Ashritha Kiran ✍️ಆಕೆ

Classics Inspirational Others

4  

Ashritha Kiran ✍️ಆಕೆ

Classics Inspirational Others

ಮುದ್ದು ತಂದ ಆಪತ್ತು..

ಮುದ್ದು ತಂದ ಆಪತ್ತು..

5 mins
424


"ಅಮ್ಮ ನೋಡಿಲ್ಲಿ..ಇದರ ದಾರ ಒಳಗೆ ಹೋಗಿದೆ ತೆಗೆಯೋಕೆ ಬರ್ತಾ ಇಲ್ಲ.. ನನ್ನ ಕೈ ಬೆರಳು ಇದರೊಳಗೆ ಹೋಗ್ತಿಲ್ಲ .ಈ ಪ್ಯಾಂಟ್ ಸರಿ ಮಾಡಿ ಕೊಡು ತಗೋ" ಎನ್ನುತ್ತಾ ಮುಖ ಊದಿಸಿಕೊಂಡು ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸುಮಿತ್ರಮ್ಮನ ಮುಂದೆ ನಿಂತಳು..


"ಅಲ್ಲಮ್ಮ ವೇದಾ ಇಷ್ಟು ದೊಡ್ಡವಳಾಗಿದ್ಯಾ? ಈ ಪ್ಯಾಂಟಿನ ದಾರದ ತುದಿಗೆ ಪಿನ್ ಹಾಕಿ ಹೊರ ತೆಗೆದು ಪುನಃ ಅದರೊಳಗೆ ಪೋಣಿಸಿದರೆ ದಾರ ಹೊರ ಬರುತ್ತದೆ ಎಂಬ ಚಿಕ್ಕ ವಿಚಾರವು ನಿನಗೆ ಗೊತ್ತಿಲ್ವಾ..? ಇದನ್ನು ನಾನೇ ಮಾಡಬೇಕಾ?ಅದೇನು ಕೆಲಸ ಮಾಡ್ತೀಯಾ ನೀನು ಆಫೀಸಿನಲ್ಲಿ? ಇಂತಹ ಚಿಕ್ಕ ಚಿಕ್ಕ ವಿಚಾರನೇ ನಿನಗೆ ಗೊತ್ತಿಲ್ಲ ಅದು ಹೇಗೆ ಆಫೀಸ್ ಕೆಲಸ ನಿಭಾಯಿಸ್ತೀಯಾ?


"ಅಮ್ಮ.. ಅದು ನಾನು ಓದಿರೋ ವಿದ್ಯೆ. ಅದನ್ನ ಮಾಡೋಕೆ ನನಗೆ ತುಂಬಾ ಇಷ್ಟ.. ಇಷ್ಟಪಟ್ಟು ಮಾಡ್ತೀನಿ. ಹಾಗಾಗಿ ಕಷ್ಟ ಅನ್ಸಲ್ಲ ..ಇವೆಲ್ಲಾ ನನ್ನ ಕೆಲಸ ಅಲ್ಲ. ನನಗಿದರ ಬಗ್ಗೆ ಗೊತ್ತಿಲ್ಲ" 


"ಈಗ ಇದರ ಬಗ್ಗೆ ಗೊತ್ತಿಲ್ಲ ಅಂದ್ರೆ ತಿಳ್ಕೊಬೇಕು. ಮುಂದೆ ಮದುವೆ ಆಗಿ ಮಕ್ಕಳಾದ ಮೇಲೆ ನಿನ್ನ ಮಕ್ಕಳಿಗೆ ಹೇಳಕ್ಕಾದ್ರು ಬೇಕಲ್ವಾ" ಎಂದರು..


"ಓ ಸಾಕು ಸಾಕು ಮತ್ತೆ ಮದುವೆ ವಿಚಾರ ತೆಗಿಬೇಡ. ಬೇಗ ಹಾಕ್ಕೊಡು ನಂಗೆ ಲೇಟ್ ಆಯ್ತು"..ಎಂದು ಕೋಪಿಸಿಕೊಂಡಳು..


