Lakshmi Kanth

Horror Tragedy Thriller

4.5  

Lakshmi Kanth

Horror Tragedy Thriller

ಪಶ್ಚಾತ್ತಾಪ

ಪಶ್ಚಾತ್ತಾಪ

3 mins
521


ಅದಾಗಲೇ ಮಧ್ಯರಾತ್ರಿ, ಘಂಟೆ 1.30 ಆಗಿದೆ. ಎಲ್ಲೆಡೆ ಕಗ್ಗತ್ತಲು. ಕತ್ತಲನ್ನು ಸೀಳಿ ಬರುತ್ತಿರುವ ಕೀಟಗಳ ಸದ್ದು. ಈ ನಡುವೆ ಕಾನನದ ಮಧ್ಯದಲ್ಲಿ ಆ ರೈಲು ದಟ್ಟ ಹೊಗೆಯನ್ನುಗುಳುತ್ತಾ ಚಲಿಸುತ್ತಿತ್ತು. ಆ ಬೋಗಿಯಲ್ಲಿದ್ದ ಪ್ರಯಾಣಿಕರೆಲ್ಲರೂ ಗಾಢ ನಿದ್ರೆಯಲ್ಲಿದ್ದರೆ ಸರೋಜಾಳಿಗೆ ಮಾತ್ರ ನಿದ್ರೆಯೇ ಬರುತ್ತಿಲ್ಲ. ಬಾಯಾರಿಕೆ ಬ್ಯಾಗ್‌ನಲ್ಲಿದ್ದ ನೀರಿನ ಬಾಟಲ್ ತೆಗೆದುಕೊಂಡು ನೀರು ಕುಡಿದು ತನ್ನ ಗಂಡ ಹಾಗೂ ಮಕ್ಕಳ ಕಡೆಗೆ ದೃಷ್ಟಿ ಹಾಯಿಸುತ್ತಾಳೆ. ಎಲ್ಲರೂ ಪ್ರಶಾಂತವಾಗಿ ನಿದ್ರಿಸುತ್ತಿದ್ದಾರೆ. ಅವಳಿಗೆ ಮಾತ್ರ ಅರೆಗಳಿಗೆಯೂ ನಿದ್ರೆ ಬರುತ್ತಿಲ್ಲ, ಜೊತೆಗೆ ಮನದಲ್ಲೇನೋ ದುಗುಡ, ಹೊಟ್ಟೆಯಲ್ಲೇನೋ ಸಂಕಟ, ಸಹಿಸಲಾಗದ, ಅನುಭವಿಸಲಾಗದ, ವಿವರಿಸಲಾಗದ ವೇದನೆ.

ಏನಿದು..? ಏಕೆ ಹೀಗೆ..? ಏನಾಗುತ್ತಿದೆ.? ತನಗೆ ತಾನೇ ಪ್ರಶ್ನಿಸಿಕೊಳ್ಳತೊಡಗಿದಳು. ಕಾಡು ದಾಟಿ ಯಾವುದೋ ಹಳ್ಳಿ ಬಂದಂತಾಯ್ತು. ಸಣ್ಣಹಳ್ಳಿಯಾದ್ದರಿಂದ ಆ ಎಕ್ಸ್ಪ್ರೆಸ್ ರೈಲು ಅಲ್ಲಿ ನಿಲ್ಲಲಿಲ್ಲ. ಆ ಹಳ್ಳಿ ದಾಟುತ್ತಿದ್ದಂತೆಯೇ ಅವಳಿಗೆ ಮತ್ತೆ ಕಾಡು ಕಾಣಲಾರಂಭಿಸಿತು. ಕಿಟಕಿಯಿಂದ ಎಡಗಡೆ ಹೊರಗೆ ನೋಡುತ್ತಿದ್ದಂತೆಯೇ ಯಾವುದೋ ಪರಿಚಯಸ್ಥ ಜಾಗ ಎನ್ನಿಸತೊಡಗಿತ್ತು.

