ಅಂತ್ಯವಾಗಲಿಲ್ಲ ಸುರಭಿಯ ಬದುಕು.
ಅಂತ್ಯವಾಗಲಿಲ್ಲ ಸುರಭಿಯ ಬದುಕು.


ಮಗನ ,ಮೊಮ್ಮಗಳ ಹಾಗೂ ಡ್ರೈವರ್ನ್ ಸಾವಿನ ದೃಶ್ಯವನ್ನು ಕಣ್ಣಾರೆ ಕಂಡಿದ್ದ ಶ್ಯಾಮ್ ರಾವ್ ಹುಚ್ಚರೇ ಆಗಿ ಹೋದರು.
ಭೀಕರ ರಸ್ತೆ ಅಪಘಾತ , ಸ್ಥಳದಲ್ಲೇ ಮೂವರ ದುರ್ಮರಣ.
ಎಲ್ಲೋ ಬಿದ್ದ ಕನ್ನಡಕವನ್ನು ಹುಡುಕಿ , ಒರೆಸಿಕೊಂಡು ಕಣ್ಣಿಗೆ ಹಾಕಿಕೊಂಡು ನೋಡುವಷ್ಟರಲ್ಲಿ ಸುರಭಿ ಒಂದು ಕೈ ಕಳೆದುಕೊಂಡು ಉಳಿವು ಸಾವಿನ ಮದ್ಯ ಹೋರಾಡುತ್ತಿದಳು. ಶ್ಯಾಮ್'ರಾವರು ಓಡಿ ಬಂದು ಪ್ರೀತಿಯ ಸೊಸೆಯನ್ನು ತೊಡೆ ಮೇಲೆ ಹಾಕಿಕೊಂಡು ರಕ್ತಗಟ್ಟಿದ ಮುಖವನ್ನು ಒರೆಸಿ ಅಳತೊಡಗಿದರು. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಆಕೆ ಏನನ್ನೂ ಮಾತನಾಡದೆ ಮಾವನನ್ನೇ ದಿಟ್ಟಿಸಿ ನೋಡುತ್ತಿದ್ದಳು. ಶ್ಯಾಮ್ ರಾವರಿಗೂ ಗಾಯಗಳಾಗಿದ್ದವು , ಆದರೆ ಅವರು ಮಗನ , ಮೊಮ್ಮಗಳ ಹಾಗೂ ಮನೆ ಮಗನಂತಿದ್ದ ಡ್ರೈವರ್ನ್ ಪುಡಿ ಪುಡಿ ದೇಹದ ಭಾಗಗಳನ್ನು ನೋಡಿ ತಮ್ಮ ನೋವನ್ನು ಮರೆತು , ಸ್ವಲ್ಪ ಉಸಿರಾಡುತ್ತಿದ್ದ ಸೊಸೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಅಲ್ಲಿಯೇ ಯಾರದ್ದೋ ಸಹಾಯದಿಂದ ಆಂಬ್ಯುಲೆನ್ಸ್ ತರಿಸಿ ಮೊದಲು ಸೊಸೆಯನ್ನು ದೊಡ್ಡಾಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದರು. ಅದಾದ ಮೇಲೆ ಮಗ , ಮೊಮ್ಮಗಳು , ಡ್ರೈವರ್ ನ ಅಂತ್ಯ ಸಂಸ್ಕಾರ ಮಾಡಲು ಕಷ್ಟ ಪಟ್ಟಿದ್ದರು.
