ಒಂಟಿ ಹಕ್ಕಿಯ ಹಾಡು
ಒಂಟಿ ಹಕ್ಕಿಯ ಹಾಡು


ಸ್ಮೃತಿ ಈಗ ರಿಟೈರ್ಡ್ ಆದ ಒಬ್ಬ ಮಹಿಳೆಯರ ಡಾಕ್ಟರ್. ಒಳ್ಳೆ ಪಿಂಚಣಿ ಇದೆ. ಒಂದು ಕ್ಲಿನಿಕ್ ಕೂಡ ನಡೆಸುತ್ತಿದ್ದಾಳೆ. ಒಳ್ಳೆ ಪ್ರಾಕ್ಟೀಸ್ ಮಾಡಿ ಹೆಸರು ಮಾಡಿದ ಡಾಕ್ಟರ್. ಸಾಕಷ್ಟು ದುಡ್ಡೂ ಮಾಡಿದ್ದಾಳೆ.
ಆದರೇನು ಅವಳ ಸ್ವಂತ ಜೀವನಕ್ಕೆ ಅರ್ಥವಿಲ್ಲವಾಗಿದೆ. ಕ್ಲಿನಿಕ್ನಲ್ಲಿ ಎದುರಿನ ಗ್ಲಾಸ್ ಕಪಾಟಿನಲ್ಲಿ ತುಂಬಿಸಿಟ್ಟ ಪದಕಗಳು ಶೀಲ್ಡ್ಗಳು ಫ್ರೇಮ್ ಹಾಕಿದ ಸರ್ಟಿಫಿಕೇಟ್ಗಳು. ಆದರೆ ಮನಸೋ ಖಾಲಿ ಖಾಲಿ. ಅಲ್ಲಿ ಹೃದಯವಿದೆಯೋ ಇಲ್ಲವೋ ಅವಳಿಗೇ ಗೊತ್ತಿಲ್ಲ. ಏಕೆಂದರೆ ಅಲ್ಲಿ ಭಾವನೆಗಳೇ ಇಲ್ಲದೇ ಒಣಗಿದ ಬರಡು ಭೂಮಿಯಾಗಿದೆ.
ಮದುವೆಯಾಗಿ ಚಿನ್ನದಂತಹ ಗಂಡನನ್ನೂ ಹೊಂದಿ ಒಂದು ಗಂಡು ಮಗುವನ್ನೂ ಪಡೆದ ಆಕೆ ಜೀವನದಲ್ಲಿ ಅದೇನು ಶಕ್ತಿ ಆವಾಹಿಸಿತೋ ಗಂಡನೊಡನೆ ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟು ಬೇರೆಯಾದ ಸ್ಮೃತಿ ಗಂಡನನ್ನು ತಿರುಗಿ ನೋಡಿದ್ದೇ ಇಲ್ಲ. ಗಂಡ ಒಬ್ಬ ಎಂಜಿನೀರಿಂಗ್ ಕಾಲೇಜ್ ಲೆಕ್ಚರರ್, ಸಂಕೇತ್. ಈಗ ಅವನೂ ರಿಟೈರ್ಡ್. ಅವನಿಗೂ ಒಳ್ಳೆ ಪಿಂಚಣಿ ಇದೆ.
ಬೇರೆಯಾದಾಗ ಮಗು ಸುಮೇಧ್ ನಿಗೆ ಎರಡು ವರ್ಷ. ಮಗುವನ್ನು ಬಿಟ್ಟುಕೊಡಲೊಪ್ಪದ ಸಂಕೇತ್ ತಾನು ಅವನನ್ನು ಬೆಳೆಸಿ, ಈಗ ಅವನೂ ಡಾಕ್ಟರ್. ಅವನೂ ತಾಯಿಯನ್ನು ಹತ್ತು ವರ್ಷದ ನಂತರ ನೋಡಿದ್ದಿಲ್ಲ. ಹಾಗೆ ಮಗುವನ್ನು ನೋಡಲು, ತಿಂಗಳಿಗೊಮ್ಮೆ ಒಂದು ಗೊತ್ತಾದ ಸ್ಥಳದಲ್ಲಿ ಬಂದು ನೋಡಬಹುದು ಎನ್ನುವ ಕೋರ್ಟಿನ ಅವಕಾಶ ಇದ್ದರೂ ಬಂದು ನೋಡಿದ್ದು ಕೇವಲ ಎರಡು ಸಾರಿ ಮಾತ್ರ. ಅಂದರೆ ಅವಳಿಗೆ ಮಗನ ಬಗ್ಗೆ ಆಸ್ಥೆಯೇ ಇರಲಿಲ್ಲ, ಆಸೆಯೂ ಇರಲಿಲ್ಲ ಎನ್ನಬಹುದು. ಕಾರಣ, ಅಲ್ಲಿಯ ಒಬ್ಬ ಡಾಕ್ಟರ್ ಕಿಶನ್.
