ಅಶ್ವಿನೀ ಕುಮಾರರು...-೧
ಅಶ್ವಿನೀ ಕುಮಾರರು...-೧
ಅಶ್ವಿನೀ ಕುಮಾರರು...-೧
ಆಟೋ ಒಂದು ಬರ್ರನೆ ಹೊರಟಿತ್ತು. ಒಳಗೆ ಕುಳಿತಿದ್ದ ಗಂಡಸೊಬ್ಬರು, ಪಕ್ಕದಲ್ಲಿ ಕುಳಿತ ಹೆಂಗಸನ್ನು ತೋಳಿನಾಸರೆಯಿಂದ ತಬ್ಬಿ ಹಿಡಿದು ಸಮಾಧಾನ ಹೇಳುವಂತಿತ್ತು. ಏನೋ ನೋವು. ನರಳುವಿಕೆ ಆಕೆಯ ದನಿಯಲ್ಲಿ. ಕೂರಲೂ ಆಗದಷ್ಟು ನಿತ್ರಾಣ. ತೊಟ್ಟ ಬಟ್ಟೆ ಅಸ್ತವ್ಯಸ್ತವಾಗಿತ್ತು. ಆಟೋದವನು ಗಾಡಿ ಓಡಿಸುತ್ತಲೇ ಇತ್ತ ಒಂದು ಕಣ್ಣಲ್ಲಿ ನೋಡುತ್ತಿದ್ದ. ತಡೆಯದೇ , ಏನಾಗಿದೆ ಸರ್ ಅಮ್ಮಾವರಿಗೆ? ಕೇಳಿದ.
ಅವರಿಗೆ ತುಂಬಾ ಹುಶಾರಿಲ್ಲ. ಆಸ್ಪತ್ರೆಗೆ ಹೋಗಬೇಕು. ಬೇಗ ನಡಿಯಪ್ಪಾ ಅಂದ. ಸರಿ ಸರ್, ಎನ್ನುತ್ತ ಸ್ಪೀಡಾಗಿ ಹೊರಟ.
ಸುಮಾರು ದೂರ ಹೋದ ನಂತರ, ಎದುರಿಗೆ ಕಂಡ ಅಶ್ವಿನೀ ಆಸ್ಪತ್ರೆ ಹತ್ತಿರ ನಿಲ್ಲಿಸಿದ. ಸರ್, ಇಲ್ಲಿ ಇದೇ ಫೇಮಸ್ಸು. ಡಾಕ್ಟರ್ ತುಂಬಾ ಚೆನ್ನಾಗಿ ನೋಡ್ತಾರೆ. ಕರಕೊಂಡೋಗಿ ಸರ್ ಅಂದ..ಸರಿಯೆಂದು ತಲೆಯಾಡಿಸಿ, ಅವನಿಗೆ ಹಣ ಪಾವತಿಸಿದ. ಮೆಲ್ಲಗೆ ಆ ಯುವತಿಯನ್ನು ಕೆಳಗಿಸಿಕೊಂಡು , ರಟ್ಟೆ ಹಿಡಿದು ನಡೆಸಲು ಪ್ರಯತ್ನಿಸಿದ. ಅವಳಿಗೋ ಹೆಜ್ಜೆ ಎತ್ತಿಡಲೂ ಆಗದಷ್ಟು ಸುಸ್ತು. ನೋಡಲು ಸುಂದರ ರೂಪ. ಹಾಲಿನ ಮೈಬಣ್ಣ. ಮೂವತ್ತು , ಮೂವತ್ತೈದರ ವಯಸ್ಸು. ಪಾಪ, ಏನೋ ಸಂಕಟ, ನೋವು. ಒಬ್ಬಳೇ ರಸ್ತೇಲಿ ಬರುತ್ತಿದ್ದಾಗ ಕುಸಿದು ಬಿದ್ದ ಕಾರಣ, ಈತ ಕನಿಕರ ಗೊಂಡು ಅವಳನ್ನು ಹತ್ತಿರದ ಆಸ್ಪತ್ರೆಗೆ ಕರೆತಂದಿದ್ದ. ಯಾರೋ ಏನೋ , ಗುರುತು ಪರಿಚಯವಿಲ್ಲದ ಹೆಂಗಸು. ಸಹಾಯ ಮಾಡುವ ಒಳ್ಳೆಯ ಮನಸು ಆತನದು. ಅವಳ ಪಾಲಿಗೆ ಅವನೇ ದೇವರಾಗಿ ಕಂಡ. ಹೇಗೋ ಆಸ್ಪತ್ರೆ ಆವರಣದೊಳಗೆ ಬಂದರು.
