ಹುಣ್ಣಿಮೆ ರಾತ್ರಿ
ಹುಣ್ಣಿಮೆ ರಾತ್ರಿ
“..ಸಾವಲ್ಲೂ ಒಂದಾದರು”.
ಕಾದಂಬರಿಯ ಕೊನೆಯ ಸಾಲನ್ನು ಓದಿ ಮೈ ಜುಮ್ ಎಂದ ಕ್ಷಣ, ಕ್ಷಮಾ ತನ್ನ ಪುಸ್ತಕವನ್ನು ದೀಪದ ಪಕ್ಕ ಇಟ್ಟು ಅವಳ ಗಂಡನನ್ನು ಎದುರು ನೋಡಲು ಕಿಟಕಿ ಬಳಿ ಬಂದು ನಿಂತಳು. ಮೈ ಕೊರೆಯುವ ಚಳಿ, ಎಣ್ಣೆ ಬತ್ತಿ ಬೆಳಕು ಕಮ್ಮಿಯಾಗುತ್ತಿರಲು, ದೀಪಕ್ಕೆ ಎಣ್ಣೆ ಹಾಕಲು ಮುಂದಾದಳು, ನಂತರ ಸಣ್ಣಗೆ ಬೆಳಕು ಚಲ್ಲುತ್ತಿದ್ದ ದೀಪವು ಜೋರಾಗಿ ಉರಿಯಲಿ ಆರಂಭಿಸಿತು. ಬಿಸಿಯಾಗಿ ಅವಳ ಗಂಡನಿಗೆ ಪ್ರೀತಿಯಿಂದ ಶುಚಿ ರುಚಿಯಾಗಿ ಮಾಡಿದ್ದ ಅಡುಗೆಯೂ ಯಾಕೋ ಹಾಳಾದ ಹಾಗೆ ವಾಸನೆ ಬರುತ್ತಿತ್ತು. ಏನೊ ಅಪಶಕುನವೇನೋ ಎಂದು ಕ್ಷಮಾ ತನ್ನ ಗಂಡ ಬಂದೊಡನೆ ಇದೆಲ್ಲ ಹೇಳಿ ಅವನ ಎದೆಯ ಮೇಲೆ ಬೆಚ್ಚಗೆ ಮಲಗಿ ವಿಶ್ರಾಂತಿಸಲು ಕಾಯುತ್ತಿದ್ದಳು. ಇಲ್ಲಿ ಮಲಗುವ ಕೋಣೆ ಯಾಕೋ ಭಯ ಹುಟ್ಟಿಸುವಂತೆ ಇದ್ದರೂ, ದೇವರ ನೆನೆಯುತ್ತಾ ಅಲ್ಲಿ ಹೋಗಿ ಹಾಸಿಗೆ ಹಾಸಿ ಕೂಡಲೇ ಮತ್ತೆ ಬಂದು ಕಿಟಕಿಯಲ್ಲಿ ಗಂಡನ ಬರುವಿಕೆಯನ್ನು ಕಾಣಲು ಚಿಂತಾಗ್ರಸ್ತಳಾಗಿ ನಿಂತಳು.
