ಥಪ್ಪಡ್ : ಒಂದು ಸಿನಿಮಾ ವಿಮರ್ಶೆ
ಥಪ್ಪಡ್ : ಒಂದು ಸಿನಿಮಾ ವಿಮರ್ಶೆ


ಹೆಣ್ಣು ಮಕ್ಕಳಿಗೆ ಯಾವಾಗಲೂ ತಾಯಿ ಹೇಳುವ ಮಾತು ಪದೇ ಪದೇ ಇದೇನೆ.." ನೋಡೆ!, ಬೆಳೆದು ದೊಡ್ಡವಳಾಗಿದ್ದೀಯೆ. ಸ್ವಲ್ಪ ತಗ್ಗಿ ಬಗ್ಗಿ ನಡಿಯೋದು ಕಲಿ. ನಾಳೆ ದಿವಸ ಹೋದ ಮನೇಲಿ ಹೀಗೆ ಆಡಿದರೆ, ನಮ್ಮ ಮಾನ ಮರ್ಯಾದೆ ಹೋಗುತ್ತಷ್ಟೇ.." ಅಂತ ಬೈಯ್ಯೋದು ಸರ್ವೇ ಸಾಮಾನ್ಯ. ನಾನೂ ಹೀಗೇ ಮಗಳಿಗೊಮ್ಮೆ ಗದರಿದಾಗ..
" ಅಂತಾ ಮನೇಗೆ ನಾ ಹೋದರೆ ಕೇಳು" ಅನ್ನೋದಾ?
ಹೌದು, ನಾ ಮಾಡಿದ್ದಾದರೂ ಏನು? ನನ್ನಮ್ಮ ಕಲಿಸಿದ್ದನ್ನೇ ಪುನರಾವರ್ತನೆ ಮಾಡಿ ಹೇಳಿದ್ದು ನನಗೇ ಸರಿ ಎನಿಸಲಿಲ್ಲ. ನಾವು ಹಿರಿಯರು ಬೆಳೆದು ಬಂದ ದಾರಿ, ಪರಿಸ್ತಿತಿ ಬೇರೆಯದೇ ಇತ್ತು. ಕಡುಬಡತನ, ತಿಳುವಳಿಕೆಯಿಲ್ಲದ ತಂದೆತಾಯಿಗಳು, ಸಂಸಾರ ತಾಪತ್ರಯಗಳು..ಇತ್ಯಾದಿಗಳ ಮಧ್ಯೆ ಏನೇ ಕಷ್ಟಕೋಟಲೆಗಳು ಬಂದರೂ ಸಾವರಿಸಿಕೊಂಡು ಹೊಂದಿಕೊಂಡು ಹೋಗುವ ತಾಳ್ಮೆಯನ್ನೆ ಕಲಿಸಿದ್ದರು. ಹಾಗಾಗಿ, ನಾವು ನಮ್ಮ ಸುತ್ತಮುತ್ತಲಿನ ಜನ ಸುಖವಾಗಿದ್ದಾರೆ. ಇದರರ್ಥ ನಾವು ಸುಖವಾಗಿದ್ದೀವಿ ಎಂದಲ್ಲ. ನಮ್ಮಿಂದ ಎಲ್ಲರೂ ಸಂತೋಷವಾಗಿದ್ದಾರೆ. ಹಾಗಾಗಿ, ನಾವೂ ಸಂತೋಷವಾಗಿರಲೇ ಬೇಕು. ಅಲ್ವಾ..?
ನನ್ನ ಗೆಳತಿ ಅಪರ್ಣಾಳ ಕತೆ ಬೇರೆಯೇ ಇತ್ತು. ಗಂಡ ದೊಡ್ಡ ಬಿಜಿನೆಸ್ ಮ್ಯಾನ್, ಐಶಾರಾಂ ಜೀವನ, ತವರುಮನೆಯಲ್ಲಿ ಅಷ್ಟು ಶ್ರೀಮಂತರಲ್ಲದಿದ್ದರೂ ಚಂದ ಮದುವೆ ಮಾಡಿಕೊಟ್ಟಿದ್ದರು. ಎರಡೂ ಸಂಸಾರಗಳು ಸಂತಸದ ಹೊನಲಿನಲ್ಲಿ ತೇಲುವಂತಿದ್ದವು.
ಒಂದು ದಿನ, ಅವಳ ಗಂಡನಿಗೆ ಲಂಡನ್ ಗೆ ಹೋಗುವ ಪ್ರಮೇಯ ಬರುತ್ತದೆ. ಆಫೀಸಿನ ಮುಖ್ಯ ಕೆಲಸದ ನಿಮಿತ್ತವಾಗಿ ಅನಿವಾರ್ಯ ಪರಿಸ್ತಿತಿ. ಮೊದಮೊದಲು ತಾನೊಬ್ಬನೇ ಹೋಗುವ ಇರಾದೆಯಲ್ಲಿ, ತನ್ನ ಕೊಲೀಗ್ಸ್ ಗೆ ಸಂತಸಕೂಟವೊಂದನ್ನು ಏರ್ಪಡಿಸಿದ..ತನ್ನದೆ ಮನೆಯಲ್ಲಿ ಸಂಬ್ರಮದ ಆಚರಣೆ ಸಜ್ಜಾಯಿತು. ಸುಮಾರು ಇಪ್ಪತ್ತು ಸಹೋದ್ಯೋಗಿಗಳನ್ನು ಆಮಂತ್ರಿಸಲಾಯಿತು. ಆ ಸಂಜೆ ಖುಷಿಯ ಸಮಯ. ಎಲ್ಲ ಅಥಿತಿಗಳೂ ತಿಂದು ಉಂಡು ಕುಣಿದು ಕುಪ್ಪಳಿಸುವಾಗ, ಅಪರ್ಣಾಳ ಗಂಡನಿಗೆ ಕಂಪನೀಕೊಡುತ್ತ ಪೆಗ್ ಏರಿಸಿ, ಕೇಳಿ ಬಂದ ಮಾತು ಕಿವಿಗೆ ಬಿದ್ದವು..
" ನೀನು ನಿಜಕ್ಕೂ ಲಂಡನ್ ಗೆ ಹೋಗಬೇಕಾಗಿರಲಿಲ್ಲ. ಅದನ್ನು ಬಾಸ್ ಬೇಕೆಂತಲೇ ನಿನಗೆ ಒಪ್ಪಿಸಿ, ತಾನು ಮತ್ತೊಂದು ಮಹತ್ತರವಾದ ಪ್ರೋಜೆಕ್ಟ್ ಒಂದಕ್ಕೆ ಸಹಿಹಾಕಿದ್ದಾರೆ. ನೀನಿದ್ದರೆ ಅದಕ್ಕೆ ಅವಕಾಶ ಕೊಡುವುದಿಲ್ಲ ಎಂಬ ಗುಮಾನಿ.."
