Shridevi Patil

Classics Inspirational Others

4  

Shridevi Patil

Classics Inspirational Others

ನನ್ನ ಮೊದಲ ಪ್ರವಾಸದ ಖುಷಿ

ನನ್ನ ಮೊದಲ ಪ್ರವಾಸದ ಖುಷಿ

3 mins
546


ನಾನ್ ಸ್ಟಾಪ್ ನವಂಬರ್ ಎಡಿಷನ್. ಆರಂಭಿಕ ಹಂತ. ಪ್ರವಾಸ


ಪ್ರವಾಸ ಎಂದರೆ ಯಾರಿಗೆ ತಾನೇ ಖುಷಿ ಆಗುವುದಿಲ್ಲ, ಹೇಗಾದರೂ ಸರಿ ಒಮ್ಮೆಯಾದರೂ ನಮ್ಮವರೊಂದಿಗೆ ಪ್ರವಾಸ ಕೈಗೊಳ್ಳಬೇಕು ಎನ್ನುವುದು ಎಲ್ಲರ ಆಸೆಯೇ ಸರಿ. ಆದರೆ ಈ ಆಸೆ ಕೆಲವರಿಗೆ ಚಿಟಿಕೆ ಹೊಡೆದಷ್ಟು ಸುಲಭದರಲ್ಲಿ ಈಡೇರಿ ಬಿಡುತ್ತದೆ. ಇನ್ನೂ ಕೆಲವರಿಗೆ ತುಸು ಹರಸಾಹಸ ಮಾಡಿದಾಗ ಈಡೇರುತ್ತದೆ. ಇನ್ನು ಕೆಲವರಿಗೆ ಪ್ರವಾಸ ಕನಸಾಗಿಯೇ ಉಳಿದು ಬಿಡುತ್ತದೆ.


ನಾನು ನನ್ನ ಪ್ರವಾಸದ ಕುರಿತು ಹೇಳಬೇಕೆಂದರೆ ಪ್ರಾಥಮಿಕ ಶಾಲಾ ದಿನಗಳಿಂದಲೂ ಪ್ರವಾಸ ಎಂದರೆ ಒಂದು ಹೆಜ್ಜೆ ಮುಂದೆ ನಾನು.


ಶಾಲೆಯಲ್ಲಿ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದು ಅನೌನ್ಸ್ ಮಾಡಿದ ಮರುಕ್ಷಣ,ಗುರುಗಳು ಬರುವ ಇಚ್ಛೆಯುಯುಳ್ಳವರು ಅನ್ನುತ್ತಿದ್ದಂತೆಯೇ ಎದ್ದು ನಿಂತವಳೇ ನನ್ನ ಹೆಸರನ್ನು ಬರೆಸಿಬಿಡುತ್ತಿದ್ದೆ. ಗುರುಗಳು ಏನು ಹೇಳುತ್ತಿದ್ದಾರೆ ಎಂದು ವಿಚಾರಾನೇ ಮಾಡುತ್ತಿರಲಿಲ್ಲ. ನನಗೆ ಪ್ರವಾಸ ಎನ್ನುವುದು ಒಂದೇ ಕೇಳಿರುತ್ತಿತ್ತು ಕಿವಿಗೆ.


