ಧಾರವಾಹಿಯ ಗೀಳು
ಧಾರವಾಹಿಯ ಗೀಳು


'ಕೊನೆಯ ಬಾರಿ ಹೇಳುತ್ತಿದ್ದೇನೆ......!
'ನಿಮಗೆ ನಾನು ಬೇಕೊ... ಇಲ್ಲಾ ನಿಮ್ಮಮ್ಮ ಬೇಕೊ ನಿರ್ಧಾರ ಮಾಡಿ ...... ಎರಡರಲ್ಲಿ ಒಂದು ಸ್ಪಷ್ಟತೆ ಕೊಟ್ಟುಬಿಡಿ! ಆಕೆ ಇರುವ ಮನೆಗೆ ನಾನು ಖಂಡಿತಾ ಬರುವುದಿಲ್ಲ. ನನಗೆ ಸಾಕಾಗಿ ಹೋಗಿದೆ.....ಇದರ ಮೇಲೆ ನಿಮ್ಮಿಷ್ಟ...!'
ಖಡಾಖಂಡಿತವಾಗಿ ಹೇಳಿದ ವಿನುತಳ ಮಾತುಗಳು ಡ್ರೈವ್ ಮಾಡುತ್ತಿದ್ದ ರಾಜೀವನ ಕಿವಿಯಲ್ಲಿ ಗುಂಯ್-ಗುಡುತ್ತಿತ್ತು. ಬಾಣಂತನಕ್ಕಾಗಿ ತವರುಮನೆಗೆ ಹೋಗಿದ್ದ ತನ್ನ ಮುದ್ದಿನ ಮಡದಿ ವಿನುತಾಳನ್ನು, ಪುಟ್ಟ ಕಂದನೊಂದಿಗೆ ಹಿಂತಿರುಗಿ ತನ್ನ ಮನೆಗೆ ಕರೆದುಕೊಂಡು ಬರಲು ಸಂಭ್ರಮದಿಂದ ಹೋಗಿದ್ದ ರಾಜೀವನಿಗೆ, ವಿನುತಾ ಹೇಳಿಕಳಿಸಿದ ಮಾತುಗಳು ಇವಾಗಿದ್ದವು. ತಾನು ಮರುಮಾತನಾಡದೆ ಹಿಂದಿರುಗಿ ಬಂದಿದ್ದ.
ಅದು ಅನಿವಾರ್ಯವೂ ಆಗಿತ್ತು. ಕಾರಣ ಅವನದ್ದು ತುತ್ತಾ-ಮುತ್ತಾ ಪರಿಸ್ಥಿತಿ.
ಅತ್ತ ತನ್ನ ಜೀವನವನ್ನೇ ಧಾರೆಯೆರೆದ ತಾಯಿ ಒಂದೆಡೆಯಾದರೆ, ತನ್ನ ಜೀವನವನ್ನೇ ಧಾರೆಯೆರೆಯಲು ಬಂದ ಮಡದಿ ಇನ್ನೊಂದೆಡೆ .ಇವರಿಬ್ಬರ ಮಧ್ಯೆ ಎದ್ದಿದ್ದ ಅಸಮಾಧಾನಗಳು ಹೆರಿಗೆಯ ನೆಪದಲ್ಲಿ ತಾತ್ಕಾಲಿಕವಾಗಿ ಕೊಂಚ ಕಾಲ ವಿರಾಮ ಪಡೆದಿದ್ದವು. ಆದರೆ ಈಗ ಮತ್ತೆ ಅದೇ ಪರಿಸ್ಥಿತಿಗಳನ್ನು ಎದುರಿಸಲು ಅವನಿಗೂ ಅಳುಕಿತ್ತು.
ಹಾಗೆ ನೋಡಿದರೆ ಈ ವಿವಾದಗಳಿಗೆ ಹೆಚ್ಚಿನ ಕಾಣಿಕೆ ತನ್ನ ತಾಯಿಯಿಂದಲೇ ಆಗಿತ್ತು. ಈಗಿನ ಕಾಲದ ಹುಡುಗಿಯಾಗಿದ್ದ ವಿನುತಳೂ ಸಹಿಸುವಷ್ಟು ಸಹಿಸಿ, ಕೊನೆಗೆ ತಾಳ್ಮೆಕಳೆದುಕೊಂಡು ಎದಿರು ಬಿದ್ದಿದ್ದಳು. ಆದರೆ ಹಾಗೆಂದು ತಾನು ಅವಳ ಪರವಹಿಸಿ ಮಾತನಾಡುವಂತಿಲ್ಲ! ಧರ್ಮಸಂಕಟದ ಸ್ಥಿತಿ. ವಿನುತಳಿಗೆ ಮಾತ್ರವಲ್ಲ ತನಗೂ ತನ್ನ ತಾಯಿ ಜೀವನದಲ್ಲಿ ಎಂತೆಂತಹ ಸನ್ನಿವೇಶಗಳನ್ನು ತಂದು ಹಾಕಿದ್ದರು......! ಕಾರು ಮುಂದಕ್ಕೆ ಚಲಿಸಿದಂತೆ ಅವನ ಆಲೋಚನೆಗಳು ಹಿಂದಕ್ಕೆ ಚಲಿಸಿದವು........
ಹಳ್ಳಿಯೂ ಅಲ್ಲದ ಪಟ್ಟಣವೂ ಅಲ್ಲದ ಒಂದು ಸಾಮಾನ್ಯ ಊರಿನಲ್ಲಿ ಒಂದು ಉತ್ತಮ ಮಧ್ಯಮ ವರ್ಗದ ಕುಟುಂಬದಲ್ಲಿ ಮೂವರು ಹೆಣ್ಣುಮಕ್ಕಳ ನಂತರ ಜನಿಸಿದ ತಾನು ತಾಯಿಯ ಮುದ್ದಿನ ಮಗ. ತನ್ನ ಕುಟುಂಬವೇ ತನಗೆ ಸರ್ವಸ್ವವೆಂದು ನಂಬಿದ್ದ ತಾಯಿಗೆ ಇದ್ದ ದೊಡ್ಡ ಜವಾಬ್ದಾರಿ ಎಂದರೆ, ನಮ್ಮನ್ನೆಲ್ಲಾ ಸಾಕಿ ಬೆಳೆಸುವುದು. ಏಕೆಂದರೆ ಎಲ್ಲಾ ಜವಾಬ್ದಾರಿಗಳನ್ನು ಜೊತೆಯಾಗಿ ಮಾಡಬೇಕಾಗಿದ್ದ ತನ್ನ ತಂದೆ ತನಗೆ ಎರಡು ವರ್ಷ ವಯಸ್ಸಿರುವಾಗಲೇ ತೀರಿಹೋಗಿ, ಅವರಿಗೆ ಬರುತ್ತಿದ್ದ ಪಿಂಚಣಿ ಮತ್ತು ಪಿತ್ರಾರ್ಜಿತ ಆಸ್ತಿಯ ಪಾಲಿನಿಂದ ಬರುತ್ತಿದ್ದ ಹಣದಿಂದಲೇ ನಮ್ಮ ಸಂಸಾರ ತೂಗಿಸಬೇಕಾಗಿತ್ತು.
