ಸಂಬಂಧದ ನೆಲೆ
ಸಂಬಂಧದ ನೆಲೆ


ಗುರುಪ್ರಸಾದ್ ಮತ್ತು ಕವಿತಾಬಾಯಿಯ ಮಕ್ಕಳು
28 ರ ರಾಘವ ಮತ್ತು 26 ರ ಚಂದ್ರಿಕಾ.
ಗುರುಪ್ರಸಾದ್ ರಿಟೈರ್ ಆದ ವರ್ಷ, ಮಗಳ ಮದುವೆಗೆ ನಿರ್ಧರಿಸಿದರು.
ಈ ನಡುವೆ ಮಗನಿಗೆ ಸಂಬಂಧ ಹುಡುಕಿ ಕೆಲವರು ಬಂದರು. ಆದರೆ ಮಗಳ ಮದುವೆ ಮಾಡದೇ, ಮಗನ ಮದುವೆ ಮಾಡೋದಿಲ್ಲ ಅನ್ನುವ ನಿರ್ಧಾರ, ದಂಪತಿಗಳದು. ರಾಘವ ಕೂಡ ಅದನ್ನೇ ಹೇಳುತ್ತಿದ್ದ. ಒಂದು ಸಂಬಂಧ ಅವನಿಗೆ ಬಂದುದು ತುಂಬಾ ಒಳ್ಳೆದಿತ್ತು. ದಂಪತಿಗಳು ಅದೇ ವಿಷಯ ರಾತ್ರಿ ತುಂಬಾ ಚರ್ಚಿಸಿದರು. ಇದನ್ನು ಚಂದ್ರಿಕಾ ಕೇಳಿದಳು.
ರಾತ್ರಿಯೆಲ್ಲ ತುಂಬಾ ಹೊತ್ತು ಎಚ್ಚರವಾಗಿದ್ದು ತುಂಬಾ ಯೋಚಿಸಿದಳು.
ಚಂದ್ರಿಕಾ ಮರುದಿನ ಬೆಳಿಗ್ಗೆ ಎಲ್ಲರೂ ಕೂಡಿ ತಿಂಡಿ ತಿನ್ನೋವಾಗ " ಅಪ್ಪ, ನಾನು ಉಮಾಳ ಕೂಡ C. A ಮಾಡಲು ಇಷ್ಟಪಡುತ್ತೇನೆ. ಮತ್ತು ಇಲ್ಲೇ ಒಂದು ಕಡೆ ಕೆಲಸಕ್ಕೂ ಸೇರುತ್ತೇನೆ. "
ಎಲ್ಲರೂ ಒಂದೇ ಸಾರಿ, " ಬೇಡ " ಅಂದರೂ ಕೇಳದೆ, ಏನೇ ಹೇಳಿದರೂ ತನ್ನ ಹಟವನ್ನೇ ಮುಂದು ಮಾಡಿ, ಸರಿ ಅನ್ನಿಸಿಯೇ ಬಿಟ್ಟಳು.
ಈಗ ರಾಘವನ ಮದುವೆ ಪ್ರಸ್ತಾಪಕ್ಕೆ ದಾರಿಯಾಗಿ ಸೀಮಾ ಮನೆ ತುಂಬಿಕೊಂಡಳು. ಡಿಗ್ರೀ ಆದ ಸುಂದರ ಗುಣವಂತೆ. ಎಲ್ಲರಿಗೂ ಹೊಂದಿಕೊಂಡು ಎಲ್ಲರಿಗೂ ಒಳ್ಳೆಯವಳು ಅನ್ನಿಸಿದಳು.
ಈ ನಡುವೆ ಚಂದ್ರಿಕಾ ತಮ್ಮ ಮನೆಗೆ 15-20 ನಿಮಿಷ ದಾರಿಯಲ್ಲಿರುವ ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿದಳು. ಸಂಬಳ ಅಡ್ಡಿಯಿಲ್ಲ ಅನ್ನುವ ಮಟ್ಟಿಗೆ. ಮುಖ್ಯವಾಗಿ ಅವಳಿಗೆ CA ಓದಲಿಕ್ಕೆ ಸಮಯ ಅನುಕೂಲತೆ ಮಾಡಿ ಕೊಡುತ್ತಿದ್ದರು. ಇವಳ ಕೆಲಸ ಮತ್ತು ರೀತಿಯಿಂದ ಎಲ್ಲ ಸಹೋದ್ಯೋಗಿಗಳ, ಮುಖ್ಯಸ್ಥರ ಅಭಿಮಾನಕ್ಕೆ ಪಾತ್ರಳಾಗಿದ್ದಳು.