ಮುದ್ದಿನ ಒಬ್ಬಳೇ ಮಗಳಾಗಿ ಬೆಳೆದಿದ್ದ ಕ್ಷಮಾಳಿಗೆ ಹೀಗೆ ಊರಿನ ಕೊನೆಯಲ್ಲಿ ಪುಟ್ಟ ಮನೆಯಲ್ಲಿ ವಾಸವಿರಲು ಅಕ್ಷರಸಹ ಇಷ್ಟ ಇರಲಿಲ್ಲ. ಆದರೆ ಪ್ರೀತಿ? ಸಣ್ಣ ವಯಸ್ಸಿನಿಂದಲೂ ತನಗೆ ತನ್ನ ರಾಜಕುಮಾರ ಬರುತ್ತಾನೆ, ತುಂಬಾ ಪ್ರೀತಿಯಲ್ಲಿ ಮುಳುಗಿಸಿ. ಪ್ರೀತಿಯ ಅರಮನೆಯಲ್ಲಿ ಇಡುತ್ತಾನೆ ಎಂಬ ಕನಸು. ತನ್ನ ಮದುವೆಯ ದಿನ ಗಂಡನಿಗೆ ದೊಡ್ಡ ಅರಮನೆ ಇಲ್ಲಾ, ತಾನಿದ್ದ ಮನೆಗಿಂತ ಪುಟ್ಟ ಗುಡಸಿಲಿನಲ್ಲಿ ಇರುವುದಾಗಿ ತಿಳಿದು ಬಂದಾಗ, ಪತಿಯ ಪ್ರೀತಿ ಒಂದೇ ತನಗೆ ಸಾಕೆಂದು ಕಣ್ಮುಚ್ಚಿ ಕಣ್ ಹನಿ ಒರೆಸಿ ರಾಣಿಯಂತೆ ಪತಿಯ ಮನೆಗೆ ಕಾಲಿಟ್ಟಲು. ತನ್ನ ತಂದೆ ತಾಯಿಯರನ್ನು ಬಿಟ್ಟು, ಊರ ತುದಿಯಲ್ಲಿ ಇರುವುದು ಕಷ್ಟವಾದರೂ ಪ್ರೀತಿ ಒಂದೇ ಕ್ಷಮಾಳ ಪುಟ್ಟ ಮನಸ್ಸನ್ನು ಸಾಂತ್ವನಿಸಿತು.
ಸಮಯ ಕಳೆದಂತೆಲ್ಲಾ ಮನದಲ್ಲಿ ಗಾಬರಿ, ಸುತ್ತ ಮನೆಗಳಲ್ಲಿ ದೀಪ ಆರಿ ಎಲ್ಲರು ನಿದ್ರಿಸುತ್ತಿದ್ದರು. ಕ್ಷಮಾಳ ಮನೆಯ ಸ್ವಲ್ಪ ದೂರದಲ್ಲಿ ಸ್ಮಶಾನ. ತನಗೆ ಆಗುತ್ತಿದ್ದ ಗಾಬರಿಗೆ ಮೂರ್ಛೆ ಹೋಗುವಂತೆ ಆಗಿ ಮೈ ಕಂಪಿಸಿತು. ಪತಿದೇವಾ ಇರುವಾಗ ಯಾವ ಭಯ? ಈಗಲ್ಲ ಅಂದ್ರೆ ಸ್ವಲ್ಪ ಸಮಯದಲ್ಲಿ ಬರುವನು. ಆಗ ಅವನನ್ನು ಅಪ್ಪಿಕೊಂಡು ಕೈ ಹಿಡಿದು ಅವನ ಜೊತೆ ಇರಲು ಭಯವೆಲ್ಲಾ ಮಾಯ ಎಂದು ಕಾದಳು.
ಹುಣ್ಣಿಮೆಯ ರಾತ್ರಿ, ಚಂದ್ರನ ಬೆಳಕಿದ್ದರೂ ಕಪ್ಪು, ಕಿಟಕಿಯ ಆಚೆ ಸ್ವಲ್ಪ ದೂರದಲ್ಲಿ ಜನ ಬರುತ್ತಿರುವ ಸದ್ದು, ಹಾಗೆಯೇ ಸ್ವಲ್ಪ ದೀಪದ ಬೆಳಕು ಕಂಡಿತು. ನೋಡ ನೋಡುತ್ತಿದ್ದಂತೆ ತನ್ನ ಪತಿಯ ಆಗಮನ, ಆದರೆ ಗಂಡನ ಜೊತೆ ಯಾರೋ ಮಾಂತ್ರಿಕನ ತರ ಇರುವ ವಯಸ್ಸಾದ ವ್ಯಕ್ತಿ. ಅದೇನೋ ಮಂತ್ರಗಳ ಪಠನ. ಕ್ಷಮಾಳ ಭಯ ಹೋಗದೆ, ಇನ್ನು ಭಯ ಹೆಚ್ಚಿತು. ಗಂಡನಿಗೆ ಯಾರೋ ಮಾಟ ಮಂತ್ರ ಮಾಡಿಸಿ ಹೀಗಿ ಮಾಡುತ್ತಿದ್ದಾರೆ ಎಂದು ಅವನನ್ನು ಕಾಪಾಡಲು ಬಾಗಿಲ ತೆಗಿದು ಓಡಿ ಬರಲು ಎತ್ನಿಸಿದಳ. ಬಾಗಿಲನ್ನು ಮುಟ್ಟಲು ಆಗಲಿಲ್ಲ, ಆಚೆ ತನ್ನ ಗಂಡ ಜೋರಾಗಿ,
“ಇಂದಿಗೆ ನೀನು ನಾಶ”, ಎಂದನು.
