manjula g s

Abstract Tragedy Others

4  

manjula g s

Abstract Tragedy Others

ಆಂತರ್ಯ

ಆಂತರ್ಯ

3 mins
396


ಕೈ - ಕೈ ಹಿಡಿದು ಸಾಗುವ ಆಸೆಯಿತ್ತು, ಆದರೆ... ಅವಳು ಅದಕ್ಕೆ ಅವಕಾಶ ಕೊಡಲೇ ಇಲ್ಲ! 


ಬಹುಶಃ ಇಂತಹದ್ದೊಂದು ದಿನ ನನ್ನ ಬಾಳಲ್ಲಿ ಬರುತ್ತದೆ ಎಂಬ ಸಣ್ಣ ಊಹೆಯನ್ನೂ ನಾನು ಮಾಡಿರಲಿಲ್ಲ!!!


ಅವಳು ನನ್ನ ಮಗಳು ಸಿರಿ; ಅವಳ ಮೇಲೆ ನನ್ನ ಸಂಪೂರ್ಣ ಹಕ್ಕಿಲ್ಲವೇ..?? ಅವಳ ಕೈಹಿಡಿದು ನಾನು ನಡೆಯಬಾರದೆಂದು ತಡೆಯಲು ಇವಳ್ಯಾರು??

ಇರಬಹುದು ಇವಳು ಅವಳ ಅಮ್ಮನೇ ಆಗಿರಬಹುದು... ಇಷ್ಟೂ ವರ್ಷ ಅವಳನ್ನು ಸಾಕಿ ಸಲಹಿರಬಹುದು.... ಆದರೆ ಅಷ್ಟೆಲ್ಲಾ ಆಗಲು ನಾನು ಮುಖ್ಯ ಕಾರಣ ಎಂಬ ಸತ್ಯವನ್ನು ಇವಳೆಂದಿಗೂ ಕಡೆಗಣಿಸಲಾಗದು ಅಲ್ಲವೇ...?


ಇವಳು ಸೀತಾ.... ನನ್ನ ಮಾಜಿ ಪತ್ನಿ! ಹೆಸರಿಗಷ್ಟೇ ಸೀತಾ....ಆ ಶ್ರೀರಾಮ ಚಂದ್ರನ ಮಡದಿ ಸೀತಾಮಾತೆಯಂತಲ್ಲ! ಆಕೆ ತನ್ನ ಪತಿ ತುಂಬು ಗರ್ಭಿಣಿಯಾದ ತನ್ನನ್ನು ಕಾಡಿಗಟ್ಟಿದರೂ ಏಕೆಂದು ಚಕಾರವೆತ್ತಿರಲಿಲ್ಲ.... ಬದಲಾಗಿ ಆತನನ್ನೇ ಹಗಲಿರುಳು ಪರಿತಪಿಸಿ ಲವಕುಶರಿಗೆ ಜನ್ಮವಿತ್ತು ಸಾಕಿ ಸಲಹಿ ಮತ್ತೆ ತಂದೆ ಮಕ್ಕಳನ್ನು ಒಂದು ಮಾಡಿದ್ದಳು!


ಆದರೆ..... ನನ್ನ ಮಾಜಿ ಮಡದಿ ಸೀತಾ, ಇಂದು ನಾನು ಕೈ ಕುಲುಕಿ, ಮಾತನಾಡಲು ಹೋದ ನನ್ನ ಮಗಳನ್ನು ನನ್ನಿಂದ ದೂರ ದರದರ ಎಳೆದುಕೊಂಡು ಹೋಗಿದ್ದಳು!


