ಜುಗ್ಗಿಣಿ ಜುಗ್ಗೇಶ್ವರರ ದಾಂಪತ್ಯ !
ಜುಗ್ಗಿಣಿ ಜುಗ್ಗೇಶ್ವರರ ದಾಂಪತ್ಯ !
ಒಂದೂರಲ್ಲಿ ಒಬ್ಬ ಜುಗ್ಗ ಇದ್ದ. ಅವನ ಹೆಸರು ಈಶ್ವರ್ ಅಂತ. ತುಂಬಾ ಜುಗ್ಗನಾಗಿದ್ದರಿಂದ ಹೆಸರು ಜುಗ್ಗೇಶ್ವರ ಅಂತ ಬದಲಾಗಿತ್ತು. "ಎಂಜಲು ಕೈಯಲ್ಲೂ ಕಾಗೆ ಓಡಿಸಲ್ಲ" ಎಂಬ ಪ್ರಸಿದ್ಧ ಗಾದೆಯಿದೆಯಲ್ಲ..? ಆ ಗಾದೆಯನ್ನು ಮಾಡಿದ್ದು ಇವನ ತಾತನನ್ನು ನೋಡಿಯೇ ಅಂತೆ..!! ಅಂತಹ ಕುಪ್ರಸಿದ್ಧವಾದ ಕುಟುಂಬದ ಮಗನೀತ. ಹೆಂಡತಿ ಹೆಸರು ಜುಗ್ಗಿ ಎಂದು. ನಿಜ ನಾಮಧೇಯ ರಾಗಿಣಿ. ಆದರೆ ಸಹವಾಸ ದೋಷದಿಂದ ಇವಳು, ಇವಳ ಗಂಡನ ಹಾಗೆ ಆಗಿದ್ದರಿಂದ, ಅಕ್ಕಪಕ್ಕದವರು ಇವಳನ್ನು ಜುಗ್ಗಿಣಿ ಎಂದು ಕರೆಯಲು ಶುರು ಮಾಡಿದರು..!!
ಜುಗ್ಗೇಶ್ವರನ ಕುಟುಂಬ ಜುಗ್ಗಿಣಿಯನ್ನು ಮೊದಲ ಬಾರಿಗೆ ನೋಡಲು ಹೋದಾಗ, ಹಿಂದಿನ ದಿನದ ರಾತ್ರಿಯಿಂದಲೇ ಉಪವಾಸವಿದ್ದರಂತೆ. ಬೆಳಿಗ್ಗೆ ಎದ್ದು ಟ್ರಿಮ್ ಆಗಿ ರೆಡಿಯಾಗಿ ಅಪ್ಪಅಮ್ಮನೊಂದಿಗೆ ಬರೀ ನೀರನ್ನು ಕುಡಿದು ಹೋಗಿದ್ದನಂತೆ. ಪುಣ್ಯಕ್ಕೆ ಇವನ ಅತ್ತೆ ಮಾವ ಜಿಪುಣರಾಗದೇ ಇರುವ ಕಾರಣಕ್ಕೆ ಉಪ್ಪಿಟ್ಟು, ಕೇಸರಿಬಾತು, ಕಾಫಿ, ಹಣ್ಣು ಎಲ್ಲವನ್ನು ತಂದಿಟ್ಟರು. ನಮ್ಮ ಜುಗ್ಗ ಹುಡುಗಿಯನ್ನು ನೋಡಪ್ಪ ಎಂದರೆ, ಶಾಸ್ತ್ರಕ್ಕೆ ಒಂದೆರಡು ಬಾರಿ ನೋಡಿ ಬರಿ ಹೊಟ್ಟೆ ತುಂಬಿಸಿಕೊಳ್ಳುವುದರಲ್ಲಿ ಕಾಲ ಕಳೆದನಂತೆ..!! ಎರಡೆರಡು ಸಲ ತಿಂಡಿ ತೀರ್ಥದ ಕಾರ್ಯಕ್ರಮವನ್ನು ಮುಗಿಸಿ ಸಂತೃಪ್ತಿಯಿಂದ ಹುಡುಗಿಯ ಮನೆಯಿಂದ ಹೊರಬಂದನಂತೆ.