ಎಂಟು ವರ್ಷದ ಹಿಂದೆ ಮೊಮ್ಮಗಳು ಜನಿಸಿ , ಅವಳಿಗೆ ಹೆಸರಿಟ್ಟು , ಮನೆದೇವರಿಗೆ ಹೋಗಿ ಬಂದಾದ ಮೇಲೆ ಶ್ಯಾಂರಾವ್ ರ ಹೆಂಡತಿ ಏಕಾಏಕಿ ಹೃದಯಾಘಾತ ಆಗಿ ತೀರಿ ಹೋಗಿದ್ದಳು. ಅಲ್ಲಿಂದ ಇಲ್ಲಿಯವರೆಗೂ ಸೊಸೆ ಸುರಭಿ ಮಾವನನ್ನು ತನ್ನ ಅಪ್ಪನಿಗಿಂತ ಹೆಚ್ಚು ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಳು. ವೃತ್ತಿಯಲ್ಲಿ ಇಂಜಿನಿಯರ್ ಆಗಿ , ಐವತ್ತು ಸಾವಿರ ರೂಪಾಯಿಗಳನ್ನು ಒಂದು ತಿಂಗಳಿಗೆ ದುಡಿದರೂ ಸಹ ಅವಳಿಗೆ ಅಹಂಕಾರ ಆಗಲಿ ,ಸೊಕ್ಕಾಗಲಿ ಇದ್ದಿರಲಿಲ್ಲ. ಮಾವನಿಗೆ ಕಾಳಜಿ ಮಾಡುವುದರಲ್ಲಾಗಲಿ , ಅವರ ಆರೋಗ್ಯದ ಕಾಳಜಿಯಲ್ಲಾಗಲಿ , ಮನೆಯನ್ನು ನಿಭಾಯಿಸುವುದರಲ್ಲಾಗಲಿ ಎಂದೂ ಮತ್ತೊಬ್ಬರಿಂದ ಬೆರಳು ತೋರಿಸಿಕೊಂಡವಳಲ್ಲ . ಹೀಗಾಗಿ ಶ್ಯಾಮ್ ರಾವರು ಸಹ ಸೊಸೆಯಂತೆ ಎಂದೂ ಸುರಭಿಯನ್ನು ಕಾಣಲೇ ಇಲ್ಲ . ಸ್ವಂತ ಮಗಳಂತೆ ಕಾಣುತ್ತಿದ್ದರು.
ಪ್ರತಿದಿನ ಬೆಳಿಗ್ಗೆ ಬೇಗ ಏಳುತ್ತಿದ್ದ ಸುರಭಿ , ಮಾವ ಶುಗರ್ ಕಾಯಿಲೆಯಿಂದ ಬಳಲುತ್ತಿದ್ದಾರೆಂದು ಅವರಿಗೆ ಪ್ರತ್ಯೇಕ ಅಡುಗೆ, ಜೊತೆಗೆ ಮಗಳಿಗೆ ಇಷ್ಟವಾದ ಅಡುಗೆ , ಹಾಗೂ ತನಗೆ ತನ್ನ ಗಂಡನಿಗೆ ಬೇರೆ ಅಡುಗೆ ಮಾಡುತ್ತಿದ್ದಳು. ಒಂದು ದಿನವೂ ಬೇಸರಿಸಿಕೊಳ್ಳದ ಆಕೆ ತಾವೂ ಎಲ್ಲರಂತೆ ಒಂದೊಳ್ಳೆಯ ಜೀವನ ನಡೆಸಬೇಕೆಂದರೆ ಗಂಡ ಹೆಂಡತಿ ಇಬ್ಬರೂ ದುಡಿಯಲೇ ಬೇಕೆಂದು ತೀರ್ಮಾನಿಸಿಕೊಂಡಿದ್ದರು. ಆ ಪ್ರಕಾರ ಅವರ ತೀರ್ಮಾನಕ್ಕೆ ಮಾವನ ಆಶೀರ್ವಾದವೂ ಸಿಕ್ಕಿತ್ತು. ಮೊಮ್ಮಗಳನ್ನು ಶಾಲೆಗೆ ಬಿಡುವುದು , ಕರೆದುಕೊಂಡು ಬರುವುದು ಮಾವನ ದಿನಚರಿಯಾದರೆ , ಸಾಯಂಕಾಲ ಸುರಭಿ ಬಂದ ಮೇಲೆ ಮಾವ ಮಗಳು ಮತ್ತು ತಾನು ಒಂದು ರೌಂಡು ಅಡ್ಡಾಡಿ ಬರುವುದು ಅವರ ರೂಢಿಯಾಗಿತ್ತು. ಬೇರೆ ಮಾವ ಸೊಸೆ ಇವರಿಬ್ಬರನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದರು. ಅಷ್ಟರ ಮಟ್ಟಿಗೆ ಸುರಭಿ ಮಾವನೊಂದಿಗೆ, ಉಳಿದವರೊಂದಿಗೆ ಇರುತ್ತಿದ್ದಳು.
