ತಾಯಿಯ ಮನಸ್ಸು
ತಾಯಿಯ ಮನಸ್ಸು
ನವೀನ್ ವೃದ್ಧಾಶ್ರಮದಲ್ಲಿ ತನ್ನ ತಾಯಿಯನ್ನು ಸೇರಿಸಿದ್ದ. ಹೌದು, ಅದು ಈಗಿನ ಟ್ರೆಂಡ್ ಆಗಿದೆ. ತಂದೆ ತಾಯಿಯನ್ನು ಯಾರೂ ಪ್ರೀತಿಯ ಲೆಕ್ಕದಲ್ಲಿ ಅಳೆಯುವುದಿಲ್ಲ, ತಾವು ಸಂಪಾದಿಸೋ ದುಡ್ಡಿನ ಲೆಕ್ಕದಲ್ಲಿ ಅಳೆಯುತ್ತಾರೆ.
ನನ್ನ ತಂದೆ ತಾಯಿ ವೃದ್ಧಾಶ್ರಮದಲ್ಲಿ ಇದ್ದರೆ ನೋಡಿಕೊಳ್ಳಲು ಜನ ಇರುತ್ತಾರೆ ಡಾಕ್ಟರ್ ಇರುತ್ತಾರೆ ಅನ್ನುವುದು ಜನರ ತೋರಿಕೆಗೆ ಹೇಳುವ ಮಾತು. ನಿಜ ಹೇಳಬೇಕೆಂದರೆ ಅವರೊಂದಿಗೆ ಹೊಂದಿಕೊಂಡು ಹೋಗಲು ತಮಗಾಗಲಿ ತಮ್ಮ ಹೆಂಡತಿಗಾಗಲಿ ಆಗೋದಿಲ್ಲ ಅನ್ನೋದೇ ನಿಜ ವಿಚಾರ ಮತ್ತು ಸೇವೆ ಮಾಡಲು ಸುತಾರಾಂ ಹೆಂಡತಿ ತಯಾರಿರೋಲ್ಲ ಅನ್ನೋದೂ ಅಷ್ಟೇ ನಿಜವಾದ್ದು.
ವೃದ್ಧಾಶ್ರಮಕ್ಕೆ ಸೇರಿಸುವಾಗ ಹೆಂಡತಿ ಪೂರ್ರ್ಣಿಮಾ ಕೂಡ ಬಂದಿದ್ದಳು.
"ಅತ್ತೆ, ಯಾವುದಕ್ಕೂ ಕಡಿಮೆ ಮಾಡಿಕೊಳ್ಳಬೇಡಿ. ಏನು ಬೇಕಾದರೂ ಕೇಳಿ ತೆಗೆದುಕೊಳ್ಳಿ. ಏನಾದರೂ ಕೊಡದಿದ್ದರೆ ಫೋನ್ ಮಾಡಿ ತಿಳಿಸಿ, ನಿಮಗೆ ಸಿಗುವಂತೆ ನೋಡಿಕೊಳ್ಳುತ್ತೇವೆ. ದುಡ್ಡು ಖರ್ಚಾಗುತ್ತೆ ಅಂತ ಅನುಮಾನಿಸಬೇಡಿ. ಜಾಗ್ರತೆಯಾಗಿರಿ" ಅಂತ ಹೇಳುವ ಪೂರ್ಣಿಮಾಳ ಮನಸ್ಸಿನಲ್ಲಿ ಅಂತೂ ಸಾಗಹಾಕಿದ ಖುಷಿ ಇತ್ತು.
ಅವಳು ತನ್ನಿಂದ ಅತ್ತೆಯ ಸೇವೆ ಮಾಡಲು ಸಾಧ್ಯವಿಲ್ಲ. ಅವರೇ ಇರಬೇಕೆಂದರೆ ತಾನು ತವರಿಗೆ ಹೋಗುತ್ತೇನೆ, ಯಾವುದನ್ನೂ ಆರಿಸಿಕೊಳ್ಳಿ ಅಂತ ನವೀನ್ ಗೆ ಸೂಚಿಸಿದ್ದು ಇವಳೇ. ಮನೆಯಲ್ಲೇ ನೋಡಿಕೊಳ್ಳಲು ನರ್ಸ್ ನೇಮಿಸಬಹುದಿತ್ತು, ಅದನ್ನು ಮಾಡಲಿಲ್ಲ. ಇನ್ನು ಕೆಲವೇ ವರ್ಷಗಳಲ್ಲಿ ಸಾಯುವ ಇವರಿಗೆ ಖರ್ಚು ಅಷ್ಟೇಕೆ ಮಾಡಬೇಕು ಅನ್ನುವುದು ಒಂದೆಡೆಯಾದರೆ ಮನೆಯಲ್ಲೇ ಇದ್ದರೆ ತನಗೆ ಸ್ವಾತಂತ್ರ್ಯ ಇರೋದಿಲ್ಲ ಅನ್ನೋದು ಇನ್ನೊಂದು ಲೆಕ್ಕ. ಮಗನೂ ಅಷ್ಟೇ, ದೂರ ಇದ್ದರೆ ದಿನವೂ
ತಾಯಿಯ ತೊಂದರೆ ಇರುವುದಿಲ್ಲ, ಇರುವಷ್ಟು ಹೊತ್ತು ಆರಾಮವಾಗಿ ಇರಬಹುದು ಅನ್ನೋ ತರ್ಕ.