ಕೂಡಲೆ, ನರ್ಸ್ ಒಬ್ಬಳು ಓಡಿ ಬಂದು ಅಲ್ಲೇ ಇದ್ದ ಸ್ಟ್ರೆಚ್ಛರ್ ತಂದಳು. ಮೆಲ್ಲಗೆ ಅವಳನ್ನು ಅದರ ಮೇಲೆ ಮಲಗಿಸಿ ಒಳಕರೆದುಕೊಂಡು ಹೋದಳು. ಈತನೂ ಹಿಂದೆಯೇ ಹೋದ. ಸುತ್ತಲೂ ವಿಶಾಲವಾದ ಸ್ಥಳ. ರಿಶೆಸ್ಪನಿಸ್ಟ್ ಇರುವೆಡೆಗೆ ಬಂದು ವಿವರ ತಿಳಿಸಿದ..ಹೀಗೆ ಹೀಗೆ ಅಂತ..
ಆಕೆ ತನಗೇನೂ ಸಂಬಂಧಿಯಲ್ಲವೆಂದೂ, ಸಹಾಯ ಮಾಡೋಣವೆಂದು ಕರೆತಂದೆ. ಎಂದು ಹೇಳಿದವನ ಮಾತಿಗೆ ನರ್ಸ್ ಮುಗುಳುನಕ್ಕಳು. ಕೆಲವು ಕಾಗದ ಪತ್ರಗಳಲ್ಲಿ ಸಹಿ ಮಾಡಿಸಿಕೊಂಡಳು.
ವಿವರಗಳನ್ನು ತಾನೆ ಬರೆದುಕೊಂಡಳು. 'ಪೇಶೆಂಟ್ ಹೆಸರೇನು ಸರ್..? ಕೇಳಿದಳು.
ಅದೇ ಗೊತ್ತಿಲ್ಲ ಅವನಿಗೆ. ಕೇಳುವ ಪ್ರಮೇಯ ಬರಲಿಲ್ಲ. 'ಆಕೆಯನ್ನೇ ಕೇಳಿ ಮೇಡಂ'...ಎಂದ.
ನರ್ಸ್ ಇನ್ನೊಬ್ಬ ನರ್ಸನ್ನು ಕರೆದು ತಿಳಿದುಕೊಂಡು ಬರಲು ಹೇಳಿದಳು..
ಮರಳಿ ಬಂದವಳು, ಅವರ ಹೆಸರು 'ಸ್ಪೂರ್ಥಿ.'.ಅಂದಳು...
ಸ್ಪೂರ್ಥಿ!..ಹೆಸರು ಚಂದ ಅನಿಸಿತು ಅವನಿಗೆ.
ಹಣ ಎಷ್ಟು ಕಟ್ಟಬೇಕೆಂದು ಕಾರ್ಡು ಚಾಚಿದ.
ನರ್ಸ್ ಅವನತ್ತ ನೋಡಿ..
'ಏನೂ ಬೇಡ ಸರ್...ಇಂತಹ ಪೆಶೆಂಟ್ಗಳ ಚಿಕಿತ್ಸೆಗೆ ನಮ್ಮಲ್ಲಿ ಉಚಿತ ಸೌಲಭ್ಯವಿದೆ. ನಿವು ಮಾಡಿರುವ ಉಪಕಾರವೇ ಹೆಚ್ಚು ಆಕೆಗೆ' . ಎಂದು ನಮ್ರವಾಗಿ ನುಡಿದಾಗ, ಇವನಿಗೆ ತನ್ನ ಕಿವಿಯನ್ನೇ ನಂಬದಾದ. ಇಂತಾ ಒಂದು ಆಸ್ಪತ್ರೆ ಇದೆಯೆಂದು ಇವತ್ತೇ ತಿಳಿದದ್ದು . ಬಹಳ ಸಂತೋಷವಾಯಿತು. 'ಧನ್ಯವಾದಗಳು'..ಎಂದ. ಅವನ ಮುಖದಲ್ಲಿ ಸಂತಸ, ಸಮಾಧಾನ ಉಕ್ಕುತ್ತಿರುವುದನ್ನು ಕಂಡು ನರ್ಸ್ , ..
'ನಮ್ಮ ಆಸ್ಪತ್ರೇಲಿ ಡಾಕ್ಟರ್. ಸಂಧಿಪ್ ಅಂದರೆ ದೇವರ ಸಮಾನ. ಅವರೆಂದರೆ ಎಲ್ಲರಿಗೂ ಪಂಚಪ್ರಾಣ. ಯಾವುದೇ ಕಾರಣಕ್ಕೆ, ಬಡವರನ್ನು ಸುಲಿಗೆ ಮಾಡುವುದಾಗಲಿ, ಹಣ ಇಲ್ಲದ ಕಾರಣ ಚಿಕಿತ್ಸೆಯಿಲ್ಲದೇ ವಾಪಸ್ ಕಳಿಸುವಂತ ಕೆಲಸ ಇದೂವರೆಗೂ ಮಾಡಿಲ್ಲ ಸರ್. ಇದೇ ಸ್ಪೆಶ್ಯಾಲಿಟೀ ಇಲ್ಲಿ'..ಅಂದಳು..
ಅವಳ ಕಣ್ಣಲ್ಲಿ ತಾನಿಲ್ಲಿ ಕೆಲಸಕ್ಕಿರುವುದೇ ಒಂದು ಮಹಾ ಭಾಗ್ಯ ಎನ್ನುವ ಹೆಮ್ಮೆಯಿತ್ತು.
ಕರಗಳನ್ನು ಜೋಡಿಸುತ್ತ, ಮನದಲ್ಲೇ ಆ ಡಾಕ್ಟರ್ ನ ನೆನದು ವಂದನೆ ಸಲ್ಲಿಸಿದ. ಮತ್ತೆ ..ಸಂಜೆ ಬರುವಾಗಿ ತಿಳಿಸಿ ಹೊರಟು ನಿಂತ. ಯಾವುದಕ್ಕೂ ತನ್ನ ಫೋನ್ ನಂ ಕೊಡಲು ಮರೆಯಲಿಲ್ಲ..ಮಾತ್ರ.
ಅತ್ತ, ಸ್ಟ್ರೆಚ್ಚರ್ ಮೇಲಿದ್ದ ಯುವತಿಯನ್ನು ಎಮರ್ಜೆನ್ಸಿ ವಾರ್ಡ್ಗೆ ಕರೆತಂದ ನರ್ಸ್, ಡಾಕ್ಟರ್ ಗೆ ಫೋನ್ ಮಾಡಿದಳು. ಓಟೀ ರೂಮಲ್ಲಿದ್ದ
ಡಾ. ಸಂಧಿಪ್ ದಾಪುಗಾಲು ಹಾಕುತ್ತ, ಟೈಯನ್ನು ಎಳೆದು ಸಡಿಲಗೊಳಿಸಿಕೊಂಡು , ಒಳಬಂದ...'ಏನಾಗಿದೆ ಈಕೆಗೆ?, ತಪಾಸಣೆ ಮಾಡಿದ್ದೀರಾ..?' ಕೇಳಿದ..
