ದೇವದಾಸ
ದೇವದಾಸ


'ಈ ಮುಂಗಾರು ಮಳೆಯಲ್ಲಿ ಇಷ್ಟೊಂದು ಬೆಂಕಿ ಇದೆ ಅಂತ ಗೊತ್ತಿರಲಿಲ್ಲ ದೇವದಾಸ '........ ಥೇಟ್ ಮುಂಗಾರುಮಳೆಯ ಡೈಲಾಗ್! ಹಿಂತಿರುಗಿ ನೋಡಿದರೆ ಅವನು.......! ತನ್ನ ಸರಿಸುಮಾರು ವಯಸ್ಸಿನ ಸುರದ್ರೂಪಿ ಯುವಕ.
ಇದ್ದಕ್ಕಿದ್ದಂತೆ ಹಗಲಿನಲ್ಲಿಯೇ ಶುರುವಾಗಿದ್ದ ಮುಂಗಾರುಮಳೆಯ ಹೊಡೆತಕ್ಕೆ ಸಿಲುಕಿ ಮುಂದೆ ಬೈಕ್ ಚಲಾಯಿಸಲಾಗದೆ ಅಲ್ಲೇ ಇದ್ದ ಪ್ರಯಾಣಿಕರ ತಂಗುದಾಣದಲ್ಲಿ ಆಶ್ರಯ ಪಡೆದು, ಮಳೆಯನ್ನೇ ದಿಟ್ಟಿಸಿ ನೋಡುತ್ತಿದ್ದ ದೇವದಾಸನ ಹೆಗಲ ಮೇಲೆ ಬಿದ್ದ ಕೈ ಸ್ಪರ್ಶದೊಂದಿಗೆ ನೇರ ದೃಷ್ಟಿಯಿಂದ ಹೇಳಿದ ಈ ನುಡಿಗಳು ಆ ಕ್ಷಣದಲ್ಲಿ ಅನಿರೀಕ್ಷಿತ ಮಳೆಗಿಂತಲೂ ಹೆಚ್ಚಿನ ಆಶ್ಚರ್ಯವನ್ನು ಅವನಲ್ಲಿ ಮೂಡಿಸಿತ್ತು.
ಯಾರು ಈ ಆಗಂತುಕ.....?? ಆದರೆ ಬಲು ಪರಿಚಯದ ವ್ಯಕ್ತಿಯಂತೆ ನೇರವಾಗಿ ತನ್ನನ್ನೇ ಮಾತನಾಡುತ್ತಿದ್ದಾನೆ. ಜೊತೆಗೆ ತನ್ನ ಹೆಸರು ದೇವದಾಸ ಎಂದು ಇವನಿಗೆ ತಿಳಿದಿದೆ! ಎಂದರೆ ತಾನು ಮೊದಲೇ ಅವನಿಗೆ ಪರಿಚಯವಿರಬೇಕು.
ಹೇಗೆ? ತನಗೇನು ಇವನನ್ನು ಮೊದಲು ಭೇಟಿಯಾಗಿರುವ ನೆನಪೇ ಇಲ್ಲವಲ್ಲ! ಇಷ್ಟು ಸಲುಗೆಯಿಂದ ಮಾತನಾಡಲು ಹೇಗೆ ಸಾಧ್ಯವಾಗುತ್ತಿದೆ? ಎನ್ನುವ ಕುತೂಹಲದ ಪ್ರಶ್ನೆಯ ಹುಳುಗಳು ದೇವದಾಸನ ತಲೆಯಲ್ಲಿ ಓಡಾಡತೊಡಗಿದವು.
ಆದರೂ ಸಾವರಿಸಿಕೊಂಡು ಮುಗುಳುನಗೆ ನಕ್ಕ. ಸುತ್ತಲೂ ನೋಡಿದ. ತಮ್ಮಿಬ್ಬರನ್ನು ಹೊರತುಪಡಿಸಿ ಅಲ್ಲಿ ಯಾರ ಸುಳಿವೂ ಕಾಣಲಿಲ್ಲ. ಮಳೆಯೂ ಜೋರಾಗುತ್ತಿತ್ತು.