ಹೌದು.. ಸುಮಾರು ಕಲ್ಲುಗಳನ್ನು ಜೋಡಿಸಿಟ್ಟಂತೆ ಕಂಡಿದ್ದು ಸ್ಮಶಾನ.!!! ಅವಳ ಸಂಕಟ ಹೆಚ್ಚಾಗತೊಡಗಿತು. ಕಣ್ಣು ಮುಚ್ಚಿದೊಡನೆಯೇ ಅವಳಿಗೆ ಅವನ ಮುಖ ಕಾಣತೊಡಗಿತು. ಸರೋಜಾ ಎಂಟು ವರ್ಷಗಳ ಹಿಂದೆ ಸಂತೋಷ್ ಹಿಂದೆ ಸುತ್ತಿ ಏನೂ ಅರಿಯದ ಅಮಾಯಕ ಮುಗ್ಧ ಹುಡುಗನನ್ನು ಪ್ರೀತಿಯ ಬಲೆಗೆ ಕೆಡವಿಕೊಂಡಿದ್ದಳು. ಊರ ಜನರ ಕಣ್ಣು ತಪ್ಪಿಸಿ ಇಬ್ಬರೂ ಇದೇ ಸ್ಮಶಾನದ ಬಳಿಯೇ ಇದ್ದ ಆ ಕಲ್ಲಿನ ಮೇಲೆ ಕುಳಿತು ಬಂದು ಗಂಟೆಗಟ್ಟಲೆ ಹರಟುತ್ತಿದ್ದರು. ಮುಗ್ಧ ಹುಡುಗ ಸಂತೋಷ್‌ನ ಎದೆಗೆ ಪ್ರೀತಿಯ ಕಿಚ್ಚನ್ನು ಹಚ್ಚಿದ ಸರೋಜಾ ಅವನನ್ನು ಅಕ್ಷರಶಃ ಹುಚ್ಚನನ್ನಾಗಿಸಿದ್ದಳು.

ಇತ್ತ ಕಡೆ ಅವಳ ಮನೆಯಲ್ಲಿ ಶ್ರೀಮಂತ ಉದ್ಯಮಿಯೊಬ್ಬರ ಮಗನಿಗೆ ಅವಳನ್ನು ಕೊಟ್ಟು ಮದುವೆ ಮಾಡುವುದೆಂದು ನಿಶ್ಚಯವಾಗಿತ್ತು. ಹುಡುಗನ ಶ್ರೀಮಂತಿಕೆಗೆ ಮನಸೋತ ಅವಳೂ ಸಹ ಮದುವೆಗೆ ಸಮ್ಮತಿ ನೀಡಿದಳು. ಅವನಿಂದ ದೂರಾಗದೇ ಈ ಶ್ರೀಮಂತ ಉದ್ಯಮಿಯ ಸಂಬoಧ ಕುದುರದು ಎಂದರಿತ ಅವಳು ಅವನನ್ನು ಸಾಯಿಸುವ ಮನಸ್ಸು ಮಾಡಿದಳು. ಯಥಾಪ್ರಕಾರ ಆ ದಿನ ಕತ್ತಲಾಗುತ್ತಾ ಬಂದ0ತೆ ಅವಳು ಸಂತೋಷನಿಗೆ ಆ ಜಾಗಕ್ಕೆ ಬರುವುದಕ್ಕೆ ಹೇಳಿದಳು. ಅವನು ಅವಳನ್ನರಸಿ ಸ್ಮಶಾನದ ಬಳಿ ಬರುತ್ತಿದ್ದಂತೆಯೇ ಅವನಿಗೆ ಅವಳು ಕುಡಿಯಲು ಏನೋ ಕೊಟ್ಟಳು. ಮತ್ತು ಬರುವ ಪದಾರ್ಥವನ್ನು ಸೇರಿಸಿ ಕೊಟ್ಟಿದ್ದರಿಂದ ಅವನು ಅದನ್ನು ಕುಡಿಯುತ್ತಿದ್ದಂತೆಯೇ ಪ್ರಜ್ಞಾಹೀನನಾಗಿ ಬಿದ್ದನು. ಇದೇ ಸಮಯಕ್ಕೆ ಹೊಂಚುಹಾಕಿರುವoತೆ ಕುಳಿತಿದ್ದ ಅವಳು ಅವನ ದೇಹವನ್ನು ದರದರನೇ ಎಳೆದುತಂದು ಉರಿಯುತ್ತಿದ್ದ ಚಿತೆಗೆಸೆದಿದ್ದಳು. ಧಗಧಗಿಸಿ ಉರಿಯುತ್ತಿದ್ದ ಬೇರೊಂದು ಶವದೊಂದಿಗೆ ಅವನೂ ಸಹ ಇಹಲೋಕ ತ್ಯಜಿಸಿದ್ದನು. ಅಲ್ಲಿಂದ ಹಿಂತಿರುಗಿ ನೋಡದೇ ಓಡಿಹೋಗಿದ್ದ ಅವಳು ಶ್ರೀಮಂತ ಉದ್ಯಮಿಯ ಸೊಸೆಯಾಗಿದ್ದಳು.