'ಎಸ್ ಡಾ!! . ಬೀಪಿ ಚೆಕ್ ಮಾಡಿದ್ದೀನಿ. ಜ್ವರ ನೂರಾ ಎರಡಿದೆ, ಉಸಿರಾಟದಲ್ಲಿ ತೊಂದರೆ ಇದೆ. ಸುಸ್ತು ಅಂತಿದಾಳೆ...ಹೊಟ್ಟೆ ಹಸಿವೂ ಇರಬೇಕು...ನೀರು ಕುಡಿಸಿದ್ದೀನಿ...ಈಗ ಸ್ವಲ್ಪ ಪರವಾಗಿಲ್ಲ' ಎಂದಳು.
ಡಾ. ಸಂಧೀಪ್ ಅವಳ ನಾಡಿ ಬಡಿತ ಚೆಕ್ ಮಾಡಿದ . ಸಣ್ಣಗೆ ಬಡಿತವಿತ್ತು. ಕ್ಷೀಣಿಸಿದಂತಿತ್ತು. ಕತ್ತಿನ ಬಳಿ ಬೆರಳಿಟ್ಟು ನೋಡಿದ ನಾಡಿ ಬಡಿತ ನಿಧಾನವಾಗಿತ್ತು. ಹೊಟ್ಟೆಯ ಬಳಿ ಸ್ಟೆತೋಸ್ಕೋಪ್ ಇಟ್ಟ. ಗುರುಗುರು ಸದ್ದು...ಆಕೆ ಕಣ್ಣು ಮುಚ್ಚಿ ಮಲಗಿದ್ದಳು. ಕಣ್ಣನ್ನು ಬಿಡಿಸಿ, ಕಣ್ಗುಡ್ಡೆ ಪರಿಶೀಲಿಸಿದ...ರಕ್ತವಿಲ್ಲದೇ ಬಿಳಚಿಕೊಂಡಿದ್ದವು...ತುಟಿ ಒಣಗಿಹೋಗಿತ್ತು. ಕೊಂಚ ಕೆಂಚೆನಿಸುವಂತಹ ನುಣುಪಾದ ಕೂದಲು ಕೆದರಿಕೊಂಡಿದ್ದವು...ಉಟ್ಟ ಚೂಡಿ ಪೈಜಾಮ ಮುದುರಿ, ಬಹಳ ದಿನ ಆಕೆ ಅನಾರೋಗ್ಯದಿಂದ ಬಳಲುತ್ತಿರುವಂತೆ ಕಂಡಳು...
'ನಿನ್ನ ಹೆಸರೇನು? ' ಮೆಲ್ಲಗೆ ಕೇಳಿದ...
ನಿಧಾನವಾಗಿ ಕಣ್ಣು ತೆರೆಯಲು ಪ್ಯತ್ನಿಸುತ್ತಾ, 'ಸ್ಪೂರ್ಥ ..' .ಎಂದಳು...
'ಗುಡ್'..ಎಂದು ಅವಳ ಕೆನ್ನೆ ತಟ್ಟಿದ..
'ನರ್ಸ್....ಈಕೆಯ ಬ್ಲಡ್ ಸ್ಯಾಂಪಲ್ ತೆಗೆದು ಟೆಸ್ಟ್ಗೆ ಕಳಿಸಿ...ಎಲ್ಲ ತಪಾಸಣೆಯ ನಂತರ ನನಗೆ ತಿಳಿಸಿ..' .ಎಂದು ಹೊರನಡೆದ...