ಈ ರೀತಿಯಲ್ಲಿ ಚಂದ್ರಿಕಾ ಮನೆಯಲ್ಲೂ, ಆಫೀಸಿನಲ್ಲೂ ಎಲ್ಲರ ಕಣ್ಮಣಿಯಾಗಿದ್ದಳು.
ಮನೆಯಲ್ಲಿ ಆಗಾಗ ಚಂದ್ರಿಕಾಳ ಮದುವೆ ವಿಚಾರ ಇರುತ್ತಿತ್ತು. ಚಂದ್ರಿಕಾ ಖಡಾ ಖಂಡಿತವಾಗಿ "CA ಆಗುವ ವರೆಗೆ ಮದುವೆ ವಿಷಯವನ್ನೇ ಎತ್ತಬೇಡಿ" ಅಂತ ಹೇಳಿ ಎಲ್ಲರನ್ನೂ ಸುಮ್ಮನಾಗಿಸುತ್ತಿದ್ದಳು. ತನ್ನ ನಿರ್ಧಾರವನ್ನು ಸಡಲಿಸಿದರೆ ಅಪ್ಪ ಮತ್ತು ಅಣ್ಣನ ಪರಿಸ್ಥಿತಿ ಹದಗೆಡುತ್ತದೆ, ಅಣ್ಣನ ಸಂಸಾರ ನಡೆಯಲು ತೊಂದರೆ ಆಗುತ್ತದೆ, ಅಂತೆಲ್ಲಾ ಯೋಚಿಸಿ ಹೀಗೆ ನಿರ್ಧಾರ ತೆಗೆದುಕೊಳ್ಳುತ್ತಿದ್ಕಳು.
ಹೀಗೆ ದಿನಗಳು ಹೋಗುತ್ತಿರಲು ಸೀಮಾ ಬಸುರಿಯಾಗಿದ್ದಳು.
ಕವಿತಾಬಾಯಿಗೆ ಆರೋಗ್ಯ ಹದಗೆಡಲಾರಂಭಿಸಿತು. ದಿನೇ ದಿನೇ ಕೃಶರಾದರು. ಯಾವುದೇ ಔಷಧಕ್ಕೂ ಅವರು ಸ್ಪಂದಿಸಲಿಲ್ಲ. ಮಗಳ ಮದುವೆ ಕೊರಗು ಇರಬಹುದು. ಒಟ್ಟಾರೆ ಅವರ ಆರೋಗ್ಯ ಪೂರ್ತಿ ಕೆಟ್ಟು, ಒಂದು ರಾತ್ರಿ ಅವರು ಮೇಲುಸಿರು ಹಾಕಿದ್ದು, ಅದು ಕೊನೆಯುಸಿರಾಯಿತು.
ಅಮ್ಮ ಸಾಯುವಾಗ ಚಂದ್ರಿಕಾಳ ಎದೆ ಹಿಂಡಿ ಬಾಯಿಗೆ ಬಂದಂತಾಯಿತು. ಸಣ್ಣ ಮಗುವಿನಂತೆ ಬಿದ್ದು ಹೊರಳಾಡಿ ಬಿಕ್ಕಿ ಬಿಕ್ಕಿ ಅತ್ತುಬಿಟ್ಟಳು.
ಅವರ ಸಾವು ಬಹಳಷ್ಟು ಬದಲಾವಣೆ ತಂದಿತು.
ತಂದೆಗೆ ಚಂದ್ರಿಕಾ ತುಂಬಾ ಹತ್ತಿರವಾದಳು. ಸೀಮಾ ಚಂದ್ರಿಕಾಗೆ ಹತ್ತಿರವಾದಳು. ಕವಿತಾಬಾಯಿ ಗುರುಪ್ರಸಾದರಿಗೆ ಒಳ್ಳೇ ರೀತಿಯಿಂದ ನೋಡಿಕೊಂಡಿದ್ದರು. ಅವರಿಗೆ ಹೆಂಡತಿಯ ನೆನಪೇ ಆಗುತ್ತಿತ್ತು. ಒಮ್ಮೆಯಂತೂ ಅವರನ್ನು ಹೆಂಡತಿ ಹೇಗೆ ಮಗುವಿನಂತೆ ನೋಡಿಕೊಂಡಿದ್ದರು ಎಂದು ಚಂದ್ರಿಕಾಳ ಹತ್ತಿರ ಹೇಳಿಕೊಂಡು, ಗದ್ಗದಿತರಾಗಿ ಮಗಳನ್ನು ತಬ್ಬಿಕೊಂಡು ಅತ್ತುಬಿಟ್ಟರು.