"ನಿಂಗ್ ಹೇಳ್ತಿನಲ್ಲ ನನಗೆ ಬುದ್ಧಿ ಇಲ್ಲ. ಅದು ಹೇಗೆ ಮುಂದೆ ಸಂಸಾರ ನಿಭಾಯಿಸ್ತಿ? ಯೋಚಿಸಿದರೆ ಭಯ ಆಗುತ್ತೆ ನನಗೆ.. ನಿಮ್ಮಪ್ಪ ನಿನ್ನ ಮುದ್ದು ಮಾಡಿ ಹಾಳು ಮಾಡಿದ್ದಾರೆ.. ನನ್ನ ಮಾತಿಗೆ ಅವರು ಬೆಲೆ ಕೊಟ್ಟಿದ್ದರೆ ನೀನು ಇಷ್ಟೊಂದು ಹಾರಾಡ್ತಾ ಇರಲಿಲ್ಲ".. ಎನ್ನುತ್ತಾ ಅವಳ ಪ್ಯಾಂಟ್ ಸರಿ ಮಾಡಿ ಕೊಟ್ಟರು..


"ಓ ಸಾಕು ಸುಮ್ಮನಿರು ಬೆಳಗ್ಗೆ ಬೆಳಗ್ಗೆ ಅಪ್ಪನಿಗೆ ಬೈಯೋಕೆ ಶುರು ಮಾಡಬೇಡ ಆಯ್ತಾ ...ಪ್ಯಾಂಟ್ ಕೊಡು" ಎನ್ನುತ್ತಾ ರೂಮಿಗೆ ನಡೆದವಳು ತಯಾರಾಗಿ ಆಫೀಸಿಗೆ ಹೊರಟಳು..


ಆಫೀಸಿಗೆ ನಡೆದ ಮಗಳನ್ನು ನೋಡುತ್ತಾ ಸಾವಿತ್ರಮ್ಮ ಮನದಲ್ಲಿ ಅವಳ ಸೌಂದರ್ಯದ ಬಗ್ಗೆ ಹೆಮ್ಮೆ ಪಟ್ಟರು..

ಅತಿಶಯೋಕ್ತಿಯಲ್ಲ ನಿಜಕ್ಕೂ ವೇದಾ ಅತಿ ಸುಂದರಿ. ಅಲಂಕಾರ ಬೇಕೆಂದಿಲ್ಲ. ಹುಣ್ಣಿಮೆಯ ಬೆಳಕಿನಂತೆ ಸದಾ ಹೊಳೆಯುತ್ತಿದ್ದಳು..ಗುಣದಲ್ಲಿಯೂ ಸಹ ಅವಳು ಅಪರಂಜಿ. ಯಾರ ಸಹವಾಸಕ್ಕೂ ಹೋಗದೆ ತಾನಾಯಿತು ತನ್ನ ಕೆಲಸವಾಯಿತು ಎಂದು ಅವಳಷ್ಟಕ್ಕೆ ಅವಳಿರಲು ಇಷ್ಟಪಡುತ್ತಿದ್ದಳು.ಮುಖ್ಯ ವಿಷಯವೇನೆಂದರೆ ಅತಿ ಸುಂದರಿಯಾದರೂ ಅವಳು ಪರಮ ಸೋಂಬೇರಿ . ಕುಡಿದ ಲೋಟವನ್ನು ಸಹ ಎತ್ತಿಡಲಾರದಷ್ಟು ಸೋಮಾರಿ.ಮನೆಗೆ ಅವಳು ಒಬ್ಬಳೇ ಮಗಳು. ಮುದ್ದಿನ ಮಗಳಾಗಿದ್ದ ಅವಳು ಓದು ಮುಗಿದ ನಂತರ ಕೆಲಸಕ್ಕೇನೋ ಸೇರಿದಳು.ಆದರೆ ಕಚೇರಿ ಕೆಲಸ ಮುಗಿದೊಡನೆ ಮನೆಗೆ ಬಂದು ಕುಳಿತರೆ, ಕುಳಿತ ಜಾಗದಿಂದ ಅಲ್ಲಾಡಿಸಲು ಸಾಧ್ಯವಾಗುತ್ತಿರಲಿಲ್ಲ. 