'ಅಂತೂ ನನ್ಗೆ ಲಿಸ್ಟಾಗೋಯ್ತು.....ಎದ್ದೇಳೊ ಸುನಾಮಿಗೆ ಇನ್ನೂ ಅದೇನೇನ್ ಎಗ್ರೊಯ್ತವೊ ನೋಡ್ಬೇಕು' ಮತ್ತೆ ಆತ ಮಳೆ ಸಿನಿಮಾ ಡೈಲಾಗ್ ಹೊಡೆದ.
ಮಾತನಾಡು ದೇವದಾಸ ಎಂದು, ಏನು ನಿನ್ನ ಕಥೆ? ನನ್ನ ಹಾಗೆ ಒಬ್ಬನೇ ಬಂದು ಇಲ್ಲಿ ನಿಂತಿದ್ದೀಯಾ.....ಯಾಕೆ ನಿನ್ನೊಂದಿಗೆ ನಿನ್ನ ಹುಡುಗಿ ಬರಲು ಒಪ್ಪಲಿಲ್ವಾ.....?ಎಂದು ಕೇಳಿದ.
ಈಗ ಮತ್ತೆ ತಬ್ಬಿಬ್ಬಾಗುವ ಸರದಿ ನನ್ನದಾಯಿತು. ಯಾವುದರ ಬಗ್ಗೆ ಈತ ಕೇಳುತ್ತಿದ್ದಾನೆ? ಅದೂ ಅಷ್ಟು ನಿಖರವಾಗಿ! ನನ್ನ ಹೆಸರು ದೇವದಾಸ ಆಗಿರಬಹುದು; ಆದರೆ ತಾನೇನು ಪ್ರೀತಿಯಲ್ಲಿ ತ್ಯಾಗ ಮಾಡಿದ ದೇವದಾಸನಲ್ಲ. ಅಂತಹ ಯಾವುದೇ ಕಥೆ ನನ್ನ ಬದುಕಲ್ಲಿ ನಡೆದಿಲ್ಲ. ನನ್ನ ಹುಡುಗಿ..... ಹೌದು ಇದ್ದಾಳೆ! ಮದುವೆಯ ಸಂಭ್ರಮದಲ್ಲಿ ಇದ್ದಾಳೆ! ಆಷಾಢ ಕಳೆದ ಮುಂದಿನ ತಿಂಗಳೇ ನಮ್ಮ ಮದುವೆ. ನಾನೇ ಪ್ರೀತಿಸಿದ್ದರೂ, ಎರಡೂ ಮನೆಯವರು ನೋಡಿ ಒಪ್ಪಿಗೆಮಾಡಿದ ಸಂಬಂಧ. ನಮ್ಮಮನೆಗಳಲ್ಲಿ ಸಕಲಸಿದ್ಧತೆಗಳು ಸಂತೋಷದಿಂದ ನಡೆಯುತ್ತಿವೆ. ನಾನು ಕರೆದರೆ ಬರಲು ಸಿದ್ಧವಿರುವ ಅವಳ ಬಗ್ಗೆ ಈತ ಏನು ಕೇಳುತ್ತಿದ್ದಾನೆ? ಎಂದುಕೊಂಡು,
"ಕ್ಷಮಿಸಿ ನೀವು ಯಾವುದರ ಬಗ್ಗೆ ಮಾತನಾಡುತ್ತಿರುವಿರಿ ಎಂದು ನನಗೆ ಅರ್ಥವಾಗಲಿಲ್ಲ...!" ಎಂದೆ.
'ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ'
' ಈ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ'
ಮೊದಲು ನಿನ್ನ ಹುಡುಗಿಯನ್ನ ಕಾಪಾಡಿಕೋ.....ಅವಳು ನಿನಗೆ ಸಿಕ್ತಾಳೊ ಇಲ್ಲವೊ ಗೊತ್ತುಮಾಡಿಕೋ, ಯಾಕಂದ್ರೆ..
'ಹುಲಿ ಬೇಟೆಗೆ ಹೋದ್ರು ಬೇಟೆನೇ...ಹುಲಿ ಹತ್ತಿರ ಬಂದರೆ ಎದೆ ಬಗೆಯೊದು ಹುಲಿನೇ' .... ಎಂದ.
