ಮಮತೆಯ ವಿಷ(ಯ)
ಮಮತೆಯ ವಿಷ(ಯ)


ಒಬ್ಬ ಸಾಹುಕಾರನಿಗೆ ತಾನು ಮುದ್ದಾಗಿ ಸಾಕಿದ ಒಬ್ಬಳೇ ಮಗಳು. ಮದುವೆಯ ವಯಸ್ಸಾಗಿ ಮಗಳಿಗೆ ತಕ್ಕ ವರನನ್ನ ತಂದು ಮದುವೆ ಮಾಡಿದ. ತಂದೆಯನ್ನು ಬಿಟ್ಟು ಒಂದು ದಿನವೂ ಬೇರೆ ಇಲ್ಲದ ಅವಳಿಗೆ ಬಹಳ ಕಷ್ಟ ಆಯ್ತು. ತಂದೆಗೂ ಅಷ್ಟೇ . ಗಂಡನ ಮನೆಗೆ ಹೋಗಿ ಒಂದು ತಿಂಗಳಿಗೆ ಅಲ್ಲಿಂದ ಮಗಳ ಬಗ್ಗೆ ಏನೂ ಕೆಲಸ ಮಾಡದೆ ಕಾಲ ಕಳೆಯುವುದು , ದೊಡ್ಡವರಿಗೆ ಗೌರವ ಕೊಡದೆ ಇರುವುದರ ಬಗ್ಗೆ ದೂರು ಬಂತು.ಬುದ್ದಿ ಹೇಳಿದರಾಯಿತು ಎಂದು ಸುಮ್ಮನಾದ ತಂದೆ. ಎರಡೇ ತಿಂಗಳಿಗೆ ಮಗಳು ಮನೆಗೆ ವಾಪಸ್ ಬಂದಾಗ ಗಾಬರಿಯಾಗಿ ಕೇಳಿದ್ದಕ್ಕೆ ನರಕದಲ್ಲಿ ಇರಲು ಅಸಾಧ್ಯ , ಮತ್ತೆ ನಾನು ಎಂದೂ ಅವರ ಮನೆಗೆ ಹೋಗಲ್ಲ ಅಂತ ಗಳಗಳ ಅತ್ತಳು. ಸಮಾಧಾನ ಮಾಡಿ ವಿಚಾರಿಸಿ ನೋಡುತ್ತೇನೆ ಎಂದು ಸುಮ್ಮನಾದ .
ಕೆಲವು ದಿನದ ನಂತರ ಗಂಡನೇ ಬಂದು ಕರೆದರೆ ಹೋಗುತ್ತೇನೆಂದು ಹೇಳಿದಾಗ ಒಪ್ಪಿದ ಅವಳ ತಂದೆ ಮತ್ತೆ ಕಳುಹಿಸಿ ಕೊಟ್ಟ. ಆದರೆ ಅದು ಅವಳ ಒಂದು ಕಂಡೀಷನ್ ಮೇಲೆ .ಅದು ಏನಪ್ಪಾ ಅಂದ್ರೆ ನಿನ್ನ ಸಹಾಯದಿಂದ ಅವರ ಮನೆಯಲ್ಲಿರೋ ವಯಸ್ಸಾದ ಅತ್ತೆಯನ್ನ ಹೇಗಾದರೂ ಮಾಡಿ ಮುಗಿಸ ಬೇಕು. ಮಗಳ ಮಾತಿಗೆ ಒಪ್ಪಿ ಒಂದು ವಿಷದ ಬಾಟಲ್ ತಂದು ಕೊಟ್ಟಿದ್ದ. ಅದನ್ನ ಹದಿನೈದು ದಿನ ಸ್ವಲ್ಪ ಸ್ವಲ್ಪ ಊಟ ದಲ್ಲಿ ಹಾಕೋದು ಮತ್ತು ಅವರ ಕಣ್ಣುಗಳನ್ನು ಹತ್ತಿರದಿಂದ ನೋಡಿ ಬದಲಾವಣೆಯನ್ನು ಅಪ್ಪನಿಗೆ ದಿನವೂ ತಿಳಿಸುವುದು. ಬಾಟಲ್ ತೆಗೆದುಕೊಂಡು ಗಂಡನ ಜೊತೆ ಹೊರಟಳು. ಹೇಗಿದ್ದರೂ ಹದಿನೈದು ದಿನದಲ್ಲಿಅವರ ಪ್ರಾಣ ಹೋಗುತ್ತೆ , ಅಲ್ಲಿವರೆಗೂ ಚೆನ್ನಾಗಿ ನೋಡ್ಕೊಳ್ಳೋಣ ಅಂತ ಮನಸ್ಸಾಯಿತು. ಕಣ್ಣಲ್ಲಿ ಕಣ್ಣಿಟ್ಟು ಅತ್ತೆಯನ್ನ ನೋಡ್ಕೊಳ್ತಿದ್ದರಿಂದ ಅತ್ತೆಯವರಿಗೆ ಸೊಸೆ ಮೇಲೆ ಪ್ರೀತಿ ಹೆಚ್ಚಾಯ್ತು. ಒಬ್ಬಳೇ ಎಲ್ಲ ಕೆಲ್ಸಾ ಮಾಡ್ತಾಳೆ ಅಂತ ಅತ್ತೆ ಮತ್ತು ಗಂಡ ಎಲ್ಲ ಕೆಲಸದಲ್ಲೂ ಅವಳಿಗೆ ಸಹಾಯ ಮಾಡ್ತಿದ್ರು. ಸಾಯಕ್ಕೆ ವಿಷ ಕೊಟ್ಟು ಈಗ ಅವರ ಪ್ರೀತಿಗೆ ಮೋಸ ಮಾಡೋ ಹಾಗೆ ಆಯ್ತಲ್ಲಾ ನೊಂದು ಅಪ್ಪನಿಗೆ ವಿಷಯ ತಿಳಿಸಿದರೆ, ಅವರು ನಾನು ಈಗೇನು ಮಾಡಕ್ಕಾಗಲ್ಲಮ್ಮ. ನನಗೆ ಬೇಕಾದ ಮೆಡಿಕಲ್ ಸ್ಟೋರ್ ನವರು ಸ್ಲೋ ಪಾಯಿಸನ್ ಕೊಟ್ಟಿರೋದು ಅಂದರು.
ಅತ್ತೆ ಒಂದು ದಿನ ಸೊಸೆಗೆ ಮನೆ ಜವಾಬ್ದಾರಿ ನೀನೇ ತೊಗೊ ನಿಂದೆ ಎಲ್ಲಾ ಅಂತ ಹೇಳಿ ಎಲ್ಲ ಬೀಗದ ಕೈಗಳನ್ನ ಕೊಟ್ಟುಬಿಟ್ಟರು. ಅಳುತ್ತಾ ಕಾಲಿಗೆ ನಮಸ್ಕಾರ ಮಾಡಿದಳು. ತಂದೆಗೆ ತಕ್ಷಣ ಬರಕ್ಕೆ ಹೇಳಿ ಅತ್ತೆ ಪ್ರಾಣ ಹೇಗಾದರೂ ಉಳಿಸು ಅಪ್ಪ ಅಂತ ಅಂಗಲಾಚಿದಳು. ತಂದೆ ಓಡಿ ಬಂದು ನಗುತ್ತಾ ನಿನಗೆ ನಾನು ಕೊಟ್ಟಿದ್ದು ವಿಷ ಅಲ್ಲಮ್ಮ ನಿನ್ನ ಕೋಪ ನನಗೆ ಮೊದಲಿಂದಲೂ ತಿಳಿದಿದೆ . ಅನಾಹುತ ಆಗಬಾರದು ನಿನ್ನ ಸಂಸಾರ ಚೆನ್ನಾಗಿರಬೇಕು ಅಂತ ನಾನು ಮತ್ತು ನನ್ನ ಅಳಿಯ ಈ ನಾಟಕದ ಪಾತ್ರದಾರಿಗಳು ಅಂದರು.ಮಗಳಿಗೂ ಸಂತೋಷ ಆಯ್ತು. ಅಂದಿನಿಂದ ಎಲ್ಲರೂ ಅನ್ಯೋನ್ನವಾಗಿದ್ದರು
.