ಎಂದವನ ಕಡೆ ತೀಕ್ಷವಾಗಿ ನೋಡಿದ..
ನಿಜ ಎನ್ನುವಂತೆ ತಲೆಯಾಡಿಸಿದ..
ಅಪರ್ಣಾಳ ಗಂಡ ಬಾಸ್ ಮೇಲೆ ಬಹಳ ನಂಬಿಕೆಯಿಟ್ಟಿದ್ದರಿಂದ ಈತನ ಮಾತನ್ನು ನಂಬದಾದ .
" ನಿಮಗೆ ನಾನು ಲಂಡನ್ ಹೋಗೋದು ಇಷ್ಟವಿಲ್ಲಾಂತ ಅನಿಸುತ್ತೆ. ಅದಕ್ಕಾಗಿ ನನ್ನ ಹಾಗೂ ಬಾಸ್ ಮಧ್ಯ ವಿಷ ಬೆರೆಸುವ ಕೆಲಸ ಬೇಡ ಪ್ಲೀಜ್" ಎಂದಾಗ,
" ಇಲ್ಲ ಗುರು, ನಾ ಹೇಳೋದು ನಿಜ.." ಎಂದಾಗ ಕೋಪಗೊಂಡು ಆತನ ಅಂಗಿಪಟ್ಟಿ ಹಿಡಿದು ಯಾವ ಆಧಾರದ ಮೇಲೆ ಹೀಗೆ ಒಬ್ಬರ ಮೇಲೆ ಆರೋಪ ಹೊರಿಸ್ತಿದೀರಿ ನೀವೆಲ್ಲಾ..? ಛೆ! ನನ್ನ ಸಹೋದ್ಯೋಗಿಗಳು ಎಂದು ಹೇಳಿಕೊಳ್ಳೋಕೂ ನಾಚಿಕೆಯಾಗುತ್ತದೆ ಎಂದು ಕಂಠವೇರಿಸಿ ನುಡಿದಾಗ, ಅಲ್ಲಿ ನೆರೆದ ಇತರರ ನೋಟ ಇತ್ತ ಹರಿದಿತ್ತು. ಅಪರ್ಣಾ ಅದೆಲ್ಲಿಂದಲೋ ಓಡೋಡಿ ಬಂದಳು..ಗಂಡನನ್ನು ಏನೂ ಆವಾಂತರವಾಗದಂತೆ ಬೇರೆಡೆಗೆ ಕರೆದೊಯ್ಯಲು ಕೈಹಿಡಿದು ಎಳೆದಳು...
" ಬನ್ನಿ, ಎಲ್ಲರೂ ಕಾಯ್ತಿದ್ದಾರೆ,,"
ಅವಳ ಕಡೆ ಗಮನ ಕೊಡದೇ ಒಂದೇ ಸಮನೆ ಕೂಗಾಡಿದ್ದ. ಎದುರಿಗಿನ ಆಸಾಮಿಗೂ ಕೊಂಚ ತಲೆಗೇರಿತ್ತು. ಇಬ್ಬರ ಮಾರಾಮಾರಿಯನ್ನು ತಡೆಯಲು ಮಧ್ಯೆ ನುಗ್ಗಿದ ಅಪರ್ಣಾಳನ್ನು ಸುಮ್ಮನಾಗಿಸಲಾರದೇ ಅವಳ ಕೆನ್ನೆಗೊಂದು ರಪ್ಪನೆ ಬಾರಿಸಿದ ಗಂಡನನ್ನು ಆ ಒಂದು ಕ್ಷಣ ಅವಾಕ್ಕಾಗಿ ನೋಡಿದಳು...ತಲೆಸುತ್ತು ಬಂದಂತಾಗಿತ್ತು. ಬಂದ ಅಥಿತಿಗಳೆದುರು ತನಗೆ ಅವಮಾನವಾಗಿತ್ತು..ಎಲ್ಲರೂ ಸ್ತಬ್ಧರಾಗಿ ಹೋದರು.
ಸಂತಸಕೂಟ ಶೋಕತಪ್ತವಾಯಿತು. ಅವಮಾನವನ್ನು ತಾಳದೇ ಅಪರ್ಣಾ ಒಳಗೋಡಿದಳು. ಬಂದವರೆಲ್ಲಾ ನಿಧಾನವಾಗಿ ತಮ್ಮ ಮನೆಗಳಿಗೆ ತೆರಳಿದ್ದರು.
ರಾತ್ರಿಯಿಡಿ ಮೌನ ಛಾಯೆ ಇಬ್ಬರಲ್ಲೂ...
ಗಂಡನ ಲಂಡನ್ ಪ್ರೋಗ್ರಾಮ್ ಒಂದು ಛಾಲೆಂಜಾಯಿತು. ಹೆಂಡತಿಯ ನೋವು ಅವನ ಲೆಕ್ಕಕ್ಕಿರಲಿಲ್ಲ. ಏನೂ ಆಗೇ ಇಲ್ಲವೆಂಬಂತೆ ಮಲಗಿದ್ದವನ ನೋಡಿದ ಅಪರ್ಣಾಳ ಮನ ನೊಂದು ಹೋಯಿತು. ಇಷ್ಟೇನಾ ಬದುಕು? ಇದಕ್ಕೇನಾ ನಾನು ಹಗಲಿರುಳೂ ಪ್ರೀತಿಸಿದ್ದು? ಅತ್ತೆಯವರು ಜೊತೆಯಲ್ಲಿದ್ದು, ಅವರ ಆರೋಗ್ಯ , ಆರೈಕೆ ನೋಡಿಕೊಳ್ಳುವ ನಡುವೆ, ಗಂಡನ ಜವಾಬ್ಧಾರಿಯುತ ಕೆಲಸದಲ್ಲಿ ತಾನದೆಷ್ಟು ದುಡಿದಿದ್ದಳು. ಹಗಳಿರುಳೂ ಅದೇ ಗುಂಗಿನಲ್ಲಿ. ಬೆಳಗಿನ ಜಾವದಲ್ಲೇ ಎದ್ದು ಅಡಿಗೆ ತಿಂಡಿ, ಡಬ್ಬಿ, ಮನೆಗೆಲಸ, ಅತ್ತೆಯ ಚಾಕರಿ, ಇತ್ಯಾದಿಗಳ ನಡುವೆ ತನ್ನ ಬಗ್ಗೆ ಯೋಚಿಸುವವರೇ ಇಲ್ಲವೇ? ತನ್ನ ತಪ್ಪೇನೂ ಇಲ್ಲದವಳ ಮೇಲೆ ಹಲ್ಲೆ ನಡೆದಿದ್ದರೂ ಯಾರಿಗೂ ಅದರ ಸುಳಿವೇ ಇಲ್ಲದಂತೆ ಆರಾಮಾಗಿದ್ದರು. ಅಪರ್ಣಾ ಮಾತ್ರ ಮೌನಿಯಾದಳು. ಎರಡು ದಿನ ಕಳೆದರೂ ಮಾತಿಲ್ಲ. ಇದು ಅತ್ತೆಯ ಕಣ್ಣಿಗೂ ಗೋಚರಿಸಿತು. ಹತ್ತಿರ ಕರೆದು ಕೇಳಿದರು..
