STORYMIRROR

Ramesh gundmi

Horror Tragedy Thriller

4  

Ramesh gundmi

Horror Tragedy Thriller

ಬೇಡ ಮಗಾ, ಬರಬೇಡ

ಬೇಡ ಮಗಾ, ಬರಬೇಡ

3 mins
413


ರಾತ್ರಿಯಿಡೀ ಮಳೆ ಸುರಿದು ಬೆಳಗಾಗಿತ್ತು. 

ಮಳೆಗಾಲದಲ್ಲಿ ಕರಾವಳಿಯ ಮಳೆ ಕೇಳಬೇಕೇ? ಬಿಡಲಾರದಂತೆ ಸುರಿದಿತ್ತು.

ಬೆಳಗು ಜೀವನದ ಜೀವಕಳೆ ತುಂಬಿತ್ತು.

ಬೆಳಗಾಗುದರೊಂದಿಗೆ ಜನರೆಲ್ಲರ ಬದುಕು ಕಟ್ಟಿಕೊಳ್ಳತೊಡಗುತ್ತದೆ.

ಅದೂ ಕರಾವಳಿಯ ಮೀನುಗಾರರು ಅರ್ಥಾತ್ ಮೊಗವೀರರಿಗೆ ಸಮುದ್ರವೇ ಆನ್ನ ಕೊಡುವ ದೇವತೆ.

ಆದರೆ ಅಂದಿನ ಮಟ್ಟಿಗೆ ಚನಿಯನ ಮನೆಯವರೆಲ್ಲರ ಪಾಲಿಗೆ ಅದೊಂದು ಕರಾಳ ಬೆಳಗು.


ಹಿಂದಿನ ರಾತ್ರಿ ಹಟಮಾಡಿ ಕೋಡಿಗೆ ಸಣ್ಣ ಬಲೆ ತರುತ್ತೇನೆಂದು ಹೊರಟ ಚನಿಯ ಹೆಣವಾಗಿ ಗಂಗೊಳ್ಳಿ ಕಡಲ ತೀರದಲ್ಲಿ ಸಿಕ್ಕಿದ್ದ.


ನೀರು, ಗಾಳಿ, ಬೆಂಕಿಯೆದುರು ಬೇರೇನೂ ಲೆಕ್ಕಕ್ಕಿಲ್ಲ ಅನ್ನುವ, ನಮ್ಮ ಊರು ಕಡೆ ಮಾತು ಎಂದೆಂದಿಗೂ ನಿತ್ಯ ಸತ್ಯ.


*********


ಅದೊಂದು ಮಳೆಗಾಲದ ಮಳೆ ಸುರಿದ , ಮತ್ತೂ ಸುರಿಯಬಹುದಾದ ಆಷಾಢ ರಾತ್ರಿ.

ಗಂಗೊಳ್ಳಿ ಅಳಿವೆ ಬಾಗಿಲಲ್ಲಿ ದೋಣಿ ಇಳಿಸಿ ಚನಿಯ ಯಾರು ಹೇಳಿದರೂ ಕೇಳದೇ ಕೋಡಿಗೆ ಹೊರಟ.

ಹಾಗೆ ಅಳಿವೆ ಬಾಗಿಲಲಿ ದೋಣಿ ನಡೆಸುವ ಎದೆಗಾರಿಕೆ ಮತ್ತು ಚಾಕಚಕ್ಯತೆ ಇರುವುದು ಇಡೀ ಗಂಗೊಳ್ಳಿ ಮೊಗವೀರ ಬಣದಲ್ಲಿ ಅಷ್ಟೇ ಏಕೆ ಸುತ್ತ ಮುತ್ತಲೂ ಊರಿನಲ್ಲೂ ಇವನೊಬ್ಬನೇ ಎನ್ನಬಹುದು.

ಆದರೂ ಅಂದು ವಿಪರೀತ ಮಳೆ ಯಾಗಿತ್ತು. ಮತ್ತು ಪುನಃ ಆಗುವ ಸಾಧ್ಯತೆಯೂ ಇತ್ತು.