ಹೌದು, ಅವನೊಂದಿಗೆ ಎಲ್ಲ ಬಗೆಯ ಸಂಬಂಧ ಬೆಳೆಸಿಕೊಂಡ ಸ್ಮೃತಿ, ನಿಧಾನದಲ್ಲಿ ಗಂಡನಿಂದ ಬೇರೆಯಾಗಲು ನೂರೆಂಟು ಕಾರಣ ಹುಡುಕಿದ್ದಳು. ಇದನ್ನು ಮನಗಂಡ ಸಂಕೇತ್, ಅವಳ ಮನಸ್ಸನ್ನು ಗ್ರಹಿಸಿ, ಅವಳು ಬೇರೆಯಾಗಲು ಒಪ್ಪಿಗೆ ಸೂಚಿಸಿದ್ದ. ಕಿಶನ್ ಒಬ್ಬ ಡಾಕ್ಟರ್ ಆಗಿಯೂ ಮದುವೆಯಾದ ಹೆಣ್ಣಿನೊಡನೆ ಸಂಬಂಧ ಬೆಳೆಸುವಷ್ಟು ನೀತಿಗೆಟ್ಟಿದ್ದರೆ, ಅವನ ಸಂಪರ್ಕದಲ್ಲಿಯೇ ಉಳಿಯಲು ಇಷ್ಟಪಡುವ ತನ್ನ ಹೆಂಡತಿ ಸ್ಮೃತಿಯ ಬಗ್ಗೆಯೇ ಹೇಸಿಗೆ ಉಂಟಾಗಿತ್ತು.
ಆದರೆ ಸ್ಮೃತಿ ಅವನೊಂದಿಗೆ ಕೂಡ ಚೆನ್ನಾಗಿರದೇ ದೂರವಾಗಿದ್ದಳು. ಅಥವಾ ಅವಳೇ ಕೆಲವು ಗೊತ್ತಿದ್ದವರೊಂದಿಗೆ ಹೇಳಿದಂತೆ ಅವನೇ ಅವಳನ್ನು ದೂರ ಮಾಡಿ ಬೇರೆ ಮದುವೆಯನ್ನೇ ಆಗಿದ್ದ. ಸ್ಮೃತಿ ಎಷ್ಟೆಲ್ಲಾ ಹಾರಾಡಿದರೂ ನಂತರ ಏನೂ ಮಾಡಲಾಗಲಿಲ್ಲ ಅನ್ನೋದು ಇರೋ ಸತ್ಯ.
ಇದೆಲ್ಲ ಆಗಲು ಕಾರಣವೆಂದರೆ, ಸ್ಮೃತಿಯ ತಾಯಿ, ನಳಿನಿ. ಮಗಳು ಗಂಡನಿಂದ ಬೇರೆಯಾಗಲೂ ಅವಳದ್ದೇ ಒತ್ತಾಸೆಯಿತ್ತು. ಅವಳೊಂದು ರೀತಿಯ ಜಿಗಣೆ. ಮಗಳ ದುಡ್ಡಿನ ಮೇಲೆ ಜೀವಿಸುವ ಪರಾವಲಂಬಿ. ಹಾಗಂತ ಅವಳ ಗಂಡನ ಪಿಂಚಣಿಯ ಅನುಕೂಲತೆ ಇದೆ. ಗಂಡ ಮಾಡಿದ ಮನೆಯೂ ಇದೆ. ಆದರೆ ಅವಳ ಫ್ಯಾಶನ್ ಪರೇಡಿಗೆ ಹಣ ಸಾಕಾಗುವುದಿಲ್ಲ. ತನ್ನ ಮಗಳಂತೆಯೇ ಡ್ರೆಸ್ ಮೇಕಪ್ ಎಲ್ಲಾ ಆಗ್ಬೇಕು. ಹೆಚ್ಚೂ ಕಡಿಮೆ ದಿನವೂ ಹೋಟೆಲ್ ನಲ್ಲಿಯ ತಿಂಡಿಗಳೂ ನಾನ್ ವೆಜ್ ಊಟ ಆಗಬೇಕು. ಹೀಗೆ ದಿನ ಕಳೆಯಲು ಆ ಗಂಡನ ಪಿಂಚಣಿ ಎಲ್ಲಿಗೆ ಸಾಕಾಗುತ್ತೆ? ಅದಕ್ಕಾಗಿ ಮಗಳ ದುಡ್ಡನ್ನು ನೆಚ್ಚಿಕೊಂಡ ಈ ಮಹಾತಾಯಿಗೆ, ಮಗಳ ಸಂಸಾರ ನಡೆಯಬೇಕು ಅನ್ನುವ ವಿಚಾರಕ್ಕಿಂತಲೂ ತಾನು ಮಜವಾಗಿರಬೇಕು ಅನ್ನುವ ವಿಚಾರ ಮುಖ್ಯವಾಯಿತು.