ಹಾಗೂ-ಹೀಗೂ ತವರುಮನೆಯ ಸಹಕಾರದಿಂದ,ತಾಯಿ ಮೂವರು ಅಕ್ಕಂದಿರ ವಿದ್ಯಾಭ್ಯಾಸ ತಕ್ಕಮಟ್ಟಿಗೆ ಮಾಡಿಸಿ ಅವರಿಗೆ ಒಪ್ಪುತ್ತದೆಯೋ -ಒಪ್ಪುವುದಿಲ್ಲವೋ ಏನೂ ನೋಡದೆ, ಜವಾಬ್ದಾರಿ ಕಳೆದುಕೊಳ್ಳುವ ದೃಷ್ಟಿಯಿಂದ ಬೇಗ ಬೇಗ ಮದುವೆಗಳನ್ನು ಮಾಡಿ ಮುಗಿಸಿದ್ದರು. ಪಾಪ ಅಕ್ಕಂದಿರಾದರೂ ಮೊದಮೊದಲು ಕಷ್ಟಗಳನ್ನು ಪಟ್ಟರೂ ಈಗೀಗ ಸರಿಹೋಗಿದ್ದಾರೆ. ಈ ಅಸಮಾಧಾನದಿಂದಲೇ ತಾಯಿಯನ್ನು ಹೆಚ್ಚಾಗಿ ಭೇಟಿ ಮಾಡಲೂ ಬರುತ್ತಿರಲಿಲ್ಲ. ಆದರೆ ತನ್ನ ವಿಷಯದಲ್ಲಿ ಮಾತ್ರ ಹೀಗಾಗಲಿಲ್ಲ.......
ತಾಯಿಗೆ ತನ್ನ ಬಗ್ಗೆ ಅತೀವ ಕಾಳಜಿ. ತನಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿದರು. ತನಗೆ ಉತ್ತಮ ನೌಕರಿ ದೊರೆತು ಬೆಂಗಳೂರಿಗೆ ಬಂದು ವಾಸಿಸಬೇಕಾದಾಗ ಅವರನ್ನು ಜೊತೆಗೆ ಕರೆದುಕೊಂಡು ಬರಲು ಪಟ್ಟ ಹರಸಾಹಸ ಅಷ್ಟಿಷ್ಟಲ್ಲ! ತಾವು ಮೊದಲಿನಿಂದಲೂ ಇದ್ದ ವಾತಾವರಣದಲ್ಲಿ ಸಮಯ ಕಳೆಯುವುದು ಅವರಿಗೆ ಗೊತ್ತೇ ಆಗುತ್ತಿರಲಿಲ್ಲ.
ಆದರೆ ಬೆಂಗಳೂರಿನ ಫ್ಲಾಟ್ ನಲ್ಲಿ ನೆರೆಹೊರೆಯವರೊಂದಿಗೆ ಹೆಚ್ಚಾಗಿ ಬೆರೆಯಲು ಅವಕಾಶವಿರಲಿಲ್ಲ. ತನ್ನನ್ನು ಒಂಟಿತನ ಕಾಡಿಸುವ ಭೀತಿಯಿಂದ ಅವರು ತಕರಾರು ತೆಗೆದಿದ್ದರು.
ಹಾಗೆಂದು ವಯಸ್ಸಾದ ಅವರನ್ನು ಅಲ್ಲಿ ಒಬ್ಬರನ್ನೇ ಬಿಟ್ಟುಬಂದು ಇಲ್ಲಿ ತಾನೂ ಕಷ್ಟಪಡುವುದು ತನಗೂ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಅಮ್ಮನನ್ನು ಪುಸಲಾಯಿಸಿ ಮನೆಗೆ ಕರೆತಂದು ಟಿವಿಯಲ್ಲಿ ಬರುವ ಕಾರ್ಯಕ್ರಮಗಳನ್ನು ನೋಡಲು ಹೇಳಿದ್ದೆ. ಮೊದಮೊದಲು ಅಷ್ಟೇನೂ ಇಷ್ಟಪಡದ ಅಮ್ಮ ಅದ್ಯಾವಗಳಿಗೆಯಲ್ಲಿ ಧಾರಾವಾಹಿಗಳ ಗೀಳು ಹಚ್ಚಿಕೊಂಡರೊ ಗೊತ್ತಾಗಲಿಲ್ಲ! ಅಂದಿನಿಂದ ಅವರು ಒಂದು ಕ್ಷಣಕ್ಕೂ ಬೇಜಾರೆಂಬ ಮಾತೇ ಹೊರಡಿಸಲಿಲ್ಲ. ಯಾವ ಮಟ್ಟಕ್ಕೆಂದರೆ ನಾನು ಊಟಕ್ಕೆ ಬಂದರೂ ಊಟ ಬಡಿಸಲು ಬಾರದೆ ಧಾರಾವಾಹಿ ನೋಡುವುದರಲ್ಲಿಯೇ ತಲ್ಲೀನರಾಗಿರುತ್ತಿದ್ದರು.