ಕೋಡಿಯ ತನ್ನ ಮಾವನ ಮನೆಗೆ ಹೋಗಿ ತಾನು ಮರೆತು ಬಂದ ಸಣ್ಣ ಬಲೆಯನ್ನು ತರಲು ದೋಣಿ ರಾತ್ರಿ ಭರತದ (ಏರುವ) ನೀರಿಗೆ ಇಳಿಸಿದ್ದ.


ಆ ದಿನ ಅವನಿಗೆ ಕಾಲ ಕೂಡಿಬಂದಿತ್ತೋ ಏನೋ. ಎಲ್ಲರಿಗೂ ತಿಳಿದಿತ್ತು, ಆ ಅಳಿವೆ ಬಾಗಿಲಿನ ಅಂದಿನ ಮಳೆನೀರೂ ಸೇರಿದ ಭರತಕ್ಕೆ ಯಾವ ದೋಣಿಯೂ ತಡೆಯುವುದಿಲ್ಲ ಎಂದು. ಎದುರು ಮನೆ ಗೋವಿಂದಜ್ಜ, ಬೈದು, ಒಂದು ಪೆಟ್ಟೂ ಕೊಟ್ಟರು.

ತನಗೆ ಬೆಳಿಗ್ಗೆ ಆ ಬಲೆ ಬೇಕು ಎನ್ನುವ ಹಟದೊಂದಿಗೆ ಎದ್ದು ಬಿಟ್ಟಿದ್ದ.

 ವಯಸ್ಸಾದ ತಾಯಿ ರುಕ್ಕೂ ಎಷ್ಟೆಲ್ಲಾ ರೀತಿಯಲ್ಲಿ ತಡೆದರೂ ಕೇಳಲಿಲ್ಲ.


**********


ಚನಿಯನ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು.

ಆದರೂ ಹೋದ ಜೀವ ಏನೇ ಮಾಡಿದರೂ ಮರಳಿ ತರಲಾಗದು.


ಗೋವಿಂದಜ್ಜನಂತೂ ಬಿದ್ದು ಬಿದ್ದು ಆಳುತ್ತಿದ್ದರು. ಚನಿಯನನ್ನು ಸಣ್ಣಂದಿನಿಂದಲೂ ಎತ್ತಿ ಆಡಿಸಿ ಬೆಳೆಸಿದವರೇ ಆ ಎದುರು ಮನೆ ಗೋವಿಂದಜ್ಜ. ಗೋವಿಂದಜ್ಜನಿಗೆ ಮಕ್ಕಳಿರಲಿಲ್ಲ. ಅವನನ್ನು ತನ್ನ ಮಗನಂತಲೇ ಆಸೆ ಮಾಡುತ್ತಿದ್ದರು. ಊರಿನಲ್ಲಿ, ಸುತ್ತಮುತ್ತಲೂ ಊರಿನಲ್ಲಿ ಜಾತ್ರೆಗೆ ಹಬ್ಬಕ್ಕೆ ತೇರಿಗೆ ಅಂಥ ಕರೆದುಕೊಂಡು ಹೋಗಿ ಕೊಡಿಸಿದ್ದ ತಿಂಡಿ ತಿನಿಸು, ಆಟದ ಸಾಮಾನು, ಬಟ್ಟೆ ಬರೆಗಂತೂ ಲೆಕ್ಕವೇ ಇಲ್ಲ.


ಗೋವಿಂದಜ್ಜ ಅವನ ಆಟ ಪಾಟ ನಗುವು ನಲಿವು ಹೇಳಿ ಹೇಳಿ ಆಳುತ್ತಿದ್ದರು. ಚನಿಯನ ತಾಯಿ ರುಕ್ಕೂವನ್ನು ಸಮಾಧಾನ ಮಾಡುವುದಕ್ಕಿಂತಲೂ ಕಷ್ಟಕರವಾಯಿತು ಈ ಗೋವಿಂದಜ್ಜನನ್ನು ಸಮಾಧಾನ ಮಾಡುವುದು.