" ಮಾತಾಡಿದ್ನಾ..ಅವ್ನು?"
ಅವಳ ಮೌನವೇ ಉತ್ತರವಾಗಿತ್ತು..
ಮೂರು ದಿನ ಕಳೀತು..ಆಗಲೂ ಮೌನ.
ಗಂಡನಿಗೇ ಸಾಕಾಯಿತು. "ಏನಾಯಿತು ಅಂತ ಇಷ್ಟೊಂದು ದೊಡ್ಡದು ಮಾಡ್ತಿದ್ದೀಯಾ ವಿಷಯಾನ?" ಕೇಳಿದವನ ಮುಖವನ್ನೇ ನಿರ್ಲಿಪ್ತ ಭಾವನೆಯಿಂದ ನೋಡಿದಳೇ ಹೊರತು ಮಾತು ಬರಲಿಲ್ಲ. ಅವಳ ಮನ ರೋಸಿಹೋಗಿತ್ತು..ತಾನೇನು ಮಹಾ ತಪ್ಪು ಮಾಡಿದೆನೆಂದು ಇವಳು ಕೋಪಿಸಿಕೊಂಡು ಮೌನವಾಗಿರಬೇಕು? ಇಷ್ಟಕ್ಕೂ ಅವಳೇ ಬಂದು ಮೂಗು ತೂರಿಸಿದ್ದಲ್ಲವಾ ನಮ್ಮ ಜಗಳದಲ್ಲಿ? ಕೋಪದಲ್ಲಿ ಒಂದೇಟು ಹೊಡೆದದ್ದು ನಿಜ. ಅದೇ ದೊಡ್ಡದೇನಲ್ಲ. ಹೀಗೆ ದಿನಗಟ್ಟಲೇ ಮಾತುಬಿಡೋದು ಯಾವ ನ್ಯಾಯ..? ಎಂಬ ತರ್ಕ ಅವನದಾದರೆ, ಇವಳ ಮನಸಲ್ಲಿ ಬೇರೆಯದೇ ದ್ವಂದ್ವ.
ಏನೂ ತಪ್ಪೇ ಇಲ್ಲದೇ ನಾನು ಅವಮಾನಿತಳಾಗುವುದು ಎಷ್ಟು ಸರಿ? ಬಂದವರೆದುರು, ಅಷ್ಟು ಅಪಮಾನವಾಗಿ ಹೋಯಿತಲ್ಲಾ..ಅದನ್ನು ಮರಳಿ ತರಲು ಸಾಧ್ಯವಾ..? ನಮ್ಮ ಜಗಳ ಬೇರೆಯವರಿಗೆ ನಗೆಪಾಟಲಾಗಿಲ್ಲವಾ? ಈ ರೀತಿ ಕೈಯೆತ್ತುವುದಾದರೆ, ನಮ್ಮಿಬ್ಬರ ಮಧ್ಯೆ ಪ್ರೀತಿ ಹುಟ್ಟುವುದಾದರೂ ಹೇಗೆ? ಛೆ! ನನಗೇ ಅಸಹ್ಯವಾಗುತ್ತಿದೆ...ಎನ್ನುವ ಒಳಮನಸ್ಸು ಅವಳದು...
....
ಅತ್ತೆಗೆ ಸಕ್ಕರೆ ಕಾಯಿಲೆಗೆ ಬೆಳಗಿನ ಮಾತ್ರೆಗಳನ್ನು ಕೊಡುತ್ತಾ, " ಅಮ್ಮಾ, ನಾನು ತವರಿಗೆ ಹೋಗುವ ಮನಸಾಗಿದೆ. ಒಂದಷ್ಟು ದಿನ ಇದ್ದು ಬರ್ತೀನಿ.." ತಲೆತಗ್ಗಿಸಿಯೇ ನುಡಿದಿದ್ದಳು...ಅವಳ ಮುಖವನ್ನೇ ದಿಟ್ಟಿಸಿದ ಅತ್ತೆಗೆ ಏನು ಹೇಳಲೂ ತೋಚದೆ, "ನಿನಗೆ ಸಮಾಧಾನವಾಗುವಂತಿದ್ದರೆ ಹೋಗಿ ಬಾ.. ಆದರೆ, ಇದನ್ನೇ ದೊಡ್ಡದು ಮಾಡಿಕೊಂಡು ಜೀವನ ಹಾಳು ಮಾಡಿಕೋಬೇಡಮ್ಮಾ.." ಅದೇ ಬುದ್ದಿವಾದ..
ರಾತ್ರಿ ಗಂಡನಲ್ಲೂ ಕೋರಿಕೆಯಿಟ್ಟಳು..ಅವನು ಬೇಡವೆಂದ. ಇವಳಿಲ್ಲದೇ ಮನೆ ಮನೆಯಾಗಿರೋಲ್ಲವೆಂದು ಗೊತ್ತು. ಅಮ್ಮನ ಆರೈಕೆ ಮಾಡಲಾಗೋಲ್ಲ. ತಾನು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹೋಗುವುದು ಕಷ್ಟವಾದೀತೆಂಬ ಆತಂಕ. ಅವಳದು ಒಂದೇ ಹಟ.
ಬೆಳಿಗ್ಗೆ ಟ್ಯಾಕ್ಸೀ ಬಂತು. ಸೂಟ್ಕೇಸ್ ಪ್ಯಾಕ್ ಮಾಡಿ ರೆಡಿ ಆಗಿದ್ದಳು. ಅವನು ಅವಳನ್ನು ಅಡ್ಡಗಟ್ಟಿ ನಿಂತ.
" ಇನ್ನೊಮ್ಮೆ ಯೋಚಿಸು. ಹೋಗುವುದೇ ಕೊನೆಯ ತೀರ್ಮಾನವಲ್ಲ"
" ನನಗೆ ಇಲ್ಲಿರಲು ಉಸಿರುಗಟ್ಟುವ ವಾತಾವರಣವಿದೆ. ಅಮ್ಮನ ಜೊತೆ ಕೊಂಚ ದಿನ ಕಳೆಯುವಾಸೆ"
ಎಂದಳು..
