Ramesh gundmi

Abstract Classics Inspirational

4  

Ramesh gundmi

Abstract Classics Inspirational

ಪವಿತ್ರ ಪ್ರೇಮ

ಪವಿತ್ರ ಪ್ರೇಮ

2 mins
445


ಹುಬ್ಬಳ್ಳಿಯ ಇಂದಿರಾ ಗಾಜಿನಮನೆಯಲ್ಲಿ ಚಿತ್ರ ಪ್ರದರ್ಶನ ಮತ್ತು ಮಾರಾಟ.

ಹೌದು. ಇದು ಅವನದೇ ಚಿತ್ರ ಪ್ರದರ್ಶನ. 

ಚಿತ್ರದ ಕೆಳಗೆ "ವರ್ಣಚಿತ್ರ" ಅಂತ ಹೆಸರು ಬರೆಯುವುದು ಅವನು ಮಾತ್ರ. ಅವನದೇ ಛಾಪು ಕಾಣಿಸುತ್ತದೆ. ಹಾಗೇ ಒಳಗೆ ಹೋದಳು ಸುಚಿತ್ರ. 

ಮೇಲೆ ದೊಡ್ಡ ಅಕ್ಷರದಲ್ಲಿ ಬರೆದಿದ್ದಾರೆ " ಸುವರ್ಣ ಅವರ ಚಿತ್ರ ಪ್ರದರ್ಶನ "

ಅವನದೇ ಚಿತ್ರ ಪ್ರದರ್ಶನ ಅಂತ ಸುಚಿತ್ರಳಿಗೆ ಖಾತ್ರಿ ಆಯಿತು. ಸುತ್ತಲೂ ಕಣ್ಣಾಡಿಸಿದಳು. ಎಲ್ಲೂ ಅವನ ಸುಳಿವಿಲ್ಲ. ಅಲ್ಲಿಯೇ ಜನರ ಮೇಲೆ ನಿಗಾ ಇಟ್ಟ ಹುಡುಗನ ಹತ್ತಿರ ಕೇಳಿದಳು, "ಆರ್ಟಿಸ್ಟ್, ಎಲ್ಲಿ ಇದ್ದಾರೆ" ಅಂತ. " "ಮೇಡಮ್, ಅವರು ಜಸ್ಟ್ ಹೊರಗೆ ಹೋದರು. ಬರುತ್ತಾರೆ. ಯಾವುದೇ ಚಿತ್ರ ಬೇಕಾಗಿತ್ತಾ? " ಅಂತ ಅವಳ ಮುಖ ನೋಡಿದ.

 "ಇಲ್ಲ, ಹಾಗೇ ಕೇಳಿದೆ" ಅನ್ನುತ್ತಾ ಚಿತ್ರ ನೋಡುವುದರಲ್ಲಿ ತೊಡಗಿದಳು. 

ಮನಸ್ಸು ಹತ್ತು ವರ್ಷ ಹಿಂದೆ ಓಡಿತು. ಆಗ ಅವನು ಕೆಂಗೇರಿಯಲ್ಲಿ ತನ್ನ ಆರ್ಟ್ಸ್ ಕ್ಲಾಸ್ ಮಾಡುತ್ತಿದ್ದ. ಅವನಿಗೆ ಆಗ ಸುಮಾರು ಇಪ್ಪತ್ತೈದು ವರ್ಷ. ಸುಚಿತ್ರಳಿಗೆ ಇಪ್ಪತ್ಮೂರು. ಅವಳು M. Com ಮುಗಿಸಿ ಟ್ಯಾಲಿ ಕ್ಲಾಸ್ ಗೆ ಹೋಗುತ್ತಿದ್ದಳು. ಅದು ಅವನ ಆರ್ಟ್ಸ್ ಕ್ಲಾಸ್ ಪಕ್ಕದಲ್ಲೇ ಇತ್ತು. ಅವನು ತುಂಬಾ ಭಾವನಾಜೀವಿ. ತುಂಬಾ ಆಕರ್ಷಕ ವ್ಯಕ್ತಿತ್ವ. ಆರು ಅಡಿ ಎತ್ತರ. ಒಳ್ಳೇ ಮೈಕಟ್ಟು. ಹಾಗೆ ಸುಚಿತ್ರ ಕೂಡ ಯಾರದೇ ಲಕ್ಷ್ಯ ಸೆಳೆಯುವಷ್ಟು ಸುಂದರಳಾಗಿದ್ದಳು. 