ಗುರುಗಳು ಎಲ್ಲಿಗೆ ,? ಯಾವ ಕಡೆ ಹೋಗೋಣ ? ಎಂದು ಚರ್ಚೆ ಮಾಡಲು ಬರುತ್ತಿದ್ದರು. ನಾನಂತೂ ಆಗಲೇ ಪ್ರವಾಸದ ತಯಾರಿಯಲ್ಲಿಯೇ ಇರುತ್ತಿದ್ದೆ. ಎಷ್ಟು ದುಡ್ಡು ಅಂತಾನೂ ಕೇಳಿಸಿಕೊಳ್ಳುತ್ತಿರಲಿಲ್ಲ. ಬರಿ ಪ್ರವಾಸದ ಖುಷಿಯೊಂದೇ ತಲೆಯಲ್ಲಿ ಇರುತ್ತಿದ್ದುದು.. ಹೀಗಾಗಿ ಉಳಿದೆಲ್ಲ ಉಸಾಬರಿ ಮಾಡದೇ ನಾನು ನನ್ನ ಪ್ರವಾಸದ ಕಲ್ಪನಾ ಲೋಕದಲ್ಲಿ ತೇಲುತ್ತಿದ್ದೆ. ಯಾವಾಗ ಗುರುಗಳು ಪಾಟೀಲ್ , ಪಾಟೀಲ್ ಎಂದು ಕೂಗುತ್ತಿದ್ದರೋ ಆವಾಗ ಕ್ಲಾಸ್ ರೂಮಿನ ಒಳಗೆ ಬರುತ್ತಿದ್ದೆ..ಇದು ಒಂದೆರಡು ಬಾರಿಯ ಕತೆಯಲ್ಲ. ಪ್ರತಿ ಸಲವೂ ಇದೆ ರೀತಿ ಆಗುತ್ತಿತ್ತು..


ಕಲ್ಪನಾ ಲೋಕದಿಂದ ಬಂದ ಮೇಲೆ ಗುರುಗಳು ನಾನ್ ಎನ್ ಹೇಳ್ತಿದ್ದೆ ಹೇಳು ಅಂದಾಗ ನಾನು, ಅದೇ ಸರ್ ಪ್ರವಾಸ, ಪ್ರವಾಸ ಅಂತ ರಾಗ ಎಳಿತಿದ್ದೆ. ಆಮೇಲೆ ಸರ್ ಹೋಗುವುದು ಇನ್ನೂ ಲೇಟು, ಮೊದಲು ಮನೆಯಲ್ಲಿ ಪ್ರವಾಸಕ್ಕೆ ಕಳಿಸುತ್ತಾರೋ ಇಲ್ಲವೋ ಅದನ್ನ ಕೇಳಿಕೊಂಡು ಬನ್ನಿ, ಜೊತೆಗೆ ದುಡ್ಡು ಇಷ್ಟು ಅಂತಾ ಹೇಳಿ ಅದಕ್ಕೆಲ್ಲ ಒಪ್ಪಿದರೆ ಮುಂದಿನದು ಅಂತ ಹೇಳಿದ ಮೇಲೆ ಅಯ್ಯೋ, ಹೌದಲ್ವಾ ಮನೆಯಲ್ಲಿ ಕೇಳಬೇಕು, ಹು ಅಂತಾರೋ ಇಲ್ಲವೋ ಅನ್ನುತ್ತಾ ಮನೆಗೆ ಬಂದು ಹೇಳಲು ತುಸು ಭಯವಾಗುತ್ತಿತ್ತು. ಅಪ್ಪಾಜಿ ಮಿಲಿಟರಿಯಲ್ಲಿದ್ದ ಕಾರಣ ಚಿಕ್ಕಪ್ಪಂದಿರನ್ನು ಕೇಳಬೇಕಿತ್ತು. ಅವರು ಏನೆನ್ನುವರೊ ಎನ್ನುವುದು ರಾತ್ರಿಯೆಲ್ಲಾ ತಲೆಯಲ್ಲಿ ಓಡುತ್ತಿತ್ತು.


