Ashritha Kiran ✍️ಆಕೆ

Classics Inspirational Others

4  

Ashritha Kiran ✍️ಆಕೆ

Classics Inspirational Others

ಬಾಳು ಬೆಳಕಾಯಿತು

ಬಾಳು ಬೆಳಕಾಯಿತು

5 mins
383


    

      

ಸುತ್ತ ಮುತ್ತಲಿನ ಮನೆಯ ಅಂಗಳದಲ್ಲಿ ದೀಪದ ರಂಗೋಲಿ ನಲಿಯುತ್ತಿತ್ತು.ಎಲ್ಲೆಲ್ಲೂ ದೀಪಾವಳಿ ಹಬ್ಬದ ಸಡಗರ ಸಂಭ್ರಮ.

"ನ್ಳಯನಾ ಅಕ್ಕಾ" ಎಂಬ ಧ್ವನಿ ಅಡುಗೆ ಮನೆಯಲ್ಲಿದ್ದ ನಯನಾಳಿಗೆ ಕೇಳಿಸಿತು.

"ಏನೆ ಪುಟ್ಟಿ ಇಷ್ಟು ಬೇಗ ಬಂದಿದ್ದೀ.ಬೇಗ ಎದ್ಯಆ?"

ಹುಂ ಅಕ್ಕ ಅಮ್ಮ ಬೇಗೆ ಎಬ್ಸ್ತು.ಇವತ್ತು ಹಬ್ಬ ಅಲ್ಲಾ "

"ಹೋಂ ಹಾಗಾದರೆ ಚಿನಕುರಳಿ ಸ್ನಾನನು ಆಯ್ತಾ "

"ಹುಂ ಅಜ್ಜಿ ಮಾಡ್ಸ್ತು"

"ಈಗ ನನ್ನಿಂದ ಏನಾಗಬೇಕು.ನೀನು ಇಲ್ಲಿಗೆ ಮನೆಯಲ್ಲಿ ಹೇಳದೆ ಬಂದಿದ್ದೀ ಅಂತ ಗೊತ್ತು..ನೀನು ಇಲ್ಲಿ ಬಂದಿದ್ದು ನಿಮ್ಮ ಮನೇಲಿ ಗೊತ್ತಾದ್ರೆ ನಿಂಗೆ ಬೈತಾರೆ.ಬೇಗ ಹೇಳು ಏನು ಬೇಕು."?

"ನಂಗೆ ಜಡೆ ಹಾಕು ಅಮ್ಮನಿಗೆ ನಾಲ್ಕು ಕಾಲಿನ ಜಡೆ ಹಾಕೊಕ್ಕೆ ಬರಲ್ಲ."

"ಆಹಾ.. ಪುಟ್ಟಿ ಸಾಕು ಸುಳ್ಳು ಹೇಳಿದ್ದು.ಅಮ್ಮ ಹಬ್ಬದ ಅಡುಗೆ ಮಾಡ್ತಾ ಇದ್ದಾರೆ ಅಲ್ವಾ."

"ನಿಮಗೆ ಹೇಗೆ ಗೊತ್ತಾಯ್ತು"

"ನಂಗೆ ಪರಿಮಳ ಬಂತು " ಎಂದು ಜೋರಾಗಿ ನಕ್ಕಳು.

"ಅಕ್ಕ ನೀನು ನಕ್ಕರೆ ಚೆಂದ ಕಾಣ್ತ್ಯ ಗೊತ್ತಾ?"

"ಹೌದಾ ಪುಟ್ಟಿ.. ಥ್ಯಾಂಕ್ಯೂ .." ಎಂದು ನಯನಾ ಮಗುವಿನ ಕೆನ್ನೆಗೆ ಮುತ್ತು ಕೊಟ್ಟಳು.