"ಅಬ್ಬಾ ಅಂತೂ ಹೊಟ್ಟೆ ತುಂಬಿರುವುದರಿಂದ ಮಧ್ಯಾಹ್ನದ ಊಟವನ್ನು ಸ್ಕಿಪ್ ಮಾಡಬಹುದು" ಎಂದು ಮೂರು ಜನ ಮನೆಗೆ ಹಿಂದಿರುಗಿದರಂತೆ..!! ಇವರ ಫ್ಯಾಮಿಲಿಗೆ ರಾಗಿಣಿ ಸೇರ್ಪಡೆಯಾದಾಗ ಅಡ್ಜಸ್ಟ್ ಆಗಲು ಬಲು ಕಷ್ಟವಾಯಿತಂತೆ. ಲೈಟು ಫ್ಯಾನು ಹಾಕಿ ಮರೆತು ಹೋದರೆ ಮುಗಿಯಿತು. ಅಂದು ದೊಡ್ಡ ಜಗಳವೇ ನಡೆಯುತ್ತಿತ್ತು ಅವರ ಮನೆಯಲ್ಲಿ. "ಕರೆಂಟು ಬಿಲ್ಲು ನೀನು ಕಟ್ಟುತ್ತೀಯೇನೇ..?" ಎಂದು ಜುಗ್ಗೇಶ್ವರ ಹೆಂಡತಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದನಂತೆ.
ಬರುಬರುತ್ತಾ ಅವಳಿಗೂ ಸಾಕಾಗಿ ಹೋಗಿ, ಕೊನೆಗೆ ಸೆಕೆಯಾದರೆ ಪೇಪರ್ ನಲ್ಲಿ ಗಾಳಿ ಬೀಸಿಕೊಳ್ಳಲು ಪ್ರಾರಂಭಿಸಿದಳಂತೆ..!! ಇರುಳು ಹೊತ್ತಿನಲ್ಲಿ ಕೆಲವೊಮ್ಮೆ ಏನಾದರೂ ಓದಬೇಕು ಅನಿಸಿದರೆ, ಮೊಬೈಲ್ ಟಾರ್ಚ್ ಲೈಟ್ನಲ್ಲೆ ಓದುತ್ತಿದ್ದಳಂತೆ..!! ಅಷ್ಟು ಹೆದರಿಸಿಬಿಟ್ಟಿದ್ದರು ಅವಳ ಗಂಡನ ಮನೆಯವರು ಅವಳಿಗೆ..!! ಈಗ ಮದುವೆಯಾಗಿ ಮೂರು ವರ್ಷಗಳು ಕಳೆದಿವೆ. ರಾಗಿಣಿ ಜುಗ್ಗಿಣಿಯಾಗಿ ಬದಲಾಗಿದ್ದಾಳೆ. ತಮ್ಮ ಏರಿಯಾದಲ್ಲಿ ಅನ್ನ ಸಂತರ್ಪಣೆ, ದೇವಸ್ಥಾನದಲ್ಲಿ ಪ್ರಸಾದ, ಉತ್ಸವದಲ್ಲಿ ಊಟ, ಗೃಹಪ್ರವೇಶ, ನಾಮಕರಣ, ಮದುವೆ ಹೀಗೆ ಏನೇ ಕಾರ್ಯಕ್ರಮಗಳಿದ್ದರೂ ಅಂದು ಇವರ ಮನೆಯಲ್ಲಿ ಅಡುಗೆ ಬಂದ್..!! ಎಲ್ಲರೂ ನಡೆದುಕೊಂಡು ಅಥವಾ ದೂರವಿದ್ದರೆ ಬಸ್ ಮಾಡಿಕೊಂಡು ಹೋಗಿ ಹೊಟ್ಟೆ ತುಂಬಿಸಿಕೊಂಡು ಬರುತ್ತಾರೆ.