ನಿಜ! ನಾನು ಅಪ್ಪನಾಗಿ ಇಷ್ಟು ವರ್ಷ ನನ್ನ ಮಗಳು ಸಿರಿಯಿಂದ ಮತ್ತು ಸೀತಾಳಿಂದ ದೂರವಿರಬಹುದು...! ಅದಕ್ಕೂ ಮಿಗಿಲಾಗಿ ನನ್ನ ಮಗಳಿಗೆ ನನ್ನ ಮುಖ ಪರಿಚಯವೇ ಇಲ್ಲದೆ ಅವಳು ಬೆಳೆದಿರಬಹುದು....! ಏನೇ ಆದರೂ ಅದು ನಮ್ಮ ನಡುವಿನ ವಿಚಾರ! ನಿಧಾನವಾಗಿ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಚರ್ಚಿಸಬಹುದಿತ್ತು..... ಹೀಗೆ ತುಂಬಿದ ಸಭೆಯಲ್ಲಿ ಹತ್ತಾರು ಮಂದಿಯ ಮುಂದೆ ನನಗೆ ಅವಮಾನ ಆಗುವಂತೆ ನಡೆದುಕೊಳ್ಳುವ ಅವಶ್ಯಕತೆ ಇರಲಿಲ್ಲ.


ಏಕಾಏಕಿ ನಡೆದ ಈ ಪ್ರಸಂಗದಿಂದ ಸಿರಿಯ ಮನಸ್ಸಿಗೆ ಎಷ್ಟು ತಳಮಳವಾಗಿರಬಹುದು ಪಾಪ! ಅವಳ ಮುಖ ಅದನ್ನೇ ಬಿಂಬಿಸಿತ್ತು..... ಅಷ್ಟು ದೊಡ್ಡ ವೇದಿಕೆಯಲ್ಲಿ ಈ ದಿನ ನನ್ನ ಮಗಳು ಚಿನ್ನದ ಪದಕ ಪಡೆಯುವಾಗ, ಅವಳ ಕೈ ಹಿಡಿದು ವೇದಿಕೆ ಏರುವ ಆಸೆ ನನಗಿತ್ತು! ಅವಳ ಕೈ ಕುಲುಕಿ.... "ನಾನು ನಿನ್ನ ಅಪ್ಪ ಕಣಮ್ಮ"...... ಎಂದು ಹೇಳಿ, ಅವಳ ಮುಖದ ಅಚ್ಚರಿ ನೋಡಲು ನಾನು ಬಯಸಿದ್ದೆ


ಎಲ್ಲಿದ್ದಳೋ ಗೊತ್ತಿಲ್ಲ; ಸೀತಾ ಇದ್ಯಾವುದಕ್ಕೂ ಅವಕಾಶವೇ ಕೊಡಲಿಲ್ಲ..... ಸಿರಿಯ ಕೈ ಹಿಡಿದು ತಾನೇ ವೇದಿಕೆಗೆ ಕರೆದೊಯ್ದಳು.....! ನಾವು ಹಾಗಿರಲಿ; ತಬ್ಬಿಬ್ಬಾದ ಮಾಧ್ಯಮದವರೂ ಆಗ ಕ್ಷಣ ಕಾಲ ಇದೇ ಸನ್ನಿವೇಶ ಚಿತ್ರಿಸುತ್ತಾ ಅಲ್ಲಿಯೇ ಮೈಮರೆತವರಂತೆ ನಿಂತುಬಿಟ್ಟಿದ್ದರು!


ಅವರಲ್ಲಿ ಯಾರೋ ಒಬ್ಬ ಬಂದು ಕೇಳಿಯೇ ಕೇಳಿದ.... "ಸರ್ ತಾವ್ಯಾರು? ಚಿನ್ನದ ಹುಡುಗಿ ಡಾ||ಸಿರಿ ಮೇಡಮ್ ರವರು ತಮಗೇನಾಗಬೇಕು?" ಎಂದು.


ಹೇಳಿಕೊಳ್ಳಬಹುದಿತ್ತು..... ನಾನು ಅವಳ ಅಪ್ಪನೆಂದು! ಆದರೆ ನನ್ನ ಅಂತರಾತ್ಮ ಏಕೋ ತುಸು ವಿರಮಿಸಿ ತಡಬಡಿಸಿತು.....ಬಹುಶಃ ಅದರ ನಿಲುಗಡೆಗೆ ಕಾರಣ ನನ್ನದೇ ಮನಸ್ಸಾಕ್ಷಿ ಇರಬಹುದೇ.....???