ಅಂದು ಚಂದ್ರಿಕಾಳಿಗೂ ತಡೆಯಲಾಗದೆ bedsheet ಹೊದ್ದುಕೊಂಡು ಅತ್ತಳು. ತನ್ನ ನಿರ್ಧಾರವೇ ಈ ಎಲ್ಲ ಪರಿಸ್ಥಿತಿಗೆ ಕಾರಣವೋ ಅಂತ ಅಂದುಕೊಂಡು ಪರಿತಪಿಸಿದ್ದಳು.
ದಿನಗಳು ಉರುಳುತ್ತಿದ್ದವು. ಸೀಮಾಗೆ ಈಗ ಎರಡು ಮಕ್ಕಳು. ಶ್ವೇತಾ ಮತ್ತು ರಮಣ.
ಗುರುಪ್ರಸಾದ ಹೆಚ್ಚು ಮಾತಾಡುತ್ತಿರಲಿಲ್ಲ. ಅವರ ಆರೋಗ್ಯವೂ ಅಷ್ಟಕ್ಕಷ್ಟೇ. ಚಂದ್ರಿಕಾ CA ಮುಗಿಸಿದಳು. ಅವಳಿಗೆ ಬ್ರಾಂಚ್ ಮ್ಯಾನೇಜರ್ ಅಂತ ಬಡ್ತಿ ಕೊಟ್ಟು ಹೊಸ ಬ್ರಾಂಚ್ ಗೆ ಹಾಕಿದರು. ಬ್ರಾಂಚ್ ದೂರ ಇದ್ದರೂ ಕಂಪನಿ ಕೊಟ್ಟ ಕಾರಿನಿಂದಾಗಿ, ಹೆಚ್ಚು ಹೊತ್ತು ಮನೆಯಲ್ಲೇ ಇರಬಹುದಿತ್ತು.
ಈಗ ಅವಳಿಗೆ 30 ವರ್ಷ. ಆದರೆ ಚಂದ್ರಿಕಾ ಮದುವೆ ವಿಷಯ ಯಾರೂ ಎತ್ತುತ್ತಿರಲಿಲ್ಲ. ಮದುವೆ ಬಗ್ಗೆ ಅವಳೂ ಮಾತಾಡುತ್ತಿರಲಿಲ್ಲ.
ಚಂದ್ರಿಕಾ ಅಣ್ಣ ಅತ್ತಿಗೆಯೊಂದಿಗೆ ಮೊದಲಿನಂತೆ ಹೊಂದಿಕೊಂಡು ಇದ್ದಾಳೆ. ಚಂದ್ರಿಕಾ ಮನೆಯಲ್ಲಿದ್ದರೆ ಮಕ್ಕಳು ಅವಳೊಂದಿಗೆ ಕುಶಿಯಿಂದ ಇರ್ತಾ ಇದ್ದರು.
ಮಕ್ಕಳಿಗೆ ಓದಿಸುವುದು, ಕಥೆ ಹೇಳುವುದು, ಆಟ ಆಡಿಸೋದು dress ಮಾಡುವುದು, ಸ್ಕೂಲಿಗೆ ಕಾರಿನಲ್ಲಿ ಬಿಟ್ಟು, ಕರೆದುಕೊಂಡು ಬರುವುದು ಎಲ್ಲವನ್ನೂ ಚಂದ್ರಿಕಾ ಮಾಡುತ್ತಿದ್ದಳು.
ಅವಳು ಎರಡೇ ವರ್ಷದಲ್ಲಿ, ಇಡೀ ಕಂಪನಿಯ ಫೈನಾನ್ಷಿಯಲ್ ಮ್ಯಾನೇಜರ್ ಆದಳು.
ಚಂದ್ರಿಕಾಳಿಗೆ ಆಗಾಗ ಮದುವೆ ಯೋಚನೆ ಬಂದರೂ ಹೇಳಿಕೊಳ್ಳುತ್ತಿರಲಿಲ್ಲ. ಕಾರಣ ತಂದೆ ಹಾಸಿಗೆ ಹಿಡಿದಿದ್ದರು.
ಒಟ್ಟಾರೆ ಅವಳ ಮದುವೆ ಬಗ್ಗೆ ಪ್ರಸ್ತಾಪವೇ ಇಲ್ಲದಾಯಿತು. ನಂತರದ ಕೆಲವು ತಿಂಗಳಲ್ಲಿ ಗುರುಪ್ರಸಾದ್ ತೀರಿಹೋದರು.