ಸಂಧೀಪ್ ಗೆ ಈ ಪೇಶೆಂಟ್ ನ ನೋಡಿದಾಗ, ಇವಳು ಭಾರತ ದೆಶದವಳೆಂದೆನಿಸಲಿಲ್ಲ. ಅಷ್ಟು ವಿದೇಶಿಯರ ಹೋಲಿಕೆಯಿತ್ತು. ಪೂರ್ತಿ ವಿವರಣೆ ಇರಲಿಲ್ಲ. ಸ್ವಲ್ಪ ಚೇತರಿಸಿಕೊಂಡ ಮೇಲೆ ಕೇಳಿದರಾಯಿತೆಂದು ಬೇರೆ ಪೇಶೆಂಟುಗಳನ್ನು ನೋಡಲು ವಾರ್ಡಿಗೆ ತೆರಳಿದ...
ಡಾ. ಸಂಧೀಪ್ ಕಾರೀಡಾರ್ ನಲ್ಲಿ ನಡೆದು ಹೋಗುವಾಗ, ಎದುರಿಗೆ ಸಿಕ್ಕ ಡಾ..ಅರುಣ್...ಹಾಯ್ ಎಂದು ಕೈ ಆಡಿಸಿದ..ಆತನೂ ಇವನ ಜೂನಿಯರ್. ಆದರೂ ಸ್ನೇಹಮಯಿ..ಸ್ಪುರದ್ರೂಪಿ ಸಹ. ನೀಳ ಮೈಕಟ್ಟು , ಸಪೂರ ದೇಹ. ಮುಗುಳುನಗೆಯ ಚೆಲುವ. ಬಿಳೀಕೋಟಿನ ಕಿಸೆಯಲ್ಲಿ ಕೈಯಿಟ್ಟು, ಕತ್ತಿಗೆ ಸ್ಟೆತ್ತೋಸ್ಕೋಪ್ ಸಿಕ್ಕಿಸಿ, ದಿಟ್ಟ ಹೆಜ್ಜೆಯಿಟ್ಟು ನಡೆದರೆ, ಆ ನಡಿಗೆಯ ಸಂಭ್ರಮವನ್ನು ತಿರುತಿರುಗಿ ನೋಡಿ ಮನದಲ್ಲೇ ಸಂತಸಪಡುವ ಅನೇಕ ನರ್ಸ್ಗಳಿದ್ದರು...ಅಂತಹ ಆಸಾಮಿ..ಡಾ..ಅರುಣ್...
'ಹೇ, ಅರುಣ್,..ಇಂದಿನ ಆ ಪೇಶೆಂಟ್ ಸ್ಪೂರ್ಥಿನ ನಿನ್ನ ಕಸ್ಡಡೀಗೆ ಒಪ್ಪಿಸ್ತಿದೀನಿ...ಅವಳ ಸಂಪೂರ್ಣ ಜವಾಬ್ಧಾರಿ ನಿಂದೆ'...ಎಂದ..
' ಯಾರದು .ಸ್ಪೂರ್ಥಿ? ಹೊಸಾ ಹೆಸರು? ಈ ಅರುಣ್ ಗೆ ಸ್ಪೂರ್ಥಿ ತುಂಬ್ತಾಳಾ....?' ನಗುತ್ತಾ ಚೇಸ್ಟೆ ಮಾಡಿದ...
' ಇದ್ರೂ ಇರಬಹುದು..ಆದರೆ , ಮೊದಲು ನೀನವಳಿಗೆ ಸ್ಪೂರ್ಥಿ ತುಂಬಬೇಕು...ಅವಳ ಬಳಿ ಯಾರೂ ಇಲ್ಲ. ಅನಾಥ ಪೇಶೆಂಟು...'
'ಓವ್! ಹಂಗಾ...ಒಳ್ಳೆದಾಯಿತು ಬಿಡು...ನಾ ಎಲ್ಲಾ ಸರೀ ಮಾಡ್ತೀನಿ...ನೀವೇನೂ ವರೀ ಮಾಡ್ಕೋಬೇಡಿ ಬಾಸ್,'
ಎನ್ನುತ ಸ್ಪೂರ್ಥಿ ಇದ್ದ ರೂಮಿನ ಕಡೆ ನಡೆದ...