ಹೌದು, ಇವೆಲ್ಲಾ ಗತಿಸಿ ಎಂಟು ವರ್ಷಗಳಾಗಿವೆ. ಇಷ್ಟು ದಿನಗಳಲ್ಲಿ ಎಂದೆoದಿಗೂ ನೆನಪಿಗೆ ಬಾರದ ಅವನು ಇಂದು ನೆನಪಾಗುತ್ತಿದ್ದಾನೆ. ಕಣ್ಣು ಮುಚ್ಚಿದರೂ ಕಣ್ಣು ತೆರೆದರೂ ಎಲ್ಲೆಲ್ಲೂ ಅವನದೇ ರೂಪ ಕಣ್ಣೆದುರು ಬರುತ್ತಿದೆ. ಅವಳಿಗೆ ಉಸಿರಾಡುವುದೇ ಕಷ್ಟವಾಗತೊಡಗಿತು. ಬಾಯಿಂದ ಮಾತೇ ಹೊರಡದಾಯಿತು. ಹೇಗೋ ಕಷ್ಟಪಟ್ಟು ಕುಳಿತಲ್ಲಿಂದ ಎದ್ದು ಬೆವರುತ್ತಿದ್ದ ಮುಖ ತೊಳೆಯೋಣವೆಂದು ರೈಲಿನ ಬಾಗಿಲಿನ ಬಳಿಯಲ್ಲಿರುವ ಸಿಂಕ್ ಬಳಿ ಬಂದು ನಿಲ್ಲುತ್ತಾಳೆ. ಹೈರಾಣಾಗಿದ್ದ ಅವಳು ಮುಖ ತೊಳೆಯುತ್ತಾ ರೈಲಿನಿಂದ ಆಚೆನೋಡುತ್ತಾಳೆ. ಹೌದು..! ಅವನೇ..!!!! ಸ್ಮಶಾನದ ಸಮಾಧಿಯ ಮೇಲೆ ಒಬ್ಬನೇ ಕುಳಿತಿದ್ದಾನೆ. ಇವಳನ್ನೇ ದಿಟ್ಟಿಸುತ್ತಿದ್ದಾನೆ. ಇವಳಿಗೆ ಹಳೆಯದ್ದೆಲ್ಲಾ ಅರೆಕ್ಷಣದಲ್ಲಿ ನೆನಪಾಯಿತು; ಅವಳ ಹಿಂದಿನ ದಿನಗಳು ಸಿನಿಮಾದಂತೆ ಅವಳ ಕಣ್ಮುಂದೆ ಹಾದು ಹೋಯಿತು. ಪ್ರೀತಿಯ ಹೆಸರಲ್ಲಿ ಮೋಸ ಮಾಡಿದ ನನ್ನನ್ನು ಅವನು ಬಿಡುವುದಿಲ್ಲ ಎಂಬ ಸತ್ಯ ಅವಳಿಗರಿವಾಯಿತು. ಚಲಿಸುತ್ತಿದ್ದ ರೈಲಿನ ಬಾಗಿಲ ಬಳಿ ನಿಂತು ನೋಡುತ್ತಾಳೆ; ಅವನು ಇವಳ ಬಳಿಯೇ ಓಡಿ ಬರುತ್ತಿದ್ದಾನೆ..!

ಇನ್ನೇನು ಇವಳಿರುವ ಬೋಗಿಯ ಬಳಿ ಅವನು ಬಂದೇ ಬಿಟ್ಟ ಎನ್ನುವಷ್ಟರಲ್ಲಿ ಭಯದಿಂದ ಥರಥರ ನಡುಗಿದ ಅವಳು ಆಯತಪ್ಪಿ ರೈಲಿನಿಂದ ಹೊರಗೆ ಬೀಳುತ್ತಾಳೆ. ಮಿಂಚಿನ ವೇಗದಲ್ಲಿ ಬಂದ ಅವನು ಅವಳು ಕೆಳಗೆ ಬೀಳದಂತೆ ಅವಳನ್ನು ಗಟ್ಟಿಯಾಗಿ ಹಿಡಿದು ಬಿಗಿದಪ್ಪಿ ಮತ್ತೆ ರೈಲಿನೊಳಗೆ ಬಿಟ್ಟು ಮುಂದಿದ್ದ ಸ್ಮಶಾನದ ಸಮಾಧಿಯೊಳಗೆ ಲೀನನಾಗುತ್ತಾನೆ. ಕ್ಷಣಮಾತ್ರದಲ್ಲಿ ನಡೆದ ಈ ಘಟನೆ ಕನಸೋ, ನನಸೋ, ಭ್ರಮೆಯೋ, ಕಥೆಯೋ, ಕಲ್ಪನೆಯೋ, ಸತ್ಯ ಘಟನೆಯೋ ಎಂದರಿಯದ ಅವಳು ಮೂಕಸ್ಥಬ್ದಳಾಗುತ್ತಾಳೆ. 