"ಮಾವ ಊರಿಂದ ಬರ್ತಾ ಚಾಕ್ಲೇಟ್ ತರ್ತೆನೆ ಹೇಳಿದ್ರು ಇನ್ನು ಬಂದಿಲ್ಲ.ಬೇಗೆ ಬೇಗೆ ಜಡೆ ಹಾಕು.ಲೇಟ್ ಆದ್ರೆ ಅಮ್ಮ ಚಾಕ್ಲೇಟ್ ತಿಂದು ಕಾಲಿ ಮಾಡ್ತಾಳೆ"ಎಂದವಳನ್ನು ಕಂಡು

ನಯನಾ ಜೋರಾಗಿ ನಗುತ್ತಾ"ಜಡೆ ಹಾಕಿದ್ದಿನಿ" ಎಂದವಳು ಬ್ಯಾಗ್ ಹಿಡಿದು ಹೊರಟಳು.

"ಅಕ್ಕ ಚಾಕ್ಲೇಟ್ ತರೋಕೆ ಹೋಗ್ತಾ ಇದ್ಯಾ?"

"ಆಹಾ....ಏ ಕಳ್ಳಿ ಅದೆಷ್ಟು ಚಾಕ್ಲೇಟ್ ತಿನ್ತಿ ನೀನು? ಹಲ್ಲು ಹಾಳಾಗುತ್ತೆ.ನಾನು ಸಕ್ಕರೆ ತಗೊಂಡು ಬರ್ತೀನಿ ಆಯ್ತಾ ನೀನು ಬೇಗ ಮನೆಗೆ ಹೋಗು ಬೈಸ್ಕೊಬೇಡ " ಎನ್ನುತ್ತಾ ಪಕ್ಕದ ಮನೆಯ ಮಗುವನ್ನು ಕಳುಹಿಸಿ ಬಾಗಿಲು ಹಾಕಿಕೊಂಡು ಹೊರಟಳು.

    ಸಕ್ಕರೆ ತರಲು ರೇಶನ್ ಕಾರ್ಡ್ ಹಿಡಿದು ಮುಂಜಾನೆಯೇ ಊರಿನ ಸೊಸೈಟಿ ಮುಂದೆ ನಿಂತ ನಯನಾಳನ್ನು ಕಂಡು ಅಲ್ಲಿ ನಿಂತಿದ್ದ ಜನ ಅವಳ ಬಗ್ಗೆ ಗುಸು ಗುಸು ಎಂದು ಮಾತನಾಡಲು ಪ್ರಾರಂಭಿಸಿದರು.ಯಾವದನ್ನು ಕೇಳಿಸಿಕೊಳ್ಳದವಳ ಹಾಗೆ ಪ್ರತಿಕ್ರಿಯೆ ನೀಡದೆ ಮರದಂತೆ ನಿಂತಿದ್ದಳು.

"ಓ ಇವತ್ತು ನೀನು ಬರುತ್ತೀ ಅಂತ ಗೊತ್ತಿದ್ದರೆ ನಾನು ಬರುತ್ತಿರಲ್ಲಿಲ್ಲ ಮಾರಾಯ್ತಿ.ನಿನ್ನ ಕಂಡು ಇಡೀ ದಿನ ಕೆಲಸ ಮಾಡಲು ಹೊರಟರೆ ಏನಾದರು ಎಡವಟ್ಟು ಆಗುವುದು ಖಚಿತ" ಎಂದು ಹೇಳಿದ ಗೌರಕ್ಕನ ಮಾತು ನಯನಾಳ ಮನಸನ್ನು ಘಾಸಿ ಮಾಡಿತು.ಹೆಚ್ಚು ಹೊತ್ತು ನಿಂತರೆ ಮಾತಿನಲ್ಲೇ ಹುರಿದು ತಿನ್ನುತ್ತಾರೆ ಎಂಬ ನಿರ್ಧಾರಕ್ಕೆ ಬಂದು ಅಲ್ಲಿಂದ ಹೊರಟಳು.. ದುಃಖ ಉಮ್ಮಳಿಸಿ ಬರುತ್ತಿತ್ತು.ದಾರಿಯುದ್ದಕ್ಕೂ ತನ್ನ ಬದುಕನ್ನು ನೆನೆಯುತ್ತಾ ಮನೆ ಹೊಕ್ಕಿ ರೂಮ್ ಬಾಗಿಲು ಹಾಕಿಕೊಂಡು ಗೋಡೆ ಮೇಲೆ ಹಾಕಿದ್ದ ಅಪ್ಪ ಅಮ್ಮನ ಫೋಟೋ ಮುಂದೆ ಮಂಡಿ ಉರಿ ಕಣ್ಣೀರು ಹಾಕುತ್ತಾ