ಬೆಳಿಗ್ಗೆ ಎದ್ದು ಶಾಲೆಗೆ ಹೊರಡುವ ಮೊದಲು ಮತ್ತೊಮ್ಮೆ ಚಿಕಪ್ಪನ ಹತ್ತಿರ ಹೋಗಲು ಚಿಕ್ಕಮ್ಮನ ನೆರವು ಕೇಳುತ್ತ, ಅವರ ಸೀರೆಯ ಸೆರಗನ್ನು ಎಳೆಯುತ್ತಾ,ಅವರ ಹಿಂದೆ ನಿಂತುಕೊಂಡು ಹಣ್ಣೊ, ಅಥವಾ ಕಾಯಿಯೊ ಅಂತಾ ಕೈ ಕೈ ಹಿಸುಕಿಕೊಳ್ಳುತ್ತಾ ನಿಲ್ಲುತ್ತಿದ್ದೆ. ಯಾವಾಗ ಚಿಕ್ಕಪ್ಪ ಓಕೆ ಎಂದರೆ ಮನಸ್ಸು ಖುಷಿಯಲ್ಲಿ ತೇಲಾಡುವ ಅನುಭವ,ಆದರೆ ಬೇಡ ಅಂದರೆ ಮತ್ತೆ ಒಪ್ಪಿಸುವ ಕಾರ್ಯದಲ್ಲಿ ಹೊಸ ಪ್ರಯತ್ನ ಮಾಡಬೇಕಲ್ಲ ಎನ್ನುವ ಯೋಚನೆ ತಲೆಯಲ್ಲಿ ಓಡುತ್ತಿತ್ತು. ಹೀಗೆ ಪ್ರವಾಸಕ್ಕೆ ಹೋಗುವ ಮುನ್ನ ಒಪ್ಪಿಗೆಯ ಒಂದು ಮಾತಿಗೆ ಹರಸಾಹಸ ಪಟ್ಟಿದ್ದನ್ನಂತೂ ಮರೆಯೋಕ್ಕಾಗಲ್ಲ. ಮೊದಲಿಗೆ ಬೇಡ ಎಂದರೂ ಕೊನೆಗೆ ಸರಿ ಹೋಗುವಿಯಂತೆ ಎನ್ನುವ ಚಿಕ್ಕಪ್ಪನ ಆ ಒಂದು ಒಪ್ಪಿಗೆಯ ಮಾತು ನಾನು ಹಕ್ಕಿಯಂತೆ ಹಾರಾಡುವಂತೆ ಮಾಡುತ್ತಿತ್ತು.


ಪ್ರತಿ ವರ್ಷವೂ ಇದೆ ಪುನರಾವರ್ತನೆ ಆಗುತ್ತಿತ್ತು. ಒಂದು ವರ್ಷವೂ ಬಿಡದೆ ಪ್ರೌಢಶಾಲೆಯಲ್ಲಿ ಪ್ರವಾಸ ಮಾಡಿದ ಖುಷಿ ಇದೆ. ಜೊತೆಗೆ ಆ ಖುಷಿಯ ನೆನಪು ಇನ್ನು ಹಚ್ಚ ಹಸಿರಾಗಿದೆ. ಮೊದಲ ಪ್ರವಾಸದ ನೆನಪು ಹಂಚಿಕೊಳ್ಳುವ ಮೊದಲು ಈ ಅನುಭವವನ್ನು ಹೇಳಿಕೊಳ್ಳಬೇಕು ಅನ್ನಿಸಿತು ಹಾಗಾಗಿ ಹೇಳಿಕೊಂಡೆ. ಈಗ ಮೊದಲ ಬಾರಿಗೆ ಪ್ರವಾಸಕ್ಕೆ ಹೋಗಿ ಬಂದ ಅನುಭವವನ್ನು ಹಂಚಿಕೊಳ್ಳುವೆ