ಸೀದಾ ಬೋಗಿಯೊಳಗೆ ಬಂದು ತನ್ನ ಆಸನದಲ್ಲಿ ಕೂರುತ್ತಾಳೆ. ನಡೆದ ಘಟನೆಯಿಂದ ಬೆವತು ಮೈಯೆಲ್ಲಾ ಒದ್ದೆಯಾಗಿರುತ್ತದೆ. ಕುಡಿಯಲು ನೀರಿಗಾಗಿ ಬಾಟಲ್ ಹುಡುಕುತ್ತಾಳೆ. ಅಷ್ಟೇ..! ಯಾಕೆ ಬೆರ‍್ತಾ ಇದೀಯ..? ತಗೋ ನೀರು ಕುಡಿ ಎಂದು ನೀರಿನ ಬಾಟಲ್ ಕೈಗಿಡುತ್ತಾನೆ. ಅವಳು ಗಟಗಟನೆ ನೀರು ಕುಡಿದು ಬಾಟಲ್ ಕೊಟ್ಟವರು ಯಾರೆಂದು ತಿರುಗಿ ನೋಡುತ್ತಾಳೆ. ಅಷ್ಟೆ..! ಕ್ಷಣಮಾತ್ರದಲ್ಲಿ ಅವಳಿಗೆ ಮಾತೇ ಬರಲಿಲ್ಲ. ಅದು ಅವನೇ..! ಸಂತೋಷ್. ಪಕ್ಕದ ಸೀಟ್‌ನಲ್ಲಿ ಕೂತಿದ್ದಾನೆ. ಅವಳಿಗೆ ಏನು ಹೇಳಬೇಕೆಂದು ಬಾಯಿಂದ ಮಾತೇ ಬರುತ್ತಿಲ್ಲ. ಅದು.. ಸಂತು.. ಸಂತು.. ನನ್ನ ಕ್ಷಮಿಸು ಎಂದು ಗದ್ಗದಿತ ಕಂಠದಲ್ಲಿ ಹೇಳುತ್ತಿದ್ದಾಳೆ.

ಏ.. ಯಾಕೆ ಏನೇನೋ ಬಡಬಡಿಸುತ್ತಿದ್ದೀಯ? ಗಂಡನ ದನಿ ಕೇಳಿ ವಾಸ್ತವಕ್ಕೆ ಬಂದ ಸರೋಜ ಪಕ್ಕದಲ್ಲಿ ನೋಡುತ್ತಾಳೆ. ಅರೆ..! ಅವನಿಲ್ಲ. ಅವಳಿಗೆ ಇದೇನು ಭ್ರಮೆಯಾ? ಎಂದು ಯೋಚಿಸುತ್ತಾ ಹಾಗೇ ಕಣ್ಮುಚ್ಚಿ ನಿದ್ರೆಗೆ ಜಾರಿದಳು. ಎಚ್ಚರಗೊಂಡಾಗ ಬೆಳಿಗ್ಗೆಯಾಗಿತ್ತು. ಗಂಡ ಲಗೇಜನ್ನೆಲ್ಲಾ ಸಿದ್ಧಮಾಡುತ್ತಾ ರೈಲಿಂದ ಇಳಿಯಲು ಸಿದ್ಧನಾಗುತ್ತಾ, ಸರೋಜಾ.. ನಿದ್ದೆ ಆಯ್ತಾ? ಸರಿ ಬಾ ಸ್ಟೇಷನ್ ಬಂತು ಇಳಿಯೋಣ ಎಂದ. ಸರೋಜ ಕಣ್ಣೊರಸಿಕೊಳ್ಳುತ್ತಾ ಸ್ಟೇಷನ್ ಬಂದಾಗ ರೈಲಿನಿಂದ ಇಳಿದು ಅಲ್ಲಿಂದ ಆಟೋ ಏರಿ ಮನೆಗೆ ಹೊರಟರು. 

