ಎನ್ಕೌಂಟರ್
ಎನ್ಕೌಂಟರ್
ಮುರುಗೇಶ್ ವರ್ಷದ ಹಿಂದೆಯಷ್ಟೇ ಹೊಸದಾಗಿ ಪೊಲೀಸ್ ಕಾನ್ಸ್ಟೇಬಲ್ ಕೆಲಸಕ್ಕೆ ಸೇರಿದ್ದ. ಇವನು ಆಕಸ್ಮಿಕವಾಗಿ ಈ ವೃತ್ತಿಯನ್ನ ಆರಿಸಿ ಕೊಂಡಿದ್ದು. BA ಮಾಡಿದ್ದರಿಂದ ಸ್ಟೇಷನ್ನಲ್ಲೇ ರೈಟರ್ ಆಗಿ ಕೆಲಸ ಮಾಡ್ತಿದ್ದ.ಯೂನಿಫಾರ್ಮ್ ಇಲ್ಲದೆ ಕೆಲಸ ಮಾಡಬಹುದು ಅಂತ ಇವನಿಗೂ ಒಂತರ ಸಂತೋಷ. ಒಂದು ದಿನ ರಾತ್ರಿ ಹತ್ತು ಗಂಟೆಗೆ ಹೆಡ್ ಕ್ವಾರ್ಟರ್ಸ್ ನಿಂದ ಫೋನ್ ಕಾಲ್ ಬಂತು. . ತಮಿಳು ಭಾಷೆ ಚೆನ್ನಾಗಿ ಮಾತನಾಡ ಬಲ್ಲವರ ಒಂದು ಲಿಸ್ಟ್ ಮಾಡಿ ಕಳಿಸಿ ಅಂತ. ನಂತರ ಗೊತ್ತಾಯ್ತು ನೂರು ಜನ ತಮಿಳು ನಾಡು ಪೊಲೀಸರ ಜೊತೆ ಕೆಲಸ ಮಾಡಕ್ಕೆ ಧರ್ಮಪುರಿ ಕಾಡಿಗೆ ಎರಡು ವರ್ಷ deputation ಮೇಲೆ ಹೋಗಬೇಕು ಅಂತ. ಮುರುಗೇಶ್ ಹೆಸರೇ ಮೊದಲು ಆದ್ದರಿಂದ ವಿಧಿ ಇಲ್ಲದೇ ಹೋಗಲೇ ಬೇಕಾಗಿ ಬಂದು ಈಗ ಆರು ತಿಂಗಳಿಂದ ಧರ್ಮ ಪುರಿ ಕಾಡಲ್ಲೇ ಇವರ ಕ್ಯಾಂಪ್. ಈ ಕಾಡು ಗಿಡಮರಗಳು ದಟ್ಟವಾಗಿರುವ ಕಾಡಲ್ಲ . ಬರೀ ಮುಳ್ಳು ಗಿಡಗಳು. ದೂರದಲ್ಲಿ ಎಲ್ಲೋ ಒಂದು ಮರ. ಯಾವಾಗಲಾದರೂ ಒಮ್ಮೆ ಕಾಣೋ ಚಿರತೆ. ಅದರ ಆಹಾರಕ್ಕೆ ಕಾಡುಹಂದಿಗಳು. ಒಂದು ಕಡೆ ಚಿಕ್ಕಟೆಂಟ್ ನಲ್ಲಿ ನಾಲ್ಕೈದು ಪೊಲೀಸ್ ಸಿಬ್ಬಂದಿ ವಾಸ. ಎಷ್ಟೋ ಸಲ ಮರ ಒಂದರ ಮೇಲೆ ಇವರೇ ಕುಳಿತು ಕೊಳ್ಳಲು ಮಾಡಿಕೊಂಡಿದ್ದ ಪುಟ್ಟಮನೆ ಯಲ್ಲಿ ಕಾಲ ಕಳೆಯ ಬೇಕಿತ್ತು. ನೆಕ್ಸಲೈಟ್ ಗಳ ಚಲವಲನ ಕಂಡು ಹಿಡಿಯಲು ಇವರ ತಂಡ ಇಲ್ಲಿ ಕ್ಯಾಂಪ್ ಮಾಡಿತ್ತು. ಮುರು ಗೇಶ್ ಗೆ ಬಂದೂಕು ಹಿಡಿಯಲೂ ಸಹ ಭಯವಿತ್ತು .