ಸಾಯುವಾಗ ಚಂದ್ರಿಕಾ ಮದುವೆ ಜವಾಬ್ದಾರಿಯನ್ನು ರಮಣನಿಗೆ ಒಪ್ಪಿಸಿದರು.
ಅದೇ ವರ್ಷ ಮದುವೆ ಮಾಡಿದ್ದರೆ ಒಳ್ಳೆದಿತ್ತು. ಸಂಪ್ರದಾಯದಲ್ಲಿ ತಂದೆ ತೀರಿದ ವರ್ಷದಲ್ಲೇ ಮದುವೆ ಮಾಡಬೇಕಂತ ಇರೋದು ಕೂಡ ಅರ್ಥಬದ್ಧವೇ.
ಚಂದ್ರಿಕಾಳ ಮದುವೆ ಈಗಲೂ ಅತಂತ್ರವಾಗಿಯೇ ಉಳಿಯಿತು. ಈಗ ಅವಳಿಗೆ 34 ವರ್ಷ.
ಇತ್ತೀಚೆಗಂತೂ ಮನೆಯ ಬಹಳಷ್ಟು ಅವಶ್ಯಕತೆಗಳನ್ನು ಚಂದ್ರಿಕಾಳೇ ಪೂರೈಸುತ್ತಿದ್ದಳು. ಸೀಮಾ ಕೂಡ ಒಂದು ರೀತಿ ಜಾಣತನ ಮಾಡುತ್ತಿದ್ದಳೋ ಅನ್ನಿಸುತ್ತಿತ್ತು. ತನ್ನ ಖರ್ಚಿಗೆ ಚಂದ್ರಿಕಾಳನ್ನೇ ಕೇಳಿ ತೆಗೆದುಕೊಳ್ಳುತ್ತಿದ್ದಳು. ಸಾಕಷ್ಟು ವರಮಾನ ಇರುವ ಚಂದ್ರಿಕಾ,ವಿಚಾರ ಮಾಡದೇ ಸೀಮಾಳ ಅವಶ್ಯಕತೆ ಪೂರೈಸುತ್ತಿದ್ದಳು.
ಹೀಗೆ ಸಾಗುತ್ತಿರುವಾಗ, ಅವಳ ಆಫೀಸಿನಲ್ಲಿ ಮತ್ತು ಜೀವನದಲ್ಲಿ ತಿರುವು ಕಂಡಿತು.
ಚಂದ್ರಿಕಾ ಕೆಲಸ ಮಾಡುವ ಕಂಪನಿಯಲ್ಲಿ, ಮಾಧವನ್ ಅಂತ ಒಬ್ಬ ಇಂಟರ್ನಲ್ ಆಡಿಟರನ್ನು ಕಂಪನಿ ನಿಯುಕ್ತಿ ಮಾಡಿತು. ಕಂಪನಿ ಬೆಳೆದಂತೆ ಎಲ್ಲರೂ ತುಂಬಾ pressure ನಲ್ಲಿ ಕೆಲಸ ಮಾಡಬೇಕಾಗುವುದರಿಂದ, ತಪ್ಪುಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಮಾಧವನ್ ಜಾಣ. ತನ್ನ ಆರ್ಡರ್ ಕಾಪಿಯನ್ನು ಆಫೀಸಿನಲ್ಲಿ ಕೊಟ್ಟು, ಎಲ್ಲ section ಮ್ಯಾನೇಜರ್ ನ್ನು ತನ್ನ ಕ್ಯಾಬಿನ್ ಗೆ ಮೀಟಿಂಗ್ ಗೆ ಕರೆದು, pressure ಇಲ್ಲದೆ ಕೆಲಸ ಮಾಡುವ ರೀತಿ ಹೇಳಿದರು. ಏನು ಬೇಕಾದರೂ ತಮ್ಮನ್ನು ಕೇಳಬಹುದೆಂದು ತಮ್ಮ ಬಾಧ್ಯತೆ ಕುರಿತು ಹೇಳಿದರು ಮಾಧವನ್ ರ ಬಾಧ್ಯತಾ ಧ್ವನಿ, ಎಲ್ಲರಿಗೂ ಹಿಡಿಸಿತು. ತಮ್ಮ ಎಷ್ಟೋ ಹೊರೆ ಕಡಿಮೆ ಆದಂತೆ ಎನಿಸಿತು. ಒಂದೇ ಮೀಟಿಂಗ್ ನಲ್ಲಿ
ಇಡೀ ಆಫೀಸಿನ ವ್ಯವಸ್ಥೆಯೇ ಅತೀ ಸುಲಭವಾಗಿ ನಡೆಯುವಂತೆ ಮಾಡುವುದರೊಂದಿಗೆ, ಮಾಧವನ್ ಎಲ್ಲರ ಮನದಲ್ಲಿ ತಮ್ಮ ಛಾಪು ಮೂಡಿಸಿದರು.