ನನ್ನ ಚಿಕ್ಕಪ್ಪ ಪ್ರವಾಸಕ್ಕೆ ತೆರಳಲು ಒಪ್ಪಿಗೆ ಕೊಟ್ಟು, ಹಣ ಕೊಟ್ಟು ಹೆಸರು ಬರೆಸಲು ಹೇಳಿದಾಗ ಖುಷಿಯಿಂದ ಹೋಗುತ್ತಿದ್ದೆ. ದಿನಾಂಕ ಗೊತ್ತು ಮಾಡಿ, ಹೊರಡುವ ಸಮಯ ನಿಗಧಿಯಾದಾಗ ಮನೆಗೆ ಬಂದು ಹೇಳಿ ಚಕ್ಕುಲಿ, ಶಂಕರಪಳೆ, ಅವಲಕ್ಕಿ, ಮಾಡಲು ಪೀಠಿಕೆ ಹಾಕಿ , ಬಟ್ಟೆ ಯಾವುದು ಹಾಕುವುದು, ಯಾವುದು ಇಟ್ಟುಕೊಂಡು ಹೋಗುವುದು ಎನ್ನುವ ಗೋಜಿಗೆ ಬೀಳುವುದು ಮುಂದಿನ ಹಂತ. ಹೀಗೆ ಒಟ್ಟಾರೆಯಾಗಿ ನಿಗಧಿ ಪಡಿಸಿದ ದಿನಾಂಕದಂದು, ನಿಗಧಿ ಪಡಿಸಿದ ಸಮಯಕ್ಕೆ ಚಳಿಯಲ್ಲಿ ಸ್ವಲ್ಪ ನಡುಗುತ್ತ, ಖುಷಿಯಲ್ಲಿ ಚಿಕ್ಕಪ್ಪನೊಂದಿಗೆ ಶಾಲಾ ಆವರಣದಲ್ಲಿ ಬಂದು ಎಲ್ಲರೊಡಗೂಡಿ ಪ್ರವಾಸಕ್ಕೆ ತೆರಳುತ್ತಿದ್ದೆ..


ಮೊದಲ ಬಾರಿ ಪ್ರವಾಸ ಎಂದರೆ ಅದು ಶಿರಸಿ , ಸಹಸ್ರ ಲಿಂಗು ವಿನಿಂದ ಆರಂಭವಾಗಿ ಸುತ್ತಾಡಿ ಜೋಗ ನೋಡಿಕೊಂಡು ಬರುವುದರಲ್ಲಿ ಮುಕ್ತಾಯವಾಗಿತ್ತು. ಅದೊಂದು ವಿಶಿಷ್ಟಾನುಭವ ಕೊಟ್ಟಿತ್ತು. ಪ್ರತಿಯೊಂದು ಸ್ಥಳಕ್ಕೂ ಭೇಟಿ ಕೊಟ್ಟು, ಅಲ್ಲಿನ ಸೌಂದರ್ಯ ನೋಡಿ , ಮಾಹಿತಿ ತಿಳಿದು ಕೊಂಡು ,ಅಲ್ಲಿನ ವಿಶೇಷತೆ ನೋಡಿ, ಏನಾದರೂ ಕೊಳ್ಳುವುದಿದ್ದರೆ ಕೊಂಡುಕೊಂಡು ಪುನಃ ಬಸ್ ಹತ್ತುತ್ತಿದ್ದೆವು. ಬಸ್ಸಲ್ಲಿ ಆ ಪ್ರದೇಶದ ಕುರಿತು ಅಲ್ಪ ಸ್ವಲ್ಪ ಕಿರು ನೋಟ್ಸಲ್ಲಿ ಕಿರು ಮಾಹಿತಿಯನ್ನು ಬರೆದುಕೊಳ್ಳುತ್ತಿದ್ದೆ. ಹಾಗೆ ಮುಂದೆ ಸಾಗಿದಂತೆ ಹಾಡು, ಮೋಜು, ಮಸ್ತಿ ಬಸ್ಸಲ್ಲಿ ಮುಂದುವರೆಯುತ್ತಿತ್ತು..