"ಇಲ್ಲ ಹಾಗೇನಿಲ್ಲ, ನಿಮಗೇನೊ ಅಪಾರ್ಥವಾಗಿರಬೇಕು! ನಮ್ಮ ಮದುವೆ ವಿಷಯದಲ್ಲಿ ಯಾವುದೇ ತಕರಾರಿಲ್ಲ. ಹಾಗೆ ನಮ್ಮ ಪ್ರೀತಿಯಲ್ಲಿಯೂ....!" ಒಂದೇ ಸಮನೆ ತಾನು ಹೇಳಿದ ಮಾತುಗಳಿಗೆ ತನಗೇ ನಾಚಿಕೆಯಾಯಿತು. ಅಷ್ಟಕ್ಕೂ ಗೊತ್ತುಗುರಿಯಿಲ್ಲದ ಈ ವ್ಯಕ್ತಿಗೆ ತಾನು ಮುಗ್ಧನಂತೆ ಈ ವಿವರಗಳನ್ನು ಏಕೆ ನೀಡುತ್ತಿದ್ದೇನೆ? ಎಂದು ತನ್ನ ಮೇಲೆಯೇ ಬೇಜಾರಾಯಿತು.
'ರಾಮ ಎನ್ನುವವನು ರಾವಣನಿಗೆ ಇಷ್ಟವಾಗಲಿಲ್ಲ, ಕೃಷ್ಣ ಎನ್ನುವನು ಕಂಸನಿಗೆ ಮೆಚ್ಚುಗೆಯಾಗಲಿಲ್ಲ, ಎಂದಾದ ಮೇಲೆ ಎಲ್ಲರ ಮೆಚ್ಚುಗೆಗಾಗಿ ಬದುಕುತ್ತೇನೆ ಅಂದರೆ ಅರ್ಥವಿಲ್ಲ' ಮತ್ತೆ ಡೈಲಾಗ್ ಹೊಡೆದ. ನಿನ್ನ ಒಳ್ಳೆಯದಕ್ಕೆ ಹೇಳುತ್ತಿದ್ದೇನೆ. ಮನೆಯಲ್ಲಿ ಮದುವೆ ಮಾಡುವವರೆಗೂ ಕಾಯಬೇಡ..... ನಿನ್ನ ಹುಡುಗಿಯನ್ನ ಎತ್ತಾಕಿಕೊಂಡು ಬಂದು ಅವಳನ್ನು ನಿನ್ನ ದಾರಿಯಲ್ಲಿ ಇಟ್ಟುಕೋ' ಎಂದ.
ತುಸು ಕೋಪ ಬಂದರೂ ಮರೆಮಾಚಿ, "ಏನ್ ಬ್ರದರ್, ಏನೇನೋ ಹೇಳ್ತಾ ಇದ್ದೀರಾ? ಬಹುಶಃ ನಿಮಗೆ ಯಾವುದೊ ಕೆಟ್ಟ ಅನುಭವವಾಗಿರಬೇಕು, ಅಥವಾ ನನ್ನನ್ನು ಬೇರೆ ಯಾರೊ ಅಂದುಕೊಂಡು ಮಾತನಾಡುತ್ತಿದ್ದೀರಿ! ಏನು ನಿಮ್ಮ ಕಥೆ?" ಎಂದೆ.
'ಲೋ ದೇವದಾಸ ನನಗೆ ನಿನ್ನ ಬಗ್ಗೆ ಎಲ್ಲಾ ಗೊತ್ತು, ನಾನು ಸಹ ಸಹ್ಯಾದ್ರಿ ಕಾಲೇಜಿನ ಸ್ಟೂಡೆಂಟ್, ಆಗಲಿಂದಾ ನಿನ್ನನ್ನು ನೋಡುತ್ತಿದ್ದೇನೆ. ಪ್ರೀತಿಯ ವಿಷಯ ನೇರವಾಗಿ ಹುಡುಗಿಗೆ ಹೇಳದೆ ಮನೆಯವರ ಮೂಲಕ ಒಪ್ಪಿಸಿ ಮದುವೆಯಾಗುತ್ತಿದ್ದೀಯ ಎಂಬುದು ನನಗೆ ಗೊತ್ತಿದೆ' ಎಂದ.