ವೇದಾ, ಅಪ್ಪ ಚಂದ್ರಶೇಖರ್ ರಾಯರ ಮುದ್ದಿನ ಮಗಳು.. ಆಕಸ್ಮಾತ್ ಅಪ್ಪನಿಲ್ಲದ ಸಮಯದಲ್ಲಿ ಅಮ್ಮ ಸಾವಿತ್ರಮ್ಮ ಒಂದು ಚಿಕ್ಕ ಕೆಲಸವನ್ನು ಹೇಳಿದರೂ ಅದನ್ನು ದೊಡ್ಡ ಅಪರಾಧವೆಂಬಂತೆ ವೇದಾ, ಅಪ್ಪ ಮನೆಗೆ ಬರುತ್ತಿದ್ದೊಡನೆ ಸಾಲು ಸಾಲು ದೂರುಗಳನ್ನು ಅಪ್ಪನ ಮುಂದೆ ಒಪ್ಪಿಸುತ್ತಿದ್ದಳು.. ಅಪ್ಪನೂ ಕೂಡ ಮಗಳ ಪರವಹಿಸಿ ಸಾವಿತ್ರಮ್ಮನಿಗೆ ಬುದ್ಧಿ ಹೇಳುತ್ತಿದ್ದರೇ ವಿನಹ ಮಗಳಿಗೆ ಚಿಕ್ಕ ನೋವಾಗಲು ಬಿಡುತ್ತಿರಲಿಲ್ಲ.ಚಿಕ್ಕಂದಿನಿಂದಲೂ ಯಾವ ಕೆಲಸವನ್ನು ಹೇಳುತ್ತಿರಲ್ಲಿಲ್ಲ.ಸಾವಿತ್ರಮ್ಮ ಹೇಳಿದರು ಅದನ್ನು ಚಂದ್ರಶೇಖರ ರಾಯರು ಮಾಡಲು ಬಿಡುತ್ತಿರಲಿಲ್ಲ..ಎಲ್ಲಿ ಮೈ ಕೈ ನೋವಾಗುವುದೋ ಎಂದು ಹೊತ್ತುಕೊಂಡೆ ಶಾಲೆಗೆ ಬಿಟ್ಟು ಬರುತ್ತಿದ್ದರು. ಇಲ್ಲವೇ ಗಾಡಿಯಲ್ಲಿ ಕರೆದುಕೊಂಡು ಹೋಗಿ ಪುನಃ ಕರೆದುಕೊಂಡು ಬರುತ್ತಿದ್ದರು.


ಪ್ರತಿ ಬಾರಿ ಗಂಡನ ಈ ಅತಿ ಮುದ್ದನ್ನು ವಿರೋಧಿಸುತ್ತಿದ್ದ ಸಾವಿತ್ರಮ್ಮನಿಗೆ " ನೋಡು ಸಾವಿತ್ರಿ ಹೇಗೂ ಮುಂದೆ ಗಂಡನ ಮನೆಯಲ್ಲಿ ಕೆಲಸ ಮಾಡಬೇಕು ಇಲ್ಲಿ ಆರಾಮಾಗಿರಲಿ ಬಿಡು ಯಾಕೆ ಸುಮ್ಮನೆ ಆ ಮಗುಗೆ ಬೈದು ರಂಪ ಮಾಡ್ತಿ ನೆಮ್ಮದಿಯಾಗಿರಬಾರದ" ಎಂದು ಬುದ್ದಿ ಹೇಳುತ್ತಿದ್ದರೇ ಹೊರತು ಮಗಳ ಕೈಯಲ್ಲಿ ಸಣ್ಣದೊಂದು ಕೆಲಸವನ್ನು ಸಹ ಮಾಡಿಸುತ್ತಿರಲಿಲ್ಲ..ಅವಳ ಅತಿಯಾದ ಸೋಮಾರಿತನಕ್ಕೆ ಕೆಲವೊಮ್ಮೆ ಬೇಸರ ಪಟ್ಟರು,ನಮ್ಮ ಮಗಳು ಎಂಬ ಕಾರಣಕ್ಕೆ ಸುಮ್ಮನಾಗಿರುತ್ತಿದ್ದರು. ತಿದ್ದಿ ಹೇಳಬೇಕು ಅಂದುಕೊಂಡರೂ, ಮಗಳಿಗೆ ಮಾತಿನಿಂದ ಬೇಸರವಾಗುವುದೇನೊ ಎಂದು ಭಯಪಟ್ಟು ಹೇಳಬೇಕಾದ ಮಾತುಗಳನ್ನು ಗಂಟಲಲ್ಲಿಯೇ ಉಳಿಸಿಕೊಂಡರು. 