ಮಾಂತ್ರಿಕ ಮಂತ್ರಗಳ ಪಠನೆ ಜೋರಾಗಿ ಮಾಡುತ್ತಾ ನಿಂತನು.
ಕ್ಷಮಾಳ ಕೈ ಕಟ್ಟಿದಹಾಗೆ ಹಾಗೆ ಕೆಳಗೆ ಬಿದ್ದು ಅಳತೊಡಗಿದಳು.
“ನನ್ನ ಬಿಟ್ಟುಬಿಡು, ನನ್ನ ಗಂಡನೊಡನೆ ಇಲ್ಲೆ ಇರುವೆ, ಅವರನ್ನು ಅಗಲಿ ಇರಲಾರೆ. ಗಂಡ ಹೆಂಡತಿಯರ ನಡುವೆ ಜಗಳ ಸಾಮಾನ್ಯ, ನನಗೆ ಒಂದು ತಿಂಗಳು. ನಮ್ಮ ಮಗು ಸ್ವಲ್ಪ ದಿನದಲ್ಲೇ ಜನಿಸಲಿದ್ದು, ಆ ನಂತರ ನಾವು ಸುಖವಾಗಿ ಇರುತ್ತೇವೆ” ಎಂದು ಅಳುತ್ತಾ ತನ್ನ ಗಂಡನನ್ನು ಕೂಗಿದಳು.
>
“ಸತ್ತವರು ಸಂಸಾರ ಮಾಡುವುದೇ? ನಿನ್ನ ಇಂದೇ ನಿನ್ನ ಲೋಕಕ್ಕೆ ಕಳಿಸುವೆ” ಎಂದ ಮಾಂತ್ರಿಕ, ಅವನ ಕೆಲಸಕ್ಕೆ ಸಜ್ಜಾದ.
ಇತ್ತ ಕ್ಷಮಾಳ ಗಂಡ ಕೈ ಕಟ್ಟಿ ತಲೆ ಬಗ್ಗಿಸಿ ಮಾಂತ್ರಿಕನ ಮಾತನ್ನು ಆಲಿಸುತ್ತಿದ್ದ.
ತನ್ನನ್ನು ಅತಿಯಾಗಿ ಪ್ರೀತಿಸುತ್ತಿದ್ದ ಹೆಂಡತಿಯ ಬಗ್ಗೆ ಚೂರು ಪ್ರೀತಿಯು ಅಥವಾ ಕಿಂಚಿತ್ತೂ ಕರುಣೆಯೂ ಅವನಿಗೆ ಇರಲಿಲ್ಲ.
ಕ್ಷಮಾ ಒಂದೇ ಸಮನೆ ಅಳುವುದನ್ನು ನಿಲ್ಲಿಸಿ, ದೇವರ ನೆನೆದು ಮನೆಯ ಆಚೆ ಬಂದಳು. ಅವಳನ್ನು ನೋಡಿದ ಅವಳ ಗಂಡನಿಗೆ ಹಾಗೂ ಮಾಂತ್ರಿಕನಿಗೆ ಭಯವಾಯಿತು. ಮಾಂತ್ರಿಕ ತನ್ನ ಮಂತ್ರ ಶಕ್ತಿ ಕಮ್ಮಿ ಆದದ್ದನ್ನು ಕಂಡು ಓಡಿಹೋದನು. ಕ್ಷಮಾಳ ಗಂಡನು ಹೆದರಿ ಓಡ ತೊಡಗಿದನು.