"ನೋಡಿದ್ದೀರ ಅಪ್ಪ..ಊರ ಜನ ನನ್ನ ಬಗ್ಗೆ ಏನು ಮಾತನಾಡುತ್ತಿದ್ದಾರೆ ಅಂತ..ನಾನು ನತದೃಷ್ಟೆಯಂತೆ..ಹೇಳಿ ಬನ್ನಿ ಅಪ್ಪ ತ್ತುತ್ತು ಊಟಕ್ಕೂ ಗತಿಯಿಲ್ಲದೆ ಪರದಾಡುತ್ತಿದ್ದ ಸಮಯದಲ್ಲಿ ಹುಟ್ಟಿದವಳು ನಾನು.. ನಾನು ಹುಟ್ಟಿದ ಮೇಲೆ ನಿಮ್ಮ ಅದೃಷ್ಟ ಬದಲಾಯಿತು ಎಂದು ನನ್ನ ಬಳಿ ಹೇಳುತ್ತಿದ್ದಿರಲ್ಲ ಆ ಸತ್ಯವನ್ನು ಇವರಿಗೆಲ್ಲಾ ತಿಳಿಸಿ ಅಪ್ಪ... ಮದುವೆ ಮಾಡಿ ಕಳುಹಿಸಿದರೆ ಮನೆಯ ಅದೃಷ್ಟಲಕ್ಷ್ಮಿ ಹೋದಂತೆ ಎಂದು ನನಗೆ 35 ಆದರೂ ಮದುವೆ ಮಾಡದೆ ಮನೆಯಲ್ಲಿಯೇ ಇಟ್ಟುಕೊಂಡಿರಲ್ಲ ಈ ಸತ್ಯವನ್ನು ಇವರಿಗೆಲ್ಲರಿಗೂ ತಿಳಿಸದೆ ಏಕೆ ನನ್ನ ಬಿಟ್ಟು ಹೋದಿರಿ??

   

ಊರಲ್ಲಿರುವವರು ನನ್ನ ನೋಡುತ್ತಿದ್ದ ದೃಷ್ಟಿಕೋನ ಬದಲಾಗಿದೆ ಎಂದು ನಿಮಗೆ ತಿಳಿಯುವ ಹೊತ್ತಿಗೆ ಸಮಯ ಮೀರಿತ್ತು. ಆದರೂ ಇನ್ನೂ ಕಾಲ ಮಿಂಚಿಲ್ಲ ಎಂಬಂತೆ ಒಬ್ಬ ಬ್ರೋಕರ್ ನನ್ನು ಕರೆಸಿ, ನನ್ನ ಫೋಟೋ ಜಾತಕ ಕೊಟ್ಟು ಕಳುಹಿಸಿದಿರಿ. ಆ ಬ್ರೋಕರ್ ತೋರಿಸಿದ ಸಂಬಂಧದ ಬಗ್ಗೆ ಪೂರ್ವಾಪರ ಯೋಚಿಸದೆ ನೀವು ಒಪ್ಪಿಗೆ ಸೂಚಿಸಿ ನನಗೆ ಮದುವೆ ಮಾಡಿಸಿ ಮನೆ ಅಳಿಯನನ್ನಾಗಿ ಅವನನ್ನು ಮನೆ ತುಂಬಿಸಿಕೊಂಡಿರಿ.. ಮದುವೆ ಏನೋ ಆಯಿತು. ಆದರೆ ನನ್ನ ಜೀವನ ನರಕವಾಯಿತು. ಮದುವೆಯಾದ ಮಹೇಶನಿಗೆ ಜೂಜಾಡುವ ಚಟವಿತ್ತು.ಅವನಿಗೊಂದು ಮದುವೆ ಮಾಡಿದರೆ ಸರಿ ಹೋಗಬಹುದು ಎಂಬ ಭರವಸೆಯಲ್ಲಿ ನನ್ನೊಂದಿಗೆ ಮದುವೆ ಮಾಡಿಸಿ ಜಾಗ ಬದಲಾದರೆ ಮನಸ್ಥಿತಿ ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿ ಅವನ ಮನೆಯವರು ಮನೆ ಅಳಿಯನಾಗಲು ಒಪ್ಪಿ ಮದುವೆ ಮಾಡಿಸಿದರು. ಆದರೆ ನಿರೀಕ್ಷಿಸಿದ್ದು ಸುಳ್ಳಾಗಿತ್ತು. ಅವನ ಜೂಜಿನ ಚಟ ಮಿತಿ ಮೀರಿತ್ತು.ಅದೆಷ್ಟೋ ರಾತ್ರಿಗಳು ಬರುತ್ತಾನೆ ಎಂದು ಕಾದು ಕಾದು ಮಲಗಿದ್ದೆ.ಆದರೆ ಮಹೇಶನಿಗೆ ಮನೆ ಮಠ ಯಾವುದೂ ಬೇಡವಾಗಿತ್ತು.ಮನೆಯವರ ಒತ್ತಾಯಕ್ಕೆ ಮದುವೆಯಾಗಿದ್ದ.ಬದಲಾಯಿಸುವ ಪ್ರಯತ್ನದಲ್ಲಿ ಸೋತಿದೆ.