ಇತ್ತ ಮನೆಗೆ ಬಂದರೂ ಸರೋಜಾಳಿಗೆ ಮತ್ತೆ ಸಂತೋಷ್‌ದೇ ಚಿಂತೆ. ಅವನು ಬಂದಿದ್ದ..! ಆದರೆ ಮತ್ತೆ ಕಾಣಲೇ ಇಲ್ಲ! ಎಂದು ಅಂದುಕೊಳ್ಳುತ್ತಿರುವಾಗಲೇ ಸರೋಜಾ... ಎಂಬ ಕೂಗು. ಹೌದು.. ಅದು ಸಂತೋಷ್‌ನದೇ ಕರೆ..!! ಅತ್ತಿತ್ತ ಎಲ್ಲ ಕಡೆ ನೋಡುತ್ತಾ ಬೆವರತೊಡಗಿದಳು. ಎಲ್ಲೂ ಕಾಣಲೇ ಇಲ್ಲ. ಅವಳಿಗಂತೂ ಅದೇ ಯೋಚನೆ. ಭ್ರಮೆಯಾ..? ನಿಜಾನಾ..? ನಾನು ತಪ್ಪು ಮಾಡಿಬಿಟ್ಟೆ! ಸಂತೋಷ್‌ಗೆ ಮೋಸ ಮಾಡಿದೆ ಅನ್ನೋ ಪಾಪಪ್ರಜ್ಞೆ ಅವಳನ್ನು ಕಾಡತೊಡಗಿತು. 

ಮರುದಿನ ಬೆಳ್ಳಂಬೆಳಗ್ಗೆ ಎದ್ದು ಸೀದಾ ಸಂತೋಷ್ ಸಮಾಧಿ ಬಳಿಗೆ ಅಂಜುತ್ತಲೇ ಹೋದಳು. ಅವನ ಸಮಾಧಿ ಮುಂದೆ ಕುಳಿತು ಜೋರಾಗಿ ಅಳುತ್ತಾ, ಸಂತೋಷ್.. ನಾ ನಿನಗೆ ತುಂಬಾ ಮೋಸ ಮಾಡಿದೆ ಅನ್ಯಾಯ ಮಾಡಿಬಿಟ್ಟೆ; ನನ್ನನ್ನು ಕ್ಷಮಿಸು ಪ್ಲೀಸ್..!! ಎನ್ನುತ್ತಾ ಅವನ ಸಮಾಧಿ ಮೇಲೆ ತಲೆ ಇಟ್ಟು ಅಳತೊಡಗಿದಳು. ತಕ್ಷಣ ‘ಸರೋಜಾ.. ಅಳಬೇಡ ನೀನು’ ಎಂದು ಅವಳ ತಲೆಯನ್ನು ನೇವರಿಸದಂತಾಯ್ತು.. ಎದ್ದು ನೋಡಿದರೆ ಸಂತೋಷ್!!! ಅವಳಿಗೆ ಷಾಕ್!! ಮಾತೇ ಹೊರಡದಂತಾಯ್ತು. ಅವನು ಮಾತು ಮುಂದುವರೆಸುತ್ತಾ, ‘ನೋಡು ಸರೋಜಾ.. ಏನೋ ಆಗೋಯ್ತು ಬಿಡು.. ನನ್ನ ಪ್ರೀತಿ ನನಗೆ ದಕ್ಕಿಲ್ಲ ಅಷ್ಟೆ. ನೀನು ಏನೋ ತಿಳಿಯದೆ ತಪ್ಪು ಮಾಡಿಬಿಟ್ಟೆ. ಆಗಿದ್ದಾಯ್ತು..! ನೀನಾದರೂ ಚೆನ್ನಾಗಿರು ಅಷ್ಟೆ ಸಾಕು; ಇನ್ನು ಮುಂದೆ ನಾ ನಿನಗೆ ತೊಂದರೆ ಕೊಡೋಲ್ಲ’ ಎಂದು ಮಾಯವಾಗಿದ್ದ ಸಂತೋಷ್. 

ಪಶ್ಚಾತಾಪದಿಂದ ನೊಂದು ಬೆಂದು ತನ್ನ ತಪ್ಪಿನ ಅರಿವಾದ ಸರೋಜ ಇದೀಗ ತನ್ನೆರಡು ಮಕ್ಕಳು ಮತ್ತು ಗಂಡನೊಂದಿಗೆ ಸಂತೋಷವಾಗಿದ್ದಾಳೆ. ಆದರೆ.. ಸಂತೋಷ್‌ನ ನೆನಪು...????Rate this content
Log in

Similar kannada story from Horror