" ಹೋಗೋದಾದರೆ ಹೋಗು, ಮತ್ತೆ ನಾ ಕರೆಯೋಲ್ಲ. ಕರೆಯಲು ಬರೋದೂ ಇಲ್ಲಾ..ತಿಳೀತಾ..?
ಆಕ್ರೋಶದ ನುಡಿಗೆ,
" ಅದರ ಅವಶ್ಯಕತೆಯಿರೋಲ್ಲ. ಒಂದು ವೇಳೆ ಬಂದರೂ ಅಮ್ಮನಿಗೋಸ್ಕರ ಬರ್ತೀನಷ್ಟೇ"
"ಏನೂ ಬೇಕಿಲ್ಲ, ನಾನೇ ಎಲ್ಲಾ ನಿಭಾಯಿಸ್ತೀನಿ"
ಎನ್ನುತ್ತಾ ಇವಳಿಗೂ ಮುಂಚೇನೆ ರೆಡಿಯಾಗಿ ಆಫೀಸಿಗೆ ಹೊರಟುಹೋದವನನ್ನು ತಿರಸ್ಕಾರದಿಂದೊಮ್ಮೆ ನೋಡಿದಳು. ಇಂತವನ ಜೊತೆ ತಾನು ಹೇಗೆ ಬದುಕು ಸವೆಸಬೇಕಿತ್ತು? ಒಂದಿಷ್ಟೂ ಸಂಸ್ಕಾರವಿಲ್ಲದ ದರ್ಪದ ಮನೋಭಾವ..ತನಗೆ ಸಹಿಸಲಸದಳವೆಂದು ಅರಿತಳು..
ತೌರುಮನೆಯತ್ತ ಗಾಡಿ ಚಲಿಸಿತ್ತು...
ಅಪರ್ಣಾ ಮಾಡಿದ್ದು ಸರೀನಾ? ಇಲ್ಲಾ ಹಿರಿಯರು ಹೇಳುವಂತೆ ಸರಿದೂಗಿಸಿಕೊಂಡು ಬದುಕು ಸಾಗಿಸಬೇಕಿತ್ತಾ? ಗಂಡ ಏನೇ ಮಾಡಿದರೂ ಸರಿ. ಹೆಂಡತಿ ಸಹಿಸಿಕೋ ಬೇಕಾ..? ಅಥವಾ , ಗಂಡಸರಿಗೆ ಹೆಂಗಸರ ಮನಸು ಅರ್ಥೈಸಿಕೊಳ್ಳುವ ಸಾಮರ್ಥ ಇರೋಲ್ವಾ? ಅಥವಾ, ಅರ್ಥಮಾಡಿಕೊಳ್ಳುವ ಗೋಜಿಗೆ ಹೋಗದೇ ಕಾಲಾಯ ತಸ್ಮೈ ನಮಃ ಎನ್ನುವಂತೆ ಕಾಲಕ್ರಮೇಣ ಹೆಂಡತಿಯರೇ ಸುಮ್ಮನಾಗಿಬಿಡುತ್ತಾರೆ..ಎಂಬ ಉದಾತ್ತ ದೋರಣೆನಾ..?
ಅಪರ್ಣಾ ಹಾಗಿರಲಿಲ್ಲ. ಅವಳಿಗೆ ಸರಿಯೆನಿಸದ ವಿಷಯಗಳನ್ನು ಹಾಗೇ ಸಹಿಸಿಕೊಳ್ಳುವ ಜಾಯಮಾನದವಳಾಗಿರಲಿಲ್ಲ..
ಮುಂದೇನಾಗುತ್ತದೆಯೆಂದು ಹೇಳುತ್ತೇನೆ...
ಭಾಗ-೨
ಮುಂದಿನ ಭಾಗ...
ಸೂಟ್ಕೇಸ್ ತಳ್ಳಿಕೊಂಡು ಗೇಟ್ ಒಳಗೆ ಬಂದು ಮನೆಯ ಕಾಲಿಂಗ್ ಬೆಲ್ ಒತ್ತಿದಳು ಅಪರ್ಣಾ..
ಬಾಗಿಲು ತೆರೆದ ಅಮ್ಮನ ಮುಖದಲ್ಲಿ ಹಲವು ಪ್ರಶ್ನೆಗಳ ಚಿನ್ಹೆ. ಮೌನವಾಗಿ ಅಮ್ಮನ ಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸಿದಳು. ಹೇಳಲಾಗದ ಭಾವನೆ ಆಕೆಗೆ ತಲುಪಿತ್ತು. ಹಿಂದೆ ಸರಿದು ..
' ಬಾ ಒಳಗೆ..' ಎಂದು, ಬಾಗಿಲು ಮುಚ್ಚಿದರು..
ಅಪ್ಪನ ದನಿ ಒಳಕೋಣೆಯಿಂದ ಹರಿದು ಬಂತು..
" ಯಾರದು ಬಂದದ್ದು?"
" ನಿಮ್ಮ ಮುದ್ದಿನ ಮಗಳು, ಗಂಟುಮೂಟೆ ಕಟ್ಟಿಕೊಂಡು ಬೆಳಬೆಳಿಗ್ಗೆನೇ ಬಂದಿದ್ದಾಳೆ. ನೀವೇ ವಿಚಾರಿಸಿಕೊಳ್ಳಿ.." ಎಂದು ಅಲ್ಲೇ ಸೋಫಾಗೆ ಒರಗಿ ಕುಳಿತರು. ಅಪರ್ಣಾಗೆ ಏನು ಹೇಳಬೇಕೆಂದು ತೋಚದೆ, ಒಳಗೆ ನಡೆದಳು. ಅಪ್ಪನೆದುರು ನಿಂತು, " ನಾನು ನಿಮ್ಮ ಜೊತೆ ಒಂದಷ್ಟು ದಿನ ಇರಬೇಕೆಂದು ಬಯಸಿ ಬಂದೆ, ತಪ್ಪಾ?" ಕೇಳಿದಳು.
ಅವಳ ಮುಖದ ಭಾವ ತಂದೆಗೆ ಗೋಚರವಾದರೂ ಪ್ರಶ್ನಿಸದೇ,
" ಮಗೂ, ಇದು ನಿನ್ನ ಮನೆ. ಯಾವಾಗ ಬೇಕಾದರೂ ಬಂದುಹೋಗು. ನಾವು ಯಾರೂ ಪ್ರಶ್ನಿಸೋಲ್ಲ. ತಿಳೀತಾ?, ಕುತುಕೋ, ಚಹಾ ಮಾಡಿ ತರ್ತೀನಿ..ಎಲ್ಲರೂ ಕುಡಿಯೋಣ" , ಎಂದು ಅಪ್ಪನ ಅಷ್ಟೇ ಉತ್ಸಾಹದ ನುಡಿಗೆ ಅಪರ್ಣಾ ಕೊಂಚ ಸಮಾಧಾನದ ಉಸಿರೆಳೆದುಕೊಂಡಳು..