ಮಗಳ ಮದುವೆ ಪ್ರತಿಯೊಬ್ಬ ತಂದೆ ತಾಯಿಗೂ ದುಃಖದ ಜೊತೆಯಲ್ಲಿ ಸಂತಸ ಪಡುವ ಸಮಯ. ಹಾಗೆಯೇ ವೇದಾ ಗು ಕೂಡ ಒಂದೊಳ್ಳೆ ಮನೆತನದ ಹುಡುಗನನ್ನು ನೋಡಿದರು.. ಮೊದಲಿಗೆ ಮದುವೆಯನ್ನು ತಿರಸ್ಕರಿಸುತ್ತಿದ್ದರೂ ಹುಡುಗನ ಭಾವಚಿತ್ರವನ್ನು ನೋಡಿ, ಹುಡುಗ ನೋಡಲು ಬಹಳ ಸುಂದರವಾಗಿದ್ದಾನೆ,ವಿದ್ಯಾವಂತ, ಒಳ್ಳೆಯ ಕೆಲಸ ಎಂದು ಮನೆಯವರು ಹೇಳಿದ ಮಾತುಗಳನ್ನು ಕೇಳಿ ಹುಡುಗನನ್ನು ಭೇಟಿಯಾಗಿ ನೋಡಿದೊಡನೆ ಒಪ್ಪಿಗೆ ಸೂಚಿಸಿದಳು..


ವರುಣ್ ನೋಡಲು ಸುರದೃಪಿಯಾಗಿದ್ದ.ಒಳ್ಳೆ ಉದ್ಯೋಗ ಒಳ್ಳೆ ಸಂಪಾದನೆ, ಆದರೆ ಆತನು ಸಹ ಮನೆಯಲ್ಲಿ ಒಬ್ಬನೇ ಮಗನಾಗಿದ್ದ ಕಾರಣ ಬಹಳ ಮುದ್ದಿನಿಂದ ಬೆಳೆಸಿದ್ದರು.ಯಾವುದೇ ಒಂದು ಕೆಲಸಕ್ಕೂ ಆತನನ್ನು ಹೊರ ಹೋಗಲು ಬಿಡುತ್ತಿರಲಿಲ್ಲ . ಎಲ್ಲಾ ಕೆಲಸವನ್ನು ಅವನ ತಂದೆ ತಾಯಿಯೇ ನಿಭಾಯಿಸುತ್ತಿದ್ದರು. ಮನೆಯ ಖರ್ಚಿಗಾಗಿ ಅವನ ಬಳಿ ಎಂದಿಗೂ ಹಣ ಕೇಳಿರಲಿಲ್ಲ.. ಮನೆಗೆ ಬೇಕಾಗುವ ಅಗತ್ಯ ವಸ್ತುಗಳ ಬೆಲೆಯಾಗಲಿ ಅದನ್ನು ಬಳಸುವ ವಿಧಾನವಾಗಲಿ ಅವುಗಳನ್ನು ತರುವ ಅಂಗಡಿಗಳಾಗಲಿ ಯಾವುದರ ಬಗ್ಗೆಯೂ ಅವನಿಗೆ ತಿಳಿದಿರಲಿಲ್ಲ. ಮನೆಗೆ ಬೇಕಾದದ್ದನ್ನು ಅವನ ತಂದೆ ತಂದು ಸುರಿಯುತ್ತಿದ್ದರು. ಹಾಗಾಗಿ ಅವನ ಜೀವನವು ವೇದಾಳ ಜೀವನದಂತೆ ಸರಳವಾಗಿ ಸುಂದರವಾಗಿತ್ತು.. ಅಪ್ಪಿ ತಪ್ಪಿ ಅಪ್ಪನಿಗೆ ಆರೋಗ್ಯ ಕೆಟ್ಟರೇ ವಸ್ತುಗಳನ್ನು ಆನ್ಲೈನ್ ನಲ್ಲಿ ಆರ್ಡರ್ ಮಾಡುತ್ತಿದ್ದನೆ ವಿನಹ ಆತನೇ ಹೋಗಿ ಎಂದಿಗೂ ತಂದವನಲ್ಲ.. ಎಂದಿಗೂ ಭಾರವಾದ ವಸ್ತುಗಳನ್ನು ಎತ್ತಿದವನಲ್ಲ ,ಎತ್ತಲು ಅವನ ತಂದೆ ತಾಯಿ ಬಿಡುತ್ತಲೂ ಇರಲಿಲ್ಲ. ಅವನ ಆಫೀಸ್ ಕೆಲಸವನ್ನು ಹೊರತುಪಡಿಸಿ ಯಾವ ಕೆಲಸವನ್ನು ಅವನಿಗೆ ಮಾಡಿ ಅಭ್ಯಾಸವಿರಲಿಲ್ಲ..ಯಾವ ಕೆಲಸವನ್ನೂ ಮಾಡಲು ಬಾರದ ಜೋಡಿಗಳು ಒಂದೇ ಸೂರಿನಡಿ ದಿನ ಕಳಿಯುವ ಸಮಯ ಬಂದಾಗಿತ್ತು.