 

 ಮದುವೆ ಆಗಿ ವರ್ಷವಾಗಿರಲಿಲ್ಲ.ಜೂಜಾಡಿ ಬರುವಾಗ ಕತ್ತಲಲ್ಲಿ ಕಾಣದೆ ಆಳವಾದ ಗುಂಡಿಗೆ ಬಿದ್ದು ತಲೆಗೆ ಬಲವಾದ ಪೆಟ್ಟಿ ಬಿದ್ದಿತ್ತೆಂದು ಆಸ್ಪತ್ರೆಗೆ ಕರೆದೊಯ್ದುರು.ಚಿಕಿತ್ಸೆ ಫಲಿಸದೆ ಜೀವ ಬಿಟ್ಟ.ಮಹೇಶನ ಸಾವಿನ ವಾರ್ತೆ ಅಮ್ಮನ ಕಿವಿಗೆ ಬೀಳುತ್ತಲೆ ಮಗಳ ಜೀವನ ನೆನೆದು ಹೃದಯಾಘಾತವಾಗಿ ಅಮ್ಮನೂ ಬಿಟ್ಟು ಹೊರಟಳು... ಅಮ್ಮನನ್ನು ಕಳೆದುಕೊಂಡ ಮೇಲೆ ನೀವು ಮಂಕಾದಿರಿ.ನಿಮ್ಮ ಆರೈಕೆಯಲ್ಲಿ ಎಲ್ಲವನ್ನು ಮರೆತು ಬದುಕುತ್ತಿದ್ದೆ.. ನನ್ನ ಜೀವನ ನಿಮ್ಮಿಂದ ಹಾಳಾಯ್ತು ಎಂಬ ಕೊರಗಿನಲ್ಲಿ ನೀವು ಚೇತರಿಸಿಕೊಳಲಿಲ್ಲ.ಒಂದು ಮುಂಜಾನೆ ನೀವು ಚಿರ ನಿದ್ರೆಗೆ ಶರಣಾದಿರಿ..