ಶಿರಶಿಯ ಶ್ರೀ ಮಾರಿಕಾಂಬೆಯ ಮೊದಲ ದರುಶನ ಪಡೆದು ತಾಯಿಯ ಆಶೀರ್ವಾದದೊಂದಿಗೆ ಹೊರಟಿತು ನಮ್ಮ ಪ್ರವಾಸದ ಪಯಣ.. ಕರ್ನಾಟಕದ ಅತೀ ದೊಡ್ಡ ಜಾತ್ರಗಳಲ್ಲಿ ಒಂದಾದ ಶ್ರೀ ಮಾರಿಕಾಂಬಾ ತಾಯಿಯು ಬೇಡಿ ಬಂದ ಭಕ್ತರನ್ನು ಎಂದೂ ಕೈ ಬಿಡದ ಮಹಾತಾಯಿ ಈ ಮಾರಿಕಾಂಬಾ ಅಮ್ಮನವರು. ಹೀಗೆ ಈ ತಾಯಿಯ ದರುಶನ ಆದ ನಂತರ ಮುಂದಿನ ಪಯಣ ಸಹಸ್ರಲಿಂಗು.


ಇಲ್ಲಿ ಶಿವಲಿಂಗುಗಳನ್ನು ನೋಡುವುದೇ ಚೆಂದ. ಕಲ್ಲಲ್ಲಿ ಅದೆಷ್ಟು ಚೆಂದದ, ಚಿತ್ತಾರದ, ಸಣ್ಣ ಪುಟ್ಟ, ದೊಡ್ಡದಾದ ಶಿವಲಿಂಗುಗಳು ನೋಡುಗರನ್ನು ತಮ್ಮತ್ತ ಕರೆಯುತ್ತವೆ...


ಮುಂದಿನ ಪಯಣ ನಮ್ಮದು ಸಾಗಿದ್ದು ಬನವಾಸಿಯ ಕಡೆಗೆ... ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನದ ದರುಶನ ಪಡೆದು, ಅಲ್ಲಿಯ ಇತಿಹಾಸದ ಗತ ವೈಭವದ ನೆನಪುಗಳನ್ನು ಕಲೆ ಹಾಕಿಕೊಂಡು, ಕದಂಬ ರಾಜಮನೆತದ ಕುರಿತು ತಿಳಿದುಕೊಂಡು, ಕಟ್ಟಿಕೊಂಡು ಹೋಗಿದ್ದರಲ್ಲಿ ಎಲ್ಲರೊಂದಿಗೆ ಹಂಚಿಕೊಂಡು ಒಬ್ಬರ ಊಟವನ್ನು ಮತ್ತೊಬ್ಬರು ತಿನ್ನುತ್ತಾ ಆ ಮಧ್ಯಾಹ್ನದ ಊಟಕ್ಕೆ ಅಂತ್ಯ ಹಾಡಿ ಮುಂದಿನ ಸ್ಥಳಕ್ಕೆ ಹೊರಟೆವು..