“ನಿಮ್ಮನ್ನೂ ಕಾಯುತ್ತಾ ನನ್ನ ಅರ್ಧ ಜೀವವೇ ಹೋಯಿತು, ಆದರೆ ಈಗ ಮನೆಗೆ ಬಂದು ಹೀಗೆ ಹಿಂತಿರುಗಿ ಹೋದರೆ ನಿಮ್ಮ ಹೆಂಡತಿಯ ಗತಿಯೇನು? ಒಬ್ಬಳನ್ನೇ ಹೀಗೆ ಬಿಟ್ಟು ಹೋಗುವುದು ಸರಿಯೇ? ನಿಮಗಾಗಿ ಅಡುಗೆ ತಯಾರಿಸಿ, ಹಾಸಿಗೆ ತಯಾರಿಸಿ ಕಾಯುತ್ತಿರುವೆ. ಬನ್ನಿ ನನ್ನ ಬೆಚ್ಚಗೆ ನಿಮ್ಮ ಎದೆಯ ಮೇಲೆ ಮಲಗಿಸಿಕೊಳ್ಳಿ” ಎಂದಳು.
ಅವಳ ಗಂಡ ಗಾಬರಿಯಾಗಿ ಮೂರ್ಛೆ ಹೋದನು.
ಅವನನ್ನೂ ತನ್ನ ತೊಡೆಯ ಮೇಲೆ ಮಲಗಿಸಿಕೊಂಡ ಕ್ಷಮಾ ನಗುತ್ತಾ ತಲೆ ಸವರುತ್ತಾ.
“ನಿಮ್ಮನ್ನು ಅದೆಷ್ಟು ಪ್ರೀತಿಸಿದೆ? ಅದೆಷ್ಟು ಆಸೆಗಳ ರಾಶಿ ಕಟ್ಟಿ ನಿಮ್ಮ ಪೂಜೆ ಮಾಡಿದೆ? ತಂದೆ ತಾಯಿ ಎಲ್ಲರನ್ನೂ ಬಿಟ್ಟು ನಿಮ್ಮನ್ನೇ ನಂಬಿ ಇಷ್ಟು ದೂರ ಬಂದ ನನಗೆ ಏನೂ ಪ್ರೀತಿ ಇಲ್ಲಾ. ನಿಮ್ಮ ಸುಳ್ಳುಗಳನ್ನು ಸಂಶಯದಿ ನೋಡದೆ, ನಡುರಾತ್ರಿ ನಾನು ನಿದ್ದೆ ಹೋದ ತಕ್ಷಣ ನೀವು ನನ್ನ ಬಿಟ್ಟು ಅವಳ ಮನೆ ಹೊಕ್ಕಿದ್ದು, ಅವಳ ಜೊತೆ ಪ್ರೇಮ ಪ್ರಸಂಗ ತಿಳಿದು ನಾನು ಅಂದೇ ಸತ್ತೆ. ತವರಿಂದ ಬರುತ್ತಾ ಆಕೆಯ ಗೆಜ್ಜೆ ಸದ್ದು ನಮ್ಮ ಮನೆಯಲ್ಲಿ ಕೇಳಿತು. ಅಂದೂ ತಿಳಿಯದಂತೆ ತಡವಾಗಿ ಬಂದೆ. ದಿನ ಕಳೆದಂತೆ ಸಾವಿರಾರು ಸುಳ್ಳು. ಅಂದು ಒಬ್ಬಳ ಸ್ನೇಹ ಬರುತ್ತಾ ನೂರಾಯಿತು. ಆ ನಡುವೆಯಲ್ಲೂ ನನ್ನ ಬಸಿರು ಮಾಡಿ ನಿಮ್ಮ ಆಸೆ ತೀರಿಸಿಕೊಂಡು ನನ್ನ ಬಿಟ್ಟು ಹೋಗಿ ನಂತರ ಒಂದು ವಾರ ಬರಲಿಲ್ಲ. ನೀವೂ ಮನೆಯಲ್ಲಿ ಇಲ್ಲಾ ಎಂದು ತಿಳಿದು ಗಂಡಸರ ಕಿರುಕುಳ ತಾಳಲಾರದೆ ತವರಿಗೆ ಹೊರಟೆ ಆದರೂ ನಾನಿಲ್ಲದಾಗ ನೀವು ಬಂದರೆ ನಿಮ್ಮ ಊಟಕ್ಕೆ, ಸ್ನಾನಕ್ಕೆ ಕಷ್ಟವಾಗುತ್ತೆ ನಾನು ಏನಾದರು ಇಲ್ಲೆ ಇರುವುದು ಸರಿ ಎಂದು ನೋವಲ್ಲೇ ಕಾದೆ.