ಚಹಾ ಕುಡಿಯುತ್ತಾ, ನಿಧಾನವಾಗಿ ಮಾತು ಶುರು. ಅಮ್ಮನ ನಯವಾದ ಮೂದಲಿಕೆ, ಇದು ನಿನ್ನ ಮನೆಯಲ್ಲ ಕಣೆ, ಅದೇ ನಿನ್ನ ಮನೆ. ಮದುವೆ ಆದ ಮೇಲೆ , ನೀನು ಅವರ ಸ್ವತ್ತು. ಹೀಗೆ ಏನೋ ಎಡವಟ್ಟು ಮಾಡಿಕೊಂಡಿದ್ದರೆ ಈಗಲೇ ಸರಿಪಡಿಸಿಕೋ. ಅದನ್ನು ಹೆಚ್ಚು ಬೆಳೆಯಲು ಬಿಡಬೇಡವೆಂಬ ಬುದ್ಧಿವಾದ. ಅಪ್ಪನ ಮೌನ ಉತ್ತರ. ಅಪರ್ಣಾ ನಿಧಾನವಾಗಿ ನಡೆದ ಘಟನೆಗಳನೆಲ್ಲಾ ವಿವರಿಸಿ, ತನಗಾದ ಅವಮಾನದಿಂದ, ಅಲ್ಲಿ ನೆಮ್ಮದಿಯಿಲ್ಲದೇ ತವರಿಗೆ ಬಂದುದಾಗಿ ಹೇಳಿದಾಗ, ತಾಯಿಗೆ ಜಂಘಾಬಲವೇ ಉಡುಗಿತು..
ಪತಿಯೊಂದಿಗೆ, ..ನಾವು ಇವಳನ್ನು ಬೆಳೆಸುವುದರಲ್ಲಿ ಏನು ಕಮ್ಮೀ ಮಾಡಿದ್ವಿ? ಚೆನ್ನಾಗಿ ವಿಧ್ಯಾಭಾಸ ಮಾಡಿಸಿ, ಒಳ್ಳೆಯ ಶ್ರೀಮಂತ ಮನೆತನದಲ್ಲಿ ಚಂದದ ಹುಡುಗನಿಗೆ ಮದುವೆ ಮಾಡಿಕೊಟ್ವಿ. ಸುಖವಾಗಿರೋದು ಬಿಟ್ಟು ರಂಪರಾಮಾಯಣ ಮಾಡಿಕೊಂಡಿದ್ದಾಳೆ..ಎಲ್ಲಾ ನಿಮ್ಮ ಮುದ್ದಿಂದಲೇ ಇವಳು ಹಾಳಾದದ್ದು..ಎಂಬ ಕೊಂಕು..
ಅಮ್ಮನ ಮಾತು ಕಹಿ ಅನಿಸಿದರೂ, ಆ ದನಿಯಲ್ಲಿನ ಆತಂಕ, ನೋವು ಅಪರ್ಣಾಗೆ ಅರ್ಥವಾಗಿತ್ತು. ಎದುರಾಡುವ ಗೋಜಿಗೆ ಹೋಗಲಿಲ್ಲ. ಮೌನವೇ ಉತ್ತರ ಅವಳದು. ಇದೇ ನನಗೆ ಬಹಳ ಹಿಡಿಸಿದ್ದು..
ಗೆಳೆಯರೇ, ನಿಮಗೆ ನನ್ನ ಅಮ್ಮನ ಗಂಡನ ಮನೆಯ ಪ್ರಸಂಗವೊಂದನ್ನು ಹಂಚಿಕೊಳ್ಳಲೇಬೇಕೆಂದು ಅನಿಸುತ್ತಿದೆ..
ನನ್ನ ಹೆತ್ತಮ್ಮ, ತನ್ನ ಪುಟ್ಟ ವಯಸಿನಲ್ಲೇ ಮದುವೆಯಾಗಿ ಗಂಡನ ಮನೆಗೆ ಬಂದಾಗ, ತನ್ನ ಪತಿ, ಮೈದುನ ಮತ್ತು ಅವನ ಹೆಂಡತಿ..ಅಂದರೆ ವಾರಗಿತ್ತಿ, ಅತ್ತೆ, ಇಷ್ಟು ಜನರ ಒಟ್ಟು ಕುಟುಂಬದಲ್ಲಿ ಸಂಸಾರ ತೂಗಿಸಬೇಕಿತ್ತು. ಹಳ್ಳಿಯ ವಾತಾವರಣ, ರೈತರ ಉದ್ಯೋಗ, ಅತ್ತೆಯ ಕಾಟ, ಹೊಲಗದ್ದೆಗಳ ಚಾಕರಿ..ಇತ್ಯಾದಿ ಬಹಳ ಕಷ್ಟದ ದಿನಗಳೇ. ಹೀಗಿರುವಾಗ, ಒಮ್ಮೆ ಅಡಿಗೆಯಲ್ಲಿ ಉಪ್ಪು ಹೆಚ್ಚಾದ ಕಾರಣ, ಗಂಡ ಮತ್ತೆ ಮೈದುನ ಸೇರಿ, ಈ ಇಬ್ಬರು ಸೊಸೆಯಂದಿರಿಗೆ ಪಾಠ ಕಲಿಸಲೆಂದು ತಟ್ಟೆಯ ಅನ್ನಕ್ಕೆ ಒಂದು ಹಿಡಿ ಉಪ್ಪು ಬೆರೆಸಿ ತಿನ್ನಲು ಹೇಳಿದ್ದರಂತೆ. ಅಷ್ಟು ಉಪ್ಪಿನಾಂಶದ ಊಟ ತಿನ್ನಲಾಗದೇ ಒದ್ದಾಡುತ್ತ ತಿಂದು ಮುಗಿಸಿ, ಬೆಳಗಿನ ಜಾವ ಮುಖಮೂತಿಯೆಲ್ಲಾ ಊದಿಸಿಕೊಂಡ ಘಟನೆ ಈಗಲೂ ನೆನಪಿಸಿಕೊಂಡು ಹೇಳುತ್ತಿರುತ್ತಾರೆ. ಇದು ಅಂದಿನ ಕಾಲ. ಈಗಲೂ ಏನೂ ಕಡಿಮೆಯಿಲ್ಲ. ಕೆಲವು ಗಂಡಂದಿರೂ ಅವಹೇಳನೆ ಮಾಡುತ್ತಾರೆ..ಆಗಾಗ ಚುಚ್ಚಿ ಮಾತಾಡೋದು , ಮನೆಗೆ ಬಂದವರೆದುರು ಕೊಂಕು ನುಡಿದು ಮರ್ಯಾದೆ ತೆಗೆಯೋದು..ಇತ್ಯಾದಿ ನಡೆಯುತ್ತವೆ. ಗೃಹಿಣಿ ಓದುಬರಹ ತಿಳಿಯದವಳಾಗಿದ್ದರೆ, ಅವರದೇ ಮೇಲುಗೈ. ಅವಳೇನಾದರೂ ತಿರುಗಿಬಿದ್ದರೆ, ಆಡಬಾರದ ನುಡಿಗೆ ತುತ್ತಾಗಬೇಕಷ್ಟೇ. ಇದು ಪುರುಷಪ್ರಧಾನವಾದ ಸಮಾಜ. ನಾವು ಎಷ್ಟೇ ಮುಂದುವರಿದವರಾದರೂ ಸಹ, ಒಂದೆರಡು ಘಟನೆಗಳಲ್ಲಾದರೂ ಪಶುತ್ವದ ಬುದ್ದಿ ತೋರಿಸಿಯೇ ಇರ್ತಾರೆ...ಇದು ಸಹನೆಯ ಒಂದು ಮುಖವಷ್ಟೇ..