'ಯಾರನ್ನು ಯಾವ ದಡಕ್ಕೆ ಸೇರಿಸಿದರೂ ಕೂಡ, ನಾನು ಎಂಬ ಹಡಗು ಸಮುದ್ರದಲ್ಲಿ ಒಂಟಿನೇ'.... ಹಾಗೆಯೇ ನಾನು ಸಹ. ಬೇಕಾದ್ರೆ ಕೇಳು ನನ್ನ ಕೈಯಲ್ಲಿ ಆಗುವ ಸಹಾಯ ಮಾಡುತ್ತೇನೆ......ಸೋತ್ರೆ ಗೆಲ್ಲಬೇಕು ಅನ್ನೋ ಮನಸ್ಸು ಬರುತ್ತೆ...ಅವಮಾನ ಆದ್ರೆ ಗೆಲ್ಲಲೇ ಬೇಕು ಅನ್ನೋ ಛಲ ಬರುತ್ತೆ. ನಿನಗಿನ್ನೂ ಜೀವನದಲ್ಲಿ ಅನುಭವ ಆಗಿಲ್ಲ, ಬೆಳ್ಳಗಿರುವುದೆಲ್ಲಾ ಹಾಲಲ್ಲ. ಅಷ್ಟು ಸುಲಭವಾಗಿ ಹೆಣ್ಣುಮಕ್ಕಳನ್ನು ನಂಬಿ ನನ್ನ ಹಾಗೆ ಮೋಸಹೋಗಬೇಡ' ಎಂದ.
ಎಲ್ಲಾ ಗೊತ್ತಿರುವವನಂತೆ ಮಾತನಾಡುತ್ತಿದ್ದಾನೆ. ಆದರೂ ಇವನ ಜೀವನದಲ್ಲಿ ಏನೊ ಆಗಿರಬೇಕೆಂದು ಅನಿಸಿ, ಮನಸ್ಸಿನ ಮೂಲೆಯಲ್ಲಿ ಒಂದು ಸಣ್ಣ ಅನುಕಂಪ ಎದ್ದು ಅವನ ಬಗ್ಗೆ ಸಾಂತ್ವನದ ಮಾತುಗಳನ್ನಾದರೂ ಆಡೋಣ ಎಂದುಕೊಂಡೆ. ಜೊತೆಗೆ ಸುತ್ತಲೂ ನೋಡಿದಾಗ ಮಳೆಯೂ ನಿಲ್ಲುವ ಲಕ್ಷಣ ತೋರುತ್ತಿರಲಿಲ್ಲ. ಹೀಗಾದರೂ ಸಮಯ ಕಳೆಯೋಣ ಎಂದುಕೊಂಡು ಮಾತು ಮುಂದುವರಿಸಿದೆ.
"ಏನಾಯ್ತು ಬ್ರದರ್.... ನನ್ನ ಹೆಸರು ದೇವದಾಸ ಎಂದಿದ್ದರೂ, ನಾನು ದೇವದಾಸನಲ್ಲ. ಆದರೂ, ನಿಮ್ಮ ಹಿಂದೆ ಯಾವುದೋ ಸೋತುಹೋದ ಲವ್ ಸ್ಟೋರಿ ಇರಬೇಕು ಅನ್ನಿಸುತ್ತಿದೆ....! ನಿಮಗೇನು ಬೇಜಾರ್ ಇಲ್ಲದಿದ್ದರೆ ಹೇಳಿ" ಎಂದೆ.
ಬೇರೆ ಸಮಯದಲ್ಲಾದರೆ ತಾನು ಇತರರ ವಿಷಯದೊಳಗೆ ಎಂದಿಗೂ ಮೂಗುತೂರಿಸಿದವನಲ್ಲ. ಆದರೆ ಇಂದು ಏನೋ ಒಂದು ಕೆಟ್ಟ ಕುತೂಹಲ ತನ್ನನ್ನು ಹೀಗೆ ಕೇಳಿಸಿ ಬಿಟ್ಟಿತ್ತು. ಸದ್ಯಕ್ಕೆ ಸುತ್ತಲೂ ಕೇಳಿಸಿಕೊಳ್ಳುವವರು ಯಾರೂ ಇರಲಿಲ್ಲ! ಇಲ್ಲಿ ಏನು ನಡೆದರೂ ನಮ್ಮಿಬ್ಬರಲ್ಲಿಯೇ ಇದ್ದುಬಿಡುತ್ತದೆ ಎಂದುಕೊಂಡು, ಮುಂದಿದ್ದವನ
ಮಾತುಗಳನ್ನು ಕೇಳಲು ಕಾತರನಾದೆ. ಅವನ ಉತ್ಸಾಹ ಮತ್ತೂ ಹೆಚ್ಚಿದಂತೆ ಕಾಣತೊಡಗಿತ್ತು.