ಚನಿಯನ ಒಬ್ಬನೇ ಹದಿನಾಲ್ಕು ವರುಷದ ಮಗ ಕರಿಯ, ಅವನ ಮೈಬಣ್ಣವೇನೂ ಕಪ್ಪಾಗಿರಲಿಲ್ಲ ಆದರೆ ಅಮಾವಾಸ್ಯೆಯಂದು ಹುಟ್ಟಿದ್ದು ಅದಕ್ಕೆ ಹಾಗೆ ಹೆಸರಿಟ್ಟಿರಬೇಕು. ಚನಿಯನ ಹೆಂಡತಿ ಸುಂದ್ರಿ ಆದಿಯಾಗಿ ಎಲ್ಲರೂ ದುಃಖದ ಕಡಲಲ್ಲೇ ಮುಳುಗಿದ್ದರು.


ಸುತ್ತಲಿನವರಿಗೂ ಹಲವು ರೀತಿಯಲ್ಲಿ ಸಹಾಯ ಮಾಡುತ್ತಿದ್ದ ಚನಿಯ ಎಲ್ಲರಿಗೂ ಬೇಕಾಗಿದ್ದ. ಚನಿಯನ ಅಂತಿಮ ದರ್ಶನಕ್ಕೆ ಊರಿನ ಬಹಳಷ್ಟು ಜನವೇ ಸೇರಿದ್ದರು.


ಅಂತೂ ಚನಿಯನ ಜೀವಕ್ಕೆ ಅಂತಿಮ ವಿದಾಯ ಹೇಳಲಾಯಿತು.


*********


ಈಗ ಚನಿಯನ ಮಗ ಒಂದು ಹೊಸ ಪರಿಪಾಠ ಬೆಳೆಸಿಕೊಂಡಿದ್ದ. ರಾತ್ರಿ ಊಟ ಆದ ಮೇಲೆ, ತಂದೆಯ ಶವ ಸಿಕ್ಕ ಜಾಗದಲಿ ಕುಳಿತು ಬರುತ್ತಿದ್ದ.


ಸಮುದ್ರದ ಮೇಲಿನಿಂದ ತಂಗಾಳಿ ಬೀಸಿದಾಗೆಲ್ಲ ತಂದೆ ತನ್ನ ಮೈದಡವಿದಂಥ ಅನುಭೂತಿಯನ್ನು ಅನುಭವಿಸುತ್ತಿದ್ದ. ಆದರೆ ಈ ವಿಷಯವನ್ನು ಅದ್ಯಾರಿಗೂ ಹೇಳಲಿಲ್ಲ. ಹೇಳಿದರೆ ತನಗೆ ಸಮುದ್ರದ ಬದಿಗೆ ಹೋಗಲು ಬಿಡಲಿಕ್ಕಿಲ್ಲ ಅಂತ ಅನ್ನಿಸಿತ್ತು.


'ಅಲ್ಲೆಲ್ಲ ಹೋಗಿ ಸಮುದ್ರದ ಬದಿಗೆ ಕುಳಿತುಕೊಳ್ಳಬಾರದು. ಅಲ್ಲಿ ಕೆಲವು ಆತ್ಮಗಳು ತಿರುಗಾಡುತ್ತವೆ,' ಅಂದರೂ ಕೇಳದೇ ದಿನಾ ಅಲ್ಲಿ ಕುಳಿತು ರಾತ್ರಿ ಹನ್ನೆರೂವರೆ ಒಂದು ಘಂಟೆಗೆ ಮನೆಗೆ ಮರಳುತ್ತಿದ್ದ.


ಏನಾದ್ರೂ ತೊಂದರೆಯಾದೀತೆಂದು ಮೊದಲೆಲ್ಲ ಆರೆಂಟು ತಿಂಗಳು ಕೆಲವರು ಅವನ ಕಾವಲಿಗೆ ಹೋದರು. ಆದರೂ ದಿನನಿತ್ಯ ತಪ್ಪದೇ ಹೋಗುವವನ ಹಿಂದೆ ಹೋಗುವ ಜನ ಕಡಿಮೆಯಾಗುತ್ತ ಒಂದು ಹತ್ತು ತಿಂಗಳು ಕಳೆಯುವುದರಲ್ಲಿ ಅವನೊಬ್ಬನೇ ಹೋಗುವವನಾದ.