ವಯಸ್ಸಿನ ಉನ್ಮಾದಕತೆಯಲ್ಲಿ, ಸಂಪಾದನೆಯ ಗತ್ತಿನಲ್ಲಿ ಹಿಂದೊಂದು ಕಾಲದಲ್ಲಿ ಗೊತ್ತು ಗುರಿಯಿಲ್ಲದೆ, ನಾನು ಆಡಿದ ಆಟಗಳು ಒಂದೇ ಎರಡೇ.......!!


ಮನೆಯವರೆಲ್ಲರ ಅನುಮೋದನೆಯೊಂದಿಗೆ ಅಗ್ನಿಸಾಕ್ಷಿಯಾಗಿ ವಿವಾಹವಾದ ಸೀತಾಳನ್ನು ನಾನು ಎಂದೂ ಪತ್ನಿಯಂತೆ ಕಾಣಲೇ ಇಲ್ಲ; ಕೇವಲ ನನ್ನ ಅಡಿಯಾಳಾಗಿ ಬಳಸಿಕೊಂಡಿದ್ದೆ. ನನ್ನ ಬೇರೆ ಬೇರೆ ಹವ್ಯಾಸಗಳು, ಚಟಗಳು, ಸುತ್ತಾಟಗಳು ಮತ್ತಿತರ ಸಹವಾಸಗಳ ಬಗ್ಗೆ ಮನೆಯಲ್ಲಿ ಪ್ರಶ್ನಿಸುವ ಮೊದಲು ನಾನೇ ಅವಳ ಮೇಲೆ ದೋಷಾರೋಪಣೆ ಮಾಡಿ, ಅವಳಿಗೆ ವಿಚ್ಛೇದನವನ್ನೂ ನೀಡಿದ್ದೆ.


ಅವಳು ಗರ್ಭಿಣಿ ಎಂಬುದನ್ನೂ ನೋಡದೆ, ಅವಳನ್ನು ನಿರ್ದಾಕ್ಷಿಣ್ಯವಾಗಿ ತ್ಯಜಿಸಿಬಿಟ್ಟೆ. ನಮ್ಮ ಅಪ್ಪ ಅಮ್ಮ ಅವಳ ಪರವಾಗಿ ನಿಂತದ್ದು ಬಹುಶಃ ಅವಳು ಅಮಾಯಕಗಳು ಎಂಬ ಕಾರಣದಿಂದಲೇ..... ಆದರೆ ನಾನು ಅವರ ಮಾತುಗಳನ್ನು ಲೆಕ್ಕಿಸದೆ, ಅವರ ಬಾಯಿಗಳನ್ನೂ ಮುಚ್ಚಿಸಿದ್ದೆ.


ಆದರೆ ನಾನು ಎಣಿಸಿದಂತೆ ಸೀತಾ ಮುಗ್ಧಳಾದರೂ; ಬಹಳ ಗಟ್ಟಿಗಿತ್ತಿ! ನನ್ನಿಂದ ಬಿಡಿಗಾಸಿನ ನೆರವನ್ನೂ ಪಡೆಯದೆ ತನ್ನ ತವರು ಮನೆಯವರ ಮತ್ತು ಅಣ್ಣಂದಿರ ಸಹಕಾರದೊಂದಿಗೆ ಯಾವುದೋ ಖಾಸಗಿ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ಹಗಲಿರುಳು ಮರ್ಯಾದೆಯಿಂದ ದುಡಿದು ತನ್ನ ಕಾಲ ಮೇಲೆ ತಾನು ನಿಂತು ಸ್ವಾವಲಂಬಿಯಾಗಿ ಜೀವಿಸಿ ಬಿಟ್ಟಳು.

ನಾನು ಅವಳನ್ನು ಮನೆಯಿಂದಾಚೆ ಕಳುಹಿಸಿದಾಗ ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಸಿರಿಯನ್ನು ಇಂದು ಎಲ್ಲರೂ; ಮಿಗಿಲಾಗಿ ನಾನೇ ಆಶ್ಚರ್ಯ ಪಡುವ ರೀತಿಯಲ್ಲಿ ವೈದ್ಯೆಯನ್ನಾಗಿ ಮಾಡಿದ್ದಾಳೆ!