ರಜಾದಿನಗಳಲ್ಲಿ ಅಕ್ಕನ ಮಕ್ಕಳು ಮನೆಗೆಬಂದರೆ ಚಾನೆಲ್ ಬದಲಾಯಿಸುತ್ತಾರೆಂಬ ಕಾರಣಕ್ಕೆ ಅವರನ್ನು ಮನೆಗೇ ಬರಗೊಡುತ್ತಿರಲಿಲ್ಲ. ಹೀಗಾದರೂ ಆರಾಮವಾಗಿ ಇರಲಿ ಎಂದು ನಾನು ಧಾರವಾಹಿಗಳಿಗೆ ಕೃತಜ್ಞತೆ ಹೇಳಿದ್ದೂ ಉಂಟು.
ಒಂದು ದಿನ ನಮ್ಮ ಪಕ್ಕದ ಮನೆಯವರು ಅಮ್ಮನಿಗೆ ನಿಮ್ಮಮಗ ನೋಡಲು ಯಾವುದೊ ಧಾರಾವಾಹಿಯ ಹೀರೋ ಇದ್ದ ಹಾಗೆಯೇ ಇದ್ದಾನೆ! ಎಂದು ಹೇಳಿದ್ದರ ಪ್ರತಿಫಲವಾಗಿ ಅಂದಿನಿಂದ ನನಗೆ ಆ ಧಾರಾವಾಹಿಯ ಹೀರೋಯಿನ್ ನಂತೆಯೇ ಇರುವ ಹುಡುಗಿಯನ್ನು ಹುಡುಕತೊಡಗಿದರು.
ಯಾವುದೇ ಸಂಬಂಧಗಳು ಬಂದರೂ ನಾನು ನೋಡುವ ಮೊದಲೇ, ಈ ಹುಡುಗಿ ಅವಳಂತೆ ಇಲ್ಲ.....ಈ ಸಂಬಂಧ ಬೇಡ... ಎಂದುಬಿಡುತ್ತಿದ್ದರು. ನೂರಾರು ಸಂಬಂಧಗಳು ಬಂದು ಹೋದರೂ,ನನಗೆ ಮದುವೆ ವಯಸ್ಸು ಮೀರಿದರೂ, ಅಮ್ಮನ ಕಲ್ಪನೆಯ ಹುಡುಗಿ ಮಾತ್ರ ಸಿಗಲಿಲ್ಲ. ಕೊನೆಗೆ ನನಗೆ ಮದುವೆಯಾಗುತ್ತದೆಯೋ ಇಲ್ಲವೋ ಎಂದು ನನಗೇ ಸಂದೇಹವಾಗತೊಡಗಿತ್ತು. ಆಗೆಲೇ ನನ್ನ ಸಹಪಾಠಿಗಳಿಗೆ ಮಕ್ಕಳೂ ಆಗಿಬಿಟ್ಟಿದ್ದರು. ನಾನು ಮಾತ್ರ ಬ್ರಹ್ಮಚಾರಿ ಜೀವನದಲ್ಲಿ ಕಳೆದ ದಿನಗಳು ನೆನೆದರೆ ಅಮ್ಮನ ಮೇಲೆ ಬೇಜಾರಾಗುತ್ತದೆ.....!