ಈಗ ಪ್ರಾಣ ರಕ್ಷಣೆ ನೆಪಕ್ಕಾದರೂ ಕೋವಿ ಹಿಡಿಯಲೇ ಬೇಕಾಯ್ತು. ಒಂದು ದಿನ ಬೆಳಗಿನ ಜಾವ ವೈರ್ಲೆಸ್ ನಲ್ಲಿ ಮೆಸೇಜ್ ಫ್ಲಾಶ್ ಆಯ್ತು. ನರಿ ಬೋನಿಗೆ ಬಿದ್ದಿದೆ ಅಂತ. ಮುರುಗೇಶ್ ಗೆ ತಕ್ಷಣ ತಿಳಿಯಲಿಲ್ಲ. ಪಕ್ಕದಲ್ಲಿದ್ದ ಅರ್ಭುದ ಸಾಮಿಯನ್ನ ತಮಿಳಿನಲ್ಲಿ ಕೇಳಿದ ಯಾವುದು ಇದು ನರಿ ಅಂತ. ನಾವು ಹುಲಿ ಹಿಡಿಯಕ್ಕೆ ಬಂದರೆ ಮೊದಲು ನರಿ ಸಿಕ್ಕಿದೆ.ಈ ನರಿಯನ್ನ ತೋರಿಸಿ ಹುಲಿಯನ್ನ ಬೋನಿಗೆ ತಳ್ಳುವ ಉಪಾಯ ಇರಬಹುದು ಅಂದ. ಇದೂ ಅರ್ಥ ವಾಗಲಿಲ್ಲ. ಟೀ ಕುಡಿದ ಮೇಲೆ ಹೇಳಿದ .ಈಗ ಹೇಳ್ತೀನಿ ಕೇಳು ಧರ್ಮ ಪುರಿ ಜಿಲ್ಲೆಯಲ್ಲಿ ಒಬ್ಬ ಕಣ್ಣಪ್ಪ ಅಂತ ಸಾಹುಕಾರ ಇದ್ದ ಅವನಿಗೆ ನೂರು ಎಕರೆ ಮಾವಿನ ತೋಟ ಐವತ್ತು ಎಕರೆ ಕಬ್ಬಿನಗದ್ದೆ ಇತ್ತು. ವರ್ಷಪೂರ್ತಿ ಆಳುಗಳು ತೋಟದಲ್ಲಿ ಕೆಲಸಮಾಡಿದರೂ ಕೂಲಿ ಮಾತ್ರ ದಿನಕ್ಕೆ ಐವತ್ತು ಕೊಟ್ಟು ಊಟ ಹಾಕ್ತಿದ್ದ. ಗುಡಿಸಲಲ್ಲಿ ಅವರ ವಾಸ. ವರ್ಷಗಳೇ ಕಳೆದರೂ ಮನೆಗೆ ಹೋಗುವಂತಿಲ್ಲ. ಹೀಗೆ ಜೀತಕ್ಕೆ ಸುಮಾರು ಇನ್ನೂರು ಜನರನ್ನ ಇಟ್ಟುಕೊಂಡಿದ್ದ. ಪರಸು ,ಲೆನಿನ್ ,ಕಾರ್ತಿ ಅಂತ ಮೂವರು ಗಂಡು ಮಕ್ಕಳು. ಮಕ್ಕಳಂತೂ ಅಪ್ಪನಿಗಿಂತಲೂ ಹೆಚ್ಚು ಕ್ರೂರಿಗಳು. ಒಂದು ಸಲ ಬಹಳ ಗಲಾಟೆ ಆಯ್ತು. ಆದೇನೆಂದರೆ ಕಬ್ಬು ಅರೆದು ಬೆಲ್ಲ ಮಾಡುವ ಜಾಗದಲ್ಲಿ ಅವನ ಎರಡನೇ ಮಗ ಲೆನಿನ್ , ಒಬ್ಬ ಹೆಣ್ಣು ಕೂಲಿ ಆಳನ್ನ ಕೋಪದಿಂದ ಜೋರಾಗಿ ಹಿಂದಿನಿಂದ ಒದ್ದುಬಿಟ್ಟ . ಆ ಕುದಿಯುತ್ತಿದ್ದ ಬೆಲ್ಲದ ಪಾಕದಲ್ಲಿ ಬಿದ್ದು ಸತ್ತು ಹೋದಳು. ಆಗ ಆದ ಗಲಾಟೆ ಹೇಗೋ ಪೊಲೀಸ್ ಸ್ಟೇಷನ್ ತಲುಪಿದ್ದರಿಂದಲೇ ಇಲ್ಲೊಬ್ಬ ಕ್ರೂರಿ ಇದ್ದಾನೆಂದು ಹೊರ ಜಗತ್ತಿಗೆ ಗೊತ್ತಾಗಿದ್ದು. ಆದರೆ ಅವನನ್ನ ಸರ್ಕಾರವಾಗಲಿ ಪೊಲೀಸರಾಗಲಿ ಎನೂ ಮಾಡಕ್ಕಾಗಲಿಲ್ಲ .ಇದೇ ಧರ್ಮಪುರಿ ಸರ್ಕಾರಿ ಕಲಾ ಕಾಲೇಜಿ ನಲ್ಲಿ ಲೆಕ್ಚರರ್ ಆಗಿದ್ದ ಸುಬ್ಬು ಅಲಿ ಯಾಸ್ ಸುಬ್ರ ಮಣಿ ಕೆಲವರ ಸಹಾಯ ಪಡೆದು ಈ ಧರ್ಮಪುರಿ ಕಾಡಲ್ಲಿ ಅಡಗಿ ಕುಳಿತು ಬಹಳ ದಿನ ಹೊಂಚು ಹಾಕಿ ಕೊನೆಗೂ ಆ ಕಣ್ಣಪ್ಪನ ಮಕ್ಕಳ ತಲೆ ಕಡಿದು ಪೊಲೀಸ್ ಸ್ಟೇಷನ್ ನ ಮುಂದೆ ಬಿಸಾಡಿದ್ದ. ಅದರೊಂದಿಗೆ ಒಂದು ಪತ್ರವನ್ನೂ ಇಟ್ಟಿದ್ದ. ಕಣ್ಣಪ್ಪ ನ ಕೇಸಲ್ಲಿ ಭಾಗಿ ಯಾದ ಪೊಲೀಸರ ಗತಿಯೂ ಇದೇ ಅಂತ. ಅಲ್ಲಿಂದ ಒಬ್ಬ ಒಳ್ಳೆಯ ಕಾಲೇಜ್ ಪ್ರಾಧ್ಯಾಪಕ ಸಹ ನೆಕ್ಸಲೈಟ್ ಆಗು ವುದಕ್ಕೆ ಕಣ್ಣಪ್ಪ ನಂತಹ ಮೃಗಗಳೇ ಕಾರಣ ವಾಯ್ತು. ಅಂದಿನಿಂದ ಈ ಸುಬ್ಬು ಪೊಲೀಸರಿಗೆ ತಲೆ ನೋವಾಗಿದ್ದ. ಹೇಗಾದರೂ ಜೀವಸಹಿತ ಹಿಡಿದರೆ ಐವತ್ತು ಲಕ್ಷ ಬಹು ಮಾನ ಅಂತ ಸರ್ಕಾರ ಘೋಷಿಸಿದರೂ ಯಾರೂ ಈ ಕೆಲಸಕ್ಕೆ ಕೈ ಹಾಕಿರಲಿಲ್ಲ. ಅಂತೂ ಐದು ವರ್ಷದ ನಂತರ ಸುಬ್ಬು ಇವತ್ತು ಸಿಕ್ಕಿ ಬಿದ್ದಿದ್ದಾನೆ. ಅದೇ "ನರಿ ಬೋನಿಗೆ" ಅನ್ನೋ ಕೋಡ್ ಅಂತ ಹಿಂದಿನ ಪೂರ್ತಿ ಕತೆ ಹೇಳ್ದ.