ಮದುವೆಗೆ ತಯಾರಿ ನಡೆಸಿದರು. ಇಷ್ಟು ದಿನ ಇದ್ದಂತೆ ಗಂಡನ ಮನೆಯಲ್ಲಿ ಆರಾಮವಾಗಿ ಇರಬಹುದು ಎಂದು ವೇದಾ ಕನಸು ಕಾಣುತ್ತಿದ್ದಳು. ಹೇಗೂ ಅತ್ತೆ ಮಾವ ಇರುತ್ತಾರೆ. ಅಮ್ಮ ಅಪ್ಪ ನನ್ನನ್ನು ನೋಡಿಕೊಂಡಂತೆ ಗಂಡನ ಮನೆಯಲ್ಲಿ ನೋಡಿಕೊಳ್ಳುತ್ತಾರೆ ಎಂದು ನಂಬಿದ್ದಳು. ಮದುವೆ ಏನೋ ಸಂಭ್ರಮದಲ್ಲಿ ಸರಾಗವಾಗಿ ನಡೆಯಿತು. ಅಂದುಕೊಂಡಂತೆ ಅತ್ತೆ ಮಾವನೂ ಕೂಡ ಒಂದು ತಿಂಗಳ ಕಾಲ ಜೊತೆಯಾಗಿದ್ದರು.ನಂತರ ಹೊಸ ಜೋಡಿಗೆ ಪ್ರೈವಸಿ ಇರಲಿ ಎಂಬ ಕಾರಣಕ್ಕೆ ಅವರು ತೀರ್ಥಯಾತ್ರೆಗೆ ಹೊರಟರು.ಅಸಲಿ ಆಟ ಈಗ ಶುರುವಾಯಿತು. 


ಕಾಫಿಯನ್ನು ಸಹ ಮಾಡಲು ಬಾರದ ಹುಡುಗಿ ಈಗ ಮನೆಯನ್ನು ನಿಭಾಯಿಸಬೇಕಾಯಿತು. ಒಂದಷ್ಟು ದಿನ ಹೊರಗಿನಿಂದ ತರಿಸಿ ತಿಂದರು. ಆದರೆ ಆರೋಗ್ಯ ಕೈ ಕೊಡುತ್ತಾ ಬಂತು.ಇದನ್ನು ಅರಿತು ವೇದಾ ಮನೆಯಲ್ಲಿ ನಾನಾ ತರದ ಪ್ರಯೋಗಗಳನ್ನು ಮಾಡುತ್ತಾ ಬಂದಳು.ಆದರೆ ಯಾವುದು ಸರಿ ಬಾರದೆ ತನ್ನ ಮೇಲೆ ಮುನಿಸಿಕೊಂಡು ಗಂಡನ ಮೇಲೆ ಕೂಗಾಡುತ್ತಾ ದಿನ ಕಳೆಯುವಂತಾಯಿತು. 