ಇವರೆಲ್ಲರೂ ಧಾರವಾಹಿ ಪ್ರಿಯರು. ಆದರೆ ನೋಡುವ ಧಾರವಾಹಿಗಿಂತ ಮಧ್ಯದಲ್ಲಿ ಬರುವ ಜಾಹೀರಾತುಗಳನ್ನು ಕಂಡರೆ ಅದೇನೋ ಪ್ರೀತಿ..!! ನಮ್ಮ ಜುಗ್ಗಣ್ಣನಂತೂ ಒಂದು ಪುಟ್ಟ ಪುಸ್ತಕವನ್ನು ಗುರುತು ಹಾಕಿಕೊಳ್ಳಲು ಪಕ್ಕದಲ್ಲಿ ಇಟ್ಟುಕೊಂಡಿರುತ್ತಾನೆ. ಏಕೆ ಅಂತೀರಾ.... ಇಲ್ಲಿ ಕೇಳಿ ತಮಾಷೆ..!! ಬರುವ ಜಾಹೀರಾತುಗಳಲ್ಲಿ ಬಾದಾಮ್ ಪೌಡರ್ ಕೊಂಡರೆ ಗ್ಲಾಸ್ ಬೌಲ್ ಫ್ರೀ, ಸಂತೂರ್ ಸೋಪ್
ಕೊಂಡರೆ ಪೆನ್ ಫ್ರೀ, ಒಂದು ಗುಲಾಬ್ ಜಾಮೂನ್ ಪ್ಯಾಕೆಟ್ ಗೆ ಇನ್ನೊಂದು ಪ್ಯಾಕೆಟ್ ಫ್ರೀ, ಗೋಧಿ ಹಿಟ್ಟನ್ನು ಕೊಂಡರೆ ನೂರು ಗ್ರಾಂ ಚಿಲ್ಲಿ ಪೌಡರ್ ಫ್ರೀ, ಸೋಪ್ ಪೌಡರ್ ಕೊಂಡರೆ ಇಪ್ಪತ್ತೈದು ಪರ್ಸೆಂಟ್ ಪೌಡರ್ ಫ್ರೀ... ಹೀಗೆ ಅನೇಕ ಫ್ರೀಗಳ ಸರಮಾಲೆ ಬರುತ್ತದಲ್ಲಾ...? ಅವನ್ನೆಲ್ಲಾ ಗುರುತು ಮಾಡಿಕೊಂಡು ಗಂಡ ಹೆಂಡತಿ ಡಿಸ್ಕೌಂಟ್ ಸಿಗುವ ಅಂಗಡಿಗೆ ತಿಂಗಳಿಗೊಮ್ಮೆ ಹೋಗಿ, ಹುಡುಕಿ ಹುಡುಕಿ ಇಂತಹ ಸಾಮಗ್ರಿಗಳನ್ನೇ ಖರೀದಿಸಿಕೊಂಡು ಬರುತ್ತಾರೆ..!!
ಈಗೀಗ ಇವರಿಗೆಲ್ಲಾ ತಮ್ಮ ಮನೆಗೂ ಒಂದು ಮಗು ಬರಬೇಕು ಎನಿಸಲು ಶುರುವಾಗಿದೆ. ಮೂರು ವರುಷ ಹಾಗೂ ಹೀಗೂ ಮಗು ಬಂದರೆ ಖರ್ಚು ಜಾಸ್ತಿ ಎಂದು ಮುಂದೂಡುತ್ತಾ ಬಂದರೂ, ಈಗ ಅದರ ಅರಿವಾಗಿದೆ. ಹಾಗಾಗಿ ಹುಟ್ಟಿದರೆ "ಗಂಡು ಮಗುವೇ ಹುಟ್ಟಲಿ, ದೇವರ ಅನುಗ್ರಹದಿಂದ ಗಂಡು ಮಗುವಾದರೆ ಎರಡು ತೆಂಗಿನ ಕಾಯಿ ಒಡೆದು ನಿನ್ನ ಹರಕೆ ತೀರಿಸುತ್ತೇವೆ" ಎಂದು ಎಲ್ಲರೂ ದೇವರಿಗೆ ಬೇಡಿಕೊಂಡಿದ್ದಾರೆ. ಹೆಂಡತಿ ಜುಗ್ಗಿಣಿಯೂ, "ಗಂಡು ಮಗುವೇ ಆಗಲಿ. ಹೆಣ್ಣಾದರೆ ಖರ್ಚು ಜಾಸ್ತಿ. ಮದುವೆ ಮಾಡಿಕೊಡಲು ನಾವೇ ಖರ್ಚು ಮಾಡಬೇಕು. ಅದೇ ಗಂಡು ಮಗುವಾದರೆ ಬಟ್ಟೆ ಅಲಂಕಾರಕ್ಕೆಲ್ಲ ದುಡ್ಡು ಪೋಲಾಗುವುದಿಲ್ಲ. ಮುಂದೆ ಮದುವೆಯನ್ನು ನಾವು ಮಾಡಿಕೊಡುವ ಫಜೀತಿ ಇರುವುದಿಲ್ಲ" ಎನ್ನುತ್ತಾಳೆ..!!