ನನಗೆ ನಿಮ್ಮ ವಿಷಯ ತಿಳಿದಿದೆ ಎಂದು ತಿಳಿದ ನೀವು ಮನೆಗೆ ನನ್ನ ಮುಂದೆ ಅವಳನ್ನು ಕರೆತಂದು ಅಸಭ್ಯವಾಗಿ ವರ್ತಿಸಿ ನಮ್ಮ ಕೊನೆಯಲ್ಲೇ ನಿಮ್ಮ ಪ್ರಣಯ ಪ್ರಸಂಗ. ಏನಾದರು ನೀವೇ ನನ್ನ ಗಂಡ ನಾನೇ ನಿಮ್ಮ ಹೆಂಡತಿ, ಎಂದು ಅವಳನ್ನು ಆಚೆ ತಳ್ಳಲು ನೋಡಿದರೆ ನೀವೂ ನನ್ನನ್ನೇ ಆಚೆ ಭಾವಿಗೆ ತಳ್ಳಿ ನಿಮ್ಮ ಆನಂದ ಲೋಕದಲ್ಲಿ ತೆಲಾಡಿ ನಲಿದೆರಿ. ಉಸಿರು ಕಟ್ಟಿ ಸಾಯುವಾಗ ನನ್ನ ನೋವು ಆ ದೇವರೊಬ್ಬ ಬಲ್ಲ”, ಕ್ಷಮಾ ದೊಡ್ಡದೊಂದು ನಿಟ್ಟುಸಿರು ಬಿಟ್ಟು,
“ಏಳಿ ಊಟ ಮಾಡಿ ವಿಶ್ರಾಂತಿಸಿ, ಪ್ರೀತಿ ಇಲ್ಲದ ಕಡೆ ಎಷ್ಟು ದಿನ ಇರುವುದು? ನಾನು ಹೋಗುತ್ತೇನೆ”.
ಹೀಗೆ ನುಡಿದ ಕ್ಷಮಾ ಕಾಣೆಯಾದಳು.
ಬೆಳಗ್ಗೆ ಊರಿನ ಜನ ಆಕೆಯ ಗಂಡನ ಶವವನ್ನು ಭಾವಿಯಿಂದ ತೆಗೆಯಲು ಪ್ರಯತ್ನಿಸುತ್ತಿದ್ದರು.
ಮುಗುವಂತೆ ಹೆಂಡತಿಯ ತೊಡೆಯ ಮೇಲೆ ಮಲಗಿದ್ದ ಅವನ ಸ್ಥಿತಿ ಬೆಳಗ್ಗೆ ಹೀಗೆ ಸಿಕ್ಕದ್ದು ಹೇಗೆ ಎನ್ನುವುದು ಆ ಶಿವನೊಬ್ಬನೇ ಬಲ್ಲ.