ಅವರ ಕಣ್ಣಿನ ಹೊಳಪು ಚಂದ್ರಿಕಾಳ ಎದೆಯಾಳದಲ್ಲಿ ನಿಂತಿತು. ಕೊನೆಗೆ ಕ್ಯಾಬಿನ್ನಿಂದ ಹೊರ ಹೋಗುವಾಗ ಮಾಡಿದ ಹ್ಯಾಂಡ್ ಷೇಕ್ ಇವಳ ಮನಸ್ಸು ಗರಿ ಕೆದರಿದ ಹಕ್ಕಿಯನ್ನಾಗಿಸಿತು.
ಅವಳ ಫೈನಾನ್ಷಿಯಲ್ ಸೆಕ್ಷನ್ ನಲ್ಲಿಯೇ ಹೆಚ್ಚಿನ ವ್ಯವಹಾರ ವಹಿವಾಟು ನಡೆಸುತ್ತಿದ್ದರಿಂದ, ಮಾಧವನ್ ಗೆ ಚಂದ್ರಿಕಾಳ ಸಂಪರ್ಕ ಹೆಚ್ಚಾಗಿತ್ತು. ಅವರ ನೇರ ನಡೆ ನುಡಿ, ಅವಳನ್ನು ಮಾಧವನ್ ಕಡೆಗೆ ಆಕರ್ಷಿಸುವಂತೆ ಮಾಡಿತು. ನಂತರದ ದಿನಗಳಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಅರಿತುಕೊಂಡರು.
ಮಾಧವನ್ ಕೂಡ ಏಕಾಂಗಿಯೇ. 38 ವರ್ಷ. ಸ್ವಲ್ಪ ಕಪ್ಪಾದರೂ ಸುಂದರ ಸದೃಡ ವ್ಯಕ್ತಿತ್ವ. ಮಿನುಗುವ ಕಣ್ಣುಗಳು. ಹಿಂದೂವೇ ಆದರೂ ಮದ್ರಾಸಿ. ಬೇರೆ ಜಾತಿಯವರು.
ಅವರ ನಿಷ್ಕಲ್ಮಶ ಮನಸು, ಅವಳ ಮನಸಿಗೆ ಗಾಳ ಹಾಕಿದಂತಾಯಿತು. ಇಷ್ಟು ದಿನ ಅದುಮಿಟ್ಟಿದ್ದ ಹೆಣ್ಣತನವೆಲ್ಲ ಒಮ್ಮೆಲೇ ಪುಟಿದೆದ್ದಂತೆನಿಸಿ, ಮೈ ಚಳಿ ಬಿಟ್ಟು ಮಾಧವನ್ ರೊಂದಿಗೆ ಸಲುಗೆಯಿಂದ ಇರುತ್ತಿದ್ದಳು. ಆದರೆ ಇಬ್ಬರೂ ಎಲ್ಲಿಯೂ ನೀತಿರೇಖೆ ದಾಟಲಿಲ್ಲ.
ಮಾಧವನ್ ಕೆಲಸ ಆದ ಕೂಡಲೇ ಕಂಪನಿ ಕೊಟ್ಟ ಮನೆಗೆ ಹೋಗುತ್ತಿದ್ದರು.
ಒಮ್ಮೆ ಚಂದ್ರಿಕಾ ಮನೆಯಲ್ಲಿ ಅತ್ತಿಗೆ, ಅಣ್ಣನಿಗೆ ತಿಳಿಸಿ, ತಮ್ಮ ಮನೆಗೆ ಮಾಧವನ್ ರನ್ನು ಆಹ್ವಾನಿಸಿದಳು.