ಅಂತೂ ಇಂತೂ ಕೊನೆಗೆ ಎಲ್ಲಾದಿಕ್ಕಿನಿಂದಲೂ ಅಮ್ಮನ ಒಪ್ಪಿಗೆ ಪಡೆದು ವಿನುತಾಳನ್ನು ಕೈ ಹಿಡಿದಾಗ ಅಶ್ವಮೇಧಯಾಗ ಮುಗಿದಂತಿತ್ತು. ಮೊದಲಿಗೆ ಎಲ್ಲವೂ ಚೆನ್ನಾಗಿತ್ತು. ಇವರು ಅತ್ತೆ-ಸೊಸೆಯಂತಲ್ಲದೆ ತಾಯಿ-ಮಗಳಂತೆ ಇದ್ದಾರಲ್ಲ! ಎನ್ನಿಸುತ್ತಿತ್ತು.
ಆದರೆ ದುರ್ವಿಧಿ ನಮ್ಮ ಬಾಳಿನಲ್ಲಿ ಧಾರಾವಾಹಿಯ ರೂಪದಲ್ಲಿ ಬಂದಿತ್ತು ನೋಡಿ...... ಅಮ್ಮ ಇಷ್ಟಪಡುತ್ತಾ ನೋಡುತ್ತಿದ್ದ ಯಾವುದೋ ಧಾರಾವಾಹಿಯಲ್ಲಿ ಸೊಸೆ ಪಾತ್ರ ಕೆಟ್ಟದ್ದು! ಆಕೆ ಕೆಲಸಕ್ಕೆಹೋಗಿ ದುಡಿಯುವ ಜಂಬದಿಂದ ಅತ್ತೆಯನ್ನು ಕಾಲಕಸವಾಗಿ ನಡೆಸಿಕೊಳ್ಳುತ್ತಿದ್ದಳಂತೆ. ಧಾರಾವಾಹಿಯ ಗೀಳಿನ ಪರಿಣಾಮದಿಂದ ಅಮ್ಮ ತನ್ನನ್ನು ಅತ್ತೆಯ ಪಾತ್ರಕ್ಕೆ ಕಲ್ಪಿಸಿಕೊಂಡು, ಏನೂ ಗೊಂದಲವಿಲ್ಲದ ತಮ್ಮ ಸಂಬಂಧಗಳ ನಡುವೆ ಹುಳ ಬಿಟ್ಟುಕೊಂಡಿದ್ದರು. ವಿನುತಾ ನಿಂತರೆ ತಪ್ಪು ನಡೆದರೆ ತಪ್ಪು ಎಂದಾಡುತ್ತಿದ್ದರು.
ಈ ಧಾರವಾಹಿಯ ಗೀಳು ನಮ್ಮ ಮನೆಗೆ ಮಾತ್ರವಲ್ಲದೆ, ಪಕ್ಕದ ಮನೆಯಲ್ಲಿ ಇದ್ದ ಅವಳಿ-ಜವಳಿ ಹೆಣ್ಣುಮಕ್ಕಳಿಗೆ ಅಮ್ಮ ತಾವು ನೋಡುತ್ತಿದ್ದ ಧಾರಾವಾಹಿಯ ಪಾತ್ರಗಳನ್ನು ಕಲ್ಪಿಸಿ; ಅದರಲ್ಲಿ ತೋರಿದ್ದ ವೈರುಧ್ಯ ಪಾತ್ರಗಳ ಪ್ರಭಾವದಿಂದ ಒಬ್ಬಳನ್ನು ಕರೆದು ಮುದ್ದು ಮಾಡುವುದು, ಇನ್ನೊಬ್ಬಳನ್ನು ಕಂಡರೆ ಬೈದು ಕಳಿಸುವುದು ನೋಡಿ, ಸಹವಾಸಿಕುಟುಂಬದವರು ಅಮ್ಮನಿಗೆ ಬುದ್ಧಿ ಹೇಳಲು ನನಗೆ ಎಚ್ಚರಿಕೆ ಕೊಟ್ಟಿದ್ದರು!
