ಫೇಸ್ ಬುಕ್ ಫ್ರೆಂಡ್
ಫೇಸ್ ಬುಕ್ ಫ್ರೆಂಡ್
ನಾನೊಬ್ಬ ಬ್ಯಾಂಕ್ ಮ್ಯಾನೇಜರ್. ವರ್ಷದ ಹಿಂದೆ ಯಷ್ಟೇ ನಿವೃತ್ತನಾಗುವ ಸಮಯದಲ್ಲಿ ಒಮ್ಮೆಫೇಸ್ ಬುಕ್ ಮೂಲಕ ಒಬ್ಬರು ಸ್ನೇಹಿತರಷ್ಟೇ ಅಲ್ಲದೆ ಬಹಳ ಆತ್ಮೀಯರೂ ಆದರು. ಒಮ್ಮೆ ಒಂದು ಹೋಟೆಲಲ್ಲಿ ಮೀಟ್ ಮಾಡೋಣ ಅಂತ ಹೇಳಿದಾಗ ನನಗೂ ಕುತೂಹಲ ಅಳುಕಿನಂದಲೇ ನಮ್ಮ ಮನೇಗೆ ಬನ್ನಿ ನನ್ನ ಹೆಂಡತಿ ಚೆನ್ನಾಗಿ ಅಡುಗೆ ಮಾಡ್ತಾಳೆ ಒಟ್ಟಿಗೆ ಕೂತು ಮಾತಾಡೋಣ ಅಂದೆ. ಬೇಡ ಮೊದಲಸಲ ಅಲ್ವಾ ಹೋಟೆಲ್ ನಲ್ಲಿ ಮೀಟ್ ಮಾಡೋಣ. ಆ ಮೇಲೆ ನೀವು ಹೇಳಿದಂತೆ ಆಗ್ಲಿ ಅಂದ್ರು. ಅವರು ಅಷ್ಟು ಹೇಳಿದ್ದಕ್ಕೆ ಹೋಗ್ಲಿ ಅಂತ ಬಲವಂತಕ್ಕೆ ಒಪ್ಪಿಕೊಂಡೆ. ಮಾರನೇ ದಿನ ಅವರೇ ಹೇಳಿದ ಸಮಯಕ್ಕೆ ಹೋಟೆಲ್ ಬಳಿ ಹೋಗಿ ಕಾದು ಕಾದು ಎಷ್ಟೊತ್ತಾದ್ರೂ ಪತ್ತೇ ಇಲ್ಲ. (ನಾನು ನಿಮಗೆ ಒಂದು ವಿಷ್ಯ ಹೇಳೇ ಇಲ್ಲ. ನಾನು ಇಷ್ಟೊತ್ತು ಕಾಯ್ತಾಇರೋ ಫೇಸ್ ಬುಕ್ ಫ್ರೆಂಡ್ ಅಂದಾಜು ನಲವತ್ತು ವರ್ಷ ದಾಟಿರಬಹುದಾದ ಒಂದು ಹೆಂಗಸು. )
ಬಹಳ ಹೊತ್ತು ಕಾದು ಫೋನ್ ಮಾಡಿ ಕೇಳ್ದೆ, ಯಾಕೆ ನೀವು ಇಷ್ಟೊತ್ತಾದ್ರೂ ಬರಲಿಲ್ಲ ಏನಾದ್ರು ತೊಂದರೆ ಆಯ್ತಾ ಅಂತ. ಆ ಹೆಂಗಸು ಹೇಳಿದ್ರು ಸಾರೀ ಸಾರ್ ನಾನು ಅಷ್ಟು ಹೊತ್ತು ನಿಮ್ಮನ್ನ ಅಲ್ಲಿ ಕಾಯ್ಸಿದ್ದಕ್ಕೆ ಕ್ಷಮಿಸಿ. ನಾನೂ ಯೋಚನೆ ಮಾಡಿ ನಿಮ್ಮ ಮನೇಗೇ ಬರೋದು ಒಳ್ಳೇದು ಅಂತ ಅಲ್ಲಿಗೆ ಬರಲಿಲ್ಲ ಅಂದರು. ನನಗಂತೂ ಏನು ಹೇಳ್ಬೇಕೋ ಗೊತ್ತಾಗ್ದೇ ಫೋನ್ ಕಟ್ ಮಾಡ್ದೆ. ಏನೋ ಜೀವನದಲ್ಲಿ ದೊಡ್ಡತಪ್ಪು ಮಾಡಿದ ಅನುಭವ. ಬಾ ಅಂದಾಗ ಬರ್ದೇ ಈಗ ಮನೆಗೇ ಅವರು ಬಂದ್ರೆ ಹೆಂಡ್ತಿ ಮುಂದೆ ಹೇಗೆಲ್ಲ ನಾಟಕ ಮಾಡಬೇಕು ಅಂತ ರಿಹರ್ಸಲ್ ಮಾಡಕ್ಕೂ ಆಗ್ತಿಲ್ಲ. ಅಂತೂ ಮನೆಗೆ ತಲುಪಿದೆ . ನನ್ನ ಹೆಂಡತಿ ಎಲ್ಲೋ ಹೊರಗೆ ಹೋಗುವ ಹಾಗೆ ಡ್ರೆಸ್ ಮಾಡ್ಕೊಂಡು ಡೈನಿಂಗ್ ಟೇಬಲ್ ಮೇಲೆ ನಂಗೆ ಇಷ್ಟವಾದ ಬಿಸಿಬೇಳೆ ಬಾತ್ ಅಲೂ ಬೋಂಡ ಮಾಡಿಟ್ಟು ಕಾಯ್ತಾ ಇದಾಳೆ. ಏನಿವತ್ತು ಸ್ಪೆಷಲ್ ? ಯಾರಿಗೋ ಕಾಯ್ತಾ ಇದ್ದಂಗೆ ಇದೆ. ಎಲ್ಲೋ ಹೋಗಕ್ಕೆ ರೆಡಿ ಆಗಿದಿ ಅಂದೆ. ಹೇಳ್ತಿನಿ ಮೊದಲು ಊಟ ಮಾಡಿ ಅಂದ್ಲು. ಅವರು ಯಾರೋ ಬರ್ಲಿ ಪರವಾಗಿಲ್ಲ ಅಂದೆ. ಬೇಡ ನೀವು ಊಟ ಮಾಡಿ. ಬರೋ ಗೆಸ್ಟ್ ಹೆಂಗಸು ನಾನು ಕಂಪನಿ ಕೊಡ
್ತೀನಿ ಅವರಿಗೆ ಅಂದ್ಲು. ಯಾರದು ಅಂದೆ . ನನಗೂ ಪರಿಚಯ ಇಲ್ಲಾ ಆದ್ರೆ ನಿಮಗೆ ಗೊತ್ತಂತಲ್ಲ. ಮನೇಗೆ ಬನ್ನಿ ಅಂತ ಹೇಳಿದ್ರಂತೆ. ನನ್ನ ಹೆಂಡ್ತಿ ಚೆನ್ನಾಗಿ ಅಡುಗೆ ಮಾಡ್ತಾಳೆ ಅಂತ ಹೇಳಿದ್ದೀರಂತೆ ಅದಕ್ಕೆ ಇದೆಲ್ಲಾ ಅಂದ್ಲು. ನನಗೆ ಶಾಕ್. ಅವಳ ಮುಖ ನೋಡ್ತೀನಿ ನಗ್ತಾ ಇದಾಳೆ. ಇಲ್ಲಿಗೇ ಫೋನ್ ಮಾಡಿದ್ರ ಅಂದೆ . ಹೌದು ಅಂದ್ಲು. ನೀವು ಊಟ ಮಾಡಿ ಪರವಾಗಿಲ್ಲ ನಾನು ಮ್ಯಾನೇಜ್ ಮಾಡ್ತೀನಿ ಅಂತಾಳೆ. ನಿಜಕ್ಕೂ ನಾನು ಈಗ ಭಯದಿಂದ ತಲೇನೆ ಎತ್ತಿಲ್ಲ. ರೀ ಯಾಕೆ ಒಂತರಾ ಇದ್ದೀರೀ ಅವರು ನಿಮ್ಮ ಆಫೀಸ್ ಕೊಲೀಗ್ ತಾನೇ ಅಂದ್ಲು. ಅವಳೇ ಐಡಿಯಾ ಕೊಟ್ಲು ಅಂತ ಹೌದು ಬರಲಿ ನಾನೇ ಹೇಳಿದ್ದೆ ಅಂದೆ.
ಅದಕ್ಕೆ ಅವಳು ಏನ್ರೀ ನಿಮಗೆ ಒಂದು ಸುಳ್ಳು ಹೇಳಕ್ಕೂ ಬರಲ್ವಲ್ಲ. ನಿಮಗೆ ಯಾವ ಫೇಸ್ ಬುಕ್ ಫ್ರೆಂಡ್ಸು ಇಲ್ಲಾ ನಂಗೊತ್ತು ಅದು ನಾನೇ. ನಿಮ್ಮನ್ನ ಏಪ್ರಿಲ್ ಫೂಲ್ ಮಾಡೋಣ ಅಂತ ಹೋಗಿ ಇಷ್ಟೆಲ್ಲಾ ಆಯ್ತು. ಒಂದು ರೀತಿ ಒಳ್ಳೇದೆ ಆಯ್ತು. ಏನಂದ್ರೆ ನೀವು ಮೊದಲು ಮನೆಗೆ ಬನ್ನಿ ನನ್ನ ಹೆಂಡತಿ ಒಳ್ಳೆ ಅಡುಗೆ ಮಾಡ್ತಾಳೆ ಅಂದಾಗ್ಲೇ ನಿಮ್ಮ ನಿಶ್ಚಲ ಮನಸ್ಸನ್ನ ಒಪ್ಪಿದೆ.
ಆಮೇಲೆ ತುಂಬ ಬಲವಂತೆ ಮಾಡಿದ್ದಕ್ಕೆ ಒಲ್ಲದ ಮನಸ್ಸಿನಿಂದ ಹೋಟೆಲ್ ಗೆ ಬಂದ್ರಿ. ಇಷ್ಟೆಲ್ಲಾ ಮಾಡಿದ್ದು ಬೇಜಾರಾಗಿದ್ರೆ ಕ್ಷಮಿಸ್ತೀರಾ ಅಂದ್ಲು. ನಾನು ನಗಬೇಕೋ ಬೈಯ್ಬೇಕೋ ಗೊತ್ತಾಗ್ದೇ ಹಾಗೇ ಕೂತೆ.
ಹೆಂಡತಿಯರು ಹೀಗೂ ಫೂಲ್ ಮಾಡ್ತಾರೆ ಅಂತ ಅವತ್ತೇ ಗೊತ್ತಾಗಿದ್ದು ಸ್ವಾಮಿ.