ಹುಲಿ ಹಿಡಿಯಕ್ಕೆ ಈ ನರಿ ಅಂತ ಹೇಳಿದ್ದು ಯಾಕೆ ಅಂತ ಮತ್ತೆ ಕೇಳ್ದ. ಅದು ಮತ್ತೊಂದು ದೊಡ್ಡಕತೆ ಇವರಿಗೆಲ್ಲಾ ಒಬ್ಬ ಲೀಡರ್ ಇದಾನೆ. ಅವನಿಗಂತೂ ಯಾರ ಭಯವೂ ಇಲ್ಲ. ಅವನು ಯಾರು ಅಂತಾನೆ ಇಲ್ಲಿನವರಿಗೆ ಇದುವರೆಗೂ ಗೊತ್ತಿಲ್ಲ. ಕೆಲವರು ಹೇಳುವಂತೆ ಅದು ಒಂದು ಹಣವಂತ ಕುಟುಂಬದ ಹೆಂಗಸು. ವೃತ್ತಿಯಲ್ಲಿ ಲಾಯರ್ ಆಗಿದ್ದು ಮದುವೆಯಾಗಿ ಇಬ್ಬರು ಮಕ್ಕಳು ವಿದೇಶದಲ್ಲಿ ವ್ಯಾಸಂಗ ಮಾಡ್ತಿದಾರೆ . ಆ ಹೆಂಗಸೇ ಇವರಿಗೆಲ್ಲಾ ಲೀಡರ್. ಆದರೆ ಕಾಡಿಗೆ ಬರದೆ ಎಲ್ಲಾ ಸಹಾಯ ಮಾಡ್ತಾಳಂತೆ.ಆದರೆ ಅದು ಇನ್ನೂ ಪೊಲೀಸರಿಗೂ ನಿರ್ದಿಷ್ಟವಾಗಿ ತಿಳಿಯದ ವಿಷಯ ಅಂತ ಹೇಳಿದ. ಮುರುಗೇಶ್ ಗೆ ಇಲ್ಲಿಯವರೆಗ
ೂ ತಿಳಿಯದ ಅನೇಕ ಕಾಡಿನ ರಹಸ್ಯಗಳು ದಿನದಿನಕ್ಕೆ ತಿಳಿಯುತ್ತಾ ಬಂತು ಹಾಗೆ ಜೀವ ಭಯವೂ ಹೆಚ್ಚಾಯ್ತು.
ಮಾರನೇ ದಿನ ಸಂಜೆ ಕೆಲವು ಪೊಲೀಸ್ ಅಧಿಕಾರಿಗಳು ಇವರ ಕ್ಯಾಂಪ್ ಬಳಿ ಬರುತ್ತಿರುವ ಮಾಹಿತಿ ಕೊಟ್ಟು, ಹನ್ನೆರೆಡು ಅಡಿ ಆಳಕ್ಕೆ ಗುಂಡಿ ತೋಡಲು ನಾಲ್ಕೈದು ಜನ ಪೊಲೀಸ್ ಸಿಬ್ಬಂದಿಯೂ ಬರುತ್ತಿರುವುದಾಗಿ ವೈರ್ಲೆಸ್ ಮೆಸೇಜ್ ಬಂದಾಗ ಮುರುಗೇಶ್ ಗೆ , ಗುಂಡಿ ಇಲ್ಲಿ ಯಾಕೆ ತೋಡಬೇಕು ಅದೂ ಹನ್ನೆರಡು ಅಡಿ ಆಳ ಏಕೆ ಒಂದೂ ಅರ್ಥ ಆಗ್ಲಿಲ್ಲ. ಉಳಿದವರಿಗೂ ಇದು ರಹಸ್ಯವಾಗೆ ಇತ್ತು. ಸಂಜೆ ಎರಡು ಜೀಪ್ ಮತ್ತು ಒಂದು ಕಾರ್ ಬಂತು. ಹಾರೆ ಗುದ್ದಲಿ ಮತ್ತೆ ಕೆಲವು ನೆಲ ಅಗೆಯುವ ಸಮಾನು ಗಳನ್ನ ಕೆಳಗೆ ಹಾಕಿ ನಾಲ್ಕು ಜನ ದಡೂತಿ ಪೊಲೀಸರು ಕೆಳಗಿಳಿದರು. ಮತ್ತೊಂದು ಜೀಪ್ ನಿಂದ ಕೆಲವು ಅಧಿಕಾರಿಗಳು ಕೆಳಗಿಳಿದರು. ಡಿಸಿಪಿ ಕಾರ್ ನಲ್ಲೇ ಕುಳಿತು ಯಾರೊಂದಿಗೋ ವೈರ್ಲೆಸ್ ನಲ್ಲಿ ಮಾಹಿತಿ ಹಂಚಿ ಕೊಳ್ತಿದ್ದರು. ಸಂಜೆ ಆರು ಗಂಟೆ ಆಗ್ತಾ ಬಂದಿದ್ದ ರಿಂದ ಬೇಗ ಬೇಗ ಕೆಲಸಮುಗಿಸಲು ಒಬ್ಬ SI ಹೇಳ್ತಿದ್ದಾರೆ. ಸಾರ್ ಎಂಟು ಅಡಿ ಆಳ ಆಗಿದೆ ಸಾಕು ಸಾರ್ ಅಂದ ಗುಣಿಯ ಒಳಗಿಂದ ಒಬ್ಬ. ನಾಯಿ ನರಿ ಬಂದು ಎಳೆದಾಕಿದ್ರೆ ನಾವೆಲ್ಲಾ ಕಂಬಿ ಎಣಿಸ ಬೇಕಾಗತ್ತೆ ನೀನೂ ಸೇರಿ . ಬೇಗ ಬೇಗ ಇನ್ನೂ ಎರಡು ಅಡಿ ಆಳ ಮಾಡಿ ಅಂತ ಹೇಳಿ ಸಾಹೇಬ್ರು ಗಾಡಿಯಲ್ಲೆ ಇದಾರೆಗಲಾಟೆ ಮಾಡ್ಬೇಡ ಅಂತ ಮತ್ತೆ ಹೇಳಿದ್ರು. ಸಾಹೇಬರು ಕಾರಿಂದ ಕೆಳಗಿಳಿದರು. ಎಲ್ಲರೂ ಅವ್ರ ಹತ್ತಿರ ಓಡಿ ಬಂದರು . ಇಳಿಸಿ ಅವನನ್ನ ಅಂದಾಗ. ಒಬ್ಬ ಯುವಕ ಮಾತನಾಡುವ ಸ್ಥಿತಿಯಲ್ಲೂ ಇಲ್ಲ .ನಿಲ್ಲಲೂ ಸಾಧ್ಯವಾಗ್ತಿಲ್ಲ. ಅಲ್ಲೇ ಕುಸಿದ ಕೈ ಕಾಲು ಹಗ್ಗದಲ್ಲಿ ಕಟ್ಟಲಾಗಿದೆ. ಅರ್ಬುದ ಸಾಮಿ ಕಿವಿಹತ್ತಿರ ಬಗ್ಗಿ ಕೇಳ್ದ ನೀರು ಬೇಕಾ ಅಂತ. ತಲೆ ಆಡಿಸಿ ಬೇಡ ಅಂದ. ಮುರುಗೇಶ ಗೆ ಹೇಳ್ದ ಫ್ಲಾಸ್ಕ್ ನಲ್ಲಿ tea ಇದೆ ತೊಗೊಂಡು ಬಾ .