ಈ ಧಾರಾವಾಹಿಗಳ ಗೀಳು ಹೆಚ್ಚುತ್ತಾ ಹೋದಂತೆ, ತನ್ನ ಸರ್ವಸಾಮ್ರಾಜ್ಯವೂ ಅದೇ ಎಂಬಂತೆ ಅಮ್ಮ ಧಾರಾವಾಹಿ ಪಾತ್ರಗಳಲ್ಲಿ ಪರಕಾಯ ಪ್ರವೇಶಮಾಡಿ, ಇಲ್ಲಸಲ್ಲದ ಜಗಳಗಳನ್ನು ತಂದುಕೊಳ್ಳುತ್ತಿದ್ದರು. ಇದರಿಂದ ರೋಸಿ ಹೋದ ವಿನುತಳೂ ತಿರುಗಿಬಿದ್ದಿದ್ದಳು. ಹೆಣ್ಣುಮಗು ಹಡೆದಿದ್ದಕ್ಕೆ ಅಮ್ಮ ಧಾರಾವಾಹಿಯ ಪಾತ್ರದಾರಿ ಅತ್ತೆಯಂತೆ, ಮಗುವನ್ನು ಸಹಾ ನೋಡಲು ಬಂದಿರಲಿಲ್ಲ. ಇದು ವಿನುತಾಳಿಗೆ ಕೋಪ ತರಿಸಿ, ಮುಂದೇನಾಗುವುದೋ ಎಂಬ ಭಯದಿಂದ ಹೀಗೆ ಹೇಳಿದ್ದಳು...... ಆದರೆ ನನಗೆ ಗೊತ್ತು...... ಅಮ್ಮ ಹೀಗಲ್ಲ! ಅವಳೂ ಮೂರು ಹೆಣ್ಣು ಮಕ್ಕಳನ್ನು ಹಡೆದವಳು....!
ಪ್ರಯಾಣದ ಮಧ್ಯೆ ಒಂದು ಬ್ರೇಕ್ ತೆಗೆದುಕೊಳ್ಳಲು ಕಾರನ್ನು ಪಕ್ಕಕ್ಕೆ ನಿಲ್ಲಿಸಿ ಒಂದು ಧಮ್ ಎಳೆಯೋಣವೆನ್ನುವ ವೇಳೆಗೆ, ಭಾವನಿಂದ ಕರೆ ಬಂತು. ಕಾಲೇಜಿನಲ್ಲಿ ಮನಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ತನ್ನ ಎರಡನೆಯ ಅಕ್ಕನ ಗಂಡನಾದ ಇವರಿಗೆ ಮಾತ್ರ ತಮ್ಮ ಮನೆಯ ಪರಿಸ್ಥಿತಿಯ ಅರಿವಿತ್ತು. ಹುಡುಕುವ ಬಳ್ಳಿ ಕಾಲಿಗೆ ಸಿಕ್ಕಂತೆ...ನನ್ನ ಸದ್ಯದ ಪರಿಸ್ಥಿತಿ ತಿಳಿಸಿ, ಇವರ ನೆರವು ಕೋರಿದೆ..... ಭಾವ ಹೇಳಿದರು ಒಂದು ಅದ್ಭುತ ಉಪಾಯ!