ನನ್ನ ತಾಯಿ ಅಂತಹ ಗುಂಪಿಗೆ ಸೇರಿದವರು. ಅಪ್ಪನ ಸಾವಿನ ಕೊನೇತನಕವೂ ಅಂಜಿ, ಅಳುಕಿದವರು, ನಾನೇ ಬಹಳಷ್ಟು ಸಲ, ಅಪ್ಪನಿಗೆದುರು ವಾದಿಸಿದ್ದುಂಟು...ನನಗಿಷ್ಟವಿಲ್ಲದ ವಿಷಯಕ್ಕೆ ನಾನೆಂದೂ ಸಮರ್ಥಿಸಿಕೊಂಡಿರಲಿಲ್ಲ.
ಅಪರ್ಣಾಳ ಬದುಕೂ ಸಹ ಇದಕ್ಕೆ ಹೊರತೇನಾಗಿರಲಿಲ್ಲ. ಅವಳು ನನ್ನ ಹಾಗೇ ಧೈರ್ಯವಾಗಿ ಮನೆಬಿಟ್ಟು ಬಂದಿದ್ದಳು..ಇದು ತಪ್ಪು ನಿಜ. ಅದನ್ನು ಅಲ್ಲೇ ಬಗೆಹರಿಸಿಕೊಳ್ಳಬೇಕಿತ್ತು. ಅವನ ಕಪಾಳಕ್ಕೆ ತಿರುಗಿ ಕೊಟ್ಟಿದ್ದರೆ, ...ಎಂಬ ಅನಿಸಿಕೆಯಷ್ಟೇ..
ಆದರೆ, ಅದು ಹಾಗಾಗಲಿಲ್ಲ. ತಾನು ಬೆಳೆದ ವಾತಾವರಣ ಹಾಗಿಲ್ಲ. ಗಂಡನ ತಾಯಿ, ಇದನ್ನು ಮಗನಿಗೆ ಕಲಿಸಲಿಲ್ಲ. ಸುಸಂಸ್ಕೃತಿ ಬಾಲ್ಯದಿಂದ ಬರಬೇಕು. ವಯಸ್ಕರಾದ ಮೇಲೆ ಕಲಿಯಲು ಸಾಧ್ಯವಿಲ್ಲ ಎಂದು ಒಪ್ಪುತ್ತೀರಿ ತಾನೇ..
ಮಗಳ ಮನಸು ಸಮಾಧಾನವಾಗಲೆಂದು ತಂದೆ ವಿಷಯ ಬದಲಿಸಿದರು. ತಮ್ಮನಿಗೆ ಮದುವೆ ನಿಶ್ಚಯವಾಗಿದೆ. ಹುಡುಗಿ ಲಾಯರ್..ಇನ್ನೇನು ಹತ್ತಿರದಲ್ಲೇ ಮದುವೆ ಮುಹೂರ್ತವೆಂದಾಗ ಅಪರ್ಣಾಳಿಗೂ ಖುಷಿಯಾಯ್ತು..
ರಾತ್ರಿ ಊಟದ ಸಮಯ, ಎಲ್ಲರೂ ಒಟ್ಟಿಗೆ ಸೇರಿದಾಗ, ತಮ್ಮನ ಹೆಂಡತಿಯಾಗುವವಳನ್ನು ಮನೆಗೆ ಕರೆದು ಪರಿಚಯಿಸಿದ್ದ ತಮ್ಮನನ್ನು ಅಭಿನಂದಿಸಿದಳು. ಎಲ್ಲರೂ ಖುಷಿಯಲ್ಲಿದ್ದಾಗ, ವಿಷಯ ತಿಳಿದ ತಮ್ಮ ಅಕ್ಕನ ಮೇಲೆ ಕಿಡಿಕಾರಿದ. ಇಷ್ಟು ಸಣ್ಣ ವಿಷಯಕ್ಕೆ ಹೊರಟುಬಂದೆಯಾ?, ಅದು ಸಾಮಾನ್ಯ ಎಲ್ಲರ ಸಂಸಾರದಲ್ಲಿ ನಡೆದೇ ಇರುತ್ತದೆ ತಾನೇ..? ಸಾವರಿಸಿಕೊಂಡು ಹೋಗೋದು ಬಿಟ್ಟು, ಹೀಗೆ ಬಂದರೇನು ಅರ್ಥ?..
ಒಮ್ಮೆಲೇ ವಾತಾವರಣ ಬಿಸಿಯಾಯ್ತು..
ಅಪ್ಪನೇ ಮಧ್ಯಸ್ತಿಕೆ ವಹಿಸಿ ಸಮಾಧಾನಿಸಿ, ಒಂದೆರಡು ದಿನ ಇರಲಿ ಬಿಡು..ಅವಳ ಮನಸಿಗೂ ಕೊಂಚ ಬೇಸರವಾಗಿದೆ...ಎಂದರು..
" ಅಂದರೆ, ನೀನು ಹೇಳುವುದೇನು ? ನಾನು ಏಟು ತಿಂದರೂ ಸಹಿಸಿಕೊಂಡು ಅಲ್ಲೇ ಇರಬೇಕಿತ್ತಾ..? ನನಗೂ ಸ್ವಾಭಿಮಾನ, ಬೆಲೆ ಏನೂ ಇಲ್ಲದೇ ಬದುಕು ಅಂತೀಯಾ? ತಮ್ಮನಿಗೆ ಸವಾಲೆಸೆದಳು..