ಸಂಕೇತ್ ನನ್ನು ದೂರ ಮಾಡಿ, ಮೊಮ್ಮೊಗನನ್ನು ದೂರವಿಟ್ಟು ತಾನು ಅವಳ ದುಡ್ಡಲ್ಲಿ ಮೋಜು ಮಾಡುತ್ತಾ, ಕಿಶನ್ ಕೂಡ ಹೋಗುವ ಬಗ್ಗೆ ತಾಯಿಯಾದವಳದ್ದು ಏನೂ ತೊಂದರೆಯಿಲ್ಲ ಎನ್ನುವಾಗ ಸ್ಮೃತಿಯೂ ನೀತಿ ನಿಯಮಗಳನ್ನು ಗಾಳಿಗೆ ತೂರಿ ಅವನೊಂದಿಗೆ ಜೀವನ ಸಾಗಿಸತೊಡಗಿದಳು. ಇದು ಯಾವ ರೀತಿ ಅಂತ ಗೊತ್ತಾಗೋಲ್ಲ.
ಉತ್ತರ ಕರ್ನಾಟಕದಲ್ಲಿ ಕೆಲವು ಕಡೆ ಕೂಡಿಕೆ ಅನ್ನೋ ಒಂದು ಕ್ರಮವಿತ್ತು. ಯಾವನೋ ದುಡ್ಡುಳ್ಳವನು, ಬಡ ಮನೆಯ ಒಂದು ಹುಡುಗಿ
ಗೆ ಅಥವಾ ದೇವದಾಸಿ ಹುಡುಗಿಗೆ ಬಾಳು ಕೊಟ್ಟು ಕೆಲ ವರುಷ ಬಾಳ್ವೆ ನಡೆಸುವುದು. ಅದಕ್ಕೂ ಏನೂ ಅರ್ಥವಿಲ್ಲ.
ಈಗ ಪಾಶ್ಚಾತ್ಯ ಅನುಕರಣೆಯಿಂದ ಹೊಸ ಟ್ರೆಂಡ್ ಒಂದಿದೆ, ಲಿವಿಂಗ್ ಟು ಗೆದರ್. ಅಂದರೆ ಒಬ್ಬರಿಗೊಬ್ಬರು ಹೊಂದಿಕೊಳ್ಳು ವರೆಗಿದ್ದು, ಬೇಡಾದಾಗ ಬೇರೆಯಾಗುವುದು. ಇದು ಬೇರೆಯಾಗುವುದನ್ನು ಖಚಿತವಾಗಿಟ್ಟೆ ಕೂಡಿ ಇರುವುದು. ಇದೊಂದು ರೀತಿಯ ಮೂರ್ಖತೆ.