ಸುಮಾರು ಒಂದು ವರ್ಷ ಆದಾಗ ಅದೊಂದು ರಾತ್ರಿ, ಸಣ್ಣಗೆ ಮಳೆಯೂ ಬರು

ತ್ತಿತ್ತು. ಕರಿಯ ಅವತ್ತೂ ರಾತ್ರಿ ಊಟ ಆದ ಮೇಲೆ ದಿನವೂ ಹೋಗುವ ಹಾಗೆ ಸಮುದ್ರದ ಬದಿಗೆ ಹೊರಟು ನಿಂತಿದ್ದ. ತಾಯಿ ಸುಂದ್ರಿ ಎಷ್ಟೆಲ್ಲಾ ರೀತಿಯಿಂದ ಬೇಡ ಅಂದ್ರೂ ಕೇಳಲಿಲ್ಲ.


ಕರಿಯ ಒಬ್ಬನೇ ಹೋದ. ಮಳೆ ಬರುತ್ತಿತ್ತು. ಮಳೆ ಬಗ್ಗೆ ಚಿಂತೆ ಮಾಡುವ ಜನವಲ್ಲ, ಮೊಗವೀರರು. ಎಲ್ಲರೂ ತಂಗಾಳಿಯನ್ನು ಖುಷಿಯಿಂದ ಆಸ್ವಾದಿಸುವ ಹಾಗೆ ಅವರು ಮಳೆಯನ್ನೂ ಅಷ್ಟೇ ಖುಷಿಯಿಂದ ಆನಂದಿಸುತ್ತಾರೆ. 


ಮಳೆ ಬರುತ್ತಿದ್ದರೂ ಸಮುದ್ರ ತಟದಲ್ಲಿ ಕುಳಿತೇ ಇದ್ದ.

ಸಮುದ್ರದ ಭೋರ್ಗರೆತ, ಸಣ್ಣಗೆ ಮಳೆ ಹನಿಗಳು ಬೀಳುವ ಶಬ್ದ ಬಿಟ್ಟರೆ ಬೇರೇನೂ ಇಲ್ಲ. ಸುತ್ತಲೂ ಕತ್ತಲೆ. ಸಮುದ್ರದ ಬದಿಯೇ ನೋಡುತ್ತಿದ್ದ ಕರಿಯನಿಗೆ ಸಮುದ್ರದಲ್ಲಿ ಸುಮಾರು ಮುನ್ನೂರು ಅಡಿ ದೂರದಲ್ಲಿ ಒಂದು ಮನುಷ್ಯ ಆಕೃತಿ ಕಾಣಿಸಿತು. 


ಒಂದೇ ಸಾರಿ ಗಾಬರಿಯಾಯಿತು.

ಓಡಲೆತ್ನಿಸಿದರೂ ಉಂಹುಂ, ಕಾಲೇ ಬರುತ್ತಿಲ್ಲ. 

ಗಟ್ಟಿಯಾಗಿ ಕೂಗಬೇಕೆಂದರೂ ಬಾಯಿಯೇ ಹೊರಡುತ್ತಿಲ್ಲ. ಈಗೇನೋ ಆಗಿ ತಾನು ಸಾಯುತ್ತೇನೆ ಅನ್ನೋದಂತೂ ಖಾತ್ರಿಯಾಯಿತು.

ಸುಮ್ಮನೆ ಕುಳಿತುಬಿಟ್ಟ.

ಮೈಯೆಲ್ಲ ನಡುಗು, ಮಳೆ ನೀರಿನಿಂದಲ್ಲ, ಎದೆಯಲ್ಲಿ ಹುಟ್ಟಿದ ನಡುಕು. ಇರುವ ತೆಳು ರೋಮಗಳು ಕೂಡ ಗಟ್ಟಿಯಾಗಿ ನಿಂತಿವೆ. ಅಂದ್ರೆ ಕೈ ತಾಗಿದಲ್ಲೆಲ್ಲ ರೋಮದ ನಿಮಿರುವಿಕೆ ಗೊತ್ತಾಗುತ್ತಿದೆ.