ಹೀಗಿದ್ದ ಕುಟುಂಬ ಇವತ್ತು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ನೋಡಿ , ಶ್ಯಾಮ್ ರಾವ್ ಹುಚ್ಚರಂತೆ ,ತಲೆ ಕೆದರಿಕೊಳ್ಳುತ್ತ , ಅತ್ತಿಂದ ಇತ್ತ ,ಇತ್ತಿಂದ ಅತ್ತ ಓಡಾಡುತ್ತಿದ್ದರು. ಆದರೂ ಸೊಸೆಯ ಉಸಿರಾಟ ಕಂಡು ತುಂಬಾ ಖುಷಿ ಪಟ್ಟಿದ್ದರು. ಹೇಗಾದರೂ ಮಾಡಿ ಸುರಭಿಯನ್ನು ಉಳಿಸಿಕೊಳ್ಳಲು ವೈದ್ಯರ ಕೈ ಕಾಲು ಬಿದ್ದಾಗಿತ್ತು. ಶ್ಯಾಮ್ ರಾವ್ರ ಪ್ರಾರ್ಥನೆಗೆ ದೇವರು ಅಸ್ತು ಎಂದಿದ್ದರು.
ಒಂದು ಕೈ ಕಳೆದುಕೊಂಡು ,ತಲೆಗೆ ತೀವ್ರ ಪೆಟ್ಟು ಬಿದ್ದು ಒದ್ದಾಡುತ್ತಿದ್ದ ಸುರಭಿಯನ್ನು ವೈದ್ಯರು ಬಚಾವು ಮಾಡಿದ್ದರು. ಅಷ್ಟೇ ಜಾಗರೂಕತೆಯಿಂದ ಶ್ಯಾಮ್ ರಾವ್ ರು ಸುರಭಿಯನ್ನು ಆರೈಕೆ ಮಾಡಿದ್ದರು. ತುಂಬಿದ ಮನೆಯಂತಿದ್ದ ತಮ್ಮ ಮನೆ ಖಾಲಿ ಖಾಲಿ ಆಗಿರುವುದನ್ನು ಕಂಡು ಮಾವ ಸೊಸೆ ಇಬ್ಬರು ಸಹಿಸಲು ಕಷ್ಟ ಪಟ್ಟರು.ಮನೆ ತುಂಬಾ ನಗು ನಗುತ್ತಾ ಓಡಾಡುತ್ತಿದ್ದ ಮೊಮ್ಮಗಳು ಸಹನಾ ಇಲ್ಲದ್ದನ್ನು , ಅವಳ ಕಾಲ್ಗೆಜ್ಜೆ ನಾದವನ್ನು, ಅವಳ ಮುದ್ದಾದ ನಗುವನ್ನು , ನೆನೆಸಿಕೊಂಡು ಅತ್ತು ಅತ್ತು ಸುಸ್ತಾಗಿದ್ದರು. ಇನ್ನು ಸುರಭಿ ದುಃಖವಂತೂ ಯಾರಿಗೂ ಬೇಡ. ಅರ್ಧ ಜೀವವೇ ಆಗಿದ್ದ ಗಂಡ ರಾಜೀವನನ್ನು ಕಳೆದುಕೊಂಡು , ಮುದ್ದಿನ ಮಗಳನ್ನು ಕಳೆದುಕೊಂಡು ಇನ್ಯಾರಿಗೋಸ್ಕರ ಬದುಕಬೇಕು ಎಂದು ಸಂಕಟ ಪಡುತ್ತಿದ್ದಳು. ಮಾವ ಸೊಸೆ ಇಬ್ಬರು ದುಃಖದಿಂದ ಸ್ತಬ್ದರಾಗಿ ಮನೆಯಲ್ಲಿ ಇದ್ದರೂ ಇಲ್ಲದವರಂತೆ ಇದ್ದರು.
ಶ್ಯಾಮ್ ರಾವ್ ರು ಸ್ವಲ್ಪ ದಿನಗಳ ಕಾಲ ನೋಡಿ ನೋಡಿ , ಸೊಸೆಯ ಮುಖವನ್ನು, ಆ ಮುಖದಲ್ಲಿಯ ದುಃಖವನ್ನು ನೋಡಲಾರದೆ ,ತಾವೇ ಸೊಸೆಗೆ ಮತ್ತೆ ಕೆಲಸಕ್ಕೆ ಹೋಗುವಂತೆ ಹೇಳಿದರು. ಆಗ ಸ್ವಲ್ಪ ಜಾಗದ ಬದಲಾವಣೆ ಆಗಿ, ಮನಸ್ಸಿಗೆ ನೆಮ್ಮದಿ ಸಿಗುವುದೇನೋ ಎಂದು ಭಾವಿಸಿ ಆ ರೀತಿ ಹೇಳಿದ್ದರು. ಮೊದ ಮೊದಲು ಒಪ್ಪದ ಸುರಭಿ , ಕೊನೆಗೆ ಮಾವನ ಒತ್ತಾಯಕ್ಕೆ ಮಣಿದು ಒಪ್ಪಿಗೆ ಕೊಟ್ಟಿದ್ದಳು.