ಇತ್ತ ಸಂಕೇತ್, ಮಗ ಸುಮೇಧನನ್ನು ತಾನೇ ಸಾಕುತ್ತೇನೆ ಎಂದಾಗ ತನ್ನ ತಂದೆ ತಾಯಿ ಹತ್ತಿರ ಬಿಟ್ಟಿದ್ದ. ಆದರೆ ಒಮ್ಮೆ ಊರಲ್ಲಿಯ ಮನೆಗೆ ಹೋದಾಗ ಕೆಲವು ಹಿರಿಯರು ಸೇರಿ, ಇನ್ನೂ ವಯಸ್ಸಿರುವ ಸಂಕೇತ್ ನಿಗೆ ಅವನ ಸೋದರತ್ತೆ ಮಗಳು ಸೀಮಾಳನ್ನು ಮದುವೆಯಾಗಲು ಪ್ರಸ್ತಾಪಿಸಿದಾಗ, ಮತ್ತೆ ಹೊಸ ತೊಂದರೆಗಳು ಬೇಡವೇ ಬೇಡ ಅಂದರೂ ಪರಿಸ್ಥಿತಿಯನ್ನು ತಿಳಿಸಿ, " ನೋಡು ಸಂಕೇತ್, ಈಗ ಇನ್ನೂ ಸಣ್ಣ ವಯಸ್ಸು. ಈಗ ನಿನ್ನ ತಂದೆ ತಾಯಿ ನೋಡಿಕೊಳ್ಳುತ್ತಾರೆ, ಸರಿ. ಮುಂದೆ ಅವರಿಗೇ ನೋಡಿಕೊಳ್ಳಬೇಕಾದ ವಯಸ್ಸಿಗೆ ಅವರು ಬಂದಾಗ, ಸುಮೇಧನನ್ನು ಯಾರು ನೋಡಿಕೊಳ್ಳಬೇಕು " ಅಂತ ಹೇಳಿ ಒಪ್ಪಿಸಿ ಬಿಡುತ್ತಾರೆ.
ಮನೆ ತುಂಬಿದ ಸೀಮಾ ಬೆಂಗಳೂರಿನ ಡಾಕ್ಟರ್ ಮನೆಯಲ್ಲಿ ಸುಮೇಧನಿಗೆ ತಾಯಿಯಾಗಿ ಜೀವನ ಆರಂಭಿಸುತ್ತಾಳೆ.
ಸ್ವಂತ ತಾಯಿಯಾಗಿ ನೋಡಿಕೊಳ್ಳಬೇಕಾಗಿದ್ದ ಸ್ಮೃತಿ, ಸಂಕೇತ್ ನ ಸ್ಮೃತಿಪಟಲದಲ್ಲಿ ಸಂಕೇತಕ್ಕಾಗಿಯೂ ಇರದಂತೆ ಅಳಿಸಿಹೋಗಿಬಿಡುತ್ತಾಳೆ. ಸಾಕಷ್ಟು ಒಳ್ಳೆ ಮಟ್ಟಿಗೆ ಸೀಮಾ ಸುಮೇಧನನ್ನು ನೋಡಿಕೊಳ್ಳುತ್ತಾಳೆ. ಸೀಮಾ ಸುಮೇಧನಿಗೆ ಸ್ವಂತ ತಾಯಿಯೇ ಆಗಿಬಿಡುತ್ತಾಳೆ. ಅವನಿಗೆ ತನ್ನ ಅಮ್ಮನ ನೆನಪೆಂದೂ ಬರುವುದೇ ಇಲ್ಲ.
ಈಗ ಕಾಲಕ್ರಮೇಣ ಸೀಮಾಳ ಬದುಕಿಗೂ ಅರ್ಥಕೊಡುವ ವಿಚಾರ ಮಾಡಿದ ಸಂಕೇತ್ ಅವಳಿಂದ ಮಗಳು ಶೋಭಾಳನ್ನು ಹೊಂದಿರುತ್ತಾನೆ. ತನ್ನ ಮಗಳು ಹುಟ್ಟಿದ ನಂತರವೂ ಅದೇ ಪ್ರೀತಿಯನ್ನು ಕೊಟ್ಟು ಸುಮೇಧನನ್ನು ಬೆಳೆಸುವುದು ಮನೆಯಲ್ಲಿನ ಆನಂದ ಉಳಿಯುವಂತೆ ಮಾಡುತ್ತದೆ. ಈಗ ನಿಜವಾಗಿಯೂ ಸಂಕೇತ್ ನಿಗೆ ತನ್ನ ಜೀವನ ಸಾರ್ಥಕವೆನ್ನಿಸುತ್ತದೆ. ಶೋಭಾಳನ್ನು ಅವಳ ಇಚ್ಛೆಯಂತೆ ಎಂಜಿನೀರಿಂಗ್ ಓದಿಸುತ್ತಾರೆ.