    

  ನೀವು ಮಾಡಿಟ್ಟ ಆಸ್ತಿ ಇದೆ...ಆದರೆ ನನ್ನ ಜೊತೆ ಜೀವಿಸಲು ಯಾರು ಇಲ್ಲ.. ಎಲ್ಲವನ್ನು ಮಾರಿ ಎಲ್ಲಾದರು ಹೋಗಿ ಜೀವನ ಮಾಡೋಣ ಎಂದುಕೊಂಡರೆ ಹೆಣ್ಣು ಮಕ್ಕಳಿಗೆ ಓದು ಬರಹವೇಕೆ ಎಂದು ಕಾಲೇಜಿಗೂ ಕಳಿಸದೇ ಮನೆಯಲ್ಲಿ ಇಟ್ಟುಕೊಂಡ ಅಮ್ಮ ಅಜ್ಜಿಯ ಮಾತಿಗೆ ನೀವು ಸಮ್ಮತಿಸಿದ್ದೀರಿ.. ಓದನ್ನು ಅರ್ಧದಲ್ಲಿ ನಿಲ್ಲಿಸಿದೆ..ಎಲ್ಲರೂ ನನ್ನನ್ನು ಒಂಟಿಯಾಗಿಸಿ ಹೋಗಿದ್ದೀರಿ..ಈ ಊರಿನವರ ಚುಚ್ಚು ಮಾತು ನನ್ನಿಂದ ಸಹಿಸಲಾಗುತ್ತಿಲ್ಲ...ಹಾಗೆಂದು ಸಾಯುವ ದೈರ್ಯವು ಇಲ್ಲ..ಮನೆಗೆ ಯಾರೇ ಬಂದರು ಕತೆ ಕಟ್ಟುವ ಈ ಕೆಟ್ಟ ಮನಸ್ಥಿತಿಗಳ ಜೊತೆ ಬದುಕಲು ಇಷ್ಟವಿಲ್ಲ..

    

ನನ್ನೀ ಸ್ಥೀತಿಗೆ ಯಾರು ಹೊಣೆ ಅಪ್ಪ...ಓದಿಸಲು ಬಿಡದ ಅಮ್ಮ ಅಜ್ಜಿಯೋ? ನಿಮ್ಮ ಐಶ್ವರ್ಯ ಉಳಿಸಿಕೊಳ್ಳಲು ನನ್ನನ್ನು ಉಳಿಸಿಕೊಂಡ ನೀವಾ?ದುಡ್ಡಿನ ಆಸೆಗೆ ಮದುವೆ ಮಾಡಿಸಿದ ಬ್ರೋಕರ್??ಮದುವೆ ಇಷ್ಟವಿಲ್ಲದಿದ್ದರೂ ಮನೆಯವರ ಬಲವಂತಕ್ಕೆ ಮದುವೆಯಾದ ಮಹೇಶನಾ?? ಮಗ ಸರಿ ಹೋಗಬಹುದು ಎಂಬ ನಂಬಿಕೆಯಲ್ಲಿ ಅವನ ಬಗ್ಗೆ ಗೊತ್ತಿದ್ದರೂ ಮುಚ್ಚಿಟ್ಟು ಮದುವೆ ಮಾಡಿದ್ರಲ್ಲ ಅತ್ತೆ ಮತ್ತು ಮಾವ ಅವರಾ??ಯಾರು ಅಪ್ಪ ಹೇಳಿ ನಿಮ್ಮೆಲ್ಲರಿಂದ ನಾನು ಈ ಪರಿಸ್ಥಿತಿಗೆ ಬಂದಿರುವೆನಾ?ಅಥವಾ ಎಲ್ಲವನ್ನು ಮೌನವಾಗಿ ಸ್ವೀಕರಿಸಿದ ನನ್ನ ತಪ್ಪಾ...ನಾನೇ ಹೊಣೆಯಾ??"ಎಂದು ಒಂದೇ ಸಮನೆ ಪ್ರಶ್ನೆ ಕೇಳುತ್ತಾ ಅಳುತ್ತಿದ್ದಳು.