'ನಾವು ಹುಡುಗರು ಒಂದು ಸಲ ಒಂದು ಹುಡುಗಿ ಹೆಸರನ್ನು ಕೆತ್ಕೊಂಡು ಬಿಟ್ರೆ ಆ ದೇವರೇ ಬಂದ್ರೂ ಆ ಹೆಸರನ್ನು ಕಳಿಸೋಕೆ ಬಿಡಲ್ಲ' ಆದರೆ ಹುಡುಗಿರಿಗೆ ಮಾತ್ರ ಅರ್ಥನೇ ಆಗಲ್ಲ! ನಾನು ನನ್ನ ಹುಡುಗಿಯನ್ನು ಎಷ್ಟು ಪ್ರೀತಿಸಿದೆ, ಅವಳಿಗಾಗಿ ಹೃದಯದಲ್ಲಿ ಪ್ರೇಮದ ಗೂಡುಕಟ್ಟಿದೆ. ...
ಗೂಡು ಕಟ್ಟೋ ತನಕ ಮಾತ್ರ ರೇಷ್ಮೆ ಹುಳಕ್ಕೆ ಆಯಸ್ಸು ಅದು ಆದ ಮೇಲೆ ನೀರಿಗೆ ಹಾಕೊದೇ' ಮತ್ತೆ ಡೈಲಾಗ್ ಹೊಡೆದು, ಮುಂದುವರಿಸಿದ...'ನಾವಿಬ್ಬರೂ ಪ್ರೀತಿಸಿದಷ್ಟು ಬಹುಶಃ ಯಾರೂ ಪ್ರೀತಿಸಿರಲ್ಲ..... ಸುತ್ತಾಡುವವರೆಗೂ ಸುತ್ತಾಡಿ ಕೊನೆಗೆ ನನ್ನನ್ನು ನಡುನೀರಿನಲ್ಲಿ ಕೈಬಿಟ್ಟಳು..
ಇದ್ದಕ್ಕಿದ್ದಂತೆ ಒಂದು ದಿನ ನನಗೆ ಫೋನ್ ಮಾಡಿ,
ನಮ್ಮ ಪ್ರೀತಿಗೆ ನಮ್ಮ ಮನೆಯಲ್ಲಿ ಒಪ್ಪುತ್ತಿಲ್ಲ, ಆದ್ದರಿಂದ ನಾನು ಅಪ್ಪ ನೋಡಿದ ಹುಡುಗನನ್ನೇ ಮದುವೆಯಾಗುತ್ತಿದ್ದೇನೆ. ನಿನಗೇನಾದರೂ ನನ್ನ ಮೇಲೆ ಪ್ರೀತಿ ಇದ್ದರೆ ದಯವಿಟ್ಟು ನನ್ನ ಮದುವೆಗೆ ಬರಬೇಡ; ಬಂದರೆ ನನ್ನ ಮದುವೆ ಖಂಡಿತ ನಡೆಯೋಲ್ಲ....!
ಎಂದು ಸಿನಿಮಾ ಡೈಲಾಗ್ ಹೊಡೆದು ಬಿಟ್ಟಳು' ಎಂದನು.
"ಓ ಹೌದಾ....! .ಮುಂದೇನಾಯಿತು? ನೀವು ಏನೂ ಪ್ರಯತ್ನಪಡಲೇ ಇಲ್ಲವೇ?" ಎಂದು ಕೇಳಿದೆ. ಅದಕ್ಕವನು, ನಾನು ಏನು ಸುಮ್ಮನೆ ಇರಲಿಲ್ಲ 4-5 ಜನ ರೌಡಿಗಳೊಂದಿಗೆ ಅವರ ಮನೆಗೆ ಹೋದೆ....'ನಾವು ಕ್ಲಾಸ್ ಅಲ್ಲ ಮಾಸ್'
ಅಂತ ಅವರಪ್ಪನಿಗೆ ತೋರಿಸಿದೆ. ಮನೆಯಲ್ಲೇ ಇದ್ದ ಅವಳು ಹೊರಬಂದು,'ನೀನೊಬ್ನೇ ಹೀಗಾ ಅಥವಾ ಎಲ್ಲಾ ಹುಡುಗ್ರೂ ಹೀಗೇನಾ? ನನ್ನ ಕಣ್ಣಿಗೆ ಕಾಣಬೇಡ ತೊಲಗಾಚೆ' ಎಂದಳು.