" ಮತ್ತಿನ್ನೇನು? ಯಾರಾದರೂ ಕೇಳಿಸಿಕೊಂಡರೆ, ನಮ್ಮ ಮರ್ಯಾದೆ ಮೂರುಕಾಸಿಗೆ ಹರಾಜಾಗೋದು ಗ್ಯಾರೆಂಟೀ. ಗಂಡನ್ನ ಬಿಟ್ಟು ಬಂದಿದ್ದಾಳೆ ಅಂತ.." ಅವನ ದನಿಯೇರಿತ್ತು..
ಅಪರ್ಣಾಗೆ ಮತ್ತಷ್ಟು ಅಪಮಾನ..ಅದೂ ತನ್ನ ತಮ್ಮನ ಭಾವೀ ಪತ್ನಿಯೆದುರಿಗೆ...ಇದು ಬೇಕಿತ್ತಾ ತನಗೇ? ತಾನೇಕೆ ಇಷ್ಟು ಸಹಿಸಿಕೊಳ್ಳಬೇಕು? ಯಾವ ತಪ್ಪು ಮಾಡಿದೇಂತಾ ? ಸ್ವಂತ ಒಡಹುಟ್ಟಿದ ತಮ್ಮನೇ ಹೀಗೆ ಅರ್ಥವಾಗದೇ ನುಡಿದರೆ, ಮತ್ತೆ ನನ್ನ ನೋವನ್ನು ಯಾರು ಅರ್ಥ ಮಾಡಿಕೊಳ್ಳಬಲ್ಲರು?...ಅವಳ ಕಣ್ಣಲ್ಲಿ ಹನಿಜಿನುಗಿತು...
ಕವಿತಾ ..ಭಾವೀ ಪತ್ನಿ ಮಾತ್ರ, ಇದಕ್ಕೆ ಹೊರತಾಗಿದ್ದಳು...
" ಭಾವೀ ಗಂಡನ ಮಾತನ್ನು ಅಲ್ಲಗಳೆದು, ಅಕ್ಕಾ.., ನೀವು ಮಾಡಿದ್ದೇ ಸರಿ. ಏನೂ ಯೋಚನೆ ಮಾಡಬೇಡಿ...ಎಲ್ಲ ಸರಿಹೋಗುತ್ತದೆ. ಸ್ವಲ್ಪ ಕಾಲಾವಕಾಶ ಬೇಕು. ನೀವು ಆರಾಮಾಗಿರಿ ಒಂದಿಷ್ಟು ದಿನ. " ಎಂದು ಹೇಳಿದಾಗ, ಆಕೆಯ ಮೇಲೆ ಹರಿಹಾಯ್ದ ತಮ್ಮನ ವರ್ತನೆ ಎಲ್ಲ ಗಂಡಸರೂ ಒಂದೇ ಜಾತಿಗೆ ಸೇರಿದವರೆಂದು ಅಪರ್ಣಾಗೆ ಅನಿಸದಿರಲಿಲ್ಲ.
ನಂತರ, ಅಮ್ಮನ ಆತಂಕ, ಅಪ್ಪನ ಕೆಂಗಣ್ಣು ಕಂಡು ಕವಿತಾಗೆ ಸಾರಿ ಹೇಳಿ ಮನೆಗೆ ಕಳಿಸಿಕೊಡ್ತಾನೆ...ಇದು ಇಂದಿನ ನಾಗರೀಕತೆಯ ಸಭ್ಯತೆ..
ಒಂದು ಹೆಣ್ಣು ಗಂಡನ ಮನೆಯಲ್ಲಿ ಅನುಭವಿಸಿದ ಕಷ್ಟವನ್ನು ತಾಯಿ ಅರಿತಿರಬೇಕು.. ಇಲ್ಲಾ ಒಡಹುಟ್ಟಿದವರು ಅರ್ಥಮಾಡಿಕೊಳ್ಳಬೇಕು. ಇಬ್ಬರೂ ಅರಿಯದೇ ಹೋದರೆ ಅವಳ ಪಾಡು ನಾಯಿ ಪಾಡು...
ಅಪರ್ಣಾಳ ತಂದೆ ಎಷ್ಟು ಹೆಂಗರುಳು ಎಂದರೆ, ಯಾವತ್ತೂ ಹೆಣ್ಣು ಮಕ್ಕಳನ್ನು ನೋಯಿಸಿದವರಲ್ಲ..ಥೇಟ್ ನನ್ನಪ್ಪನಂತೆಯೇ..ಅವರೂ ಸಹ ನನ್ನ ಯಾವ ಬೇಡಿಕೆಯನ್ನೂ ಅಲ್ಲಗಳೆದವರಲ್ಲ. ಅಷ್ಟು ಪ್ರೀತಿ ವಾತ್ಸಲ್ಯ ತೋರಿದ್ದರು. ಅಮ್ಮ ಅದಕ್ಕೆ ತದ್ವಿರುದ್ಧವಾಗಿದ್ದರು..
*********
ಎರಡು ದಿನ ಕಳೆದು,ಗಂಡ ವಿಕ್ರಂ ಮನೆ ಬಾಗಿಲು ಬಡಿದಾಗ, ಇವಳು ಮೌನವಾಗಿ ಅವನನ್ನೇ ದಿಟ್ಟಿಸಿದ್ದಳು..
ಅಪ್ಪ ಮಾತ್ರ ಚಹ ಮಾಡುವ ನೆಪದಲ್ಲಿ ಅಡಿಗೆ ಕೋಣೆಗೆ ನಡೆದದ್ದು, ಇವರುಗಳೇ ಬಗೆಹರಿಸಿಕೊಳ್ಳಲಿ ಎಂಬ ಆಶಯದಲ್ಲೇ...ಅಮ್ಮ ಹಾಲ್ಗೆ ಬರದೇ ತಪ್ಪಿಸಿಕೊಂಡರು..
ವಿಕ್ರಂ..ಮಾತ್ರ, ಏನೂ ನಡೆದೇ ಇಲ್ಲದಷ್ಟು ಕೂಲಾಗಿ, " ನಡೀ ಮನೆಗೆ, ಎರಡು ದಿನ ಆಯ್ತಲ್ಲಾ...? ಅಲ್ಲಿ ಅಮ್ಮನಿಗೆ ಕಷ್ಟ ಆಗುತ್ತೆ. ನಾನು ಆಫೀಸು ನಿಭಾಯಿಸೋದು ಕಷ್ಟ.." ಮತ್ತದೇ ರಾಗ...
" ಇಲ್ಲ, ನಾನೀಗಲೇ ಬರೋಲ್ಲ. ಸ್ವಲ್ಪ ಕಾಲಾವಕಾಶ ಬೇಕು.." ಅಪರ್ಣಾಳ ಅಹವಾಲು..