ಮುಂದಿನ ಸ್ಥಳವೇ ಜೋಗ ಎಂದು ಗುರುಗಳು ಹೇಳಿದಾಗ ನಾವೆಲ್ಲರೂ ಹೋ ಹೋ ಎಂದು ಖುಷಿಯಿಂದ ಬಸ್ಸಲ್ಲಿ ಹಾಡ್ ಹಾಡುತ್ತಾ ಜೋಗದ ಕಡೆ ಸಾಗಿದೆವು. ಜೋಗ ತಲುಪಿದಾಗ ಆ ಹಸುರಿನ ಸಿರಿಯ ಮಡಿಲಲ್ಲಿ ಸ್ವಚ್ಛಂದವಾಗಿ, ಬೋರ್ಗರೆಯುವ ಆ ಜಲಪಾತದ ದೃಶ್ಯ ನೋಡುವಂತದ್ದು. ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕು ಜೋಗದ ಗುಂಡಿ ಎನ್ನುವ ಹಾಡೇ ಇದೆಯಲ್ಲ. ಹಾಗೆ ನೋಡಿಸಲೇಬೇಕಾದ ಪ್ರೇಕ್ಷಣೀಯ ಸ್ಥಳಗಳ ಪೈಕಿ ಜೋಗ ಅದ್ಭುತವಾದ ಸ್ಥಳವಾಗಿದೆ. ರಾಜಾ ರಾಣಿ ರೋರರ್ ರಾಕೆಟ್ ಎನ್ನುವ ನಾಲ್ಕು ಹೆಸರಿನಿಂದ ಧುಮ್ಮಿಕ್ಕುವ ಆ ಜಲಪಾತದ ದೃಶ್ಯ ಕಣ್ಣಿನಲ್ಲಿ ತುಂಬುತ್ತಿದ್ದಂತೆಯೇ ಫೋಟೋ ತೆಗೆಸಿಕೊಳ್ಳುವ ಕಾರ್ಯಕ್ರಮ ಶುರುವಾಯಿತು.. ಎಲ್ಲ ಮುಗಿದಮೇಲೆ ಹೋಟೆಲ್ ಒಂದರಲ್ಲಿ ಮಸ್ತಾಗಿ ಊಟ ಮಾಡಿಸಿದ ಗುರುಗಳು ಇನ್ನು ಮುಂದಿನ ಸ್ಥಳ ನಮ್ಮ ಶಾಲೆ, ನಮ್ಮ ಊರು ಎಂದಾಗ ಕೊಂಚ ಬೇಸರವೆನಿಸಿದರೂ ಸಹ ಆ ದಿನದ ಖುಷಿಯನ್ನಂತೂ ಮರೆಯಲು ಸಾಧ್ಯವಿಲ್ಲ.


ಗೋಕರ್ಣ,ಇಡಗುಂಜಿ, ಮುರ್ಡೇಶ್ವರ, ಸಿಗಂಧೂರು, ಹೊರನಾಡು, ಶೃಂಗೇರಿ, ಕುಕ್ಕೆ, ಧರ್ಮಸ್ಥಳ, ಮೈಸೂರ್, ಸುತ್ತೂರು, ಯೆಡೆಯೂರು, ಶಿದ್ಧಗಂಗಾ, ಹಳೇಬೀಡು,ಬೇಲೂರು, ಶ್ರವಣಬೆಳಗೊಳ, ಉಡುಪಿ, ಐಹೊಳೆ, ಪಟ್ಟದಕಲ್ಲು, ಬಾದಾಮಿ, ಶಿವಯೋಗಮಂದಿರ, ಕೂಡಲಸಂಗಮ ಹೀಗೆ ಕರ್ನಾಟಕದ ಒಂದಿಷ್ಟು ಪ್ರೇಕ್ಷಣೀಯ , ಐತಿಹಾಸಿಕ ಕ್ಷೇತ್ರಗಳ ಪ್ರವಾಸ ಮಾಡಿದ ಅನುಭವ ಇದೆ. ಹಾಗೂ ಆ ಶಾಲಾ ಅವಧಿಯಲ್ಲಿ ಮಾಡಿದ ಈ ಎಲ್ಲ ಕ್ಷೇತ್ರಗಳ ಪ್ರವಾಸದ ಅನುಭವವನ್ನು ಮರೆಯೋಕ್ಕಾಗೋಲ್ಲ. ಈಗ ಕುಟುಂಬದ ಜೊತೆಗೆ ಹೋದರೂ ಸಹ ಆ ಅನುಭವವನ್ನು ಪಡೆಯಲಾಗದು. ಈ ಅನುಭವವೇ ಬೇರೆ ಅನಿಸುತ್ತದೆ..


ಏನೇ ಹೇಳಿ ಮೊದಲ ಪ್ರವಾಸದ ಖುಷಿ,ಆ ಮೋಜು ಮಸ್ತಿ, ಆ ಅನುಭವ ಇನ್ಯಾವುದರಲ್ಲಿಯೂ ಸಿಗದು ಎನ್ನುವುದು ನನ್ನ ಅನಿಸಿಕೆ...  Rate this content
Log in

Similar kannada story from Classics