ತುಂಬಾ ಬೇಜಾರಾಯ್ತು ನನ್ನ ಜೀವನದಲ್ಲಿ ಇವಳು ಆಟ ಆಡಿದ್ದಾಳೆ ಅಂದುಕೊಂಡು,'ನೀವು ಯಾರನ್ನು ಬೇಕಾದರೂ ಕಟ್ಕೊಳ್ಳಿ, ಆದ್ರೆ ನನ್ನಷ್ಟು ನಿಮ್ಮನ್ನು ಇಷ್ಟ ಪಡೋನು ಈ ಭೂಮಿ ಮೇಲೆ ನಿಮಗೆ ಯಾರು ಸಿಗಲ್ಲ..... ' ಎಂದೆ. ಇಬ್ಬರೂ ಜೊತೆಗೇ ಮುಂಗಾರು ಮಳೆ ಚಿತ್ರ ನೋಡಿದ್ದರಿಂದ, ಅವಳಿಗೂ ಈ ಡೈಲಾಗ್ ಅರ್ಥವಾಗಿತ್ತು.
ಆದರೆ ಅಷ್ಟರಲ್ಲಿ'ಏನ್ ನಮ್ಮನ್ನು ನೋಡಿ ಉರ್ಕೊಳ್ಳೋರು ಒಬ್ರಾ ಇಬ್ರಾ, ದುಷ್ಮನ್ ಕಹಾ ಹೈ ಅಂದ್ರೆ ಊರ್ ತುಂಬಾ ಹೈ....' ಎಂಬಂತೆ ನಾವು ಮನೆ ಮುಂದೆ ಗಲಾಟೆ ಮಾಡುತ್ತಿದ್ದ ವಿಷಯ ಯಾರೋ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.
ಪೊಲೀಸರು ಬರುವ ವೇಳೆಗೆ ನನ್ನೊಂದಿಗಿದ್ದ ಎಲ್ಲರೂ ಪರಾರಿಯಾಗಿದ್ದರು. ನಾನೊಬ್ಬನೇ ಅಲ್ಲಿ ಒಂಟಿಯಾಗಿ ಅವರು ಕೇಳಿದ ಪ್ರಶ್ನೆಗೆ ಉತ್ತರ ಕೊಡುತ್ತಿದ್ದೆ. ಬಹಳ ಧೈರ್ಯದಿಂದಲೇ ಮಾತನಾಡುತ್ತಿದ್ದ ನನ್ನನ್ನು ಪೋಲೀಸಿನವ.....
'ಲೋ ಮರಿ ದಮ್ ಬಗ್ಗೆ ನನ್ಹತ್ರ ಮಾತಾಡಬೇಡ, ಕಣ್ಣೋಟ ಕೇಳಗಿರಲಿ, ಕೆಣಕಬೇಡ ತಲೆಕೆಟ್ಟರೆ ನೂರು ಇರೋ ಜಾಗದಲ್ಲಿ ನಾನು ಇರ್ತೀನಿ, 108 ಇರೋ ಜಾಗದಲ್ಲಿ ನೀನು ಇರುತ್ತೀಯಾ' ಎಂದನು.