    

  ಬಾಗಿಲು ಬಡಿದ ಸದ್ದಾಯಿತು.ಒಲ್ಲದ ಮನಸ್ಸಿಂದ ಎದ್ದಳು.ಮುಖ ಒರೆಸಿಕೊಂಡು ಬಾಗಿಲು ತೆರೆದಳು..ಪುಟ್ಟಿ ಅವಳ ಜೊತೆ ಮಾವನನ್ನು ಕರೆತಂದಿದ್ದಳು. ತನ್ನ ಮನೆಗೆ ಆಗಮಿಸಿದ ವ್ಯಕ್ತಿಯನ್ನು ಕಂಡು ನಯನಾಳಿಗೆ ಏನು ಮಾಡಬೇಕೆಂದು ತೋಚದೆ ಮನೆಯ ಕೋಣೆಗೆ ಹೊಕ್ಕು ಬಾಗಿಲು ಹಾಕಿಕೊಂಡಳು. ಪುಟ್ಟಿ ನನಗೆ ಸಂಬಂಧವೇ ಇಲ್ಲವೆಂಬಂತೆ ನಯನಾಳ ಮನೆಯಲ್ಲಿದ್ದ ಅವಳ ಕೆಲವೊಂದು ಆಟಿಕೆಗಳ ಜೊತೆಗೆ ಆಡುತ್ತಾ ಕುಳಿತಿದ್ದಳು. ಮಗಳು ಹಾಗೂ ತಮ್ಮನನ್ನು ಹುಡುಕಿ ಬಂದ ರುಕ್ಮಿಣಿ ಇವರಿಬ್ಬರನ್ನು ನಯನಾಳ ಮನೆಯಲ್ಲಿ ಕಂಡು ಕೋಪಗೊಂಡು ಇಬ್ಬರನ್ನು ಮನೆಗೆ ಎಳೆದುಕೊಂಡು ಹೋದಳು.

ಮನೆಯ ವಾತಾವರಣ ಶಾಂತವಾಗಿದ್ದನ್ನು ಗಮನಿಸಿ ಬಂದವರು ಹೊರಟಿರಬೇಕೆಂದು ನಯನ ಕೋಣೆಯಿಂದ ಹೊರ ಬಂದು ಮನೆಯ ಮುಖ್ಯಬಾಗಿಲನ್ನು ಹಾಕಿಕೊಂಡಳು. ಪುನಹ ತನ್ನ ಕೋಣೆಗೆ ಹೋಗಿ ಗೋಡೆಯ ಮೇಲಿದ್ದ ಭಾವಚಿತ್ರಗಳನ್ನು ನೋಡುತ್ತಾ ಮಂಡಿಯ ಮೇಲೆ ಮುಖವಿಟ್ಟು ಜೋರಾಗಿ ಅಳುತ್ತಾ ಮಲಗಿದಳು.

*****

ಅಕ್ಕನ ಮನೆಗೆ ಬಂದಾಗೆಲ್ಲಾ ನಯಾನಳನ್ನು ನೋಡುತ್ತಿದ್ದ ನರೇಶ್ ಗೆ ಅವಳನ್ನು ಮರೆಯಲಾಗುತ್ತಿರಲಿಲ್ಲ.ತಾನು ಮದುವೆಯಾದ ಹುಡುಗಿ ಮದುವೆಯಾದ ಮೂರು ತಿಂಗಳಿಗೆ ಅವಳು ಪ್ರೀತಿಸಿದವದೊಂದಿಗೆ ಓಡಿ ಹೋದ ದಿನದಿಂದ ಹೆಣ್ಣು ಮಕ್ಕಳನ್ನು ದ್ವೇಷಿಸುತ್ತಿದ್ದ.ಆದರೆ ಅಕ್ಕನ ಮನೆಗೆ ಕಳೆದ ಬಾರಿ ದೀಪಾವಳಿ ಹಬ್ಬಕ್ಕೆ ಬಂದಾಗ ನಯನಾಳ ಕತೆ ಕೇಳಿ ಅವಳೊಂದಿಗೆ ಬದುಕನ್ನು ಹಂಚಿಕೊಳ್ಳಬೇಕೆಂದು ನಿರ್ಧರಿಸಿದ.ಕತ್ತಲಾಗಿರುವ ಇಬ್ಬರ ಮನೆ ಮನದ ದೀಪವನ್ನು ಬೆಳಗಿಸಲು ಪಣತೊಟ್ಟ. ಮನೆಯವರ ಮಾತನ್ನು ಧಿಕ್ಕರಿಸಿ ನಯನಾಳನ್ನು ಮದುವೆಯಾಗುವುದಾಗಿ ಹಠ ಹಿಡಿದ. ಅವನ ಹಠಕ್ಕೆ ಮಣಿದು ಮನೆಯವರು ಕೂಡ ಮದುವೆಗೆ ಒಪ್ಪಿಗೆ ಸೂಚಿಸಿದ್ದರು.ಅದನ್ನು ಮಾತನಾಡಲು ನರೇಶ್ ನಯನಾಳ ಮನೆಗೆ ಬಂದಿದ್ದ.ಬೆಳ್ಳಿಗೆ ನಡದ ಘಟನೆ ಅವಳ ಮನಸ್ಸನ್ನು ಘಾಸಿಗೊಳಿಸಿತ್ತು.ನರೇಶ್ ರುಕ್ಮಿಣಿ ತಮ್ಮ ಎನ್ನುವುದು ಅವಳಿಗೆ ತಿಳಿದಿತ್ತು.ಮನೆಗೆ ದೀಡಿರ್ ಎಂದು ಬಂದ ನರೇಶ್ ನನ್ನು ನೋಡಿ ಅವಳಿಗೆ ದಿಕ್ಕು ತೋಚದಂತಾಗಿ

