ಮಾಧ್ಯಮ ಪಾತ್ರ
ಮಾಧ್ಯಮ ಪಾತ್ರ
ಎಲ್ಲವನ್ನೂ ಸರಿ ಮಾಡುವ ಕಾರ್ಯ ಸದ್ಯದ ಪರಿಸ್ಥಿತಿಯಲ್ಲಿ ಕೇವಲ ನಮ್ಮ ಮಾಧ್ಯಮ ಮಿತ್ರರಿಂದ ಮಾತ್ರ ಸಾಧ್ಯ. ಆದರೆ ದುಡ್ಡಿನ ಮುಂದೆ ಮುಚ್ಚಿ ಹೋಗಿರುವ ನೈತಿಕತೆ ಹೇಗೆ ತಾನೆ ಎದ್ದು ನಿಂತೀತು?.
ಒಂದು ಸಣ್ಣ ಘಟನೆಯನ್ನು ದೊಡ್ಡದಾಗಿ ತೋರಿಸುವ ಶಕ್ತಿ ಮಾಧ್ಯಮಗಳಿಗೆ ಮಾತ್ರ ಇದೆ. ಆದರೆ ಯಾವುದನ್ನು ತೋರಿಸಬೇಕು, ಹೇಗೆ ಜನರನ್ನು ಸರಿ ದಾರಿಯಲ್ಲಿ ನಡೆಸಬೇಕು ಎನ್ನುವುದು ಇಲ್ಲಿನ ಮಾಧ್ಯಮಗಳಿಗೆ ಇನ್ನೂ ಹೊಳೆಯುತ್ತಿಲ್ಲ. ಮಾಧ್ಯಮಗಳಿಗೆ ತನ್ನ ನಿಜವಾದ ಶಕ್ತಿ ತಿಳಿದುಕೊಳ್ಳಲು ಇನ್ನೆಷ್ಟು ಸಮಯ ಬೇಕೋ ತಿಳಿಯದು. ಇಲ್ಲಿ ಒಂದು ಸರ್ಕಾರದ ಬದಲಾವಣೆ ಮಾಡುವಷ್ಟು ಶಕ್ತಿ ಹೊಂದಿರುವ ಮಾಧ್ಯಮ ಏಕೆ ಹಿಂಜರಿಕೆಯನ್ನು ವ್ಯಕ್ತಪಡಿಸುತ್ತಿದೆ? ಒಬ್ಬ ರಾಜಕಾರಣಿ ಉಂಡು ತಿಂದದ್ದನ್ನು, ದೇವಸ್ಥಾನಕ್ಕೆ ಭೇಟಿ ನೀಡಿ ಕೈ ಮುಗಿದು ನಿಂತದನ್ನು ತೋರಿಸುವ ನಮ್ಮ ಮಾಧ್ಯಮ ಎಷ್ಟರ ಮಟ್ಟಿಗೆ ನಮ್ಮ ದೇಶದಲ್ಲಿನ ಆಗು ಹೋಗುಗಳನ್ನು ಎತ್ತಿ ಹಿಡಿದು ಮಾತನಾಡುತ್ತಿದೆ? "ಇಲ್ಲಿ ಒಂದು ದೊಡ್ಡ ಹೋರಾಟಕ್ಕೆ ಸಮ ಒಂದು ಗಂಟೆಯ ಕಾಲ ನಮ್ಮ ಮಾಧ್ಯಮಗಳಲ್ಲಿ ನಡೆಸುವ ಸಂವಾದ". ಸರ್ಕಾರ ಮಾಡುತ್ತಿರುವ ಕೆಲಸಗಳು ಸರಿಯೇ? ಇಲ್ಲವೇ? ಎಂದು ಧೈರ್ಯವಾಗಿ ಹೇಳಲು ಕೆಲವು ಒಂದೆರಡು ಮಾಧ್ಯಮಗಳು ಅಲ್ಪ ಸ್ವಲ್ಪ ಯಶಸ್ಸು ಕಂಡರೆ, ಅದು ಬರೀ ಒಂದೆರಡು ದಿನಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಇಲ್ಲಿ ಎಲ್ಲಿಯ ತನಕ ಮಾಧ್ಯಮಗಳು ತನ್ನ ಅಸ್ತಿತ್ವದ ಉದ್ದೇಶ ಅರಿಯುವುದಿಲ್ಲ ವೋ, ಎಲ್ಲಿಯವರೆಗೆ ಪಕ್ಷಪಾತವಿಲ್ಲದೆಯೇ ಕೆಲಸ ಮಾಡುವುದಿಲ್ಲವೋ, ಅಲ್ಲಿಯ ತನಕ ಅದರ ನಿಜವಾದ ಉದ್ದೇಶ ಪೂರ್ವಕವಾಗಿ ಪೂರ್ಣಗೊಳ್ಳುವುದಿಲ್ಲ. "ನ್ಯಾಯ ತಕ್ಕಡಿಯ ಸರಪಳಿಯಾಗಿ ತೂಗಬಲ್ಲದು ಈ ನಮ್ಮ ಮಾಧ್ಯಮ. ಸಾವಿರ ಜನರ ಕೊರಳಿನಂತೆ ಕೆರಳ ಬಲ್ಲದು ನಮ್ಮ ಈ ಮಾಧ್ಯಮ. ಸತ್ಯದ ತಾವರೆಯಂತೆ ಅರಳ ಬಲ್ಲದು ನಮ್ಮ ಈ ಮಾಧ್ಯಮ" . ಒಮ್ಮೆ ಪರಿಪೂರ್ಣತೆಯಿಂದ ತನ್ನ ಕಾರ್ಯ ನಡೆಸಲಿ, ಒಮ್ಮೆ ನೈತಿಕತೆಯ ಹೊದಿಕೆ ಹೊದ್ದು ಕಂಗೊಳಿಸಲಿ, ಒಮ್ಮೆ ಬಡಿವ ಸಿಡಿಲಿನಂತೆ ಅಬ್ಬರಿಸಿ ನ್ಯಾಯದೆಡೆ ನಿಲ್ಲಲಿ. ನೊಂದವರ ಕಣ್ಣೀರ ಒರೆಸುವ ಕೈಯಾಗಿ ಮಾರ್ಪಾಡು ಗೊಳ್ಳಲಿ. ಸಕಲ ವಿದ್ಯೆಯು, ಜೊತೆಗೆ ಶ್ರದ್ಧೆಯು ಹೊರಬಂದು ಎಂದು ಮೆರೆಯುವುದೋ ಅಂದು ನವ ಭಾರತದ ಶಂಕು ಸ್ಥಾಪನೆ... ಜನ ಜೀವನದ ನಿಜಕಲ್ಪನೆ.