ಅಷ್ಟಕ್ಕೆ ಸುಮ್ಮನಾಗಿದ್ದರೆ ಸರಿಯಾಗುತ್ತಿತ್ತು, ಅದೇ ಆವೇಶದಲ್ಲಿ ಅವರಪ್ಪ ನನ್ನ ಮೇಲೆ ಕೈಮಾಡಲು ಬಂದಾಗ ನಾನೂ ಒಂದೆರಡು ಹಾಕಿಬಿಟ್ಟಿದ್ದೆ....'ಒಂದು ಹೊಡೆದಾಟದಲ್ಲಿ ಯಾರು ಮೊದಲು ಹೊಡುದ್ರು ಅನ್ನೋದು ಲೆಕ್ಕಕ್ಕೆ ಬರಲ್ಲ, ಯಾರು ಮೊದಲು ಕೆಳಗೆ ಬಿದ್ರು ಅನ್ನೋದೇ ಲೆಕ್ಕಕ್ಕೆ ಬರೊದು..' (ಮತ್ತೆ ಡೈಲಾಗ್ ಹೊಡೆದ) ಕೆಳಗೆ ಬಿದ್ದ ಅವರಪ್ಪನನ್ನು ಮೇಲಕ್ಕೆ ಎತ್ತಿ ಪೋಲೀಸಿನವರು,'ತಪ್ಪು ಮಾಡಿಬಿಟ್ರಿ ನೀವು ತಪ್ಪು ಮಾಡಿಬಿಟ್ರಿ' ಎಂದು ಅವರಿಗೆ ಹೇಳಿ, ನನ್ನ ಕಡೆ ತಿರುಗಿ ತಮ್ಮ ರಿವಾಲ್ವರ್ ತೆಗೆದು 'ಎಂಥಾ! ಶೂಟ್ ಮಾಡಬೇಕಾ.....?' ಎಂದರು.
ಇಷ್ಟೆಲ್ಲಾ ಆದಮೇಲೆ ನಾನು ತಾನೇ ಏನು ಮಾಡಲಿ? ಅದಕ್ಕೆ ನಿನಗೂ ಹೇಳುತ್ತಿರುವುದು, ನಿನ್ನ ಹುಡುಗಿಯ ಪ್ರೀತಿಯ ಬಗ್ಗೆ ಮೊದಲೇ ಕಣ್ಣಿಡು. ಮದುವೆಯವರೆಗೂ ಕಾಯಬೇಡ...... ಮತ್ತೆ...........
ಇನ್ನೂ ಏನೋ ಹೇಳಲು ಹೊರಟಿದ್ದ. ಅಷ್ಟರಲ್ಲಿ ನನ್ನ ಗೆಳೆಯ ಅಭಿಜಿತ್ ಮಳೆಯಲ್ಲಿ ತೋಯ್ದು ತೊಪ್ಪೆಯಾಗಿ ಅಲ್ಲಿಗೆ ಬಂದ. ನಮ್ಮನ್ನು ನೋಡಿದವನೇ ತನ್ನ ಗಾಡಿ ನಿಧಾನಿಸಿ ಜೋರಾಗಿ ನಕ್ಕು,
" ಓಯ್ ದೇವ್ ನೀನು ಇಲ್ಲಿದ್ದೀಯಾ? ಇಲ್ಲಿರುವ ಬದಲು ಮಳೆಯಲ್ಲಿ ನೆನೆಯುವುದೇ ವಾಸಿ......ಬಾ ನನ್ನ ಜೊತೆಜೊತೆ, ಮೊದಲು ಇಲ್ಲಿಂದ ಹೊರಡು,' ಎಂದು ಆತುರವಾಗಿ ನನ್ನನ್ನು ಹೊರಡಿಸಿದ.
ಅಷ್ಟರಲ್ಲಿ ಮಳೆಯ ವೇಗವು ಸ್ವಲ್ಪ ಕಡಿಮೆಯಾದಂತಾಗಿ ನಾನೂ ಹೊರಟೆ. ಗಾಡಿ ಸ್ಟಾರ್ಟ್ ಮಾಡುತ್ತಾ ಇಷ್ಟು ಹೊತ್ತು ಜೊತೆಗಿದ್ದ ಆ ಆಗಂತುಕನನ್ನು ನೋಡಿದೆ.... ಏನೋ ಹೇಳುತ್ತಿದ್ದ. ಅಷ್ಟರಲ್ಲಿ ಮುಂದೆ ಸಾಗಿದ್ದರಿಂದ ಸರಿಯಾಗಿ ಕೇಳಲಿಲ್ಲ.
ಸ್ವಲ್ಪದೂರ ಮುಂದೆ ಬಂದಮೇಲೆ ಅಭಿಜಿತ್ ಗಾಡಿ ನಿಲ್ಲಿಸಿ ನನಗಾಗಿ ಕಾಯುತ್ತಾ ನಗುತ್ತಿದ್ದ.