ಓದಿ ಹೋಗಿ ತಂದ . ಕಪ್ ಗೆ ಸ್ವಲ್ಪ ಹಾಕಿ ಕುಡಿಸಿದ ಸ್ವಲ್ಪ ಕುಡಿದು ವಾಂತಿ ಮಾಡ್ಕೊಂಡ. ಅಲ್ಲಿದ್ದ ವರೆಲ್ಲಾ ಎನ್ ನಿಮ್ಮ ಮಾವಾನ ಇವನು ಅಂತ ರೇಗಿದ್ರು. ಒಂದು ಕಾಗೆ ಸರ್ರನೆ ಕಾರ್ ಮೇಲೆ ಬಂದು ಕೂತು ಕಾ ಕಾ ಅಂತ ಕುಗಿಕೊಳ್ತಾ ಇದೆ. ಸಾಹೇಬ್ರು ಹೇಳಿದ್ರು ಒಡ್ಸೋ ಅದನ್ನ.. ಹೋಗದೇ ಅಲ್ಲೇ ಮತ್ತೆ ಮತ್ತೆ ಬಂದು ಕಾಕಾ ಅಂತ ಕೂಗಿದ್ದಕ್ಕೆ ಅಲ್ಲೇ ಇದ್ದ ಮಣ್ಣು ಎತ್ತುವ ಬುಟ್ಟಿಯಿಂದ ಒಬ್ಬ ಜೋರಾಗಿ ಹೊಡೆದ ಅಲ್ಲೇ ಬಿದ್ದು ಸತ್ತು ಹೋ ಯ್ತು.ಅವನ ಜೊತೆ ಗೆ ಇದೂ ಒಂದು ಅಂದರು ನಗ್ತಾನೆ . ಮತ್ತೊಬ್ಬ ಕಾಗೆ ನ ಯಾರಾದ್ರೂ ಕೊಲ್ತಾರಾ ಅಂದ. ಯಾರೂ ಉತ್ತರ ಕೊಡಲಿಲ್ಲ. ಟಾರ್ಚ್ ಲೈಟುಗಳ ಸಹಾಯ ದಿಂದ ಹಂದಿಯನ್ನು ಹೊತ್ತುಕೊಂಡು ಹೋಗೋ ಹಾಗೆ ಕೊಲನ್ನ ಕೈಕಾಲಿಗೆ ಸೇರಿಸಿ ಗುಂಡಿ ಕಡೆಗೆ ಎತ್ತಿಕೊಂಡು ಹೋಗಿ ಮಲಗಿಸಿದರು. ಒಬ್ಬ SI ಹೇಳಿದ್ರು ಫೈರ್. ಇನ್ನೊಬ್ಬ ASI ತಾನು ತಂದಿದ್ದ ನಾಡ ಪಿಸ್ತುಲ್ ನಿಂದ ಆ ಯುವಕನ ಹಣೆಗೆ point blank range ನಲ್ಲಿ ಹೊಡೆದ. ತಲೆ ಚಿದ್ರವಾಯ್ತು. ಪಿಸ್ತೂಲನ್ನು ಗುಂಡಿಗೆ ಹಾಕು ಅಂದರು ಮೇಲಿದ್ದ ಒಬ್ಬರು. ಅಮಾವಾಸ್ಯೆ ಕತ್ತಲು ಆವರಿಸಿದೆ. ನರಿ ಫಿನಿಶ್ ಅಂತ ಮೆಸೇಜ್ ಹೋಯ್ತು. ಆಗ ಮುರುಗೇಶ್ ಗೆ ಗೊತ್ತಾಯ್ತು ಇದು ಆ lecturer ಸುಬ್ರಮಣಿ ಅಂತ. ಮನಸ್ಸಿಗೆ ಬಹಳ ಬೇಜಾರಾಯ್ತು. ಪೊಲೀಸ್ ಕೆಲಸಕ್ಕೆ ಸೇರಿ ತಪ್ಪುಮಾಡಿದ್ದೇನೆ ಅಂತ ಮನಸ್ಸು ಪದೇಪದೇ ಹೇಳ್ತಾ ಇದೆ . ಮಣ್ಣು ಮುಚ್ಚಿ ಎಲ್ಲಾ ಮೇಲೆ ಬಂದರು.