ಎದುರಿಸಲು ಕಷ್ಟವಾಗಿ ಒಳಗೆ ಓಡಿದ್ದಳು.

*************

ಮರುದಿನ ಸಂಜೆ ಎಲ್ಲರ ಮನೆಯ ಅಂಗಳದಲ್ಲಿ ಸಾಲು ಸಾಲು ದೀಪಗಳು ಉರಿಯುತ್ತಿದ್ದವು. ನಯನಾಳ ಮನೆಯಲ್ಲಿ ದೀಪ ಇಲ್ಲದಿರುವುದನ್ನು ಗಮನಿಸಿದ ನರೇಶ್ ಒಂದು ಪುಟ್ಟ ಹಣತೆಯನ್ನು ನಯನಾಳ ಮನೆ ಬಾಗಿಲಲ್ಲಿ ಇಟ್ಟನು. ಕತ್ತಲಲ್ಲಿ ಕುಳಿತು ಹೊರಗೆ ನೋಡುತ್ತಿದ್ದ ನಯನಾಳಿಗೆ ನರೇಶ್ ನ ಈ ನಡೆ ವಿಚಿತ್ರವೆನಿಸಿತು. ದೀಪವನ್ನು ಇಟ್ಟವನು

" ಈ ದೀಪ ನಿಮ್ಮ ಮೇಲಿರುವ ನನ್ನ ಪ್ರೀತಿಯ ಸಂಕೇತ. ನಿಮ್ಮ ಮೇಲಿನ ಕನಿಕರದಿಂದಾಗಿ ನಾನು ಈ ನಿರ್ಧಾರಕ್ಕೆ ಬಂದಿಲ್ಲ. ಕತ್ತಲಾಗಿರುವ ನನ್ನ ಮನ,ಮನೆಗೆ ನೀವು ಬೆಳಕಾಗಿ ಬರುವಿರಾ " ಎಂಬ ನೇರವಾದ ಪ್ರಶ್ನೆಗೆ ನಯನ ಉತ್ತರಿಸದೆ ಮೌನವಾದಳು.

ನಯನಾಳ ಮೌನ ಕಂಡು ನರೇಶ್ ಬೇಸರದಲ್ಲಿ ಮನೆಗೆ ಹಿಂತಿರುಗುವಾಗ ಜೋರಾಗ ಬೀಸಿದ ಗಾಳಿ ಅವನಿಟ್ಟ ದೀಪವನ್ನು ಆರಿಸಲು ಮುಂದಾಗಿತ್ತು. ನಯನ ತನ್ನೆರಡು ಕೈಗಳಿಂದ ಗಾಳಿಯನ್ನು ತಡೆಯುವ ಮೂಲಕ ದೀಪ ಆರದಂತೆ ಉಳಿಸಿಕೊಂಡಳು. ಪ್ರತಿ ಬಾರಿ ದೇವರನ್ನು ನನಗಾಗಿ ಬದುಕಿನಲ್ಲಿ ಒಬ್ಬರನ್ನೂ ಕರುಣಿಸಲಿಲ್ಲವಲ್ಲ ಎಂದು ಬಯ್ಯುತ್ತಿದ್ದವಳು ದೇವರನ್ನು ಸ್ಮರಿಸಿಕೊಂಡಳು.