ಒಂದು ದಿನ ಪಾರ್ಕಿನ ಒಂದು ಬೆಂಚಿನ ಮೇಲೆ ಕುಳಿತ ಸ್ಮೃತಿ,
ಸಂಕೇತ್, ಸೀಮಾ, ಸುಮೇಧ, ಶೋಭಾ ಹೋಗುವುದು ನೋಡಿ ಸಂಕೇತ್ನನ್ನು ಗುರುತಿಸುತ್ತಾಳೆ. ಅವಳ ಜೀವನ ತೀರ ಕಾಣದ ಹಡಗು. ಸಂಕೇತ್ ನನ್ನು ನೋಡಿ ಮುಖ ಕೆಳಗೆ ಮಾಡುತ್ತಾಳೆ. ಸಂಕೇತ್ ಏನೂ ಅವಳೆಡೆ ನೋಡಿರುವುದೇ ಇಲ್ಲ. ತನ್ನ ಹೆಂಡತಿ ಮಕ್ಕಳೊಂದಿಗೆ ಸಂತೋಷದಲ್ಲಿ ಮಾತಾಡುತ್ತಾ ನಗುತ್ತ ತಮಾಷೆ ಮಾಡುತ್ತ ಹೋಗುತ್ತಿರುತ್ತಾನೆ.
ತನ್ನ ಅಷ್ಟೋಳ್ಳೆ ಸಂಸಾರವಾಗುವುದನ್ನು ತಾನೇ ಹಾಳುಮಾಡಿಕೊಂಡು ಅದ್ಯಾವುದೋ ಹುಚ್ಚಿನಲಿ ಕಿಶನ್ ಹಿಂದೆ ಹೋದದ್ದನ್ನೂ, ಅವನೂ ತನಗಿಷ್ಟ ಬಂದಷ್ಟು ಉಪಯೋಗಿಸಿ ತನ್ನನ್ನು ದೂರ ಮಾಡಿದ್ದನ್ನು ವಿಚಾರಿಸುತ್ತ ಸ್ಮೃತಿ ಮರುಗುತ್ತಾಳೆ.
ಈಗ ಅವಳಮ್ಮನೂ ಇಲ್ಲ. ಗಂಡನಿಂದಲೂ ಬೇರೆ. ಅವನ್ಯಾವನ ಹಿಂದೆ ಹೋದಳೋ, ಅವನೂ ತನ್ನದೇ ಸಂಸಾರ ಮಾಡಿಕೊಂಡು ತನ್ನದೇ ಲೋಕದಲ್ಲಿದ್ದಾನೆ.
ಈಗ ಸ್ಮೃತಿ ಅಕ್ಷರಶಃ ಒಂಟಿ. ಒಂಟಿ ಹಕ್ಕಿ ತನ್ನವರಿಂದ ಬೇರೆಯಾಗಿ ತನಗೂ ರೆಕ್ಕೆಯಿದೆ, ತನ್ನಷ್ಟಕ್ಕೆ ಇರಬಲ್ಲೆ ಅಂದುಕೊಂಡು, ಎತ್ತಲೋ ಹಾರುತ್ತ ಹಾರುತ್ತ ಕೊನೆಗೊಮ್ಮೆ ಒಂದ್ಯಾವುದೋ ಒಣ ಮರದ ಮೇಲೆ ಕುಳಿತು ಯೋಚಿಸುತ್ತಲ್ಲ ಹಾಗಾಗಿದೆ ಸ್ಮೃತಿಯ ಸ್ಥಿತಿ.
ಒಂಟಿಹಕ್ಕಿಯೇನು ಹಾಡೀತು
ನೋವೇ ರಾಗವಾಗಿ ಹೊಮ್ಮೀತು
ಇರುವ ದಿನಗಳನು ಕಳೆಯಬೇಕಲ್ಲ
ಜೀವನಕೆ ಅರ್ಥವಿಲ್ಲದಾಯಿತಲ್ಲ.
ಜೀವನದಲ್ಲಿ ಎಲ್ಲೋ ಏನೋ ಸುಖವಿದೆಯಂದು ಹುಡುಕುತ್ತ ಹೋಗುವುದಾಗಲಿ, ಸಂಸಾರದಲಿ ನನ್ನ ಬಿಟ್ಟರಿಲ್ಲ ಎನ್ನುವ ಗರ್ವ ಮಾಡಿಕೊಳ್ಳುವುದಾಗಲಿ ಮಾಡಿದರೆ, ಸ್ವನಾಶಕ್ಕೆ ದಾರಿ.