ವೇದಾಳಿಂದ ಬಹಳಾ ನಿರೀಕ್ಷಿಸಿದ್ದ ವರುಣ್ ಗೆ ಆಕೆಗೆ ಏನೂ ಮಾಡಲು ಬರುವುದಿಲ್ಲ ಎಂದು ತಿಳಿದಾಗ ಬೇಸರವಾಯಿತು. ವೇದಾ ಸಹ ಎಲ್ಲಾ ಜವಾಬ್ದಾರಿಯನ್ನು ಹುಡುಗ ತೆಗೆದುಕೊಳ್ಳುತ್ತಾನೆ ಎಂದು ತಿಳಿದಿದ್ದಳು.ಆದರೆ ಅವಳಂದುಕೊಂಡಂತೆ ವರುಣ್ ಇರಲ್ಲಿಲ್ಲ..ಅವಳಂತೆ ಅವನಿಗೂ ಯಾವ ಮನೆಯ ಕೆಲಸವನ್ನು ಮಾಡುವುದು ತಿಳಿದಿರಲಿಲ್ಲ.. ಇಬ್ಬರ ನಡುವೆ ಹೊಂದಾಣಿಕೆ ಕಷ್ಟವಾಗಿ ಮದುವೆಯಾಗಿ ಮೂರು ತಿಂಗಳಲ್ಲಿಯೇ ವಿಚ್ಛೇದನ ಪಡೆಯುವ ನಿರ್ಧಾರವನ್ನು ಕೈಗೊಂಡರು.

ಮನೆಯಲ್ಲಿರುವ ಹಿರಿಯರ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ಇಬ್ಬರೂ ಇರಲಿಲ್ಲ.. ವಕೀಲರನ್ನು ಭೇಟಿಯಾಗುವ ನಿರ್ಧಾರಕ್ಕೆ ಬಂದರು. ಪರಿಚಯದ ವಕೀಲರೊಬ್ಬರನ್ನು ಭೇಟಿಯಾದರು. ಇಬ್ಬರನ್ನು ಕೂರಿಸಿ ಸಮಸ್ಯೆಗಳನ್ನು ತಿಳಿದ ವಕೀಲರು ಸಮಸ್ಯೆಯ ಮೂಲವನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾದರು.. ವೇದಾ ಹಾಗು ವರುಣ್ ತಂದೆ ತಾಯಿಯನ್ನು ಕರೆಸಿ ಮಾತನಾಡುವ ನಿರ್ಧಾರವನ್ನು ಕೈಗೊಂಡರು..


ವಕೀಲರ ಮಾತಿಗೆ ಬೆಲೆ ಕೊಟ್ಟು ಅವರು ಹೇಳಿದಂತೆ ಎಲ್ಲರೂ ಅವರ ಕಚೇರಿಯಲ್ಲಿ ಹೇಳಿದ ದಿನ ಹಾಜರಾದರು. ಎಲ್ಲರನ್ನೂ ಉದ್ದೇಶಿಸಿ ಮಾತನ್ನು ಆರಂಭಿಸಿದರು..