ಅಂತೂ ದೇವರ ದಯೆಯಿಂದ ಗಂಡು ಮಗುವೇ ಆಯಿತು. ಎರಡು ತೆಂಗಿನ ಕಾಯಿಗಳನ್ನು ಒಡೆದು ಹರಕೆಯನ್ನು ತೀರಿಸಿದರು. ಜುಗ್ಗಣ್ಣನಂತೂ "ಮಗುವಿಗೆ ಎರಡು ವರ್ಷ ಆಗುವವರೆಗೆ, ನೀನು ನಿಮ್ಮ ತವರು ಮನೆಯಲ್ಲಿಯೇ ಇರು" ಎಂದು ಬಾಣಂತನಕ್ಕೆ ಹೋಗುವಾಗಲೇ ಹೇಳಿದ್ದ. ಜುಗ್ಗಿಣಿಯೂ ಇದಕ್ಕೆ ಒಪ್ಪಿದ್ದಳು. ಎರಡು ವರ್ಷ ಕಳೆದ ಬಳಿಕ ಹೆಂಡತಿ ಮನೆಗೆ ಸೇರಿದರೂ, ಮಗುವನ್ನು ಆದಷ್ಟು ಜುಗ್ಗಿಣಿಯ ತಂದೆ ತಾಯಿಯರ ಬಳಿಯಲ್ಲೇ ಬಿಡುತ್ತಿದ್ದರು.
ಕಾರಣವೇನೆಂದರೆ ಒಂದು ಮಗುವನ್ನು ನೋಡಿಕೊಳ್ಳಲು ಜುಗ್ಗಿಣಿಗೆ ಮೈ ಬಗ್ಗುತ್ತಿರಲಿಲ್ಲ. ಇನ್ನೊಂದು ಖರ್ಚಿನ ವಿಷಯವಾಗಿ..!! ಆಗಾಗ ಗಂಡ ಹೆಂಡತಿಯರೇ ಪಕ್ಕದೂರಿಗೆ ಹೋಗಿ ಮಗುವನ್ನು ಮಾತನಾಡಿಸಿಕೊಂಡು ಬರುತ್ತಿದ್ದರು. ನಾಲ್ಕನೇ ಕ್ಲಾಸಿಗೆ ಬಂದಾಗ ಜುಗ್ಗಣ್ಣನ ಮನೆಯವರಿಗೆ ಊರಿನಲ್ಲಿದ್ದ ಆಸ್ತಿ ದೊರೆಯಿತು. ಕೆಲಸದಲ್ಲಿ ಬಡ್ತಿಯು ಸಿಕ್ಕು, ಸಂಬಳವೂ ಜಾಸ್ತಿಯಾಯಿತು. ಇನ್ನೇನು ಮಗನನ್ನು ನೋಡಿಕೊಳ್ಳಲು ಪ್ರಾಬ್ಲಮ್ ಏನು ಇಲ್ಲವೆಂದು, ಐದನೇ ಕ್ಲಾಸಿನಿಂದ ನಮ್ಮ ಜೊತೆಯೇ ಇದ್ದು ಓದಲಿ ಎಂದು ತೀರ್ಮಾನವಾಯಿತು.
ಅಷ್ಟು ವರ್ಷಗಳು ಅಜ್ಜ ಅಜ್ಜಿಯರೊಂದಿಗೆ ಇದ್ದು ಬೆಳೆದಿದ್ದ ಅವರ ಮಗ, ಇವರೊಂದಿಗೆ ಹೊಂದಿಕೊಳ್ಳಲು ಬಹಳ ಕಷ್ಟಪಡುತ್ತಿದ್ದ. ಪದೇ ಪದೇ ಅಜ್ಜಿ ತಾತ ಬೇಕು ಎಂದು ಹಠ ಹಿಡಿದು, ರಚ್ಚೆ ಮಾಡುತ್ತಿದ್ದ. ಎಷ್ಟೇ ಪ್ರೀತಿ ತೋರಿ, ಮುದ್ದು ಮಾಡಿದರೂ ಅವನು ಇವರ ಪ್ರೀತಿಗೆ ಕ್ಯಾರೇ ಎನ್ನುತ್ತಿರಲಿಲ್ಲ..!! ತಾವು ಮಾಡಿದ ಜಿಪುಣತನದ ಫಲವಾಗಿ, ಈಗ ತಮ್ಮ ಮಗ ತಮಗೆ ಪ್ರೀತಿಯ ವಿಷಯದಲ್ಲಿ ಕಂಜೂಸುತನವನ್ನು ತೋರಿಸಿ, ನಮ್ಮ ಹೊಟ್ಟೆ ಉರಿಸುತ್ತಿದ್ದಾನೆ ಎಂದು ಗಂಡ ಹೆಂಡತಿ ಇಬ್ಬರೂ ಪ್ರತಿದಿನ ಗೋಳಾಡುತ್ತಿದ್ದಾರೆ..!!
"ಅತಿಯಾದರೆ ಅಮೃತವೂ ವಿಷ" ಎಂದು ಹೇಳುವುದು ಇದಕ್ಕೆ ಅಲ್ಲವೇ...!!