ಅಂತೂ ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಟ್ಟು ನವೀನ್ ನಿರಾಳವಾಗಿ ಹೋದನು. ಆಗಾಗ್ಗೆ ಎಂಬಂತೆ ಬರುತ್ತಿದ್ದ ಮಗ ಸೊಸೆ ಬರಬರುತ್ತ ತಿಂಗಳಿಗೊಮ್ಮೆ ಎರಡು ತಿಂಗಳಿಗೊಮ್ಮೆ ಬರತೊಡಗಿದರು. ಹಾಗೂ ಹೀಗೂ ಮೂರು ವರ್ಷ ಕಳೆದ ತಾಯಿ ಕೃಶವಾಗಿ ಇನ್ನೇನು ಸಾಯುವ ಸ್ಥಿತಿಗೆ ಬಂದರು.
ವೃದ್ಧಾಶ್ರಮದಲ್ಲಿ ಡಾಕ್ಟರ್ ಪರೀಕ್ಷೆ ಮಾಡಿ ತಿಳಿಸಿದರು. ಇನ್ನು ಒಂದೆರಡು ದಿನವಷ್ಟೇ ಉಳಿಯಬಹುದು. ಮನೆಯರನ್ನು ಕರೆಸಿಬಿಡಿ, ಮಾತಾಡಿಕೊಳ್ಳಲಿ ಎಂದು. ಅದರಂತೆ ಮಗ ಸೊಸೆ ಬಂದರು.
ಎಲ್ಲ ಮಾತಾಡಿ ಹೋಗುವಾಗ ಸೊಸೆ ಹೊರಗೆ ಹೋದ ನಂತರ ಮಗ ತಾಯಿಯನ್ನು ಕೇಳಿದನು, " ಅಮ್ಮಾ, ನಿನ್ನ ಕೊನೆಯ ಆಸೆ ಏನಾದರೂ ಇದ್ದರೆ ಹೇಳಿಬಿಡು."
ತಾಯಿ ಹೇಳಿದಳು, " ಮಗಾ, ಈ ವೃದ್ಧಾಶ್ರಮದಲ್ಲಿ ಫ್ಯಾನ್ ಕಡಿಮೆ ಇದೆ, ಕೆಲವು ಫ್ಯಾನ್ ಗಳನ್ನು ಹಾಕಿಸಿಬಿಡು. ಹಾಗೆಯೇ ಒಂದು ಫ್ರಿಜ್ಜ್ ಇದ್ದರೆ ತಣ್ಣನೆಯ ನೀರು ಸಿಗುತ್ತದೆ, ಅದನ್ನೂ ಹಾಕಿಸಿಬಿಡು. ಮತ್ತೇನೂ ಆಸೆಯಿಲ್ಲ."
"ಅಲ್ಲ ಅಮ್ಮಾ, ಇದೆಲ್ಲ ನೀನು ಇಷ್ಟು ದಿವಸ ಇಲ್ಲಿ ಇರುವಾಗಲೇ ಹೇಳಬೇಕಿತ್ತು ಅಲ್ಲ್ವಾ, ಈಗ ಹಾಕಿಸಿ ನಿನಗೇನು ಅನುಕೂಲ?" ಅಂತ ನವೀನ್ ಕೇಳಿದನು.
" ಮಗಾ, ನನಗೆ ಹೇಗೂ ಹೊಂದಿಕೊಂಡು ಹೋಗಲು ಬರುತ್ತದೆ. ಆದರೆ ನಂತರ ನಿನ್ನ ಮಕ್ಕಳು ನಿನಗೆ ಇಲ್ಲಿ ಹಾಕಿದಾಗ ನಿನಗೆ ಇದಕ್ಕೆಲ್ಲ ಹೊಂದಿಕೊಳ್ಳಲು ಆಗುವುದಿಲ್ಲ. ಅದಕ್ಕೆ ಹೇಳಿದೆ."
ಇದನ್ನೇ ನಾವು ತಾಯಿಯ ಮಮತೆ ಅನ್ನೋದು. ತಾನು ಸಾಯುವ ಕೊನೆ ಕ್ಷಣದಲ್ಲೂ, ತನ್ನ ಜೀವದ ಕುಡಿಯ ಬಗ್ಗೆ ಚಿಂತಿಸುವುದೇ ತಾಯಿಯ ಮನಸ್ಸು.