ಅಂಥ ಭಯದಲ್ಲೂ ರೋಮ ಹಾಗೆ ಬಿರುಸಾದದ್ದು ಅವನಿಗೊಮ್ಮೆ ಆಶ್ಚರ್ಯವಾಯಿತು.

ಆ ಆಕೃತಿ ಮುಂದೆ ಮುಂದೆ ಬರುತ್ತಿತ್ತು. 

ಆ ಆಕೃತಿ ಹತ್ತಿರವಾದಂತೆ ಕರಿಯನ ಭಯ ಕಡಿಮೆಯಾಯಿತು.

ಆ ಆಕೃತಿ ಸಾಕ್ಷಾತ್ ಚನಿಯ.

ಈಗ ಕರಿಯನಿಗೆ ಹೆದರಿಕೆ ಇಲ್ಲದಂತೇ ಆಯಿತು.

ಅದು ಏನೇ ಇದ್ರೂ ತನ್ನ ಅಪ್ಪಯ್ಯ ಅನ್ನೋದೇ ಧೈರ್ಯ.

ಈಗ ಚನಿಯ ಕರಿಯನ ಹತ್ತಿರವೇ ಬಂದ.

ಚನಿಯ ಬಂದು ಕರಿಯನ ಮೈದಡವಿದ.


ಹೌದು, ಅವನು ಮೈ ಮುಟ್ಟಿದ್ದು ಕರಿಯನಿಗೆ ಗೊತ್ತಾಗ್ತಾ ಇದೆ ಆ ಸ್ಪರ್ಶ.

ಯಾರೋ ಹೇಳಿದ್ದು ಕೇಳಿದ್ದ, " ಪ್ರೀತಿಪಾತ್ರರು ಯಾವುದೇ ದೇಹ ಸೇರಿದ್ದರೂ ರಾತ್ರಿ ಅವರ ನಿದ್ದೆಯಲ್ಲಿ ಅವರ ಶರೀರ ಬಿಟ್ಟು ಹೊರಗೆ ಬಂದಾಗ ಅವರ ಪ್ರೀತಿಪಾತ್ರರ ಮೈ ಮುಟ್ಟಿದರೆ ಆ ಸ್ಪರ್ಶ ಅನುಭವವಾಗುತ್ತದೆ ಎಂದು.

ಹಾಗಾದರೆ ಅಪ್ಪಯ್ಯ ಈಗ ಬೇರೆ ಯಾವುದೋ ಜೀವ ಸೇರಿದ್ದಾರೆ.

"ಅಪ್ಪಯ್ಯ" ಅಂದ ಕರಿಯ.

" ಮಗಾ ಚೆನ್ನಾಗಿದ್ದೀಯಾ"

",ಇದ್ದೆ ಅಪ್ಪಯ್ಯ" ಹೀಗೆ ಹೇಳ್ತಾ ಇರೋವಾಗ ಚನಿಯ ಮಗನ ತಲೆಯಲ್ಲಿ ಕೈಯಾಡಿಸುತ್ತ ಇದ್ದ.

ಕರಿಯನಿಗೆ ಜೀವಂತ ಅಪ್ಪ ಮುಟ್ಟಿದಾಗ ಆಗುವ ಹಾಗೆ ಅನುಭೂತಿ ಆಯಿತು. ತೀರ ಅಷ್ಟೊಂದು ಮುಟ್ಟಿದ್ದು ಅನ್ನುವ ಹಾಗಿಲ್ಲದಿದ್ದರೂ, ಮುಟ್ಟಿದ್ದಂತೂ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.

ಸ್ವಲ್ಪ ಹೊತ್ತು ಮೈದಡವಿದ ಚನಿಯ, "ನಾನಿನ್ನು ಬರ್ತೇನೆ ಮಗಾ, " ಅನ್ನುತ್ತ 'ತನ್ನ ಈಗಿನ ದೇಹ ಎಚ್ಚರಗೊಳ್ಳಬೇಕು, ಅದಕ್ಕೆ ಚನಿಯ ಅಲ್ಲಿ ಸೇರಲೇ ಬೇಕು' ಅನ್ನುವ ತರಾತುರಿಯಲ್ಲಿ ಹೊರಟ.