ಮನಸ್ಸಿಲ್ಲದ ಮನಸ್ಸಿನಿಂದ ಕೆಲಸಕ್ಕೆ ಹೊರಟ ಸುರಭಿ ದಿನದಿಂದ ದಿನಕ್ಕೆ ತನ್ನ ನೋವನ್ನು ಮರೆಯುತ್ತ, ವಾಸ್ತವಿಕ ಬದುಕಿಗೆ ಕಾಲಿಟ್ಟಿದ್ದಳು. ಇದನ್ನು ನೋಡಿದ ಮಾವ ಸ್ವಲ್ಪ ಸಮಾಧಾನ ಪಟ್ಟಿದ್ದರು. ಹೀಗೆ ತನ್ನ ಕೆಲಸದಲ್ಲಿ ಮೈಮರೆತು , ದುಃಖವನ್ನು ಮರೆತು ಮಾವನ ಆರೈಕೆಯಲ್ಲಿ ತನ್ನ ಜೀವನ ಕಳೆಯಲು ಸಿದ್ಧವಾಗಿದ್ದಳು.
ಹೀಗೆ ದಿನಗಳು ಗತಿಸುತ್ತಿರಲು, ಸುರಭಿಯ ಕೆಲಸ ಮಾಡುವಿಕೆ , ಆಕೆಯ ಮುಗ್ದತೆ , ಆಕೆಯ ಹೊಂದಾಣಿಕೆ, ಆಕೆಯ ಸರಳತೆ , ಕೆಲಸದಲ್ಲಿನ ಶ್ರದ್ಧೆ ಇವೆಲ್ಲವನ್ನು ಕಂಡು ಆಫೀಸಿನ ಮ್ಯಾನೇಜರ್ ಆಕೆಗೆ ಮದುವೆಯ ಪ್ರಸ್ತಾವನೆ ಮಾಡಿದ್ದರು. ಆದರೆ ಸುರಭಿ ತಿರಸ್ಕರಿಸಿ, ಮನೆಗೆ ಬಂದು ಮಾವನ ಮುಂದೆ ಎಲ್ಲವನ್ನು ಹೇಳಿಕೊಂಡು ಅತ್ತಿದ್ದಳು. ಆದರೆ ಮಾವ ,ಆ ಸಮಯದಲ್ಲಿ ಮಾವನಾಗಿ ಯೋಚಿಸದೆ , ಅಪ್ಪನಾಗಿ ಒಂದು ನಿರ್ಧಾರ ಮಾಡಿದರು. ನೇರವಾಗಿ ಮ್ಯಾನೇಜರ್ ಬಳಿ ಹೋಗಿ ತಮ್ಮ ಸೊಸೆಯ ಮೊದಲಿನ ಬದುಕಿನ ಬಗ್ಗೆ ಹೇಳಿ , ಅವಳ ಮುಂದಿನ ಜೀವನಕ್ಕೆ ಬೆಳಕಾಗುವಂತೆ ಮಾತಾಡಿ ಬಂದಿದ್ದರು. ಸುರಭಿಯನ್ನು ಒತ್ತಾಯಿಸಿ,ತಿಳಿಸಿ ಹೇಳಿ ಎರಡನೆಯ ಮದುವೆಗೆ ಒಪ್ಪಿಸಿದ್ದರು.
ಸುರಭಿ ಈಗ ಮಾವನ ಮಾತನ್ನು ಒಪ್ಪಲೇಬೇಕಾಯಿತು.
ಮ್ಯಾನೇಜರ್ ರಮಣ್ ಜೊತೆ ಪುನರ್ವಿವಾಹ ಮಾಡಿಕೊಂಡು ಹೊಸ ಬದುಕನ್ನು ಆರಂಭಿಸಿದಳು.