ಅಷ್ಟಕ್ಕೂ ಸಿರಿ ನನ್ನಂತೆ ಬುದ್ದಿವಂತಳೇ! ಅಮ್ಮನ ಕಷ್ಟಕ್ಕೆ ಹೆಗಲು ಕೊಟ್ಟಿದ್ದರೂ ತನ್ನ ಸಂಪೂರ್ಣ ಶಿಕ್ಷಣವನ್ನು ಸರ್ಕಾರಿ ಕೋಟಾದಲ್ಲಿ ಮುಗಿಸಿ ಅದರಲ್ಲೂ ಚಿನ್ನದ ಪದಕ ಗಿಟ್ಟಿಸಿದ್ದಾಳೆ!


ಅತ್ತ ಅವರದು ಕಷ್ಟದಲ್ಲೂ ಸುಖಾಂತ್ಯದ ಕಥೆಯಾದರೆ; ಇತ್ತ ನನ್ನದು.......!!??

ನಾನು ಇಷ್ಟು ವರ್ಷ ಅವರಿವರ ಸಹವಾಸದಲ್ಲಿ ಬಿದ್ದು, ಇರುವುದನ್ನೆಲ್ಲಾ ಕಳೆದುಕೊಂಡು, ಅಕ್ಷರಶಃ ಈ ದಿನ ಒಂಟಿಯಾಗಿದ್ದೇನೆ! ಈಗ ನನಗೆ ನನ್ನ ಮಗಳು ಬೇಕು!


ಸೀತಾ ಅವಳನ್ನು ಹೇಗೆ ಬೆಳೆಸಿದ್ದಾಳೋ ಗೊತ್ತಿಲ್ಲ; ನನ್ನ ಬಗ್ಗೆ ಏನನ್ನು ತಲೆಗೆ ತುಂಬಿಸಿದ್ದಾಳೋ..... ಎಲ್ಲವನ್ನು ಸಿರಿಯೊಂದಿಗೆ ಮಾತನಾಡಿ ತಿಳಿದುಕೊಳ್ಳಬೇಕು! ಆದರೆ ಅವಳನ್ನು ಒಂಟಿಯಾಗಿ ಎದುರಿಸುವ ಸಲುಗೆ ನನಗೆ ಮೊದಲು ಬೇಕು. ಅಂತಹ ಸಲುಗೆ ಬರಬೇಕಾದರೆ, ಮೊದಲು ಹತ್ತು ಜನರ ಮುಂದೆ ನಾನು ಅವಳ ಅಪ್ಪ ಎಂದು ಸಾಬೀತು ಮಾಡಿಕೊಳ್ಳಬೇಕು...... ಅದಕ್ಕೆ ಇದು ಸುಸಂದರ್ಭವೆಂದು ಇಲ್ಲಿಗೆ ಬಂದೆ! ಇಂದು ಎಲ್ಲರಿಗೂ ತಿಳಿಯುವಂತೆ ಮಾಧ್ಯಮದವರ ಮುಂದೆ ಅವಳ ಕೈ ಹಿಡಿದು ನಡೆಯಲು ಯೋಚಿಸಿದ್ದೆ!


ಆದರೆ.....ನನ್ನ ಆಂತರ್ಯ ಅರಿತ ಸೀತಾ ಇಂತಹ ಸುವರ್ಣಾವಕಾಶ ತಡೆದುಬಿಟ್ಟಳು! ಅದು ಅವಳ ಸಾಧನೆ!


ಆದರೆ ನಾನು ಇಷ್ಟಕ್ಕೇ ಬಿಡುವೆನೇನು......? ಎಷ್ಟಾದರೂ ಸಿರಿ ನನ್ನ ಮಗಳಲ್ಲವೇ.....? ಅವಳ ಮೇಲೆ ನನ್ನ ಹಕ್ಕಿಲ್ಲವೇ....??


ನಾನು ಅಂದುಕೊಂಡಂತೆ ನನ್ನ ಮಗಳನ್ನು ಸಾಧಿಸಿಯೇ ಸಾಧಿಸುತ್ತೇನೆ!


Rate this content
Log in

Similar kannada story from Abstract