"ಇತ್ತೀಚಿನ ದಿನಗಳಲ್ಲಿ ಒಂದು ಮನೆಗೆ ಎರಡು ಮಕ್ಕಳು ಅಥವಾ ಒಂದೇ ಮಗು ಸಾಕು ಎಂದು ಮಗುವನ್ನು ಬಹಳಾ ಮುದ್ದಾಗಿ ಬೆಳೆಸುವುದು ಸಾಮಾನ್ಯವಾಗಿದೆ. ನಿಮ್ಮ ಮನೆಯಲ್ಲಿಯೂ ಆಗಿರುವುದು ಇಷ್ಟೇ.ವೇದಾಳ ಮನೆಯಲ್ಲಿ ವೇದಾ, ವರುಣ್ ಮನೆಯಲ್ಲಿ ವರುಣ್ ಮುದ್ದಾಗಿಯೇ ಬೆಳೆದರು.ಅವರವರ ಮನೆಯಲ್ಲಿ ಇಬ್ಬರು ಮುದ್ದಿನ ಮಕ್ಕಳೇ. ಮುದ್ದಿನಿಂದ ಬೆಳೆಸುವುದು ತಪ್ಪಲ್ಲ..ಮುದ್ದಿನಿಂದ ಬೆಳೆಸಿದ ಮಾತ್ರಕ್ಕೆ ಕೆಲಸ ಕಲಿಸಬಾರದೆಂದೇನು ಇರಲ್ಲಿಲ್ಲ. ಆದರೆ ಅತಿಯಾದ ಮುದ್ದು ಇವರಿಬ್ಬರ ಸಂಸಾರದಲ್ಲಿ ಆಪತ್ತು ಸೃಷ್ಟಿಸಿದೆ..ಹೊಂದಾಣಿಕೆ ಕಾಣದೆ ಪ್ರತಿ ದಿನ ಜಗಳ ಮಾಡುವಂತೆ ಮಾಡಿದೆ. ನಿರೀಕ್ಷಿಸಿದ ಬದುಕು ಸಿಗದಿದ್ದಾಗ ಮನಸು ಖಿನ್ನತೆಗೆ ಒಳಗಾಗುತ್ತದೆ. ಸಂಸಾರದಲ್ಲಿ ಹೊಂದಾಣಿಕೆ ಕಾಣದಿದ್ದಾಗ ಜೋಡಿಗಳು ವಿಚ್ಛೇದನಕ್ಕೆ ಮಣೆ ಹಾಕುತ್ತಾರೆ.ನೀವು ಈಗ ಮಾಡ ಹೊರಟಿರುವುದು ಇದ್ದನ್ನೇ..!


ಮಕ್ಕಳನ್ನು ಮುದ್ದು ಮಾಡಬೇಕು ನಿಜ ಆದರೆ ಸಣ್ಣ ಪುಟ್ಟ ಕೆಲಸ ಹೇಳಿ ಹೆಣ್ಣಾಗಲಿ ಗಂಡಾಗಲಿ, ಯಾರನ್ನು ಕಾಯದೆ ಸ್ವತಂತ್ರವಾಗಿ ತಮ್ಮ ಕೆಲಸವನ್ನು ತಾವು ಮಾಡಿಕೊಳ್ಳುವಂತೆ ಬಾಲ್ಯದಿಂದಲೇ ತಿಳಿ ಹೇಳಬೇಕು. ಮುದ್ದಿನಿಂದ ಬೆಳೆಸಿ ನಂತರ ಒಮ್ಮೆಗೆ ಜವಾಬ್ದಾರಿಯನ್ನು ಹೊರಿಸಿದಾಗ ಬದುಕು ಕಷ್ಟವೆನಿಸುತ್ತದೆ .ಸುಂದರವಾಗಿ ಬಾಳಬೇಕಿದ್ದ ಸಮಯದಲ್ಲಿ ಕಿತ್ತಾಡಿಕೊಂಡು ನರಕ ಮಾಡಿಕೊಳ್ಳಬೇಕಾಗುತ್ತದೆ. ಮುದ್ದಿನಿಂದ ಬೆಳೆಸಿ ಸೋಮಾರಿಯನ್ನಾಗಿ ಮಾಡಿ "ಅಯ್ಯೋ ಮಕ್ಕಳ ಬದುಕು ಹೀಗಾಯ್ತಲ್ಲ"?? ಎಂದು ಕೊರಗುವ ಬದಲು ಅವರಿಗೆ ಬೈದಾದರು ಸರಿ ಮನೆಗೆ ಸಂಬಂಧಪಟ್ಟ ಕೆಲಸ ಮಾಡಿಸಬೇಕು. ಬೈದು ಹೇಳುವವರು ಬದುಕಿನ ಒಳಿತಿಗಾಗಿ ಹೇಳುತ್ತಾರಂತೆ.ಅತಿಯಾಗಿ ಮುದ್ದು ಮಾಡಿದರೆ ಜಾಸ್ತಿ ಪ್ರೀತಿಸುತ್ತೇವೆ ಎಂದರ್ಥವಲ್ಲ..