"ದೀಪವು ನಿನ್ನದೇ ಗಾಳಿಯು ನಿನ್ನದೆ ಆರದಿರಲಿ ಬೆಳಕು ಕಡಲು ನಿನ್ನದೇ ಹಡಗು ನಿನ್ನದೇ ಮುಳುಗದಿರಲಿ ಬದುಕು" ಎಂಬ ಕವನದ ಸಾಲುಗಳು ನೆನಪಾದವು.

"ದೇವರು ಕ್ರೂರಿ ಅಲ್ಲ ಕರುಣಾಮಯಿ ಎಂದು ತೋರಿಸಿದ್ದಾನೆ . ನಾನು ನತದೃಷ್ಟೆ ಎಂದು ಸಾರಿ ಸಾರಿ ಹೇಳುತ್ತಿದ್ದ ಜನಗಳ ಮುಂದೆ ನಾನು ಇಷ್ಟೆಲ್ಲಾ ಕಳೆದುಕೊಂಡರು ಅದೃಷ್ಟವಂತೆಯೇ ಎಂದು ಸಾಬೀತುಪಡಿಸಲು ಆ ದೇವರು ನಿಮ್ಮ ರೂಪದಲ್ಲಿ ಅವಕಾಶವನ್ನು ಕರುಣಿಸಿದಂತಿದೆ. ನನಗಾಗಿ ನಿಮ್ಮನ್ನು ನನ್ನ ಮನೆ ಮನದ ದೀಪವಾಗಿ ಕಳುಹಿಸಿದ್ದಾನೆ.ನಿಮ್ಮನ್ನು ಕಳೆದುಕೊಳ್ಳಲು ನಾನು ಇಚ್ಚಿಸಲಾರೆ ಎಂದವಳು ಮೌನವಾಗಿ ನಗುತ್ತಾ ಮದುವೆಗೆ ಒಪ್ಪಿಗೆ ಸೂಚಿಸಿದಳು.

ಇಬ್ಬರ ಮನದಲ್ಲಿ ಮೂಡಿದ ನೋವೆಂಬ ಕಗ್ಗತ್ತಲು ಪ್ರೀತಿ ಎಂಬ ದೀಪದಿಂದ ಬೆಳಕಾಯಿತು. ದೀಪಾವಳಿಯ ಹಬ್ಬದಂದು ಇಬ್ಬರ ಬದುಕು ಹಸನಾಯಿತು.

"ನೋವು ಕೊಡುವ ದೇವರು ಅದನ್ನು ಎದುರಿಸುವ ಶಕ್ತಿಯನ್ನು ನೀಡುತ್ತಾನೆ. ಬೆಳಕು ತುಂಬಿದ ಜೀವನಕ್ಕೆ ಗಾಳಿಯನ್ನು ಸೋಕಿಸಿ ಕತ್ತಲಾಗಿಸಿದರೂ ಯಾವುದಾದರೂ ಒಂದು ರೂಪದಲ್ಲಿ ಕತ್ತಲೆ ತುಂಬಿದ ಜೀವನಕ್ಕೆ ಬೆಳಕನ್ನು ನೀಡುತ್ತಾನೆ.ಜೀವನವೆಂಬ ದೀಪವನ್ನು ಬೆಳಗುವವನು ಅವನೇ, ಆರಿಸುವ ಗಾಳಿಯು ಅವನದೇ" ಎಂದು ತನ್ನ ದಿನಚರಿಯ ಪುಟದಲ್ಲಿ ಬರೆದಿಟ್ಟು ಹೊಸ ಬದುಕಿನ ಕನಸಿಗೆ ಮುನ್ನುಡಿ ಬರೆದಳು.


Rate this content
Log in

Similar kannada story from Classics