ಮಾಧವನ್ ಮನೆಗೆ ಬಂದ ಕೂಡಲೇ ಅವರನ್ನು ಹಾಲ್ನಲ್ಲಿ ಕೂಡಿರಿಸಿ, ಪಾನಕ ಕೊಟ್ಟಳು. ಮನೆಯಲ್ಲಿ ಅಣ್ಣ ಅತ್ತಿಗೆಗೆ ಸ್ವಲ್ಪ ವಿವರವಾಗಿ ಪರಿಚಯ ಮಾಡಿ ಕೊಟ್ಟಳು. ಮಾಧವನ್ ಒಳ್ಳೆಯದಾಗಿ ಕನ್ನಡ ಮಾತಾಡುತ್ತಿದ್ದರು. ತನ್ನ ಅಣ್ಣನ ಮಕ್ಕಳ ಬಗ್ಗೆ ಹೇಳಿದಳು. ಮಾಧವನ್ ಮಕ್ಕಳನ್ನು ಕರೆದು ಪಕ್ಕದಲ್ಲಿ ಕೂಡ್ರಿಸಿಕೊಂಡು ತಾವು ತಂದ ಚೋಕೋಲೆಟ್ ಟಿನ್ ಕೊಟ್ಟರು.
ಚಂದ್ರಿಕಾಳ ರೀತಿಯಿಂದ ಸೀಮಾಳ ಹೆಣ್ಣು ಮನಸ್ಸು ಸಂಶಯಪಟ್ಟಿತು. ಆದರೂ ತೋರಿಸಿಕೊಳ್ಳಲಿಲ್ಲ.
ಮಧ್ಯಾಹ್ನದ ಊಟಕ್ಕೂ ಒತ್ತಾಯದಿಂದ ಚಂದ್ರಿಕಾ ನಿಲ್ಲಿಸಿಕೊಂಡಳು. ಸೀಮಾ ಒಳ್ಳೇ ಸತ್ಕಾರ ಮಾಡುವಲ್ಲಿ ಮುತುವರ್ಜಿ ವಹಿಸಿ, ಚಂದ್ರಿಕಾಳ ಮನಸ್ಸಿಗೆ ಸಂತಸವನ್ನುಂಟು ಮಾಡಿದಳು.
ಮಾಧವನ್ ಊಟವನ್ನು ಮೆಚ್ಚಿಕೊಂಡು, ಎಲ್ಲರನ್ನೂ ಹೊಗಳಿ, ಮಕ್ಕಳಿಗೆ ಮುದ್ದಿಸಿ, ಎಲ್ಲರಿಗೂ ಟಾಟಾ ಹೇಳಿ ಹೊರಟರು.
ಅಂದು ರಾತ್ರಿ ಸೀಮಾ ತನ್ನ ಮನಸ್ಸಿನ ವಿಚಾರವನ್ನು ಗಂಡನಿಗೆ ಹೇಳಿದಳು, " ರೀ, ಚಂದ್ರಿಕಾ ಅವರನ್ನು ಮನೆಗೆ ಕರೆದಿದ್ದೆಕೆ? ಏನೇ ಹೇಳಿ, ಇವಳು ಅವರನ್ನು ಲೈಕ್ ಮಾಡಿದ್ರೆ? "
"ಅರೆ, ಒಳ್ಳೇ ತಲೆ ನೋವೇ ನಿಂದು. ಅವಳೆಲ್ಲಿ ಹಾಗೆ ಹೇಳಿದಳು? " ಎಂದ ರಾಘವ,
"ಹಾಗೇನಾದ್ರೂ ಆದರೆ ನಮಗೆ ತೊಂದರೆ ಆಗುತ್ತೇ ರೀ" ಎಂತ ರಾಗ ಎಳೆದಳು.
" ಆದ್ರೂ ಯೇನಿಗ, ಅವಳಷ್ಟಕ್ಕೆ ಮದುವೆ ಆದ್ರೆ ನಮಗೆನೇ ನಷ್ಟ, ಮಲಿಕ್ಕೋ ಹೋಗು. ನೀನೋ ನಿನ್ನ್ ವಿಚಾರಾನೋ, ನಿನ್ನ್ ಲೆವೆಲ್ಲೆ ಅಷ್ಟು " ಅಂತ ಬೆಡ್ಡಶಿಟ್ ಎಳ್ಕೊಂಡ.
"ನೀವ್ ಮಹಾ ಲೆವೆಲ್ನೋರು, ನೋಡಬಾರದಾ. ತಿಂಗಳ ಕೊನೆಗೆ ಸ್ಕೂಟರ್ ಕೆಟ್ರೆ, ರಿಪೇರಿ ಮಾಡಸೋಕೆ ನನ್ನತ್ರ ಹಲ್ಲ ಗಿಂಜ್ತೀರಾ, ಲೆವೆಲ್ಲ ಬೇರೆ ಕೇಡು. ಸ್ವಲ್ಪ ಕೇಳಿ
ನಾ ಹೇಳೋದನ್ನ ಕೇಳಕೊಳ್ಳಿ " ಮದುವೆ ವಿಷಯ ಚಂದ್ರಿಕಾ ಹೇಳಿದ್ರೆ ಖಡಾ ಖಂಡಿತವಾಗಿ ಬೇಡ ಅನ್ನಿ. ಅದೂ ಬೇರೆ ಜಾತಿಯವನು. ನಂಗೂ ಹೆಣ್ಣು ಮಗುವಿದೆ. ಅದಕ್ಕೆ ಮದುವೆ ಮಾಡುವಾಗ ನನಗೆ ತೊಂದರೆ ಆಗುತ್ತೆ " ಅಂತ.