'ಅಲ್ವೋ ಹೋಗಿಹೋಗಿ ಆ ಸೆಮಿ ಮೆಂಟಲ್ ಕೈಲಿ ಸಿಕ್ಕಿಹಾಕಿಕೊಂಡಿದ್ದೀಯ! ನಿನಗೇನೊ ಅವನ ಜೊತೆ ಮಾತು...? ಎಂದಾಗ ತಬ್ಬಿಬ್ಬಾಗುವ ಸರದಿ ನನ್ನದಾಗಿತ್ತು.
ಆ ಬಗ್ಗೆ ವಿಚಾರಿಸಿದಾಗ ಅಭಿಜಿತ್ ಹೇಳಿದ,
'ಅವನು ಬುದ್ಧಿವಂತ ವಿದ್ಯಾರ್ಥಿ. ಕಾಲೇಜು ದಿನಗಳಲ್ಲಿ ಯಾವುದೋ ಹುಡುಗಿ ಕೈ ಕೊಟ್ಟಾಗ ಅವಳ ಗುಂಗಿನಿಂದ ಹೊರಬರಲು ಒಂದೇ ಸಮನೆ ಚಲನಚಿತ್ರಗಳನ್ನು ನೋಡಿ ನೋಡಿ ಅರೆಹುಚ್ಚನಾಗಿದ್ದಾನೆ. ಮುಂಗಾರುಮಳೆ ಸಿನಿಮಾ ನೋಡಿದಾಗಿನಿಂದ ಯಾವ ಹುಡುಗರನ್ನು ನೋಡಿದರೂ ತನ್ನ ದೇವದಾಸನ ಪಾತ್ರಕ್ಕೆ ಅವರನ್ನು ಕಲ್ಪಿಸಿ ತನ್ನ ಅನುಭವದ ಎಲ್ಲಾ ಪಿಚ್ಚರ್ ಡೈಲಾಗುಗಳನ್ನು ಅವರಿಗೆ ಬುದ್ಧಿವಾದದ ರೂಪದಲ್ಲಿ ಹೇಳುತ್ತಾನೆ. ಅದಕ್ಕೇ ಅವನ ಕೈಗೆ ಯಾರೂ ಸಿಗುವುದಿಲ್ಲ. ನೀನೊಬ್ಬ ಏನೂ ಗೊತ್ತಿಲ್ಲದೆ ಇಂದು ಸಿಕ್ಕಿಬಿದ್ದಿದ್ದೀಯ. ಕೆಲವೇ ದಿನಗಳಲ್ಲಿ ಮದುವೆಯಾಗುವ ಹುಡುಗ, ಮತ್ತೆ ಅವನ ಹಾಗೆ ಆಗಬೇಡ ನೋಡು!' ಎಂದು ಹೊಟ್ಟೆ ಹುಣ್ಣಾಗುವ ಹಾಗೆ ನಗುತ್ತಿದ್ದ.
ಇಂಗು ತಿಂದ ಮಂಗನಂತಾದ ನನ್ನ ಪರಿಸ್ಥಿತಿಗೆ ನನಗೇ ನಗು ಬಂದರೂ, ಅಂತರಾಳದಲ್ಲಿ ಎಲ್ಲೋ ಅನಿಸುತ್ತಿತ್ತು; ದೇವದಾಸ ಎಂಬ ಹೆಸರು ನನ್ನದಾದರೂ ಪ್ರತಿನಿತ್ಯದ ದೇವದಾಸನ ಪರಿಸ್ಥಿತಿ ಅವನದಾಗಿತ್ತು......!
ಛೇ! ಭಗವಂತ ಅವನ ಬದುಕಿನಲ್ಲಿ ಹೀಗೆ ಮಾಡಬಾರದಾಗಿತ್ತು! ಅವನ ಬಗ್ಗೆ ಯೋಚಿಸುತ್ತಾ ಮನೆಗೆ ತಲುಪಿದ ಮೇಲೆ, ನಾನು ಹೊರಡುವಾಗ ಅವನು ಹೇಳಿದ ಕೊನೆಯ ಡೈಲಾಗ್ ಜ್ಞಾಪಕಕ್ಕೆ ಬಂದಿತ್ತು!
'ಐ ಆಮ್ ಗಾಡ್, ಗಾಡ್ ಈಸ್ ಗ್ರೇಟ್'........