ಸಂಧೀಪ್ ಗೆ ಅರುಣ್ ನ ಕಂಡರೆ ಪ್ರೀತಿ , ಅಕ್ಕರೆ ಜಾಸ್ತಿ.
ಮತ್ತು ಅರುಣ್ ನ ಸಾಮರ್ಥ್ಯವನ್ನು ಕೆಲವೇ ದಿನಗಳಲ್ಲಿ ಕಂಡುಕೊಂಡಿದ್ದ. ಇವನೊಬ್ಬ ತನಗೆ ಬಲಗೈಯಿದ್ದಂತೆ ಅನಿಸಿತ್ತು..
ಅತ್ತ, ..ಮಲಗಿದ್ದವಳ ಕೆನ್ನೆ ತಟ್ಟಿ, ಹಾಯ್ ಸ್ಪೂರ್ಥೀ ..ಎಂದು ಎಬ್ಬಿಸಿದ..ಮೈ ಕೆಂಡದಂತೆ ಸುಡುತ್ತಿತ್ತು...ಕಣ್ಣು ತೆರೆಯಲು ಪ್ರಯತ್ನಿಸಿದಳು..ಆಗಲಿಲ್ಲ. ಕಣ್ಣ ಕೊನೆಯಿಂದ ನೀರು ಸುರೀತಿತ್ತು...ಕಿವಿಯ ಹಿಂಬಾಗದಲ್ಲಿ ದಿಂಬು ನೆನದು ತೋಯ್ದಿತ್ತು...ಎಡಗೈಗೆ ಚುಚ್ಚಿದ್ದ ಸಲೈಯಿನ್ ಸೂಜಿ, ಬಾಯಿಗೆ ಇಟ್ಟಿದ್ದ ಆಕ್ಸೀಝನ್ ಪೈಪು ಅವಳಿಗೆ ಮತ್ತಷ್ಟು ಹಿಂಸೆ ತರಿಸಿದ್ದವು...ಮಾತನಾಡುವ ತ್ರಾಣ ಇಲ್ಲದಂತಾಗಿದ್ದಳು..ತುಟಿಗಳೆರಡೂ ಒಣಗಿ, ಬಿರುಕು ಬಿಟ್ಟಿದವು...
ಅವಳ ಹಣೆಯ ಮೇಲಿನ ಕೂದಲನ್ನು ಮೆಲ್ಲನೆ ಸವರಿದ..ಕಣ್ಣ ಬಳಿ ಇದ್ದ ಹನಿಗಳನ್ನು ಟಿಶ್ಯೂ ತೆಗೆದು ಒರೆಸಿದ. ಅವಳ ಹಣೆಗೆ ತಣ್ಣನೆಯ ಸ್ಪರ್ಶ ಹಾಯೆನಿಸಿತ್ತು...ಹುಬ್ಬುಗಳು ಚಲಿಸಿದವು..ಗಂಟಲುಬ್ಬಿತು...ಮಾತು ಹೊರಬರಲಿಲ್ಲ...ಅಲ್ಲೇ ಇದ್ದ ತಪಾಸಣೆಯ ರೆಕಾರ್ಡನ್ನು ಪರಿಶೀಲಿಸಿದನು. ನಂತರ, ಬ್ಲಡ್ ರಿಪೋರ್ಟ್ ಬರುವಷ್ಟರಲ್ಲಿ ಸ್ಕ್ಯಾನಿಂಗ್ ಮಾಡಲು ತಿಳಿಸಿದ..ಈಕೋ, ಹಾಗೂ , ಹೊಟ್ಟೆ ಸ್ಕ್ಯಾನ್ ಮುಖ್ಯ ಎಂದು ನರ್ಸ್ಗೆ ಹೇಳಿ ಹೊರನಡೆದ...ಅವನು ಹೋದ ನಂತರ ನರ್ಸ್ ಕಾರ್ಯೋನ್ಮುಖಳಾದಳು...
ಮುಂದುವರಿಯುವುದು.....