ಅಲ್ಲ ರೀ, ನಿಮ್ಗೆ ಗೊತ್ತಾ, ತಿಂಗಳಿಗೆ ಏನಿಲ್ಲ ಅಂದ್ರೂ 10 - 12 ಸಾವಿರ, ಅವಳೇ ಕೊಡ್ತಾಳೆ. ಮಕ್ಕಳಿಗೆ ಓದಿಸೋದು, dress ಮಾಡೋದು, ಕರ್ಕೊಂಡು ಹೋಗಿ ಬರೋದು, ಎಷ್ಟೋ ಸಾರಿ ಶಾಪ್ಪಿಂಗ್ಗೆ ದುಡ್ಡು, ಕಾರು ಎಲ್ಲ ಅವಳದೇ. ಇದೆಲ್ಲ ಕೈ ತಪ್ಪಿ ಹೋದ್ರೆ? "
ನೀವು ತರೊ ಬಿಲ್ಲಿ ಸಂಬಳದಲ್ಲಿ ಸಂಸಾರ ನಡೆಯುತ್ತಾ... ವಿಚಾರ ಮಾಡಿ " ಈ ರೀತಿ ಹಲವು ಮಾತುಕತೆಗಳ ನಂತರ, ಯಥಾ ಪ್ರಕಾರ ಎಲ್ಲ ಗಂಡಂದಿರಂತೆ "ಆಯಿತು ಮಾರಾಯತಿ" ಎಂದ ರಾಘವ.
ಸುಮಾರು ಒಂದು ತಿಂಗಳು ಕಳೆಯಿತು. ಯಲ್ಲ ಮೊದಲಿನಂತೆ ನಡೆಯುತ್ತಿತ್ತು.
ಚಂದ್ರಿಕಾ ಮದುವೆ ವಿಷಯ ಎತ್ತಲಿಲ್ಲ. ಸೀಮಾ, ರಾಘವ ಇಬ್ಬರೂ ಅಂಥಾದ್ದೇನು ಇರಲಿಕಿಲ್ಲ ಅಂತ ನಿಟ್ಟುಸಿರು ಬಿಟ್ಟರು.
ಒಂದು ದಿನ ಚಂದ್ರಿಕಾ ಹೋದ ನಂತರ ಟೇಬಲ್ ಮೇಲೆ ಒಂದು ಕಾಗದ ಇತ್ತು. ವಿಷಯ ಸ್ಪುಟವಾಗಿ ಹೀಗಿತ್ತು.
ನನ್ನ ಪ್ರೀತಿಯ ಅಣ್ಣ ಅತ್ತಿಗೆಗೆ ವಂದನೆಗಳು.
ನಾನು ನಿಮ್ಮನ್ನು ಮತ್ತು ಮಕ್ಕಳನ್ನು ಎಷ್ಟು ಪ್ರೀತಿಸುತ್ತೇನೆ ಅಂತ ನಾನು ಹೇಳಬೇಕಾಗಿಲ್ಲ.
ಆದ್ರೆ ಮಾಧವನ್ ಬಂದು ಹೋದ ದಿನ ರಾತ್ರಿ ನೀವು ಮಾತಾಡಿದ್ದನ್ನು ಪೂರ್ತಿ ಕೇಳಿದ್ದೇನೆ.
ನಿಮ್ಮ ಮಾತು ಕೇಳಲು ಕಾರಣ ಇದೆ. ಮಾಧವನ್ ಬಗ್ಗೆ ಏನಾದರೂ ವಿಷಯ ಬರುತ್ತದೋ ಅಂತ. ವಿಷಯ ಬಂತು. ಆದರೆ ಅದರೊಂದಿಗೆ ನನಗೇ ಹೇಸಿಕೆ ಆಗುವಷ್ಟು ವಿಚಾರ ತಿಳಿಯಿತು.
ನನಗೆ ನಿಮ್ಮ ಹತ್ತಿರ ಮಾತಾಡಲು ಇಷ್ಟ ಇಲ್ಲ.
