್ಕೆ ಸತ್ಯ ತಿಳಿದಿದ್ದರೂ ಈ ಮನಸ್ಸು ಮತ್ತೆ ನಿನ್ನ ದಾರಿ ಕಾಯುತ್ತಿದೆ...


Rate this content
Log in

Similar kannada story from Tragedy