ಎಲ್ಲರಿಗೂ ಸಿಗರೇಟ್ ವಿತರಣೆ ಆಗಿದೆ. ಮುರುಗೇಶ್ ಮಾತ್ರ ಜೀಪ್ ಪಕ್ಕದಲ್ಲಿ ಒಬ್ಬನೇ ನಿಂತು ಏನೋ ಯೋಚಿಸುತ್ತಿದ್ದಾಗ. ಸಾಹೇಬ್ರು ಬಂದು ಹೊಸಬಾನಾ ಅಂದ್ರು. ಹೌದು ಸಾರ್ ಅಂದ. ಹೆಸರು ಕೇಳಿದ್ರು. ಒಳ್ಳೆಯವರೇ ಇದ್ದ ಹಾಗಿದೆ ಅಂತ ತಿಳ್ಕೊಂಡು ಸಾರ್ ಮೂರು ತಿಂಗ ಳಿಂದ ಊರಿಗೆ ಹೋಗಿಲ್ಲ ರಜಾ ಬೇಕಿತ್ತು. ಅಂದ. ಆಯ್ತು ಹೋಗು .ಯಾರ ಹತ್ತಿರಾನೂ ಇದೆಲ್ಲಾ ಹೇಳಬೇಡ. ಇನ್ನೂ ಬಹಳ ಕೆಲಸ ಇದೆ.ನಿಮ್ಮ team ಗೆ award ಬಾರೋ ಚಾನ್ಸ್ ಇದೆ ಅಂದ್ರು. ನಿಮ್ಮ ಅವಾರ್ಡ್ ಯಾರಿಗೆ ಬೇಕಿದೆ ಅಂತ ಮನಸಲ್ಲೇ ಅಂದುಕೊಂಡ. ನಾಲ್ಕು ಜನ ಅಲ್ಲೇ ಉಳ್ಕೊಂಡು ಕತ್ತಲನ್ನು ಭೇದಿಸಿ ಎಲ್ಲರೂ ಹೊರಟು ಹೋದ್ರು.ಇವರ ಜೊತೆ ಇದ್ದವನೊಬ್ಬ ಹೇಳಿದ. ಇಷ್ಟು ದಿನ ಇದ್ದಂಗೆ ಇರಲ್ಲ ಇನ್ನು ಮುಂದೆ. ನರಿ ಕತೆ ಮುಗೀತು ಅಂತ ಗೊತ್ತಾದ್ರೆ ಒಬ್ಬೊಬ್ಬ ಪೊಲೀಸರನ್ನು ಗುರಿ ಮಾಡಿ ಮುಗಿಸಕ್ಕೆ ಹೊಂಚು ಹಾಕ್ತಾರೆ. ನಾವು ಹುಷಾರಾಗಿರಬೇಕು.
ಮತ್ತೆ ಯಾವುದೋ ಮೆಸೇಜ್ ಬಂತು. ಆ ಕಡೆ ಯಿಂದ SI ಸಾಹೇಬರು ಮಾತಾಡಿ ಆ ಹೊಸಬ ಇದಾನಲ್ಲ ಮುರುಗೇಶ ಅವನಿಗೆ ಒಂದುವಾರ ರಜ ಕೊಟ್ಟಿದೀನಿ ಬೆಳಗ್ಗೆ ಊರಿಗೆ ಹೋಗಕ್ಕೆ ಹೇಳು ಅಂದಾಗ ಕೇಳಿ ಸ್ವಲ್ಪ ಸಂತೋಷ ಆಯ್ತು ಆದರೆ ಮತ್ತೆ ಈ ನರಕಕ್ಕೆ ಬರಬೇಕಲ್ಲಪ್ಪ ಅಂತ ಹೃದಯ ಭಾರ ಆಯ್ತು. ರಾತ್ರಿ ಎಲ್ಲಾ ಯಾರ ಹತ್ತಿರಾನೂ ಮಾತಾಡದೆ ಕೂತಿದ್ದಾನೆ.ಎನ್ಕೌಂಟರ್ ಅದ ಆ ಭಯಾನಕ ದೃಶ್ಯ ಮರೆಯಲು ಅವನಿಂದ ಆಗ್ತಿಲ್ಲ.