ಹೆತ್ತವರಿಗೆ ಹೆಗ್ಗಣವು ಮುದ್ದು ಹಾಗೆಂದ ಮಾತ್ರಕ್ಕೆ ಮಕ್ಕಳನ್ನು ಅತಿಯಾಗಿ ಮುದ್ದಿನಿಂದ ಬೆಳೆಸಿ ಯಾವ ಕೆಲಸವನ್ನು ಕಲಿಸದೆ ಯಾವ ಜವಾಬ್ದಾರಿಯನ್ನು ನೀಡದೆ ಅವರನ್ನು ಕಷ್ಟಕ್ಕೆ ನೂಕುವಂತಾಗಬಾರದು.ಹೆಣ್ಣಾಗಲಿ ಗಂಡಾಗಲಿ ಮನೆಯ ಹೊರಗೆ ಹಾಗು ಒಳಗೆ ಎರಡೂ ಕಡೆ ಕೆಲಸ ಮಾಡಲು ಕಲಿತಿರಬೇಕು.ಮನೆ ಕೆಲಸ ಹೆಣ್ಣಿಗೆ ಮಾತ್ರ ಸೀಮಿತವಾಗಿಲ್ಲ.ಗಂಡು ಕಲಿತರೆ ತಪ್ಪಲ್ಲ. ಇನ್ನಾದರೂ ಇಬ್ಬರು ಅಹಂಕಾರವನ್ನು ಬಿಟ್ಟು ಒಟ್ಟಿಗೆ ಹಂಚಿಕೊಂಡು ಕೆಲಸ ಮಾಡುವುದನ್ನು ಕಲಿತುಕೊಳ್ಳಿ.. ನಿಮ್ಮ ತಂದೆ ತಾಯಿಯರ ಸಹಾಯವನ್ನು ಪಡೆದು ಎಲ್ಲವನ್ನು ಕಲಿತು ಉತ್ತಮ ಜೀವನವನ್ನು ನಡೆಸಿ..ಎಂದು ಬುದ್ದಿ ಹೇಳಿದರು..


ವಕೀಲರ ಮಾತನ್ನು ಕೇಳಿದ ವೇದಾಳ ತಂದೆ ತಾಯಿಗೆ ಹಾಗೂ ವರುಣ್ ತಂದೆ ತಾಯಿಗೆ ಅವರ ತಪ್ಪಿನ ಅರಿವಾಯಿತು..ಮಕ್ಕಳ ಬದುಕಿನ ಈ ಪರಿಸ್ಥಿತಿಗೆ ಅವರೇ ಕಾರಣವೆಂದು ಮರುಗಿದರು.. ಇನ್ನೂ ಕಾಲ ಮಿಂಚಿಲ್ಲ ಮಕ್ಕಳ ಬದುಕನ್ನು ನಾವೇ ಸರಿ ಮಾಡಬೇಕೆಂದು ನಿರ್ಧರಿಸಿ ಮಕ್ಕಳ ಜೊತೆ ನಿಂತು ಅವರ ಬದುಕನ್ನು ಸುಂದರವಾಗಿಸಿದರು..


ವೇದಾ ಹಾಗು ವರುಣ್ ಜವಾಬ್ದಾರಿಯಿಂದ ತಮ್ಮ ತಮ್ಮ ಕೆಲಸವನ್ನು ಹಂಚಿಕೊಳ್ಳುವ ಮೂಲಕ ಬದುಕನ್ನು ಸುಂದರವಾಗಿ ಕಟ್ಟಿಕೊಂಡರು...


Rate this content
Log in

Similar kannada story from Classics