ಮನೆಗೆ ಬಂದ ಮರುದಿನ ನಮ್ಮ ಉಪಾಯದಂತೆ ಅಮ್ಮನಿಗೆ ಹೇಳಿದೆ; 'ಅಮ್ಮ ವಿನುತ ಮತ್ತು ಪಾಪು ಬಂದ ಮೇಲೆ ನಿನಗೆ ಮನೆಯಲ್ಲಿ ಪುರುಸೋತ್ತು ಆಗುವುದಿಲ್ಲ, ಮತ್ತೆ ಎಲ್ಲೂ ಹೋಗಲು ಆಗುವುದಿಲ್ಲ .ಆದ್ದರಿಂದ ಸುಮಕ್ಕ ಮತ್ತು ಭಾವ ನಿನ್ನನ್ನು ಅವರ ಮನೆಗೆ ಎರಡು ದಿನವಿರಲು ಕರೆದುಕೊಂಡು ಹೋಗಲು ಬರುತ್ತಿದ್ದಾರೆ. ನೀನು ಹೋಗುವುದಾದರೆ ಹೋಗಿ ಬಾ....' ಎಂದೆ. ಅಷ್ಟರಲ್ಲೇ ಅಕ್ಕ-ಭಾವನೂ ಬಂದು ಅಮ್ಮನನ್ನು ಪರಿಪರಿಯಾಗಿ ಬೇಡಿ ಅವರೊಂದಿಗೆ ಕರೆದುಕೊಂಡು ಹೋದರು.
ಅವರ ಜೊತೆ ಹೋದ ಮೊದಲ ದಿನವೇ ಅಮ್ಮನಿಂದ ನನಗೆ ಕರೆ ಬಂತು....
ಲೋ ರಾಜೀವ, ಇಲ್ಲಿ ನಾನು ಇರುವುದಿಲ್ಲ ಕಣೋ......ಇಲ್ಲಿ ಯಾವ ಧಾರಾವಾಹಿಯೂ ಬರುವುದಿಲ್ಲ. ಮಕ್ಕಳ ಪರೀಕ್ಷೆ ಅಂತ ಇವರು ಟಿವಿಯೂ ಹಾಕುವುದಿಲ್ಲ. ನನಗೆ ಬೇಜಾರು....ನಾನು ಅಲ್ಲಿಗೆ ಬಂದು ಬಿಡುತ್ತೇನೆ... ಎಂದರು.
ಮೊದಲೇ ನಿರೀಕ್ಷಿಸಿದಂತೆ 'ಸರಿ ಅಮ್ಮ....ನನಗೆ ಆಫೀಸಿನ ಕೆಲಸದಿಂದ ಹತ್ತು ದಿನ ರಜೆಸಿಗುವುದಿಲ್ಲ. ನಾನು ಏನೂ ಮಾಡಲು ಆಗುವುದಿಲ್ಲ. ಹೇಗಾದರೂ ಅಡ್ಜಸ್ಟ್ ಮಾಡಿಕೋ.'...ಮತ್ತೆ ಬಂದು ಕರೆದುಕೊಂಡು ಬರುತ್ತೇನೆ ಎಂದೆ.
ಅಷ್ಟರಲ್ಲಿ ಅಕ್ಕ-ಭಾವ ತಮ್ಮ ಯೋಜನೆಯಂತೆ ಅಮ್ಮನನ್ನು ಹೊರಗಡೆ ಸುತ್ತಾಡಿಸುವುದು, ವಿವಿಧ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗುವುದು, ಹೊಸ ಹಳೆಯ ಅಡುಗೆಗಳ ಬಗ್ಗೆ ಚರ್ಚಿಸುವುದು, ಮಕ್ಕಳೊಡನೆ ಆಡುವುದು, ಇತ್ಯಾದಿ ಅಭ್ಯಾಸಗಳಿಂದ ತಕ್ಕಮಟ್ಟಿಗೆ ಅಮ್ಮನ ಧಾರಾವಾಹಿಗಳ ಗೀಳ ನ್ನು ಕಡಿಮೆ ಮಾಡಿದ್ದರು. ದಿನಗಳನ್ನು ಮುಂದೂಡುತ್ತಾ ಒಂದೆರಡು ತಿಂಗಳು ಅಮ್ಮ ಅಲ್ಲೇ ಇರುವಂತೆ ಮಾಡಿಕೊಂಡಿದ್ದರು.