ನನ್ನ ಮದುವೆ ಸಧ್ಯ ಬೇಡ ಅಂತ ಮುಂದೆ ಹಾಕಿದ್ದೇ ಅಪ್ಪ, ಅಣ್ಣನಿಗೆ ತೊಂದರೆ ಬೇಡ. ನಿಮ್ಮ ಮದುವೆ ಆಗಲಿ ಅಂತ. ಅದಕ್ಕೆ ಕೆಲಸಕ್ಕೆ ಸೇರಿ CA ಮಾಡಿದೆ. ನನಗಾಗಿ ಸಿಂಪಲ್ dress ಗೆ ಖರ್ಚು ಮಾಡುವುದು ಬಿಟ್ಟರೆ ಬೇರೆನೂ ಮಾಡಿಲ್ಲ. ನಿಮ್ಮ ಮಕ್ಕಳು ನನ್ನಲ್ಲಿ ತುಂಬಾ ಆಸೆ ಇರಿಸಿಕೊಂಡಿದ್ದಾರೆ.
ಆದರೆ ನಿಮ್ಮ ಅಭಿಪ್ರಾಯ ಬೇರೆಯೇ ಆಗಿತ್ತು. ನಿಮ್ಮ ಮನಸ್ಸು ಮಾತಿನ ರೂಪದಲ್ಲಿ ಮೂರ್ತವಾದಾಗ, ನನ್ನ ಮನಸ್ಸು ಕಲ್ಲಾಗಿ ಹೋಯಿತು. ನನಗೂ ಮನಸ್ಸಿದೆ.
ನನಗೆ ಈಗಲೂ ಮಕ್ಕಳ ಬಗ್ಗೆ ಆಸೆಯಿದೆ. ಆದರೆ ಅವರನ್ನು ಇಷ್ಟಪಟ್ಬರೆ, ನಿಮ್ಮ ಅಸಹ್ಯ ಮನಸ್ಸಿನ ಮುಖಗಳನ್ನು ನೊಡಬೇಕಾಗುತ್ತದೆ.
ಮಾಧವನ್ ಬೇರೆ ಜಾತಿಯವರು, ನಿಮ್ಮ ಮಟ್ಟಿಗೆ. ಆದರೆ ನನಗಲ್ಲ. ಅವರು ನನ್ನದೇ ಜಾತಿ. ಅವರು ತಂಗಿಯ ಮದುವೆಗಾಗಿ ಎನೆಲ್ಜ ತ್ಯಾಗ ಮಾಡಿದರೂ, ಅವರ ಮನೆಯಲ್ಲಿ ಅವರ ಹಣವೊಂದನ್ನೇ ಗುರುತಿಸಿದರು.
ಅವರಿಗೂ ನನ್ನಂತೆ ತೇಜೋವಧೆಯಾಗಿದೆ. ಇದೇ ಕಾರಣಕ್ಕೆ ಅವರನ್ನು ಹೆಚ್ಚಾಗಿ ಪ್ರೀತಿಸುತ್ತೇನೆ. ನಾನು ಮತ್ತು ಮಾಧವನ್ ಮದುವೆ ಆಗುತ್ತೇವೆ
ನಮ್ಮ boss ನಮಗೆ ಅಪಾರ್ಟ್ಮೆಂಟ್ನಲ್ಲಿ ಒಂದು ಚಿಕ್ಕ ಮನೆಯನ್ನು ತುಂಬಾ ಖುಷಿಯಿಂದ ಮತ್ತು ಒಳ್ಳೇ ಮನಸ್ಸಿನಿಂದ ಗಿಫ್ಟ್ ಆಗಿ ಕೊಡುತ್ತಿದ್ದಾರೆ.
ದೇವರು ನನಗೇನೂ ಕಡಿಮೆ ಮಾಡಿಲ್ಲ. ನಿಮ್ಮಲ್ಲಿಯ ಯಾವ ವಸ್ತುವೂ ನನಗೆ ಬೇಡ. ನಿಮ್ಮ ಜೀವನ ನಿಮಗೆ. ನನ್ನ ಜೀವನ ನನಗೆ. ನೀವು ಮದುವೆಗೆ ಬರುವ ಕಷ್ಟ ತೆಗೆದುಕೊಳ್ಳುವುದು ಬೇಡ ಅಂತ ಖಡಾ ಖಂಡಿತವಾಗಿ ಹೇಳುತ್ತಿದ್ದೇನೆ.
ಕೊನೆಯ ವಂದನೆಗಳೊಂದಿಗೆ,
ಚಂದ್ರಿಕಾ