"ಅಪ್ಪಾ ನಾನೂ ಬರ್ತೇನೆ" ಅಂತ ಎದ್ದ.

"ಬೇಡ ಮಗಾ, ಬರಬೇಡ...." ಅನ್ನುತ್ತ ಚನಿಯ ಹೋಗಿ ತನ್ನ ಈಗಿನ ಜೀವ ಸೇರುವ ಗಡಿಬಿಡಿಯಲ್ಲಿ ಹೋಗುತ್ತ, ಮಗನಿಗೆ ಬೇಡವೆಂದು ಹೇಳುತ್ತಿದ್ದರೂ, ಕರಿಯ ಮುನ್ನುಗುತ್ತಿದ್ದ.

" ಅಯ್ಯೋ, ಬೇಡಾ.........ಆಆ ಆ" ಅಂತ ಹೇಳುತ್ತಾ ಚನಿಯ ಅದೃಶ್ಯವಾಗಿದ್ದ.

ಕರಿಯ ದೊಡ್ಡ ತೆರೆಗೆ ಸಿಲುಕಿ ಮುಳುಗಿದ್ದ.


*********


ಮಳೆಗಾಲದ ಮುಂಜಾನೆ.

ಸೂರ್ಯನು ಹೊಸದೊಂದು ದಿನಕ್ಕೆ ಮುನ್ನುಡಿ

ಬರೆಯುತ್ತಿದ್ದ.


ಚನಿಯನ ಹೆಣ ಸಿಕ್ಕಲ್ಲೆ ಸರಿಯಾಗಿ ಒಂದು ವರ್ಷಕ್ಕೆ ಕರಿಯನೂ ಶವವಾಗಿ ದಡದಲ್ಲಿ ಬಿದ್ದಿದ್ದ.


ಗೋವಿಂದಜ್ಜ ಈಗಂತೂ ಕಂಗಾಲಾಗಿ ಹೋದರು.

ಮಗನೇ ಆಗಿದ್ದ ಚನಿಯನನ್ನು ಹಿಂದಿನ ವರ್ಷ ಕಳಕೊಂಡರೆ, ಈ ವರ್ಷ ಕರಿಯನೂ ಇಲ್ಲ.

"ದೇವ್ರೇ, ಈ ಮುದುಕನಿಗೆ ಯಾಕಾದ್ರೂ ಜೀವ ಇಟ್ಟಿದ್ಯೋ" ಅಂತ , ಕರಿಯನ ದೇಹದ ಮೇಲೆ ತಲೆ ಇಟ್ಟು ಬೋರ್ಗುಟ್ಟಿ ಅತ್ತರು ಗೋವಿಂದಜ್ಜ.

ಮನೆ ಕೇರಿಯಲ್ಲ ಶೋಕದಲ್ಲೇ ಮುಳುಗಿತು.

'ಈ ಮನೆಗೇ ಏನೋ ಶಾಪಾ ತಾಗಿತು' ಅಂತ ಕೆಲವರಂದ್ರೆ,

'ಅಯ್ಯೋ, ಇಬ್ಬರೂ ಹೇಳಿದ್ದು ಕೇಳದೇ ಸುಮ್ನೆ ಜೀವ ಕೊಟ್ರು' ಅಂತಾನೂ ಕೆಲವರಂದ್ರು.


ಗೋವಿಂದಜ್ಜನೂ ಅತ್ತು ಅತ್ತು ಕರಿಯನ ಎದೆ ಮೇಲೆ ತಲೆ ಇಟ್ಟವರು ಮೇಲೆತ್ತಲೇ ಇಲ್ಲ.


ಆ ಹಳೆಯ ಜೀವವೂ ಶೋಕಿಸುತ್ತ ಸಾವನ್ನಪ್ಪಿತ್ತು.


ಮುಗಿಯಿತು.




 





 



Rate this content
Log in

Similar kannada story from Horror