ಅದಾದ ನಂತರ ಅಮ್ಮನ್ನು ಮರಳಿ ಕರೆದುಕೊಂಡು ಬಂದೆವು. ಜೊತೆಗೆ ಭಾವನವರು ನನ್ನೊಂದಿಗೆ ಬಂದು ವಿನುತಾಳ ಬಳಿಯೂ ಪರಿಸ್ಥಿತಿಯ ಅವಲೋಕನ ನಡೆಸಿ, ಅದಾದ ಮೇಲೆ ನಮ್ಮ ಮುಂದಿನ ಯೋಜನೆಯನ್ನು ಸಿದ್ಧಪಡಿಸಿದ್ದರು. ಕಲಿತ ಹುಡುಗಿಯಾದ ವಿನುತಳೂ ಅತ್ತೆಯ ಪರಿಸ್ಥಿತಿ ಅರ್ಥ ಮಾಡಿಕೊಂಡು, ಮುಂದೆ ಹೊಂದಾಣಿಕೆ ಮಾಡಿಕೊಳ್ಳುವ ಇರಾದೆಯೊಂದಿಗೆ ಮನೆಗೆ ಬಂದಳು.
ಈಗ ಅಮ್ಮನ ಕಾರ್ಯಚಟುವಟಿಕೆಗಳು ಬೇರೆಯದೇ ಆಗಿವೆ....... ಪ್ರತಿದಿನ ಮೊಮ್ಮಗಳ ಕೆಲಸಗಳಲ್ಲಿ ಆಕೆಗೆ ಧಾರಾವಾಹಿಗಳನ್ನು ನೋಡಲು ಪುರುಸೊತ್ತೇ ಇಲ್ಲ. ಹಾಗೆ ಒಮ್ಮೆ ನೋಡಿದರೂ ಅದರಲ್ಲಿ ತಲ್ಲೀನವಾಗುವುದಿಲ್ಲ.
ಈ ಮಧ್ಯೆ ನಾನು ವಿನುತಾ ಮಾತ್ರ ಅಮ್ಮ ಆಶಿಸಿದಂತೆ ಧಾರಾವಾಹಿಯ ಹೀರೋ-ಹೀರೋಯಿನ್ ಗಳಂತೆ ಜನರ ಕಣ್ಣೋಟ ಕುಕ್ಕುವಂತೆ, ಅನ್ಯೋನ್ಯತೆಯಿಂದ ಸಂಸಾರ ನಡೆಸುತ್ತಿದ್ದೇವೆ!
ಒಟ್ಟಾರೆ ಅಮ್ಮನ ಧಾರವಾಹಿಯ ಗೀಳು ಬಿಡಿಸಿದ ಅಕ್ಕ ಭಾವನಿಗೆ ಎಷ್ಟು ಕೃತಜ್ಞತೆ ಹೇಳಿದರು ಸಾಲದು.......!
ಇದೇ ರೀತಿ ಧಾರಾವಾಹಿಯ ಗೀಳು ಎಷ್ಟೋ ಮನೆಗಳಲ್ಲಿ ದಿನನಿತ್ಯದ ಧಾರಾವಾಹಿಯಾಗಿ ಗುಪ್ತಗಾಮಿನಿಯಾಗಿ ಸಾಗುತ್ತಿದೆ. ನಾವು ಅನಾಹುತಗಳಾಗುವ ಮೊದಲೇ ಎಚ್ಚೆತ್ತುಕೊಳ್ಳಬೇಕಿದೆ. ಜೊತೆಗೆ ಜೀವನದಲ್ಲಿ ಯಾವುದರ ಮೇಲೆ ಎಷ್ಟು ಆಶ್ರಯಿಸಬೇಕು ಎಂಬ ಸ್ಪಷ್ಟತೆ ನಮಗೆ ಇರಬೇಕು ಅಷ್ಟೇ.....!