ವಯಸ್ಸು ಅಂತಾರಲ್ಲ, ಇಬ್ಬರ ನಡುವೆ ಪ್ರೀತಿ ಬೆಳೆಯಿತು. ಸುಚಿತ್ರಳ ತಂದೆ ಬ್ಯುಸಿನೆಸ್ಮನ್. ಸಾಕಷ್ಟು ಹೆಸರು ಮಾಡಿದ್ದರು. ಅವರು ಏನು ಅಂದಾರು ಅಂತಲೂ ವಿಚಾರ ಮಾಡದೇ, ಇವರ ಪ್ರೀತಿ, ಮುಂದುವರೆಯಿತು. ಅದೇನೋ ಹುಚ್ಚು ಧೈರ್ಯವೋ. ಒಬ್ಬಳೇ ಮಗಳು. ಇವಳ ಮನಸ್ಸಿನಂತೆ ನಡೀಬಹುದು ಅಂತ ವಿಶ್ವಾಸ. 

ಅಷ್ಟರಲ್ಲಿ ಸುವರ್ಣ ಬಂದ. ಅವಳನ್ನು ಗುರುತಿಸಿ "ಸುಚಿ, ವಾಟ್ ಅ ಸರ್ಪ್ರೈಸ್? " ಅಂದ. ಸುಚಿತ್ರ ಅಂತ ಪೂರ್ತಿ ಹೆಸರು ಹೇಳುತ್ತಿರಲಿಲ್ಲ. ಅವನು ಮೊದಲು "ಸುವರ್ಣ" ಅಂತ ತನ್ನ ಹೆಸರು ಚಿತ್ರದ ಕೆಳ ತುದಿಗೆ ಹಾಕುತ್ತಿದ್ದ. ಇವರ ಪ್ರೇಮ ಮುಂದುವರೆಯುತ್ತಾ, ಸುವರ್ಣ, ಸುಚಿತ್ರ ದಲ್ಲಿಯ "ಸು" ತೆಗೆದು ಉಳಿದ "ವರ್ಣಚಿತ್ರ" ಅಂತ ಬರೆದ. ಇದು ನಮ್ಮ ಪ್ರೇಮದ ಗುರುತು ಸುಚಿ, ಅನ್ನುತ್ತಿದ್ದ. ಅದನ್ನು ಈಗಲೂ ಹಾಗೇ ಉಳಿಸಿದ್ದ. 

ಸುಚಿತ್ರ ಮಾತಿನಷ್ಟಕ್ಕೆ ಕೇಳಿದಳು" ನಿನ್ನ ಹೆಂಡತಿ ಏನ್ ಮಾಡ್ತಾರೆ ". ಅವನು ನಕ್ಕ. "ಮದುವೆ ಆಗಿಲ್ಲಾ" ಅಂದ. ಅವಳಿಗೆ ತುಂಬಾ ಬೇಸರ ಆಗಿದ್ದು ಸುವರ್ಣನಿಗೆ ಕಂಡಿತು. 