" ನೋಡು, ಹೀಗೆ ಹಠ ಒಳ್ಳೆದಲ್ಲ, ನನ್ನ ತಲೆ ಕೆಟ್ಟು ಕೆರ ಆಗಿದೆ. ಆಗಿದ್ದು ಆಗಿಹೋಯಿತು. ಏನು ಮಾಡೋಕಾಗುತ್ತೆ? ನೀನು ಬಾ ಈಗಲೇ..ನಾನು ಮಾಡೋದೆಲ್ಲಾ ನಿನಗೋಸ್ಕರ ತಾನೇ?" ಎಂದಾಗ,
" ನನಗೋಸ್ಕರನಾ?, ನಿಮಗೆ ನಿಮ್ಮ ವೃತ್ತಿಯೇ ಹೆಚ್ಚಾಯಿತು. ಅದರ ಟೆನ್ಶನ್ ಮನೆವರೆಗೂ ತಂದು ಎಲ್ಲರ ನೆಮ್ಮದಿ ಹಾಳುಮಾಡೋದು ಯಾವ ನ್ಯಾಯ? ಹಾಗೆ ನೋಡಿದರೆ, ನಾನೂ ಇಷ್ಟು ದಿನ ಅದೇ ಅರ್ಥದಲ್ಲಿ ಬದುಕಿದ್ದೆ. ಅದೇ ಅರ್ಥದಲ್ಲಿ ಎಲ್ಲ ವಿಷಯದಲ್ಲೂ ಭಾಗಿಯಾಗಿದ್ದು ನಿಜ. ಯಾವತ್ತು ನನ್ನ ಮೇಲೆ ಕೈಮಾಡುವಷ್ಟು ಹೀನ ಮಟ್ಟಕ್ಕೇ ನೀವು ಇಳಿದಿರೋ.. ಅಂದೇ ನನಗೆ ಎಲ್ಲವೂ ಸ್ಪಷ್ಟವಾಗಿ ಹೋಯ್ತು..ಇದು ಅಧಿಕಾರದ ಮಧ! ಶ್ರೀಮಂತಿಕೆಯ ಅಹಂ. ಗಂಡಸಿನ ದರ್ಪ . ಅದು ನನಗೆ ಅರ್ಥವಾಗಿರಲೇ ಇಲ್ಲ. ಯಾಕೆಂದರೆ, ನಾನು ನನ್ನ ಸುತ್ತಲಿರುವ ಭ್ರಮೆಯಲ್ಲಿ ಸಿಲುಕಿಕೊಂಡಿದ್ದೆ. ಅದರಿಂದ ಹೊರಬಂದ ಮೇಲಷ್ಟೇ ತಿಳಿಯಿತು..ನಿಜವಾದ ಸಂಗತಿ ಏನೆಂದು"...
" ಏನು ತಿಳಿದಿದೆ, ನಿನ್ನತಲೆ, ಸುಮ್ನೇ ಏನೇನೋ ಯೋಚನೆ ಮಾಡಿ ಜೀವನ ಹಾಳು ಮಾಡಿಕೋಬೇಡ..ಯೋಚನೆ ಮಾಡು ಇನ್ನೊಮ್ಮೆ.." ಅವನ ಮಾತಿಗೆ ಅವಳ ನಕಾರ...
ಒಳಗಿದ್ದ ಅಪ್ಪ ಚಹಾದ ಕಪ್ಪಿನೊಂದಿಗೆ ಬಾಗಿಲಲ್ಲೇ ತಡೆದು ಆಲಿಸಿದ್ದರು..
ಅಳಿಯ ಅಡಿಗೆ ಮನೆ ಬಳಿ ನಿಂತ ಮಾವನೆಡೆ ನೋಡಿ.." ನೀವಾದರೂ ಹೇಳಿ...ಈಗ ಏಂತಾದ್ದು ಆಗಿದೇಂತ? "
" ಹೌದಾ..? ಎಂತದ್ದೂ ಆಗೇ ಇಲ್ವಾ ಹಾಗಾದರೆ? ಅವಳು ಸುಮ್ನೇ ಬಂದದ್ದಾ ?"
" ಹಂಗಿಲ್ಲ ಮಾವ, ಸಣ್ಣದೊಂದು ತಪ್ಪು ನಡೆದುಹೋಯಿತು. ಈಗ ಏನು ಮಾಡೋದು? ಅದನ್ನು ಸರಿಪಡಿಸೋಕಾಗುತ್ತಾ..?"
" ಆ ತಪ್ಪು ಯಾಕಾಯ್ತು..?"
" ಹೌದು, ನಾನು ಕುಡಿದಿದ್ದೆ, ರೇಗಿದ್ದು ನಿಜ. ಲಂಡನ್ ಹೋಗುವ ಆತುರ, ಎಲ್ಲಿ ಅವಕಾಶ ಕೈತಪ್ಪಿ ಹೋಗುತ್ತೋ ಅನ್ನುವ ಆತಂಕದಲ್ಲಿ ಒಂದೇಟು ಹೊಡೆದದ್ದು ನಿಜ. ಅದಕ್ಕೆ ಇಷ್ಟೊಂದು ಕೋಪ ಒಳ್ಳೆದಲ್ಲ..ಅಲ್ವಾ?"
" ಅದನ್ನು ಅವಳೇ ಹೇಳಬೇಕು,. ಅವಳೇ ಏಟು ತಿಂದವಳು. ಅವಮಾನ ಆಗಿರೋದು ಅವಳಿಗೆ. ಅವಳದೇ ತೀರ್ಮಾನ . ನಂದೇನಿದೇ..?"
ಮಾವನ ನುಡಿಯಿಂದ ಬಂದ ದಾರಿಗೆ ಸುಂಕವಿಲ್ಲದೇ ಹೊರನಡೆದ ವಿಕ್ರಂ....
ಇಂತಹ ಪ್ರಕರಣಗಳು ನಮ್ಮ ನಿಮ್ಮ ನಡುವಿನ ಎಷ್ಟೋ ಸಂಸಾರದಲ್ಲಿ ದಿನನಿತ್ಯ ನಡೆಯುತ್ತಲೇ ಇರುತ್ತವೆ. ಎಷ್ಟು ಜನ ಸಹಿಸಿಕೋತಾರೆ, ಎಷ್ಟು ಜನ ತಿರುಗಿಬೀಳ್ತಾರೆ. ಎಷ್ಟು ಜನರಿಗೆ ನ್ಯಾಯ ಸಿಗುತ್ತೇ ಎನ್ನೋದು..ನೀವೇ ಯೋಚಿಸಿ...