" ಏನು, ಇನ್ನೂ ಹಳೇ ನೆನಪಲ್ಲೆ ಜೀವನ ಕಳೀತಿದಿಯಾ? " ಅವಳು ಕೇಳಿದಳು. " ನೋಡು ಸುಚಿ, ನನ್ನ ಮನಸ್ಸು ದೇವತೆಗೆ ಕೊಟ್ಟಾಗಿದೆ. ಇನ್ನು ಈ ದೇಹಕ್ಕೆ ಮದುವೆ ಯಾಕೆ? ಅದೇ ನೆನಪಲ್ಲೆ ಇರ್ತೆನೆ. ಸಾಕು " ಅನ್ನುವಾಗ ಸುಚಿತ್ರಾಳಿಗೆ ಎದೆ ಚುಚ್ಚಿದ ಅನಿಸಿಕೆ ಆಗಿ ಕಣ್ಣೀರು ಚಿಲ್ಲನೇ ಚಿಮ್ಮಿತು. "ಯಾಕ್ ಅಳುತ್ತೀಯ, ನಾನು ಖುಷ್ ಆಗೇ ಇದ್ದೇನೆ" ಸ್ವಲ್ಪವೂ ವಿಕಾರವಿಲ್ಲದೆ ಹೇಳಿದನು, "ನನಗೇನೂ ನೀನು ಮೋಸ ಮಾಡಿಲ್ಲ ಅಲ್ವ, ನಾನೂ ನಿನಗೆ ಮೋಸ ಮಾಡಿಲ್ಲ. ಅನಿವಾರ್ಯವಾಗಿ ನಿನ್ನ ತಂದೆ ತಾಯಿಗೆ ಬೇಸರ ಆಗದಂತೆ, ನೀನು ಬೇರೆಯ ಮದುವೆ ಆಗಲೇ ಬೇಕಾಯಿತು. ನಮ್ಮ ಪ್ರೇಮ ಪವಿತ್ರವಾಗಿಯೇ ಇದೆ. ಹಾಗೆ ಅಂತ, ನಾವು ಪುನಃ ಪ್ರೀತಿ ಅಂತ ಅಂದ್ರೆ, ನಾವು ನಮಗೇ ಮೋಸ ಮಾಡಿ, ಬೇರೆಯವರಿಗೂ ಮೋಸ ಮಾಡಿದಂತೆ ಆಗುತ್ತೆ" ಅನ್ನುತ್ತಾ 

" ಬಾ ಸುಚಿ, ಆಫೀಸಿನಲ್ಲಿ ಟೀ ಇದೆ, ಕುಡಿಯುವ " ಅಂದು ಆಫೀಸಿಗೆ ಕರೆದ, 

ಹೌದು, ಅವನು ಶುದ್ಧ ಮನಸ್ಸಿನ ಪವಿತ್ರ ಪ್ರೇಮಿ.

 ಇನ್ನೂ "ವರ್ಣಚಿತ್ರ" ಅಂತಲೇ ಚಿತ್ರದ ಕೆಳಗೆ ಬರೆಯುತ್ತಾನೆ. ಮನಸ್ಸು ಪರಿಶುದ್ಧ. 

ಆಫೀಸಿನಲ್ಲಿ ಒಂದು ಕ್ಯಾನ್ವಾಸ್ ಮುಚ್ಚಿತ್ತು.

 "ಅದು ಯಾವ ಚಿತ್ರ" ಸುಚಿತ್ರ ಕೇಳಿದಳು. 

ಅವನು ಅದರ ಪರದೆ ತೆಗೆದ. ಅದು ತನ್ನದೇ ಚಿತ್ರ. 

" ಇದು ಸರಿಯಾ," ಅವಳು ಕೇಳಿದಳು. 

" ಅದು ಈ ಸುಚಿ ಅಲ್ಲ, ನನ್ನ ದೇವತೆ ಸುಚಿ, ನಾನು ಆರಾಧಿಸುತ್ತೇನೆ, ನಿನಗೆ ಒಂದು ಸಣ್ಣ ಚಿತ್ರ ಕೊಟ್ಟಿದ್ದೇನಲ್ಲ, ಅದೇ ದೊಡ್ಡದು."

 ಅವಳ ಪರ್ಸ್ನಲ್ಲಿ ಈಗಲೂ ಇದೆ. ಆದರೆ ಅವನಿಗೆ ಈಗ ಹೇಳಲಿಲ್ಲ. 

ಟೀ ಕುಡಿದು, ಒಂದು ವರ್ಣಚಿತ್ರ ಕೊಂಡಳು. 

ಇಡೀ ಜೀವನ ತನ್ನ ನೆನಪಲ್ಲೆ ಕಳೆಯುವ ಅವನ ಬಗ್ಗೆ ಸುಚಿತ್ರಳಿಗೆ ವಿಚಿತ್ರ ಗೌರವ ಮೂಡಿತು.



Rate this content
Log in

Similar kannada story from Abstract